Wednesday, September 1, 2010

ಕಮರಿದ ಕನಸು.

ಅಂದು ಕಾಂತಮ್ಮನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅರುವತ್ತರ ಇಳಿವಯಸ್ಸಿನಲ್ಲಿದ್ದ ಆಕೆ ನವಯುವತಿಯರೂ ನಾಚುವಂತೆ ಲವಲವಿಕೆಯಿಂದ ಮನೆಯ ತುಂಬಾ ಅತ್ತಿಂದಿತ್ತ ಓಡಾಡುತ್ತಿದ್ದರು. ಆಕೆಯ ಇಬ್ಬರು ಹೆಣ್ಣು ಮಕ್ಕಳೂ ಸಹ ಬಹಳ ಸಂತೋಷದಿಂದ ಜಿಂಕೆಮರಿಗಳಂತೆ ಜಿಗಿಯುತ್ತಾ ಮನೆಯ ಅಲಂಕಾರದಲ್ಲಿ ಮುಳುಗಿದ್ದರು. ಅಕ್ಕಪಕ್ಕದ ಮನೆಗಳ ಹೆಂಗಳೆಯರು, ಹತ್ತಿರದ ನೆಂಟರು ಮನೆಯ ತುಂಬ ತುಂಬಿದ್ದರು. ಒಟ್ಟಾರೆ ಅಲ್ಲಿ ಹಬ್ಬದ ಸಂಭ್ರಮ. ಅದು ಹಿರಿಯ ಮಗಳು ಅನುಸೂಯಳ ಮದುವೆಯ ಸಂಭ್ರಮ. ಕ್ಷಯ ರೋಗದಿಂದ ಸುಮಾರು ವರ್ಷಗಳ ಹಿಂದೆಯೇ ಗಂಡ ಸತ್ತ ನಂತರ ಕಷ್ಟ ಪಟ್ಟು ತನ್ನ ಮೂವರು ಮಕ್ಕಳನ್ನು ಬೆಳೆಸಿದ್ದಳು ಕಾಂತಮ್ಮ, ದೊಡ್ಡ ಮಗಳು ಅನುಸೂಯ ಪದವಿ ಮುಗಿಸಿ ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಳು, ಚಿಕ್ಕವಳು ಶೋಭ, ಪಿ.ಯು.ಸಿ ಓದುತ್ತಿದ್ದಳು. ಮನೆಯ ಪರಿಸ್ಥಿತಿಯನ್ನೆಲ್ಲ ಅರಿತಿದ್ದ ಹೆಣ್ಣು ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನೇ ತೆಗೆದು ಎಲ್ಲರಿಂದ ಶಾಭಾಷ್ ಅನ್ನಿಸಿಕೊಂಡಿದ್ದರು.



ಹಿರಿಯ ಮಗ ಗೋವಿಂದ ಹತ್ತನೆಯ ತರಗತಿಯ ನಂತರ ಓದಿಗೆ ಶರಣು ಹೊಡೆದು, ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸಂಸಾರದ ರಥವನ್ನು ನಡೆಸಲು ಕಾಂತಮ್ಮನಿಗೆ ಹೆಗಲು ಕೊಟ್ಟಿದ್ದ. ಈಗ ಆರು ವರ್ಷಗಳ ಹಿಂದೆ ಮಂಗಳೂರಿನ ಹೆಗಡೆಯವರ ಮೂಲಕ ಪರಿಚಿತರಾದವರೊಬ್ಬರ ಕಡೆಯಿಂದ ದೂರದ ದುಬೈಗೆ ಹೋಗಿದ್ದ. ಇದ್ದ ತುಂಡು ಭೂಮಿಯನ್ನು ಮಾರಿ, ಅವರಿವರ ಬಳಿ ಕೈ ಸಾಲ ಮಾಡಿ ಹಣ ಕೊಟ್ಟು ಅವನನ್ನು ದುಬೈಗೆ ಕೆಲಸಕ್ಕೆಂದು ಕಳುಹಿಸಿದ್ದಳು. ಮಗ ಅಲ್ಲಿ ಚೆನ್ನಾಗಿ ದುಡಿದು ಹಣ ಕಳುಹಿಸುತ್ತಾನೆ, ಅದರಿಂದ ತಮ್ಮ ಕಷ್ಟಗಳೆಲ್ಲ ಮುಗಿದು, ಇಬ್ಬರು ಹೆಣ್ಣುಮಕ್ಕಳ ಮದುವೆಯಾಗಿ, ಗೋವಿಂದನೂ ಮದುವೆಯಾಗಿ ನೆಲೆಯಾಗಿ ನಿಂತರೆ ಸಾಕೆಂದು ಪ್ರತಿದಿನ ದೇವರಲ್ಲಿ ಕೈ ಮುಗಿಯುತ್ತಿದ್ದಳು. ಅಲ್ಲಿಂದ ಮಗ ಪ್ರತಿ ತಿಂಗಳು ಕಳುಹಿಸಿದ ಹಣದಲ್ಲಿ ಇದ್ದ ಸಾಲವೆಲ್ಲ ತೀರಿಸಿ, ಹೆಣ್ಣುಮಕ್ಕಳಿಗೆ ಸಾಕಷ್ಟು ಚಿನ್ನಾಭರಣವನ್ನೂ ಮಾಡಿಸಿದ್ದಳು ಕಾಂತಮ್ಮ.



ದೊಡ್ಡವಳ ಪದವಿ ಮುಗಿದು ಖಾಸಗಿ ಬ್ಯಾಂಕೊಂದರಲ್ಲಿ ಅವಳಿಗೆ ಕೆಲಸವೂ ಸಿಕ್ಕಿದ ನಂತರ ಮನೆಯ ಪರಿಸ್ಥಿತಿ ಇನ್ನೂ ಸುಧಾರಿಸಿತ್ತು. ಸಂಬಂಧಿಕರ ಪೈಕಿಯೇ ಉತ್ತಮನಾದ ವರನನ್ನು ಹುಡುಕಿ ಮದುವೆಗೆ ತಯಾರಿ ನಡೆಸಿದ್ದರು. ಗೋವಿಂದನಿಗೆ ತನ್ನಿಬ್ಬರು ತಂಗಿಯರನ್ನು ಕಂಡರೆ ಅಪಾರ ಪ್ರೀತಿ. ತನಗಿಂತ ಕಿರಿಯವರಾದ ಅವರಿಬ್ಬರ ಶ್ರೇಯಸ್ಸಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದ. ತನ್ನ ಕೆಲಸದಲ್ಲಿ ಎಷ್ಟೇ ಕಷ್ಟಗಳು ಬಂದರೂ, ತನಗೆಷ್ಟೆ ಆಯಾಸವಾದರೂ ಯಾರೊಂದಿಗೆ ಹೇಳದೆ ತಂಗಿಯರಿಗಾಗಿ ಅದನ್ನೆಲ್ಲ ಮರೆಯುತ್ತಿದ್ದ. ತಮಗಾಗಿ ಅಣ್ಣ ದೂರದ ದೇಶಕ್ಕೆ ಹೋಗಿ ದುಡಿಯುತ್ತಿರುವುದು ಅವರಿಗೆ ಸ್ವಲ್ಪ ನೋವಿನ ವಿಚಾರವಾದರೂ ಅದು ಸಧ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿತ್ತು. ಪ್ರತಿ ಶುಕ್ರವಾರ ಅವನಿಗೆ ಫೋನ್ ಮಾಡಿ, ಅವನ ಕಷ್ಟ ಸುಖಗಳನ್ನು ವಿಚಾರಿಸಿ, ಅಮ್ಮನೊಂದಿಗೂ ಮಾತನಾಡಿಸುತ್ತಿದ್ದರು. ಅಲ್ಲಿ ಅವನ ಕೆಲಸದ ಒತ್ತಡಗಳನ್ನು ಮರೆತು ಉಲ್ಲಸಿತನಾಗಿರುವಂತೆ ಮಾಡುತ್ತಿದ್ದರು. ಅವನೊಡನೆ ಮಾತಾಡಿದಾಗಲೆಲ್ಲ ಅನುಸೂಯ ಸುಂದರ ಕನಸುಗಳಲ್ಲಿ ಜಾರುತ್ತಿದ್ದಳು.



ಇತ್ತ ದುಬೈನಲ್ಲಿ ಕೆಲಸಕ್ಕೆಂದು ಬಂದ ಗೋವಿಂದ, ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ತನ್ನ ನಿಯತ್ತಿನಿಂದ, ಸೌಮ್ಯ ಸ್ವಭಾವದಿಂದ ಎಲ್ಲರ ಮನ ಗೆದ್ದು, ವರ್ಷದಿಂದ ವರ್ಷಕ್ಕೆ ಉನ್ನತಿಗೇರಿ ಕೈತುಂಬಾ ಸಂಪಾದನೆ ಮಾಡುತ್ತಿದ್ದ. ತನ್ನ ದೈನಂದಿನ ಅವಶ್ಯಕತೆಗಳಿಗೆಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದ ಹಣವನ್ನು ಅಮ್ಮನಿಗೆ ಕಳುಹಿಸುತ್ತಿದ್ದ. ಒಂಟಿತನದಿಂದ ಬೇಸರವಾದಾಗ ದುಬೈನ ಜುಮೇರಾ ಬೀಚಿನ ಬಳಿ ಬಂದು ಸುಮ್ಮನೆ ಕಡಲನ್ನು ನೋಡುತ್ತಾ ಕುಳಿತು ಬಿಡುತ್ತಿದ್ದ. ಸೂರ್ಯಾಸ್ತದ ಸಮಯದಲ್ಲಿ, ಅಸ್ತಮಿಸುವ ಸೂರ್ಯ ಕಡಲ ನೀರನ್ನು ಕೆಂಪೇರಿಸಿ, ಕಡಲ ಹಕ್ಕಿಗಳ ಕಲರವದ ನಡುವೆ ಮರೆಯಾಗುವ ಸಮಯದಲ್ಲಿ ಅವನಿಗೆ ತನ್ನ ಒಂಟಿತನದ ಬೇಸರವೆಲ್ಲ ಮರೆತು ಹೋಗುತ್ತಿತ್ತು. ತಮ್ಮನ್ನು ಸಾಕಲು ಅಪ್ಪ ಸತ್ತ ನಂತರ ಅಮ್ಮ ಪಟ್ಟ ಕಷ್ಟಗಳೆಲ್ಲ ಅವನ ಕಣ್ಮುಂದೆ ಸುಳಿದು, ತಂಗಿಯರ ಭವಿಷ್ಯ ರೂಪಿಸಲು ತಾನು ದುಬೈಗೆ ಬಂದಾಗಿನಿಂದ ಕಟಿಬದ್ಧನಾಗಿ ನಿಂತಿದ್ದ. ತನ್ನ ಮೊದಲ ಮೂರು ವರ್ಷದ ಒಡಂಬಡಿಕೆ ಮುಗಿದ ನಂತರ ಒಮ್ಮೆ ಊರಿಗೆ ಹೋಗಿ ಒಂದು ತಿಂಗಳು ಇದ್ದು ಬಂದಿದ್ದ.



ಆಗ ಅಮ್ಮನಿಗೆ, ಮುದ್ದಿನ ತಂಗಿಯರಿಗೆ ಸಾಕಷ್ಟು ಬಟ್ಟೆ, ಚಿನ್ನದ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದ. ತಂಗಿಯರು ತಾನು ತಂದ ಹೊಸಬಟ್ಟೆ ತೊಟ್ಟು, ದುಬೈನ ಸುಗಂಧಗಳನ್ನು ಪೂಸಿಕೊಂಡು ನಲಿಯುವುದನ್ನು ನೋಡಿ ಸಂತೋಷಪಟ್ಟಿದ್ದ. ಪಕ್ಕದ ಮನೆಯ ಗೀತಮ್ಮ ಮತ್ತವರ ಮಗಳು ರೇಖಾಳಿಗೂ ಸಾಕಷ್ಟು ಬಟ್ಟೆ, ಸುಗಂಧಗಳು, ಚಾಕಲೇಟುಗಳನ್ನು ಕೊಂಡೊಯ್ದಿದ್ದ. ಪುಟ್ಟ ಬಾಲಕಿಯಾಗಿದ್ದ ಸಹಪಾಠಿ ರೇಖಾ ಹರೆಯಕ್ಕೆ ಕಾಲಿಟ್ಟು ನಿಂತಿದ್ದವಳ ಕಂಗಳಲ್ಲಿ ಅದೇನೋ ಸೆಳೆತ ಕಂಡು ಅವಳತ್ತ ವಾಲಿದ್ದ. ತಂಗಿಯರ ಜವಾಬ್ಧಾರಿ ಮುಗಿದ ನಂತರ ಅಮ್ಮನನ್ನು ಒಪ್ಪಿಸಿ ರೇಖಾಳನ್ನೇ ಬಾಳ ಸಂಗಾತಿ ಮಾಡಿಕೊಳ್ಳಬೇಕೆಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ. ಕನಸುಕಂಗಳ ರೇಖಾ ಮೌನವಾಗಿಯೇ ಅವನ ಪ್ರೀತಿಗೆ ತನ್ನ ಒಪ್ಪಿಗೆ ಸೂಚಿಸಿದ್ದಳು. ಕೊನೆಗೂ ಅನುಸೂಯಳ ಮದುವೆ ನಿಷ್ಕರ್ಶೆಯಾಗಿ ಇವನು ಹೊರಡುವ ದಿನ ಬಂದೇ ಬಿಟ್ಟಿತು.



ಕಂಪನಿಯಲ್ಲಿ ಒಂದು ತಿಂಗಳು ರಜಾ ಗಿಟ್ಟಿಸಿ ತಂಗಿಯ ಮದುವೆಗೆಂದು ಸಾಕಷ್ಟು ಖರೀದಿಗೆ ಹೊರಟ. ದುಬೈನ ಸುಂದರ ಮಾಲುಗಳಲ್ಲಿ ಕಣ್ಣಿಗೆ ಚಂದ ಕಂಡದ್ದನ್ನೆಲ್ಲ ಖರೀದಿಸಿ ಒಂದು ದೊಡ್ಡ ಡಬ್ಬದಲ್ಲಿ ತುಂಬಿ ಮುಂಚಿತವಾಗಿಯೇ ಕಾರ್ಗೋದಲ್ಲಿ ಕಳಿಸಿದ. ಮದುವೆಗಾಗಿ ಅಮ್ಮನಿಗೆ, ತಂಗಿಗೆ ದುಬೈನ "ಗೋಲ್ಡ್ ಸೂಕ್"ನಲ್ಲಿ ಸಾಕಷ್ಟು ಒಡವೆಗಳನ್ನು ಖರೀದಿಸಿ ಜೋಪಾನವಾಗಿ ತನ್ನ ಸೂಟ್ಕೇಸಿನಲ್ಲಿಟ್ಟ. ಹೊರಡುವ ದಿನ ಏರ್ಪೋರ್ಟಿಗೆ ಬಂದವನು ಊರಿಗೆ ಫೋನ್ ಮಾಡಿ ಅಮ್ಮನೊಡನೆ, ತಂಗಿಯರೊಡನೆ ಮಾತಾಡಿದ, ಅಮ್ಮನಿಗೆ "ಬೆಳಿಗ್ಗೆ ಆರೂವರೆಗೆಲ್ಲ ಮಂಗಳೂರಿನಲ್ಲಿ ಇಳಿಯುತ್ತೇನೆ, ಅಲ್ಲಿಂದ ಮನೆಗೆ ಕೇವಲ ಮುಕ್ಕಾಲು ಘಂಟೆಯ ದಾರಿ, ನಿನ್ನ ಕೈಯಿನ ದೋಸೆ, ಕಾಯಿ ಚಟ್ನಿ ತಿನ್ನಬೇಕಮ್ಮ" ಅಂದವನ ಮಾತು ಕೇಳಿ ಅತ್ತ ಕಡೆ ಕಾಂತಮ್ಮ "ಬಾರೋ ಮಗಾ, ನೀ ಬರಾದು ಹೆಚ್ಚಾ, ನಾ ನಿನಗೋಸ್ಕರ ದೋಸೆ ಮಾಡಿ ತಿನ್ಸೋದು ಹೆಚ್ಚಾ" ಎಂದು ಗಂಟಲುಬ್ಬಿ ಬಂದು ಬಿಕ್ಕಳಿಸಿದ್ದರು. ಮೂರು ವರ್ಷಗಳ ನಂತರ ಬರುತ್ತಿರುವ ಮಗನನ್ನು ನೋಡಲು ಆ ತಾಯಿ, ಅಣ್ಣನನ್ನು ನೋಡಲು ತಂಗಿಯರು ಕಾತುರರಾಗಿದ್ದರು. ಪ್ರಾಯಕ್ಕೆ ಬಂದು ತನ್ನ ಇನಿಯನ ಕನಸಿನಲ್ಲಿಯೇ ದಿನ ಕಳೆಯುತ್ತಿದ್ದ ರೇಖಾ ತನ್ನ ಭಾವನೆಗಳನ್ನು ಯಾರಿಗೂ ಹೇಳಿಕೊಳ್ಳಲಾಗದೆ ಪಕ್ಕದ ಮನೆಯಲ್ಲಿ ಕಾದು ಕುಳಿತಿದ್ದಳು.



ರಾತ್ರಿ ಕಳೆದು ಬೆಳಗಾಯಿತು, ಗೋವಿಂದನ ನಿರೀಕ್ಷೆಯಲ್ಲಿದ್ದವರಿಗೆ ನಿದ್ದೆ ಬಂದಿರಲಿಲ್ಲ, ಬೆಳಿಗ್ಗೆ ಬೇಗನೆ ಎದ್ದ ಕಾಂತಮ್ಮ ತನ್ನ ತಮ್ಮನ ಮಗ ನಾರಾಯಣನ ಜೊತೆ ರೇಖಾಳ ಅಣ್ಣ ಹರೀಶನನ್ನು ಮಂಗಳೂರಿನ ವಿಮಾನ ನಿಲ್ದಾಣಕ್ಕ "ಹುಶಾರಾಗಿ ಕಾರ್ ಓಡ್ಸು ಮಗಾ" ಅಂತ ಹತ್ತು ಬಾರಿ ಹೇಳಿ ಕಳುಹಿಸಿದಳು. ಬೆಳಿಗ್ಗೆ ಆರು ಘಂಟೆಗೆಲ್ಲ ವಿಮಾನ ನಿಲ್ದಾಣಕ್ಕೆ ಬಂದ ನಾರಾಯಣ ಮತ್ತು ಹರೀಶ ತಮ್ಮ ಕಾರನ್ನು ಪಾರ್ಕಿಂಗಿನಲ್ಲಿ ನಿಲ್ಲಿಸಿ ಅಲ್ಲೇ ಪಕ್ಕದಲ್ಲಿದ್ದ ಎತ್ತರದ ಕಲ್ಲೊಂದನ್ನು ಹತ್ತಿ, ಇಳಿಯುವ ಏರ್ ಎಂಡಿಯಾ ಎಕ್ಸಪ್ರೆಸ್ ವಿಮಾನದ ಚಿತ್ರಗಳನ್ನು ತೆಗೆಯಲು ತಮ್ಮ ಕ್ಯಾಮರಾ ಸಜ್ಜು ಮಾಡಿಕೊಂಡು ನಿಂತರು. ದುಬೈನಿಂದ ಬರಲಿರುವ ತಮ್ಮ ಬಂಧುಗಳನ್ನು ಇದಿರುಗೊಳ್ಳಲು ನಿಲ್ದಾಣದ ಹೊರಗೆ ನೂರಾರು ಜನ ಸೇರಿದ್ದರು, ಅವರೆಲ್ಲರ ಮಾತುಕತೆಗಳಿಂದ ಬೆಳಗಿನ ಪ್ರಶಾಂತ ವಾತಾವರಣದ ಚಿತ್ರಣವೇ ಬದಲಾಗಿ ಅದೊಂದು ದೊಡ್ಡ ಸಂತೆಯಂತೆ ಕಾಣುತ್ತಿತ್ತು.



ಆ ಕ್ಷಣ ಬಂದೇ ಬಿಟ್ಟಿತು, ಮೋಡ ಮುಸುಕಿದ ಆಗಸದಲ್ಲಿ ಮೋಡಗಳ ನಡುವಿನಿಂದ ಹಾರಿ ಬಂದ ಕೆಂಪು ಬಾಲದ ಬಿಳಿಯ ಲೋಹದ ಹಕ್ಕಿ ನಿಧಾನವಾಗಿ ನಿಲ್ದಾಣದತ್ತ ಇಳಿಯತೊಡಗಿತು. ಗೋವಿಂದ ಈ ಬಾರಿ ತಂಗಿಯ ಮದುವೆಗೆಂದು ಬರುತ್ತಿದ್ದಾನೆ, ಅವನು ಏನೆಲ್ಲಾ ತಂದಿರಬಹುದು, ತಮ್ಮಿಬ್ಬರಿಗೇ ಅವನು ಹೆಚ್ಚು ಬೆಲೆ ಬಾಳುವ ಉಡುಪುಗಳನ್ನೂ, ಸುಗಂಧದ್ರವ್ಯಗಳನ್ನೂ ಕೊಡಬೇಕೆಂದು ಅವರಿಬ್ಬರೂ ಚರ್ಚಿಸುತ್ತಿದ್ದರು. ಹಾಗೆ ಚರ್ಚಿಸುತ್ತಲೇ ಹತ್ತಾರು ಫೋಟೋಗಳನ್ನೂ ಕ್ಲಿಕ್ಕಿಸಿದ. ನಿಲ್ದಾಣದಲ್ಲಿಳಿದ ವಿಮಾನ ಇದ್ದಕ್ಕಿದ್ದಂತೆ ಕಾಣದಂತಾದಾಗ ಇನ್ನಷ್ಟು ಮೇಲೆ ಹಣುಕಿ ನೋಡಿದರೂ ಇವರಿಬ್ಬರಿಗೂ ಕಾಣುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಅಲ್ಲೊಂದು ಸಂಚಲನವೇ ಸೃಷ್ಟಿಯಾಯಿತು. ಇಳಿದ ವಿಮಾನ ಎಲ್ಲಿ ಹೋಯಿತೆಂದು ಅತ್ತಿತ್ತ ನೋಡುವುದರಲ್ಲಿಯೇ ಅಲ್ಲೊಂದು ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸುವ ಸ್ಫೋಟವುಂಟಾಯಿತು. ನಿಲ್ದಾಣದ ಹಿಂಭಾಗದಿಂದ ಒಮ್ಮೆಗೇ ಎದ್ದ ದಟ್ಟ ಹೊಗೆಯನ್ನು ಕಂಡು ನಾರಾಯಣ, ಹರೀಶರಿಬ್ಬರೂ ನಿಲ್ದಾಣದ ಮುಂಬಾಗಿಲಿನತ್ತ ಓಡಿದರು. ಅದಾಗಲೇ ನೂರಾರು ಮಂದಿ ಬಾಗಿಲಿನಲ್ಲಿ ಮುತ್ತಿಕೊಂಡು ಏನಾಯಿತೆಂದು ತಿಳಿಯಲು ಹಪಹಪಿಸುತ್ತ ನಿಲ್ದಾಣದ ಸಿಬ್ಬಂದಿಯೊಡನೆ ವಾಗ್ಯುದ್ಧಕ್ಕಿಳಿದಿದ್ದರು.



ದುಬೈನಿಂದ ಬಂದಿಳಿದ ಆ ನತದೃಷ್ಟ ವಿಮಾನ ಸ್ವಲ್ಪದರಲ್ಲಿ ರನ್ ವೇನಿಂದ ಜಾರಿ ಪ್ರಪಾತಕ್ಕೆ ಬಿದ್ದಿತ್ತು, ಉರಿಯುತ್ತಿದ್ದ ಆ ಘನಘೋರ ಬೆಂಕಿಯಲ್ಲಿ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಗಳಿರಲಿಲ್ಲ. ಅದುವರೆಗೂ ಬರುವವರ ನಿರೀಕ್ಷೆಯಲ್ಲಿ ಲವಲವಿಕೆಯಿಂದ ತುಂಬಿದ್ದ ನಿಲ್ದಾಣದ ಮುಂಭಾಗ ಕ್ಷಣಮಾತ್ರದಲ್ಲಿ ಸೂತಕದ ಮನೆಯಾಗಿ ಬದಲಾಗಿ ಹೋಗಿತ್ತು. ಹರ್ಷದ ಹೊನಲು ಹರಿಯಬೇಕಿದ್ದಲ್ಲಿ ಸಾವು ವಿಕಟಾಟ್ಟಹಾಸ ಮಾಡಿ ವಿಜೃಂಭಿಸಿತ್ತು. ಅನಿರೀಕ್ಷಿತವಾಗಿ ನಡೆದ ಅವಘಡದಲ್ಲಿ ತಮ್ಮವರ ಗತಿ ಏನಾಗಿದೆಯೆಂದು ತಿಳಿಯದೆ ಗೋಳಾಡುತ್ತಿದ್ದವರ ಮಧ್ಯೆ ನಾರಾಯಣ, ಹರೀಶ ದಿಕ್ಕು ತೋಚದಂತೆ ನಿಂತರು. ಬಹಳ ಸಮಯದ ಗೊಂದಲದ ನಂತರ ನಿಲ್ದಾಣದ ಅಧಿಕಾರಿಗಳು ಆ ವಿಮಾನದಲ್ಲಿ ಬಂದವರಲ್ಲಿ ಯಾರೂ ಉಳಿದಿಲ್ಲ, ಎಲ್ಲರೂ ಸುಟ್ಟು ಕರಕಲಾಗಿ ಹೋಗಿದ್ದಾರೆ, ಶವಗಳನ್ನೆಲ್ಲ ಆಸ್ಪತ್ರೆಗೆ ಕಳುಹಿಸಿದ್ದೇವೆ, ಎಲ್ಲರೂ ಆಸ್ಪತ್ರೆಯ ಹತ್ತಿರ ಹೋಗಿ ಎಂದು ಘೋಷಿಸಿದರು. ಅಲ್ಲಿಂದ ಎದ್ದೆವೋ ಬಿದ್ದೆವೋ ಎಂದು ಆಸ್ಪತ್ರೆಯ ಕಡೆಗೆ ದೌಡಾಯಿಸತೊಡಗಿದರು.



ಮೂರು ವರ್ಷದ ನಂತರ ಬಂದವನು ಹೀಗೆ ದುರ್ಮರಣಕ್ಕೀಡಾಗಬೇಕಿತ್ತೇ? ಅದೂ ತಂಗಿಯ ಮದುವೆಗೆ ಮುನ್ನ? ನಡೆಯಬೇಕಿದ್ದ ಅನುಸೂಯಳ ಮದುವೆಯನ್ನು ನೆನೆದು ನಾರಾಯಣನ ಕಣ್ಗಳು ಹನಿಗೂಡಿದವು. ಕಾತುರದಿಂದ ಗೋವಿಂದನಿಗಾಗಿ ಕಾಯುತ್ತಿದ್ದ ರೇಖಾಳನ್ನು ನೆನೆದು ಹರೀಶ ಕಂಬನಿ ಹರಿಸಿದ. ಮನೆಯಲ್ಲಿ ಅದಾಗಲೆ ಅವರಿವರಿಂದ ಮತ್ತು ಟಿವಿಯಲ್ಲಿ ಅಪಘಾತದ ಬಗ್ಗೆ ನೋಡಿದ್ದ ಕಾಂತಮ್ಮ ಎದೆಯೊಡೆದು ಕುಸಿದು ಬಿದ್ದಿದ್ದರು. ಎರಡು ಕುಟುಂಬಗಳ ಬೆಳಕು ಅಲ್ಲಿ ಆರಿ ಹೋಗಿತ್ತು.

No comments: