Saturday, April 18, 2015

ಅದೇ ಕಣ್ಣು,,,,ಅದೇ ಕಣ್ಣು,,,,!!

ಅದೇ ಕಣ್ಣು,,,,ಅದೇ ಕಣ್ಣು,,,,ಬೇಟೆ ಆಡುತಿದೆ,,,ಭಯವಾ ತುಂಬಿದೆ,,,,,,,,ವಾಸನ್ ಐ ಕೇರ್ ಒಳಕ್ಕೆ ಕಾಲಿಡುವ ತನಕ ಇದೇ ಹಾಡು ಪದೇ ಪದೇ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿತ್ತು.  ಕಳೆದ ಇಪ್ಪತ್ತು ದಿನಗಳಿಂದಲೂ ಕಾಡುತ್ತಿದ್ದ ತಲೆನೋವಿನಿಂದ ಪಾರಾಗಲು ಇಲ್ಲಿಗೆ ಬಂದಿದ್ದೆ.  ಎಲ್ಲಿ ಯಾವ ಪಾರ್ಟ್ ಡ್ಯಾಮೇಜಾಗಿದೆಯೋ,,,ಇನ್ನೇನು ಗ್ರಹಚಾರ ಕಾದಿದೆಯೋ ಅನ್ನುವ ಆತಂಕದಿಂದಲೇ ಬಂದವನನ್ನು ಸುಂದರ ಮುಗುಳ್ನಗುವಿನೊಂದಿಗೆ ಸ್ವಾಗತಿಸಿದ್ದು ಬುರ್ಖಾ ತೊಟ್ಟಿದ್ದ ಆರಡಿ ಎತ್ತರದ ಭಾರತೀಯ ಸುಂದರಿ!  ಅವಳನ್ನು ನೋಡುತ್ತಿದ್ದಂತೆಯೇ ಇದ್ದಕ್ಕಿದ್ದಂಗ್ತೆ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿದ್ದ ಅದೇ ಕಣ್ಣು ಹಾಡು ತನ್ನಂತಾನೇ ಬದಲಾಗಿ "ಕಣ್ಣು ಕಣ್ಣು ಕಲೆತಾಗ" ಅಂತ ಅಣ್ಣಾವ್ರ ಕಾಮನಬಿಲ್ಲು ಚಿತ್ರದ ಹಾಡು ಕೇಳಿಸಲಾರಂಭಿಸಿತು! :-)   ನನ್ನ ಇನ್ಶುರೆನ್ಸ್ ಕಾರ್ಡ್, ಎಮಿರೇಟ್ಸ್ ಐಡಿ ತೆಗೆದುಕೊಂಡ ಆ ಸುಂದರಿ ನನ್ನ ಇನ್ಶುರೆನ್ಸ್ ಕಾರ್ಡ್ ಹಿಂದಿರುಗಿಸಿ,, ಇಟೀಸ್ ನಾಟ್ ಕವರ್ಡ್ ಸಾರ್, ಯೂ ಹ್ಯಾವ್ ಟು ಪೇ ಬಾಯಿ ಕ್ಯಾಷ್ " ಅಂದಾಗ ಓಕೆ, ನೋ ಪ್ರಾಬ್ಸ್ ಅಂದು ಅವಳು ಕೊಟ್ಟ ಫಾರ್ಮ್ ಭಾರ್ತಿ ಮಾಡಿ ನನ್ನ ಸರದಿಗಾಗಿ ಕಾಯುತ್ತಾ ಕುಳಿತೆ.  ಆಗ ನಗುನಗುತ್ತಾ ಬಂದ ಮತ್ತೊಬ್ಬ ಫ್ಲಿಲಿಪ್ಪೈನ್ಸ್ ಸುಂದರಿ "ವುಡ್ ಯೂ ಲೈಕ್ ತು ಹ್ಯಾವ್ ಸಮ್ ಕಾಫಿ ಸರ್" ಅಂದವಳಿಗೆ ಬ್ಯಾಡಾ ಹೋಗಮ್ಮ ಅಂದು ಸುಮ್ಮನೆ ಕುಳಿತೆ.  ಮತ್ತದೇ ಹಾಡಿನ ರಿಂಗಣ ಕಿವಿಯಲ್ಲಿ,,,ಅದೇ ಕಣ್ಣು,,,,ಅದೇ ಕಣ್ಣೂ,,,,,!!!  

ಸ್ವಲ್ಪ ಹೊತ್ತಿನ ನಂತರ ಸ್ವಾಗತ ಕಟ್ಟೆಯಲ್ಲಿ ಕುಳಿತಿದ್ದ ಮಲಬಾರಿ ಸುಂದರಿ "ಮಿಸ್ಟರ್ ಮಂಜುನಾದನ್,,ಪ್ಲೀಸ್ ಕಮ್" ಅಂದಳು. "ಹೂ ಪರ್ಮಿಟೆಡ್ ಯೂ ಟು  ಚೇಂಜ್ ಮೈ ನೇಮ್" ಅಂತ ನಾನು ಸ್ವಲ್ಪ ಸೀರಿಯಸ್ಸಾಗಿ ಕೇಳಿದ್ದಕ್ಕೆ ಗಾಭರಿಯಾದ ಅವಳು ನೀ ಮಲಬಾರಿಯಾ ಅಂತ ಮಲೆಯಾಳಮ್ಮಿನಲ್ಲಿ ಶುರು ಹಚ್ಚಿಕೊಂಡಳು.  "ಐಯಾಮ್ ನಾಟ್ ಫ್ರಮ್ ಕೇರಳ, ಐಯಾಮ್ ಫ್ರಮ್ ಕರ್ನಾಟಕ,,ಬೆಂಗಳೂರು" ಅಂದವನನ್ನು ಒಮ್ಮೆ ಆಪಾದಮಸ್ತಕವಾಗಿ ನೋಡಿದ ಅವಳು "ಇಟ್ಸ್ ಓಕೆ ಸರ್, ಯೂ ಹ್ಯಾವ್ ಟು ಪೇ ೨೫೦ ದಿರ್ಹಾಂಸ್ ಬಿಫೋರ್ ಯುವರ್ ಚೆಕಪ್" ಅಂದಾಗ "ಐಯಾಮ್ ನಾಟ್ ಗೊಯಿಂಗ್ ಟು ರನ್ನವೇ,,,ಡೋಂಟ್ ವರ್ರಿ" ಅಂದ್ರೆ ಇಲ್ಲ ಇಲ್ಲ ಮೊದ್ಲು ದುಡ್ಡು ಕೊಟ್ಟು ಆಮೇಲೆ ಒಳಗೆ ಹೋಗ್ಬೇಕು ಅಂದವಳಿಗೆ ಸುಮ್ಮನೆ ಕುರಿಯಂತೆ ೨೫೦ ದಿರ್ಹಾಂ ಕೊಟ್ಟಿದ್ದಾಯ್ತು!  ಸೆಕ್ಯುರಿಟಿ ಮ್ಯಾನೇಜರ್ ಆಗಿ ಯಾರನ್ನೂ ನಂಬದ ನನಗೆ ನನ್ನನ್ನೇ ಸುಂದರಿಯೊಬ್ಬಳು ನಂಬದೆ ಮೊದಲು ದುಡ್ಡು ಕೊಡು ಅಂದಾಗ ಹೆಂಗಾಗಿರಬೇಡ!  ಮತ್ತೆ ಕಿವಿಯಲ್ಲಿ ಹಾಡು ಬದಲಾಯ್ತು,,,,ಹೃದಯ ಸಮುದ್ರ ಕಲಕಿ,,,ಉಕ್ಕಿದೆ ರೋಷದ ಬೆಂಕಿ,,,,,!!!  ಮೊದಲೇ ಕೆಂಪಾಗಿದ್ದ ನನ್ನ ಕಣ್ಣುಗಳು ಮತ್ತಷ್ಟು ಕೆಂಪಾಗಿದ್ದವು!  ಮಲಬಾರಿ ಸುಂದರಿ ಪಾಪ,,,,ಗಾಭರಿಯಾಗಿ ನನ್ನ ಕಣ್ಣೋಟವನ್ನೆದುರಿಸಲಾಗದೆ ಆ ಕಡೆ ನೋಡುತ್ತಿದ್ದಳು!  :-) 

ನಾನು ಮತ್ತು ಜೊತೆಗೆ ಬಂದಿದ್ದ ಸ್ನೇಹಿತ ವೆಂಕಟ್ ಆರಾಮವಾಗಿ ಸೋಫಾದ ಮೇಲೆ ಕುಳಿತು ಕಾಡುಹರಟೆ ಶುರು ಹಚ್ಚಿಕೊಂಡೆವು.  ಸ್ವಲ್ಪ ಹೊತ್ತಿನ ನಂತರ ನನ್ನ ಬಳಿಗೆ ಬಂದ ನೈಜೀರಿಯನ್ ಸುಂದರಿ ಮಿಸ್ಟರ್ ಮಂಜುನಾಥ್,, ಕೆನ್ ಯೂ ಪ್ಲೀಸ್ ಕಮ್ ಅಂತ ನನ್ನನ್ನು ಬಲಿ ಕೊಡಲು ಕರೆದೊಯ್ಯುವ ಕುರಿಯಂತೆ ಕರೆದೊಯ್ದು ಕಣ್ಣು ಪರೀಕ್ಷಾ ಕೊಠಡಿಯಲ್ಲಿ  ಕೂರಿಸಿದಳು. ಅಲ್ಲಿದ್ದ ಮತ್ತೊಬ್ಬ ಮಲೆಯಾಳಿ ಸುಂದರಿ ಇದ್ದಬದ್ದ ಗಾಜುಗಳನ್ನೆಲ್ಲ ನನ್ನ ಕಣ್ಣಿಗೆ ಹಾಕಿ, ಅದು ಓದಿ, ಇದು ಓದಿ, ಅಂತ ಪರೀಕ್ಷಿಸಿ, ಏನೂ ತೊಂದರೆಯಿಲ್ಲ, ಈಗ ಇರುವ ಕನ್ನಡಕವನ್ನೇ ಉಪಯೋಗಿಸಬಹುದು ಅಂದಾಗ ಸ್ವಲ್ಪ ನಿರಾಳವಾಗಿತ್ತು ನನ್ನ ಮನಸ್ಸಿಗೆ! ನಂತರ  ಇಷ್ಟುದ್ಧ ಗಡ್ಡ ಬಿಟ್ಟುಕೊಂಡಿದ್ದ ಮಂಗಳೂರಿನ ಯುವ ವೈದ್ಯ ಬಂದು ನನ್ನನ್ನೊಮ್ಮೆ ಪರೀಕ್ಷಿಸಿ, ನರ್ಸನ್ನು ಕರೆದು ಡ್ರಾಪ್ಸ್ ಹಾಕಿ ಕೂರಿಸಲು ಹೇಳಿದ್ದರು.  ಬಳುಕುತ್ತಾ ಬಂದ ಫಿಲಿಪ್ಪೈನ್ಸ್ ನರ್ಸ್ ನನ್ನ ಕಣ್ಣುಗಳಿಗೆ ಮೂರು ಬಾರಿ ಎರಡೆರಡು ತೊಟ್ಟು ಡ್ರಾಪ್ಸ್ ಹನಿಸಿದಳು, ಅವಳ ಸುಂದರ ಮೊಗವನ್ನು ಕಂಡ ನನ್ನ ತುಂಟ ಕಣ್ಣುಗಳು ಹೊಸ ರಾಗವೊಂದನ್ನು ಶುರು ಹಚ್ಚಿಕೊಂಡಿದ್ದವು!  ಈಗ ಕಿವಿಯಲ್ಲಿ ಮತ್ತೊಂದು ಹೊಸ ಹಾಡು,,,,,,,"ಕಣ್ಣು ಕಣ್ಣು ಕಲೆತಾಗ,,,,ಮನವು ಉಯ್ಯಾಲೆಯಾಡಿದೆ ತೂಗಿ"  ಹಾಡು ಗುನುಗುನಿಸುತ್ತಾ ನಾನು ನನ್ನಷ್ಟಕ್ಕೆ ನಗುತ್ತಿದ್ದರೆ ಪಕ್ಕದಲ್ಲಿ ಕುಳಿತಿದ್ದ ವೆಂಕಟ್ ನನಗೆ ಏನಾಯಿತೆಂದು ಅರಿಯದೆ ಕಣ್ಣು ಕಣ್ಣು ಬಿಡುತ್ತಿದ್ದ.    

ಡ್ರಾಪ್ಸ್ ಹಾಕಿದ ನಂತರ ಸುಮಾರು ಮುಕ್ಕಾಲು ಘಂಟೆ ಹಾಗೆಯೇ ಕುಳಿತ ನಂತರ ನನ್ನ ಕಣ್ಣುಗಳೊಳಗಿನ ಕಪ್ಪುಗುಡ್ಡೆ ದೊಡ್ಡದಾಗಿ ನನ್ನ ಮುಂದಿನದೆಲ್ಲವೂ ಅಸ್ಪಷ್ಟವಾಗಿ ಕಾಣಿಸಲಾರಂಭಿಸಿತು.  ಆಗ ಮತ್ತೆ ಬಂದ ಫಿಲಿಪ್ಪೈನ್ಸಿನ ಸುಂದರ ನರ್ಸ್ ನನ್ನನ್ನು ವೈದ್ಯರ ಕೋಣೆಯೊಳಕ್ಕೆ ಕರೆದೊಯ್ದಳು.  ನನ್ನನ್ನು ಪರೀಕ್ಷಾ ಟೇಬಲ್ಲಿನ ಮೇಲೆ ಕೂರಿಸಿದ ವೈದ್ಯ ಹಿಂದಿನಿಂದ ಅನಾಮತ್ತಾಗಿ ಗುಂಡಿಯೊಂದನ್ನು ಅದುಮಿ ಸೀದಾ ಮಲಗಿದಂತೆ ಮಾಡಿ ಪ್ರಖರವಾದ ಬೆಳಕನ್ನು ನನ್ನ ಕಣ್ಣುಗಳೊಳಕ್ಕೆ ಬಿಡುತ್ತಾ ಪರೀಕ್ಷಿಸಲಾರಂಭಿಸಿದ.  ಆ ಬೆಳಕಿನ ಪ್ರಖರತೆಗೆ ಹಾಗೂ ಹಾಕಿದ್ದ ಡ್ರಾಪ್ಸ್ ಪ್ರಭಾವದಿಂದ ಕಣ್ಣು ಪೂರ್ತಿ ಕತ್ತಲೆ ಬಂದಂತಾಗಿ ಏನೇನೂ ಕಾಣಿಸದೆ ನಾನು ಅಕ್ಷರಶಃ ಅಂಧನಂತೆ ಕುಳಿತಿದ್ದೆ!  ತನ್ನ ಪರೀಕ್ಷೆಯನ್ನು ಸಾವಧಾನವಾಗಿ ಮುಗಿಸಿದ ಆ ವೈದ್ಯ, ಕೊನೆಗೆ ಆರಿಸಿದ್ದ ಲೈಟುಗಳನ್ನೆಲ್ಲ ಆನ್ ಮಾಡಿ,,,ನಿಮ್ಮ ಕಣ್ಣುಗಳಲ್ಲಿ ಏನೇನೂ ತೊಂದರೆಯಿಲ್ಲ,,,ಎಲ್ಲಾ ನಾರ್ಮಲ್ಲಾಗಿದೆ,,,,ನಿಮ್ಮ ಬಲಗಣ್ಣು ಚೆನ್ನಾಗಿದೆ,,,,ಆದರೆ ನಿಮ್ಮ ಎಡಗಣ್ಣು "ಲೇಝಿ ಐಯ್" ಆಗಿಬಿಟ್ಟಿದೆ, ಅದಕ್ಕೆ ಪ್ರತಿದಿನವೂ ನೀವು ಎರಡರಿಂದ ಮೂರು ಘಂಟೆಗಳ ಕಾಲ ಬಲಗಣ್ಣನ್ನು ಮುಚ್ಚಿಕೊಂಡು ಕೇವಲ ಎಡಗಣ್ಣಿನಲ್ಲಿ ಮಾತ್ರ ಎಲ್ಲವನ್ನೂ ನೋಡುವ, ಓದುವ ಅಭ್ಯಾಸ ಮಾಡಬೇಕು, ಹೀಗೆ ಮಾಡಿ ದಿನವೂ ಎಡಗಣ್ಣಿನ ಮೇಲೆ ಹೆಚ್ಚು ಒತ್ತಡ ಹಾಕಿ ಲೇಝಿ ಆಗಿರುವುದನ್ನು ಆಕ್ಟಿವ್ ಮಾಡಿ, ಮುಂದಿನ ತಿಂಗಳು ಇದೇ ದಿನ ಬಂದು ತೋರಿಸಿ ಎಂದಾಗ ನನಗಂತೂ ಬಹಳ ಖುಷಿಯಾಗಿತ್ತು!  ಆದರೆ ಸದಾ ಆಕ್ಟಿವ್ ಆಗಿರುವ ನನ್ನ ಎಡಗಣ್ಣು ಮಾತ್ರ ಅದು ಹೇಗೆ ಲೇಝಿ ಐಯ್ ಆಯ್ತು ಅನ್ನುವ ಮಿಲಿಯನ್ ಡಾಲರ್ ಪ್ರಶ್ನೆ ನನ್ನ ಮನದಲ್ಲಿ ಮೂಡಿತ್ತು!  

ಸದ್ಯ,,,ಹೆಚ್ಚಾಗಿರುವ ರಕ್ತದಲ್ಲಿನ ಸಕ್ಕರೆಯ ಅಂಶ ನನ್ನ ಕಣ್ಣುಗಳಿಗೆ ಇನ್ನೂ ಯಾವ ಹಾನಿಯನ್ನು ಮಾಡಿರಲಿಲ್ಲ!   ತಲೆನೋವಿಗೆ ನನ್ನ ರಕ್ತದಲ್ಲಿನ ಸಕ್ಕರೆ ಕಾರಣವಾಗಿರಲಿಲ್ಲ,,,ಅದೇನೋ ಹೊಸದಾಗಿ ಹೆಸರಿಟ್ಟಿದ್ದಾರಂತೆ,,,,,"ಕಂಪ್ಯೂಟರ್ ವಾಚಿಂಗ್ ಸಿಂಡ್ರೋಮ್",,,,,ನನ್ನ ತಲೆನೋವಿಗೆ ಈ ಹೊಸ ಸಿಂಡ್ರೋಮ್ ಕಾರಣವಂತೆ!  ಮುವ್ವತ್ತು ನಿಮಿಷ ಸತತವಾಗಿ ಕಂಪ್ಯೂಟರ್ ಉಪಯೋಗಿಸಿದರೆ ಒಂದೆರಡು ನಿಮಿಷ ಕಣ್ಣುಗಳಿಗೆ ಬಿಡುವು ಕೊಡಿ, ಕಿಟಕಿಯಿಂದ ಹೊರಗೆ ದೂರದಲ್ಲಿರುವ್ವುದನ್ನು ನೋಡಿ, ರಿಲ್ಯಾಕ್ಸ್ ಮಾಡಿ ಅಂದ ವೈದ್ಯರಿಗೆ ಓಕೆ ಅಂದೆ! 

ವೈದ್ಯರು ಕೊಟ್ಟ ಐ ಡ್ರಾಪ್ಸ್ ಚೀಟಿ ತೆಗೆದುಕೊಂಡು,  ಬಳಸಲು ಹೇಳಿದ ಐ ಪ್ಯಾಡ್ ವಿಚಾರಗಳನ್ನೆಲ್ಲಾ ಮನನ ಮಾಡಿಕೊಂಡು ಕೊನೆಗೂ ವಾಸನ್ ಐ ಕೇರಿಗೆ ವಿದಾಯ ಹೇಳಿ ಸಮಾಧಾನಚಿತ್ತದಿಂದ ಹೊರ ಬರುವಾಗ ನನ್ನ ಕಿವಿಯಲ್ಲಿ ಮತ್ತೊಂದು ಹೊಸಹಾಡಿನ ರಾಗ ಆರಂಭವಾಗಿತ್ತು,,,,,ಕಂಗಳು ವಂದನೆ ಹೇಳಿವೆ,,,,,ಹೃದಯವು ತುಂಬಿ ಹಾಡಿದೆ,,,,,,!! :-)  

No comments: