Saturday, January 30, 2016

ಹೇ ರಾಮ್! ಮಹಾತ್ಮನಿಗೊಂದು ನಮನ.ಅಹಿಂಸಾತ್ಮಕ ಹೋರಾಟದ ಹರಿಕಾರ, ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತು ತಮ್ಮ ಸರಳ ಬದುಕಿನಿಂದ ವಿಶ್ವಮಾನ್ಯರಾದ ಮಹಾತ್ಮ ಮೋಹನದಾಸ್ ಕರಮಚಂದ್ ಗಾಂಧಿ ಹುತಾತ್ಮರಾದ ದಿನವಿಂದು, ಆ ದಿವ್ಯಚೇತನಕ್ಕೆ ಮನಃಪೂರ್ವಕ ನಮನಗಳು. ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷಗಳಾದರೂ ಅವರ ರಾಮರಾಜ್ಯದ ಕನಸು ಇಂದಿಗೂ ನನಸಾಗಲಿಲ್ಲ, ಗ್ರಾಮ ಸ್ವರಾಜ್ಯದ ಕನಸು ಹಾಗೆಯೇ ಉಳಿದಿದೆ. ಶೇ.೭೦ ರಷ್ಟು ಭಾರತೀಯರು ವಾಸಿಸುವ ಗ್ರಾಮಗಳು ಸ್ವರಾಜ್ಯವಿರಲಿ, ಇಂದಿಗೂ ಅಂಧಕಾರದಲ್ಲಿಯೇ ಉಳಿದಿವೆ, ಸರ್ವಋತು ರಸ್ತೆಗಳಿಲ್ಲದೆ ಇಂದಿಗೂ ಕೆಲವು ಗ್ರಾಮಗಳು ದ್ವೀಪಗಳಾಗಿಯೇ ಉಳಿದಿವೆ. ಸ್ವಾತಂತ್ರ್ಯಾನಂತರ ಅಧಿಕಾರವನ್ನನುಭವಿಸಿದ ಖಾನ್-ಗ್ರೇಸ್ ಪಕ್ಷದ ಅಧಿಕಾರ ಲಾಲಸೆಯಿಂದಾಗಿ ಗಾಂಧೀಜಿಯ ತತ್ವಗಳು ಜನಮಾನಸದಿಂದ ಮರೆಯಾಗಿ, ಇಂದು ಗಾಂಧಿ ಎಂದರೆ ಕೆಲಸಕ್ಕೆ ಬಾರದವನು ಎನ್ನುವ ಅನ್ವರ್ಥಕ ನಾಮವಾಗಿ ಬದಲಾಗಿರುವುದು ಮಾತ್ರ ದುರಂತ. ಕಾಲೇಜಿನಲ್ಲಿ ಓದುವ ಯುವಕರು ಮಧುಪಾನ, ಧೂಮಪಾನ ಮಾಡದ ಜೊತೆಯವರನ್ನು ಛೇಡಿಸಲು ಉಪಯೋಗಿಸುವ ಪದವಾಗಿ ಗಾಂಧಿ ಬದಲಾಗಿದ್ದು ಮಾತ್ರ ಅಕ್ಷಮ್ಯ. ಯೂರೋಪಿಯನ್ ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಗಾಂಧಿ ತತ್ವವನ್ನು ಅಧ್ಯಯನ ನಡೆಸಲು ವಿಶೇಷ ಪೀಠಗಳನ್ನು ಸ್ಥಾಪಿಸಿದ್ದರೆ ಗಾಂಧಿ ಹುಟ್ಟಿದ ನಾಡಿನಲ್ಲಿಯೇ ಗಾಂಧಿ ಇಂದು ಮೂಲೆಗುಂಪಾಗಿದ್ದಾರೆ. ದೇಶ ವಿಭಜನೆಯಿರಬಹುದು, ಮುಸ್ಲಿಮರ ಬಗೆಗಿನ ಮೃದು ಧೋರಣೆಯಿರಬಹುದು, ಬೇರಾವುದೇ ಕಾರಣಗಳಿರಬಹುದು, ಆದರೆ ಅವರ ಸರಳ ಜೀವನ, ಸತ್ಯದೆಡೆಗಿನ ಸಾಕ್ಶತ್ಕಾರ, ಅಹಿಂಸಾತ್ಮಕ ಧೋರಣೆ, ಅಸಹಕಾರ ಚಳುವಳಿಯ ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ನಡುಕ ಹುಟ್ಟಿಸಿದ ರೀತಿ ಯಾರೂ ಮರೆಯುವಂತಿಲ್ಲ. ಆ ಮಹಾತ್ಮ ನಾಥೂರಾಮ್ ಗೋಡ್ಸೆಯ ಗುಂಡಿಗೆ ಬಲಿಯಾದ ಈ ದಿನ ನಿಜಕ್ಕೂ ಭಾರತದ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ! ಮಹಾತ್ಮನ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಹೆಸರನ್ನು ಮಾತ್ರ ಉಪಯೋಗಿಸಿಕೊಂಡು, ಅವರ ತತ್ವ ಆದರ್ಶಗಳನ್ನು ಮರೆತಿರುವ ರಾಜಕೀಯ ನಾಯಕರು ಇನ್ನಾದರೂ ಗ್ರಾಮ ಸ್ವರಾಜ್ಯದ ಬಗ್ಗೆ, ರಾಮರಾಜ್ಯದ ಬಗ್ಗೆ ಚಿಂತಿಸಿ ಅವರ ಕನಸನ್ನು ನನಸಾಗಿಸಲಿ ಎಂದು ಆಶಿಸುವೆ. ಅವರು ಅಂದು ಅತಿಯಾಗಿ ಪೂಜಿಸಿದ ಆ ಶ್ರೀರಾಮನೇ ಇಂದು ಹಲವರ ಬಾಯಿ ಚಪಲದ ವಸ್ತುವಾಗಿ ಪರಿಣಮಿಸಿ ಅಪಹಾಸ್ಯಕ್ಕೀಡಾಗಿರುವುದು ಮಾತ್ರ ಪ್ರಜ್ಞಾವಂತ ಸಮಾಜದ ದುರಂತ.

No comments: