Tuesday, October 18, 2016

ಇದು ನಿಜಕ್ಕೂ ಆತ್ಮಹತ್ಯೆಯೇ???ಮಾಲೂರಿನ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಅವರು ತಮ್ಮ ಸರ್ವಿಸ್ ರಿವಾಲ್ವರಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ಧಿ ನೋಡಿ ನನಗೆ ಕ್ಷಣ ಕಾಲ ನಂಬಲಾಗಲಿಲ್ಲ!  ಏಕೆಂದರೆ ರಾಘವೇಂದ್ರ ಅವರನ್ನು ಹತ್ತಿರದಿಂದ ನೋಡಿದವರಿಗೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ನಂಬುವುದು ತುಂಬಾನೇ ಕಷ್ಟ!  ಅವರೊಡನೆ ಒಂದೆರಡು ಪ್ರಕರಣಗಳಲ್ಲಿ ನನ್ನ ಒಡನಾಟವಿತ್ತು, ಆ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.  ಆಗ ನಾನು ಬೆಂಗಳೂರಿನ ಶಿವಾಜಿನಗರದಲ್ಲಿದ್ದ ಬ್ಲಾಕ್ ಬೆಲ್ಟ್ ಕಮಾಂಡೋಸ್ ಎಂಬ ಭದ್ರತಾ ಸಂಸ್ಥೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದೆ.  ನನ್ನ ಮೇಲಧಿಕಾರಿಯಾಗಿ ಭಾರತೀಯ ಸೇನೆಯ ನಿವೃತ್ತ ಮೇಜರ್ ಸುಬ್ಬಯ್ಯ, ಕೊಡಗಿನವರು, ಇದ್ದರು. 

ಹೊಸಕೋಟೆ ಬಳಿಯ ಪಿಲ್ಲಗುಂಪ ಕೈಗಾರಿಕಾ ಪ್ರದೇಶ ಹಾಗೂ ನರಸಾಪುರ ಕೈಗಾರಿಕಾ ಪ್ರದೇಶದ ಹಲವು ಕಾರ್ಖಾನೆಗಳಿಗೆ ನಮ್ಮ ಸಂಸ್ಥೆಯಿಂದ ಭದ್ರತಾ ಸೇವೆಗಳನ್ನು ಒದಗಿಸಲಾಗಿತ್ತು.  ವಾರದಲ್ಲಿ ಎರಡು, ಮೂರು ದಿನ ಆ ಪ್ರದೇಶಗಳಿಗೆ ನನ್ನ ಭೇಟಿ ಮಾಮೂಲಾಗಿತ್ತು, ದಿನವೂ ಒಂದಿಲ್ಲೊಂದು ಸಮಸ್ಯೆ ಅಲ್ಲಿ ಇದ್ದೇ ಇರುತ್ತಿತ್ತು. ನಗರದಿಂದ ದೂರವಿದ್ದ ಆ ಪ್ರದೇಶದಲ್ಲಿ ಸಾಕಷ್ಟು ಕೈಗಾರಿಕೆಗಳಿದ್ದರೂ ನೈಸರ್ಗಿಕ ಕುರುಚಲು ಕಾಡಿನ ಜೊತೆಗೆ ಸಿಕ್ಕ ಸಿಕ್ಕಲ್ಲೆಲ್ಲಾ ನೀಲಗಿರಿ ಮರಗಳನ್ನು ಬೆಳೆಸಿ ಅದು ನಿರ್ಮಾನುಷ ಕಾಡಿನಂತೆಯೇ ಇತ್ತು.  ಕತ್ತಲಾದ ನಂತರ ಅಲ್ಲಿ ಮಾನವ ಸಂಚಾರವೇ ಇರುತ್ತಿರಲಿಲ್ಲ,,ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಓಡಾಡುತ್ತಿದ್ದರೂ ಅವರು ಸಾಮಾನ್ಯವಾಗಿ ಸುತ್ತ ಮುತ್ತಲಿನ ಗ್ರಾಮಗಳವರೇ ಆಗಿದ್ದು ಅವಕಾಶ ಸಿಕ್ಕಲ್ಲಿ ಎದುರಿಗೆ ಬಂದವರಿಗೆ ಸರಿಯಾಗಿ ಬಾರಿಸಿ ಇದ್ದ ಬದ್ದದ್ದನ್ನೆಲ್ಲಾ ಕಿತ್ತುಕೊಂಡು ಹೋಗಿ ಬಿಡುತ್ತಿದ್ದರು. 

ಒಂದೆರಡು ಬಾರಿ ನನಗೂ ಇಂಥವರು ಮುಖಾಮುಖಿಯಾಗಿ ಸರಿಯಾಗಿ ಲಾಠಿ ಏಟು ತಿಂದು ಓಡಿ ಹೋಗಿದ್ದರು. ನಾವು ಭದ್ರತೆ ನೀಡಿದ್ದ ಮೂರು ಕಾರ್ಖಾನೆಗಳಲ್ಲಿ ಸರಣಿ ಕಳ್ಳತನಗಳಾಗಿ, ಕಾರ್ಖಾನೆಯವರು ಭದ್ರತಾ ವೈಫಲ್ಯವೇ ಕಾರಣವೆಂದು ನಮಗೆ ಬರಬೇಕಿದ್ದ ಹಣವನ್ನು ಹಿಡಿದು ಹಾಕಿ, ಕಳ್ಳತನದ ಪ್ರಕರಣಗಳನ್ನು ಪತ್ತೆ ಹಚ್ಚಿದರೆ ಮಾತ್ರ ಹಣ ಬಿಡುಗಡೆ ಮಾಡುವುದಾಗಿಯೂ, ಇಲ್ಲವಾದಲ್ಲಿ ನಮ್ಮ ಭದ್ರತಾ ಸಂಸ್ಥೆಯ ಮೇಲೆ ಕೇಸು ದಾಖಲಿಸುವುದಾಗಿಯೂ ಧಮಕಿ ಹಾಕಿದ್ದರು.  ಆಗ ಅಖಾಡಕ್ಕೆ ಇಳಿದಿದ್ದು ನನ್ನ ಗುರುಗಳು ಮೇಜರ್ ಸುಬ್ಬಯ್ಯ, ಅದೇ ಮೊದಲನೆಯ ಬಾರಿಗೆ ನಾನು ಅವರೊಡನೆ ನಂದಗುಡಿ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದೆ.  ಅಲ್ಲಿದ್ದರು ನೋಡಿ ಈ ರಾಘವೇಂದ್ರ,,,,ನೋಡಲು ಬ್ರಾಹ್ಮಣರಂತೆ ಕಾಣುತ್ತಿದ್ದರೂ ಮಾತು ಮಾತ್ರ ಖಡಕ್ ಗೌಡರಂತೆಯೇ ಇತ್ತು.  ಅಂದು ಅವರು ನಮ್ಮೊಡನೆ ನಡೆದುಕೊಂಡ ರೀತಿ, ನಂತರ ಆ ಪ್ರಕರಣಗಳನ್ನು ಬಗೆಹರಿಸಿದ ರೀತಿ ಇಂದಿಗೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ.   ನೋಡಲು ಬಂದಿರುವವರು ಭಾರತೀಯ ಸೇನೆಯ ನಿವೃತ್ತ ಮೇಜರ್ ಎಂದು ಗೊತ್ತಾಗುತ್ತಿದ್ದಂತೆ ಎದ್ದು ನಿಂತು ಒಂದು ಸೆಲ್ಯೂಟ್ ನೀಡಿ ಗೌರವಿಸಿದ್ದರು. ಪಕ್ಕದ ಹೋಟೆಲ್ಲಿನಿಂದ ಬಿಸಿಬಿಸಿ ಟೀ, ಬಿಸ್ಕತ್ ತರಿಸಿ ಉಪಚರಿಸಿದ್ದರು. 

ಮೂರೂ ಕಾರ್ಖಾನೆಗಳ ಕಳ್ಳತನದ ಪ್ರಕರಣಗಳ ಬಗ್ಗೆ ಅಧಿಕೃತವಾಗಿ ದೂರು ದಾಖಲಿಸಿ ಆ ಕಳ್ಳರನ್ನು ಆದಷ್ಟು ಬೇಗ ಹಿಡಿದು ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕೆಂದು ಮೇಜರ್ ಸುಬ್ಬಯ್ಯನವರು  ಭಿನ್ನವಿಸಿ ಹೊರಟಾಗ ಅವರ ಕಾರಿನ ತನಕ ಬಂದು ಬೀಳ್ಕೊಟ್ಟು ಮತ್ತೊಂದು ಸೆಲ್ಯೂಟ್ ಹೊಡೆದಿದ್ದರು.  ಅದಾದ ನಂತರ ಆ ಪ್ರಕರಣಗಳ ಬಗ್ಗೆ ಅವರೊಡನೆ ನಾನು ನಿರಂತರ ಸಂಪರ್ಕದಲ್ಲಿದ್ದೆ, ಮೂರೂ ಕಾರ್ಖಾನೆಗಳ ಸ್ಥಳ ಪರಿಶೀಲನೆ ಮಾಡಲು ಅವರು ತಮ್ಮ ಸಿಬ್ಬಂದಿಯೊಡನೆ ಬಂದಾಗ  ಅವರೊಡನೆಯೇ ಇದ್ದು ತನಿಖೆಯಲ್ಲಿ ಸಹಕರಿಸಿದ್ದೆ, ಒಂದು ಕಾರ್ಖಾನೆಯಲ್ಲಿ ತಯಾರಾಗುತ್ತಿದ್ದ  ಸಂಸ್ಕರಿತ ನೀರಿನ ಬಾಟಲಿಗಳ ದೊಡ್ಡ ಡಬ್ಬವನ್ನೇ ಅವರ ಜೀಪಿನಲ್ಲಿ ತುಂಬಿಸಿ ಕಳುಹಿಸಿದ್ದೆ.  ಸುಮಾರು ಒಂದು ತಿಂಗಳ ಅವಧಿಯಲ್ಲಿ ಸಾಕಷ್ಟು ಅನುಮಾನಾಸ್ಪದ ವ್ಯಕ್ತಿಗಳನ್ನು ಹಿಡಿದು ಬೆಂಡೆತ್ತಿ, ಬಾಯಿ ಬಿಡಿಸಿ ಕೊನೆಗೂ ಎಲ್ಲಾ ಪ್ರಕರಣಗಳನ್ನೂ ಪತ್ತೆ ಹಚ್ಚಿದ್ದರು.  ಅದೆಷ್ಟೋ ಪ್ರಕರಣಗಳಲ್ಲಿ ಕಾರ್ಖಾನೆಯ ಕಾರ್ಮಿಕರೇ ಶಾಮೀಲಾಗಿದ್ದರು, ಎಲ್ಲವೂ ಸುಖಾಂತ್ಯವಾಗಿ ನಮ್ಮ ಸಂಸ್ಥೆಗೆ ಹತ್ತಿದ್ದ ಕಳಂಕ ತೊಡೆದು ಹೋಗಿತ್ತು, ಕಳ್ಳರು ಸೆರೆಮನೆಯ ಪಾಲಾಗಿದ್ದರು!

ಆದರೆ ಆ ಪ್ರಕರಣಗಳಲ್ಲಿ ರಾಘವೇಂದ್ರ ಅವರು ಒಬ್ಬ ಪೊಲೀಸ್ ಅಧಿಕಾರಿಯಾಗಿ ನಡೆದುಕೊಂಡ ರೀತಿಯನ್ನು ಬಹಳ ಹತ್ತಿರದಿಂದ ನೋಡಿದ್ದ ನನಗೆ ಇಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದರೆ ನಂಬಲು ಸಾಧ್ಯವಾಗುತ್ತಿಲ್ಲ!  ಸ್ವಲ್ಪ ಹುಡುಗಾಟದ ಸ್ವಭಾವವಾದರೂ ಆ ಗತ್ತು, ಕರ್ತವ್ಯ ನಿರ್ವಹಿಸುತ್ತಿದ್ದ ರೀತಿ, ಆ ಮಾತುಗಾರಿಕೆ, ನಿಜಕ್ಕೂ ನನಗೆ ಮೆಚ್ಚುಗೆಯಾಗಿತ್ತು.  ಪೊಲೀಸ್ ಅಧಿಕಾರಿಯಾಗಬೇಕು ಎನ್ನುವ ನನ್ನ ಕನಸು ಹೇಗೆ ನುಚ್ಚು ನೂರಾಯಿತು, ಯಾಕೆ ನಾನು ಖಾಸಗಿ ಭದ್ರತಾ ಸೇವೆಯಲ್ಲಿ ತೊಡಗಿಸಿಕೊಂಡೆ ಎಂದು ಅವರೊಡನೆ ಹಲವಾರು ಬಾರಿ ಚರ್ಚಿಸಿದ್ದೆ!  ಆಗೆಲ್ಲಾ ಅವರು ಬೆನ್ನು ತಟ್ಟಿ ಮತ್ತೊಮ್ಮೆ ಪ್ರಯತ್ನ ಮಾಡು ಎನ್ನುತ್ತಿದ್ದರೇ ಹೊರತು ಜಂಭ ತೋರಿಸುತ್ತಿರಲಿಲ್ಲ!!  ಇಂಥ ಒಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ ಅದಿನ್ನೆಂಥಾ ಪರಿಸ್ಥಿತಿಯಲ್ಲಿ ಅವರು ಸಿಲುಕಿದ್ದಿರಬಹುದು? 

ಸರ್ಜಾಪುರದಲ್ಲಿ ಅವರು ಸೇವೆಯಲ್ಲಿದ್ದಾಗ ನಡೆದ ಇಸ್ಪೀಟ್ ಪ್ರಕರಣ, ಲೋಕಾಯುಕ್ತ ಧಾಳಿ, ನಂತರ ಅವರು ಕೆಲವು ದಿನ ಜೈಲಿನಲ್ಲಿದ್ದುದನ್ನು ಪತ್ರಿಕೆಗಳಲ್ಲಿ ಓದಿದ್ದೆ, ಆದರೆ ಆ ಮನುಷ್ಯ ಜೈಲಿಗೆ ಹೋಗುವಂಥ ಭ್ರಷ್ಟಾಚಾರ ಮಾಡಿರುತ್ತಾರೆಂದು ನನ್ನ ಮನಸ್ಸು ಒಪ್ಪಿರಲಿಲ್ಲ.  ಅದೇನೇ ಇರಲಿ, ಈಗಿನ ಸರ್ಕಾರದ ಆಡಳಿತದಲ್ಲಿ ಯಾವ ಖಡಕ್ ಅಧಿಕಾರಿಯೂ ಜೀವಂತವಿರಲು ಸಾಧ್ಯವಿಲ್ಲ ಎನ್ನುವುದು ಹಲವಾರು ಪ್ರಕರಣಗಳಲ್ಲಿ ಎಲ್ಲರಿಗೂ ಗೊತ್ತಾಗಿದೆ, ಇದು ಅಂಥದ್ದೇ ಇನ್ನೊಂದು ಪ್ರಕರಣ ಇದ್ದರೂ ಇರಬಹುದು, ಆದರೆ ಈ ಪ್ರಕರಣದಲ್ಲಿಯೂ ಸತ್ಯವಂತೂ ಹೊರಬರುವುದಿಲ್ಲ. 

ಅವರ ಮನೆಯವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ, ತಡವಾದರೂ ಪರವಾಗಿಲ್ಲ, ಅವರ ಸಾವಿನ ಹಿಂದಿನ ರಹಸ್ಯ ಹೊರಬರಲಿ.   ಅವರ ಆತ್ಮಕ್ಕೆ ಶಾಂತಿ ಸಿಗಲಿ. 

3 comments:

Sitaram Kemmannu said...

After reading this it appears the suicide has other angle also

manju said...

Yes, definitely there is other angles, but I don't think it will come out!!

manju said...

Yes, definitely there is other angles, but I don't think it will come out!!