Sunday, May 2, 2010

ಅರಬ್ಬರ ನಾಡಿನಲ್ಲಿ............೧

ಅರಬ್ಬರ ನಾಡಿನಲ್ಲಿ ಸಾಕಷ್ಟು ಮೋಜಿನ ಪ್ರಸಂಗಗಳು ನಡೆಯುತ್ತವೆ. ನಮ್ಮ ಅನುಭವದಿಂದ ನಾವು ಇದು ತಪ್ಪು ಎಂದು ಹೇಳಿದರೆ ಕೇಳದೆ ಅವರದೇ ಆದ ದಾರಿಯಲ್ಲಿ ಹೋಗಿ ಬೇಸ್ತು ಬಿದ್ದು ಕೊನೆಗೆ ನಮ್ಮಂತೆ ಬರುತ್ತಾರೆ. ಆದರೆ ಅದೇನೋ ಒಂದು ರೀತಿಯ ಬಿಗುಮಾನ ಇದ್ದೇ ಇರುತ್ತದೆ. ಈ ಅನುಭವಗಳನ್ನು "ಅರಬ್ಬರ ನಾಡಿನಲ್ಲಿ" ಮಾಲಿಕೆಯಲ್ಲಿ ಹಂಚಿಕೊಳ್ಳಲಿದ್ದೇನೆ.

ಕನಸಿನ ಮನೆ ಕೊಳ್ಳುವ ಆತುರದಲ್ಲಿ ಕೇವಲ ೧೫ ದಿನ ರಜಾ ಗುಜರಾಯಿಸಿ ಬೆಂಗಳೂರಿಗೆ ಓಡಿದ್ದೆ. ಆದರೆ ಅಲ್ಲಿ ಬ್ಯಾಂಕಿನವರು ನನಗೆ ಮಾಡಿದ ಕಿರಿಕಿರಿಯಿಂದ ಸುಮಾರು ಒಂದು ತಿಂಗಳು ನನ್ನ ರಜಾ ಮುಂದುವರೆಸಬೇಕಾಯಿತು. ಕೊನೆಗೆ ಆ ಕನಸಿನ ಮನೆ ಕೊಳ್ಳಲು "ಗೃಹಸಾಲ" ಸಿಗದೆ "ಗೃಹಭಂಗ"ವಾಗಿ ನಿರಾಸೆಯಿಂದ ದುಬೈಗೆ ಹಿಂತಿರುಗಿ ಬಂದೆ. ಶನಿವಾರ ರಾತ್ರಿಯೆಲ್ಲಾ ನಿದ್ದೆಗೆಟ್ಟು ಬಂದರೆ ಮರುದಿನವೇ ದುಬೈನಿಂದ ಅಬುಧಾಬಿಗೆ ಹೋಗಬೇಕು, ಕೇಂದ್ರ ಕಛೇರಿಯಲ್ಲಿ ಎಂಡಿಯವರಿಂದ ಮಾನವ ಸಂಪನ್ಮೂಲದವರೆಗೆ ಎಲ್ಲರಿಗೂ ಸಾಕಷ್ಟು ಸಮಜಾಯಿಷಿ ಕೊಡಬೇಕಿತ್ತು. ಹಾಗಾಗಿ ಮಲ್ಯರ ಕಿಂಗ್ಫಿಷರ್ನಲ್ಲಿ ಶನಿವಾರ ರಾತ್ರಿಯೇ ಬಂದು ದುಬೈನಲ್ಲಿಳಿದೆ. ಒಂದೂವರೆ ತಿಂಗಳು ಕಛೇರಿಯ ಕಟ್ಟಡದ ಬೇಸ್ಮೆಂಟಿನಲ್ಲಿ ಧೂಳು ಹಿಡಿದು ನಿಂತಿದ್ದ ನನ್ನ "ಟೊಯೋಟಾ ಕ್ಯಾಮ್ರಿ"ಯನ್ನು ನನ್ನ ಶಿಷ್ಯ ಅಶೋಕನ್ ಸರ್ವೀಸ್ ಮಾಡಿಸಿ ನಿಲ್ಲಿಸಿದ್ದ. ಒಂದು ಘಂಟೆ ದುಬೈನ ಕಛೇರಿಯಲ್ಲಿ ಕಳೆದು ಅಬುಧಾಬಿಗೆ ಹೋಗಲು ಕಾರು ಹತ್ತಿದೆ, ೧೨೦ರಲ್ಲಿ ಓಡಿದ ನನ್ನ ಕ್ಯಾಮ್ರಿ ಆಗಾಗ ಬೆಂಗಳೂರಿನ ರಸ್ತೆಗಳಲ್ಲಿ ನಾನು ಅಯ್ ೧೦ ಓಡಿಸಿದಂತೆ ಬಲಕ್ಕೆ ಎಡಕ್ಕೆ ಹೋಗುತ್ತಲೇ ೧೭೦ ಕಿ.ಮೀ.ದೂರವನ್ನು ಒಂದೂವರೆ ಘಂಟೆಯಲ್ಲಿ ಕ್ರಮಿಸಿದ್ದೆ. ಕೇಂದ್ರ ಕಛೇರಿಯಲ್ಲಿ ಆತ್ಮೀಯ ಸ್ವಾಗತವೇ ಕಾದಿತ್ತು. ಮಲ್ಲೇಶ್ವರಂನ ಆಡ್ಯಾರ್ ಕೃಷ್ಣ ಭವನದ ತುಪ್ಪ ಸುರಿಯುವ "ಮೈಸೂರ್ ಪಾಕು" ಎಲ್ಲರ ನಾಲಿಗೆಗೂ ಚೆನ್ನಾಗಿಯೇ ರುಚಿ ಹತ್ತಿಸಿ ಒಂದು ತಿಂಗಳು ಅಧಿಕ ರಜೆ ಪಡೆದ "ಪಾಪ"ವನ್ನು ತೊಡೆದು ಹಾಕಿತ್ತು. ನೆಮ್ಮದಿಯಿಂದ ಮತ್ತೆ ದುಬೈಗೆ ಹಿಂತಿರುಗಿ ಬಂದು ಎರಡು ಪೆಗ್ ಬ್ಲಾಕ್ ಲೇಬಲ್ ಏರಿಸಿ ಮಲಗಿಬಿಟ್ಟೆ.

ಮರುದಿನ ಸೋಮವಾರ, ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ಧರ್ಮಸ್ಥಳದವನನ್ನೊಮ್ಮೆ ನೆನೆದು ಮನೆಯಿಂದ ಹೊರಟವನು ದುಬೈ, ಶಾರ್ಜಾ, ಅಜ್ಮಾನ್ ನಗರಗಳನ್ನು ಒಂದು ಪ್ರದಕ್ಷಿಣೆ ಹೊಡೆದು ನಮ್ಮ ಭದ್ರತಾ ರಕ್ಷಕರನ್ನು ನಿಯೋಜಿಸಿದ್ದ ಪ್ರತಿಯೊಂದು ಪ್ರದೇಶಕ್ಕೂ ಭೇಟಿ ಕೊಟ್ಟು ಕುಶಲೋಪರಿ ವಿಚಾರಿಸಿ, ಶಾರ್ಜಾದಲ್ಲಿನ ಪೊಲೀಸ್ ಕಛೇರಿಯಲ್ಲಿ ಒಂದು ಸಲಾಂ ಅಲೇಕುಮ್ ಹೊಡೆದು ಎಲ್ಲೂ ಏನೂ ಹೆಚ್ಚು ಕಡಿಮೆಯಾಗಿಲ್ಲ, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆಯೆಂದು ಖಾತ್ರಿಪಡಿಸಿಕೊಂಡು ನನ್ನ ಕಾರನ್ನು ದುಬೈನತ್ತ ತಿರುಗಿಸಿದೆ. ಆಗ ಬಂತು ಎಂಡಿಯವರ ಫೋನ್, "ಹಾಯ್ ಮಂಜು ಐ ಹ್ಯಾವ್ ಎ ಪ್ರಾಬ್ಲಮ್, ಯು ಹ್ಯಾವ್ ಟು ಸಾಲ್ವ್ ಇಟ್" ಎಂದು ತನ್ನ ಬ್ರಿಟಿಷ್ ಇಂಗ್ಲೀಷಿನಲ್ಲಿ ಹೇಳಿದಾಗ" ಯೆಸ್, ಟೆಲ್ ಮಿ ಪ್ಲೀಸ್, ಐಯಾಮ್ ವಿತ್ ಯು" ಅಂದೆ. ಆಗ ಅವರು ಹೇಳಿದರು, ಅಲೇಯ್ನ್ ಶಾಖೆಯಲ್ಲಿನ ಮೇನೇಜರ್ ಈಜಿಪ್ಟಿಗೆ ಹೋದ, ನೀನು ಅಲ್ಲಿನ ಜವಾಬ್ಧಾರಿಯನ್ನೂ ನಿರ್ವಹಿಸಬೇಕು ಎಂದವರಿಗೆ ಸರಿಯೆಂದೆ. ಮರುದಿನ ಮಂಗಳವಾರ ದುಬೈನಿಂದ ಅಲೇಯ್ನಿಗೆ ನನ್ನ ಪ್ರಯಾಣ, ಸುಮಾರು ೧೫೦ ಕಿ.ಮೀ.ದೂರ, ಅಲ್ಲಿ ಹೋಗಿ ನೋಡಿದರೆ ಅಲ್ಲಿದ್ದ ಮೇನೇಜರ್ ಆ ಶಾಖೆಯನ್ನು ಕುಲ ಕರ್ಮವೆಲ್ಲ ಹೊಲಸೆಬ್ಬಿಸಿ ಇಟ್ಟಿದ್ದ. ಪುಣ್ಯಾತ್ಮ, ಸರಿಯಾಗಿ ಕುಡಿದು ಕಾರ್ ಓಡಿಸಿ ಅಪಘಾತ ಮಾಡಿ ಪೊಲೀಸರ ಅತಿಥಿಯಾಗಿದ್ದ. ಈ ದೇಶದ ಕಾನೂನು ತುಂಬಾ ಕಠಿಣ. ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದರೆ ಆರು ತಿಂಗಳವರೆಗೆ ಜೈಲು ವಾಸ ಮತ್ತು ಇಲ್ಲಿಂದ ಶಾಶ್ವತ ಎತ್ತಂಗಡಿ,. ಮತ್ತೆ ಜನ್ಮದಲ್ಲಿ ಈ ಕಡೆ ತಲೆ ಹಾಕುವಂತೆಯೇ ಇಲ್ಲ. ಎಲ್ಲವನ್ನೂ ಸರಿ ಮಾಡುತ್ತಾ ಪ್ರತಿ ದಿನ ೩೦೦ ಕಿ.ಮೀ. ಹೋಗಿ ಬಂದು ಮಾಡುವುದರಲ್ಲಿ ನನ್ನ ಬೆನ್ನ ಮೂಳೆಗಳೆಲ್ಲ ನೆಟ್ಟಗಾದವು. ಈಗಾಗಲೆ ನಾನು ದುಬೈ, ಶಾರ್ಜಾ, ಅಜ್ಮಾನ್, ರಸಲ್ ಖಾಯ್ಮಾ, ಫ್ಯುಜೇರಾ ನಗರಗಳ ಜವಾಬ್ಧಾರಿ ಹೊತ್ತು ಸಾಕಷ್ಟು ಓಡಾಡುತ್ತಿದ್ದೆ. ಅದರ ಜೊತೆಗೆ ಈಗ ಇನ್ನೊಂದು ನಗರದ ಹೊಸ ಜವಾಬ್ಧಾರಿಯೂ ಸೇರಿಕೊಂಡಿತ್ತು. ಕೇವಲ ೫ ದಿನಗಳಲ್ಲಿ ನನ್ನ ಕಾರು ೨ ಸಾವಿರ ಕಿ.ಮೀ. ಓಡಿತ್ತು. ಅಲೇಯ್ನ್ ನಗರದಲ್ಲಿನ ಅರಬ್ಬರ ಜೊತೆ ತುಸು ಹಿಂದಿ, ತುಸು ಇಂಗ್ಲೀಷ್, ತುಸು ಅರಬ್ಬಿಯಲ್ಲಿ ಮಾತಾಡುತ್ತಾ ನನ್ನ ಕೆಲಸವನ್ನು ಸುಗಮಗೊಳಿಸಿಕೊಂಡು ಎಲ್ಲವನ್ನೂ ಸರಿ ಮಾಡುತ್ತಾ ಬಂದೆ. ಸುಮಾರು ೭೦೦ ಜನ ಭದ್ರತಾ ರಕ್ಷಕರು ಈ ಸಣ್ಣ ನಗರದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಕೆಲಸ ಮಾಡುತ್ತಾರೆ.

ನಮ್ಮ ಸಂಸ್ಥೆಯ ಮಾಲೀಕರು, ಇಲ್ಲಿನ ಅರಬ್ಬರು, ಅವರಿಗೆ ಅಲೇಯ್ನ್ ನಗರದ ನಮ್ಮ ಶಾಖೆಯಲ್ಲಿ ಒಬ್ಬ ಅರಬ್ಬಿ, ಅದರಲ್ಲೂ ಮುಸ್ಲಿಮನೇ ಮೇನೇಜರ್ ಆಗಿರಬೇಕೆಂದು ತುಂಬಾ ಖಯಾಲಿಯಿತ್ತು. ಅದಕ್ಕಾಗಿ ಅವರು ಅಲ್ಲಿ ಇಲ್ಲಿ ಪ್ರಯತ್ನಿಸಿ ಕೊನೆಗೆ ಎರಡು ವರ್ಷಗಳ ಹಿಂದೆ ನಮ್ಮ ಕಂಪನಿ ಬಿಟ್ಟು ಹೋಗಿದ್ದ ಯೆಮೆನಿ ಅರಬ್ಬಿಯೊಬ್ಬನನ್ನು ಹಿಡಿದು ತಂದು ಅಲ್ಲಿಗೆ ಮೇನೇಜರ್ ಎಂದು ನಿಯುಕ್ತಿಗೊಳಿಸಿದರು. ನಾನು ಮತ್ತೆ ದುಬೈಗೆ ವಾಪಸ್ಸಾದೆ. ಮೊನ್ನೆ ಬುಧವಾರ ಅಬುಧಾಬಿಯ ಕೇಂದ್ರ ಕಛೇರಿಯಲ್ಲಿ ಎಲ್ಲರೂ ಮೀಟಿಂಗಿಗಾಗಿ ಸೇರಿ ಅವನಿಗಾಗಿ ಎದುರು ನೋಡುತ್ತಿದ್ದೆವು. ಅಗೋ ಬಂದ, ಇಗೋ ಬಂದ ಎಂದು ಎಲ್ಲರೂ ಅವನ ದಾರಿ ಕಾಯುತ್ತಿದ್ದರು. ಆದರೆ ಅವನು ಬರಲಿಲ್ಲ. ಕೊನೆಗೆ ಸಂಜೆ ಆರು ಘಂಟೆಗೆ ಬಂದ ಸುದ್ಧಿ ಆಘಾತಕಾರಿಯಾಗಿತ್ತು. ನಮ್ಮಲ್ಲಿಗೆ ಬರುವ ಮುಂಚೆ ಅವನು ಇನ್ನೊಂದು ಕಂಪನಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದ್ದನಂತೆ, ಅಲ್ಲಿ ಅವನಿಗೆ ೧೬ ಸಾವಿರ ದಿರ್ಹಾಂ ಸಂಬಳ ಕೊಡುವುದಾಗಿ ಹೇಳಿದ್ದರಂತೆ, ಆದರೆ ನಮ್ಮ ಪೆದ್ದು ಮಾಲೀಕ ಅವನಿಗೆ ೨೦ ಸಾವಿರ ದಿರ್ಹಾಂ ಕೊಟ್ಟು ಕರೆ ತಂದಿದ್ದ. ಇದು ಗೊತ್ತಾಗಿ ಆ ಕಂಪನಿಯವರು ಅವನಿಗೆ ೨೫ ಸಾವಿರ ದಿರ್ಹಾಂ ಕೊಟ್ಟು ತಮ್ಮಲ್ಲಿಗೆ ಮತ್ತೆ ಸೆಳೆದುಕೊಂಡಿದ್ದರು. ಈ ದಿರ್ಹಾಂಗಳ ಆಟದಲ್ಲಿ ಅವನು ಗೆದ್ದಿದ್ದ, ನಮ್ಮ ಮಾಲೀಕರು ಸೋತಿದ್ದರು, ಜೊತೆಗೆ ಸಾಕಷ್ಟು ಅವಮಾನ ಹಾಗೂ ಅಭಿಮಾನ ಭಂಗವೂ ಆಯಿತೆನ್ನಿ. ಇಷ್ಟಾದರೂ ಆ ಜಾಗಕ್ಕೆ ಸಾಕಷ್ಟು ಯೋಗ್ಯ ಭಾರತೀಯ ಅಭ್ಯರ್ಥಿಗಳಿದ್ದರೂ ಸಹ ಅವರಿಗೆ ನೀಡದೆ ಮತ್ತೊಬ್ಬ ಅರಬ್ಬಿಯನ್ನು ಹುಡುಕುತ್ತಿದ್ದಾರೆ. ಇದು ಇಲ್ಲಿನ ಕ್ರೂರ ವ್ಯಂಗ್ಯ. ಮಾಡಿದ ತಪ್ಪಿನಿಂದ ಬುದ್ಧಿ ಕಲಿಯದೆ ಮತ್ತೆ ಮತ್ತೆ ಎಡವಿ ಹಳ್ಳಕ್ಕೆ ಬೀಳುವವರಿಗೆ ಏನನ್ನಬೇಕೋ ತಿಳಿಯುತ್ತಿಲ್ಲ. ಆದರೆ ನಾನು ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನನ್ನ ಪಾಡಿಗೆ ನಾನು ದುಬೈನಲ್ಲಿ ಕುಳಿತು ಇವರ ಎಡವಟ್ಟುಗಳನ್ನು ನೋಡಿ ನಗುತ್ತಿದ್ದೇನೆ.

No comments: