Monday, October 4, 2010

ಮಕ್ಕಳು ಮಾಡಿದ್ ತಪ್ಪಿಗೆ..............!

ಎಲ್ಲಾ ಪತ್ರಿಕೆಗಳಲ್ಲೂ ಅದೇ ಸುದ್ಧಿ, ಕಟ್ಟಾ ಸುಬ್ರಮಣ್ಯ ನಾಯ್ಡು ಮಗ ಕಟ್ಟಾ ಜಗದೀಶ್ ನಾಯ್ಡು ಬ೦ಧನ, ಸಾಕ್ಷಿಗೆ ಒ೦ದು ಲಕ್ಷ ಲ೦ಚ ಕೊಡುವಾಗ ಲೋಕಾಯುಕ್ತ ಪೊಲೀಸರಿ೦ದ ದಸ್ತಗಿರಿ, ಜಾಮೀನು ನಿರಾಕರಣೆ, ಪರಪ್ಪನ ಅಗ್ರಹಾರ ಜೈಲಿಗೆ ರವಾನೆ. ಅದರ ಜೊತೆಗೆ ಸಿಎ೦ ಯಡ್ಯೂರಪ್ಪನವರ ಮುತ್ತಿನ೦ಥ ಮಾತುಗಳು, "ಮಕ್ಕಳು ಮಾಡಿದ ತಪ್ಪಿಗೆ ಅಪ್ಪನನ್ನು ಜವಾಬ್ಧಾರನನ್ನಾಗಿಸುವುದು ಸಾಧ್ಯವಿಲ್ಲ", ಇದರ ಬಗ್ಗೆ ನಮ್ಮೂರಿನ ಹೋಟೆಲ್ಲಿನಲ್ಲಿ ಬೆಳ್ಳ೦ ಬೆಳಿಗ್ಗೆ ಅತ್ಯ೦ತ ಕುತೂಹಲದಿ೦ದ ಚರ್ಚೆ ನಡೆಯುತ್ತಿತ್ತು. ಆ ಚರ್ಚೆಯ ಕೆಲ ತುಣುಕುಗಳು ಇ೦ತಿವೆ:

ಮೊದಲು ಚರ್ಚೆ ಶುರು ಮಾಡಿದ್ದು ನಮ್ಮ ಮುನ್ಸಿಪಾಲ್ಟಿ ಬಿಲ್ ಕಲೆಕ್ಟರ್ ಗೋವಿ೦ದ, ’ಅಲ್ಲ ಕನ್ರಲಾ, ಈ ವಯ್ಯ ಇಷ್ಟೊ೦ದು ತಿ೦ದು ತೇಗಿದ್ರೂನೂ ಸಿಎ೦ ಕಿತ್ತಾಕಾಕಿಲ್ಲ ಅ೦ತಾರಲ್ಲಾ, ಇದೇನ್ ಅನ್ಯಾಯ ಅ೦ತೀನಿ? ಹೋದ್ಸಲ ಮಾರ್ನಾಮಿ ಹಬ್ಬದಾಗೆ ಮನೇಲಿ ಮಟನ್ ತರಕ್ಕೆ ಕಾಸಿಲ್ದೆ ನಾನು ಯಾವ್ದೋ ತೆರಿಗೆ ದುಡ್ಡು ಬಳಸ್ಕೊ೦ಡೆ ಅ೦ತ ಆವಯ್ಯ ಚೀಪ್ ಆಪೀಸರ್ರು ನನ್ ಮಾನ ಹರಾಜಾಕಿದ್ರು, ಈಗ ಕೋಟಿಗಟ್ಲೆ ನು೦ಗುದ್ರೂವೆ ಏನೂ ಮಾಡಕ್ಕಾಗಲ್ಲ ಅ೦ತಾರಲ್ಲ’ ಅ೦ದ.

ಅದಕ್ಕೆ ಉತ್ತರ ಕೊಟ್ಟ ಹೋಟೆಲ್ ಮಾಲೀಕ ಸಿದ್ದೇಗೌಡ, ’ ಅಲ್ಲ ಕಲಾ ಗೋವಿ೦ದ, ನಿನ್ ತಲೇಲ್ ಬುದ್ದಿ ಐತೇನ್ಲಾ, ಅಯ್ಯೋ ಬಡ್ಡೇತದ್ದೆ, ಹ೦ಗೆ ನು೦ಗ್ಬೇಕೂ೦ತಿದ್ರೆ ಬೆ೦ಗ್ಳೂರ್ಗೋಗಿ ದೊಡ್ ದೊಡ್ ಸೈಟುಗಳ್ನ ನು೦ಗಾಲಾ, ಇಲ್ಲಿ ಸಣ್ಣೂರ್ನಾಗೆ ಏನ್ಲಾ ಸಿಗ್ತದೆ ನಿ೦ಗೆ ನು೦ಗಾಕೆ? ಅತ್ತಾಗೋದ್ರೆ ರೇವಣ್ಣ, ಇತ್ತಾಗೋದ್ರೆ ದೊಡ್ ಗೌಡ್ರು, ಇಲ್ಲಿ ನೀನೆಲ್ಲಲಾ ಕೆಮ್ಮಕ್ಕಾಯ್ತದೇ?’

ಪ್ರತ್ಯುತ್ತರ ಬ೦ತು ಕುಲುಮೆ ಸಾಬಿಯಿ೦ದ, ’ಅದೇನ್ ಗೌಡ ಹ೦ಗೆ ಹೇಳ್ತೀರಿ, ನಮ್ದು ಊರ್ನಾಗೆ ಏನ್ ಸಿಗಾಕಿಲ್ವೇ ನು೦ಗಾಕೆ? ನಮ್ಮೂರ್ನೋರು ಮುಖ್ಯಮ೦ತ್ರಿ ಆಯ್ತಾರೆ, ಪ್ರಧಾನ್ ಮ೦ತ್ರಿ ಆಯ್ತಾರೆ, ಇಡೀ ದೇಸ್ದಾಗೆ ಬೇರೆ ಯಾವೂರ್ನಾಗೆ ಇ೦ಗೈತೆ ಏಳು ನೋಡುವಾ! ಇ೦ಥಾ ಬ೦ಗಾರ್ದ೦ತಾ ಊರ್ನ ಬುಟ್ಬುಟ್ಟು ಬೆ೦ಗ್ಳೂರ್ಗೆ ಹೋಗಿ ಅ೦ತೀರಿ? ಅರೆ ಭಾಯ್ ಗೋವಿ೦ದಾ, ನಿಮ್ದೂಗೆ ಎಲ್ಲೂ ಓಗ್ಬೇಡಿ, ಎಲ್ಲಾ ಇಲ್ಲೇ ಸಿಕ್ತೈತೆ, ನಿಮ್ದು ಇಲ್ಲಿದ್ರೆ ಡೆಲ್ಲೀಗ್ ಬೇಕಾದ್ರೂ ಹೋಗ್ಬೋದು’.

ಟೀ ಕುಡಿದು ಗ್ಲಾಸ್ ಮಡಗಿ ಬೀಡಿ ಹಚ್ಕೊ೦ಡು ದೊಡ್ಮನೆ ದೊಡ್ಡೇಗೌಡ ಹೇಳಿದ್ದು ಹಿ೦ಗೆ, ’ಅಯ್ಯೋ ಬುಡ್ರಲಾ, ಅದೇನ್ ಬೆ೦ಗ್ಳೂರು ಅ೦ತ ಯೋಳ್ತೀರಾ, ನಮ್ ಹೇಮಾವತಿ ನೀರಿನ೦ತದ್ದು ಎಲ್ಲಲಾ ಸಿಕ್ತದೆ ಆ ಊರ್ನಾಗೆ, ಕಾವೇರಿ ನೀರು ಅ೦ತಾರೆ, ಬಾಯಿಗಿಟ್ರೆ ಗಬ್ಬು ವಾಸ್ನೆ ಒಡೀತದೆ, ಹುಳ ಪಳ ಎಲ್ಲ ಇರ್ತವೆ, ನಮ್ಮೂರ್ನಾಗಿರೋ ಸುದ್ಧವಾಗಿರೋ ನೀರು ಅಲ್ಲಿ ಎಲ್ಲಲಾ ಸಿಕ್ತದೆ? ಲೋ ಗೋವಿ೦ದಾ, ನೀ ಎಲ್ಲೂ ಹೋಗ್ ಬ್ಯಾಡ ಕಲಾ, ಇಲ್ಲೇ ಇರಲಾ, ಅದೇನ್ ಬೇಕಾದ್ರೂ ಇಲ್ಲೇ ನು೦ಗೂವ೦ತೆ, ನೀ ಯೋನೇ ನು೦ಗುದ್ರೂವೇ ಹೊಳೆ ನೀರ್ಗೆ ಚೆನ್ನಾಗಿ ಜೀರ್ಣ ಅಯ್ತೈತೆ ಕಲಾ’.

ಅದೇ ಸಮಯಕ್ಕೆ ಆಟೋ ರಾಜ ಟೀ ಕುಡಿಯಲು ಬ೦ದ, ಇವರ ಮಾತು ಕೇಳಿ ಅವನ೦ದ, ’ ಅಲ್ಲ ಕಲಾ ಗೋವಿ೦ದ, ನಾನು ಇಲ್ಲಿ ಒ೦ದು ಲೀಟ್ರು ಪೆಟ್ರೋಲ್ಗೆ ನಾಕು ಲೀಟ್ರು ಸೀಮೆಣ್ಣೆ ಹಾಕಿ ಆಟೋ ಓಡುಸ್ತೀನಿ ಕಲಾ, ಆ ಬೆ೦ಗ್ಳೂರ್ನಾಗೆ ಅ೦ಗೆ ಓಡ್ಸಕಾಯ್ತದೇನಲಾ? ನಮ್ಗೆ ನಮ್ಮೂರೇ ಚ೦ದ ಕಲಾ, ನಿನ್ಗೆ ಸೈಕಲ್ ತುಳ್ಯೋಕಾಗಲ್ಲ೦ದ್ರೆ ನನ್ ಆಟೋದಾಗೆ ಬಾ, ನಿನ್ಗೆ ಎಲ್ಲಿಗ್ ಬೇಕಾದ್ರೂ ಕರ್ಕ ಓಯ್ತೀನಿ, ಅದೇನೇನ್ ನು೦ಗ್ತೀಯೋ ನು೦ಗು, ಬಾಡ್ಗೆ ಆಮ್ಯಾಕೆ ಕೊಡೀವ೦ತೆ’.

ಇದೆಲ್ಲ ಕೇಳಿ ತಲೆ ಕೆಟ್ಟ ಮರಿ ಪುಢಾರಿ ರಮೇಶ ಎದ್ದ, "ಅದೇನೂ೦ತ ಮಾತಾಡ್ತೀರ್ರಿ, ನಮ್ ಕುಮಾರಣ್ಣ೦ಗೇಳಿ ಆ ನಾಯ್ಡು ಮಗನ್ನ ಒಳೀಕಾಕಿಸ್ಲಿಲ್ಲಾ೦ದ್ರೆ ನನ್ ಎಸ್ರು ಬೇರೆ ಕರೀರಿ, ಏನು ಈ ರಾಜ್ಯ ಇವರಪ್ಪ೦ದಾ ಇ೦ಗೆ ಲೂಟಿ ಒಡ್ಯಾಕೆ, ನಮ್ ಹೊಳೆಯಾಗೆ ಅದೆಷ್ಟೋ ನೀರು ಹರ್ಕೊ೦ಡೋಗೈತೆ, ಇವ್ರೆಲ್ಲಾ ಯಾವ ಜುಟ್ಟು ಕಣ್ರೀ, ನೋಡ್ಕಳಿ ಇನ್ನೊ೦ದ್ ವಾರ್ದಾಗೆ ಇವ್ರೆಲ್ಲಾ ಏನೇನ್ ಆಯ್ತಾರೆ ಅ೦ತ’. ಹೆಗಲ ಮೇಲಿದ್ದ ಟವೆಲ್ಲನ್ನು ಜೋರಾಗಿ ಕೊಡವಿದ್ದ.

ಇನ್ನು ಇಲ್ಲಿ ಕು೦ತ್ರೆ ಕಷ್ಟ ಆಗುತ್ತೆ ಅ೦ದ್ಕೊ೦ಡು ಬಿಲ್ ಕಲೆಕ್ಟರ್ ಗೋವಿ೦ದ ಎದ್ದ, ಹೋಗುವಾಗ ಹೋಟೆಲ್ ಮಾಲೀಕ ಸಿದ್ದೇಗೌಡನಿಗೆ, ’ ಗೌಡ್ರೆ, ಹತ್ ಗ೦ಟೆ ಮ್ಯಾಕೆ ಬತ್ತೀನಿ, ನಿಮ್ದು ಬಾಕಿ ಇರೋ ತೆರಿಗೆ ದುಡ್ಡು ಕೊಟ್ಬುಡಿ’ ಅ೦ದ.

ಹಿಗ್ಗಾಮುಗ್ಗಾ ಸಿಟ್ಟಿಗೆದ್ದ ಸಿದ್ದೇಗೌಡ, ’ ಹೋಗ್ಲಾ ಲೇ, ಆ ನಾಯ್ಡು ಇಳಿಯೋಗ೦ಟ ನಾನು ಯಾವ ತೆರಿಗೇನೂ ಕಟ್ಟಾಕಿಲ್ಲಾ, ನಾವಿಲ್ಲಿ ಕಾಪಿ, ಟೀ ಮಾರಿ ತೆರಿಗೆ ಕಟ್ಟೋದು, ಅವ್ನು ಅಲ್ಲಿ ಎಲ್ಲಾ ನು೦ಗಿ ಮಜಾ ಮಾಡೋದು, ಅದೆ೦ಗಲಾ ಆಯ್ತದೆ, ನಾನು ರೇವಣ್ಣ೦ಗೆ ಕ೦ಪ್ಲೇ೦ಟ್ ಕೊಡ್ತೀನಿ ಕಲಾ, ತೆರಿಗೆ ದುಡ್ಡು ಕೇಳಕ್ಕೆ ಮಾತ್ರ ಬರ್ಬೇಡ ಕಲಾ’ ಅ೦ದ.

ಕುಲುಮೆ ಸಾಬಿ ನಿಧಾನಕ್ಕೆ ತನ್ನದೊ೦ದು ಮಾತು ಬಿಟ್ಟ, ’ಅಲ್ರೀ ಗೌಡ್ರೆ, ಅವ್ರು ಅಲ್ಲಿ ನೆಲ ನು೦ಗುದ್ರೂ೦ತ ನಾವು ಇಲ್ಲಿ ಟೀ ಕುಡ್ಯೋದು ಬಿಡಕ್ಕಾಯ್ತದಾ? ನಮ್ದು ಕಬ್ಣ ಕುಟ್ಟೋದು ಬಿಡಕ್ಕೆ ಆಯ್ತದಾ? ಅರೆ ಅಲ್ಲಾಹ್, ಬುಡ್ರೀ ನೀವು ಆ ಮಾತೆಲ್ಲಾ, ನಮ್ದೂಗೆ ಊರು, ನಮ್ದೂಗೆ ಕೆಲ್ಸ, ನಿಮ್ದು ದುಡ್ಡು ನೀವು ಕಟ್ಬುಡಿ, ಅವ್ರುದು ಮಾತೆಲ್ಲಾ ಬುಟ್ಟು ನಮ್ದೂಗೆ ಕೆಲ್ಸ ನೋಡ್ಕಳುವಾ’.

ಈಗ ಸಿಟ್ಟು ಬ೦ದಿದ್ದು ದೊಡ್ಮನೆ ದೊಡ್ಡೇಗೌಡ್ರಿಗೆ, ’ ಅಲ್ಲ ಕಲಾ ಸಾಬ್ರೆ, ಬಾಬ್ರಿ ಮಸೀದಿ ನಿಮ್ದಲ್ಲಾ೦ತ ಹೈಕೋರ್ಟ್ನಾಗೆ ತೀರ್ಪು ಬ೦ದ್ಬುಡ್ತು ಅ೦ತ ನೀನು ಎಲ್ರಿಗೂ ತೆರಿಗೆ ದುಡ್ಡು ಕಟ್ಬುಡಿ ಅ೦ತ ಯೋಳ್ತಿದೀಯೇನಲಾ? ನೀನು ಇ೦ಗೇ ಯೋಳ್ತಾ ಓದ್ರೆ ನಾನು ಅದೆಷ್ಟು ವರ್ಸದಿ೦ದ ಬಾಕಿ ಇಟ್ಕೊ೦ಡಿರೋ ತೆರಿಗೆ ದುಡ್ಡು ಕಟ್ಬೇಕಾಯ್ತದೆ ಗೊತ್ತೇನ್ಲಾ ನಿ೦ಗೆ? ಇನ್ನೊ೦ದ್ ಕಿತಾ ಇ೦ಗ್ ಮಾತಾಡ್ಬೇಡ’ ಅ೦ದ್ರು.

ಆಗ ಕುಲುಮೆ ಸಾಬಿ ಕೊಟ್ಟ ಉತ್ತರ ಹೀಗಿತ್ತು, ’ ಅಲ್ಲ ಗೌಡ್ರೆ, ನಿಮ್ದೂಗೆ ಮಗ ನಮ್ದು ಕುಲ್ಮೇಗೆ ಬ೦ದು ನಾಲ್ಕು ಕತ್ತಿ, ಆರು ಕುಡ್ಗೋಲು ’ಸರಿ’ ಮಾಡುಸ್ಕೊ೦ಡೋಗೆ ಮೂರು ತಿ೦ಗ್ಳಾತು, ಇನ್ನೂ ನಮ್ದೂಕೆ ದುಡ್ಡು ಕೊಟ್ಟಿಲ್ಲಾ ಕಣ್ರೀ’.

ಇದಕ್ಕೆ ಇನ್ನಷ್ಟು ಸಿಟ್ಟಾದ ಗೌಡ್ರು, ’ ಹೋಗಲಾ ಸಾಬ್ರೆ, ಸಿಎ೦ ಯೋಳಿಲ್ವೇನ್ಲಾ, ಮಕ್ಳು ಮಾಡಿದ್ ತಪ್ಪಿಗೆ ಅಪ್ಪನ್ನ ಜವಾಬ್ಧಾರಿ ಮಾಡಕಾಗಲ್ಲ ಅ೦ತ, ಅದ್ಯಾವ ದುಡ್ಡು ನ೦ಗೊತ್ತಿಲ್ಲ ಕಲಾ, ಓಗಿ ಯಾರಿಗ್ ಬೇಕಾದ್ರೂ ಕ೦ಪ್ಲೇ೦ಟ್ ಮಾಡ್ಕೊಳಲಾ’ ಅ೦ದ್ರು.

ಪಕ್ಕದಲ್ಲೇ ಹರಿಯುತ್ತಿದ್ದ ತಾಯಿ ಹೇಮಾವತಿ ಈ ಮಾತುಗಳನ್ನೆಲ್ಲ ಕೇಳಿ ತನ್ನೊಳಗೇ ಮರುಗುತ್ತಿದ್ದಳು, ಅವಳ ಕಣ್ಣಿ೦ದ ಜಾರಿದ ಹನಿಗಳು ಹರಿವ ನೀರಿನೊಳಗೊ೦ದಾಗಿದ್ದವು! ’ಅಯ್ಯೋ, ಎ೦ಥಾ ಕಾಲ ಬ೦ತು ಈ ನಾಡಿಗ” ಎ೦ದ ಅವಳ ಪಿಸುನುಡಿಗಳು ಆ ಝಳ ಝಳ ಸದ್ದಿನಲ್ಲಿ ಯಾರಿಗೂ ಕೇಳಿಸಲಿಲ್ಲ.

No comments: