Saturday, January 3, 2015

ಹೊಸವರ್ಷದ ಸೂತಕ!ನಮ್ಮ ಕಚೇರಿಯಲ್ಲಿ ಕಳೆದ ವಾರ ನನ್ನನ್ನು ಸಂಪರ್ಕಿಸಿದ ಮಾನವಸಂಪನ್ಮೂಲ ಅಧಿಕಾರಿಯೊಬ್ಬರು ಸುಮಾರು ಒಂದು ತಿಂಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಒಬ್ಬನನ್ನು ಸಂಸ್ಥಯ ವಸತಿಯಿಂದ ತೆರವುಗೊಳಿಸಬೇಕೆಂದು ವಿನಂತಿಸಿಕೊಂಡಿದ್ದರು. ಸರಿ ಎಂದು ಅವನ ಬಗ್ಗೆ ಎಲ್ಲ ವಿವರಗಳನ್ನು ಸಂಗ್ರಹಿಸಿ ವಸತಿಗೃಹಕ್ಕೆ ಭೇಟಿಯಿತ್ತೆ, ತನ್ನ ಕೊಠಡಿಯಲ್ಲಿ ಇತರ ಕೆಲಸಗಾರರೊಂದಿಗೆ ಕುಳಿತಿದ್ದ ಅವನಿಗೆ ನನ್ನ ಪರಿಚಯ ಮಾಡಿಕೊಂಡು ಮಾತಿಗೆಳೆದೆ.  ಸುಮಾರು ೨೪ ವರ್ಷದ ಹೈದರಾಬಾದಿನ ಯುವಕ, ಸ್ವಲ್ಪ ಚಿಂತಿತನಾದಂತಿದ್ದರೂ  ಅಮಾಯಕನಂತೆ ಕಾಣುತ್ತಿದ್ದ. ನಿನ್ನನ್ನು ಈಗಾಗಲೇ ಕೆಲಸದಿಂದ ವಜಾ ಮಾಡಿ ಒಂದು ತಿಂಗಳಾಗಿದೆ, ಇಲ್ಲಿನ ವಲಸೆ ಹಾಗೂ ಕಾರ್ಮಿಕ ನಿಯಮದ ಪ್ರಕಾರ ಕೆಲಸದಿಂದ ವಜಾಗೊಂಡ ನಂತರ ನೀನು ಇಲ್ಲಿ ಒಂದು ತಿಂಗಳು ಮಾತ್ರ ಇರಬಹುದು. ನಿನ್ನ ಕಾಲಾವಧಿ ಮುಗಿದಿರುವುದರಿಂದ ನೀನು ನಾಳೆ ಬಂದು ಕಚೇರಿಯಲ್ಲಿ ಎಲ್ಲಾ ಕಾಗದಪತ್ರಗಳಿಗೆ ಸಹಿ ಮಾಡಿ ನಿನ್ನೂರಿಗೆ ಹೊರಟು ಬಿಡು, ಇಲ್ಲದಿದ್ದರೆ ನಿನಗೆ ತುಂಬಾ ತೊಂದರೆಯಾಗುತ್ತದೆ ಎಂದು ಹೇಳಿದ್ದೆ. ಎಲ್ಲವನ್ನೂ ಸಮಾಧಾನವಾಗಿ ಕೇಳಿಸಿಕೊಂಡ ಅವನು ಆಯ್ತು ಸಾರ್, ನಾಳೆ ಕಚೇರಿಗೆ ಬರುತ್ತೇನೆ ಎಂದಿದ್ದ.  ಇಷ್ಟು ಸುಲಭವಾಗಿ ಒಪ್ಪಿಕೊಂಡನಲ್ಲಾ ಎಂದು ಖುಷಿಯಿಂದ ಹೊರ ಬಂದಿದ್ದೆ.  ಆದರೆ ಅವನು ಹೇಳಿದಂತೆ ಮರುದಿನ ಕಚೇರಿಗೆ ಬರಲಿಲ್ಲ! ಮತ್ತೊಮ್ಮೆ ಮಾನವ ಸಂಪನ್ಮೂಲದವರು ನನ್ನನ್ನು ಸಂಪರ್ಕಿಸಿ ಹೇಗಾದರೂ ಮಾಡಿ ಅವನನ್ನು ಖಾಲಿ ಮಾಡಿಸಬೇಕೆಂದು ವಿನಂತಿಸಿದ್ದರು, ಹಾಗಿಲ್ಲದಿದ್ದಲ್ಲಿ ಸಂಸ್ಥೆಯ ಮುಂದಿನ ಎಲ್ಲಾ ವೀಸಾಗಳಿಗೂ ತೊಂದರೆಯಾಗುತ್ತದೆಂದಿದ್ದರು.

ಕೆಲವು ದಿನ ಕೆಲಸದ ಒತ್ತಡದಲ್ಲಿ ನಾನು ಈ ವಿಚಾರವನ್ನು ಮರೆತಿದ್ದೆ, ಮೊನ್ನೆ ಗುರುವಾರ ನಾನು ಹೋಟೆಲ್ಲಿನ ಡ್ಯೂಟಿ ಮೇನೇಜರ್ ಆಗಿದ್ದೆ, ನನ್ನ ಕೆಲಸ ಮುಗಿಸಿ ರಾತ್ರಿ ಹತ್ತೂವರೆಗೆ ಮನೆಗೆ ಹೊರಡಲು ಆಚೆ ಬಂದರೆ ಧಿಡೀರನೆ ನನ್ನೆದುರಿಗೆ ಅದೇ ಯುವಕ ಪ್ರತ್ಯಕ್ಷನಾಗಬೇಕೇ?  ರಾತ್ರಿ ಅಷ್ಟು ಹೊತ್ತಿನಲ್ಲಿ ಅವನು ಹೋಟೆಲ್ಲಿಗೆ ಬಂದಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು, ಅವನನ್ನು ತಡೆದು ಎಲ್ಲಿಗೆ ಹೋಗುತ್ತಿದ್ದೀಯಾ ಎಂದೆ, ಅದಕ್ಕವನು ಊಟಕ್ಕಾಗಿ ರೆಸ್ಟೋರೆಂಟಿಗೆ ಹೋಗುತ್ತಿದ್ದೇನೆ ಎಂದು ಧಿಮಾಕಿನ ಉತ್ತರ ಕೊಟ್ಟ!  ಅರೆ, ನಿನ್ನನ್ನು ಕೆಲಸದಿಂದ ವಜಾ ಮಾಡಿ ಒಂದು ತಿಂಗಳಿಗಿಂತ ಹೆಚ್ಚಾಗಿದೆ, ನೀನು ಸಂಸ್ಥೆಯ ಕಾನೂನಿನ ಪ್ರಕಾರ ಇಲ್ಲಿ ಕಾಲಿಡುವಂತಿಲ್ಲ, ಇನ್ನು ಊಟಕ್ಕೆ ಹೇಗೆ ಬಂದೆ ಎಂದರೆ ಊಟವಿಲ್ಲದೆ ಹೇಗೆ ಇರೋದಿಕ್ಕಾಗುತ್ತೆ ಸಾರ್, ಸಂಸ್ಥೆಯವರು ನನಗೆ ಕೊಡಬೇಕಾದ ಬಾಕಿ ಹಣವನ್ನೂ ಕೊಟ್ಟಿಲ್ಲ, ನನ್ನ ಬಳಿ ಊಟಕ್ಕೆ ಹಣವಿಲ್ಲ, ಅದಕ್ಕೇ ಇಲ್ಲಿಗೆ ಊಟಕ್ಕೆ ಬಂದೆ, ಎಷ್ಟೋ ಜನ ಆರೇಳು ತಿಂಗಳೂ ಇದೇ ರೀತಿ ಇದ್ದು ಹೋಗಿದ್ದಾರೆ, ನನಗೆ ಮಾತ್ರ ಯಾಕೆ ನೀವು ತಡೆಯುತ್ತೀರಿ ಎಂದು ಪ್ರಶ್ನಿಸಿದ್ದ!  ನಿನ್ನ ಬಳಿ ಹಣವಿಲ್ಲವೆಂದರೆ ಅದು ನೀನಾಗಿ ನೀನು ಮಾಡಿಕೊಂಡಿರುವ ತಲೆನೋವು, ಆ ದಿನ ಕಚೇರಿಗೆ ಬಂದು ಎಲ್ಲ ಕಾಗದಪತ್ರಗಳಿಗೆ ಸಹಿ ಮಾಡಿ, ನಿನಗೆ ಬರಬೇಕಾದ ಬಾಕಿ ಹಣ ತೆಗೆದುಕೊಂಡು ಊರಿಗೆ ಹೋಗು ಎಂದರೆ ನೀನು ಯಾಕೆ ಬರಲಿಲ್ಲ? ಇದು ನೀನಾಗಿ ತಂದುಕೊಂಡಿರುವ ಪರಿಸ್ಥಿತಿ, ಅದಕ್ಕೆ ನಾನು ಏನೂ ಮಾಡಲಾಗುವುದಿಲ್ಲ, ಈಗ ಇಲ್ಲಿಂದ ಮೊದಲು ಹೊರಗೆ ಹೋಗು, ನಾಳೆ ಬಂದು ನಿನ್ನದೇನಿದೆಯೋ ಎಲ್ಲ ಲೆಕ್ಕ ಚುಕ್ತಾ ಮಾಡಿಕೋ ಎಂದೆ.
ನನ್ನ ಮಾತಿನಿಂದ ಸಿಟ್ಟಿಗೆದ್ದ ಅವನು ಬಲವಂತವಾಗಿ ಹೋಟೆಲ್ಲಿನ ಒಳಗೆ ಹೋಗಲು ಮುಂದಡಿಯಿಟ್ಟ, ತಕ್ಷಣ ಎಲ್ಲವನ್ನೂ ನೋಡುತ್ತಿದ್ದ ನಮ್ಮ ಭದ್ರತಾ ರಕ್ಷಕನೊಬ್ಬ ಅವನನ್ನು ಗೊಂಬೆಯಂತೆ ಹಿಡಿದೆತ್ತಿ ಆಚೆಗೆ ನೂಕಿದ್ದ!   ಆದರೆ ಅಲ್ಲಿಂದ ಹೋಗಲು ತಯಾರಿಲ್ಲದ ಅವನು ಅಲ್ಲೇ ಇದ್ದ ಜಗುಲಿಯ ಮೇಲೆ ಕುಳಿತು ಕಾಲಿನ ಮೇಲೆ ಕಾಲು ಹಾಕಿಕೊಂಡು ಸಿಗರೇಟು ಸೇದುತ್ತಾ ನನ್ನನ್ನೇ ದುರುಗುಟ್ಟಿ ನೋಡುತ್ತಾ ಫೋಸು ಕೊಡುತ್ತಿದ್ದ.  ಅವನನ್ನು ಯಾವುದೇ ಕಾರಣಕ್ಕೂ ಒಳಬಿಡದಂತೆ ಭದ್ರತಾ ರಕ್ಷಕರಿಗೆ ತಾಕೀತು ಮಾಡಿ ನಾನು ಮನೆಗೆ ಬಂದಿದ್ದೆ.

ನಾನು ಇತ್ತ ಮನೆಗೆ ಬಂದರೆ ಅತ್ತ ಅವನು ಅನತಿ ದೂರದಲ್ಲಿರುವ ನಮ್ಮದೇ ಸಂಸ್ಥೆಯ ಇನ್ನೊಂದು ಹೋಟೆಲ್ಲಿಗೆ ಹೋಗಿ, ಅವನಿಗೆ ರೆಸ್ಟೋರೆಂಟಿನಲ್ಲಿ ಊಟ ಮಾಡಲು ನಾನು ಅನುಮತಿ ಕೊಟ್ಟಿದ್ದೇನೆಂದು ಗೇಟಿನಲ್ಲಿದ್ದ ಭದ್ರತಾ ರಕ್ಷಕನಿಗೆ ಸುಳ್ಳು ಹೇಳಿ ಹೋಟೆಲ್ಲಿನೊಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದ.  ತಕ್ಷಣ ಅಲ್ಲಿನ ಭದ್ರತಾ ರಕ್ಷಕ ನನ್ನ ಮೊಬೈಲಿಗೆ ಕರೆ ಮಾಡಿ ಅವನಿಗೆ ನಾನು ಅನುಮತಿ ಕೊಟ್ಟಿದ್ದೇನೆಯೋ ಇಲ್ಲವೋ ಎಂದು ಕೇಳಿದ್ದ, ಅವನನ್ನು ಒಳಕ್ಕೆ ಬಿಡದೆ ಹೊರಗಟ್ಟುವಂತೆ ನಾನು ಆದೇಶಿಸಿದ್ದೆ.  ಬಲವಂತವಾಗಿ ಅವನನ್ನು ಹೋಟೆಲ್ಲಿನಿಂದ ಹೊರಗಟ್ಟಿದ ಭದ್ರತಾ ರಕ್ಷಕರು ಅವನನ್ನು ವಸತಿಗೃಹಕ್ಕೆ ಹಿಂದಿರುಗಲು ಸಂಸ್ಥೆಯ ಬಸ್ಸಿನೊಳಕ್ಕೂ ಹತ್ತಲು ಬಿಟ್ಟಿರಲಿಲ್ಲ!  ಇಷ್ಟೆಲ್ಲ ಆದ ನಂತರವೂ ಆ ಜಗಮೊಂಡ ರಾತ್ರಿ ೧ ಘಂಟೆಗೆ ವಸತಿಗೃಹಕ್ಕೆ ವಾಪಸ್ ಬಂದು ಮಲಗಿದ್ದ ಜತೆಯವರನ್ನು ಬಾಗಿಲು ಬಡಿದು ಎಬ್ಬಿಸಿ ಒಳಕ್ಕೆ ಸೇರಿಕೊಂಡಿದ್ದ. ಎಲ್ಲವನ್ನೂ ಕೂಲಂಕುಶವಾಗಿ ವಿಮರ್ಶಿಸಿ ನೋಡಿದಾಗ ಇವನೊಬ್ಬ ಮಾನಸಿಕ ಅಸ್ವಸ್ಥ ಎಂಬುದು ನನಗೆ ಮನದಟ್ಟಾಗಿತ್ತು.

ಮರುದಿನ ಕಚೇರಿಗೆ ಹೋದವನು ನಡೆದ ಎಲ್ಲ ಘಟನೆಗಳನ್ನು ವಿವರಿಸಿ ಸಂಸ್ಥೆಯ ಮುಖ್ಯಸ್ಥರಿಗೆ ಒಂದು ಮಿಂಚಂಚೆಯನ್ನು ಕಳುಹಿಸಿ, ಮಾನಸಿಕವಾಗಿ ಅಸ್ವಸ್ಥನಾಗಿರುವ ಅವನನ್ನು ಕಾನೂನು ಪ್ರಕಾರ ಇಲ್ಲಿಂದ ಹೊರಹಾಕಬೇಕೆಂದು, ಇಲ್ಲದಿದ್ದಲ್ಲಿ ಅವನಿಂದ ಯಾರಿಗಾದರೂ ತೊಂದರೆಯಾಗಬಹುದೆಂದೂ  ವಿವರಿಸಿದ್ದೆ. ತಕ್ಷಣ ಕಾರ್ಯಪ್ರವೃತ್ತರಾದ ಅವರು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಕರೆಸಿ, ವಲಸೆ ವಿಭಾಗದಲ್ಲಿ ಅವನನ್ನು "ತಲೆ ಮರೆಸಿಕೊಂಡಿರುವ ವ್ಯಕ್ತಿ" ಎಂದು ದಾಖಲಿಸಿ ಪೊಲೀಸರಿಗೆ ದೂರು ನೀಡುವಂತೆ ಆದೇಶಿಸಿದ್ದರು. ಅದರಂತೆ ದೂರು ದಾಖಲಿಸಿದ ಮೂರು ದಿನಗಳಲ್ಲಿ  ಸಂಸ್ಥೆಯ ವಸತಿಗೃಹಕ್ಕೆ ಭೇಟಿಯಿತ್ತ ವಲಸೆ ವಿಭಾಗದ ಅಧಿಕಾರಿಗಳು ಇತರ ಕೆಲಸಗಾರರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದ ಅವನನ್ನು ಅನಾಮತ್ತಾಗಿ ಬಂಧಿಸಿ ಶಾರ್ಜಾದ ಜೈಲಿಗೆ ಕರೆದೊಯ್ದು ಬಂಧನದಲ್ಲಿಟ್ಟಿದ್ದಾರೆ.  ಒಂದು ವಾರ ಶಾರ್ಜಾದ ಜೈಲಿನಲ್ಲಿ, ನಂತರ ಒಂದು ತಿಂಗಳು ದುಬೈನ ಕೇಂದ್ರ ಕಾರಾಗೃಹದ ವಲಸೆ ವಿಭಾಗದ ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕು, ನಂತರ ಅವನ ಪಾಸ್ಪೋರ್ಟಿನಲ್ಲಿ ಶಾಶ್ವತ "ಬ್ಯಾನ್" ಸೀಲಿನೊಂದಿಗೆ ಅವನನ್ನು ಪೊಲೀಸರೇ ವಿಮಾನ ಹತ್ತಿಸುತ್ತಾರೆ, ಮತ್ತೆಂದಿಗೂ ಅವನ ಜೀವಮಾನದಲ್ಲಿ ಅವನು ದುಬೈಗೆ ಬರಲು ಸಾಧ್ಯವೇ ಇಲ್ಲ!

ವರ್ಷದ ಕೊನೆಯ ದಿನ ಕಳೆದು ಹೊಸವರ್ಷದ ಆಗಮನದ ನಿರೀಕ್ಷೆಯಲ್ಲಿದ್ದ ಅವನಿಗೆ, ಅವನ ಹುಚ್ಚಾಟದಿಂದಾಗಿ ಜೈಲುವಾಸವೇ ಗತಿಯಾಯ್ತು!  ಹೊಸವರ್ಷದ ಆಚರಣೆಯ ಸಂಭ್ರಮದಲ್ಲಿದ್ದ ಜನರ ನಡುವೆ ಎರಡು ಹೋಟೆಲ್ಲುಗಳ ಭದ್ರತೆಯ ರಕ್ಷಣೆಯ ಹೊಣೆ ಹೊತ್ತಿದ್ದ ನನಗೆ ಅವನ ಬಗ್ಗೆ ಚಿಂತಿಸಲು ಸಮಯವೇ ಇರಲಿಲ್ಲ, ಇಂದು ವಾರದ ಧಾವಂತದ ಬದುಕಿಗೆ ಬಿಡುವು, ಧುತ್ತೆಂದು ಅವನ ಕಥೆ ನೆನಪಾಗಿ ಮನದ ಮೂಲೆಯಲ್ಲಿ ಸೂತಕದ ಛಾಯೆ ಕಾಡಿತು

No comments: