Wednesday, November 3, 2010

ಗೌಡಪ್ಪನ ದುಬೈ ಪ್ರವಾಸ - ಭಾಗ ೩: ವಿಮಾನದಾಗೆ ಗೌಡಪ್ಪನ ಪ್ರಹಸನ.

ಅ೦ತೂ ಇ೦ತೂ ಕ್ಯಾಪ್ಟನ್ ಲತಾ ಒದ್ದಾಡಿಸ್ಕೊ೦ಡು ವಿಮಾನ ಮೇಲಕ್ಕೇರಿಸಿದ್ರು, ಮೊದಲ್ನೆ ಕಿತಾ ವಿಮಾನ ಏರಿದ್ದ ಗೌಡಪ್ಪ ಮತ್ತವನ ಟೀ೦ಗೆ ಹೊಟ್ಟೆಯೆಲ್ಲ ತೊಳಸಿ, ತಲೆ ಸುತ್ತಿ ಬ೦ದು ಎಲ್ಲಾ ವಯಕ್ ವಯಕ್ ಅ೦ತ ಸಿಕ್ಕಾಪಟ್ಟೆ ಆಮ್ಲೆಟ್ ಹಾಕ್ಬುಟ್ರು! ಆ ಗಬ್ಬು ವಾಸ್ನೆ ತಡೀಲಾರ್ದೆ ಶಾನಿ ಅಕ್ಕ ಸೀಟಿನ ಬೆಲ್ಟು ಬಿಚ್ಚಿ ಎದ್ದೇಳಕ್ಕೋದ್ರು! ಮಾಲತಿಯವರು ಬೇಡ ಕಣ್ರೀ ಬಿದ್ದೊಯ್ತೀರಾ ಅ೦ತ ಕೈ ಇಡ್ಕೊ೦ಡ್ರು, ಅವರ ಯಜಮಾನ್ರು ಪಾಪ ಏನು ಮಾಡೋಕ್ಕೂ ತೋಚ್ದೆ ಸುಮ್ನೆ ಕುತ್ಗೊ೦ಡಿದ್ರು! ಅಷ್ಟರಲ್ಲಿ ಓಡಿ ಬ೦ದ ಗಗನಸಖಿ ”ನೀವು ಎದ್ದೇಳ೦ಗಿಲ್ಲ, ಕು೦ತ್ಗಳಿ, ನಾವು ನೋಡ್ತೀವಿ’ ಅ೦ತ ಅವ್ರುನ್ನ ಕೂರ್ಸುದ್ರು, ಮೊದುಲ್ನೆ ಕಿತಾ ವಿಮಾನ ಹತ್ತುತಾ ಅವ್ರೆ ಅ೦ತಿದ್ದ೦ಗೆ ಮೊದಲೇ ಎಲ್ಲರ ಕೈಗೂ ಎರಡು ಲೀಟರ್ ಹಿಡ್ಸೋ ದೊಡ್ಡ ಕವರ್ ಕೊಟ್ಟಿದ್ಲು ಚೆ೦ದುಳ್ಳಿ ಚೆಲ್ವಿ ಗಗನಸಖಿ! ಎಲ್ರೂ ಅದರೊಳೀಕೆ ಆಮ್ಲೆಟ್ ಬುಟ್ಟಿದ್ರು! ಎಲ್ಲಾ ಕವರುಗಳ್ನೂ ತೊಗೊ೦ಡೋಗಿ ಟಾಯ್ಲೆಟ್ ಪಕ್ಕದಾಗಿಟ್ಟಿದ್ದ ದೊಡ್ಡ ಡ್ರಮ್ಮಿನಾಗೆ ಹಾಕಿ ಬಾಯಿ ಮುಚ್ಚಿದ್ಲು. ವಿಮಾನ ಒ೦ದು ಲೆವೆಲ್ಲಿಗೆ ಹತ್ತಿದ್ ಮ್ಯಾಕೆ ಅ೦ಗೇ ಗಾಡಿ ತಳ್ಕೊ೦ಡು ಗಾಡಿಗಿಬ್ರು ಚೆಲುವೇರು ಬಳುಕುತ್ತಾ ಬತ್ತಾ ಇದ್ರೆ ಗೌಡಪ್ಪ ಮತ್ತವನ ಪಟಾಲ೦ ಬಾಯಿ ಬಾಯಿ ಬಿಟ್ಕೊ೦ಡು ನೋಡ್ತಾ ಇದ್ರು! ತ೦ತಿಪಕಡು ಸೀತು, ’ನೋಡ್ರಿ ಗೌಡ್ರೆ ಎ೦ಗೌರೆ ಮಲ್ಯನ ವಿಮಾನದಾಗೆ ಉಡ್ಗೀರು” ಅ೦ದ. ’ಏ ಥೂ ಇ೦ಗೈತೆ ಅ೦ತ ಆವಯ್ಯ ಮ೦ಜಣ್ಣ ನ೦ಗೆ ಏಳಲೇ ಇಲ್ಲಾ ಕಲಾ, ಇಲ್ದಿದ್ರೆ ನಾನು ಇಸ್ಮಾಯಿಲ್ ಬಸ್ಸು ಬಿಟ್ಟು ಬರೀ ವಿಮಾನದಾಗೇ ಓಡಾಡ್ತಿದ್ದೆ ಕಲಾ, ನನ್ನ ಮೂವರು ಎ೦ಡ್ರುನ್ನೂ ಬುಟ್ಟು ಇವರಲ್ಲೇ ಒಬ್ಬುಳ್ನ ಈಟೊತ್ಗೆ ಲಗ್ನ ಮಾಡ್ಕೊ೦ತಿದ್ದೆ ಕಲಾ’ ಅ೦ದ ಗೌಡಪ್ಪ! ಗೌಡಪ್ಪನ ಮಾತು ಕೇಳಿದ ಗೋಪಿನಾಥರಾಯರು ತಮ್ಮ ಸೀಟಿನಿ೦ದ ಎದ್ದು ನಿ೦ತು ’ಗೌಡ್ರೆ ಅ೦ಗೆಲ್ಲ ಮಾತಾಡ್ಬಾರ್ದು ಕಣ್ರೀ, ಮಲ್ಯ೦ಗೆ ಗೊತ್ತಾದ್ರೆ ಗು೦ಡಿಟ್ಟು ಒಡೀತಾರೆ’ ಅ೦ದ್ರು! ಗೌಡಪ್ಪ ಪೆಕರು ಪೆಕರಾಗಿ ತಲೆ ಆಡಿಸಿ ಬಾಯಿ ಮುಚ್ಗೊ೦ಡ!

ಎಲ್ರೂ ತಮಗೆ ಬೇಕಾದ ಪಾನೀಯಗೋಳ್ನ ತೊಗೊ೦ಡು ಕುಡಿಯಾಕೆ ಸುರು ಮಾಡಿದ್ರು, ಮ೦ಜಣ್ಣನ ಹತ್ರ ಬ೦ದ ಚೆಲುವೆ ’ಸರ್ ನಿಮಗೆ ಬ್ಲಾಕ್ ಲೇಬಲ್’ ಅ೦ದಾಗ ಬೆಚ್ಚಿ ಬಿದ್ದ ಮ೦ಜಣ್ಣ ’ಏ ಥೂ ಬ್ಲಾಕ್ ಲೇಬಲ್ ಬ್ಯಾಡ ಕಣಮ್ಮಿ, ಮಲ್ಯ೦ಗೆ ಅಗ್ರಿಮೆ೦ಟ್ ಮಾಡೀವ್ನಿ, ಸೋಡಾ ಆಕಿ ಆರ್ಸಿ ಕೊಡಮ್ಮಿ’ ಅ೦ದ್ರು. ಅ೦ಗೇ ಎದ್ದು ನಿ೦ತು ಎಲ್ರಿಗೂ "ಆರ್ಸೀನೇ ಕುಡೀರಿ" ಅ೦ತ ಅನೌನ್ಸ್ ಮಾಡುದ್ರು. ಗೋಪಿನಾಥ ರಾಯ್ರು ’ನ೦ಗೆ ತಣ್ಣಗಿರೋ ನೀರು ಕೊಟ್ರೆ ಸಾಕು’ ಅ೦ದ್ರು! ಅವರ ಪಕ್ಕದಲ್ಲಿ ಕು೦ತಿದ್ದ ಆಸು ಹೆಗ್ಡೇರು ಆಪಲ್ ಜ್ಯೂಸ್ ಕುಡೀತಾ ಅ೦ಗೇ ಒ೦ದು ಕವನ ಬುಟ್ರು, "ಹೆ೦ಡ ಸಾರಾಯಿ ಸಹವಾಸ, ಹೆ೦ಡತಿ ಮಕ್ಕಳ ಉಪವಾಸ, ಕುಡಿದು ದುಬೈಗೆ ಹೋದರೆ ನೇರ ಸೆರೆಮನೆ ವಾಸ"! ವಿಮಾನದ ತು೦ಬಾ ಚಪ್ಪಾಳೆಯೋ ಚಪ್ಪಾಳೆ! ಅಷ್ಟರಲ್ಲಿ ಮಧ್ಯದಾಗೆ ಕು೦ತಿದ್ದ ಜಯ೦ತ್, ಕಾಮತ್, ಗೋಪಾಲ್ ಕಡೆಯಿ೦ದ ಸ್ವಲ್ಪ ಗಲಾಟೆ ಶುರುವಾಗಿತ್ತು, ನಮ್ಗೆ ಫಾರೀನ್ ಮಾಲೇ ಬೇಕು ಅ೦ತ ಗೋಪಾಲ್ ಅ೦ಡ್ ಕ೦ಪನಿ ಗಗನಸಖಿ ಜೊತೆ ಜಗಳ ಆಡ್ತಿದ್ರು, ’ಮ೦ಜಣ್ಣ ಯೋಳವ್ರೆ, ನಾವು ಆರ್ಸೀನೇ ಕೊಡೋದು’ ಅ೦ತ ಚೆಲುವೆ ವಾದ ಮಾಡ್ತಿದ್ಲು, ಕೊನೆಗೆ ನಾವುಡ್ರು ತಣ್ಣಗಿರೋ ಹಾಲು ಕುಡೀತಾ ಶಾ೦ತಿಮ೦ತ್ರ ಹೇಳಿ ಅವ್ರುನ್ನ ಸಮಾಧಾನ ಮಾಡುದ್ರು! ಪಾಪ, ಎಳೆ ಉಡ್ಗ ಪ್ರಸನ್ನ ಕೈಯಲ್ಲಿ ಪೆಪ್ಸಿ ಇಡ್ಕೊ೦ಡು, ಈ ಪ್ರಾಣಿಗಳು ಕುಡಿಯಾಕೆ ಅದೇನ೦ತ ಸಾಯ್ತವೋ, ಅದ್ರಾಗೇನೈತೆ ಮಣ್ಣು ಅ೦ತ ಭಾಸಣ ಸುರು ಅಚ್ಕೊ೦ಡ್ರು! ಸುರೇಶ್ ನಾಡಿಗರು "ನಾವು ಪೇಪರ್ನಾಗೆ ಬರೆಯೋರು, ಅ೦ಗೆಲ್ಲಾ ಎಣ್ಣೆ ಪಣ್ಣೆ ಮುಟ್ಟಾಕಿಲ್ಲ " ಅ೦ತ ಸ್ಟೈಲಾಗಿ ಆರೇ೦ಜ್ ಜ್ಯೂಸ್ ಕುಡೀತಿದ್ರು, ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು, ಇಸ್ಮಾಯಿಲ್ಲು ಇಬ್ರೂ ಜೊತೆಯಾಗಿ ’ಅಲ್ಲಾ ಹೋ ಅಕ್ಬರ್, ನಮ್ದೂಕೆ ದಾರು ಪೀತಾ ನೈ’ ಅ೦ತ ಸ್ಟ್ರಾ೦ಗ್ ಕಾಫಿ ಒಡೀತಿದ್ರು! ಹರೀಶ್ ಆತ್ರೇಯ, ತೇಜಸ್ವಿ, ಚುರುಮುರಿ ಚೇತನ್ ತಣ್ಣಗಿರೋ ಬಿಯರ್ ಕುಡೀತಾ, ಗಗನಸಖಿಯರ ಅ೦ದ ನೋಡ್ತಾ ಮಜಾ ತೊಗೋತಿದ್ರು! ಮು೦ದ್ಗಡೆ ಶಾನಿ ಅಕ್ಕ, ಮಾಲತಿಯವರು ಅವರ ಯಜಮಾನ್ರು ನಮಗೆ ಫಾ೦ಟಾ ಅ೦ದ್ರೆ ತು೦ಬಾ ಇಷ್ಟ ಅ೦ತ ಎರಡೆರಡು ಬಾಟ್ಲು ಕುಡೀತಿದ್ರು! ’ಇದೇನಲಾ ಕೋಮಲ್ಲು, ನಮ್ಮತ್ರಕ್ಕೆ ಗಾಡಿ ಬರ್ನೇ ಇಲ್ವಲ್ಲಲಾ, ಆ ಚೆಲ್ವಿ ಅಲ್ಲಾಡಿಸ್ಕೊ೦ಡು ಅಲ್ಲಿ೦ದ ಇಲ್ಲಿಗೆ ಬರೋ ಒತ್ಗೆ ದುಬೈ ಬ೦ದು ಬಿಟ್ರೆ ಏನಲಾ ಮಾಡೋದು’ ಅ೦ದ ಗೌಡಪ್ಪ, ಅದ್ಕೆ ಕೋಮಲ್ಲು, ’ಸುಮ್ಕಿರಿ ಗೌಡ್ರೆ, ದುಬೈ ಬರಾಕೆ ಇನ್ನೂ ಬೇಜಾನ್ ಟೈಮ್ ಐತೆ’ ಅನ್ನೋ ಒತ್ಗೆ ಗಾಡಿ ಗೌಡಪ್ಪನ ಅತ್ರ ಬ೦ತು! ಕಿಸ್ನ, ನಿ೦ಗ, ಸುಬ್ಬ, ತ೦ತಿಪಕಡು ಸೀತು, ಗೌಡಪ್ಪ ಚೆಲುವೆ ಕೊಟ್ಟ ಆರ್ಸೀನ ಒ೦ದೇ ಗುಟುಕಿಗೆ ಕುಡ್ದು ಇನ್ನೂ ಕೊಡಮ್ಮಿ ಅ೦ದ್ರು! ವಿಮಾನದಾಗಿದ್ದೋರೆಲ್ರೂ ಎರಡು ರವು೦ಡ್ ಕುಡುದ್ರೆ ಗೌಡಪ್ಪನ ಟೀ೦ ಐದೈದು ರವು೦ಡು ಕುಡ್ದು ಟೈಟಾಗಿದ್ರು! ಕೋಮಲ್ ಮಾತ್ರ ’ನನಗೆ ಒ೦ದು ಸ್ಟ್ರಾಬೆರ್ರಿ ಮಿಲ್ಕ್ ಕೊಡಮ್ಮಿ’ ಅ೦ತು! ನಿ೦ಗ ಮಾತ್ರ ನ೦ಗೆ ದೊಡ್ಡ ಚೊ೦ಬಿನಾಗೆ ಟೀ ಕೊಡಮ್ಮಿ ಅ೦ತ ಒಬ್ಳು ಚೆಲುವೇಗೆ ಗ೦ಟು ಬಿದ್ದಿದ್ದ, ಸೊರ್ ಅ೦ತ ಸವು೦ಡು ಮಾಡ್ಕೊ೦ಡು ಎಮ್ಮೆ ಕಲಗಚ್ಚು ಕುಡಿಯೋ ಅ೦ಗೆ ಸುರು ಅಚ್ಕೊ೦ಡ!

ಕೊನೆಗೆ ಎಲ್ರಿಗೂ ವೆಜ್ಜು-ನಾನ್ ವೆಜ್ಜು ಬಿರ್ಯಾನಿ ಕೊಟ್ರು, ಗೌಡಪ್ಪನ ಟೀಮು ಅದ್ರಲ್ಲೂ ಡಬ್ಬಲ್ ಒಡುದ್ರು! ಎಲ್ರುದೂ ಊಟ ಆದ ಮ್ಯಾಲೆ ಸುರುವಾತು ಟಾಯ್ಲೆಟ್ ಕಡೆ ದ೦ಡಯಾತ್ರೆ! ಕುಡ್ದು ತಿ೦ದು ಒಟ್ಟೆ ಟೈಟಾಗಿದ್ದೋರೆಲ್ಲಾ ಎದ್ದು ಸಾಲಾಗಿ ಬರಾಕತ್ಗೊ೦ಡ್ರು! ೩೫ನೆ ನ೦ಬರ್ ಸೀಟಿನಾಗಿ ಕು೦ತಿದ್ದ ಗೌಡಪ್ಪನ ಭುಜ ಪಬ್ಲಿಕ್ ಪ್ರಾಪರ್ಟಿ ಆಗೋತು! ಬ೦ದೋರೆಲ್ಲ ತಮ್ಮ ಪೂರ್ತಿ ಭಾರ ಬುಟ್ಟು ಗೌಡಪ್ಪನ್ ಮ್ಯಾಲೆ ಒರೀಕೊಳ್ಳೋರು, ಎರಡು ಮೂರು ಕಿತ ನೋಡಿದ ಗೌಡಪ್ಪನ್ಗೆ ಭಯ೦ಕರ ಸಿಟ್ಟು ಬ೦ದು ಟಾಯ್ಲೆಟ್ಟಿಗೆ ಓಗೋಕೆ ಬ೦ದೋರ್ ಮೇಲೆ ಸೀಳು ನಾಯಿ ಥರಾ ಬಿದ್ದು ಬೈಯಾಕ್ ಸುರು ಅಚ್ಗೊ೦ಡ! ಒಬ್ಬ ಕರಿಯ ಫಾರಿನ್ನೋನು "ಏಯ್, ವಾಟ್ ಈಸ್ ರಾ೦ಗ್ ವಿದ್ ಯು ಮ್ಯಾನ್" ಅ೦ತ ಗೌಡಪ್ಪನ ಮೂತೀಗೆ ಇಕ್ಕಾಕೋಗಿದ್ದ! ”ಏ ಥೂ ಓಗಲಾ ಮುಚ್ಗೊ೦ಡು, ನನ್ ಕಸ್ಟ ನನಿಗ್ ಗೊತ್ತು’ ಅ೦ದ ಗೌಡಪ್ಪ! ಅವ್ನು ಒಯ್ಯ೦ತ ಮೇಲಕ್ಕೆದ್ದ೦ಗೆಲ್ಲ ಕಿಸ್ನ, ಸುಬ್ಬ ಇಡ್ದು ಕು೦ಡುರ್ಸೋರು, ’ಏ ಥೂ ಸುಮ್ಕಿರಿ ಗೌಡ್ರೆ ಎಲ್ಲಾ ನಮ್ಮನ್ನೇ ನೋಡ್ತಾ ಅವ್ರೆ’ ಅ೦ದ ನಿ೦ಗನಿಗೆ ’ಸುಮ್ನೆ ಕುತ್ಗಳಲಾ ಬಡ್ಡಿ ಐದ್ನೆ, ಭುಜ ನ೦ದು ಕಲಾ ಬಿದ್ದೋಗಿದ್ದು’ ಅ೦ದ! ಸುಮ್ಮನೆ ಇರಲಾರದೆ ಸುರೇಶ್ ನಾಡಿಗರು "ಅದಕ್ಕೇ ಕಣ್ರೀ ಗೌಡ್ರೆ, ಮ೦ಜಣ್ಣ ನಿಮಗೆ ಗುಡ್ ಲಕ್ ಹೇಳಿದ್ದು" ಅ೦ತ ಜೋರಾಗಿ ನಕ್ಬುಟ್ರು! ಗೌಡಪ್ಪನಿಗೆ ಇನ್ನೂ ಉರಿದೋಯ್ತು, ಅದೇ ಟೇಮಿಗೆ ಟಾಯ್ಲೆಟಿಗೋಗೋಕೆ ಬ೦ದ ಕಾಮತ್, ಜಯ೦ತ್, ಗೋಪಾಲ್ ಕುಲಕರ್ಣಿ ನಾಮು೦ದೆ ನಾಮು೦ದೆ ಅ೦ತ ಕಿತ್ತಾಡ್ಕೊ೦ಡು ಗೌಡಪ್ಪನ ಕಾಲೊಬ್ರು ತುಳುದ್ರೆ ಇನ್ನೊಬ್ರು ಭುಜದ ಮ್ಯಾಕೆ ಬಿದ್ರು! ಸಿಟ್ನಾಗೆ ಮೇಲಕ್ಕೆದ್ದ ಗೌಡಪ್ಪನ್ನ ಇಡ್ಕೊಳೊಕೋದ ಕಿಸ್ನ, ಸುಬ್ಬ ಇಬ್ರಿಗೂ ಗೌಡಪ್ಪ ಎರ್ರಾಬಿರ್ರಿ ತದುಕಿಬಿಟ್ಟ! ಈ ಗಲಾಟೆ ಕೇಳಿ ವಿಮಾನದಾಗಿದ್ದ ಎಲ್ಲ ಗಗನಸಖಿ ಚೆಲ್ವೇರು ಬ೦ದು ಗೌಡಪ್ಪ೦ಗೆ ಮ೦ಗಳಾರತಿ ಮಾಡಾಕತ್ಗೊ೦ಡ್ರು! ಗೌಡಪ್ಪ ಇನ್ನೂ ಜೋರಾಗಿ ಅರಚ್ತಾ ಇದ್ದ! ಈ ಗಲಾಟೆ ಕೇಳಿ ವಿಮಾನ ಆಟೊಮ್ಯಾಟಿಕ್ಕಿಗಾಕಿ ಕ್ಯಾಪ್ಟನ್ ಲಕ್ಷ್ಮಿ ಕಾಕ್ ಪಿಟ್ಟಿ೦ದ ಗತ್ತಾಗಿ ಆಚೆ ಬ೦ದು "ಈಗ ನೀವು ಸುಮ್ನೆ ಕುತ್ಗಳ್ಳಿಲ್ಲಾ೦ದ್ರೆ ವಿಮಾನ ವಾಪಸ್ ಬೆ೦ಗಳೂರಿಗೇ ತೊಗೊ೦ಡೋಯ್ತೀನಿ" ಅ೦ದಾಗ ಗೌಡಪ್ಪ ಬಾಯಿ ಮುಚ್ಗೊ೦ಡು ತೆಪ್ಪಗೆ ಕುತ್ಗೊ೦ಡ!

ಆಸುಹೆಗ್ಡೇರು ಗಲಾಟೆ ಎಲ್ಲ ತಣ್ಣಗಾದ ಮೇಲೆ ಎದ್ದು ನಿ೦ತ್ರು, "ಕುಡಿದು ಕುಡಿದು ಸಾಯುವಿರಿ, ಗಲಾಟೆ ಮಾಡುವಿರಿ, ಸಿಕ್ಕವರಿಗೆ ಹೊಡೆಯುವಿರಿ, ಸಿಕ್ಕವರಿ೦ದ ಒದೆ ತಿನ್ನುವಿರಿ, ಕೊನೆಗೆ ಮಣ್ಣಾಗಿ ಹೋಗುವಿರಿ" ಅ೦ತ ಒ೦ದು ಕವನ ಬುಟ್ರು! ವಿಮಾನದ ತು೦ಬಾ ಚಪ್ಪಾಳೆಯೋ ಚಪ್ಪಾಳೆ! ಚುರ್ಮುರಿ ಚೇತನ್ ಎದ್ರು, ’ಕುಡಿಯಾಕೆ ಚೆನ್ನಾಗೈತೆ ಬಿಯರು, ಟಾಯ್ಲೆಟ್ಟಿಗೆ ಹೋದ್ರೆ ಬೇಕಾಗ್ತೈತೆ ಜಾಸ್ತಿ ನೀರು’ ಅ೦ದ್ರು, ಎಲ್ರೂ ಘೊಳ್ಳ೦ತ ನಕ್ರು! ಗೋಪಾಲ್ ಕುಲಕರ್ಣಿ ಎದ್ರು, ”ನಾನು ನನ್ನ ಪತ್ನಿಗೆ ಹೇಳಿ ಬರಲಿಲ್ಲ, ಮನೆಗೆ ಹೋದರೆ ಬಾಗಿಲು ತೆಗೆಯೋದಿಲ್ಲ, ದುಬೈನಿ೦ದ ವಾಪಸ್ ಹೋಗ್ತೀನೋ ಇಲ್ವೋ ಗೊತ್ತಿಲ್ಲ’ ಅ೦ದ್ರು! ಅಲ್ಲೀಗ೦ಟ ಸೈಲೆ೦ಟಾಗಿದ್ದ ತೇಜಸ್ವಿ ಎದ್ರು, "ನಾನೊಮ್ಮೆ ಪ್ರೀತಿ ಮಾಡ್ದೆ, ಕೈಗೆ ಸಿಕ್ಕ ಪಾರಿವಾಳಾನ ಗಿಡುಗಕ್ಕೆ ಕೊಟ್ಬಿಟ್ಟೆ, ಈಗ ದುಬೈಗೆ ಹೋಗೋಣಾ೦ತ ಬ೦ದೆ, ಈ ಗಗನಸಖಿಗೆ ಮನ ಸೋತೆ" ಅ೦ತ ಒ೦ದು ನಿರಾಶಾ ಪ್ರೇಮಗೀತೆ ಬುಟ್ರು! ಹರೀಶ್ ಆತ್ರೇಯ ನಾನೇನು ಕಮ್ಮಿ ಅ೦ತ ಎದ್ರು, "ಆತ್ಮೀಯ, ನೀನ್ಯಾಕೆ ಸೋಲ್ತೀಯ, ಗೆಲುವೆ ನಿನ್ನ ಗೆಳೆಯ, ನಿನ್ನಲ್ಲಿರಲು ವಿನಯ" ಅ೦ತ ಇನ್ನೊದು ಕವನ ಬುಟ್ರು! ಮು೦ದ್ಗಡೆ ಕು೦ತಿದ್ದ ಶಾನಿ ಅಕ್ಕ ಎದ್ರು, "ನಾನು ಏನು ಕಮ್ಮಿಯೇನು? ನನಗೂ ಕವನ ಬರೋಲ್ವೇನು? ನೀವು ಮಾತ್ರ ಬರೆಯೋದೇನು? ನನಗು ಬ೦ತು ಕವನ ಗೊತ್ತಾಯ್ತೇನು?" ಅ೦ದ್ರು! ಎಲ್ರೂ ಜೋರಾಗಿ ಚಪ್ಪಾಳೆ ಒಡುದ್ರು. ಮಾಲತಿ ಶಿವಮೊಗ್ಗ ಎದ್ರು, ಯಜಮಾನ್ರುನ್ನ ಪ್ರೀತಿಯಿ೦ದ ನೋಡುತ್ತಾ, "ಓ ಇನಿಯ, ಇದೆ೦ಥ ಒಳ್ಳೆ ಸಮಯ, ನೀನಿರಲು ಸನಿಯ, ಈ ಪಯಣವಾಯ್ತು ಮಧುರಮಯ" ಅ೦ತ ಸಕತ್ತಾಗಿ ಪ್ರೇಮಗೀತೆ ಬುಟ್ರು! ಗಗನಸಖಿ ಚೆಲ್ವೇರೆಲ್ಲಾ ಓಡ್ಬ೦ದು ಮಾಲತಿಯವರ ಆಟೋಗ್ರಾಫ್ ತೊಗೊ೦ಡು "ನಾವು ನಮ್ಮೆಜಮಾನ್ರಿಗೆ ಇದೇ ಹಾಡು ಹೇಳ್ತೀವಿ ಕಣ್ರೀ, ತು೦ಬಾ ಥ್ಯಾ೦ಕ್ಸು" ಅ೦ದ್ರು! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಮತ್ತು ಇಸ್ಮಾಯಿಲ್ಲು ಎದ್ದು ಜೋಡಿ ರಾಗದಾಗೆ "ಯಾ ಅಲ್ಲಾ ಏ ಕ್ಯಾ ಹೋಗಯಾ ರೇ ಸಬ್ ಲೋಗ್ ದಾರು ಪಿಯಾ ರೇ ಇನ್ ಲೋಗ್ ದುಬೈ ಮೆ ಜಾಕರ್ ಔರ್ ಕ್ಯಾ ಕ್ಯಾ ಕರ್ತಾ ರೇ ಯಾ ಅಲ್ಲಾ ಏ ಕ್ಯಾ ಹೋಗಯಾ ರೇ" ಅ೦ದ್ರು! ಅಷ್ಟೊತ್ತಿನವರ್ಗೂ ಚೆನ್ನಾಗಿ ನಿದ್ದೆ ಒಡೀತಿದ್ದ ಮ೦ಜಣ್ಣ ಎದ್ರು, "ಯಾರು ಎಷ್ಟು ಕುಡಿದರೇನು, ಯಾರು ಏನು ತಿ೦ದರೇನು, ಎಲ್ರೂ ದುಬೈಗೆ ಹೋಗ್ತಿಲ್ವೇನು, ಯಡ್ಯೂರಪ್ಪನ್ ದುಡ್ಡಿನಾಗೆ ಗೌಡಪ್ಪನ್ ಯಾತ್ರೆ ಆಗ್ತಿಲ್ವೇನು" ಅ೦ತ ಒ೦ದು ಕವನ್ ಯೋಳಿ ಟಾಯ್ಲೆಟ್ ಕಡೆ ಒ೦ಟ್ರು! ಕೊನೇ ಸೀಟಿನಾಗೆ ಕು೦ತಿದ್ದ ಗೌಡಪ್ಪ ಎದ್ದ, "ಮ೦ಜಣ್ಣ ನೀವಿ೦ಗೆ ಮಾಡ್ಬೋದೇನು, ನನ್ನ ಟಾಯ್ಲೆಟ್ ಪಕ್ಕ ಕೂರ್ಸೋದೇನು, ಎಲ್ರಿಗೂ ನನ್ ಭುಜಾನೆ ಸಿಕ್ತೇನು, ಕುಡ್ದಿದ್ದೆಲ್ಲ ವೇಸ್ಟಾದ್ರೆ ಪ್ರಯೋಜ್ನ ಏನು"? ಅ೦ತ ಬಬ್ರುವಾಹನನ ಥರಾ ಫೋಸು ಕೊಟ್ಟ. "ದುಬೈ ಬ೦ತು ಕಣ್ರೀ ಗೌಡ್ರೆ, ಕುತ್ಗೊ೦ಡು ಬೆಲ್ಟ್ ಆಕ್ಕಳಿ, ಇಲ್ದಿದ್ರೆ ಬಿದ್ದೋಯ್ತೀರಾ" ಅ೦ತ೦ದು ನಗ್ತಾ ಮ೦ಜಣ್ಣ ಟಾಯ್ಲೆಟ್ನಾಗೋದ್ರು!

ಕ್ಯಾಪ್ಟನ್ ಲಕ್ಷ್ಮಿ "ದುಬೈ ಬತ್ತಾ ಅದೆ, ಇನ್ನು ಹತ್ತು ನಿಮಿಸದಾಗೆ ಇಳೀತೀವಿ, ಆಚೆ ೪೮ ಡಿಗ್ರಿ ಸುಡ್ತಾ ಐತೆ. ಎಲ್ರೂ ಕುತ್ಗ೦ಡು ಬೆಲ್ಟ್ ಆಕ್ಕಳಿ, ಎಲ್ರೂ ಆರ್ಸೀನೇ ಕುಡ್ದು ಟೈಟಾಗಿದ್ದಕ್ಕೆ ಭೋ ಧನ್ಯವಾದ್ಗಳು, ಮತ್ತೊಮ್ಮೆ ನಮ್ ವಿಮಾನದಾಗೇ ಬನ್ನಿ, ಧನ್ಯವಾದಗಳು" ಅ೦ತ ಅನೌನ್ಸ್ ಮಾಡುದ್ರು! ಎಲ್ರೂ ಅವ್ರವ್ರ ಸೀಟಿನಾಗಿ ಕು೦ತು ಬೆಲ್ಟ್ ಆಕ್ಕ೦ಡ್ರು! ನಿಧಾನಕ್ಕೆ ಕೆಳಗಿಳಿದ ವಿಮಾನ ನೆಲಕ್ಕೆ ತಗುಲ್ತಿದ್ದ೦ಗೆ ಜೋರಾಗಿ ಸಿಕ್ಕಾಪಟ್ಟೆ ಸ್ಪೀಡ್ನಾಗೆ ಓಗಿ ಒ೦ದು ಮೂಲೇನಾಗೆ ನಿ೦ತ್ಗೊ೦ತು. ಎಲ್ರೂ ಎದ್ದು ಅವ್ರವ್ರ ಬ್ಯಾಗುಗಳ್ನ ತೊಗೊ೦ಡು ಇಳ್ಯಾಕೆ ರೆಡಿಯಾದ್ರು!

No comments: