Monday, May 10, 2010

ಅರಬ್ಬರ ನಾಡಿನಲ್ಲಿ - ೨, "ಇಂಗು ತಿಂದ ಮಂಗ".

ನಾನು ಕೆಲಸಕ್ಕೆಂದು ಬಂದ ಹೊಸತರಲ್ಲಿ ಅರಬ್ಬಿ ಭಾಷೆಯ ಅರಿವಿಲ್ಲದೆ ಭಾರೀ ಪೇಚಾಟದ ಪ್ರಸಂಗಗಳು ನಡೆದವು. ಆದರೆ ನನ್ನ ತುಂಟ ಮನಸ್ಸಿನೊಂದಿಗೆ ಆ ಪ್ರಸಂಗಗಳನ್ನು ಬಹಳ ಚೆನ್ನಾಗಿಯೇ ಆಸ್ವಾದಿಸಿದ್ದೆ. ಅದರಲ್ಲೊಂದು ಇಂತಿದೆ, ದುಬೈನಲ್ಲಿ ಭಾರತೀಯರು ಹೆಚ್ಚಾಗಿರುವಂತೆ ರಾಜಧಾನಿಯಾದ ಅಬುಧಾಬಿ ನಗರದಲ್ಲಿ ಈಜಿಪ್ಟಿನವರು ಹೆಚ್ಚಾಗಿದ್ದಾರೆ. ಅಬುಧಾಬಿಯ ಅರಸರಿಗೆ ಅರಬ್ಬಿ ಮಾತಾಡುವವರೆಂದರೆ ತುಂಬಾ ಅಚ್ಚುಮೆಚ್ಚು, ಹಾಗಾಗಿ ಅಲ್ಲಿ ಭಾರತೀಯರು ಎರಡು ಅಥವಾ ಮೂರನೆಯ ಸ್ಥಾನಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ನನ್ನನ್ನು ದುಬೈಗೆ ಶಾಖಾ ವ್ಯವಸ್ಥಾಪಕನನ್ನಾಗಿ ಆಯ್ಕೆ ಮಾಡಿದ್ದರೂ ಸಹಾ ಸುಮಾರು ಒಂದೂವರೆ ವರ್ಷ ಅಬುಧಾಬಿಯಲ್ಲೇ ಉಳಿಸಿಕೊಂಡಿದ್ದರು, ಅಲ್ಲಿ ಒಬ್ಬ ಯೆಮೆನಿ ಅರಬ್ ಮುಖ್ಯ ವ್ಯವಸ್ಥಾಪಕನಾಗಿದ್ದ, ಅವನಿಗೆ ನಮ್ಮ ಭದ್ರತಾ ವಿಭಾಗದ ವ್ಯವಹಾರಗಳ ಬಗ್ಗೆ ಅಷ್ಟೊಂದು ಅನುಭವವಿರಲಿಲ್ಲ. ಅವನು ಆಂಗ್ಲ ಭಾಷೆಯಲ್ಲಿ ಮಾತಾಡಿದರೆ ಅರಬ್ಬಿಯಲ್ಲಿ ಮಾತನಾಡಿದಂತೆ ಭಾಸವಾಗುತ್ತಿತ್ತು. ಏಷ್ಯಾ ಮೂಲದ ಇತರ ಸಂಸ್ಥೆಗಳ ವ್ಯವಸ್ಥಾಪಕರೊಡನೆ ಮಾತಾಡಲು ಬಹಳ ಪ್ರಯಾಸ ಪಡುತ್ತಿದ್ದ. ಆದರೆ ಅರಬ್ಬಿಯಲ್ಲಿ ಸಂಸ್ಥೆಯ ಮಾಲಿಕರೊಡನೆ ಮಾತಾಡುತ್ತಾ ಹೇಗೋ ಸಂಭಾಳಿಸಿಕೊಂಡು ಹೋಗುತ್ತಿದ್ದ. ನಾನು ಈ ಸಂಸ್ಥೆಗೆ ಬಂದಾಗ ಅವನಿಗೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಷ್ಟು ಸಂತೋಷವಾಗಿ ನನ್ನನ್ನು ದುಬೈಗೆ ಕಳುಹಿಸುವುದಕ್ಕಿಂತ ಅಬುಧಾಬಿಯಲ್ಲಿ ಅವನಿಗೆ ಸಹಾಯಕನಾಗಿ ಇಟ್ಟುಕೊಳ್ಳಬೇಕೆಂದು ಸಂಸ್ಥೆಯ ಮಾಲೀಕರಿಗೆ ದುಂಬಾಲು ಬಿದ್ದ. ಕೊನೆಗೆ ಮಾಲೀಕರ ಮಾತಿಗೆ ಮನ್ನಣೆ ನೀಡಿ, ಬೆಂಗಳೂರಿನಲ್ಲಿ ದೊಡ್ಡ ಸಂಸ್ಥೆಯಲ್ಲಿ ಸುಮಾರು ೫೦ ಜನರ ತಂಡಕ್ಕೆ ಮುಖ್ಯ ವ್ಯವಸ್ಥಾಪಕನಾಗಿ ಕೆಲಸ ಮಾಡಿದ್ದರೂ ಸಹಾ, ಅವನಿಗೆ ಸಹಾಯಕನಾಗಿರಲು ಒಪ್ಪಿದೆ. ಯಾವ ಕೆಲಸ ಮಾಡಿದರೇನು, ಹಣ ಮುಖ್ಯವಲ್ಲವೇ ?

ನಂತರ ಶುರುವಾಯಿತು ನೋಡಿ, ಅವನೊಡನೆ ನನ್ನ ಪೇಚಾಟಗಳ ಸರಮಾಲೆ, ಅವನು ತನಗೆ ತೋಚಿದಂತೆ ಅದೇನನ್ನೋ ಅರಬ್ಬಿಯಲ್ಲಿ ಹೇಳಿ ಅದನ್ನು ತಕ್ಷಣ ಮಾಡಿ ಮುಗಿಸಬೇಕೆನ್ನುತ್ತಿದ್ದ, ನಾನು ಮತ್ತೆ ಅದಕ್ಕೆ ಆಂಗ್ಲಭಾಷೆಯಲ್ಲಿ ಸ್ಪಷ್ಟೀಕರಣ ಕೇಳಿದರೆ ಮತ್ತೇನೋ ಹೇಳಿ ಬಿಡುತ್ತಿದ್ದ! ನಾನು ಹೇಳಿದ್ದನ್ನು ಕೇಳಿ ಅರ್ಥ ಮಾಡಿಕೊಳ್ಳುವುದಕ್ಕಿಂತ ಮುಂಚೆಯೇ ಮಾತನ್ನು ಅರ್ಧದಲ್ಲಿಯೇ ತುಂಡರಿಸಿ "ಖಲಾಸ್, ಓಕೆ, ಓಕೆ" ಅಂದು ಬಿಡುತ್ತಿದ್ದ. "ಆಯಿತು, ಮುಗಿಯಿತು" ಅನ್ನುವುದರ ಸಮಾನಾರ್ಥಕ ಅರಬ್ಬಿ ಪದ ಈ "ಖಲಾಸ್". ಮತ್ತೇನಾದರೂ ಹೇಳಿದರೆ "ಖಲ್ಲಿವಲ್ಲಿ, ಐ ಡೋಂಟ್ ಕೇರ್" ಅನ್ನುತ್ತಿದ್ದ. ಅವನು ಹಾಗೆ "ಖಲ್ಲಿವಲ್ಲಿ" ಅಂದಾಗೆಲ್ಲ ನಾನು ಗೋಡೆಯ ಮೇಲೆ ನೋಡುತ್ತಿದ್ದೆ, ಆದರೆ ಅಲ್ಲಿ ಯಾವ "ಹಲ್ಲಿ"ಯೂ ಇರುತ್ತಿರಲಿಲ್ಲ! "ಪರವಾಗಿಲ್ಲ ಅಥವಾ ಏನೂ ಆಗೋದಿಲ್ಲ" ಅನ್ನುವುದರ ಸಮಾನಾರ್ಥಕವಾಗಿ ಅರಬ್ಬಿಯಲ್ಲಿ ಈ ಪದ ಬಳಸುತ್ತಾರೆ. ಮತ್ತೆ ಯಾವುದೇ ಮಾತನ್ನು ಮುಗಿಸಬೇಕಾದರೂ ತಪ್ಪದೆ "ಮಾಫಿ ಮುಷ್ಕಿಲ್" ಅನ್ನುತ್ತಿದ್ದ. ಅರ್ಧ ಘಂಟೆ ಅವನೊಡನೆ ಮಾತಾಡಿದರೆ ಕನಿಷ್ಠ ೨೦ ಸಲವಾದರೂ ಈ "ಖಲಾಸ್-ಖಲ್ಲಿವಲ್ಲಿ-ಮಾಫಿ ಮುಷ್ಕಿಲ್" ಅನ್ನುವ ಪದಗಳನ್ನು ಉಪಯೋಗಿಸುತ್ತಿದ್ದ!! ಮೊದ ಮೊದಲು ಈ ಪದಗಳ ಅರ್ಥ ತಿಳಿಯದೆ ಸಾಕಷ್ಟು ಸಲ ನಾನು ಬೇಸ್ತು ಬಿದ್ದದ್ದುಂಟು. ಕೊನೆಗೆ ಆಂಗ್ಲ-ಅರಬ್ಬಿ ಅನುವಾದದ ಪುಸ್ತಕವನ್ನು ಕೊಂಡು ಅಭ್ಯಾಸ ಮಾಡಲಾರಂಭಿಸಿದೆ. ನಮ್ಮ ಭದ್ರತಾ ರಕ್ಷಕರು ಕೆಲಸ ಮಾಡುತ್ತಿದ್ದ ಇತರ ಸಂಸ್ಥಗಳಿಂದ ಬರುತ್ತಿದ್ದ ಅಸಂಖ್ಯಾತ ಮಿಂಚಂಚೆಗಳಿಗೆ ಅವನು ಉತ್ತರಿಸುವ ಗೋಜಿಗೇ ಹೋಗುತ್ತಿರಲಿಲ್ಲ! ಏಕೆಂದರೆ ಅವನಿಗೆ ಆಂಗ್ಲಭಾಷೆಯಲ್ಲಿ ಉತ್ತರಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಅವನಿಗೆ ಬರುತ್ತಿದ್ದ ಮಿಂಚಂಚೆಗಳಿಗೆಲ್ಲ ಉತ್ತರಿಸುವ ಜವಾಬ್ಧಾರಿ ನನಗೆ ವಹಿಸಿದ. ಎಲ್ಲೆಲ್ಲಿ ಅರಬ್ಬಿ ಭಾಷೆ ಬರದ ಜನರೊಡನೆ ವ್ಯವಹರಿಸಬೇಕೋ ಅಲ್ಲಿಗೆಲ್ಲ ನನ್ನನ್ನು ಕಳುಹಿಸತೊಡಗಿದ. ಹೀಗಾಗಿ ಅಬುಧಾಬಿಯಲ್ಲಿನ ಬಹುತೇಕ ಸಂಸ್ಥಗಳ ಮುಖ್ಯಸ್ಥರ ಜೊತೆ ನನ್ನ ಪರಿಚಯ ಶುರುವಾಯಿತು.

ಅಬುಧಾಬಿಯ ಸುಪ್ರಸಿದ್ಧ ಮರೀನಾ ಮಾಲಿನ ಭದ್ರತೆಯ ಗುತ್ತಿಗೆ ನಮ್ಮ ಸಂಸ್ಥೆಗೆ ಸಿಕ್ಕಿತ್ತು. ಅಲ್ಲಿ ನಮ್ಮ ಸಂಸ್ಥೆಯ ವತಿಯಿಂದ ೧೨೦ ಜನ ಭದ್ರತಾ ರಕ್ಷಕರನ್ನು ನಿಯೋಜಿಸಿದ್ದೆವು. ಅವರಿಗೆ ಆಕಸ್ಮಾತ್ ಬೆಂಕಿ ಬಿದ್ದಲ್ಲಿ ಅದನ್ನು ಹೇಗೆ ನಂದಿಸಬೇಕು, ಮಾಲಿಗೆ ಬರುವ ಗ್ರಾಹಕರ ರಕ್ಷಣೆಗೆ ಯಾವ್ಯಾವ ರಿತಿಯಲ್ಲಿ ಮುಂಜಾಗರೂಕತೆ ವಹಿಸಬೇಕು, ಯಾವುದೇ ರೀತಿಯ ತುರ್ತು ಪರಿಸ್ಥಿತಿಗಳಲ್ಲಿ ಒಬ್ಬ ಭದ್ರತಾ ರಕ್ಷಕ, ವಿಚಲಿತನಾಗದೆ ಸಮಚಿತ್ತದಿಂದ ಹೇಗೆ ಕಾರ್ಯ ನಿರ್ವಹಿಸಬೇಕು ಅನ್ನುವುದರ ಬಗ್ಗೆ ಒಂದು ತರಬೇತಿ ಕಾರ್ಯಕ್ರಮ ಏರ್ಪಡಿಸಿದ್ದೆವು. ಸುಮಾರು ಎರಡು ದಶಕಗಳಿಂದ ಇದೇ ವೃತ್ತಿಯಲ್ಲಿದ್ದು ಸಾವಿರಾರು ಜನ ಭದ್ರತಾ ರಕ್ಷಕರಿಗೆ ತರಬೇತಿ ನೀಡಿ, ಅದೆಷ್ಟೋ ತುರ್ತು ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ನನಗೆ ಇದೇನೂ ಹೊಸದಾಗಿರಲಿಲ್ಲ. ನನ್ನ ಲ್ಯಾಪ್ಟಾಪಿನಲ್ಲಿ ಸುರಕ್ಷಿತವಾಗಿದ್ದ ತರಬೇತಿಯ ವಿಧಾನಗಳನ್ನು ಮತ್ತೊಮ್ಮೆ ಅವಲೋಕಿಸಿ ನಾನು ಸಂಪೂರ್ಣ ಸಿದ್ಧನಾಗಿದ್ದೆ. ಮರೀನಾ ಮಾಲಿನ ಮುಖ್ಯ ಪದಾಧಿಕಾರಿಗಳೊಂದಿಗೆ ಅಬುಧಾಬಿಯ ಪೊಲೀಸ್ ಇಲಾಖೆಯ ಮೇಜರ್ ಅಬ್ದುಲ್ಲಾ ಬೇರೆ ಬರುವುದಾಗಿ ಹೇಳಿದ್ದರು. ಆದರೆ ನಮ್ಮ ಯೆಮೆನಿ ಪುಣ್ಯಾತ್ಮ, ಇದೇ ಮೊದಲ ಬಾರಿ ಅಂತಹ ತರಬೇತಿಗೆಂದು ಬಂದಿದ್ದ, ಜೊತೆಗೆ ಅವನೇ ಮುಖ್ಯಸ್ಥನೂ ಆಗಿದ್ದುದರಿಂದ ಸಣ್ಣಗೆ ಬೆವರಲಾರಂಭಿಸಿದ. ಅನುಭವದ ಕೊರತೆ ಅವನನ್ನು ಕಾಡುತ್ತಿತ್ತು. ನಾನೆಷ್ಟೇ ಧೈರ್ಯ ಹೇಳಿದರೂ "ಮಾಫಿ ಮುಷ್ಕಿಲ್" ಅನ್ನುತ್ತಲೇ ನಡುಗುತ್ತಿದ್ದ. ಕೊನೆಗೆ ತರಬೇತಿ ಪ್ರಾರಂಭವಾಗಿ ನನ್ನ ಪ್ರವಚನ ಭಾಗವನ್ನು ಅತ್ಯುತ್ತಮ ಸ್ಲೈಡ್ ಶೋ ಜೊತೆಗೆ. ಏಷ್ಯನ್ನರೇ ಅಧಿಕವಾಗಿದ್ದ ಭದ್ರತಾ ತಂಡಕ್ಕೆ ಹಿಂದಿ, ಆಂಗ್ಲ, ತಮಿಳು, ಮಲೆಯಾಳಂ, ಕನ್ನಡ, ಹೀಗೆ ಅವರವರದೇ ಭಾಷೆಯಲ್ಲಿ ಮನ ಮುಟ್ಟುವಂತೆ ವಿವರಿಸಿ ಯಶಸ್ವಿಯಾಗಿ ಮುಗಿಸಿದೆ. ಎಲ್ಲರಿಗೂ ಬಹು ಉಪಯೋಗಿಯಾದ ಮಾಹಿತಿಪೂರ್ಣ ತರಬೇತಿ ಕಾರ್ಯಕ್ರಮಕ್ಕಾಗಿ ಎಲ್ಲರಿಂದ ಅಭಿನಂದನೆಗಳ ಸುರಿಮಳೆ. ಆದರೆ ನಮ್ಮ ಯೆಮೆನಿಯ ಮುಖದಲ್ಲಿ ಅದೇನೋ ಕಂಡೂ ಕಾಣದ ಗಾಭರಿ ಮನೆ ಮಾಡಿತ್ತು.

ಕೊನೆಗೆ ಪ್ರಾಯೋಗಿಕವಾಗಿ ಬೆಂಕಿ ಆರಿಸುವ ಸಾಧನಗಳನ್ನು ಉಪಯೋಗಿಸಲು ಎಲ್ಲ ಭದ್ರತಾ ರಕ್ಷಕರನ್ನು ಮಾಲಿನ ಕೆಳ ಮಹಡಿಗೆ ಕರೆತಂದು ಸಣ್ಣ ಪ್ರಮಾಣದ ಬೆಂಕಿಯನ್ನು ಹತ್ತಿಸಿ, ಒಂದೊಂದು ತಂಡದಿಂದ ಒಬ್ಬೊಬ್ಬರನ್ನು ಮುಂದೆ ಕರೆದು ಉಪಯೋಗಿಸುವ ರೀತಿಯನ್ನು ತೋರಿಸಿ, ಅವರಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿದ್ದೆವು. ಈ ಕಾರ್ಯಕ್ರಮವೆಲ್ಲಾ ಸಂಸ್ಥೆಯ ಮುಖ್ಯಸ್ಥರಿಗೆ ತೋರಿಸುವ ಸಲುವಾಗಿ ವಿಡಿಯೋ ರೆಕಾರ್ಡಿಂಗ್ ಆಗುತ್ತಿತ್ತು. ಈ ಮಧ್ಯೆ ಒಬ್ಬ ಮಲೆಯಾಳಿ ಭದ್ರತಾ ರಕ್ಷಕ ನಮ್ಮ ಯೆಮೆನಿಯನ್ನು ಹೋಗಿ ಆಂಗ್ಲಭಾಷೆಯಲ್ಲಿ ಅದೇನೋ ಕೇಳಿದ್ದಾನೆ, ಏನು ಕೇಳಿದನೆಂದು ಅರ್ಥವಾಗದಿದ್ದರೂ ಅವನು "ಮಾಫಿ ಮುಷ್ಕಿಲ್, ಗೋ ಅಹೆಡ್" ಅಂದಿದ್ದಾನೆ. ಅವನು ಸೀದಾ ಹೋದವನೆ ಅಲ್ಲೊಂದು ಮೂಲೆಯಲ್ಲಿ ಕೆಂಪು ಡಬ್ಬದಲ್ಲಿ ಸುತ್ತಿಟ್ಟಿದ್ದ ಫೈರ್ ಹೈಡ್ರಾಂಟ್ ಹೋಸ್ ಪೈಪನ್ನು ಎಳೆದು ತಂದು ಅದರ ಮೂತಿಗೆ ನಾಝಲ್ ಸಿಕ್ಕಿಸಿ, ಯಾರಿಗೂ ಕೇಳದೆ ದೊಡ್ಡ ಹೀರೋವಿನಂತೆ ಫೋಸ್ ಕೊಡುತ್ತಾ ಅದರ ಲಿವರ್ ತಿರುವಿದ್ದಾನೆ. ಅದನ್ನು ಹೇಗೆ ಉಪಯೋಗಿಸಬೇಕೆನ್ನುವುದರ ಬಗ್ಗೆ ನಾವಿನ್ನೂ ತರಬೇತಿ ಕೊಟ್ಟೇ ಇರಲಿಲ್ಲ! ಅತ್ಯಧಿಕ ಒತ್ತಡದೊಂದಿಗೆ ಒಮ್ಮೆಗೇ ನುಗ್ಗಿ ಬಂದ ನೀರು ಆ ಹೋಸ್ ಪೈಪನ್ನು ಅಕ್ಷರಶಃ ರಾಕೆಟ್ಟಿನಂತೆ ಹಾರಿಸಿತ್ತು! ಪೈಪ್ ಹಿಡಿದಿದ್ದ ಮಲೆಯಾಳಿಯ ಮುಖದ ಗಲ್ಲದ ಭಾಗ ಚಿಂದಿಯಾಗಿತ್ತು, ಸೀದಾ ನುಗ್ಗಿ ಬಂದ ಪೈಪ್, ನಮ್ಮ ಯೆಮೆನಿಯ ಬೆನ್ನಿಗೆ ಬಲವಾಗಿ ಗುದ್ದಿತ್ತು!! ಆಕಸ್ಮಾತ್, ಅದೇನಾದರೂ ಅವನ ದೇಹದ ಮುಂಭಾಗಕ್ಕೆ ಬಡಿದಿದ್ದರೆ ಅವನ ಕಥೆ ಹರೋ ಹರ ಆಗಿಬಿಡುತ್ತಿತ್ತು. ಕೊನೆಗೆ ಪ್ರಥಮ ಚಿಕಿತ್ಸೆ ನೀಡಿ, ಆ ಮಲಯಾಳಿಗೆ ಏಕೆ ಹಾಗೆ ಮಾಡಿದ್ದು ಎಂದು ಕೇಳಿದರೆ ಅವನು ನಮ್ಮ ಯೆಮೆನಿಯನ್ನು ತೋರಿಸಿ ಅವರು ಓಕೆ ಅಂದರು, ಅದಕ್ಕೇ ಮಾಡಿದೆ ಎಂದಾಗ ನಮ್ಮ ಯೆಮೆನಿ ಮುಖ್ಯಸ್ಥ "ಇಂಗು ತಿಂದ ಮಂಗ"ನಂತೆ ಮುಖ ಮಾಡಿ ನಿಂತಿದ್ದ. ಈ ಅವಘಡದ ಹೊರತಾಗಿಯೂ ನಮ್ಮ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿತ್ತು. ಇಂಥ ಅದೆಷ್ಟೋ ಪ್ರಸಂಗಗಳು ನಡೆದಿವೆ, ಮುಂದಿನ ಭಾಗಗಳಲ್ಲಿ ಬರೆಯುತ್ತೇನೆ.

No comments: