Monday, March 7, 2016

ಭದ್ರತೆಯ ಲೋಕದಲ್ಲಿ - ೧೫. ಕನ್ನಡಿಗರಿಗೇ ಮುಳುವಾದ ಕನ್ನಡಿಗ!


.
;;
 
ಪ್ರಾಥಮಿಕ ಶಾಲೆಯಿಂದಲೂ ಕನ್ನಡ ಮಾಧ್ಯಮದಲ್ಲಿಯೇ ಓದಿದ ನನಗೆ ಕನ್ನಡ ಭಾಷೆಯೆಂದರೆ ಯಾವಾಗಲೂ ಅಚ್ಚುಮೆಚ್ಚು.  ಉದ್ಯೋಗದ ನಿಮಿತ್ತ  ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ಅಡ್ಡಾಡಿದರೂ, ಈಗ ದುಬೈಗೆ ಬಂದು ನೆಲೆಸಿದ್ದರೂ, ರಸ್ತೆಯಲ್ಲಿ ನಡೆದು ಹೋಗುವಾಗಲೋ, ಯಾವುದೋ ಶಾಪಿಂಗ್ ಮಾಲಿನಲ್ಲೋ, ಮತ್ತಾವುದೋ ಹೋಟೆಲ್ಲಿನಲ್ಲೋ ಯಾರಾದರೂ ಕನ್ನಡದಲ್ಲಿ ಮಾತನಾಡುತ್ತಿದ್ದರೆ ಅಚಾನಕ್ಕಾಗಿ ಕಣ್ಣು ಅತ್ತ ಹೊರಳುತ್ತವೆ, ಕಿವಿಗಳು ಅವರ ಮಾತುಗಳನ್ನು ಕೇಳುತ್ತಿರುತ್ತವೆ, ಮನಸ್ಸು ಅವರೊಡನೆ ಮಾತಾಡಲು ಪ್ರೇರೇಪಿಸುತ್ತದೆ. 

ಅಂಥಾ ಕನ್ನಡಾಭಿಮಾನಿಯಾದ ನನಗೆ ಮಲೆಯಾಳಿಗಳೇ ಹೆಚ್ಚಾಗಿದ್ದ ಒಂದು ಸಂಸ್ಥೆಯಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುವಾಗ ನನಗೆ ತುಂಬಾ ಆತ್ಮೀಯನಾಗಿದ್ದವನು ನನ್ನದೇ ಹೆಸರಿನ ಒಬ್ಬ ಆಡಳಿತಾಧಿಕಾರಿ, ಜೊತೆಗೆ ಅವನು ಹುಟ್ಟಿದ್ದೂ ಸಹ ಮೈಸೂರಿನಲ್ಲೇ!  ಸ್ವಾಭಾವಿಕವಾಗಿಯೇ ಅವನು ನನಗೆ ಆತ್ಮೀಯನಾಗಿಬಿಟ್ಟಿದ್ದ, ಜೊತೆಯಲ್ಲಿಯೇ ಕಛೇರಿಯ ತಾರಸಿಯ ಮೇಲಿದ್ದ ಉಪಾಹಾರಗೃಹದಲ್ಲಿ ಕಾಫಿ ಕುಡಿಯುತ್ತಿದ್ದೆವು, ಊಟ ಮಾಡುತ್ತಿದ್ದೆವು,  ಸೋಮವಾರದ ಮಧ್ಯಾಹ್ನ ನಾನು ಮನೆಯಿಂದ ತೆಗೆದುಕೊಂಡು ಹೊಗುತ್ತಿದ ಸಾಂಬಾರಿಗೆ ಅವನು ಯಾವಾಗಲೂ ಪಾಲುದಾರನಾಗಿರುತ್ತಿದ್ದ!  ಏಕೆಂದರೆ ಅಂದು ನನ್ನ ಊಟದ ಡಬ್ಬಿಯಲ್ಲಿ ಕೇವಲ ಸಸ್ಯಾಹಾರಿ ಸಾಂಬಾರು ಇರುತ್ತಿತ್ತು, ಬ್ರಾಹ್ಮಣನಾದ ಅವನಿಗೆ ಗೌಡರ ಮನೆಯ ನಾಲಿಗೆ ಚುರ್ರೆನ್ನಿಸುವ ಖಾರದ ಬಸ್ಸಾರು, ಮಸ್ಸೊಪ್ಪು, ಮಸಾಲೆ ಸಾರು ಅಂದರೆ ತುಂಬಾ ಇಷ್ಟವಾಗಿತ್ತು. 

ನಮ್ಮ ಉದ್ಯಾನ ನಗರಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಿಂದ ಕೇವಲ ಕೂಗಳತೆ ದೂರದಲ್ಲಿದ್ದ ಆ ಸಂಸ್ಥೆಯ ಕಚೇರಿಯಲ್ಲಿ ಏನಿಲ್ಲವೆಂದರೂ ಸುಮಾರು ಐದು ನೂರು ಜನ ತಂತ್ರಜ್ಞರು ಕೆಲಸ ಮಾಡುತ್ತಿದ್ದರು.   ಸಾಕಷ್ಟು ಬೆಲೆಬಾಳುವ ಯಂತ್ರೋಪಕರಣಗಳಿಂದ ಕೂಡಿದ್ದ ಆ ಸಂಸ್ಥೆಯಲ್ಲಿ ಸ್ವತಃ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಹಲವಾರು ಖಾಸಗಿ ಸಂಸ್ಥೆಗಳ ತಂತ್ರಜ್ಞರಿಗೆ ತರಬೇತಿಯನ್ನು ನೀಡುತ್ತಿದ್ದರು.  ಹೀಗಾಗಿ ಪ್ರತಿದಿನ ಸಂಸ್ಥೆಗೆ ಬಂದು ಹೋಗುವವರ ಸಂಖ್ಯೆ ಗಣನೀಯವಾಗಿತ್ತು.  ಉತ್ತಮ ನಿಯಂತ್ರಣಕ್ಕಾಗಿ ಸುಮಾರು ಇಪ್ಪತ್ತು ಜನರ ಭದ್ರತಾ ತಂಡವಿತ್ತು, ಅವರಲ್ಲಿ ಹೆಚ್ಚಿನವರು ಕನ್ನಡಿಗರಾಗಿದ್ದರು, ಉಸ್ತುವಾರಿಯಾಗಿ ನಾನಿದ್ದೆ!  ಹೀಗಿರುವಲ್ಲಿ ನಮ್ಮ ಭದ್ರತಾ ರಕ್ಷಕರ ತಂಡದ ವಿರುದ್ಧ  ನನ್ನೊಡನೆ ಚೆನ್ನಾಗಿಯೇ ಇದ್ದ ಮಂಜುನಾಥನ ಕಡೆಯಿಂದ  ದೂರುಗಳು ಬರಲಾರಂಭಿಸಿದವು.  ಆರಂಭದಲ್ಲಿ ಅವನ ದೂರುಗಳನ್ನು ಕೇಳಿ ಒಂದಿಬ್ಬರು ಭದ್ರತಾ ರಕ್ಷಕರನ್ನು ಬದಲಾಯಿಸಿ ಅವನನ್ನು ತೃಪ್ತಿಗೊಳಿಸಿದ್ದೆ,  ಆದರೆ ಕ್ರಮೇಣ ಅವನ ದೂರುಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ನಾನು ಸ್ವಲ್ಪ ಜಾಗೃತನಾಗತೊಡಗಿದ್ದೆ. 

ಅವನ ದೂರುಗಳ ಬಗ್ಗೆ ನಮ್ಮ ತಂಡದಲ್ಲಿದ್ದ ಭದ್ರತಾ ರಕ್ಷಕರೊಡನೆ ಚರ್ಚಿಸಿದಾಗ ನನಗೆ ತಿಳಿಯದಿದ್ದ ಅನೇಕ ಕುತೂಹಲಕರ ವಿಷಯಗಳು ತಿಳಿದು ಬಂದಿದ್ದವು.  ನನ್ನೊಡನೆ ಮೃದುವಾಗಿ ಮಾತನಾಡುತ್ತಾ  ಸ್ನೇಹದಿಂದಿದ್ದ ಮೈಸೂರಿನ ಮಂಜುನಾಥ ಅದೊಂದು ರೀತಿಯ ಕೀಳರಿಮೆಯಿಂದ ಬಳಲುತ್ತಿದ್ದ.  ತನಗಿಂತಲೂ ಹೆಚ್ಚು ಸಂಬಳ ಪಡೆಯುತ್ತಿದ್ದ ತಂತ್ರಜ್ಞರ ಮುಂದೆ ಕೇವಲ ಬಿ.ಎ. ಪದವೀಧರನಾಗಿದ್ದ ಅವನು ಆತ್ಮವಿಶ್ವಾಸದಿಂದ  ಮಾತನಾಡಲು ತಡವರಿಸುತ್ತಿದ್ದ.  ಹೆಚ್ಚಿನ ಸಂದರ್ಭಗಳಲ್ಲಿ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ  ಮಾಡಲಾಗದೆ ಅವರಿಂದ ಮೂದಲಿಕೆಗೊಳಗಾಗುತ್ತಿದ್ದ, ಅವನಿಗೆ ಕೋಪ ಬಂದರೂ ಅವರ ಮೇಲೆ ತೋರಿಸಲಾಗದೆ ಮನಸ್ಸಿನಲ್ಲೇ ಇಟ್ಟುಕೊಂಡು ಅದೇ ಕೋಪ ಹಾಗೂ ಅಸಮಾಧಾನವನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಭದ್ರತಾ ರಕ್ಷಕರ ಮೇಲೆ ಹರಿಹಾಯ್ದು ತೋರ್ಪಡಿಸುತ್ತಿದ್ದ.  ಇವನ ಅಸಮಾಧಾನಕ್ಕೆ ಬಲಿಯಾಗಿ  ಹಲವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ರಕ್ಷಕರು ಹಾಗೂ ಸ್ವಚ್ಛತಾ ಸಂಸ್ಥೆಯ ನೌಕರರು ಅಲ್ಲಿಂದ ಎತ್ತಂಗಡಿಯಾಗಿದ್ದರು.  ಅವನ ಸ್ನೇಹಕ್ಕೆ ಕಟ್ಟು ಬಿದ್ದಿದ್ದ ನನಗೆ ಈ ನಿಜಾಂಶ ಅರ್ಥವಾಗುವುದರಲ್ಲಿ ಸಾಕಷ್ಟು ವಿಳಂಬವಾಗಿತ್ತು.  ಎಚ್ಚೆತ್ತುಕೊಂಡ ನಾನು  ಅವನ ದೂರುಗಳಿಗೆ ಬೆಲೆ ಕೊಡದೆ, ಯಾವುದೇ ಭದ್ರತಾ ರಕ್ಷಕರನ್ನು ಅಲ್ಲಿಂದ ಬದಲಿಸದೆ ಸ್ಥಿತಪ್ರಜ್ಞನಂತೆ ವರ್ತಿಸತೊಡಗಿದೆ. 

ಅದೇ ಸಮಯದಲ್ಲಿ ಅವನಿಗೆ ಸಹಾಯಕಿಯಾಗಿ ಚೆಂದುಳ್ಳಿ ಚೆಲುವೆಯೊಬ್ಬಳು ಸಂಸ್ಥೆಗೆ ಸೇರಿಕೊಂಡಳು.  ಅವನ ದೂರುಗಳಿಗೆ ನಾನು ತೋರುತ್ತಿದ್ದ ಅಸಡ್ಡೆಯಿಂದಾಗಿ ನನ್ನೊಡನೆ ಮಾತು ಕಡಿಮೆ ಮಾಡಿದ್ದ ಮಂಜುನಾಥ ಈಗ ಆ ಹೊಸ ಚೆಲುವೆಯ ಕಣ್ಣೋಟದಲ್ಲಿ ಸೆರೆಯಾಗಿ ಹೋಗಿದ್ದ.  ಯಾವಾಗಲೂ ಒಂಭತ್ತು ಘಂಟೆಗೆ ಐದು ನಿಮಿಷ ಮುಂಚೆ ಕಛೇರಿಗೆ ಬರುತ್ತಿದ್ದವನು ಈಗ ಎಂಟೂವರೆಗೆಲ್ಲಾ ಕಚೇರಿಗೆ ಬರಲು ಆರಂಭಿಸಿದ್ದ,  ಕಛೇರಿಯ ಶುಚಿತ್ವದ ಹೊಣೆ ಹೊತ್ತಿದ್ದ ಆ ಸುಂದರಿ ಬೆಳಿಗ್ಗೆ ಎಂಟು ಘಂಟೆಗೆಲ್ಲಾ ಕಛೇರಿಗೆ ಬಂದು ಹತ್ತು ಅಂತಸ್ತಿನ ಕಟ್ಟಡವನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಎಲ್ಲೆಡೆಯೂ ಶುಭ್ರವಾಗಿರುವಂತೆ ಸ್ವಚ್ಛ ಮಾಡಿಸುತ್ತಿದ್ದಳು.  ಮೊದಮೊದಲು ಅವಳೊಡನೆ ಶುರುವಾದ ಸ್ನೇಹದ ಮಾತುಕಥೆ, ಇಬ್ಬರ ನಡುವೆ ಅದೆಂಥದೋ ಹೊಸ ಆಕರ್ಷಣೆಯನ್ನು ಹುಟ್ಟು ಹಾಕಿ, ಔದ್ಯೋಗಿಕ ಸಂಬಂಧಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಹತ್ತಿರವಾಗಿದ್ದರು. 

ಇವರ ಒಡನಾಟವನ್ನು, ಮಾತುಕಥೆಯನ್ನು, ಅವರ ಪ್ರೇಮದಾಟಗಳನ್ನು ಬಹಳ ಹತ್ತಿರದಿಂದಲೇ ನೋಡುತ್ತಿದ್ದ ಭದ್ರತಾ ರಕ್ಷಕರು, ತಮ್ಮ ಸಹೋದ್ಯೋಗಿಗಳನ್ನು ಅವನು ಸುಮ್ಮನೆ ಇಲ್ಲಸಲ್ಲದ ತಪ್ಪುಗಳನ್ನು ಹುಡುಕಿ ಸಂಸ್ಥೆಯಿಂದ ಹೊರಹಾಕಿದ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು, ಅವನ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು ಅವನಿಗೆ ಅರಿವಿಲ್ಲದೆಯೇ ಅವನನ್ನು ಖೆಡ್ಡಾಗೆ ಕೆಡವಬೇಕೆಂದು ಕಾಯುತ್ತಿದ್ದರು.  ಬೆಳಿಗ್ಗೆ ಒಂಭತ್ತಕೆ ಬಂದರೆ ನಾನು ನನ್ನ ಕೆಲಸವನ್ನೆಲ್ಲಾ ಮುಗಿಸಿ ಸಂಜೆ ಆರೂವರೆಗೆ ಕಛೇರಿಯಿಂದ ಹೊರಟು ಬಿಡುತ್ತಿದ್ದೆ.  ಆದರೆ ಪ್ರೇಮದಾಟದಲ್ಲಿ ತೊಡಗಿಕೊಂಡಿದ್ದ ಅವರಿಬ್ಬರೂ ಸಂಜೆ ಏಳೂವರೆಯ ನಂತರವೇ ಕಛೇರಿಯಿಂದ ಹೊರಡುತ್ತಿದ್ದರು. 

ಎಲ್ಲರೂ ಕಛೇರಿಯಿಂದ ಹೊರಟು ಹೋದರೂ ಇವರಿಬ್ಬರು ಮಾತ್ರ ಏಕೆ ಇಷ್ಟೊಂದು ತಡವಾಗಿ ಹೋಗುತ್ತಾರೆ?  ಇದುವರೆಗೂ ಇರದೆ ಇದ್ದ ಅದಾವ ಘನಂದಾರಿ ಕೆಲಸ ಮೈಸೂರಿನ ಮಂಜುನಾಥನಿಗೆ ಈಗ ಅಂಟಿಕೊಂಡಿದೆ?  ಬೆಳಿಗ್ಗೆ ಎಂಟಕ್ಕೆಲ್ಲಾ ಕಛೇರಿಗೆ ಬರುವ ಸುಂದರಿ ರಾತ್ರಿ ಏಳೂವರೆ ಎಂಟರವರೆಗೂ ಯಾಕೆ ಕಛೇರಿಯಲ್ಲಿರುತ್ತಾಳೆನ್ನುವುದು ಈಗ ಭದ್ರತಾ ರಕ್ಷಕರಿಗೆ ಬಿಡಿಸಲಾಗದ ಸಮಸ್ಯೆಯಾಗಿತ್ತು.  ಕಛೇರಿಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದರೂ ಸಹ ಕಛೇರಿಯ ಒಳಭಾಗದಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿರಲಿಲ್ಲ!  ಹೀಗಿರುವಲ್ಲಿ ಠೊಣಪ ಭದ್ರತಾ ರಕ್ಷಕನೊಬ್ಬ ಅವರಿಬ್ಬರ ಹಿಂದೆ ಬಿದ್ದು ಕೊನೆಗೂ ಅವರ "ಲೇಟ್ ಇವ್ನಿಂಗ್" ಪ್ರಹಸನವನ್ನು ಬೇಧಿಸಿಯೇ ಬಿಟ್ಟಿದ್ದ. 

ಅಂದು ನಡೆದಿದ್ದು ಇಷ್ಟೆ,  ಹೊಸದಾಗಿ ಕೆಲಸಕ್ಕೆ ಸೇರಿದ್ದ ಸುಂದರಿಯೂ ಮೈಸೂರು ಮಂಜುನಾಥನೂ ಒಬ್ಬರಿಗೊಬ್ಬರು ಪರಸ್ಪರ ಆಕರ್ಷಣೆಗೊಳಪಟ್ಟು ಕಛೇರಿಯಲ್ಲೇ ಅಲ್ಲದೆ ಲಾಲ್ ಬಾಗ್, ಕಬ್ಬನ್ ಪಾರ್ಕು, ಸಿನಿಮಾ ಅಂತೆಲ್ಲಾ ಸಾಕಷ್ಟು ಸುತ್ತಾಡಿ ಕೊನೆಗೆ, ಕೂಡಿ ನಲಿದು ಸಂತೃಪ್ತಿ ಹೊಂದಲು ಆಯ್ಕೆ ಮಾಡಿದ್ದು ಕಛೇರಿಯೊಳಗಿದ್ದ ಒಂದು ನಿರೀಕ್ಷಣಾ ಕೊಠಡಿಯನ್ನು!  ಸಾಕಷ್ಟು ಪ್ರತಿಷ್ಠಿತ ಸಂಸ್ಥೆಗಳಿಂದ ಇಲ್ಲಿನ ತಂತ್ರಜ್ಞರನ್ನು ಭೇಟಿಯಾಗಲು ಬರುತ್ತಿದ್ದ ಇತರ  ತಂತ್ರಜ್ಞರ ಮಾತುಕಥೆಗೆ ಸಾಕ್ಷಿಯಾಗುತ್ತಿದ್ದ ಆ ನಿರೀಕ್ಷಣಾ ಕೊಠಡಿ ಸಂಜೆಯಾಗುತ್ತಿದ್ದಂತೆ ಈ ಪ್ರೇಮಪಕ್ಷಿಗಳ ಪ್ರೇಮ ಸಲ್ಲಾಪಕ್ಕೆ, ಕಾಮದಾಟಕ್ಕೆ ಸಾಕ್ಷಿಯಾಗುತ್ತಿತ್ತು.  ಇದನ್ನು ಕಂಡು ಹಿಡಿದ ಭದ್ರತಾ ರಕ್ಷಕನೊಬ್ಬ ಮೊದಲು ಸಂಸ್ಥೆಯ ಮುಖ್ಯಸ್ಥರಿಗೆ ಫೋನ್ ಮೂಲಕ ವಿಚಾರ ತಿಳಿಸಿ ನಂತರ ನನಗೆ ತಿಳಿಸಿದ್ದ! 

ಸಂಸ್ಥೆಯ ಮುಖ್ಯಸ್ಥರು ಮರುದಿನ ಇಬ್ಬರನ್ನೂ ಕರೆದು ವಿಚಾರಿಸಿದಾಗ, ಮೊದಲು ನಿರಾಕರಿಸಿದರೂ  ನಂತರ ಬೇರೆ ದಾರಿಯಿಲ್ಲದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.  ಮದುವೆಯಾಗಿ ಗಂಡನಿದ್ದರೂ ಅವಿವಾಹಿತ ಮಂಜುನಾಥನೊಡನೆ ಪ್ರೇಮ ಸಂಬಂಧವಿಟ್ಟುಕೊಂಡು, ಕಛೇರಿಯನ್ನೇ  ತಮ್ಮ ಕಾಮದಾಟಕ್ಕೆ ತಾವು ಮಾಡಿಕೊಂಡ ತಪ್ಪಿಗೆ ಆ ಸುಂದರಿ ತನ್ನ ಕೆಲಸ ಕಳೆದುಕೊಂಡಿದ್ದಳು.  ಮೈಸೂರಿನಿಂದ ಬಂದು ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಾ ವಾರಕ್ಕೊಮೆ ಊರಿಗೆ ಹೋಗಿ ಬರುತ್ತಿದ್ದ ಮಂಜುನಾಥನನ್ನು ದೂರದ ದೆಹಲಿಯ ಶಾಖೆಗೆ ವರ್ಗಾವಣೆ ಮಾಡಿದ್ದರು.  ಕನ್ನಡಿಗನಾಗಿ ಮಲೆಯಾಳಿಗಳ ನಡುವೆ ಕನ್ನಡಿಗರಿಗೇ ವಿರುದ್ಧವಾಗಿ ವರ್ತಿಸಿದ್ದಲ್ಲದೆ ಹಲವು ಬಡ ಕನ್ನಡಿಗರನ್ನು ಕೆಲಸದಿಂದ ತೆಗೆದು ಹಾಕುವುದಕ್ಕೆ ಕಾರಣನಾಗಿದ್ದ ಮಂಜುನಾಥನ ಮೇಲೆ  ಭದ್ರತಾ ರಕ್ಷಕರು ಬಹಳ ಸಮಂಜಸವಾಗಿಯೇ ಸೇಡು ತೀರಿಸಿಕೊಂಡಿದ್ದರು.  ಕಪ್ಪಿಟ್ಟ ಮುಖದೊಡನೆ  ಅಂತಿಮ ವಿದಾಯ ಹೇಳಲು ಬಂದವನಿಗೆ ನಾನಂತೂ ಏನೂ ಹೇಳದೆ ಸುಮ್ಮನೆ ಅವನ ಮುಖ ನೋಡಿದ್ದೆ. 
 


Tuesday, February 9, 2016

ಲಹರಿ ಬಂದಂತೆ ,,,,,,,,,,೧೭.


ಹರಿವ ನದಿಯ ದಡದಲಿ 
ಏಕೆ ದುಗುಡ ಮೊಗದಲಿ 

ಚೆಲುವೆ ನೀನೆನ್ನ ಮನದಲಿ 
ಇರುವೆ  ಹೀಗೆಯೇ ನಗುತಲಿ

ನಗುವ ತುಂಬಿ ಮೊಗದಲಿ
ಜೇನು ತುಂಬಿ ಧ್ವನಿಯಲಿ  

ತುಂಬಿ ಹರಿವ ನಿನ್ನೊಲವಲಿ 
ಮನದ  ನೋವು ಮರೆಯಲಿ 

ಭೀಕರ ಕಾರಿರುಳು ಕಳೆಯಲಿ 
ನಗುವ ಹೊಂಬೆಳಗು ಮೂಡಲಿ  

ಅರಳಲಿರುವ ಹೂಸುಮದಲಿ 
ಪ್ರೀತಿಯಾ ಘಮವು ಹರಡಲಿ  

Monday, February 8, 2016

ಲಹರಿ ಬಂದಂತೆ,,,,,,,,,,,,,,೧೬.

ಹದವಾಗಿ ಹುರಿದ ಮಾಂಸದಲಿ ತುಸು ಖಾರ ಹೆಚ್ಚಾಗಿರಲು
ಜಿಹ್ವೆಯೊಳಿಹ ರಸಗ್ರಂಥಿಗಳೆಲ್ಲ ಹಾ ಹಾ ಹಾ ಎನುತಿರಲು

ತಣ್ಣನೆಯ ಸೋಡಾದೊಡನೆ ಗಾಜಿನ ಸುಂದರ ಲೋಟದೊಳು
ಇಳಿದ ಮಧುರ ಮದಿರೆಯೊಳು ನಿಶೆ ತಾನೇ ತಾನಾಗಿ ಏರಿರಲು

ವಿಶ್ವದೊಳಗಿನ ಜಂಜಡವೆಲ್ಲ ಮುಖಪುಟದಲ್ಲೇ ರಾರಾಜಿಸಿರಲು
ಕಣ್ಣ ಮುಂದೆ ನಂಬಿಕೆ ದ್ರೋಹಿಗಳ ಮುಖಗಳೇ ಸುಳಿಯುತಿರಲು

ಕಹಿರಾತ್ರಿಯಲಿ ಅದು ಬೇಡ ಇದು ಬೇಡ ಬೇರೇನೂ ಬೇಡವೆನಿಸಿರಲು
ತಣ್ಣಗೆ ಬಾಯಿಂದಿಳಿದ ಮದಿರೆಯದು ಮಧುರಾಮೃತವೇ ಆಗಿರಲು

ಅದಾವ ಅಕ್ಕರೆಯೂ ಅತಿ ಸಿಹಿಯಾದ ಸಕ್ಕರೆಯೂ ಬೇಡವೆನಿಸಿರಲು
ಬರಿಯ ಯಾಂತ್ರಿಕ ಜೀವನದಲಿ ಉಳಿದದ್ದು ನಿರಾಸೆಯ ಕಾರ್ಮುಗಿಲು!

Thursday, February 4, 2016

ಭದ್ರತೆಯ ಲೋಕದಲ್ಲಿ ೧೪,,,,,,ಮಾನಿನಿಯ ಮನಃಪರಿವರ್ತನೆ.




ಭದ್ರತೆಯ ಲೋಕಕ್ಕೆ ಕಾಲಿಟ್ಟು ಇಪ್ಪತ್ತೈದು ವರ್ಷಗಳು ಕಳೆದು ಹೋದವು.  ಈ ಕಾಲು ಶತಮಾನದಲ್ಲಿ ಒಡನಾಟಕ್ಕೆ ಬಂದವರೆಷ್ಟೋ, ಜೊತೆಯಾಗಿ ಕೆಲಸ ಮಾಡಿದವರೆಷ್ಟೋ, ನನ್ನ ಕೆಲಸವನ್ನು ಮೆಚ್ಚಿಕೊಂಡವರೆಷ್ಟೋ, ತಮ್ಮೊಡನೆ ಕೈ ಮಿಲಾಯಿಸಲಿಲ್ಲವೆನ್ನುವ ಕಾರಣಕ್ಕೆ ವಿರೋಧಿಗಳಾದವರೆಷ್ಟೋ, ಲೆಕ್ಕವಂತೂ ಸಿಗುತ್ತಿಲ್ಲ!  ಆದರೆ ನನಗೆ ವಹಿಸಿದ ಭದ್ರತೆಯ ಜವಾಬ್ಧಾರಿಯನ್ನು ಕಿಂಚಿತ್ತೂ ಲೋಪವಿಲ್ಲದೆ ನಿರ್ವಹಿಸಿದ ಆತ್ಮಸಂತೃಪ್ತಿಯಂತೂ ಸಿಕ್ಕಿದೆ.  ಅದೆಷ್ಟೋ ಸಂದರ್ಭಗಳಲ್ಲಿ ಮನೆಯವರನ್ನು ಕಡೆಗಣಿಸಿ ಕರ್ತವ್ಯವೇ ಹೆಚ್ಚು ಎಂದು ಪರಿಭಾವಿಸಿದಾಗ ನನ್ನ ಕರ್ತವ್ಯವೇ ಕೌಟುಂಬಿಕ ಅಶಾಂತಿಗೆ ಕಾರಣವಾಗಿದ್ದೂ ಉಂಟು!   ಆದರೂ ದಿನದಂತ್ಯದಲ್ಲಿ ಸಿಕ್ಕ ಆತ್ಮತೃಪ್ತಿಯ ಮುಂದೆ ಅವೆಲ್ಲ ನಗಣ್ಯವಾಗಿದ್ದವು.  ಇಂತಿಪ್ಪ ಭದ್ರತಾ ಕಾರ್ಯಚಟುವಟಿಕೆಯ ನಡುವೆಯೂ ಒಮ್ಮೆ ನಡೆದ ಈ ಘಟನೆ ನನ್ನ ಮನಸ್ಸಿನಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ.

ನಮ್ಮ ಉದ್ಯಾನನಗರಿ ಬೆಂಗಳೂರಿನಲ್ಲಿ ಕೆಲವು ಬ್ಯಾಂಕುಗಳ ಎಟಿಎಮ್ ಯಂತ್ರಗಳು ಆಗಿನ್ನೂ ಹೊಸದಾಗಿ ಸ್ಥಾಪಿಸಲ್ಪಡುತ್ತಿದ್ದವು.  ಅದರಲ್ಲಿ ಸಿಟಿಬ್ಯಾಂಕ್ ಮುಂಚೂಣಿಯಲ್ಲಿದ್ದು ಉದ್ಯಾನನಗರಿಯ ಮೂಲೆ ಮೂಲೆಗಳಲ್ಲೂ ತನ್ನ ಏಟಿಎಮ್ ಯಂತ್ರಗಳನ್ನು ಸ್ಥಾಪಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ತನ್ಮೂಲಕ ಬ್ಯಾಂಕಿಂಗ್ ವ್ಯವಹಾರದಲ್ಲಿ ಔನ್ನತ್ಯ ಸಾಧಿಸಲು ಶ್ರಮಿಸುತ್ತಿತ್ತು.  ಆ ನಿಟ್ಟಿನಲ್ಲಿ ಪ್ರತಿಯೊಂದು ಏಟಿಎಮ್ ಯಂತ್ರವನ್ನು ಸ್ಥಾಪಿಸಿದ್ದ ಕೊಠಡಿಗಳಲ್ಲಿ ಭದ್ರತಾ ರಕ್ಷಕರನ್ನು ನಿಯಮಿಸಿ, ಅವರಿಗೆ ಗ್ರಾಹಕರ ಕುಂದು ಕೊರತೆ ಹಾಗೂ ಸೇವೆಯ ನಿರ್ವಹಣೆಯ ಬಗ್ಗೆ ಪ್ರತ್ಯೇಕ ತರಬೇತಿಯನ್ನು ನೀಡಲಾಗುತ್ತಿತ್ತು. ಹಾಗೆ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜ ಬ್ಯಾಂಕೊಂದರ ತರಬೇತಿಯನ್ನು ಪಡೆದು ಗ್ರಾಹಕರ ಸೇವೆ ಹಾಗೂ ಭದ್ರತೆಯ ಜಂಟಿ ಜವಾಬ್ಧಾರಿಯೊಡನೆ ಸುಮಾರು ನೂರೈವತ್ತು ಜನರ ನಮ್ಮ ಭದ್ರತಾ ತಂಡ ಬೆಂಗಳೂರಿನ ಉದ್ಧಗಲಕ್ಕೂ ಹರಡಿಕೊಂಡಿದ್ದ ಸಿಟಿ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಕಾರ್ಯನಿರತವಾಗಿತ್ತು.  ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಗಸ್ತು ತಿರುಗುತ್ತಾ, ಎಲ್ಲಾ ಏಟಿಎಮ್ ಕೇಂದ್ರಗಳನ್ನು ಸಂದರ್ಶಿಸುತ್ತಾ, ಭದ್ರತಾ ರಕ್ಷಕರ ಹಾಗೂ ಏಟಿಎಮ್ ಯಂತ್ರಗಳ ಮೇಲುಸ್ತುವಾರಿಗಾಗಿ ನಾನು ಮತ್ತು ನನ್ನ ಜೊತೆಗೆ ಇನ್ನೂ ಮೂರು ಜನರ ತಂಡವನ್ನು ರಚಿಸಲಾಗಿತ್ತು.  ಹೀಗೆ ಒಮ್ಮೆ ರಾತ್ರಿ ಪಾಳಿಯ ಗಸ್ತಿನಲ್ಲಿದ್ದಾಗ ಜೆ.ಪಿ.ನಗರದಲ್ಲಿದ್ದ ಸಿಟಿ ಬ್ಯಾಂಕ್ ಏಟಿಎಮ್ ಕೇಂದ್ರದಲ್ಲಿ ನಡೆದ ಘಟನೆಯಂತೂ ಎಂದಿಗೂ ಮರೆಯಲಾಗದ್ದು.  

ಮಾಮೂಲಿನಂತೆ ರಾತ್ರಿಯ ಗಸ್ತಿನಲ್ಲಿ ಅಂದು ಜೆ.ಪಿ.ನಗರದ ಏಟಿಎಮ್ ಕೇಂದ್ರದ ಬಳಿ ಬಂದಾಗ ಅಲ್ಲಿನ ಭದ್ರತಾ ರಕ್ಷಕ ಹನುಮಂತಯ್ಯ ಅದೇಕೋ ತುಂಬಾ ಒತ್ತಡಕ್ಕೊಳಗಾಗಿ ವರಾಂಡದಲ್ಲಿ ಶತಪಥ ತಿರುಗುತ್ತಿದ್ದ.  ಒಳಗೆ ಕೇವಲ ಒಂದೇ ಒಂದು ದೀಪ ಉರಿಯುತ್ತಿದ್ದು ಉಳಿದ ದೀಪಗಳನ್ನು ಆರಿಸಿಬಿಟ್ಟಿದ್ದ.  ಆ ಸಮಯದಲ್ಲಿ ನನ್ನನ್ನು ಕಂಡೊಡನೆ ಸ್ವಲ್ಪ ನಿರಾಳವಾದಂತಾಗಿ ನಮಸ್ಕಾರ ಹೊಡೆದಿದ್ದ.  ಏನಾಯ್ತು, ಒಳಗಡೆ ಯಾಕೆ ದೀಪಗಳು ಉರಿಯುತ್ತಿಲ್ಲ ಎಂದಿದ್ದಕ್ಕೆ ಅವನು ಕೊಟ್ಟ ಉತ್ತರ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿತ್ತು. ಅವನೊಡನೆ ನಿಧಾನಕ್ಕೆ ಏಟಿಎಮ್ ಕೇಂದ್ರದೊಳಕ್ಕೆ ಪ್ರವೇಶಿಸಿದ್ದೆ.  ಅಲ್ಲಿ, ಏಟಿಎಮ್ ಯಂತ್ರದ ಹಿಂಭಾಗದ ಖಾಲಿ ಜಾಗದಲ್ಲಿ ಕುಳಿತಿದ್ದಳು ನೀಳ ಕೇಶರಾಶಿಯ ಸುಂದರಿಯೊಬ್ಬಳು.  ಅತ್ತು ಅತ್ತು ಕೆಂಪಗಾಗಿದ್ದ ಅವಳ ಕಣ್ಣುಗಳಲ್ಲಿ ನನ್ನನ್ನು ಕಂಡು ಮೂಡಿ ಬಂದ ಪ್ರಶ್ನಾರ್ಥಕ ಭಾವವನ್ನು ಹೋಗಲಾಡಿಸುವಂತೆ ನನ್ನನ್ನು ನಾನು ಪರಿಚಯಿಸಿಕೊಂಡಿದ್ದೆ.  ನೀನು ಯಾರು? ಇಲ್ಲಿ ಏಕೆ ಬಂದು ಅಡಗಿ ಕುಳಿತಿರುವೆ? ಏನು ನಿನ್ನ ಸಮಸ್ಯೆ ಎಂದು ಒಂದರ ಹಿಂದೊಂದು ನಾನು ಕೇಳಿದ ಪ್ರಶ್ನೆಗಳಿಗೆ ಅವಳ ಅಳುವೇ ಉತ್ತರವಾಗಿತ್ತು.   ಸರಿರಾತ್ರಿಯಲ್ಲಿ ಅಳುತ್ತಾ ಕುಳಿತಿದ್ದ ಆ ಹೆಣ್ಣುಮಗಳನ್ನು ಕಂಡು  ನನಗೆ ಮರುಕ ಹುಟ್ಟಿದರೂ ನಮ್ಮ ನಿಯಮಾವಳಿಗಳಂತೆ ಆಕೆ ಅಲ್ಲಿರಲು ಸಾಧ್ಯವಿರಲಿಲ್ಲ! ಅವಳನ್ನು ಅಲ್ಲಿಂದ ಹೇಗಾದರೂ ಮಾಡಿ ಕಳುಹಿಸಲೇ ಬೇಕಾಗಿತ್ತು. 

ಭದ್ರತಾ ರಕ್ಷಕ ಹನುಮಂತಯ್ಯ ಮನೆಯಿಂದ ತಂದಿದ್ದ ಫ್ಲಾಸ್ಕಿನಲ್ಲಿದ್ದ ಟೀಯನ್ನು ಮೂರು ಗ್ಲಾಸುಗಳಿಗೆ ಹಾಕಿ ತಂದಿದ್ದ, ಅವಳಿಗೆ ಟೀ ಕುಡಿಯುವಂತೆ ಹೇಳಿ ನಾನೂ ಟೀ ಕುಡಿಯುತ್ತಾ ಅವಳ ಮುಂದೆ ಕುಳಿತೆ.  ಚಳಿಯಿಂದ ನಡುಗುತ್ತಿದ್ದವಳಿಗೆ ಬಿಸಿಯಾದ ಅರ್ಧ ಕಪ್ ಟೀ  ಸ್ವಲ್ಪ ಸಮಾಧಾನ ನೀಡಿದಂತಿತ್ತು.  ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡ ಅವಳು ತನ್ನ ಕಥೆಯನ್ನು ಹೇಳಲಾರಂಭಿಸಿದಳು.  ಅವಳೊಬ್ಬಳು ಬಿ.ಇ. ಪದವೀಧರೆ, ಆಂಧ್ರದ ಚಿತ್ತೂರಿನವಳು, ಯಾವುದೋ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ.  ಅವಳ ಗಂಡನೂ ಸಾಪ್ಘ್ಟ್ವೇರ್ ತಂತ್ರಜ್ಞ, ಮುದ್ದಾದ ಒಂದು ಮಗುವಿದ್ದ ಸುಂದರ ಸುಖಿ ಕುಟುಂಬ.  ಆದರೆ ಇತ್ತೀಚೆಗೆ ಗಂಡ ಹೆಂಡತಿಯ ನಡುವೆ ವೈಮನಸ್ಯವುಂಟಾಗಿ, ಎಲ್ಲಾ ದುಡಿಯುವ ಹೆಂಗಸರ ಮನೆಯ ಕಥೆಯಂತೆಯೇ ಇವರದ್ದು ಆಗಿದೆ. ಪ್ರತಿನಿತ್ಯದ ಜಗಳ, ಮನಸ್ತಾಪ ಅಂದು ತಾರಕಕ್ಕೇರಿ ಗಂಡ ಇವಳನ್ನು ಹಿಡಿದು ಬಲವಾಗಿ ಚಚ್ಚಿದ್ದಾನೆ, ಅವನ ಹೊಡೆತಗಳಿಂದ ಕಂಗೆಟ್ಟ ಅವಳು ಮನೆ ಬಿಟ್ಟು ಓಡಿದ್ದಾಳೆ!  ಅವಳನ್ನು ಅಟ್ಟಿಸಿಕೊಂಡು ಹಿಂದೆಯೇ ಬಂದ ಗಂಡನಿಂದ ಅದು ಹೇಗೋ ತಪ್ಪಿಸಿಕೊಂಡು ಬಂದು ನಮ್ಮ ಭದ್ರತಾ ರಕ್ಷಕ ಹನುಮಂತಯ್ಯನ ಕೈ ಕಾಲು ಹಿಡಿದು ಏಟಿಎಮ್ ಯಂತ್ರದ ಹಿಂದೆ ಅವಿತು ಕುಳಿತು ರಕ್ಷಣೆ ಪಡೆದಿದ್ದಾಳೆ.  ಸುಂದರ ಕುಟುಂಬದ ಕಥೆ ಹಾದಿರಂಪ ಬೀದಿರಂಪವಾಗಿ ಈಗದು ನಮಗೆ ತಲೆನೋವಾಗಿತ್ತು.  ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಿದ್ದ ನನ್ನ ಕಣ್ಣ ಮುಂದೆ ಇದ್ದಕ್ಕಿದ್ದಂತೆ ಆಕೆ ತನ್ನ ಕೊರಳಲ್ಲಿದ್ದ ಮಾಂಗಲ್ಯದ ಸರವನ್ನು ಕಳಚಿ ಹಿಡಿದಳು. 

ನನ್ನನ್ನು ನಿಮ್ಮ ತಂಗಿಯೆಂದು ತಿಳಿದುಕೊಳ್ಳಿ, ಈಗ ನನ್ನ ಬಳಿ ಇರುವುದು ಈ ಸರ ಮಾತ್ರ, ಇದನ್ನು ಇಟ್ಟುಕೊಂಡು ನನಗೆ ದಯವಿಟ್ಟು ಐದುನೂರು ರೂಪಾಯಿಗಳನ್ನು ಕೊಡಿ, ನಾನು ನಾಳೆ ಬೆಳಿಗ್ಗೆಯೇ ನಮ್ಮ ಊರಿಗೆ ಹೋಗಿ ಬಿಡುತ್ತೇನೆ, ಇವರ ಸಹವಾಸವೇ ಬೇಡ ಎಂದಿದ್ದಳು.  ಅವಳ ಮಾತುಗಳನ್ನು ಕೇಳಿ ನನಗೆ ಏನು ಹೇಳಬೇಕೆಂದೇ ತೋಚದೆ ಕ್ಷಣಕಾಲ ಮೌನವಾಗಿ ಕುಳಿತಿದ್ದೆ.  ನಂತರ ನೀನೇನೋ ಊರಿಗೆ ಹೋಗಿಬಿಡುತ್ತೀಯಾ, ಆದರೆ ನಂತರ ನಿನ್ನ ಮಗುವಿನ ಗತಿ ಏನಮ್ಮಾ ಎಂದೆ?  ಅದುವರೆಗೂ ಆಕೆ ತನ್ನ ಮಗುವಿನ ಬಗ್ಗೆ ಚಿಂತಿಸಿರಲೇ ಇಲ್ಲವೇನೋ?  ನನ್ನ ಧಿಡೀರ್ ಪ್ರಶ್ನೆಯಿಂದ ಗಲಿಬಿಲಿಗೊಳಗಾದ ಆಕೆ ಚಿಂತಾಕ್ರಾಂತಳಾಗಿ ಕುಳಿತಳು.  ಈಗ ನನ್ನೊಳಗಿನ ಮನಃಶಾಶ್ತ್ರಜ್ಞ ಎಚ್ಚರಗೊಂಡಿದ್ದ.  ಅವಳಿಗೆ ಅವಳು ಮಾಡಿದ ತಪ್ಪುಗಳು, ಅವಳ ಮಾತುಗಳಿಂದ ಅವಳ ಗಂಡನ ಮನಸ್ಸಿನ ಮೇಲಾಗಿರಬಹುದಾದ ಪರಿಣಾಮಗಳು, ಗಂಡ ಹೆಂಡತಿಯರ ನಡುವೆ ಇರಬೇಕಾದ ಅನುಸರಣೆ, ಹೊಂದಾಣಿಕೆಯ ಬಗ್ಗೆ ಸುದೀರ್ಘವಾಗಿ ವಿವರಿಸಿ ಅವಳ ಮನಸ್ಸನ್ನು ನನ್ನ ಹಿಡಿತಕ್ಕೆ ತೆಗೆದುಕೊಂಡಿದ್ದೆ.   ನಾನು ನಿನ್ನ ಅಣ್ಣನಾಗಿ ನಿಮ್ಮ ಮನೆಗೆ ಬರುತ್ತೇನೆ, ನಿನ್ನ ಗಂಡನಿಗೆ ಎಚ್ಚರಿಕೆ ಕೊಟ್ಟು ನಿನ್ನನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಹೇಳುತ್ತೇನೆ, ನೀನು ಮತ್ತೊಮ್ಮೆ ನಗುನಗುತ್ತಾ ನಿನ್ನ ಮಗು-ಗಂಡನೊಡನೆ ಬದುಕಬೇಕು, ಆಗಲೇ ನಿನ್ನ ಜನ್ಮ ಸಾರ್ಥಕ.  ಸಣ್ಣಪುಟ್ಟ ತಪ್ಪುಗಳಿಗಾಗಿ ಜೀವನವನ್ನೇ ಹಾಳು ಮಾಡಿಕೊಳ್ಳಬಾರದು ಎಂದು ಆ ಸಮಯದಲ್ಲಿ ನಾನು ನೀಡಿದ ಆಪ್ತ ಸಲಹೆ ಅವಳ ಮನಸ್ಸಿಗೆ ನಾಟಿತ್ತು.  ಮನಸ್ಸು ದುಃಖದಿಂದ ಕುಗ್ಗಿಹೋದ ಸಂದರ್ಭದಲ್ಲಿ ಅವಳ ಮನಸ್ಸಿಗೆ ಸಮಾಧಾನವಾಗುವಂತಹ ನಾಲ್ಕು ಮಾತನಾಡುವವರೊಬ್ಬರು ಅವಳಿಗೆ ಬೇಕಾಗಿತ್ತು.  ಊರಿನಲ್ಲಿದ್ದ ತನ್ನ ಅಣ್ಣನನ್ನು ಅವಳು ಆ ಕ್ಷಣದಲ್ಲಿ ನನ್ನಲ್ಲಿ ಕಂಡಿದ್ದಳು.

ಯಾವುದೋ ನಿರ್ಧಾರಕ್ಕೆ ಬಂದವಳಂತೆ ಎದ್ದು ನಿಂತ ಅವಳು ನನ್ನ ಕೈಗಳನ್ನು ಹಿಡಿದು ಬನ್ನಿ ಅಣ್ಣ, ಮನೆಗೆ ಹೋಗೋಣ ಎಂದಾಗ ನನ್ನ ಮನಸ್ಸಿಗೆ ಖುಷಿಯಾಗಿತ್ತು.  ಇದನ್ನೆಲ್ಲಾ ನೋಡುತ್ತಿದ್ದ ಭದ್ರತಾ ರಕ್ಷಕ ಹನುಮಂತಯ್ಯನ ಕಣ್ಣುಗಳೂ ತುಂಬಿ ಬಂದಿದ್ದವು. ಕೊರಳಿನಿಂದ ಕಳಚಿದ್ದ ಮಾಂಗಲ್ಯಸರವನ್ನು ಮತ್ತೆ ತೊಟ್ಟುಕೊಳ್ಳುವಂತೆ ಹೇಳಿ ಅವಳನ್ನು ನನ್ನ ರೋಡ್ ಕಿಂಗ್ ಗಾಡಿಯಲ್ಲಿ ಕೂರಿಸಿಕೊಂಡು ಜೆ.ಪಿ.ನಗರದ ಸೊಂದಿಗಳಲ್ಲಿ ಸುತ್ತಿ ಅದ್ಯಾವುದೋ ಮೂಲೆಯಲ್ಲಿದ್ದ ಅವಳ ಮನೆಯ ಮುಂದೆ ಬಂದು ನಿಂತಿದ್ದೆ.  ಅಷ್ಟು ಹೊತ್ತಿಗೆ ಇವಳನ್ನು ಎಲ್ಲೆಡೆ ಹುಡುಕಾಡಿ ಸಾಕಾಗಿ, ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದೆ ಕೈ ಕೈ ಹಿಸುಕುತ್ತಾ ಕುಳಿತಿದ್ದ ಅವಳ ಗಂಡ, ಅವನ ಮುಂದೆ ತಲೆಯ ಮೇಲೆ ಕೈ ಹೊತ್ತು ಮ್ಲಾನವದನರಾಗಿ ಕುಳಿತಿದ್ದ ಅವನ ತಾಯಿ, ಅವರ ಮಡಿಲಲ್ಲಿ ಮಲಗಿದ್ದ ಮುದ್ದಾದ ಗಂಡು ಮಗು!  ನಿರ್ಜೀವವಾಗಿದ್ದ ಆ ಪರಿಸರದಲ್ಲಿ ನನ್ನೊಡನೆ ಬಂದ ಅವಳನ್ನು ಕಂಡೊಡನೆ ವಿದ್ಯುತ್ ಸಂಚಾರವಾದಂತಾಗಿತ್ತು.  ಅವಳನ್ನು ಕಂಡು ಮತ್ತೆ ಕೋಪೋದ್ರಿಕ್ತನಾಗಿ ಹೊಡೆಯಲು ಬಂದವನನ್ನು ತಡೆದು ಕೂರಿಸಿದೆ, ನನ್ನನ್ನು ಪರಿಚಯಿಸಿಕೊಂಡು ಮಾತಿಗೆ ಕುಳಿತೆ.  ನಡೆದದ್ದನ್ನೆಲ್ಲಾ ವಿವರಿಸಿ, ಅವನಿಗೂ ಸಾಕಷ್ಟು ಆಪ್ತಸಲಹೆ ನೀಡಿದ ಮೇಲೆ ಅವರ ತಾಯಿಯೂ ನನ್ನ ಜೊತೆಗೆ ಧ್ವನಿಗೂಡಿಸಿದರು.  ಮುಂಗೋಪಿಯಾಗಿದ್ದ ಅವನ ತಪ್ಪುಗಳನ್ನು, ಅದರಿಂದ ಅವನ ಹೆಂಡತಿಯ ಮನಸ್ಸಿನ ಮೇಲಾಗಿದ್ದ ದುಷ್ಪರಿಣಾಮಗಳನ್ನು ವಿವರಿಸಿ, ಒಂದೊಮ್ಮೆ ಅವರಿಬ್ಬರೂ ಪರಸ್ಪರ ಬೇರೆಯಾದರೆ ಮುಂದೆ ಆ ಮಗುವಿನ ಮೇಲಾಗಬಹುದಾದ ಪರಿಣಾಮಗಳ ಬಗ್ಗೆ ವಿವರಿಸಿ, ಕುಟುಂಬದಲ್ಲಿ ಹೊಂದಾಣಿಕೆಯ ಮಹತ್ವವನ್ನು ವಿವರಿಸಿದಾಗ ಆತ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದ, ತಾನು ದುಡುಕಿ ಆಕೆಯ ಮೇಲೆ ಕೈ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದ.  ಅಸಮಾಧಾನದ ಬೆಂಕಿ ಭುಗಿಲೆದ್ದಿದ್ದ ಆ ಮನೆಯಲ್ಲೀಗ ಸಮಾಧಾನದ, ಸಂತಸದ ಮುಗುಳ್ನಗೆಯ ತಂಗಾಳಿ ಬೀಸುತ್ತಿತ್ತು.

ಅವರೆಲ್ಲರಿಗೂ ವಂದಿಸಿ ಆ ಮನೆಯಿಂದ ಹೊರಬಂದಾಗ ಉದ್ಯಾನ ನಗರಿಯನ್ನು ಬಾಲ ಸೂರ್ಯನ ಎಳೆಯ ರಶ್ಮಿಗಳು ಚುಂಬಿಸುತ್ತಿದ್ದವು.  ನನಗೇ ಅರಿವಿಲ್ಲದ ಅದ್ಯಾವುದೋ ಆತ್ಮಸಂತೃಪ್ತಿಯಿಂದ ನನ್ನ ರೋಡ್ ಕಿಂಗನ್ನು ಮನೆಯತ್ತ ಎಂದಿಗಿಂತಲೂ ತುಸು ಹೆಚ್ಚೇ ವೇಗವಾಗಿ ಚಲಾಯಿಸಿದ್ದೆ.  ಈ ಘಟನೆ ನಡೆದು ಸುಮಾರು ಇಪ್ಪತ್ತು  ವರ್ಷಗಳಾಗಿರಬಹುದು, ಆ ಹೆಣ್ಣು ಮಗಳು ಯಾರೋ, ಈಗ ಎಲ್ಲಿದ್ದಾಳೋ, ಹೇಗಿದ್ದಾಳೋ ಗೊತ್ತಿಲ್ಲ!  ಆದರೆ ತನ್ನ ನೀಳ ಕೇಶರಾಶಿಯನ್ನು ಬೆನ್ನ ಮೇಲೆ ಹರಡಿಕೊಂಡು, ಮೊಣಕಾಲಿನ ಮೇಲೆ ತನ್ನ ಮೊಗವನ್ನೂರಿ ದುಃಖದಿಂದ ರೋದಿಸುತ್ತಿದ್ದ ಅವಳ ಮುಖ ಮಾತ್ರ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ.  ಎಲ್ಲೇ ಇರಲಿ, ಅವಳು ಸುಖವಾಗಿರಲಿ ಎಂದೇ ಈ ಮನಸ್ಸು ಬಯಸುತ್ತದೆ.






Tuesday, February 2, 2016

ತಿಮ್ಮಿ ನೀನು ತಪ್ಪುಸ್ಕೊಂಡ್ರೆ ...................




Saturday, January 30, 2016

ಹೇ ರಾಮ್! ಮಹಾತ್ಮನಿಗೊಂದು ನಮನ.



ಅಹಿಂಸಾತ್ಮಕ ಹೋರಾಟದ ಹರಿಕಾರ, ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತು ತಮ್ಮ ಸರಳ ಬದುಕಿನಿಂದ ವಿಶ್ವಮಾನ್ಯರಾದ ಮಹಾತ್ಮ ಮೋಹನದಾಸ್ ಕರಮಚಂದ್ ಗಾಂಧಿ ಹುತಾತ್ಮರಾದ ದಿನವಿಂದು, ಆ ದಿವ್ಯಚೇತನಕ್ಕೆ ಮನಃಪೂರ್ವಕ ನಮನಗಳು. ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷಗಳಾದರೂ ಅವರ ರಾಮರಾಜ್ಯದ ಕನಸು ಇಂದಿಗೂ ನನಸಾಗಲಿಲ್ಲ, ಗ್ರಾಮ ಸ್ವರಾಜ್ಯದ ಕನಸು ಹಾಗೆಯೇ ಉಳಿದಿದೆ. ಶೇ.೭೦ ರಷ್ಟು ಭಾರತೀಯರು ವಾಸಿಸುವ ಗ್ರಾಮಗಳು ಸ್ವರಾಜ್ಯವಿರಲಿ, ಇಂದಿಗೂ ಅಂಧಕಾರದಲ್ಲಿಯೇ ಉಳಿದಿವೆ, ಸರ್ವಋತು ರಸ್ತೆಗಳಿಲ್ಲದೆ ಇಂದಿಗೂ ಕೆಲವು ಗ್ರಾಮಗಳು ದ್ವೀಪಗಳಾಗಿಯೇ ಉಳಿದಿವೆ. ಸ್ವಾತಂತ್ರ್ಯಾನಂತರ ಅಧಿಕಾರವನ್ನನುಭವಿಸಿದ ಖಾನ್-ಗ್ರೇಸ್ ಪಕ್ಷದ ಅಧಿಕಾರ ಲಾಲಸೆಯಿಂದಾಗಿ ಗಾಂಧೀಜಿಯ ತತ್ವಗಳು ಜನಮಾನಸದಿಂದ ಮರೆಯಾಗಿ, ಇಂದು ಗಾಂಧಿ ಎಂದರೆ ಕೆಲಸಕ್ಕೆ ಬಾರದವನು ಎನ್ನುವ ಅನ್ವರ್ಥಕ ನಾಮವಾಗಿ ಬದಲಾಗಿರುವುದು ಮಾತ್ರ ದುರಂತ. ಕಾಲೇಜಿನಲ್ಲಿ ಓದುವ ಯುವಕರು ಮಧುಪಾನ, ಧೂಮಪಾನ ಮಾಡದ ಜೊತೆಯವರನ್ನು ಛೇಡಿಸಲು ಉಪಯೋಗಿಸುವ ಪದವಾಗಿ ಗಾಂಧಿ ಬದಲಾಗಿದ್ದು ಮಾತ್ರ ಅಕ್ಷಮ್ಯ. ಯೂರೋಪಿಯನ್ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಗಾಂಧಿ ತತ್ವವನ್ನು ಅಧ್ಯಯನ ನಡೆಸಲು ವಿಶೇಷ ಪೀಠಗಳನ್ನು ಸ್ಥಾಪಿಸಿದ್ದರೆ ಗಾಂಧಿ ಹುಟ್ಟಿದ ನಾಡಿನಲ್ಲಿಯೇ ಗಾಂಧಿ ಇಂದು ಮೂಲೆಗುಂಪಾಗಿದ್ದಾರೆ. ದೇಶ ವಿಭಜನೆಯಿರಬಹುದು, ಮುಸ್ಲಿಮರ ಬಗೆಗಿನ ಮೃದು ಧೋರಣೆಯಿರಬಹುದು, ಬೇರಾವುದೇ ಕಾರಣಗಳಿರಬಹುದು, ಆದರೆ ಅವರ ಸರಳ ಜೀವನ, ಸತ್ಯದೆಡೆಗಿನ ಸಾಕ್ಶತ್ಕಾರ, ಅಹಿಂಸಾತ್ಮಕ ಧೋರಣೆ, ಅಸಹಕಾರ ಚಳುವಳಿಯ ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ನಡುಕ ಹುಟ್ಟಿಸಿದ ರೀತಿ ಯಾರೂ ಮರೆಯುವಂತಿಲ್ಲ. ಆ ಮಹಾತ್ಮ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದ ಈ ದಿನ ನಿಜಕ್ಕೂ ಭಾರತದ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ! ಮಹಾತ್ಮನ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಹೆಸರನ್ನು ಮಾತ್ರ ಉಪಯೋಗಿಸಿಕೊಂಡು, ಅವರ ತತ್ವ ಆದರ್ಶಗಳನ್ನು ಮರೆತಿರುವ ರಾಜಕೀಯ ನಾಯಕರು ಇನ್ನಾದರೂ ಗ್ರಾಮ ಸ್ವರಾಜ್ಯದ ಬಗ್ಗೆ, ರಾಮರಾಜ್ಯದ ಬಗ್ಗೆ ಚಿಂತಿಸಿ ಅವರ ಕನಸನ್ನು ನನಸಾಗಿಸಲಿ ಎಂದು ಆಶಿಸುವೆ. ಅವರು ಅಂದು ಅತಿಯಾಗಿ ಪೂಜಿಸಿದ ಆ ಶ್ರೀರಾಮನೇ ಇಂದು ಹಲವರ ಬಾಯಿ ಚಪಲದ ವಸ್ತುವಾಗಿ ಪರಿಣಮಿಸಿ ಅಪಹಾಸ್ಯಕ್ಕೀಡಾಗಿರುವುದು ಮಾತ್ರ ಪ್ರಜ್ಞಾವಂತ ಸಮಾಜದ ದುರಂತ.

Monday, January 25, 2016

ಎಲ್ಲರಿಗೂ ೬೭ನೆಯ ಗಣರಾಜ್ಯೋತ್ಸವದ ಶುಭಾಶಯಗಳು.



ಒಂದು ಶುಭಾಶಯ ಹೇಳಿ, ಇಷ್ಟವಿದ್ದರೆ ಕೆಲ ಹೊತ್ತು ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್ ಅಥವಾ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡಿ, ಅಥವಾ ಇನ್ನೂ ಹೆಚ್ಚೆಂದರೆ ನಮ್ಮ ಏರಿಯಾದಲ್ಲಿನ ಶಾಲೆಯೊಂದರಲ್ಲಿ ನಡೆಯುವ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದರೆ ಆಯಿತು, ಮತ್ತೆ ಮರುದಿನದಿಂದ ನಮ್ಮ ಮಾಮೂಲಿ ದಿನಚರಿಯಲ್ಲಿ ಮುಳುಗಿ ಬಿಡುತ್ತೇವೆ.  ಇಷ್ಟೇನಾ ಗಣರಾಜ್ಯದಿನವೆಂದರೆ!  ಇದರ ಹಿನ್ನೆಲೆಯನ್ನು ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ. 

೧೯೩೦ರ ಜನವರಿ ೨೬ರ ಇದೇ ದಿನ ಲಾಹೋರಿನಲ್ಲಿ ನಡೆದ ಅಧಿವೇಶನದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರ ಆಡಳಿತವನ್ನು ವಿರೋಧಿಸಿ "ಪೂರ್ಣ ಸ್ವರಾಜ್ಯ"ವನ್ನು ಘೋಷಿಸುತ್ತದೆ.  ಅಧ್ಯಕ್ಷರಾಗಿದ್ದ ಜವಾಹರ್ ಲಾಲ್ ನೆಹರೂ ರಾವಿ ನದಿಯ ದಡದಲ್ಲಿ ಭಾರತದ ಧ್ವಜವನ್ನು ಹಾರಿಸುತ್ತಾರೆ.  ಆ ದಿನದ ನೆನಪಿಗಾಗಿಯೇ ಜನವರಿ ೨೬ನ್ನು "ಗಣರಾಜ್ಯೋತ್ಸವ ದಿನ" ಎಂದು ಕರೆಯಲಾಗುತ್ತದೆ.  ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟ ಹಾಗೂ ಅಸಹಕಾರ ಚಳುವಳಿ, ಸ್ವದೇಶಿ ಚಳುವಳಿಗಳು ಒಂದೆಡೆ, ಮತ್ತೊಂದೆಡೆ ನೇತಾಜಿ ಸುಭಾಷ್ ಚಂದ್ರ ಬೋಸರ "ಆಝಾದ್ ಹಿಂದ್ ಫೌಜ್ ನ ಅಟ್ಟಹಾಸ, ಹೊರದೇಶಗಳಿಂದಲೂ ಬಂದ ಒತ್ತಡ ಇವೆಲ್ಲವುಗಳಿಂದ ಅಲ್ಲಾಡಿ ಹೋದ ಬ್ರಿಟಿಷ್ ಸಾಮ್ರಾಜ್ಯ ಕೊನೆಗೂ ಭಾರತಕ್ಕೆ ಸ್ವಾತಂತ್ರ್ಯ ನೀಡಲು ಒಪ್ಪಿಕೊಳ್ಳುತ್ತದೆ.  ಅದರಂತೆ ೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿ ಪಾರ್ಲಿಮೆಂಟ್ ಭವನದ ಮೇಲೆ ಹಾರಾಡುತ್ತಿದ್ದ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ ಸ್ವತಂತ್ರ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ.  ಬ್ರಿಟಿಷ್ ಸಾಮ್ರಾಜ್ಯದ ಕೊನೆಯ ವೈಸ್ರಾಯ್ ಮೌಂಟ್ ಬ್ಯಾಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದ ನೆಹರೂಗೆ ಅಧಿಕಾರ ಹಸ್ತಾಂತರ ಮಾಡುತ್ತಾರೆ.  ಇದಿಷ್ಟು ಸ್ವಾತಂತ್ರ್ಯ ಪಡೆಯುವವರೆಗಿನ ಕಥೆ.  ಸ್ವಾತಂತ್ರ್ಯಾ ನಂತರ ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಕರಡು ರಚನಾ ಸಮಿತಿಯನ್ನು ರಚಿಸಲಾಯಿತು.  ಅನೇಕ ಚರ್ಚೆ, ಸಂವಾದ, ತಿದ್ದುಪಡಿಗಳ ನಂತರ ಅಂತಿಮವಾಗಿ ೧೯೫೦ರ ಜನವರಿ ೨೬ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.  ಅಂದಿನಿಂದ ಇಂದಿನವರೆಗೂ ಜನವರಿ ೨೬ನ್ನು "ಗಣರಾಜ್ಯ ದಿನ"ವನ್ನಾಗಿ ಆಚರಿಸಲಾಗುತ್ತಿದೆ.  

ಭಾರತದಾದ್ಯಂತ ಸರ್ಕಾರಿ ರಜಾದಿನ ಎಂದು ಘೋಷಿಸಿದರೂ ಎಲ್ಲಾ ಶಾಲೆಗಳಲ್ಲಿಯೂ ಅಂದು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ, ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಕಾರ್ಯಕ್ರಮಗಳನ್ನು ವಿಶೇಷವಾಗಿ ರೂಪಿಸಲಾಗುತ್ತದೆ.  ಸ್ಕೌಟ್, ಏನ್.ಸಿ.ಸಿ. ಪೊಲೀಸ್ ದಳಗಳಿಂದ ರಾಜಧಾನಿ ದೆಹಲಿಯಲ್ಲಿ ಭಾರತೀಯ ಸೇನೆ, ನೌಕಾ ಹಾಗೂ ವಾಯುದಳಗಳ ಆಕರ್ಷಕ ಕವಾಯತು ನಡೆಯುತ್ತದೆ.  ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿಯು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.  ಜನತೆಯಲ್ಲಿ ದೇಶಪ್ರೇಮದ ಸಂದೇಶ ಸಾರುವ, ದೇಶದ ಹೆಸರಿನಲ್ಲಿ ನಾವೆಲ್ಲರೂ ಒಂದು ಎಂದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸುಂದರ ಕಾರ್ಯಕ್ರಮಗಳು ಈ ದಿನ ನಡೆಯುತ್ತವೆ. 

ಆದರೆ ಸಾಮಾಜಿಕ ಪರಿಸ್ಥಿತಿಗಳು ಹೇಗಿವೆ ಎಂದು ಅವಲೋಕಿಸಿದಾಗ ನಿಜಕ್ಕೂ ದುಃಖವಾಗುತ್ತದೆ.  ಸ್ವಾತಂತ್ರ್ಯ ಪೂರ್ವದಲ್ಲಿ ಅಂದು ಇದ್ದ ಅದೇ ಬಾನು, ಅದೇ ಸೂರ್ಯ, ಅದೇ ಗಾಳಿ,  ಅದೇ ನೀರು, ಅದೇ ಪ್ರಕೃತಿ.  ಆದರೆ ಮನುಷ್ಯರು ಮಾತ್ರ ಬದಲಾಗಿದ್ದಾರೆ, ಆಗ ಬ್ರಿಟಿಷರ ಆಳ್ವಿಕೆಯಲ್ಲಿ ಅವರ ದಬ್ಬಾಳಿಕೆಗೆ ನಲುಗಿ ಜನ ಸಾಯುತ್ತಿದ್ದರು, ಆದರೆ ಈಗಲೂ ಜನ ಅಸಹಾಯಕರಾಗಿ ಸಾಯುತ್ತಲೇ ಇದ್ದಾರೆ, ಆದರೆ ನಮ್ಮಿಂದಲೇ ಆಯ್ಕೆಯಾದ ಜನನಾಯಕರ ದುರಾಡಳಿತದಿಂದ ಅನ್ನುವುದು ವಿಪರ್ಯಾಸ.   ಸ್ವಾತಂತ್ರ್ಯಾನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಸ್ವಾರ್ಥಿಗಳಾಗಿ, ದೇಶ ಹಿತ, ಜನಹಿತ ಮರೆತು ತಮ್ಮನ್ನು ತಾವು ಚೆನ್ನಾಗಿ ನೋಡಿಕೊಂಡಿದ್ದಲ್ಲದೆ ಬ್ರಿಟಿಷರು ಬಳುವಳಿಯಾಗಿ ಬಿಟ್ಟು ಹೋದ "ಒಡೆದು ಆಳುವ ನೀತಿ"ಯನ್ನು ಚೆನ್ನಾಗಿಯೇ ಪಾಲಿಸಿದ್ದರ ಪರಿಣಾಮ, ಇಂದು ಭಾರತೀಯ ಸಮಾಜ ಒಡೆದು ಚೂರು ಚೂರಾಗಿದೆ.  ಜಾತಿ ಜಾತಿಗಳ ನಡುವೆ, ಧರ್ಮಗಳ ನಡುವೆ ಅಪಾರವಾದ ಕಂದಕ ನಿರ್ಮಾಣವಾಗಿದೆ.   ಸ್ವಾರ್ಥ ರಾಜಕಾರಣಿಗಳು ಬಂಡವಾಳಶಾಹಿಗಳಿಗೆ ಅತಿ ಹೆಚ್ಚು ಬೆಂಬಲ ನೀಡಿದ ಪರಿಣಾಮವಾಗಿ ಸಂಪತ್ತಿನ ಕ್ರೋಢೀಕರಣ ಏಕಮುಖವಾಗಿ ಶ್ರೀಮಂತರು ಅತಿ ಹೆಚ್ಚು ಶ್ರೀಮಂತರಾಗಿದ್ದರೆ ಬಡವರು ಇನ್ನೂ ಬಡವರಾಗಿಯೇ ಉಳಿದಿದ್ದಾರೆ.   ಈ ದಿನ ವಿದೇಶಿ ನಾಯಕರನ್ನು ಕರೆಸಿ ನಮ್ಮ ದೇಶದ ಘನತೆಯನ್ನು ತೋರಿಸುತ್ತಿರುವ ಅದೇ ದೆಹಲಿಯಲ್ಲಿ ಇಂದಿನ ಕೊರೆಯುವ ಛಳಿಯಲ್ಲಿ ಮನೆ ಮಠವಿಲ್ಲದ ನಿರ್ಗತಿಕರು ರಸ್ತೆಬದಿಗಳಲ್ಲಿ ಬೆಂಕಿ ಕಾಯಿಸುತ್ತಾ ಜೀವನ ನಡೆಸುತ್ತಿದ್ದಾರೆನ್ನುವುದು ನಮ್ಮ ದೇಶ ಅಭಿವೃದ್ಧಿಯ ಪಥದಲ್ಲಿ ನಿಜವಾಗಲೂ ಸಾಗಿದೆಯೇ ಎಂದು ಚಿಂತಿಸುವಂತೆ ಮಾಡುತ್ತದೆ. 

ಕಾಂಗ್ರೆಸ್ ಪಕ್ಷದವರು ತಾವು ಅಧಿಕಾರದಲ್ಲುಳಿದುಕೊಳ್ಳಲು ಒಂದೆಡೆ ಪರಿಶಿಷ್ಟ ಜಾತಿ ಪಂಗಡದವರನ್ನು, ಮತ್ತೊಂದೆಡೆ ಮುಸ್ಲಿಮರನ್ನು ಓಲೈಸುತ್ತಾ, ಅವರನ್ನು ತಮ್ಮ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು, ಮುಖ್ಯವಾಹಿನಿಯಲ್ಲಿ ಬೆರೆಯಲು ಬಿಡದೆ ನಡೆಸಿಕೊಂಡ ಪರಿಣಾಮ ಅವರಲ್ಲಿನ ಅನಕ್ಷರತೆ, ಅಜ್ಞಾನ ಹಾಗೆಯೇ ಉಳಿದುಕೊಂಡಿದೆ.  ಅವೈಜ್ಞಾನಿಕವಾದ ಮೀಸಲಾತಿ ಪದ್ಧತಿಯಿಂದಾಗಿ ಪ್ರತಿಭಾವಂತರಿಗೆ ಅವಕಾಶಗಳು ಸಿಗದೇ ಪ್ರತಿಭಾ ಪಲಾಯನ ನಿರಂತರವಾಗಿ ನಡೆಯುತ್ತಿದೆ.  ಓದಿ ವಿದ್ಯಾವಂತರಾಗಿ ನಮ್ಮ ದೇಶದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲಬೇಕಿದ್ದ ವಿದ್ಯಾವಂತ ಸಮುದಾಯವಿಂದು ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗಿ, ಅಸಹಾಯಕರಾಗಿ ಹೊರದೇಶಗಳತ್ತ ಮುಖ ಮಾಡಿದ್ದಾರೆ.  ಇದು ಯಾವುದೇ ಅಭಿವೃದ್ಧಿಶೀಲ ದೇಶದ ಬೆಳವಣಿಗೆಗೆ ದೊಡ್ಡ ಹೊಡೆತವಾಗಿ ಪರಿಣಮಿಸುತ್ತದೆ. 

ಇಷ್ಟೆಲ್ಲ ವೈರುಧ್ಯಗಳ ನಡುವೆಯೂ ಜನವರಿ ೨೬ರ ಧ್ವಜಾರೋಹಣದಂದು ಅರಿವಿಲ್ಲದೆಯೇ ದೇಹ ಸೆಟೆದು ನಿಲ್ಲುತ್ತದೆ, ಎದೆ ಉಬ್ಬುತ್ತದೆ, ಕೈಗಳು ತ್ರಿವರ್ಣ ಧ್ವಜಕ್ಕೆ ನಮಗರಿವಿಲ್ಲದೆಯೇ ಸೆಲ್ಯೂಟ್ ಹೊಡೆದಿರುತ್ತವೆ. ವಂದೇ ಮಾತರಂ, ಸಾರೆ ಜಹಾಂಸೆ ಅಚ್ಚಾ, ಹಿಂದೂಸಿತಾನ್  ಹಮಾರಾ, ಎನ್ನುವ ದೇಶಭಕ್ತಿ ಗೀತೆಗಳನ್ನು ಕೇಳಿದಾಗ ಈಗಲೂ ರೋಮಾಂಚನವಾಗುತ್ತದೆ, ಮನಸ್ಸು ಚಿಂತಾಗ್ರಸ್ತವಾಗಿದ್ದರೂ ಅಲ್ಲಿ ದೇಶಪ್ರೇಮದ ಅಲೆ ಚಿಮ್ಮುತ್ತದೆ.  

ಇರುವ ವೈರುಧ್ಯಗಳೆಲ್ಲ ಕಳೆದು ಎಲ್ಲರಿಗೂ ಸಮಾನ ಅವಕಾಶ, ಸಮಾನ ಬದುಕು ನೀಡುವ ಸುಂದರ ಭಾರತದ ಕನಸು ನಮ್ಮಲ್ಲಿ ಜೀವಂತವಾಗಿರಲಿ, ಆ ಕನಸು ಆದಷ್ಟು ಬೇಗ ನನಸಾಗಲಿ ಎಂದು ಹಾರೈಸೋಣ.  ವಂದೇ ಮಾತರಂ.  ಜೈ ಹಿಂದ್.