Friday, April 30, 2010

ಮನೆ ಕೊಂಡು ನೋಡಿ, ಬೆಂಗಳೂರಿನಲ್ಲಿ!!!

ಮನೆ ಕೊಳ್ಳಲೇಬೇಕೆಂಬ ಖುಷಿಯಲ್ಲಿ ಅಥವಾ ಹಠದಲ್ಲಿ(!) ನಾನು ೧೫ ದಿನ ರಜಾ ಗುಜರಾಯಿಸಿ ದುಬೈನಿಂದ ಬೆಂಗಳೂರಿಗೆ ಹೊರಟೆ. ಹೋಗುವ ಮುನ್ನಾ ದಿನ(ಫೆಬ್ರವರಿ ೧೭ರಂದು) ಆಕ್ಸಿಸ್ ಬ್ಯಾಂಕಿನ ಎಕ್ಸಿಕ್ಯುಟಿವ್ ಜೊತೆ ಮೊಬೈಲ್ನಲ್ಲಿ ಮಾತಾಡಿದ್ದೆ. ಅವನು, ವಾದಿರಾಜ ಭಟ್(೯೮೪೪೨೪೧೪೭೫೦), ಬೆಳಗಾಂನವನು, ಹೇಳಿಬಿಟ್ಟ, ದೊಡ್ಡ ಬೃಹಸ್ಪತಿಯಂತೆ, "ಸಾರ್, ನಿಮ್ಮ ಸಂಬಳದ ವಿವರಗಳನ್ನು ತೆಗೆದುಕೊಂಡು ಬನ್ನಿ, ಕೇವಲ ಹನ್ನೆರಡು ದಿನಗಳಲ್ಲಿ ನಿಮ್ಮ ಲೋನ್ ಸ್ಯಾಂಕ್ಷನ್ ಆಗಿ ಬಿಡುತ್ತದೆ, ನೀವು ಮನೆಯ ರಿಜಿಸ್ಟ್ರೇಷನ್ ಮುಗಿಸಿಕೊಂಡು ಹದಿನೈದನೆ ದಿನ ದುಬೈಗೆ ವಾಪಸ್ ಹೋಗಬಹುದು", ಅವನ ಈ ಮಾತುಗಳನ್ನು ಕೇಳಿ ನಾನು ನನ್ನದೇ ಆದ ಕಲ್ಪನಾ ಲೋಕದಲ್ಲಿ ಮುಳುಗೆದ್ದು ೧೫ ದಿನ ರಜಕ್ಕೆ ಅರ್ಜಿ ಗುಜರಾಯಿಸಿ, ಹೊರಟೇ ಬಿಟ್ಟೆ ಬೆಂಗಳೂರಿಗೆ, ಫೆಬ್ರವರಿ ೧೮ರಂದು. ಬೆಂಗಳೂರಿಗೆ ತಲುಪಿದ ನಂತರ ಒಂದು ದಿನವನ್ನೂ ವ್ಯರ್ಥ ಮಾಡದೆ ಮನೆಯನ್ನು ನೋಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವನ್ನೂ ಬ್ಯಾಂಕಿಗೆ ಒದಗಿಸಿ ನನ್ನ "ಹೋಂಲೋನ್" ಸಿಕ್ಕಿಬಿಡುತ್ತದೆನ್ನುವ ಕಾತುರದಲ್ಲಿ ಕಾಯುತ್ತಿದ್ದೆ. ಕೇವಲ ೫೦ ರೂಪಾಯಿಗಳನ್ನು ಜೇಬಿನಲ್ಲಿಟ್ಟುಕೊಂಡು ಅಪ್ಪನೊಡನೆ ಜಗಳಾಡಿ, ಜೊತೆಗೆ ನನ್ನ "ಮೀನಾ"ಳ ಪ್ರೇಮ ನಿರಾಕರಣೆಯ ಕಹಿ ನೆನಪಿನಲ್ಲಿ, ಬರೀ ಕೈನಲ್ಲಿ ಬೆಂಗಳೂರಿಗೆ ಬಂದು ನನ್ನ ಭವಿಷ್ಯ ರೂಪಿಸಿಕೊಳ್ಳುವೆನೆಂಬ ಭರವಸೆಯಲ್ಲಿ ಬದುಕುತ್ತಿದ್ದ ನನಗೆ ಆ ನನ್ನ ಕನಸಿನ ಬೆಂಗಳೂರು ಕೊಟ್ಟಿದ್ದು ಬರೀ ನೋವು, ದುಃಖ, ನಿರಾಶೆ ಹೊರತಲ್ಲದೆ ಬೇರೇನಿಲ್ಲ. ಈಗ ದೇಶ ಬಿಟ್ಟು ಹೊರ ಬಂದು ತಿಂಗಳಿಗೆ ಒಂದೂವರೆ ಲಕ್ಷ ದುಡಿಯುತ್ತಿದ್ದೇನೆ, ಖಂಡಿತ ನನ್ನದೇ ಆದ ಒಂದು ಕನಸಿನ ಮನೆಯನ್ನು ಕೊಂಡು ನಾನು ನನ್ನ ಹೆಂಡತಿ ಮಕ್ಕಳೊಡನೆ ನೆಮ್ಮದಿಯಾಗಿ ಬದುಕಬಹುದು ಅನ್ನುವ ಸುಂದರ ಕನಸಿನೊಡನೆ ಮನೆ ಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದೆ. ಆದರೆ ವಿಧಿ ಅಲ್ಲಿ ವಿಕಟಾಟ್ಟಹಾಸ ಮಾಡಿ ನಕ್ಕಿತ್ತು. ವಿಧಿಗಿಂತ ಹೆಚ್ಚಾಗಿ ನಮ್ಮ ಭಾರತದ ವ್ಯವಸ್ಥೆ ಅಂದರೆ ಸರಿ ಅನ್ನಿಸುತ್ತದೆ! ಅದೆಷ್ಟೋ ನಿರಾಸೆಗಳ ನೆನಪು ಹೊತ್ತು ಬದುಕುತ್ತಿರುವ ನನಗೆ ಮತ್ತೊಮ್ಮೆ ನೆನಪಿಸಿತ್ತು, "ನೀನು ಬದುಕಬೇಕಿರುವುದು ಕೇವಲ ನಿರಾಸೆಗಳ ಜೊತೆಗೆ"!!

ಮಾರ್ಚ್ ೧೩ರಂದು ಇದೇ ವಾದಿರಾಜ ಆಕ್ಸಿಸ್ ಬ್ಯಾಂಕಿನಿಂದ "ಸ್ಯಾಂಕ್ಷನ್ ಲೆಟರ್" ತರುವೆನೆಂಬ ಭರವಸೆ ಕೊಟ್ಟಿದ್ದ, ಆದರೆ ಮಾರ್ಚ್ ೧೨ರಂದೇ ಅವನು ನಮ್ಮ ಮನೆಗೆ ಬಂದು "ಡಿಕ್ಲೈನ್ ಲೆಟರ್" ಕೊಟ್ಟ. ಕಾರಣ, ನಾನು ಈ ಮೊದಲು ತೆಗೆದುಕೊಂಡಿದ್ದ ಕಾರ್ ಲೋನ್ ಸುಮಾರು ಒಂಭತ್ತು ತಿಂಗಳು "ಚೆಕ್ ಬೌನ್ಸ್" ಆಗಿತ್ತಂತೆ, ಅದರಿಂದ ನನಗೆ ಹೋಮ್ ಲೋನ್ ಕೊಡಲು ಸಾಧ್ಯವಿಲ್ಲವಂತೆ. ಈ ಕಾರಣವನ್ನು ಕೇಳಿ ನನಗೆ ತುಂಬಾ ಆಶ್ಚರ್ಯವಾಯಿತು. ಏಕೆಂದರೆ ನಾನು ಕಾರ್ ಲೋನ್ ತೆಗೆದುಕೊಂಡಾಗ ಅವರ ಅರ್ಜಿಯಲ್ಲಿ ಕೊಟ್ಟಿದ್ದ ಎರಡನೆ ಆಯ್ಕೆಯನ್ನು ಸೂಚಿಸಿ ನನ್ನ ಕಾರ್ ಲೋನ್ ಇ.ಎಮ್.ಅಯ್. ಏನಿದ್ದರೂ ಪ್ರತಿ ತಿಂಗಳೂ ೧೦ನೆ ತಾರೀಖಿನ ನಂತರವೇ ತೆಗೆದುಕೊಳ್ಳಬೇಕು ಎಂದು ಧೃಡೀಕರಿಸಿದ್ದೆ. ಆದರೆ ಸನ್ಮಾನ್ಯ ಆಕ್ಸಿಸ್ ಬ್ಯಾಂಕ್ ಮಹಾಶಯರು ಪ್ರತಿ ತಿಂಗಳೂ ಒಂದನೆ ತಾರೀಖಿನಂದೇ ನನ್ನ ಕಾರ್ ಲೋನಿನ ಚೆಕ್ಕನ್ನು ನನ್ನ ಅಕೌಂಟಿಗೆ ಹಾಕಿ, ಅದು ಬೌನ್ಸ್ ಆಗಿ, ಮತ್ತೆ ಅವರು ೫-೬ ನೆ ತಾರೀಖಿನಂದು ಅದೇ ಚೆಕ್ಕನ್ನು ಹಾಕಿ ತಿಂಗಳಿಗೆ ೫೫೦ರೂ. ಪೆನಾಲ್ಟಿಯ ಜೊತೆಯಲ್ಲಿ ನನ್ನ ಕಾರ್ ಲೋನಿನ ಇ.ಎಮ್.ಅಯ್. ಜಮಾ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿಯನ್ನು ನೀಡುವ ಕನಿಷ್ಠ ಗೌರವವನ್ನೂ ಅವರು ತೋರಿಲ್ಲ. ಇದು ನನಗೆ "ಹೋಮ್ ಲೋನ್" ಗೆ ಅರ್ಜಿ ಹಾಕುವವರೆಗೂ ಗೊತ್ತೇ ಆಗಿಲ್ಲ! ಯಾವಾಗ ನನ್ನ ಅರ್ಜಿ "ಡಿಕ್ಲೈನ್" ಅಂತ ಬಂದಿತೋ, ಆಗ ನಾನು ಅದರ ಬೆನ್ನು ಹತ್ತಿದೆ, ಕಾರಣವೇನೆಂದು ಶೋಧಿಸಿದಾಗ ತಿಳಿದದ್ದು, ಇದು ಬ್ಯಾಂಕಿನವರ ಅತಿ ಬುದ್ಧವಂತಿಕೆ ಎಂದು. ಕೊನೆಗೆ ಆ ಕಾರ್ ಲೋನ್ ಗೆ ಸಂಬಂಧಿಸಿದ ಮುಖ್ಯ ವ್ಯವಸ್ಥಾಪಕನನ್ನೂ (ಅವನೊಬ್ಬ ತಮಿಳ) ಅವರ ಕೋರಮಂಗಲದ ಕಛೇರಿಯಲ್ಲಿ ಭೇಟಿಯಾಗಿ ಚರ್ಚಿಸಿದಾಗ ಅವನು ಹೇಳಿದ್ದು ಇಷ್ಟೇ, " ನಮ್ಮ ಬ್ಯಾಂಕಿನಲ್ಲಿ ಕಾರ್ ಲೋನ್ ಇ.ಎಮ್.ಅಯ್ ಯಾವಾಗಲೂ ನಾವು ಕ್ಲೈಮ್ ಮಾಡುವುದು ೧ನೆ ತಾರೀಖಿನಂದು ಮಾತ್ರ, ೧೦ನೆ ತಾರೀಖಿನ ನಂತರ ಯಾವುದೇ ಆಯ್ಕೆ ಇಲ್ಲ, ಹಾಗಾಗಿ ನೀವು ಡಿಫಾಲ್ಟರ್ ಆಗಿರುವುದರಿಂದ ನಿಮಗೆ ಹೋಮ್ ಲೋನ್ ಕೊಡಲು ಬರುವುದಿಲ್ಲ" ಇದನ್ನು ಕೇಳಿ ನನಗೆ ಅಡಿಯಿಂದ ಮುಡಿಯವರೆಗೂ ಉರಿದು ಹೋಗಿ ಅವನಿಗೆ ಎರಡು ಬಾರಿಸುವುದು ಮಾತ್ರ ಬಾಕಿಯಿತ್ತು, ಆಕಸ್ಮಾತ್, ಅಂದು ನನ್ನ ಶ್ರೀಮತಿ ನನ್ನ ಹೊತೆ ಇರದೆ ಇದ್ದಿದ್ದಲ್ಲಿ ಅವನಿಗೆ ಹಿಗ್ಗಾ ಮುಗ್ಗಾ ಥಳಿಸಿ ಬಿಡುತ್ತಿದ್ದನೇನೋ!

ನಾವು ನಮ್ಮ ಅರ್ಜಿಯಲ್ಲಿ ಇರುವ ಮೂರು ಆಯ್ಕೆಗಳಲ್ಲಿ ಎರಡನೆಯದನ್ನು ಆಯ್ಕೆ ಮಾಡಿ, ತಿಂಗಳಿನ ಎರಡನೆ ವಾರದಲ್ಲಿ ನಿಮ್ಮ ಕಂತನ್ನು ನಮ್ಮ ಸಂಬಳದ ಲೆಕ್ಕದಲ್ಲಿ ಜಮಾ ಮಾಡಿಕೊಳ್ಳಿ ಎಂದು ಬರೆದು ಕೊಟ್ಟರೂ ಸಹಾ ಪ್ರತಿ ತಿಂಗಳೂ ೧ನೆ ತಾರೀಖಿನಂದೆ ಚೆಕ್ಕನ್ನು ಅಕೌಂಟಿಗೆ ಹಾಕಿ ಅದನ್ನು ಪ್ರಯತ್ನಪೂರ್ವಕ "ಬೌನ್ಸ್" ಮಾಡಿ, ೫೫೦ ರೂ. ಪೆನಾಲ್ಟಿಯನ್ನೂ ವಸೂಲಿ ಮಾಡಿ, ಈಗ ನನ್ನ ಕನಸಿನ ಮನೆಯ ಲೋನಿಗೂ ಕಲ್ಲು ಹಾಕಿ, ಅಟ್ಟಹಾಸ ಮಾಡುತ್ತಿರುವ ಬೆಂಗಳೂರಿನ "ಆಕ್ಸಿಸ್ ಬ್ಯಾಂಕ್" ನವರಿಗೆ ಏನನ್ನೋಣ ? ಆಕಸ್ಮಾತ್ ನಾನು ಬೆಂಗಳೂರಿನಲ್ಲೇ ಇದ್ದಿದ್ದರೆ ಯಾರ ಸಹಾಯವಿಲ್ಲದೆ ಅವರನ್ನು ಹಿಗ್ಗಾಮುಗ್ಗಾ ಥಳಿಸಿ, (ಅಲ್ಲಿರುವ ಬಹುತೇಕ ಕೆಲಸಗಾರರು ಕನ್ನಡೇತರರು, ಅದರಲ್ಲೂ ತಮಿಳರು) ಸರಿಯಾದ ಪಾಠ ಕಲಿಸಿ ಬಿಡುತ್ತಿದ್ದೆ. ಆದರೆ, ಸಂಸಾರದ ಜವಾಬ್ಧಾರಿ ಹೆಗಲ ಮೇಲಿರುವುದರಿಂದ ಸುಮ್ಮನೆ ನಿರಾಸೆಯೊಂದಿಗೆ ದುಬೈಗೆ ಹಿಂತಿರುಗಬೇಕಾಯಿತು. ಕನ್ನಡೇತರರೇ ಹೆಚ್ಚಾಗಿರುವ ಈ "ಆಕ್ಸಿಸ್ ಬ್ಯಾಂಕ್’ ಸಿಬ್ಬಂದಿಗಳಿಗೆ ಬೆಂಗಳೂರಿನಲ್ಲಿ ಬುದ್ಧಿ ಕಲಿಸುವರ್ಯಾರು? ಇನ್ನೆಷ್ಟು ನನ್ನಂಥವರು ಇವರ ದುರಾಸೆಗೆ ಬಲಿಯಾಗಬೇಕು? ನಮ್ಮೂರಿನಲ್ಲಿ ನಮಗೇ ಮೋಸ!! ಇದಕ್ಕೆ ಕೊನೆಯಂದು ?? ಇದರಿಂದ ನನಗೆ ಆದ ನಷ್ಟ ಸುಮಾರು ಆರು ಲಕ್ಷ ರೂಪಾಯಿಗಳು. ಯಾರು ಕಟ್ಟಿಕೊಡುತ್ತಾರೆ ???

No comments: