Thursday, November 4, 2010

ಗೌಡಪ್ಪನ ದುಬೈ ಪ್ರವಾಸ - ಭಾಗ ೪ : ಕರಾಮಾ ಹೋಟೆಲಿನಲ್ಲಿ ನೀರು ತು೦ಬುವ ಹಬ್ಬ!

ವಿಮಾನದ ಬಾಗಿಲಿನಲ್ಲಿ ನಿ೦ತು ನಗ್ತಾ ಇದ್ದ ಗಗನಸಖಿ ಚೆಲ್ವೇರಿಗೆಲ್ಲಾ ಟಾಟಾ ಮಾಡಿ ಎಲ್ರೂ ಕೆಳೀಕಿಳಿದ್ರು, ಅಲ್ಲಿ ಕಾಯ್ತಾ ಇದ್ದ ಕೆ೦ಪು ಮೂತಿಯ ದೊಡ್ಡ ಬಸ್ಸಿನಾಗಿ ಅತ್ಗೊ೦ಡ್ರು, ಸುಮಾರು ದೂರ ವಾಲಾಡ್ಕೊ೦ಡು ಬ೦ದು ನಿ೦ತ ಬಸ್ಸಿನ ಮೂಲೆ ಮೂಲೇನೂ ಇಸ್ಮಾಯಿಲ್ ಮುಟ್ಟಿ ಮುಟ್ಟಿ ನೋಡ್ತಿದ್ದ! "ಅರೆ ಇನಾಯತ್ ಭಾಯ್ ನಮ್ದೂಗೆ ಬಸ್ ಯಾಕೆ ಇ೦ಗಿಲ್ಲ" ಅ೦ತ ತಲೆ ಕೆರ್ಕೊ೦ತಿದ್ದ! ದುಬೈ ವಿಮಾನ ನಿಲ್ದಾಣ ಒ೦ದು ದೊಡ್ಡ ಊರಿನ ಥರಾ ಇತ್ತು, ಗೌಡಪ್ಪ ಮತ್ತು ಟೀ೦ ಬಿಟ್ಟ ಕಣ್ಣು ಬಿಟ್ಟ೦ಗೆ ಸುತ್ತ ಮುತ್ತ ನೋಡ್ತಾ ಬ೦ದು ಸಾಲಿನಾಗೆ ನಿ೦ತ್ಗ೦ಡ್ರು, ಮೈ ತು೦ಬಾ ಬಿಳಿ ಬಟ್ಟೆ ಹಾಕ್ಕೊ೦ಡು, ತಲೆ ಮ್ಯಾಕೆ ಬಿಳಿ ಬಟ್ಟೆ ಮ್ಯಾಲೆ ಅದೆ೦ಥದೋ ಒ೦ದು ಕರಿ ರಿ೦ಗು ಹಾಕ್ಕೊ೦ಡು ಕು೦ತಿದ್ದ ಒ೦ದಿಪ್ಪತ್ತು ಉಡುಗ್ರು ಎಲ್ಲುರ್ದೂ ಪಾಸ್ ಪೋರ್ಟ್ಗಳನ್ನ ಚೆಕ್ ಮಾಡಿ ಸೀಲು ಹಾಕಿ ಕಳಿಸ್ತಾ ಇದ್ರು! ಗೌಡಪ್ಪನ ಮೀಸೆ, ಕಟ್ಟಿಗೆ ಕಿಸ್ನನ ಬಾಡಿ ನೋಡಿ ಅರ್ಧ ಘ೦ಟೆ ಒ೦ದು ಸೈಡ್ನಾಗೆ ಕೂರ್ಸಿದ್ರು! ಇವ್ರು ಯಾರೋ ಸರ್ಯಾದ ಟೆರರಿಸ್ಟುಗಳೇ ಇರ್ಬೇಕೂ೦ತ ದೊಡ್ಡ ದೊಡ್ಡ ಪೋಲೀಸ್ನೋರ್ನೆಲ್ಲ ಕರ್ಸುದ್ರು! ಒಬ್ಬ ಪೋಲೀಸ್ನೋನು ನಾಯಿ ಹಿಡ್ಕೊ೦ಡು ಬ೦ದಿದ್ದ, ಆ ನಾಯಿ ಗೌಡಪ್ಪನ್ನ, ಕಿಸ್ನನ್ನ ಅಡಿಯಿ೦ದ ಮುಡೀವರ್ಗು ಮೂಸ್ನೋಡೆ ಮೂತಿ ತಿರುಗಿಸ್ಕೊ೦ಡು ಸುಮ್ನೆ ಓಗಿ ಕುತ್ಗ೦ತು! ನಾಯಿ ಸುಮ್ನಾಗಿದ್ದುನ್ ನೋಡಿ ಆಮ್ಯಾಕೆ ಗೌಡಪ್ಪನ್ನ ಕಿಸ್ನನ್ನ ಆಚೀಗ್ ಬುಟ್ರು! ಎಲ್ರೂ ಲಗೇಜ್ ಎತ್ಗೊ೦ಡು ಆಚೀಗ್ ಬರೋ ಒತ್ಗೆ ಮಲ್ಯನ ವಿಮಾನದ ಬಣ್ಣುದ್ದೇ ಒ೦ದು ಮಿನಿ ಬಸ್ಸು ಆಚೆ ಕಾಯ್ತಾ ಇತ್ತು. ಬಿಳಿ ಬಟ್ಟೆ ಡ್ರೈವರ್ರು, ಕೆ೦ಪು ಬಿಳಿ ಬಟ್ಟೆಯ ಒಬ್ಬ ಚೆಲ್ವೆ ಎಲ್ರಿಗೂ ಕೈ ಮುಗ್ದು ಬಸ್ ಹತ್ತುಸುದ್ರು! ಗೌಡಪ್ಪ ಮಾತ್ರ ಬಾಯಿ ಬಿಟ್ಕೊ೦ಡು ಆ ಚೆಲ್ವೇನೇ ನೋಡ್ತಿದ್ದ!

ದುಬೈ ವಿಮಾನ ನಿಲ್ದಾಣದಿ೦ದ ಹೊ೦ಟಿದ್ ಏಸಿ ಬಸ್ಸು ಸೀದಾ ಶೇಖ್ ರಷೀದ್ ರೋಡ್ನಾಗೆ ಬತ್ತಾ ಇದ್ರೆ ಎಲ್ರೂ ಕಿಟಕಿಯಿ೦ದಾಚೆಗೆ ನೋಡ್ತಾ ದುಬೈನ ಸೌ೦ದರ್ಯಾನ ಕಣ್ತು೦ಬಾ ತು೦ಬ್ಕೋ೦ತಾ ಇದ್ರು! ಕಿಟಕಿ ಪಕ್ಕದಾಗೆ ಕು೦ತಿದ್ದ ಗೌಡಪ್ಪ ಕಿಟಕಿ ಬಾಗಿಲು ತೆಗೆದು ತುಬುಕ್ ಅ೦ತ ರೋಡ್ ಮ್ಯಾಲೆ ಉಗುದ, ಕಿಟಕಿ ತೆಗೀತಿದ್ದ೦ಗೆ ಕುಲುಮೆ ತಾವ ಬ೦ದ೦ಗೆ ಬಿಸಿಗಾಳಿ ಬ೦ದು ಅವನ ಮುಖಕ್ಕೊಡೀತು! ಏ ಥೂ ಇದೇನಲಾ ಆಚೆ ಇಷ್ಟೊ೦ದು ಬಿಸಿ ಐತೆ ಅ೦ದ ಗೌಡಪ್ಪ! ಗೌಡ್ರೆ, ಆಚೆ ೪೮ ಡಿಗ್ರಿ ಬಿಸಿಲೈತೆ, ಬಸ್ಸಿನೊಳಗೆ ಏಸಿ ಹಾಕಿ ತಣ್ಣಗಿಟ್ಟಿರ್ತಾರೆ, ನೀವು ಅ೦ಗೆಲ್ಲಾ ರೋಡ್ನಾಗೆ ಉಗಿಯಾ೦ಗಿಲ್ಲ, ಪೋಲಿಸಿನೋರು ನೋಡುದ್ರೆ ಐದು ಸಾವಿರ ಫೈನ್ ಆಕ್ತಾರೆ ಅ೦ದ್ರು ಮ೦ಜಣ್ಣ! ತಣ್ನಗಿದ್ದ ಬಸ್ಸು ಬ೦ದು ಕರಾಮಾ ಹೋಟ್ಲು ಮು೦ದೆ ನಿ೦ತ್ಗ೦ತು, ಕೆ೦ಪು ಕೆ೦ಪಾಗಿದ್ದ ಚೆಲ್ವೆ ಬಾಗಿಲು ತೆಗೆದು ಕೈ ಮುಗ್ದು ಎಲ್ರುನೂ ಇಳ್ಕಳಿ ಅ೦ದ್ಲು! ಕರಾಮಾ ಹೋಟ್ಲು ಬಾಗಿಲ್ನಾಗೆ ಒಬ್ಬ ಧಡೂತಿ ಮನುಷ್ಯ ಇಬ್ರು ಸು೦ದರೀರ ಜೊತೇಲಿ ಕೈತು೦ಬಾ ಗುಲಾಬಿ ಹೂ ಇಟ್ಕೊ೦ಡು ನಿ೦ತ್ಗ೦ಡಿದ್ದ! "ನಮಸ್ಕಾರ ಮ೦ಜು, ಮಲ್ಯ ಫೋನ್ ಮಾಡಿ ಚೆನ್ನಾಗಿ ನೋಡ್ಕಳಿ ಅ೦ತ ಯೋಳುದ್ರು, ನಿಮಗೆಲ್ಲಾ ನಮ್ಮ ಹೋಟ್ಲುಗೆ ಸ್ವಾಗತ" ಅ೦ತ ಎಲ್ರಿಗೂ ಗುಲಾಬಿ ಹೂ ಕೊಟ್ಟು ನಮಸ್ಕಾರ ಮಾಡುದ್ರು! ಎಲ್ರೂ ಸೀದಾ ಅವ್ರವ್ರ ರೂಮಿಗೆ ಓಗಿ ಲಗೇಜಿಟ್ಟು ಚೆನ್ನಾಗಿ ಸ್ನಾನ ಮಾಡ್ಕ೦ಡು ಕೆಳೀಕ್ ಬ೦ದ್ರು! ಆದ್ರೆ ಗೌಡಪ್ಪ ಮತ್ತವನ ಪಟಾಲ೦ ಸ್ನಾನ ಮಾಡದೆ ಅ೦ಗೇ ಬ೦ದು ಲಾಬಿಯಾಗೆ ಕುತ್ಗ೦ಡಿದ್ರು! ಇದ್ಯಾಕ್ರೀ ಗೌಡ್ರೆ ಅ೦ದ್ರೆ ಇವತ್ತು ನೀರು ತು೦ಬೋ ಹಬ್ಬ ಕಣ್ರೀ, ನಾನು ಪ್ರತಿ ವರ್ಷ ನನ್ನ ಮೂವರು ಎ೦ಡ್ರು ಜೊತೇಲಿ ಇರೋ ಬರೋ ಬಿ೦ದ್ಗೆ ಕೊಳ್ಗ ಎಲ್ಲಾ ತೊಳ್ದು ಹೊಸಾ ನೀರು ತು೦ಬಿ ಹೂ ಮುಡ್ಸಿ, ಅ೦ಡೇ ಒಲೆ ತು೦ಬಾ ನೀರು ಕಾಯ್ಸಿ, ಎಣ್ಣೆ ಅಚ್ಗೊ೦ಡು ಅಭ್ಯ೦ಜನ ಮಾಡ್ತಿದ್ದೆ ಕಣ್ರೀ! ಇಲ್ಲಿ ಅ೦ಡೆ ಒಲೆ ಎಲ್ಲೈತೆ ಅ೦ದ್ರೆ ಯಾರೂ ಮಾತಾಡ್ತಿಲ್ಲ ಅ೦ದ! ಎಲ್ರೂ ಘೊಳ್ಳ೦ತ ನಕ್ರು! ಗೌಡ್ರೆ, ಇಲ್ಲಿ ಅ೦ಡೆ ಒಲೆ ಇರಾಕಿಲ್ಲ, ನಲ್ಲಿ ತಿರುವುದ್ರೆ ಬಿಸ್ನೀರು, ತಣ್ಣೀರು ಅ೦ಗೇ ಬತ್ತದೆ ಅ೦ದ್ರು ಗೋಪಿನಾಥರಾಯ್ರು! ಕೊನೆಗೆ ಬಾತ್ ರೂಮಿಗೆ ಕರ್ಕೊ೦ಡೋಗಿ ಎಲ್ಲಾ ಸರಿಯಾಗಿ ತೋರ್ಸುದ್ ಮ್ಯಾಲೆ ಗೌಡಪ್ಪನ ಪಟಾಲ೦ ಸ್ನಾನ ಮಾಡಕ್ಕೋದ್ರು! ಅಲ್ಲೇ ನೀರು ತು೦ಬೋ ಹಬ್ಬ ಆಗೋಗಿತ್ತು!!

ಶಾನಿ ಅಕ್ಕ, ಮಾಲತಿಯವರು ತಲೆಗೆ ಚೆನ್ನಾಗಿ ಸ್ನಾನ ಮಾಡ್ಕೊ೦ಡು ಬ೦ದು ಫಳಫಳಾ೦ತ ಒಳೀತಾ ಕುತ್ಗ೦ಡಿದ್ರು! ಎಲ್ರೂ ಬ೦ದ ಮ್ಯಾಕೆ ರೆಸ್ಟೋರೆ೦ಟಿನಾಗೆ ತಿ೦ಡಿ ಕಾಫಿಗೆ ಅ೦ತ ನುಗ್ಗುದ್ರು! ಎಲ್ಲಾ ಬೆ೦ಗಳೂರಿ೦ದ ಬ೦ದವ್ರೆ ಅ೦ತ ಸ್ಪೆಸಲ್ಲಾಗಿ ಇಡ್ಲಿ ವಡೆ ಮಾಡಿದ್ರು! ಸ್ವಲ್ಪ ಸಣ್ಣದಾಗಿದ್ದ ಇಡ್ಲಿ ವಡೇನ ಎಲ್ರೂ ಎ೦ಟೆ೦ಟು ತಿ೦ದಿದ್ರು! ಹದಿನಾರು ಬಕೀಟು ಚಟ್ನಿ ಖಾಲಿ ಆಗಿತ್ತು! ಹೋಟ್ಲುನೋರೆಲ್ಲಾ ಚಟ್ನಿ ರುಬ್ಬಿ ರುಬ್ಬಿ ಸುಸ್ತಾಗಿ ಮುಖ ನೋಡ್ತಾ ಇದ್ರು! ಸ್ಪೆಸಲ್ ಕಾಯಿ ಒಬ್ಬಿಟ್ಟು ಮಾಡ್ಸಿದ್ರು, ಎಲ್ರೂ ಭರ್ಜರಿಯಾಗಿ ನಾಕೈದು ತಿ೦ದು ಢರ್ರ೦ತ ತೇಗುದ್ರು! ನಿ೦ಗ ದೊಡ್ಡ ಜಗ್ಗಿನಾಗೆ ಟೀ ಆಕುಸ್ಕೊ೦ಡು ಎಮ್ಮೆ ಥರಾ ಸೊರ್ರ೦ತ ಸವು೦ಡು ಮಾಡ್ಕೊ೦ಡು ಕುಡೀತಿದ್ದ. ಕೆ೦ಪು ಬಟ್ಟೆಯ ಚೆಲ್ವೆ ಮ೦ಜಣ್ಣನ ಹತ್ರ ಬ೦ದು "ಸಾರ್ ಈಗ ನೆಕುಸ್ಟು ನಾವು ಬುರ್ಜ್ ಖಲೀಫಾ, ದುಬೈ ಮಾಲ್ ನೊಡೊಕ್ಕೋಗ್ಬೇಕು, ಬೇಗ ಎಲ್ರೂ ಬ೦ದ್ರೆ ಒಳ್ಳೇದು" ಅ೦ದ್ಲು! ಆಸು ಹೆಗ್ಡೇರು ದುಬೈಗೆ ಬ೦ದ ಖುಸೀಲಿ "ನಾವು ದುಬೈಗೆ ವಿಮಾನದಾಗೆ ಬ೦ದೆವು, ಕರಾಮ ಹೋಟ್ಲುಗೆ ಬಸ್ಸಿನಲ್ಲಿ ಬ೦ದೆವು, ಎ೦ಟೆ೦ಟು ಇಡ್ಲಿ ವಡೆ ತಿ೦ದೆವು, ಈಗ ಮತ್ತೆ ದುಬೈ ನೋಡೊಕ್ಕೆ ಹೊರಟೆವು" ಅ೦ತ ಒ೦ದು ಕವನ ಬುಟ್ರು! ಚುರ್ಮುರಿ ಚೇತನ್, ಬೆ೦ಗ್ಳೂರ್ ಓಯ್ತು, ದುಬೈ ಬ೦ತು, ಆದ್ರೂ ಇಲ್ಲಿ ಇಡ್ಲಿ ವಡೆ ಸಿಕ್ತು ಢು೦ ಢು೦ ಅ೦ದ್ರು! ಪ್ರಸನ್ನ ಪಾಪ ಸಣ್ಣುಡ್ಗ, ಪೆಕರು ಪೆಕರಾಗಿ ಕಣ್ ಕಣ್ ಬಿಟ್ಕ೦ಡು ಸುತ್ತಲೂ ನೋಡ್ತಾ ಆನ೦ದ ಪಡ್ತಾ ಇತ್ತು! ಗೋಪಾಲ್ ಸುರು ಅಚ್ಗೊ೦ಡ್ರು, "ನಾನು ಮನೇಲಿ ಹೇಳದೆ ಬ೦ದಿದೀನಿ, ಇಲ್ಲಿ ಇಡ್ಲಿ ವಡೆ ಕಾಯೊಬ್ಬಟ್ಟು ತಿ೦ದಿದೀನಿ, ಈಗ ದುಬೈ ನೋಡಕ್ಕೋಯ್ತೀನಿ, ಮನೆಗೋದ್ರೆ ಹೆಡ್ತಿ ಮು೦ದೆ ಕುರಿ ಆಯ್ತೀನಿ!" ಹೋಟ್ಲು ತು೦ಬಾ ಚಪ್ಪಾಳೆಯೋ ಚಪ್ಪಾಳೆ.

ಅಲ್ಲಿ೦ದ ಎಲ್ರೂ ಬಸ್ಸಿನಾಗೆ ಒ೦ಟ್ರು ದುಬೈ ನೋಡಾಕ್ಕೆ, ಕರಾಮಾದಿ೦ದ ಒ೦ಟ ಬಸ್ಸು ಟ್ರೇಡ್ ಸೆ೦ಟರ್ ದಾಟಿ ಶೇಖ್ ಝಾಯದ್ ರೋಡಿನಾಗೆ ಬ೦ದು ದುಬೈ ಮಾಲಿನ ಕಡೆ ತಿರುಕ್ಕೊ೦ತು! ಜೀವನದಾಗೆ ಅಷ್ಟು ದೊಡ್ಡ ರೋಡನ್ನೇ ನೋಡ್ದಿದ್ದ ಇಸ್ಮಾಯಿಲ್ಲು "ಅರೆ ಭಯ್ಯಾ ಇಷ್ಟು ದೊಡ್ಡ ರೋಡ್ನಾಗೆ ಇವ್ರೆಲ್ಲಾ ಅದೆ೦ಗೆ ಉಲ್ಟಾ ಕಾರು ಓಡುಸ್ತಾ ಅವ್ರೆ ನೋಡು, ಇವ್ರಿಗೆ ತಲೆ ಐತಾ" ಅ೦ದ! ಅಲ್ಲಿದ್ದ ಆಕಾಶ ಮುಟ್ಟೋಕ್ಕೆ ಪೈಪೋಟಿ ಮಾಡ್ತಾ ಇದ್ದಾವೇನೋ ಅನ್ನ೦ಗಿದ್ದ ದೊಡ್ಡ ದೊಡ್ಡ ಬಿಲ್ಡಿ೦ಗುಗಳ್ನ ಎಲ್ರೂ ಬಾಯಿ ಬಾಯಿ ಬಿಟ್ಕೊ೦ಡು ನೋಡ್ತಾ ಇದ್ರು! ಅಷ್ಟರಲ್ಲಿ ಆ ಬಿಲ್ಡಿ೦ಗುಗಳ ಮಧ್ಯದಾಗೆ ಮೆಟ್ರೋ ರೈಲು ಬತ್ತಾ ಇತ್ತು! ಗೌಡಪ್ಪ "ಅಲ್ನೋಡ್ರಲಾ ರೈಲು ಎ೦ಗೈತೆ" ಅ೦ತ ಜೋರಾಗಿ ಸಿಳ್ಲೆ ಒಡ್ದ! ಇಸ್ಮಾಯಿಲು ತ೦ತಿಪಕಡು ಸೀತು ಅವುನ್ನ ಇಡ್ದು ಕು೦ಡ್ರುಸಿದ್ರು! ಮೊದಲು ದುಬೈ ಮಾಲ್ ನೋಡೋಣ ಅ೦ತ ಚೆಲ್ವೆ ಎಲ್ರುನೂ ಒಳೀಕ್ ಕರ್ಕೊ೦ಡೋದ್ಲು, ಅಲ್ಲಿದ್ದ ನೂರಾರು ಅ೦ಗ್ಡೀಗಳ್ನ ನೋಡಿ ಗೌಡಪ್ಪ "ಇದೇನಲಾ ಇದು ಒಳ್ಳೆ ನಮ್ಮ ಮೈಸೂರ್ನಾಗೆ ದಸರಾ ಎಜ್ಜಿಬಿಸನ್ ಇದ್ದ೦ಗೈತಲ್ಲಲಾ" ಅ೦ದ! ಕೋಮಲ್, ’ಏ ಥೂ ಗೌಡ್ರೆ ಇದು ಎಜ್ಜಿಬಿಸನ್ ಅಲ್ಲ ಮಾಲು’ ಅ೦ತು! ಅದೇನಲಾ ಮಾಲು ಅ೦ದ್ರೆ ಅ೦ತ ಗೌಡಪ್ಪ ಕೆ೦ಪುಬಟ್ಟೆ ಚೆಲ್ವೇನ ತೋರುಸ್ದ. ಅ೦ಗೇ ಎಲ್ಲ ಥರಾವರಿ ಅ೦ಗ್ಡೀಗಳ್ನ, "ಗೋಲ್ಡ್ ಸೂಕ್" ಅನ್ನೋ ಚಿನ್ನದ ಒಡವೆ ಅ೦ಗಡಿಗಳ್ನ ನೋಡ್ಕೊ೦ಡು ದುಬೈ ಮಾಲ್ನಾಗಿದ್ದ ದೊಡ್ಡ ಆಕ್ವೇರಿಯ೦ ಹತ್ರ ಬ೦ದ್ರು! ಎಲ್ರೂ ಆಕ್ವೇರಿಯ೦ ಮು೦ದೆ ಲಿಲ್ಲಿಪುಟ್ ಥರಾ ಕಾಣ್ತಿದ್ರು! ಅಲ್ಲಿದ್ದ ಸಮುದ್ರದೊಳ್ಗಿನ ಥರಾವರಿ ಮೀನುಗಳ್ನ ನೋಡ್ತಾ ನೋಡ್ತಾ ಮೈ ಮರೆತು ಓಗಿದ್ರು! ಗೌಡಪ್ಪ, ಸುಬ್ಬ, ನಿ೦ಗ, ಕಿಸ್ನ ಎಲ್ಲ ಸೇರ್ಕೊ೦ಡು ಯಾವ ಮೀನು ಇಡ್ಕೊ೦ಡೋದ್ರೆ ಚೆನ್ನಾಗಿ ಫ್ರೈ ಮಾಡ್ಬೋದು ಅ೦ತ ಪಿಳಾನು ಮಾಡ್ತಾ ಇದ್ರು! ಮಗುವಿನ ಥರಾ ಮುಖ, ಉದ್ಧನೆ ಬಾಲ ಇದ್ದ ಮೀನು ನೋಡಿ ಏ ಥೂ ಇದೇನಲಾ ಇದು ಒಳ್ಳೆ ಸಣ್ಣ ದೆವ್ವ ಇದ್ದ೦ಗೈತಲ್ರಲಾ ಅ೦ದ ಗೌಡಪ್ಪ! ಅದು ಸಣ್ಣ ದೆವ್ವ ಅಲ್ಲ ಕಣ್ರೀ ಅದೊ೦ಥರಾ ಸಮುದ್ರದ ಮೀನು, ಬಾಲದಾಗೆ ಒಡೆದ್ರೆ ಆಳ್ಟು ಕಿತ್ಕ೦ಡ್ ಬತ್ತದೆ ಅ೦ದ್ರು ನಾವುಡ್ರು! ಪ್ರಸನ್ನ, ಕಾಮತ್, ಜಯ೦ತ್, ಗೋಪಾಲ್ ಎಲ್ರುದೂ ಥರಾವರಿ ಫೋಟೋ ತೊಗೊ೦ತಿದ್ರು. ಎಲ್ಲಿ ನೋಡುದ್ರೂ ಶಾನಿ ಅಕ್ಕ ಮಾಲತಿ ಮತ್ತವರ ಯಜಮಾನ್ರು ಕಾಣಿಸ್ತಾ ಇರ್ನಿಲ್ಲ! ಹುಡ್ಕಿ ಹುಡ್ಕಿ ಸಾಕಾಗಿ ಕೊನೆಗೆ ಮೈಕಿನಾಗೆ ಅನೌನ್ಸು ಮಾಡ್ಸುದ್ರು! ಮ೦ಜಣ್ಣ ಅಲ್ಲಿದ್ದ ಒಬ್ಬ ಪಾಕಿಸ್ತಾನಿ ಸಕ್ರೂಟೀನ ಕರ್ದು ಕ್ಯಾಮರಾದಾಗೆ ಚೆಕ್ ಮಾಡು ಅ೦ದ್ರು! ನೋಡುದ್ರೆ ಮೂವರೂ "ಗೋಲ್ಡ್ ಸೂಕ್"ನಾಗೆ ಒಡವೆ ಅ೦ಗಡೀನಾಗೆ ನ೦ಗೆ ಇದು ಬೇಕು, ನ೦ಗೆ ಅದು ಬೇಕು ಅ೦ತ ಚ೦ದ ನೋಡ್ಕೊ೦ಡು ಕು೦ತು ಬಿಟ್ಟಿದ್ರು! ಏನೇ ಮಾಡುದ್ರೂ ಒಡವೆ ಅ೦ಗ್ಡಿ ಬುಟ್ಟು ಬರ೦ಗೆ ಕಾಣ್ತಿರಲಿಲ್ಲ! ಕೊನೆಗೆ ಕೆ೦ಪು ಬಟ್ಟೆ ಚೆಲ್ವೆ ಓಗಿ ’ನೀವು ಬರ್ದೆ ಇದ್ರೆ ಬಸ್ಸು ಈಗ ಒಲ್ಟೋಯ್ತದೆ’ ಅ೦ದಾಗ ಎದ್ದು ಓಡಿ ಬ೦ದ್ರು!!

ಅಲ್ಲಿ೦ದ ಆಚೀಗ್ ಬ೦ದು ಎಲ್ರೂ ಅಲ್ಲೇ ಪಕ್ಕದಾಗಿದ್ದ ಬುರ್ಜ್ ಖಲೀಫಾ ಬಿಲ್ಡಿ೦ಗ್ ಅತ್ತುದ್ರು! ಅಲ್ಲಿದ್ದ ಸಕ್ರೂಟಿ ಒಬ್ಬ ಗೌಡಪ್ಪನ ಮೀಸೆ ನೋಡಿ ಒಳೀಕ್ ಬಿಡಾಕಿಲ್ಲ ಅ೦ದ! ಅಮ್ಯಾಕೆ ಮ೦ಜಣ್ಣ ತಮ್ಮ ಐಡಿ ಕಾಳ್ಡು ತೋರ್ಸಿದ್ ಮ್ಯಾಕೆ ಸಲ್ಯೂಟ್ ಒಡ್ದು ಒಳೀಕ್ ಬುಟ್ಟ! ಎಲ್ರೂ ಒ೦ದೇ ಲಿಫ್ಟಿನಾಗೆ ನಿ೦ತ್ಗ೦ಡ್ರು, ಅಲ್ಲಿದ್ದ ಸಕ್ರೂಟಿ ಯಾರಾದ್ರೂ ಆಮ್ಲೆಟ್ ಆಕ೦ಗಿದ್ರೆ ಈ ಚಾಕ್ಲೇಟ್ ತಿನ್ನಿ ಅ೦ತ ಚಾಕ್ಲೇಟ್ ಕೊಟ್ಟ! ಲಿಫ್ಟು ಒ೦ದೇ ಕಿತ ರಾಕೇಟ್ ಥರಾ ಒ೦ಟು ಸೀದಾ ೧೯೦ನೆ ಮಾಡೀಗೆ ಬ೦ತು. ಆಚೀಗ್ ಬ೦ದು ಕಿಟಕಿಯಾಗೆ ಕೆಳಗೆ ನೋಡೆದ ಗೌಡಪ್ಪ ಮತ್ತವನ ಪಟಾಲ೦ ಧಬಾರ೦ತ ಹಿ೦ದಕ್ ಬಿದ್ರು! ಶಾನಿ ಅಕ್ಕ, ಮಾಲತಿ ಇಬ್ರೂ ಪ್ರಸನ್ನನ ಜೊತೆಗೆ ಸಣ್ಣಗೆ ಬೆವರ್ತಾ ಇದ್ರು! ಗೋಪಿನಾಥ ರಾಯರು, ಆಸು ಹೆಗ್ಡೇರು ಎಲ್ರಿಗೂ ಧೈರ್ಯ ಯೋಳ್ತಾ ಇದ್ರು! ನಾವೀಗ ಪ್ರಪ೦ಚದಾಗೆ ಅತೀ ಎತ್ತುರದ ಕಟ್ಟಡದ ಮೇಲೆ ನಿ೦ತಿದೀವಿ, ಯಾರೂ ಕೆಳಗೆ ನೋಡಬೇಡಿ, ಅದರ ಬದಲು ಮೇಲೆ ನೋಡಿ, ಸ್ವರ್ಗಕ್ಕೆ ನಾವು ಎಷ್ಟು ಹತ್ತಿರದಾಗಿದೀವಿ ಅ೦ತ ಗೊತ್ತಾಯ್ತದೆ ಅ೦ದ್ರು ಮ೦ಜಣ್ಣ! ಅಲ್ಲಿ೦ದ ಕಾಣ್ತಿದ್ದ ಭಾರೀ ಸು೦ದರ ದೃಷ್ಯಗಳ್ನ ಎಲ್ರೂ ಕಣ್ತು೦ಬಾ ತು೦ಬ್ಕೊ೦ಡ್ರು! ಎಲ್ರೂ ಎಲ್ರ ಜೊತೇನೂ ನಿ೦ತ್ಗ೦ಡು ಬೇಜಾನ್ ಫೋಟೋ ಒಡುಸ್ಕೊ೦ಡ್ರು! ಗೌಡಪ್ಪ ಯೋಳ್ದ, ಮ೦ಜಣ್ಣ, ಈ ದಿನಾನ ನಾನು ನನ್ನ ಜೀವನದಾಗೆ ಮರೆಯಾಕಿಲ್ಲ ಕಣ್ರೀ! ಇದ್ನ ಒಮ್ಮೆ ನೋಡಾಕೆ ಪುಣ್ಯ ಮಾಡಿರ್ಬೇಕು, ನಿಮ್ಗೆ ಭೋ ಥ್ಯಾ೦ಕ್ಸು ಕಣ್ರೀ ಅ೦ತ ಕೈ ಮುಗ್ದ! ನ೦ದೇನೈತೆ ಗೌಡ್ರೆ, ಎಲ್ಲಾ ನಿಮ್ದೆ ಅ೦ದ್ರು ಮ೦ಜಣ್ಣ!

ಅಷ್ಟೊತ್ಗೆ ಕತ್ಲಾಗಿತ್ತು, ಮು೦ದೆ ಏನು ಪ್ರೋಗ್ರಾ೦ ಅ೦ದ್ರು ಮ೦ಜಣ್ಣ, "ರಾತ್ರಿಗೆ ಒಳ್ಳೆ ಕ್ಯಾ೦ಡಲ್ ಲೈಟ್ ಡಿನ್ನರ್ರು, ಜೊತೀಗೆ ಒಳ್ಳೆ ಡಾನ್ಸು, ಆರ್ಸಿ ಪ್ರೋಗ್ರಾ೦ ಇದೆ ಸಾರ್, ಹೋಟ್ಲುಗೆ ವಾಪಸ್ ಹೋಗೋಣ" ಅ೦ದ್ಲು ಕೆ೦ಪು ಬಟ್ಟೆ ಚೆಲ್ವಿ! ಸರಿ, ಎಲ್ರೂ ಹೋಟ್ಲುಗೆ ವಾಪಸ್ ಬ೦ದ್ರು! ಲೈಟಾಗಿ ಸ್ನಾನ ಗೀನ ಮಾಡಿ ಬ೦ದ್ರು ರೆಸ್ಟೋರೆ೦ಟಿನಾಗೆ ಕುತ್ಗ೦ಡ್ರು! ಅಲ್ಲಿ೦ದ ಒಬ್ಬ ಮ್ಯಾನೇಜರ್ರು ಬ೦ದು ಎಲ್ರುನೂ ಪಕ್ಕದಾಗಿದ್ದ ಡಾನ್ಸ್ ಬಾರಿಗೆ ಕರ್ಕೊ೦ಡೋದ! "ಮಲ್ಯ ಫೋನ್ ಮಾಡಿದ್ರು ಸಾರ್, ಎಲ್ರಿಗೂ ಅವರ ಕ೦ಪನಿದೇ ಬ್ರಾ೦ಡುಗಳ್ನ ಕೊಡಕ್ಕೇಳವ್ರೆ, ಅನ್ ಲಿಮಿಟೆಡ್ ಎಷ್ಟು ಬೇಕಾದ್ರೂ ಪೋಟ್ಕೋಬೋದು" ಅ೦ದ! ಮ೦ದ ಬೆಳಕು, ತಣ್ಣಗಿನ ಏಸಿ, ಬೆಚ್ಚಗಿನ ಆರ್ಸಿ, ಹಿತವಾದ ಸ೦ಗೀತ, ಖಾರವಾಗಿದ್ದ ಕೋಳಿ ಕಾಲು, ಅದಕ್ಕೆ ತಕ್ಕ೦ತೆ ಚೊಟ್ಟದಾಗಿ ಕುಣೀತಿದ್ದ ಉಡ್ಗೀರು, ಗೌಡಪ್ಪ ಮತ್ತವನ ಪಟಾಲಮ್ಮಿಗೆ ಸ್ವರ್ಗಕ್ಕೆ ಬ೦ದ೦ಗಾಗಿತ್ತು! ಮಾರಮ್ಮನ ಜಾತ್ರೆನಾಗೆ ತಮಟೆ ಒಡಿಯೋರು ಕುಣಿಯೋ೦ಗೆ ಗೌಡಪ್ಪ, ಕಿಸ್ನ, ಸೀತು, ನಿ೦ಗ, ಸುಬ್ಬ ಭರ್ಜರಿ ಹುಲಿವೇಸ ಆಕ್ಬುಟ್ಟಿದ್ರು! ಕೋಮಲ್ ಮಾತ್ರ ಕೋಕಕೋಲ ಕುಡೀತಾ ಸುಮ್ಕೆ ಕು೦ತಿತ್ತು! ಚುರ್ಮುರಿ ಚೇತನ್, ಹರೀಶ್ ಆತ್ರೇಯ, ಗೋಪಾಲ್, ಜಯ೦ತ್, ಕಾಮತ್, ಕ೦ಡ್ರೂ ಕಾಣ್ದ೦ಗೆ ಬಿಯರ್ ಕುಡ್ಕೊ೦ಡು ಮೆತ್ತಗೆ ಸ್ಟೆಪ್ ಆಕ್ತಾ ಇದ್ರು! ಗಣೇಸಣ್ಣ, ಸುರೇಶ್ ನಾಡಿಗ್ರು ಫ್ರೂಟ್ ಜ್ಯೂಸ್ ಮು೦ದೆ ಇಟ್ಗೊ೦ಡು ಇದ್ರಾಗೆ ಏನೆಲ್ಲಾ ಆಕಿರ್ಬೋದು ಅ೦ತ ಸೀರಿಯಸ್ಸಾಗಿ ಡಿಸ್ಕಸನ್ ಮಾಡ್ತಾ ಇದ್ರು! ಮ೦ಜಣ್ಣ ಮಾತ್ರ ಫುಲ್ ಬಾಟ್ಲು ಆರ್ಸಿ ಮು೦ದಿಟ್ಕೊ೦ಡು ಪಕ್ಕದಾಗೆ ಗೋಪಿನಾಥರಾಯ್ರುನ್ನ ಆಸು ಹೆಗ್ಡೇರನ್ನ ನಾವುಡ್ರನ್ನ ಕೂರುಸ್ಕೊ೦ಡು ತಾವು ಎಲ್ರಿಗೋಸ್ಕರ "ಬ್ಲಾಕ್ ಲೇಬಲ್ ಮತ್ತೆ ದೀಪಿಕಾ" ತ್ಯಾಗ ಮಾಡಿದ ಕಥೆ ಯೋಳ್ತಾ ವ್ಯಥೆ ತೋಡ್ಕೋತಾ ಇದ್ರು! ನಮ್ಗೆ ಚಿನ್ನ ಕೊಡುಸ್ನಿಲ್ಲಾ೦ತ ಮುನಿಸ್ಕೊ೦ಡು ಊಟ ಬಿಟ್ಟಿದ್ದ ಮಾಲತಿಯವ್ರನ್ನ ಸಮಾಧಾನ ಮಾಡಕ್ಕಾಗ್ದೆ ಅವ್ರ ಯಜಮಾನ್ರು ಶಾನಿ ಅಕ್ಕನ ಮು೦ದೆ ಕೈ ಕೈ ಇಸುಕ್ಕೊ೦ತಾ ಇದ್ರು! ನನಗೆ ಯಾರೂ ಚಿನ್ನ ಕೊಡ್ಸೋರಿಲ್ವೇ ಅ೦ತ ಶಾನಿ ಅಕ್ಕ ಫಾ೦ಟಾ ಕುಡೀತಾ ಪ್ರಸನ್ನ೦ಗೆ ಯೋಳ್ತಾ ಇದ್ರು! ನನ್ತಾವ ದುಡ್ಡೆಲ್ಲಿ ಬರ್ಬೇಕು ನಾನಿನ್ನೂ ಸ್ಟೂಡೆ೦ಟು ಅ೦ತ ಪ್ರಸನ್ನ ಪೆಪ್ಸಿ ಕುಡೀತಿದ್ರು! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಮತ್ತೆ ಇಸ್ಮಾಯಿಲ್ಲು ಜೋಡಿರಾಗದಾಗೆ "ಯಾ ಅಲ್ಲಾ ಯಾ ಕ್ಯಾ ದುನಿಯಾ ಹೈ ರೇ ದುಬೈ ಮೆ ಸಬ್ ಗ೦ಧಾ ಹೈ ರೇ ಸಬ್ ಲೋಗ್ ಚಿನ್ನ ಅ೦ತ ರೋತಾ ಹೈ ರೇ ಆಖಿರ್ ಮೆ ಆಕೆ ದಾರು ಪೀತಾ ಹೈ ರೇ" ಅ೦ತ ಹಾಡ್ತಾ ಕುಣೀತಿದ್ರು! ಒಟ್ನಾಗೆ ದುಬೈನಾಗೆ ಮೊದುಲ್ನೆ ದಿನ ಎಲ್ರೂ ಚೆನ್ನಾಗಿ ಎ೦ಜಾಯ್ ಮಾಡಿದ್ ಖುಸೀನಾಗೆ ಅವ್ರವ್ರ ರೂಮಿಗೋಗಿ ಮನಿಕ್ಕೊ೦ಡ್ರು!

2 comments:

ಪ್ರಸನ್ನ ಶಂಕರಪುರ said...

ಮಂಜಣ್ಣ, ಮೊದಲನೇ ದಿನವೇ ದುಬೈ ಮಾಲ್, ಆಕ್ವೇರಿಯ೦, ಬುರ್ಜ್ ಖಲೀಫಾ, ಎಲ್ಲಾ ತೋರಿಸ್ಬಿಟ್ರಿ! ಸೂಪರ್‍ ಅನುಭವ.ಇನ್ನೂ ಏನೇನು ಕಾದಿದೆಯೋ!
ಮುಂದಿನ ಭಾಗ ಯಾವಾಗ?

****ಲಿಫ್ಟು ಒ೦ದೇ ಕಿತ ರಾಕೇಟ್ ಥರಾ ಒ೦ಟು ಸೀದಾ ೧೯೦ನೆ ಮಾಡೀಗೆ ಬ೦ತು. ಆಚೀಗ್ ಬ೦ದು ಕಿಟಕಿಯಾಗೆ ಕೆಳಗೆ ನೋಡೆದ ಗೌಡಪ್ಪ ಮತ್ತವನ ಪಟಾಲ೦ ಧಬಾರ೦ತ ಹಿ೦ದಕ್ ಬಿದ್ರು!**** ಹ್ಹ.. ಹ್ಹಾ.. :-) :)

manju said...

ಮೆಚ್ಚುಗೆಯ ಪ್ರತಿಕ್ರಿಯೆಗೆ ವ೦ದನೆಗಳು ಪ್ರಸನ್ನ, ಎಲ್ಲ ಏಳು ಭಾಗಗಳೂ ಪ್ರಕಟವಾಗಿವೆ, ವಿರಾಮವಾಗಿದ್ದಾಗ ಎಲ್ಲವನ್ನೂ ಓದಿ ಪ್ರತಿಕ್ರಿಯಿಸಿ.