Thursday, January 28, 2010

ತೆರೆದಿದೆ ಮನೆ ಓ,,,, ಬಾ ಅತಿಥಿ.....

ಕೆಲ ದಿನಗಳ ಹಿಂದೆ, ಹೀಗೆಯೇ ಕಛೇರಿಯ ಕೆಲಸದಲ್ಲಿ ತಲ್ಲೀನವಾಗಿದ್ದಾಗ ಬಂದ ಒಂದು ಮೂರೇ ಸಾಲಿನಲ್ಲಿದ್ದ ಮಿಂಚಂಚೆ ನನ್ನ ಗಮನ ಸೆಳೆಯಿತು. "ಸಾರ್, ನಮಸ್ಕಾರ, ನಾನು.......... ಕಛೇರಿಯ ಕೆಲಸದ ಮೇಲೆ ದುಬೈಗೆ ಬರುತ್ತಿದ್ದೇನೆ. ೨೪ರಿಂದ ೨೮ರವರೆಗೆ ನಾನು ದುಬೈನಲ್ಲಿರುತ್ತೇನೆ. ನಿಮ್ಮ ಬರಹಗಳನ್ನು ಅಂತರ್ಜಾಲದಲ್ಲಿ ಓದಿದ್ದೇನೆ, ನಿಮ್ಮನ್ನು ನೋಡಬೇಕು, ಮಾತಾಡಬೇಕೆಂಬ ಆಸೆ, ಬೇರೇನಿಲ್ಲ!", ಇದನ್ನೋದಿ ನನಗೊಮ್ಮೆಗೆ ಅವರಿಗೆ ಏನುತ್ತರ ಕೊಡಬೇಕೆಂದು ಅರ್ಥವಾಗಲಿಲ್ಲ. ಕೆಲ ಸಮಯ ಯೋಚಿಸಿ ನಂತರ ಪ್ರತ್ಯುತ್ತರ ಕಳುಹಿಸಿದೆ, " ನಾನು ಆ ಸಮಯದಲ್ಲಿ ದುಬೈನಲ್ಲಿರುತ್ತೇನೆ, ಬಂದಾಗ ನನ್ನ ಮೊಬೈಲಿಗೆ ಫೋನ್ ಮಾಡಿ" ಎಂದು ಬರೆದು ನನ್ನ ಮೊಬೈಲ್ ನಂಬರ್ ಕೊಟ್ಟೆ. ಈ ಕಣ್ಣು, ಕರುಳು ಅರಿಯದ ಅಚಾನಕ್ ಅತಿಥಿಯನ್ನು ನೋಡಲು ನನಗೂ ಒಂದು ರೀತಿಯ ಕುತೂಹಲ ಮೂಡಿತ್ತು. ನಂತರದ ದಿನಗಳಲ್ಲಿ ಕೆಲಸದ ಒತ್ತಡದಲ್ಲಿ ಈ ಪ್ರಸಂಗ ನನ್ನ ನೆನಪಿನಿಂದ ಮರೆಯಾಗಿತ್ತು.

ಮೊನ್ನೆ, ೨೭ರಂದು ನನ್ನ ಮೊಬೈಲಿಗೆ ಬಂತೊಂದು ಕರೆ, ಆ ಕಡೆಯಿಂದ ಅಚ್ಛ ಕನ್ನಡದಲ್ಲಿ, "ಸಾರ್, ನಮಸ್ಕಾರ, ನಾನು...........ಮಾತಾಡ್ತಿರೋದು. ಈ ಹಿಂದೆ ನಾನು ನಿಮಗೆ ಒಂದು ಮಿಂಚಂಚೆ ಕಳುಹಿಸಿದ್ದೆ. ಈಗ ದುಬೈನಲ್ಲಿ ನನ್ನ ಕೆಲಸ ಮುಗಿದಿದೆ, ನೀವು ಬಿಡುವಾಗಿದ್ದರೆ ಒಮ್ಮೆ ನಿಮ್ಮನ್ನು ನೋಡುವ, ನಿಮ್ಮೊಡನೆ ಮಾತಾಡುವಾಸೆ" ಅಂದ ಸುಲಲಿತ ಕನ್ನಡ ಧ್ವನಿಗೆ ಮನ ಹಾಗೆಯೇ ಮಾರು ಹೋಯಿತು. "ಆಯಿತು, ನೀವು ಎಷ್ಟು ಹೊತ್ತಿಗೆ ಬಿಡುವಾಗುತ್ತೀರಿ ಹೇಳಿ, ನಾನು ಅಲ್ಲಿಗೇ ಬರುತ್ತೇನೆ’ ಎಂದೆ. ಕೊನೆಗೆ ಸಂಜೆ ಆರೂವರೆಗೆ ಭೇಟಿಯಾಗುವುದೆಂದು ನಿಗದಿಯಾಯಿತು. ಕಛೇರಿಯಿಂದ ಐದೂವರೆಗೆ ಹೊರಟವನು ಸೀದಾ ನನ್ನ ಕಾರನ್ನು ವರ್ಲ್ಡ್ ಟ್ರೇಡ್ ಸೆಂಟರ್ ಕಡೆಗೆ ತಿರುಗಿಸಿದೆ. ಅಲ್ಲಿ ಬಂದರೆ ಅದಾಗ ತಾನೇ "ಅರಬ್ ಆರೋಗ್ಯ ಸಮ್ಮೇಳನ-೨೦೧೦" ಮುಗಿದು ಬಂದ ಅತಿಥಿಗಳೆಲ್ಲ ಧಾವಂತದಲ್ಲಿ ತಂತಮ್ಮ ಕಾರು, ಬಸ್ಸುಗಳನ್ನು ಹಿಡಿಯುವ ಆತುರದಲ್ಲಿದ್ದರು. ಇಡೀ ಟ್ರೇಡ್ ಸೆಂಟರಿನ ವಾತಾವರಣ ವಿವಿಧ ದೇಶಗಳ ಸಾವಿರಾರು ಪ್ರತಿನಿಧಿಗಳ ಗದ್ದಲದಿಂದ ತುಂಬಿ ಹೋಗಿತ್ತು. ಆ ಗೌಜಿನಲ್ಲಿ ಅಲ್ಲೆಲ್ಲೂ ನನ್ನ ಕಾರು ನಿಲ್ಲಿಸಲು ಜಾಗ ಸಿಗಲಿಲ್ಲ. ಫೋನ್ ಮಾಡಿ ಅವರಿಗೆ ವಿಷಯ ತಿಳಿಸಿದೆ, ಕೊನೆಗೆ ಅವರ ಕೆಲಸ ಮುಗಿಸಿ ಹೊರಬಂದಾಗ ಆರೂವರೆಯಾಗಿತ್ತು. ಹೊಸಬರು ಬೇರೆ, ಮುಖಾಮುಖಿ ಪರಿಚಯವಿಲ್ಲ, ಹೇಗೆ ಗುರುತು ಹಿಡಿಯುವುದು? ಕೊನೆಗೆ ನನ್ನ ಕಾರನ್ನು ಒಂದು ಕಡೆ ನಿಲ್ಲಿಸಿ ಆ ದೊಡ್ಡ ಹಾಲಿನ ಪಕ್ಕದಲ್ಲೇ ಇದ್ದ "ಈಬಿಸ್" ಹೋಟೆಲಿನ ಹತ್ತಿರ ಬಂದು ಒಂದು ದಮ್ಮೆಳೆಯುತ್ತಾ ನಿಂತೆ. ಕೊನೆಗೂ ಬಂದೇ ಬಿಟ್ಟರು ನಮ್ಮ ಅತಿಥಿ. ಫೋನ್ ಮಾಡುತ್ತಾ ಎಲ್ಲಿದ್ದೀರಿ ಎಂದವರಿಗೆ ನಾನು ನಿಂತಿದ್ದ ಸ್ಥಳದ ಬಗ್ಗೆ ತಿಳಿಸಿದೆ, ಅದೇ ಸಮಯಕ್ಕೆ ಚೀನಾದ ಇಬ್ಬರು ಅಲ್ಲಿ ನಿಂತು "ಬುರ್ಜ್ ದುಬೈ" ನ ಹಿನ್ನೆಲೆಯಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಆ ಜಾಗ ಹೇಳಿದರೆ ಆ ನನ್ನ ಅತಿಥಿ ಅವರ ಹಿಂದೆಯೇ ನಿಂತಿದ್ದರು. ನಾನು ಕೈ ಬೀಸಿದಾಗ ಮುಖದ ತುಂಬಾ ನಗು ತುಂಬಿಕೊಂಡು ನನ್ನತ್ತ ಧಾವಿಸಿದರು. ಆತ್ಮೀಯವಾಗಿ ಅವರನ್ನು ಬರ ಮಾಡಿಕೊಂಡು ನನ್ನ ಕಾರಿನ ಬಳಿಗೆ ಬಂದೆ. "ಎಲ್ಲಿಗೆ ಹೋಗೋಣ" ಅಂದವರಿಗೆ ನಮ್ಮ "ಮನೆಗೆ ಹೋಗೋಣ ಬನ್ನಿ" ಎಂದು ಸೀದಾ ಕರಾಮಾದಲ್ಲಿ ನನ್ನ ಫ್ಲಾಟಿಗೆ ಕರೆ ತಂದೆ.

ಮನೆಗೆ ಬಂದ ನನ್ನ ಅತಿಥಿ, ಕೈ ಕಾಲು ಮುಖ ತೊಳೆದುಕೊಂಡು ಪ್ರಸನ್ನವದನರಾಗಿ ಬಂದು ನನ್ನ ಮುಂದೆ ಕುಳಿತರು. ನಾನೂ ಹೋಗಿ ಸ್ವಲ್ಪ ಫ್ರೆಷ್ ಆಗಿ ಬಂದೆ. ನಂತರ ಮಾತು ಶುರುವಾಯಿತು, ಅವರೊಬ್ಬ ಸಾಫ್ಟ್ವೇರ್ ಇಂಜಿನಿಯರ್, ಅಮೇರಿಕಾದಲ್ಲಿ, ಜರ್ಮನಿಯಲ್ಲಿ, ಇಂಗ್ಲೆಂಡಿನಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿ, ಈಗ ಭಾರತದ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ಇಲ್ಲಿಗೆ ಆ ಸಂಸ್ಥೆಯ ರಾಯಭಾರಿಯಾಗಿ ಬಂದಿದ್ದರು. ಮಾತು ಹಾಗೆಯೇ ಜೀವನದ ಹಲವಾರು ಏಳುಬೀಳುಗಳ ಕಡೆಗೆ ಹೊರಳಿ, ಕೊನೆಗೆ ನನ್ನ ಬರಹಗಳ ಬಳಿ ಬಂದು ನಿಂತಿತು. ಅವರಿಗೋ ತುಂಬಾ ಕುತೂಹಲ. ಏಕೆಂದರೆ ನನ್ನ ಬರಹಗಳಲ್ಲಿ ನಾನು ನನ್ನ ಜೀವನದ ಹಲವಾರು ಬಗ್ಗೆ, ನನ್ನ ಹೋರಾಟದ ಬಗ್ಗೆ, ವೈಫಲ್ಯ-ಸಫಲತೆಗಳ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದೆ. ನನ್ನ ಮಟ್ಟಿಗೆ ನನ್ನ ಬದುಕೊಂದು "ತೆರೆದಿಟ್ಟ ಕಾದಂಬರಿ". ಅಲ್ಲಿ ಮುಚ್ಚುಮರೆಗಳೇನೂ ಇರಲಿಲ್ಲ, ವೈಭವೀಕರಣವೂ ಇರಲಿಲ್ಲ, ಪ್ರತಿಯೊಂದೂ ವಾಸ್ತವವನ್ನು ಕುರಿತು ಬರೆದದ್ದೇ ಆಗಿತ್ತು. ಕೊನೆಗೆ ಅಪ್ಪನ ದುರಭಿಮಾನ, ಹಠ, ಅವರ ಮುಂಗೋಪ, ಅದರಿಂದ ಮನೆಯಲ್ಲಾದ ನೂರೆಂಟು ಸಮಸ್ಯೆಗಳು, ಹಲವಾರು ಸಾವುಗಳು, ನನ್ನ ಪ್ರೇಮ ವೈಫಲ್ಯ, ನಾನದನ್ನು ಗೆದ್ದು ಬಂದ ರೀತಿ, ಈಗ ಜೀವನದಲ್ಲಿ ನೆಲೆಯಾಗಿ ನಿಂತು ಎಲ್ಲವನ್ನೂ ಯಾವುದೇ ಭಾವತಿರೇಕಗಳಿಲ್ಲದೆ ನೋಡಿ ಬದುಕುತ್ತಿರುವ ರೀತಿ, ಇವೆಲ್ಲದರ ಬಗ್ಗೆ ಚರ್ಚೆಯಾಯಿತು. ಅವರ ಮಾರ್ಮಿಕ ಪ್ರಶ್ನೆ, " ಸಾರ್, ನೀವು ನಿಮ್ಮ ಕಥೆ ಬರೆಯುವಾಗ ನಿಮಗೆ ಎಲ್ಲಿಯೂ ಮುಜುಗರ ಅಂತ ಅನ್ನಿಸಲಿಲ್ಲವೆ?" ನಾನು ಹೇಳಿದೆ,
" ನನಗೆ ಆದರ್ಶ ಮಹಾತ್ಮ ಗಾಂಧಿ, ಅವರು ಅವರ ಆತ್ಮಕಥೆಯಲ್ಲಿ ತಮ್ಮ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದಾರೆ, ಹಾಗಿರುವಾಗ ಅವರ ಮುಂದೆ ನಾನೆಷ್ಟರವನು?" ಹಾಗೆಯೇ ಮಾತನಾಡುತ್ತಿರುವಾಗ ಅದೇಕೋ ಗೊತ್ತಿಲ್ಲ, ಆ ನನ್ನ ಅತಿಥಿ ಇದ್ದಕ್ಕಿದ್ದಂತೆ ಭಾವುಕರಾಗಿ ಅವರ ಕಣ್ಣುಗಳಲ್ಲಿ ಧಾರಾಕಾರ ಕಂಬನಿ ಸುರಿಯತೊಡಗಿತು.
"ನಾನು ಎಲ್ಲಾ ನಿಮ್ಮಂಥದೇ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದೇನೆ ಸಾರ್, ಆದರೆ ಹೇಗೆ ಬಗೆಹರಿಸಬೇಕೆಂದು ಗೊತ್ತಾಗುತ್ತಿಲ್ಲ, ಅಪ್ಪ ನನ್ನಿಂದ ದೂರಾಗಿದ್ದಾರೆ, ಅವರನ್ನು ಹೇಗೆ ಒಪ್ಪಿಸಿ ನಮ್ಮೊಡನೆ ಇರುವಂತೆ ಮಾಡುವುದು ಎಂದು ಗೊತ್ತಾಗುತ್ತಿಲ್ಲ" ಎಂದು ಬಿಕ್ಕಿದರು.

ಅವರನ್ನು ಸಮಾಧಾನಿಸಿ, " ನೀವು ನಿಮ್ಮ ಅಹಂ ಬಿಟ್ಟು ಪರಿಸ್ಥಿತಿಯೊಡನೆ ರಾಜಿ ಮಾಡಿಕೊಳ್ಳಿ, ಬಂದದ್ದೆಲ್ಲಾ ಬರಲಿ ಎಂದು ಧೈರ್ಯವಾಗಿ ಮುನ್ನುಗ್ಗಿ, ಎಂದಿಗೂ ಆತ್ಮವಿಶ್ವಾಸವನ್ನು ಕುಗ್ಗಿಸಿಕೊಳ್ಳಬೇಡಿ, ಒಬ್ಬ ಮಗನಾಗಿ, ಗಂಡನಾಗಿ, ತಂದೆಯಾಗಿ, ಸ್ನೇಹಿತನಾಗಿ, ಒಬ್ಬ ಸಾಮನ್ಯ ಪ್ರಜೆಯಾಗಿ, ಆಯಾಯಾ ಸನ್ನಿವೇಶಗಳಲ್ಲಿ ನೀವು ಏನು ಮಾಡಬೇಕೋ ಅದನ್ನು ಯಾವುದೇ ಸಂಕೋಚವಿಲ್ಲದೆ, ನಿಷ್ಠೆಯಿಂದ ಮಾಡಿ. ಆಗ ನೋಡಿ, ನೀವು ಹಿಡಿದ ಯಾವ ಕಾರ್ಯದಲ್ಲಿಯೂ ನಿಮಗೆ ಸೋಲಾಗುವುದಿಲ್ಲ, ಎಲ್ಲ ಕಡೆ ನಿಮಗೆ ಜಯಮಾಲೆ ಖಂಡಿತ, ನಿಮ್ಮ ಸಂಬಂಧಗಳೂ ಸುಧಾರಿಸುತ್ತವೆ, ಜೀವನಗತಿಯೂ ಸುಧಾರಿಸುತ್ತದೆ, ನಿಮ್ಮಿಂದ ಅದೆಷ್ಟೋ ಜನಗಳಿಗೆ ಸಹಾಯವಾಗುತ್ತದೆ. ನೀವು ಸಮಾಜಮುಖಿಯಾಗಿಬಿಡುತ್ತೀರಿ" ಎಂದಾಗ ಅಲ್ಲಿ ಮಾತು ಮೂಕವಾಗಿತ್ತು. ಬಹಳ ಹೊತ್ತು ನಮ್ಮಿಬ್ಬರ ನಡುವೆ ಒಂದು ಅಗಾಧವಾದ ಮೌನ ಕವಿದಿತ್ತು, ಅವರ ಮನದಲ್ಲಿ ನೂರೆಂಟು ತಾಕಲಾಟಗಳು ನಡೆಯುತ್ತಿದ್ದವು. ಭಾವನೆಗಳ ಮಹಾಪೂರದಲ್ಲಿ ಹೊಯ್ದಾಡುತ್ತಿದ್ದ ಅವರ ಕಣ್ಗಳಲ್ಲಿ ಕಂಬನಿ ತೊಟ್ಟಿಕ್ಕುತ್ತಿತ್ತು. ಈ ಮಧ್ಯೆ ನಮ್ಮ ಬ್ಲಾಕ್ಲೇಬಲ್ ಬಾಟಲಿ ಅರ್ಧ ಖಾಲಿಯಾಗಿತ್ತು. ಉಡುಪಿ ಹೋಟೆಲ್ಲಿಂದ ತರಿಸಿದ ಚಿತ್ರಾನ್ನ(ಅವರು ಸಸ್ಯಾಹಾರಿ) ತಿನ್ನುತ್ತಾ ಮತ್ತೆ ಕೆಲವು ಮಾತುಗಳನ್ನಾಡುತ್ತಾ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅದಾಗಲೇ ಹನ್ನೊಂದೂವರೆಯಾಗಿ ಹೋಗಿತ್ತು, " ನನಗೆ ನಾಳೆ ಒಂದು ಪ್ರೆಸೆಂಟೇಷನ್ ಇದೆ ಸಾರ್, ಅದಕ್ಕಾಗಿ ಸಿದ್ಧನಾಗಬೇಕು, ಹೊರಡುತ್ತೇನೆ" ಎಂದವರಿಗೆ ಶುಭ ಹಾರೈಸಿ ಟ್ಯಾಕ್ಸಿ ಹತ್ತಿಸಿದೆ.

ಇಂದು ಬೆಳಿಗ್ಗೆ ಅವರ ಪ್ರೆಸೆಂಟೇಷನ್ ಮುಗಿದ ನಂತರ ಮತ್ತೆ ಫೋನ್ ಮಾಡಿದರು. ನನ್ನ ಆದರಾತಿಥ್ಯಕ್ಕೆ ವಂದನೆಗಳನ್ನರ್ಪಿಸಿದರು. "ನಿಮ್ಮನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು, ಈ ದಿನ ನಾನು ವಾಪಸ್ಸು ಹೋಗುತ್ತಿದ್ದೇನೆ, ಆದರೆ ಮನಸ್ಸಿನಲ್ಲಿ ಅದೇನೋ ಇದುವರೆಗೂ ನಾನು ಕಂಡಿಲ್ಲದಿದ್ದ ಒಂದು ಅತ್ಯುನ್ನತ ಪ್ರಫುಲ್ಲ ಭಾವನೆಯೊಂದಿಗೆ ಹೋಗುತ್ತಿದ್ದೇನೆ" ಎಂದವರಿಗೆ ಏನು ಹೇಳಬೇಕೋ ಗೊತ್ತಾಗದೆ ’ಹೋಗಿ ಬನ್ನಿ ಶುಭವಾಗಲ” ಎಂದು ಹಾರೈಸಿದೆ. ಕೆಲವು ಮನದಾಳದ ಮಾತುಗಳು ಹಾಗೆಯೇ ಉಳಿದವು, ಅಚಾನಕ್ಕಾಗಿ ಬಂದ ನನ್ನ ಅತಿಥಿ, ವಿದಾಯ ಹೇಳಿ ಹೊರಟಿದ್ದರು ತನ್ನೂರಿನ ಕಡೆಗೆ.

No comments: