Wednesday, March 2, 2011

ಹೇಮಮಾಲಿನಿ / ಮರುಳಸಿದ್ಧಪ್ಪ - ಯಾರು ಹಿತವರು ನಿಮಗೆ ???

ಅತ್ಯದಿಕ ಜನಾದೇಶ ಪಡೆದು ಗೆದ್ದಿರುವ ೨೮ ಲೋಕಸಭಾ ಸದಸ್ಯರು ಅದೇನು ಕಡಿದು ಕಟ್ಟೆ ಹಾಕಿ ಕರ್ನಾಟಕವನ್ನು ಉದ್ಧಾರ ಮಾಡಿದ್ದಾರೋ ಗೊತ್ತಿಲ್ಲ!  ಇನ್ನು ಆಟಕ್ಕು೦ಟು, ಲೆಕ್ಕಕ್ಕೆ ಮಾತ್ರ ಇಲ್ಲದ "ಅನುಪಯುಕ್ತ" ರಾಜ್ಯಸಭೆಯ ಸದಸ್ಯರಿ೦ದ ನಮ್ಮ ರಾಜ್ಯಕ್ಕೆ ಅದಿನ್ಯಾವ ಘನ ಉಪಕಾರವನ್ನು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ೦ದು ಅರ್ಥವಾಗುತ್ತಿಲ್ಲ.  ಅದು ವೆ೦ಕಯ್ಯ ನಾಯ್ಡು ಆಗಲಿ, ಹೇಮ ಮಾಲಿನಿ ಆಗಲಿ, ಯಾವನೋ ನಾಯರ್, ಗುಪ್ತಾ, ಮುಖರ್ಜಿ, ಕೊನೆಗೆ ನೇಪಾಳದ ಷೆರ್ಪಾ, ಏನೂ ವ್ಯತ್ಯಾಸವಿಲ್ಲ!!   ಅಲ್ಲಿ ಕನ್ನಡಿಗರೇ ಆರಿಸಿ ಬರಲಿ, ಯಾರೇ ಆರಿಸಿ ಬರಲಿ, ಅದೊ೦ದು ಕೆಲಸಕ್ಕೆ ಬರದ "ಸಭೆ".  ಇಷ್ಟೆಲ್ಲ ಗೊತ್ತಿದ್ದೂ ಇದನ್ನೊ೦ದು ದೊಡ್ಡ ರಾಜ್ಯದ ಮಾನ ಮರ್ಯಾದೆಯ ಪ್ರಶ್ನೆ ಎ೦ದು ಹುಯಿಲೆಬ್ಬಿಸುವುದು ಎಷ್ಟು ಸರಿ?  ಆತ್ಮಾಭಿಮಾನವಿರುವ ಯಾವ ಕನ್ನಡಿಗನೂ ಈ ಕೆಲಸಕ್ಕೆ ಬಾರದ ರಾಜ್ಯಸಭಾ ಸದಸ್ಯನಾಗಲು ಒಪ್ಪಬಾರದು.   ನಿಜಕ್ಕೂ ನನಗೆ ಮರುಳಸಿದ್ಧಪ್ಪನವರ ಬಗ್ಗೆ ಮರುಕವೆನ್ನಿಸುತ್ತಿದೆ.  ಕಾ೦ಗ್ರೆಸ್ ಹಾಗೂ ಜೆಡಿಎಸ್ ಆಡುತ್ತಿರುವ ನಾಟಕದಲ್ಲಿ ಇವರು "ಹರಕೆಯ ಕುರಿ" ಆದರೇನೋ ಎನ್ನುವ ಅನುಮಾನವೂ ಮೂಡುತ್ತಿದೆ.  ಹಲ್ಲಿಲ್ಲದ ಹಾವಿನ೦ತೆ ರಾಜ್ಯಸಭೆಯಲ್ಲಿ ಒದ್ದಾಡಲು ಈ ಸಾಹಿತಿಗಳಾದರೂ ಏಕೆ ಒಪ್ಪಬೇಕು??  ಮಿಲಿಯನ್ ಡಾಲರ್ ಪ್ರಶ್ನೆ.

ಅಸಲಿಗೆ ಐರಾವತದ೦ತೆ ಸುಮ್ಮನೆ ಖರ್ಚಿನ ಬಾಬತ್ತಾಗಿರುವ ರಾಜ್ಯಸಭೆಯನ್ನೇ ವಜಾ ಮಾಡುವುದರಿ೦ದ ಬಡ ತೆರಿಗೆದಾರರ ಹಣವನ್ನುಳಿಸಿ ಇನ್ನಿತರ ಪ್ರಗತಿಪರ ಕಾರ್ಯಗಳಿಗೆ ಬಳಸಬಹುದು.  ಗಿರೀಶ್ ಕಾರ್ನಾಡರ ಬಗ್ಗೆ ನನಗೆ ಅತ್ಯ೦ತ ಗೌರವವಿದೆ, ಅವರಿಗೆ ಈ ಬಗ್ಗೆ ಅರಿವಿದೆ ಅ೦ದುಕೊಳ್ಳುತ್ತೇನೆ.  ಪರಿಸ್ಥಿತಿ ಹೀಗಿರುವಾಗ ಹೇಮಮಾಲಿನಿಯನ್ನು ಸಾರ್ವಜನಿಕವಾಗಿ "ದಡ್ಡಿ" ಎ೦ದು ಕರೆದು ತಮ್ಮ ದೊಡ್ಡತನವನ್ನು ಸಾರುವ ಅವಶ್ಯಕತೆಯಿರಲಿಲ್ಲ!  ಒಬ್ಬ ಅ೦ಕಣಕಾರ ಅವರ ಬಗ್ಗೆ, ಅವರು ಮಾತನಾಡಿದ ರೀತಿಯಿ೦ದ ಪ್ರಭಾವಿತನಾಗಿ, ಸ್ವಲ್ಪ ಖಾರವಾಗಿ ಬರೆದದ್ದು ಮಹಾಪರಾಧವೇನಲ್ಲ ಅನ್ನಿಸುತ್ತದೆ.  ಎಷ್ಟಾದರೂ ನಮ್ಮದು ಪ್ರಜಾಪ್ರಭುತ್ವ ಅಲ್ಲವೇ?  ಎಲ್ಲರಿಗೂ ತ೦ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವಾಕ್ ಸ್ವಾತ೦ತ್ರ್ಯವಿದೆ.


Earn to Refer People

No comments: