Saturday, October 10, 2015

ಅರಬ್ಬರ ನಾಡಿನಲ್ಲಿ - ೧೮: ಆಪರೇಷನ್ ನೈಜೀರಿಯಾ!



ಅದಾಗಲೇ ಮಧ್ಯರಾತ್ರಿ ಹನ್ನೆರಡಾಗಿತ್ತು, ನಿದ್ದೆ ತುಂಬಿ ತೂಕಡಿಸುತ್ತಿದ್ದ ಕಣ್ಣುಗಳಲ್ಲೇ ಖಾಲಿ ಬಿದ್ದಿದ್ದ ಹೆಬ್ಬಾವಿನಂಥ ರಸ್ತೆಯಲ್ಲಿ ಕಾರು ಓಡಿಸುತ್ತಾ ದುಬೈನಿಂದ ಶಾರ್ಜಾಗೆ ಬರುತ್ತಿದ್ದೆ.  ಆ ನಿದ್ದೆಯ ಮಂಪರಿನಲ್ಲಿಯೂ ಅವಳಾಡಿದ ಮಾತುಗಳೇ ಕಿವಿಯಲ್ಲಿ ರಿಂಗಣಿಸುತ್ತಿದ್ದವು, ಅವಳ ಧ್ವನಿಯಲ್ಲಿದ್ದ ಅಸಹಾಯಕತೆ, ಕಣ್ಣುಗಳಲ್ಲಿ ಮಡುಗಟ್ಟಿದ್ದ ಆಕ್ರೋಶ ಕಣ್ಮುಂದೆ ಸುಳಿಯುತ್ತಿತ್ತು!   ಆಗೊಂದು, ಈಗೊಂದು ಭರ್ರೆಂದು ಎಡ ಬಲಗಳಿಂದ ಸಾಗಿ ಹೋಗುತ್ತಿದ್ದ ಅರಬ್ಬಿಗಳ ದೊಡ್ಡ ಕಾರುಗಳ ಆರ್ಭಟದ ನಡುವೆಯೇ ತೂಕಡಿಸುತ್ತಾ ನನ್ನ ಕಾರು ಕೊನೆಗೂ ಮನೆ ತಲುಪಿಸಿತ್ತು.  ದಣಿದಿದ್ದ ದೇಹಕ್ಕೆ ವಿಶ್ರಾಂತಿಯ ಅಗತ್ಯವಿತ್ತು, ಬಟ್ಟೆ ಬದಲಿಸಿ ಮಲಗಿದವನಿಗೆ ಮತ್ತೆ ಮತ್ತೆ ಅವಳಾಡಿದ ಮಾತುಗಳೇ ಮನದಲ್ಲಿ ಮಾರ್ದನಿಸಿ ನಿದ್ದೆ ಬರದೆ ಹೊರಳಾಡುವಂತಾಗಿತ್ತು.

ನೀವು ಯಾಕೆ ನಮ್ಮನ್ನು ಹೀಗೆ ನೋಡುತ್ತೀರಿ?  ನಮ್ಮದು ನಿನ್ನದು ಚರ್ಮದ ಬಣ್ಣ ಒಂದೇ ಅಲ್ಲವೇ? ನಾವೂ ಮನುಷ್ಯರೇ ಅಲ್ಲವೇ? ನಮಗೆ ಮಾತ್ರ ಹೀಗೆ ಅನ್ಯಾಯ ಮಾಡಬಹುದೇ? ನಮ್ಮ ಬಳಿ ಈಗ ಊಟಕ್ಕೂ ಹಣವಿಲ್ಲ, ಇಲ್ಲಿಂದ ಬೇರೆ ಕಡೆಗೆ ಹೋಗಲು ಟ್ಯಾಕ್ಸಿಗೂ ದುಡ್ಡಿಲ್ಲ, ನಾವು ರೂಮಿನ ಬಾಡಿಗೆಗೆ ಕೊಟ್ಟ ಹಣ ಹಿಂದಿರುಗಿಸಿ ಎಂದು ಆಕೆ ದೈನ್ಯದಿಂದ ಬೇಡುತ್ತಿದ್ದರೆ ಕಲ್ಲಿನಂತೆ ನಿಂತಿದ್ದ ನನ್ನ ಮನಸ್ಸಿಗೆ ಆ ಕ್ಷಣದಲ್ಲಿ ಏನೂ ಅನ್ನಿಸಿರಲಿಲ್ಲ! ಕಂಪನಿಯ ಪಾಲಿಸಿಯಂತೆ ನಿಮಗೆ ಹಣ ಹಿಂದಿರುಗಿಸಲು ಆಗುವುದಿಲ್ಲ, ನಾಳೆ ಮಧ್ಯಾಹ್ನದವರೆಗೂ ನೀವು ರೂಮಿನಲ್ಲಿ ಉಳಿದುಕೊಳ್ಳಬಹುದು, ಆದರೆ ಯಾವುದೇ ಕಾರಣಕ್ಕೂ ನಿಮ್ಮ ರೂಮಿಗೆ ಹೊರಗಡೆಯಿಂದ ಯಾವುದೇ ಅತಿಥಿಗಳು ಬರುವುದಕ್ಕೆ ಮಾತ್ರ ಅವಕಾಶವಿರುವುದಿಲ್ಲ ಎಂದ ನನ್ನ ಖಡಕ್ ಮಾತಿನಿಂದಾಗಿ ಒಮ್ಮೆ ಕಡುಗೋಪದಿಂದ ಆಕ್ರೋಶಭರಿತರಾಗಿ ನೋಡಿದ ಆ ಮೂರು ಹೆಣ್ಣುಮಕ್ಕಳು  ರೂಮ್ ಖಾಲಿ ಮಾಡಿ ಹೊರಟು ಹೋಗಿದ್ದರು! ಅವರು ದುಬೈನಲ್ಲಿ ಕೆಲಸಕ್ಕಾಗಿ ಬಂದು ಪರದಾಡಿ ಕೆಲಸ ಸಿಗದೆ ಇದ್ದಾಗ ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ಇಳಿದಿದ್ದ ನೈಜೀರಿಯನ್ ಹೆಣ್ಣುಮಕ್ಕಳು.  ದೂರದ ಆಫ್ರಿಕಾ ಖಂಡದ ಒಂದು ಪುಟ್ಟ ರಾಷ್ಟ್ರ ನೈಜೀರಿಯಾ, ಪ್ರಾಕೃತಿಕ ಸಂಪನ್ಮೂಲಗಳಿಂದ ತುಂಬಿದ್ದರೂ, ಸಾಕಷ್ಟು ತೈಲ ಮೂಲಗಳನ್ನು ಹೊಂದಿದ್ದರೂ, ಅಲ್ಲಿನ ಅರಾಜಕತೆ ಹಾಗೂ ಬೋಕೋಹರಾಮ್ ಉಗ್ರರ ಹಾವಳಿಯಿಂದಾಗಿ ಸಾಮಾನ್ಯ ಜನರ ದೈನಂದಿನ ಬದುಕು ಎಕ್ಕುಟ್ಟಿ ಹೋಗಿದೆ.  ಹೇಗೋ ಅಲ್ಲಿಂದ ಹೊರಬಿದ್ದು ಗಲ್ಫ್ ರಾಷ್ಟ್ರಗಳತ್ತ ಬರುವ ಅಲ್ಲಿನ ಯುವಕರು ಕೈಗೆ ಸಿಕ್ಕ ಯಾವುದೇ ಕೆಲಸ ಮಾಡಲು ಸಿದ್ಧರಾಗಿರುತ್ತಾರೆ, ಕೆಲಸ ಸಿಗದಿದ್ದಲ್ಲಿ ಯಾವುದೇ ಅಪರಾಧವನ್ನಾದರೂ ಮಾಡಿ ಹಣ ಸಂಪಾದನೆಗೆ ಮುಂದಾಗುತ್ತಾರೆ.  ಆದರೆ ಆಫ್ರಿಕನ್  ಹೆಣ್ಣುಮಕ್ಕಳು ಬಂದ ಹೊಸದರಲ್ಲಿ ಅಲ್ಲಿಲ್ಲಿ ಅಲೆದಾಡಿ ಕೆಲಸಕ್ಕಾಗಿ ಪ್ರಯತ್ನಿಸಿ, ಸಿಗದೇ ಇದ್ದಾಗ ಸೀದಾ ವೇಶ್ಯಾವಾಟಿಕೆಗೆ ಇಳಿದು ಬಿಡುತ್ತಾರೆ!  

ದುಬೈನ ವಿಮಾನ ನಿಲ್ದಾಣಕ್ಕೆ ಹತ್ತಿರವೇ ಇರುವ ನಮ್ಮ ಸಂಸ್ಥೆಯ ಹೋಟೆಲ್ಲುಗಳು ಪ್ರತಿಷ್ಠಿತ ಸಂಸ್ಥೆಯೊಂದರ ಅಂಗವಾಗಿದ್ದು ಮಧ್ಯ ಮಾರಾಟ ಹಾಗೂ ವೇಶ್ಯಾವಾಟಿಕೆಯನ್ನು ನಿಷೇಧಿಸಿದ್ದಾರೆ. ಈ ನೈಜೀರಿಯನ್ ಹೆಣ್ಣುಮಕ್ಕಳು ಹೋಟೆಲ್ಲಿಗೆ ಬಂದು ರೂಮ್ ಕೇಳಿದರೆ ಅವರನ್ನು ನೋಡುತ್ತಿದ್ದಂತೆಯೇ ಸ್ವಾಗತಕಾರಿಣಿ ನಿರಾಕರಿಸುತ್ತಾಳೆ.  ಆದರೆ ತಂತ್ರಜ್ಞಾನ ಮುಂದುವರಿದಿರುವ ಈ ದಿನಗಳಲ್ಲಿ ಅವರೂ ಸಹಾ ತಮ್ಮ ವ್ಯವಹಾರಕ್ಕೆ ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನೇ ಬಳಸುತ್ತಿದ್ದಾರೆ.  ಇವರಿಗೆಲ್ಲಾ ಒಬ್ಬ ಮುಖಂಡನಿರುತ್ತಾನೆ, ಅವನು ತನ್ನ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಆನ್ ಲೈನಿನಲ್ಲಿ ಅವನ ಹೆಸರಿನಲ್ಲಿ ರೂಮ್ ಮುಂಗಡವಾಗಿ ಕಾದಿರಿಸುತ್ತಾನೆ.  ಕ್ರೆಡಿಟ್ ಕಾರ್ಡ್ ಮೂಲಕ ಆನ್ ಲೈನಿನಲ್ಲಿ ಬುಕ್ ಮಾಡಿದಾಗ ಸ್ವಾಗತಕಾರಿಣಿ ಆ ರೂಮ್ ಬುಕ್ಕಿಂಗನ್ನು ರದ್ದುಪಡಿಸಲು ಅವಕಾಶವಿಲ್ಲ!  ಇದನ್ನು ಅರಿತಿರುವ ಇವರು ಇಬ್ಬರಿಗಾಗಿ ಕಾದಿರಿಸಿದ ಆ ರೂಮಿಗೆ ತಾನೇ ಒಬ್ಬ ಹುಡುಗಿಯೊಡನೆ ಬಂದು ಅವಳನ್ನು ತನ್ನ ಹೆಂಡತಿ ಎಂದು ಪರಿಚಯಿಸಿ ಬೀಗದ ಕೈ ತೆಗೆದುಕೊಂಡು ರೂಮಿಗೆ ಹೋದ ನಂತರ ಆ ಹುಡುಗಿಯನ್ನು ರೂಮಿನಲ್ಲಿ ಬಿಟ್ಟು ಹೊರಗಡೆ ಹೋಗುತ್ತಾನೆ.  ಕೆಲ ಹೊತ್ತಿನ ನಂತರ ಇನ್ನೊಬ್ಬ ಹುಡುಗಿಯೊಡನೆ ಬಂದು ಹೋಟೆಲ್ಲಿನ ಹೊರಭಾಗದಲ್ಲಿ ಅವಳನ್ನು ಇಳಿಸಿ, ಅತ್ತಿತ್ತ ನೋಡದೆ ಲಿಫ್ಟ್ ಮೂಲಕ ಸೀದಾ ರೂಮಿಗೆ ಹೋಗಲು ತಿಳಿಸಿ ಹೊರಟು ಹೋಗುತ್ತಾನೆ. ನಂತರ ಶುರುವಾಗುತ್ತದೆ ಇವರ ಭರ್ಜರಿ ವಹಿವಾಟು!

ಫೇಸ್ಬುಕ್ ಪೇಜುಗಳಲ್ಲಿ, ವಾಟ್ಸಪ್ ಗ್ರೂಪುಗಳಲ್ಲಿ ಸುಂದರ ಹುಡುಗಿಯರ ಚಿತ್ರಗಳನ್ನು ತೋರಿಸಿ, ಮಸಾಜ್ ಹಾಗೂ ಲೈಂಗಿಕ ಸುಖದ ಆಮಿಷ ಒಡ್ಡಿ ಗಿರಾಕಿಗಳನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ.  ತಮ್ಮ ಮೊಬೈಲ್ ನಂಬರ್ ಕೊಟ್ಟು ನಮ್ಮ ಹೋಟೆಲ್ಲಿನ ಹೆಸರನ್ನು ಹಾಕಿ, ಗಿರಾಕಿಗಳು ಕರೆ ಮಾಡಿದಾಗ, ಸ್ವಾಗತಕಾರನ ಬಳಿಗೆ ಹೋಗದೆ ಲಿಫ್ಟ್ ಮೂಲಕ ಸೀದಾ ಇಷ್ಟನೆಯ ಮಹಡಿಯಲ್ಲಿರುವ ಇಂಥಾ ನಂಬರಿನ ರೂಮಿಗೆ ಬನ್ನಿ ಎಂದು ಹೇಳುತ್ತಾರೆ.  ಮೊದಮೊದಲು ಅವರು ಗಂಡ ಹೆಂಡತಿಯೇ ಇರಬೇಕು ಎಂದುಕೊಂಡಿದ್ದ ಹೋಟೆಲ್ ಸಿಬ್ಬಂದಿಗೆ ಯಾವಾಗ ಹೆಚ್ಚು ಜನರು ಒಂದು ರೂಮಿಗೆ ಬಂದು ಹೋಗುತ್ತಿರುವುದು ಕಂಡು ಬಂದಿತೋ ಆಗ ನಮ್ಮ ಭದ್ರತಾ ಇಲಾಖೆಗೆ ದೂರುಗಳು ಬರಲಾರಂಭಿಸಿದವು.  ಹೋಟೆಲ್ಲಿನ ಎಲ್ಲೆಡೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೆಲವು ರೂಮುಗಳಿಗೆ ಹೊರಗಡೆಯಿಂದ ಕೆಲವು ವ್ಯಕ್ತಿಗಳು ಬಂದು ಹೋಗುತ್ತಿರುವುದು ಕಂಡು ಬಂದಿತ್ತು.  ಅಂದಿನಿಂದ ನಾನು ನಮ್ಮ ಭದ್ರತಾ ಸಹಾಯಕರಿಗೆ ಹೆಚ್ಚು ಮುತುವರ್ಜಿಯಿಂದ ಎಲ್ಲವನ್ನೂ ಪರಿಶೀಲಿಸುವಂತೆ ತಾಕೀತು ಮಾಡಿ  ನಾನೂ ಸಹಾ ತಡ ರಾತ್ರಿ ಗಸ್ತು ಆರಂಭಿಸಿದ್ದೆ.  ತತ್ಪರಿಣಾಮವಾಗಿ ಕಂಡುಬಂದ ವಿಷಯಗಳು ತುಂಬಾ ಕುತೂಹಲಕರವಾಗಿದ್ದವು.

ಹಾಗೆ ರೂಮಿಗೆ ಬಂದು ಹೋಗುತ್ತಿದ್ದವರಲ್ಲಿ ಕೆಲವು ಭಾರತೀಯರು, ಪಾಕಿಸ್ತಾನೀಯರು, ಅರಬ್ಬರು ಸಹಾ ಇದ್ದರು.  ಅವರಲ್ಲಿ ಕೆಲವರು ಸುಂದರ ಹುಡುಗಿಯರ ಚಿತ್ರಗಳನ್ನು ನೋಡಿ ಆಸೆಯಿಂದ ಬಂದು, ಅಲ್ಲಿ ನೈಜೀರಿಯನ್ ಕಪ್ಪು ಹುಡುಗಿಯರನ್ನು ನೋಡಿ ನಿರಾಸೆಯಿಂದ ವಾಪಸ್ ಹೋಗುತ್ತಿದ್ದರು!  ಹಾಗೊಮ್ಮೆ ವಾಪಸ್ಸಾಗುತ್ತಿದ್ದವನೊಬ್ಬನನ್ನು ಹಿಡಿದು ಪ್ರಶ್ನಿಸಿದಾಗ ಅವನು ತನ್ನ ಮೊಬೈಲಿನಲ್ಲಿದ್ದ ವಾಟ್ಸಪ್ ಸಂದೇಶವನ್ನು ತೋರಿಸಿದ್ದ!  ಆ ಸಂದೇಶದಲ್ಲಿ ಸುಂದರವಾಗಿದ್ದ ಬ್ರೆಜಿಲ್ ಹುಡುಗಿಯರ ಫೋಟೋ ಹಾಕಿ "ಬ್ರೆಜಿಲಿಯನ್ ಮಸಾಜ್ ಜೊತೆಗೆ ಲೈಂಗಿಕ ಸೇವೆ, ಬಹಳ ಕಡಿಮೆ ಬೆಲೆಯಲ್ಲಿ" ಎಂದು ಅತ್ಯಾಕರ್ಷಕವಾಗಿ ಜಾಹೀರಾತೊಂದನ್ನು ಕಳುಹಿಸಿದ್ದರು.  ಅದನ್ನು ನೋಡಿ ಆಸೆಯಿಂದ ಬಾಯಿ ತುಂಬಾ ನೀರು ತುಂಬಿಕೊಂಡು ಬಂದಿದ್ದ ಆ ವ್ಯಕ್ತಿ ಅಲ್ಲಿದ್ದ ಕಪ್ಪು, ಕುರೂಪಿ ನೈಜಿರಿಯನ್ ಹುಡುಗಿಯರನ್ನು ನೋಡಿ ಸಿಟ್ಟಿಗೆದ್ದು, ನಿರಾಸೆಯಿಂದ ಅವರಿಗೆ ಬೈದು ಹಿಂದಿರುಗಿ ಬಂದಿದ್ದ!  ಆ ಬಗ್ಗೆ ಸ್ವಾಗತಕಾರನ ಬಳಿ ದೂರನ್ನೂ ಕೊಟ್ಟಿದ್ದ. ಒಮ್ಮೆ ಬೆಳಗಿನ ಮೂರು ಘಂಟೆಯ ಸಮಯದಲ್ಲಿ ಬಂದ ಒಬ್ಬ ಗಿರಾಕಿ ಕಪ್ಪು ಹುಡುಗಿಯರನ್ನು ಕಂಡು ವಾಪಸ್ ಹೋಗಲು ಯತ್ನಿಸುತ್ತಿದ್ದಾಗ ಒಬ್ಬಳು ಧಡೂತಿ ಹುಡುಗಿ ಅವನನ್ನು ಅನಾಮತ್ತಾಗಿ ರೂಮಿನೊಳಕ್ಕೆ ಎಳೆದುಕೊಂಡು ಹೋಗಿ ಅವನಲ್ಲಿದ್ದ ಹಣವನ್ನೆಲ್ಲಾ ಕಿತ್ತುಕೊಂಡು ಕಳುಹಿಸಿದ್ದಳು.  ಅವಳ ಕೈಯ್ಯಿಂದ ತಪ್ಪಿಸಿಕೊಂಡು ಬಂದ ಆ ಬಡಪಾಯಿ ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿದ್ದ!  ಈ ದೃಶ್ಯಾವಳಿ ನಮ್ಮ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿತ್ತು.  ಆದರೆ ಮರುದಿನ ನಾನು ಕರ್ತವ್ಯಕ್ಕೆ ಬರುವ ಹೊತ್ತಿಗೆ ಆ ಹುಡುಗಿಯರು ರೂಮ್ ಖಾಲಿ ಮಾಡಿ ಹೊರಟು ಹೋಗಿದ್ದರು. 

ಈಗ ನಮ್ಮ ಭದ್ರತಾ ತಂಡ ಚುರುಕಾಗಿ ಕೆಲಸ ಮಾಡಬೇಕಿತ್ತು,  ಪ್ರತಿಷ್ಠಿತ ಹೋಟೆಲ್ ಎಂದು ಪ್ರಖ್ಯಾತವಾಗಿದ್ದದ್ದು ನೈಜೀರಿಯನ್ ಹುಡುಗಿಯರ ಅಡ್ಡೆಯಾಗಿ ಬದಲಾಗುವುದನ್ನು ತಪ್ಪಿಸಬೇಕಿತ್ತು, ತನ್ಮೂಲಕ ಹೋಟೆಲ್ಲಿನ ಗೌರವವನ್ನು ಕಾಪಾಡಬೇಕಿತ್ತು. ಹಾಗೆ ಶುರುವಾದದ್ದು "ಆಪರೇಷನ್ ನೈಜೀರಿಯಾ", ನಮ್ಮ ಹೋಟೆಲ್ಲಿನ ಹಿರಿಯ ವ್ಯವಸ್ಥಾಪಕರು ಮತ್ತಿತರ ಅಧಿಕಾರಿಗಳು, ಜೊತೆಗೆ ದುಬೈ ಪೊಲೀಸ್ ಅಧಿಕಾರಿಗಳು, ಸಿಐಡಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಒಂದು ಯೋಜನೆಯನ್ನು ಸಿದ್ಧಪಡಿಸಿದೆವು.  ಅದರಂತೆ ಆನ್ ಲೈನಿನಲ್ಲಿ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ನೈಜೀರಿಯನ್ನರು ರೂಮ್ ಬುಕ್ ಮಾಡಿದರೆ ಅವರಿಗೆ ರೂಮ್ ಕೊಡುವುದು, ಆದರೆ ಅವರ ರೂಮಿಗೆ ಒಬ್ಬನೇ ಒಬ್ಬ ಗಿರಾಕಿಯೂ ಹೋಗದಂತೆ ತಡೆಯುವುದು, ತನ್ಮೂಲಕ ಅವರ ವ್ಯಾಪಾರ ನಡೆಯದಂತೆ ತಡೆಯುವುದು, ಆದರೆ ನಮ್ಮ ಹೋಟೆಲ್ಲಿನ ವ್ಯಾಪಾರಕ್ಕೆ ಯಾವುದೇ ಭಂಗವಾಗಬಾರದು, ಜೊತೆಗೆ ಇತರ ಅತಿಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು.   ಯಾವಾಗ ಅವರಿಗೆ ವ್ಯಾಪಾರ ಆಗುವುದಿಲ್ಲವೋ ಆಗ ಅವರಾಗಿಯೇ ನಮ್ಮ ಹೋಟೆಲ್ಲಿಗೆ ಬರುವುದನ್ನು ನಿಲ್ಲಿಸಿಬಿಡುತ್ತಾರೆ ಎನ್ನುವುದು ನನ್ನ ತರ್ಕವಾಗಿತ್ತು. ಇದಕ್ಕಾಗಿ ನಾಲ್ಕಾರು ಹೊಸ ಕ್ಯಾಮರಾಗಳನ್ನು ಅಳವಡಿಸಿ ಅವರ ಎಲ್ಲ ಚಲನವಲನಗಳನ್ನು ಕೂಲಂಕುಷವಾಗಿ ನೋಡಲು ಸಾಧ್ಯವಾಗುವಂತೆ  ವ್ಯವಸ್ಥೆ ಮಾಡಿದ್ದೆವು.  ಈಗ ಸುಮಾರು ನಾಲ್ಕೈದು ವಾರಗಳಿಂದಲೂ ನೈಜೀರಿಯನ್ ಹುಡುಗಿಯರು ನಮ್ಮ ಹೋಟೆಲ್ಲಿನಲ್ಲಿ ರೂಮ್ ಬುಕ್ ಮಾಡಿ ಬರುವುದು, ಆದರೆ ಅವರ ಗಿರಾಕಿಗಳನ್ನು ನಮ್ಮ ಭದ್ರತಾ ರಕ್ಷಕರು ತಡೆದು ವಾಪಸ್ ಕಳುಹಿಸುವುದು ನಡೆದೇ ಇತ್ತು. ಕೊನೆಗೆ ಅವರು ನಿರಾಶರಾಗಿ ಯಾವುದೇ ವ್ಯವಹಾರ ನಡೆಯದೆ ರೂಮ್ ಖಾಲಿ ಮಾಡಿ ಹೋಗುತ್ತಿದ್ದರು.  ಆದರೆ ಅವರೊಡನೆ ಮುಖಾಮುಖಿ ಮಾತನಾಡುವ ಸಂದರ್ಭ ನನಗೆ ಸಿಕ್ಕಿರಲಿಲ್ಲ! 

ಆದರೆ ನಿನ್ನೆ ಮಧ್ಯಾಹ್ನ ಎರಡು ಘಂಟೆಯ ಹೊತ್ತಿಗೆ ಆನ್ಲೈನಿನಲ್ಲಿ ರೂಮ್ ಬುಕ್ ಮಾಡಿ ಹೋಟೆಲ್ಲಿಗೆ ಬಂದ ಮೂವರು ನೈಜೀರಿಯನ್ ಹುಡುಗಿಯರು ತಕ್ಷಣವೇ ವ್ಯವಹಾರ ಶುರು ಹಚ್ಚಿಕೊಂಡಿದ್ದರು.  ಸಾಮಾನ್ಯವಾಗಿ ಅವರು ಬರುತ್ತಿದ್ದುದು ಸಂಜೆಯ ಹೊತ್ತಿನಲ್ಲಿ ಮತ್ತು ಗಿರಾಕಿಗಳು ಬರಲಾರಂಭಿಸುತ್ತಿದ್ದುದು ರಾತ್ರಿಯ ಹೊತ್ತಿನಲ್ಲಿ!  ಆದರೆ ನಿನ್ನೆಯ ದಿನ ಮಟಮಟ ಮಧ್ಯಾಹ್ನಕ್ಕೇ ಗಿರಾಕಿಗಳು ಬರಲು ಶುರು ಹಚ್ಚಿಕೊಂಡಿದ್ದರು.  ಶುಕ್ರವಾರದಂದು ಸಾಮಾನ್ಯವಾಗಿ ನಮ್ಮ ಎರಡೂ ಹೋಟೆಲ್ಲುಗಳನ್ನು ನಾನು ಸುತ್ತು ಹೊಡೆಯುತ್ತಿರುತ್ತೇನೆ, ಒಂದು ಹೋಟೆಲ್ ನೋಡಿಕೊಂಡು ಎರಡನೆಯ ಹೋಟೆಲ್ಲಿಗೆ ಬರುವ ಹೊತ್ತಿಗೆ  ಅಲ್ಲಿ ಈ ನೈಜೀರಿಯನ್ ಹುಡುಗಿಯರ ವ್ಯವಹಾರ ಶುರುವಾಗಿಬಿಟ್ಟಿತ್ತು.  ನಮ್ಮ ಭದ್ರತಾ ರಕ್ಷಕರ ವರದಿಯನ್ನು ನೋಡಿದ ನಂತರ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದ್ದ ಅವರ ಓಡಾಟದ ದೃಶ್ಯಾವಳಿಗಳನ್ನೆಲ್ಲ ವೀಕ್ಷಿಸಿದ ನನಗೆ ಸಿಟ್ಟು ನೆತ್ತಿಗೇರಿತ್ತು.  ಅವರು ರೂಮ್ ತೆಗೆದುಕೊಂಡಿದ್ದ ಎರಡನೆಯ ಮಹಡಿಯಲ್ಲಿಯೇ ಒಬ್ಬ ಭದ್ರತಾ ರಕ್ಷಕನನ್ನು ನಿಲ್ಲಿಸಿ, ಮತ್ತೊಬ್ಬನನ್ನು ಮುಖ್ಯದ್ವಾರದಲ್ಲಿ ನಿಲ್ಲಿಸಿ, ಸಿಸಿಟಿವಿ ರೂಮಿನಲ್ಲಿದ್ದವನನ್ನು  ಎಲ್ಲವನ್ನೂ ಪರಿಶೀಲಿಸುತ್ತಾ ಮತ್ತೆ ಯಾರಾದರೂ ಬಂದಲ್ಲಿ ನನಗೆ ತಕ್ಷಣ ತಿಳಿಸುವಂತೆ ಆದೇಶಿಸಿ ಸಿಐಡಿ ಅಧಿಕಾರಿ ಅಬ್ದುಲ್ಲಾನಿಗೆ ಫೋನಾಯಿಸಿದ್ದೆ.  "ಆಪರೇಶನ್ ನೈಜೀರಿಯಾ" ಅಂದ ನನ್ನ ಧ್ವನಿ ಕೇಳಿದ ಅಬ್ದುಲ್ಲಾ ಜೋರಾಗಿ ನಗುತ್ತಾ "ಆಪರೇಷನ್ ಕರ್ದೋ ಮಂಜು ಭಾಯ್" ಅಂದಿದ್ದ! 

ಹಾಗೆ ಅಖಾಡಕ್ಕಿಳಿದ ನಮಗೆ ಸಿಕ್ಕಿದ್ದು ಸುಮಾರು ಎಂಟು ಜನ ಗಿರಾಕಿಗಳು!  ಅವರನ್ನು ಹುಡುಗಿಯರಿದ್ದ ರೂಮಿಗೆ ಹೋಗದಂತೆ ತಡೆದು ವಾಪಸ್ ಕಳುಹಿಸಿದ್ದ ಭದ್ರತಾ ರಕ್ಷಕರು ಒಬ್ಬ ಪಾಕಿಸ್ತಾನಿ ಯುವಕ ಸ್ವಲ್ಪ ತಗಾದೆ ಮಾಡುತ್ತಿರುವ ಬಗ್ಗೆ ಮಾಹಿತಿ ಕೊಟ್ಟಿದ್ದರು. ಸ್ವಾಗತಕಾರನ ಬಳಿಯಲ್ಲಿ ನಿಂತಿದ್ದ ಅವನನ್ನು ಸರಿಯಾಗಿ ದಬಾಯಿಸಿ ಸುಮ್ಮನೆ ಆಚೆಗೆ ಹೋದರೆ ಸರಿ, ಇಲ್ಲದಿದ್ದರೆ ಈಗಲೇ ಒಳಗೆ ಹಾಕಿಸುತ್ತೇನೆ ಅಂದ ತಕ್ಷಣ ಅವನು ಜಾಗ ಖಾಲಿ ಮಾಡಿದ್ದ! ಆದರೆ ಹೋಗುವ ಮುನ್ನ ಅಷ್ಟೂ ಜನರು ಆ ಹುಡುಗಿಯರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದರು.  ತಮ್ಮ ರೂಮಿನಿಂದ ಹೊರಬಂದ ಆ ಹುಡುಗಿಯರು ತಮ್ಮ ರೂಮಿನ ಅನತಿ ದೂರದಲ್ಲಿ ನಿಂತಿದ್ದ ಆಜಾನುಬಾಹು ಭದ್ರತಾ ರಕ್ಷಕ, ಎಲ್ಲೆಡೆ ಇದ್ದ ಕ್ಯಾಮರಾಗಳು, ಕೆಳಗಿನ ಮಹಡಿಯಲ್ಲಿದ್ದ ಇನ್ನಿತರ ಭದ್ರತಾ ರಕ್ಷಕರನ್ನು ನೋಡಿ ತಕ್ಷಣ ರೂಮ್ ಖಾಲಿ ಮಾಡಿ ಕೆಳಗೆ ಬಂದಿದ್ದರು.  ಸ್ವಾಗತಕಾರನ ಬಳಿಯೇ ಇದ್ದ ನನ್ನನ್ನು ನೋಡಿ ಆಕ್ರೋಶದಿಂದ ಅವರಾಡಿದ ಮಾತುಗಳು ಮಾತ್ರ ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ.  ಅದೆಷ್ಟೋ ದಿನಗಳಿಂದ ಹೊಟ್ಟೆಗೆ ತಿನ್ನದವರಂತೆ ಕೃಶರಾಗಿದ್ದ ಅವರ ಮುಖದಲ್ಲಿ ಅಸಹಾಯಕತೆ ಎದ್ದು ಕಾಣುತ್ತಿತ್ತು. ಅವರ ಆ ದಯನೀಯ ಪರಿಸ್ಥಿತ್ಯನ್ನು ಕಂಡು ಮನಸ್ಸು ಮರುಗಿದರೂ ನಾನು ನನ್ನ ಕರ್ತವ್ಯ ಮಾಡಲೇಬೇಕಿತ್ತು.  "ಆಪರೇಷನ್ ನೈಜೀರಿಯಾ" ಯಶಸ್ವಿಯಾಗಿತ್ತು, ಆದರೆ ಮನದ ಮೂಲೆಯಲ್ಲೆಲ್ಲೋ ಮಾನವೀಯತೆ ಸತ್ತ ಸದ್ದು ಕೇಳಿಸುತ್ತಿತ್ತು!

Tuesday, October 6, 2015

ಎಣ್ಣೆ ಮುಗಿಯುತಲಿದೆ,,,,,,,,,,,,,,

ಎಣ್ಣೆ ಮುಗಿಯುತಲಿದೆ
ಎನುವ ಕಳವಳವೇತಕೋ?
ಅದೋ,,,ಮೇಲೊಬ್ಬನಿರುವನಲ್ಲ
ಅವನೆಲ್ಲ ನೋಡುತಿಹನಲ್ಲ!

ಉರಿವುದಷ್ಟೆ ನಿನ್ನ ಕಾಯಕ
ನೀನಲ್ಲ ನಿಜದ ಗಾಯಕ
ಉರಿಯುತಲಿರು ಉರಿದು
ಸುತ್ತಲ ಜಗವನೆಲ್ಲ ಸದಾ
ಬೆಳಗುತಿರು,,ಕೊರಗದಿರು!
ಬೆಳಕ ನೀಡುವುದು ನಿನ್ನ ಧರ್ಮ
ಪಡೆದ ಬೆಳಕಿನಲಿ ನಲಿವುದು
ಪರರ ಧರ್ಮ ಬೇಡಯ್ಯ ಚಿಂತೆ!

ಎಣ್ಣೆ ಮುಗಿಯುತಲಿದೆ
ಎನುವ ಕಳವಳವೇತಕೋ?
ಅದೋ,,,ಮೇಲೊಬ್ಬನಿರುವನಲ್ಲ
ಅವನೆಲ್ಲ ನೋಡುತಿಹನಲ್ಲ!
(ಫೋಟೋ: ರೇಖಾ. ಎನ್. ಕುಮಾರ್)

Saturday, September 26, 2015

ಭದ್ರತೆಯ ಲೋಕದಲ್ಲಿ – ೧೦ "ಆಪರೇಷನ್ ಶ್ರೀಗಂಧ"



-

ಮುಖ್ಯದ್ವಾರದ ಭದ್ರತಾ ಉಸ್ತುವಾರಿ ಭ್ರಷ್ಟ ನಿವೃತ್ತ ಸೈನಿಕನ ಕೈ ತಪ್ಪಿ ನಮ್ಮ ಹತೋಟಿಗೆ ಬಂದಿದ್ದು ಅವನಿಗಷ್ಟೇ ಅಲ್ಲದೆ ಅವನಿಗೆ ಸಹಕರಿಸುತ್ತಿದ್ದ ಇತರ ಕೆಲವು ಉದ್ಯೋಗಿಗಳಿಗೂ, ಕಾರ್ಖಾನೆಗೆ ಇತರ ಸೌಲಭ್ಯಗಳನ್ನೊದಗಿಸುತ್ತಿದ್ದ ಕೆಲವು  ಗುತ್ತಿಗೆದಾರರಿಗೂ  ಸಹಾ ಇರಿಸುಮುರುಸಾಗಿತ್ತು.  ಬಾಯಿಬಿಟ್ಟು ಹೇಳಲಾಗದೆ, ಅನುಭವಿಸಲೂ ಆಗದೆ ತಾವು ಅದೆಷ್ಟೋ ದಿನಗಳಿಂದ ಹೊಡೆಯುತ್ತಿದ್ದ ಲೂಟಿ ತಮ್ಮ ಕೈತಪ್ಪಿ ಹೋಗುವುದನ್ನು ಅವರು ಅಸಹಾಯಕರಾಗಿ ನೋಡುತ್ತಿದ್ದರು. ಯಾವುದಾದರೂ ಒಂದು ಕಾರಣ ಹುಡುಕಿ ನಮ್ಮನ್ನು ಮಟ್ಟ ಹಾಕಬೇಕೆಂದು ಕಾಯುತ್ತಿದ್ದ ಅವರಿಗೆ ಅಂತಹ ಯಾವುದೇ ಅವಕಾಶ ಸಿಗದಂತೆ ಬಹಳ ಜಾಗರೂಕರಾಗಿ ನಮ್ಮ ತಂಡ ಕಾರ್ಯ ನಿರ್ವಹಿಸುತ್ತಿತ್ತು.  ಹೀಗಿರುವಾಗ ನಡೆದ ಮತ್ತೊಂದು ಘಟನೆ ನಮ್ಮ ತಂಡದ ಮನೋಸ್ಥೈರ್ಯವನ್ನು ಇಮ್ಮಡಿಗೊಳಿಸಿತ್ತು.

ಸುಮಾರು ಐದುನೂರು ಎಕರೆಗಿಂತ ಹೆಚ್ಚಾಗಿದ್ದ ಕಾರ್ಖಾನೆಯ  ಜಮೀನಿನಲ್ಲಿ ಸಾಕಷ್ಟು ಮರಗಿಡಗಳು ಬೆಳೆದು ನಿಂತಿದ್ದು ಒಂದು ಪುಟ್ಟ ಕಾಡಿನಂತಿದ್ದ ಆ ಭಾಗದಲ್ಲಿ  ಆಳೆತ್ತರದ ಹುತ್ತಗಳೂ ಸಾಕಷ್ಟಿದ್ದುದಲ್ಲದೆ ಮಾರುದ್ಧದ ವಿವಿಧ ಜಾತಿಯ ಹಾವುಗಳು ಹಗಲು ಹೊತ್ತಿನಲ್ಲಿಯೇ ರಾಜಾರೋಷವಾಗಿ ಹರಿದಾಡುತ್ತಿದ್ದವು. ಅಲ್ಲದೆ  ಸಾಕಷ್ಟು   ಶ್ರೀಗಂಧದ ಮರಗಳು ತಂತಾವೇ ಬೆಳೆದು ನಿಂತಿದ್ದವು.  ಆಗಾಗ ಅರಣ್ಯ ಇಲಾಖೆಯವರು ಬಂದು ಬಲಿತ ಗಂಧದ ಮರಗಳಿಗೆ ಸಂಖ್ಯೆ ನಮೂದು ಮಾಡಿ, ಮುಖ್ಯ ಭದ್ರತಾ ಅಧಿಕಾರಿಯ ಆತಿಥ್ಯ ಸ್ವೀಕರಿಸಿ ಹೋಗುತ್ತಿದ್ದರು.  ಕೇವಲ ಕುರುಚಲು ಗಿಡಗಳಿಂದ ಸುತ್ತುವರಿದಿದ್ದ ಆ ಜಾಗಕ್ಕೆ ಸರಿಯಾದ ಬೇಲಿಯ ವ್ಯವಸ್ಥೆಯೂ ಇರಲಿಲ್ಲ, ಹೀಗಾಗಿ ಸುತ್ತಲಿನ ಹಳ್ಳಿಗಳಿಂದ ದನಕರುಗಳನ್ನು ಮೇಯಿಸಲು ಬರುತ್ತಿದ್ದ ಹಳ್ಳಿಗರಿಗೆ ಬೆಳೆದು ನಿಂತ ಶ್ರೀಗಂಧದ ಮರಗಳು ಸುಲಭವಾಗಿ ಕಣ್ಣಿಗೆ ಬೀಳುತ್ತಿದ್ದವು.  ಇವರಿಂದ ವಿಚಾರ ತಿಳಿದ ಪರಿಣತ ಕಳ್ಳರು ರಾತ್ರಿಯ ಹೊತ್ತಿನಲ್ಲಿ ಆ ಜಾಗಕ್ಕೆ ಬಂದು ಬೆಳೆದು ನಿಂತ ಗಂಧದ ಮರದ ಬಲಿತ ಭಾಗಗಳನ್ನು ಬ್ಯಾಟರಿ ಚಾಲಿತ ಗರಗಸದಿಂದ ಕ್ಷಣಮಾತ್ರದಲ್ಲಿ ಕತ್ತರಿಸಿ, ತಮಗೆ ಬೇಕಿಲ್ಲದ ಉಳಿದ ಭಾಗವನ್ನು ಅಲ್ಲಿಯೇ ಬಿಸಾಕಿ   ಕಳ್ಳತನ ಮಾಡಿಕೊಂಡು ಹೋಗುತ್ತಿದ್ದರು.   

ಮುಖ್ಯದ್ವಾರದಲ್ಲಿನ ಚಟುವಟಿಕೆಗಳು ನಮ್ಮ ನಿಯಂತ್ರಣಕ್ಕೆ ಬಂದ ನಂತರ ನಿಧಾನವಾಗಿ ನನ್ನ ಓಡಾಟ ಕಾರ್ಖಾನೆಯ ಒಳಭಾಗ ಹಾಗೂ ಸುತ್ತಲಿನ ಕಾಡುಪ್ರದೇಶಕ್ಕೆ ವಿಸ್ತರಿಸುತ್ತಾ ಹೋದಂತೆ ಆಗಾಗ್ಗೆ ಬೆಳೆದು ನಿಂತ ಗಂಧದಮರಗಳು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿದ್ದುದು ನನ್ನ ಗಮನಕ್ಕೆ ಬಂದಿತ್ತು.  ಅಲ್ಲದೆ ಕಾರ್ಖಾನೆಯ ಉದ್ಯಾನವನದ ನಿರ್ವಹಣೆಗೆಂದೇ ನಿಯೋಜಿಸಲ್ಪಟ್ಟಿದ್ದ ಕೆಲಸಗಾರರು ಆಗಾಗ ಕಾರ್ಖಾನೆಯ ಸುತ್ತಮುತ್ತಲಿದ್ದ ಗಂಧದ ಮರಗಳನ್ನು ಕತ್ತರಿಸಿ, ಒಣಗಿಸಿ, ಸಣ್ಣ ಉಗ್ರಾಣದಂಥ ಕೊಠಡಿಯೊಂದರಲ್ಲಿ ಪೇರಿಸಿಟ್ಟಿರುವುದು ಸಹಾ ನಮ್ಮ ಭದ್ರತಾ ರಕ್ಷಕರಿಗೆ ಗೊತ್ತಾಗಿತ್ತು.  ಇಲ್ಲಿಯೂ ಸಹಾ ಮುಖ್ಯ ಭದ್ರತಾ ಅಧಿಕಾರಿ ಮತ್ತವನ ಚೇಲಾಗಳ ಆಟ ನಡೆಯುತ್ತಿದೆಯೆಂದೂ, ಸಾಕಷ್ಟು ಶ್ರೀಗಂಧದ ಮರದ ತುಂಡುಗಳನ್ನು ಸಂಸ್ಥೆಯ ವಾಹನಗಳಲ್ಲಿಯೇ ಆಡಳಿತ ಮಂಡಳಿಯವರ ಗಮನಕ್ಕೆ ಬರದಂತೆ ಸಾಗಿಸಲಾಗಿದೆಯೆಂದೂ  ಉದ್ಯಾನವನದ ಕಾರ್ಮಿಕರಿಂದ ತಿಳಿದು ಬಂದಿತ್ತು.   ಸಾಮಾನ್ಯವಾಗಿ ಶ್ರೀಗಂಧದ ಮರಗಳನ್ನು ಕಡಿಯಲು ಕಳ್ಳರು, ಕಾರ್ಖಾನೆಗೆ ರಜಾದಿನವಾದ ಭಾನುವಾರದ ರಾತ್ರಿಯೇ ಬರುತ್ತಾರೆನ್ನುವ ಮಹತ್ವದ ಮಾಹಿತಿಯೂ ನಮಗೆ ಸಿಕ್ಕಿತ್ತು.  ಇದಕ್ಕನುಗುಣವಾಗಿ ರಹಸ್ಯ ಯೋಜನೆಯೊಂದನ್ನು ರೂಪಿಸಿ, ಅದಕ್ಕೆ "ಆಪರೇಷನ್ ಶ್ರೀಗಂಧ" ಎಂದು ಹೆಸರಿಟ್ಟು, ಬರುವ ಭಾನುವಾರದಂದು ಆ ಶ್ರೀಗಂಧದ ಕಳ್ಳರಿಗೊಂದು ಗತಿ ಕಾಣಿಸಬೇಕೆಂದು ತೀರ್ಮಾನಿಸಿದ್ದೆವು.

ನಾವು ಕಾತುರದಿಂದ ಕಾಯುತ್ತಿದ್ದ ಆ ದಿನ ಕೊನೆಗೂ ಬಂದೇ ಬಿಟ್ಟಿತು.  ಮಾಮೂಲಿನಂತೆ ದಿನದ ಪಾಳಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಿದ್ದ ನನ್ನ ಕೆಲವು ಆಪ್ತ ಸಹಾಯಕರು ಮತ್ತು ನಾನು ಜೊತೆಯಲ್ಲಿ ಕುಳಿತು ವಾರದ ರಜಾದಿನದ ಬಾಡೂಟ ಮುಗಿಸಿ ರಾತ್ರಿ ಹತ್ತು ಘಂಟೆಗೆ ಕಾರ್ಖಾನೆಗೆ ಹಿಂದಿರುಗಿ ಬಂದಿದ್ದೆವು.  ಸುಮಾರು ಹದಿನೈದು ಜನರ ನಮ್ಮ ತಂಡ ಕೈಯಲ್ಲಿ ಲಾಠಿ ಹಾಗೂ ಟಾರ್ಚುಗಳನ್ನು ಹಿಡಿದು ಶ್ರೀಗಂಧದ ಮರಗಳಿದ್ದ ಜಾಗದಲ್ಲಿ ಬಂದು ಅಡಗಿ ಕುಳಿತಿದ್ದೆವು.  ನಾವು ನಿರೀಕ್ಷಿಸಿದ್ದಕ್ಕಿಂತಲೂ ಸ್ವಲ್ಪ ತಡವಾಗಿ ರಾತ್ರಿಯ ಹನ್ನೆರಡು ಘಂಟೆಯ ನಂತರ ನಾಲ್ಕು ಜನರ ಮರಗಳ್ಳರ ತಂಡ ಆ ಪ್ರದೇಶಕ್ಕೆ ಆಗಮಿಸಿತ್ತು.  ರಾತ್ರಿಯ ಮಂದ ಬೆಳಕಿನಲ್ಲಿ ಅತ್ತಿತ್ತ ನೋಡುತ್ತಾ, ಯಾರೂ ಅವರನ್ನು ಗಮನಿಸುತ್ತಿಲ್ಲವೆಂದು ಖಾತ್ರಿಪಡಿಸಿಕೊಳ್ಳುತ್ತಾ ಕಳ್ಳಬೆಕ್ಕಿನಂತೆ ಹೆಜ್ಜೆಯಿಡುತ್ತಾ ಬಂದ ಕಳ್ಳರಲ್ಲಿ ಒಬ್ಬನ ಕೈಯ್ಯಲ್ಲಿ ಬ್ಯಾಟರಿಚಾಲಿತ ಗರಗಸವಿದ್ದರೆ ಇಬ್ಬರ ಕೈಯಲ್ಲಿ ಮಚ್ಚುಗಳೂ, ಒಬ್ಬನ ಕೈಯ್ಯಲ್ಲಿ ಹಗ್ಗವೂ ಇದ್ದದ್ದು ನಮಗೆ ಕಾಣುತ್ತಿತ್ತು.  ಕೇವಲ ಲಾಠಿಗಳನ್ನು ಹಿಡಿದು ಅವರನ್ನು ಹಿಡಿಯಲು ಬಂದಿದ್ದ ನಮ್ಮ ತಂಡ ಸ್ವಲ್ಪ ಎಡವಟ್ಟು ಮಾಡಿದ್ದರೂ ಪ್ರಾಣಕ್ಕೆ ಎರವಾಗುವ ಸಂಭವವಿತ್ತು.  ಬಲಿತಿದ್ದ ಶ್ರೀಗಂಧದ ಮರವೊಂದನ್ನು ಅವರು ತಮ್ಮಲ್ಲಿದ್ದ ಗರಗಸದಿಂದ ಕತ್ತರಿಸಿ, ಎಲೆ ಹಾಗೂ ಕೊಂಬೆಗಳನ್ನೆಲ್ಲಾ ಸವರಿ, ಬಲಿತ ದಿಂಡುಗಳನ್ನು ಬೇರೆ ಮಾಡುವವರೆಗೂ ಉಸಿರು ಬಿಡದಂತೆ ಕಾದ ನಮ್ಮ ತಂಡ, ಅವರು ತಮ್ಮ ಆಯುಧಗಳನ್ನು ಬದಿಗಿಟ್ಟು ಬಲಿತ ಮರದ ತುಂಡುಗಳನ್ನೆಲ್ಲಾ ಒಟ್ಟು ಮಾಡುತ್ತಿರುವಾಗ, ಒಮ್ಮೆಗೇ ಅವರ ಮೇಲೆ ಧಾಳಿಯಿಟ್ಟು ಕೈಲಿದ್ದ ಲಾಠಿಗಳಿಂದ ಅವರನ್ನು ಮನಸೋ ಇಚ್ಛೆ ಥಳಿಸಿ, ಅವರು ತಂದಿದ್ದ ಹಗ್ಗಗಳಿಂದಲೇ ಅವರನ್ನು ಹೆಡೆಮುರಿ ಕಟ್ಟಿ ಹಾಕಿದ್ದೆವು.  ಬಹಳ ದಿನಗಳಿಂದ ರಾಜಾರೋಷವಾಗಿ ಮರಗಳನ್ನು ಕಡಿಯುತ್ತಿದ್ದ ಅವರಿಗೆ ನಮ್ಮ ತಂಡ ಈ ರೀತಿ ಆಕ್ರಮಣ ಮಾಡಬಹುದೆನ್ನುವ ಕಲ್ಪನೆಯೇ ಇರಲಿಲ್ಲ!   ನಿಸ್ಸಹಾಯಕರಾಗಿ ನಮ್ಮ ಕೈಸೆರೆಯಾದ ಅವರನ್ನು ನಡೆಸಿಕೊಂಡು ಕಾರ್ಖಾನೆಯ ಮುಂಭಾಗಕ್ಕೆ ಕರೆತಂದು ಭದ್ರತಾ ಕಚೇರಿಯ ಪಕ್ಕದಲ್ಲಿದ್ದ ಪುಟ್ಟ ಕೊಠಡಿಯಲ್ಲಿ ಕೂಡಿ ಹಾಕಿದ್ದೆವು.  ಕಾರ್ಖಾನೆಯ ದೂರವಾಣಿಯಿಂದ ಹೊಸಕೋಟೆಯ ಪೊಲೀಸ್ ಠಾಣೆಗೆ ಫೋನ್ ಮಾಡಿ ನಮ್ಮ ಸಾಹಸಗಾಥೆಯನ್ನು ವಿವರಿಸಿ ಬೇಗನೆ ಕಾರ್ಖಾನೆಗೆ ಬರುವಂತೆ ವಿನಂತಿಸಿದ್ದೆ.  ಮರಗಳ್ಳರು ತಂದಿದ್ದ ಆಯುಧಗಳು ಹಾಗೂ ಕಡಿದಿದ್ದ ಮರದ ತುಂಡುಗಳನ್ನು ಭದ್ರತಾ ಕಚೇರಿಯ ಪಕ್ಕದಲ್ಲಿಯೇ ಜೋಡಿಸಿಟ್ಟು ಪೊಲೀಸರ ಹಾದಿ ಕಾಯತೊಡಗಿದೆವು. 

ಇಡೀ ಭದ್ರತಾ ರಕ್ಷಕರ ತಂಡವೇ ಹೊಸ ಹುಮ್ಮಸ್ಸಿನಲ್ಲಿ ತೇಲುತ್ತಿತ್ತು.  ಒಂದಷ್ಟು ಓದಿ, ಯಾವುದೂ ಕೆಲಸ ಸಿಗದಿದ್ದಾಗ, ಹೊಟ್ಟೆಪಾಡಿಗಾಗಿ ಸಿಕ್ಕ ಈ ಭದ್ರತೆಯ ಕೆಲಸಕ್ಕೆ ಸೇರಿದ್ದ ಅವರಲ್ಲಿ ಹೊಸ ಸಂಚಲನವೊಂದು ಮೂಡಿತ್ತು.  ಮೊದಲ ಬಾರಿಗೆ ಜೀವನದಲ್ಲಿ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆಯ ಭಾವನೆಯನ್ನು ಇಡೀ ತಂಡ ಅನುಭವಿಸಿತ್ತು.  ಸುಮಾರು ಬೆಳಗಿನ ಐದು ಘಂಟೆಯ ಹೊತ್ತಿಗೆ ಬಂದ ಹೊಸಕೋಟೆಯ ಪೊಲೀಸರ ತಂಡ ಮಹಜರು ನಡೆಸಿ, ಕಳ್ಳರನ್ನು ಬಂದಿಸಿ, ಅವರು ತಂದ್ದಿದ್ದ ಆಯುಧಗಳು ಹಾಗೂ ಕಡಿದಿದ್ದ ಗಂಧದ ಮರವನ್ನು ತಮ್ಮವಶಕ್ಕೆ ತೆಗೆದುಕೊಂಡಿದ್ದರು.  ಸಬ್ ಇನ್ಸ್ಪೆಕ್ಟರ್ ಮುನಿಯಪ್ಪ ನಮ್ಮ ತಂಡವನ್ನು ಅಭಿನಂದಿಸಿ, ಇನ್ನು ಮುಂದೆ ಈ ರೀತಿ ಮಾಡುವುದಾದರೆ ಪೊಲೀಸರಿಗೆ ತಿಳಿಸಿಯೇ ಮಾಡಬೇಕು, ಇಲ್ಲದಿದ್ದರೆ ನಿಮ್ಮ ಪ್ರಾಣಕ್ಕೆ ಸಂಚಕಾರವಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದರು.  ಇನ್ನು ಮುಂದೆ ಪೊಲೀಸರಿಗೆ ವಿಷಯ ತಿಳಿಸಿಯೇ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿ ಅವರನ್ನು ಬೀಳ್ಕೊಟ್ಟಿದ್ದೆವು. ನಂತರ ಎಲ್ಲರೂ ನಮ್ಮನಮ್ಮ ಮನೆಗಳಿಗೆ ತೆರಳಿ, ಸ್ವಲ್ಪ ಹೊತ್ತು ವಿಶ್ರಮಿಸಿ ಮತ್ತೆ ಮಾಮೂಲಿನಂತೆ ನಮ್ಮ ಕೆಲಸಕ್ಕೆ ಹಾಜರಾಗಿದ್ದೆವು.

ರಾತ್ರಿಯ ವಿಚಾರವೆಲ್ಲವನ್ನೂ ಕೂಲಂಕುಷವಾಗಿ ಕಾರ್ಖಾನೆಯ ಆಡಳಿತಾಧಿಕಾರಿಯವರಿಗೆ ವರದಿ ಒಪ್ಪಿಸಿದಾಗ ಮೂಕವಿಸ್ಮಿತರಾದ ಅವರು ತಮ್ಮ ಸೀಟಿನಿಂದ ಎದ್ದು ಬಂದು ನನ್ನನ್ನು ಅಪ್ಪಿಕೊಂಡು ಅಭಿನಂದಿಸಿದ್ದರು.  ಅದುವರೆಗೂ ಅವರ ವೈಯಕ್ತಿಕ ಹಿನ್ನೆಲೆಯ ಅರಿವಿಲ್ಲದ ನನಗೆ ಅವರು ಕೊಡಗಿನವರೆಂದೂ, ಭಾರತೀಯ ಸೇನೆಯಲ್ಲಿ ಹದಿನೈದು ವರ್ಷ ಕೆಲಸ ಮಾಡಿ ಬಂದಿರುವುದಾಗಿಯೂ ಹೇಳಿ ನನ್ನ ಪೂರ್ವಾಪರ ವಿಚಾರಿಸಿದ್ದರು.  ನಮ್ಮದು ಹೊಳೆನರಸೀಪುರ ಎಂದಾಗ ಬಹಳ ಖುಷಿಯಾಗಿದ್ದರು.  ಅವರೊಡನೆ ಅವರ ಕಾರಿನಲ್ಲಿಯೇ ಹೊಸಕೋಟೆಯ ಪೊಲೀಸ್ ಠಾಣೆಗೆ ಹೋಗಿ ಅಧಿಕೃತವಾಗಿ ಮರಗಳ್ಳರ ವಿರುದ್ಧ ದೂರು ದಾಖಲಿಸಿದ್ದೆವು.          ತಾವು ಸೆರೆ ಹಿಡಿದಿದ್ದ ಮರಗಳ್ಳರಿಗೆ ಸರಿಯಾದ ರಾಜಾತಿಥ್ಯ ನೀಡಿದ್ದ ಹೊಸಕೋಟೆಯ ಪೊಲೀಸರಿಗೆ ಆ ನಾಲ್ವರಲ್ಲದೆ ಅವರ ಗುಂಪಿನಲ್ಲಿ ಇನ್ನೂ ಸಾಕಷ್ಟು ಜನರಿದ್ದು, ಹೊಸಕೋಟೆ, ವೈಟ್ ಫೀಲ್ಡ್, ಕಾಡುಗೋಡಿ, ಮಹದೇವಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲವಾರು ಕಾರ್ಖಾನೆಗಳಲ್ಲಿ ಬೆಳೆದು ನಿಂತಿದ್ದ ಹಲವಾರು ಗಂಧದ ಮರಗಳನ್ನು ರಾತ್ರೋ ರಾತ್ರಿ ಕಡಿದು ಸಾಗಿಸಿದ್ದ ಮಾಹಿತಿ ಸಿಕ್ಕಿತ್ತು.  ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಒಂದು ದೊಡ್ಡ ಮರಗಳ್ಳರ ತಂಡವೇ ಬಂಧನಕ್ಕೊಳಗಾಗಿತ್ತು.   "ಆಪರೇಷನ್ ಶ್ರೀಗಂಧ" ಯಶಸ್ವಿಯಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯವರು  ಖಾಸಗಿ ಭದ್ರತಾ ರಕ್ಷಕರ ಕಾರ್ಯಕ್ಷಮತೆಯನ್ನು ಹೊಗಳುವಂತಾಗಿತ್ತು.

 ಈ  ಎಲ್ಲ ವಿಚಾರಗಳು ಕಾರ್ಖಾನೆಯಲ್ಲಿ ಬಾಯಿಂದ ಬಾಯಿಗೆ ಹಬ್ಬಿ ರೋಚಕವಾಗಿ ವರ್ಣಿಸಲ್ಪಡುತ್ತಾ ಪ್ರಚಾರಗೊಳ್ಳುತ್ತಿದ್ದವು.  ಇದನ್ನೆಲ್ಲಾ ನೋಡುತ್ತಾ ಭ್ರಷ್ಟ ಮುಖ್ಯ ಭದ್ರತಾ ಅಧಿಕಾರಿಯ ರಕ್ತ ಕುದ್ದು ಹೋಗುತ್ತಿತ್ತು.  ಎಲ್ಲರ ಮುಂದೆ ನಾವು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆಂದು ನಮ್ಮನ್ನು ಹೊಗಳುತ್ತಿದ್ದರೂ  ಅವನೆದೆಯಲ್ಲಿ ತುಂಬಿದ್ದ ಅಸಮಾಧಾನ ಅವನ ಕಣ್ಣುಗಳು ಪ್ರತಿಫಲಿಸುತ್ತಿದ್ದವು. ನಾವು ಎಷ್ಟೇ ದಕ್ಷತೆಯಿಂದ ಕೆಲಸ ಮಾಡಿದರೂ ಗುತ್ತಿಗೆಯ ಆಧಾರದಲ್ಲಿದ್ದುದರಿಂದ ಕಾರ್ಖಾನೆಯ ಸ್ವಂತ ಸಿಬ್ಬಂದಿಯಂತೆ ಬೀಗಲು ಸಾಧ್ಯವಿರಲಿಲ್ಲ.  ಮುಖ್ಯ ಭದ್ರತಾ ಅಧಿಕಾರಿಯ ಅಸಮಾಧಾನ ನಮ್ಮನ್ನು ಒಂದಲ್ಲಾ ಒಂದು ದಿನ ಆ ಕಾರ್ಖಾನೆಯಿಂದ ಹೊರಗಟ್ಟಬಹುದೆನ್ನುವ ಆತಂಕದಲ್ಲಿಯೇ ನಮ್ಮ ಭದ್ರತಾ ರಕ್ಷಕರು ಕಾರ್ಯ ನಿರ್ವಹಿಸಬೇಕಿತ್ತು!

(ಮುಂದೇನಾಯಿತು,,,,ಮುಂದಿನ ಭಾಗದಲ್ಲಿ..... )

Saturday, September 19, 2015

ರಾಧೆ ಮರೆತ ಕೃಷ್ಣ ನಾನು,,,,,,,,,,,,,,,



ರಾಧೆ ಮರೆತ ಕೃಷ್ಣ ನಾನು
ಕೊಳಲು ಮೂಕವಾಗಿದೆ!
ಯಮುನೆ ತೊರೆದ ಶಿಶುವು ನಾನು 
ಅಳಲು ಬರದಾಗಿದೆ!
ರುಕ್ಮಿಣಿಯ ಮನದ ಹೂವು ನಾನು 
ಚೈತ್ರ  ಗ್ರೀಷ್ಮವಾಗಿದೆ!
ಭಾಮೆಯೊಡಲ ಗಾನ ನಾನು 
ರಾಗ ತಾಳ ತಪ್ಪಿದೆ!
ಹುಚ್ಚು ಮನದ ಒಡೆಯ ನಾನು 
ಭಾವಲಹರಿ ಬತ್ತಿದೆ!
ದೂರತೀರದ ಸಂಚಾರಿ ನಾನು 
ದಾರಿ ದಿಕ್ಕು ತಪ್ಪಿದೆ!
ಹುಚ್ಚುಕಡಲ ನಾವೆ ನಾನು 
ಬದುಕು ಹೊಯ್ದಾಡಿದೆ!
ಗಾಡಾಂಧಕಾರದಲ್ಲಿಹೆನು ನಾನು 
ಹೃದಯ ಸ್ತಬ್ಧವಾಗಿದೆ!

Monday, September 14, 2015

ಮೂರು ಗಂಟಿನ ನಂಟು,,,,,,,,,,,,,,,,,,





ಮೂರು ಗಂಟಿನ ನಂಟು
ಶಾಶ್ವತವಲ್ಲ ಇಂದು!
ಮೂರು ಕಾಸಿನ ಗಂಟು
ಆಗಿದೆಯಲ್ಲ  ಮುಂದು!
ಹಣದ ಮಾರಿಯ ಮೋಹ
ಪ್ರೀತಿ ಇಲ್ಲದ ದಾಹ !
ಸುಮದ ಹಾದಿಯಲೆಂದೂ
ಬರಿ ಮುಳ್ಳುಕಂಟಿಗಳೇ !
ಬಾಳದಾರಿಯ ತುಂಬ
ಸುಟ್ಟ ಕನಸುಗಳೇ !
ಸುತ್ತ ಮುತ್ತಲೆಲ್ಲ್ಲಾ
ಬರಿ ಕತ್ತಲೆಯೇ !
ಮರೆತು ಮಮಕಾರ
ಮೆರೆದು ಅಹಂಕಾರ
ಮನೆಯು ಮುರಿದು
ಹಸುಕಂದಮ್ಮಗಳ 
ಬಾಳದು  ಬರಿದು !

(ಇತ್ತೀಚಿನ ಸುಪ್ರಸಿದ್ಧರ ವಿವಾಹ ವಿಚ್ಛೇದನದ ಕಥೆಯನ್ನೋದಿ ಮನದಿ ಮೂಡಿದ ಸಾಲುಗಳು) 
              
 

Sunday, September 13, 2015

ಲಹರಿ ಬಂದಂತೆ,,,,,,,,,,,,,,,,,,,,,,,,,,,,,,,,,,,,,,,,,೬,,,,,,,,,,,,

ಮರಳುಗಾಡಿನಲಿ
ಸುಡುವ ಬಿಸಿಲಿನಲಿ
ಅರಳುತಿದ್ದ ಹೂಗಳು
ಇಂದೇಕೋ ಅರಳಿಲ್ಲ!
ಬಹುಶಃ ಅವುಗಳೂ
ಕಾಯುತಿರಬಹುದೇನೋ
ನಿನ್ನ ಆಗಮನಕಾಗಿ! 
*****************
*****************
 
ಏನಿದೆಯೊ ಖಾತ್ರಿ !
ಘಟಿಸುತಿರೆ ಹಗಲು ರಾತ್ರಿ
ಕೆಲಮೊಮ್ಮೆ ಶಿವರಾತ್ರಿ
ಕೆಲಮೊಮ್ಮೆ ಸಂಕ್ರಾಂತಿ
ಈ ಬದುಕೇ ವಿಭ್ರಾಂತಿ!
*****************
*****************

 ಮಧುರ ಭಾವನೆಗಳ ತೋರಣವ ಕಟ್ಟಿ
ಮನದ ಬಾಗಿಲಿನಲ್ಲಿ ರಂಗೋಲಿಯಿಟ್ಟು
ನಿನಗಾಗಿ ಕಾದಿರುವೆ ಓ ನನ್ನ ನಲ್ಲೆ
ಬರಲಾರೆಯಾ ನೀ ಹೊತ್ತು ಕಂತುವ ಮುನ್ನ!  :-) 
************************************
************************************