Friday, January 22, 2010

ನೂರೊಂದು ನೆನಪು ಎದೆಯಾಳದಿಂದ

"ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಬಹು ದು:ಖದಿಂದ", ನಿನ್ನೆ ಗಾನ ಗಾರುಡಿಗನ ಸಾವಿನ ಸುದ್ಧಿ ಕೇಳಿ ನೊಂದಿದ್ದ ಮನಕ್ಕೆ ಇಂದು ಅಭಿನವ ಭಾರ್ಗವನ ಸಾವಿನ ಸುದ್ಧಿ ಬರಸಿಡಿಲಿನಂತೆ ಎರಗಿದೆ. ಮನಸ್ಸು ಮೂಕವಾಗಿದೆ, ಕಣ್ಗಳು ಮಬ್ಬಾಗಿವೆ, ಆ ನೋವ ಬಣ್ಣಿಸಲು ಪದಗಳು ಸಾಲದಾಗಿವೆ. ಇಂದು ನಮ್ಮನ್ನಗಲಿದ ನಟ ವಿಷ್ಣುವರ್ಧನ್ ನನ್ನ ಜೀವನದಲ್ಲಿ ನಡೆದ ಬಹುತೇಕ ಘಟನೆಗಳಿಗೆ ತಮ್ಮ ಸಿನಿಮಾಗಳಲ್ಲಿ ಜೀವ ತುಂಬಿ ನಾಯಕನಾಗಿದ್ದವರು, ಸೋಲುತ್ತಿದ್ದ ನನ್ನ ಮನಸ್ಸಿಗೆ, ನಂದಿ ಹೋಗುತ್ತಿದ್ದ ಆತ್ಮ ವಿಶ್ವಾಸಕ್ಕೆ ಹೊಸ ಭರವಸೆಯನ್ನು ತುಂಬಿದ್ದವರು. ಬಾಲ್ಯದಲ್ಲಿ ಅಪ್ಪ ಅವರ ರಾಮಾಚಾರಿ ಪಾತ್ರದಿಂದ ತುಂಬಾ ಆಕರ್ಷಿತರಾಗಿ "ನಾಗರಹಾವು" ಚಿತ್ರವನ್ನು ನಾಲ್ಕಾರು ಸಲ ನೋಡಿ, ನನ್ನನ್ನೂ ಜೊತೆಗೆ ಕರೆದೊಯ್ದಿದ್ದರು. ಆ ಕಂಗಳಲ್ಲಿನ ಆಕ್ರೋಶ, ಮಾತುಗಳಲ್ಲಿನ ಆವೇಶ, ಚಿಕ್ಕಂದಿನಲ್ಲಿ ನನಗೆ ತುಂಬಾ ಇಷ್ಟವಾಗಿತ್ತು. ಬೆಳೆಯುತ್ತಾ ಹೋದಂತೆ ಅದೆಷ್ಟು ಬಾರಿ ಆ ಸಿನಿಮಾ ನೋಡಿದೆನೋ, ಅದೆಷ್ಟು ಅವರನ್ನು ಹಚ್ಚಿಕೊಂಡಿದ್ದೆನೋ, ಹೇಳಲಸಾಧ್ಯ. ಅಲಮೇಲುವಿನ ಮೇಲೆ ರಾಮಚಾರಿಗಿದ್ದ ಪ್ರೀತಿ, ಚಾಮಯ್ಯ ಮೇಷ್ಟ್ರ ಮಾತು ಕೇಳಿ ಅವಳನ್ನು ಬಿಟ್ಟು ಕೊಟ್ಟವನಿಗೆ ಅಚಾನಕ್ಕಾಗಿ ಅವಳು ಮತ್ತೆ ಸಿಕ್ಕಿ " ಕಥೆ ಹೇಳುವೆ ನನ್ನ ಕಥೆ ಹೇಳುವೆ" ಎಂದು ಅಳುತ್ತ ತನ್ನ ಕಥೆ ಹೇಳುವಾಗ ಅದೆಷ್ಟು ಬಾರಿ ಬಿಕ್ಕಿದ್ದೆನೋ, ಅದೇ ರಾಮಾಚಾರಿಯ ಆಕ್ರೋಶ, ಅವನ ದುರಂತ ಅಂತ್ಯ ಕಂಡು ಅದೆಷ್ಟು ಮರುಗಿದ್ದೆನೋ, ಬಣ್ಣಿಸಲು ಪದಗಳು ನಿಲುಕುತ್ತಿಲ್ಲ.

ವಿಷ್ಣುವರ್ಧನ್ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿದ್ದು, ೧೯೮೩ರಲ್ಲಿ ಬಿಡುಗಡೆಯಾದ "ಕರ್ಣ" ಚಿತ್ರದಲ್ಲಿನ ಅಭಿನಯದಿಂದ. ಪ್ರೌಢಶಾಲೆಯಲ್ಲಿ ಓದುತ್ತಿದ್ದ ನಾನು ಅಪ್ಪ-ಅಮ್ಮನಿಂದ ತುಂಬಾನೇ ಉದಾಸೀನಕ್ಕೆ, ತಾತ್ಸಾರಕ್ಕೆ ತುತ್ತಾಗಿದ್ದ ಕಾಲವದು. ಆ ಚಿತ್ರದಲ್ಲಿ ವಿಷ್ಣುವರ್ಧನ್, ಕಾಲ್ಚೆಂಡಾಟದಲ್ಲಿ ಬಹಳ ಆಸಕ್ತರಾಗಿ, ಓದಿನ ಬಗ್ಗೆ ಅಷ್ಟಾಗಿ ಗಮನ ಕೊಡದೆ, ಕೆಲಸಕ್ಕೆ ಬಾರದವನಂತೆ, ತನ್ನ ಮನೆಯಲ್ಲಿ ಎಲ್ಲರಿಂದ ತುಂಬಾ ತಾತ್ಸಾರಕ್ಕೆ ಗುರಿಯಾಗಿರುತ್ತಾರೆ. ಕೊನೆಗೆ ತನ್ನ ತಂಗಿಯ ಮದುವೆಗೆಂದು ಅಪ್ಪ ಕಷ್ಟ ಪಡುತ್ತಿದ್ದಾಗ, ತನ್ನದೊಂದು ಮೂತ್ರಪಿಂಡವನ್ನು ದಾನ ಮಾಡಿ, ಅದರಿಂದ ಪಡೆದ ಹಣವನ್ನು ತಂಗಿಯ ಮದುವೆಗೆ ನೀಡಿ, ಅಪ್ಪನ ಭಾರ ತಗ್ಗಿಸಿ, ಉದಾತ್ತ ಗುಣ ಮೆರೆಯುತ್ತಾರೆ. ಅಂದು ನನ್ನ ಮನದಲ್ಲಿದ್ದ ನೋವನ್ನು ಅವರ ಅಭಿನಯದಲ್ಲಿ ಕಂಡಿದ್ದೆ, ಅವರಲ್ಲಿ ನಾನು ನನ್ನನ್ನೇ ಕಂಡುಕೊಂಡಿದ್ದೆ. ಜೇಸುದಾಸ್ ಹಾಡಿದ "ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ" ಹಾಡನ್ನು ಅದೆಷ್ಟು ಸಲ ನನ್ನಲ್ಲಿ ನಾನೇ ಹಾಡಿಕೊಂಡಿದ್ದೇನೋ, ಲೆಕ್ಕವೇ ಇಲ್ಲ. ಆ ಹಾಡಿನ "ಕಸದಂತೆ ಕಂಡರು, ಮನೆಯಲ್ಲಿ ಎಲ್ಲರು, ದಿನವೆಲ್ಲ ಬಾಳಲಿ ಕಣ್ಣೀರ ತಂದರು, ನಿನ್ನಂತರಂಗವ ಅವರೇನು ಬಲ್ಲರು, ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು," ಎಂಬ ಸಾಲುಗಳು ನನ್ನ ಹೃದಯದಲ್ಲಿ ಅಚ್ಚಳಿಯದೆ ನಿಂತಿವೆ. ಈಗಲೂ ನನ್ನ ಕಂಪ್ಯೂಟರಿನಲ್ಲಿ ಆ ಹಾಡು ಜೀವಂತವಾಗಿದೆ. ಆ ಚಿತ್ರ ನೋಡಿದಾಗೆಲ್ಲಾ ಒಂದಲ್ಲ ಒಂದು ದಿನ ನಾನು ನಿನ್ನಂತೆಯೇ ಏನಾದರೂ ಒಂದು ಸಾಧಿಸುತ್ತೇನೆ, ಜೀವನದಲ್ಲಿ ಮುಂದೆ ಬರುತ್ತೇನೆ ಅಂದುಕೊಳ್ಳುತ್ತಿದ್ದೆ. ಇಂದು ಹಾಗೇ ಆಗಿದೆ, ಮುಂದೆ ಬಂದಿದ್ದೇನೆ, ಅಂದು ತಾತ್ಸಾರ ಮಾಡಿದ್ದವರೆಲ್ಲ ಇಂದು ಗೌರವಿಸುವ ಮಟ್ಟಕ್ಕೇರಿದ್ದೇನೆ. ಈ ಯಶಸ್ಸಿನಲ್ಲಿ ಬಹು ಪಾಲು ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ.

ನಾವು ಎರಡನೆಯ ಪಿಯುಸಿ ಓದುತ್ತಿದ್ದಾಗ ಬಿಡುಗಡೆಯಾದ "ಬಂಧನ" ಚಿತ್ರವನ್ನು ಸುಮಾರು ಐವತ್ತಕ್ಕಿಂತಲೂ ಹೆಚ್ಚು ಸಲ ನೋಡಿ, ಆ ಚಿತ್ರದಲ್ಲಿನ ಅವರ ಅಭಿನಯದ ಪ್ರತಿಯೊಂದು ಭಾವ, ಭಂಗಿ, ಸಂಭಾಷಣೆ, ಹಾಡುಗಳನ್ನು ಅದೆಷ್ಟು ಬಾರಿ ಅನುಕರಿಸಿ, ಅಭಿನಯಿಸಿದ್ದೆನೋ, ಲೆಕ್ಕವೇ ಇಲ್ಲ. ನನ್ನ ಗೆಳೆಯ/ಗೆಳತಿಯರ ಮುಂದೆ " ರೀ ನಂದಿನಿ, ಇಲ್ನೋಡ್ರೀ, ನಾನು ನಿಮ್ಮನ್ನು ತುಂಬಾ ಪ್ರೀತಿಸ್ತೀನಿ ಕಣ್ರೀ" ಎಂದು ಕೈಯಲ್ಲೊಂದು ಹೂವು ಹಿಡಿದು ಅಭಿನಯಿಸಿದ್ದು ಅದೆಷ್ಟು ನೂರು ಸಲವೋ ಗೊತ್ತಿಲ್ಲ. ಚಿಗುರು ಮೀಸೆ ಮೂಡುತ್ತಿದ್ದ ವಯಸ್ಸು, ವಯಸ್ಸಿಗೆ ಸಹಜವಾದ ಅನ್ಯ ಲಿಂಗದ ಆಕರ್ಷಣೆ, ಜಗವೇ ಹೊಸದಾಗಿ ಕಾಣುತ್ತಿದ್ದ, ಕಂಡಿದ್ದರಲ್ಲೆಲ್ಲ ಹೊಸತನವನ್ನೇ ಕಾಣುತ್ತಿದ್ದ ಆ ವಯಸ್ಸಿನಲ್ಲಿ, ಬಂಧನ ಚಿತ್ರದಲ್ಲಿ ಅವರ ಮತ್ತು ಸುಹಾಸಿನಿಯವರ ಅಭಿನಯ ನಮ್ಮ ಮನಸೂರೆಗೊಂಡಿತ್ತು. ತಮ್ಮ ಅಭಿನಯದಿಂದ, ಚಿತ್ರದ ಕೊನೆಯಲ್ಲಿನ ದುರಂತ ಸಾವಿನಿಂದ, ನಮ್ಮೆದೆಯಲ್ಲಿ ಅಳಿಸಲಾಗದ ಛಾಪನ್ನೊತ್ತಿದ್ದರು ವಿಷ್ಣುವರ್ಧನ್.

ಅವರ ಇನ್ನೊಂದು ಚಿತ್ರ "ಜಿಮ್ಮಿಗಲ್ಲು" ನನ್ನ ಮನದಲ್ಲಿ ಅಳಿಸಲಾಗದ ನೆನಪುಗಳನ್ನು ಮೂಡಿಸಿ, ಅಸಹಾಯಕನೊಬ್ಬನ ಹೋರಾಟ, ಕೊನೆಗೆ " ದೇವ ಮಂದಿರದಲ್ಲಿ ದೇವರು ಕಾಣಲೆ ಇಲ್ಲ, ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ" ಎಂಬ ಶೋಕ ಗೀತೆಯ ಜೊತೆಗೆ ಜೀವನದ ಹೋರಾಟದ ವಿವಿಧ ಮಜಲುಗಳನ್ನು ಪರಿಚಯಿಸಿ, ಅವರೇ ಸ್ವತ: ಹಾಡಿದ, " ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ" ಎಂಬ ಹಾಡು, ನನ್ನಲ್ಲಿ ಅಖಂಡ ಆತ್ಮ ವಿಶ್ವಾಸವನ್ನು ಮೂಡಿಸಿತ್ತು. ನನ್ನ ಜೀವನದ ಹೋರಾಟಕ್ಕೆ ಅಗತ್ಯವಾದ ಮನ:ಸ್ಥೈರ್ಯವನ್ನು ನನ್ನಲ್ಲಿ ತುಂಬಿತ್ತು. ಹಲವಾರು ಸಲ ನ್ಯಾಯಕ್ಕಾಗಿ ಹೋರಾಡಿ, ನ್ಯಾಯ ಸಿಗದೆ ನಾನು ಜೈಲು ಪಾಲಾದಾಗ, ಇನ್ನು ಮುಗಿಯಿತು ನನ್ನ ಕಥೆ ಎನ್ನುವ ಪರಿಸ್ಥಿತಿ ಬಂದಾಗಲೂ ಸಹ ಅಂದು ಆ ಚಿತ್ರ ತುಂಬಿದ್ದ ಛಲ ಮತ್ತು ಆತ್ಮ ವಿಶ್ವಾಸ, ಎಲ್ಲವನ್ನೂ ಮೆಟ್ಟಿ ಹೊರಬಂದು ಜಯಶೀಲನಾಗಲು ಕಾರಣವಾಗಿತ್ತು.

"ದೇವ" ಚಿತ್ರದಲ್ಲಿ ತನ್ನ ತಮ್ಮಂದಿರಿಗಾಗಿ ಏನೆಲ್ಲ ತ್ಯಾಗ ಮಾಡಿ, ಅಪ್ಪನಿಂದ ಒದೆ ತಿಂದು, ಕೊನೆಗೆ ತನ್ನ ತಮ್ಮಂದಿರಿಂದಲೇ ಮೋಸಕ್ಕೊಳಗಾಗುವ ಪಾತ್ರದಲ್ಲಿ ಜೀವ ತುಂಬಿ ಅಭಿನಯಿಸಿದ್ದರು. ತಮ್ಮ ವಿದೇಶಕ್ಕೆ ಹೊರಟಾಗ, "ಸುಗ್ಗಿ ಬಂದ ಹಾಗೆ, ಮನ ಹಿಗ್ಗಿಹುದು ಇಂದು, ನೀ ಹೋಗಿ ಬಾ ನನ ತಮ್ಮಯ್ಯ" ಎಂದು ಸಂತೋಷದಿಂದ ಕುಣಿದು ಕುಪ್ಪಳಿಸಿ, ಶುಭ ಹಾರೈಸುವ ಪ್ರಸಂಗ, ನನ್ನ ಜೀವನದಲ್ಲಿ ನಡೆದ ಘಟನೆಗಳಿಗೆ ತುಂಬಾನೇ ಹತ್ತಿರವಾದ ಸನ್ನಿವೇಶ. ವಿದೇಶಕ್ಕೆ ಹೋದ ನನ್ನ ತಮ್ಮ ನನ್ನನ್ನು ಮರೆತಾಗ, ಅದೆಷ್ಟೋ ಸಲ ಆ ಚಿತ್ರದ ಸಿಡಿ ತಂದು, ನೋಡಿ, ನನ್ನನ್ನೇ ನಾನು ಸಮಾಧಾನ ಪಡಿಸಿಕೊಂಡಿದ್ದೆ.

ಸುತ್ತಲಿನ ಕೊಳಕು ಜನಗಳನ್ನು, ಅವರ ಸ್ವಾರ್ಥವನ್ನು ಕುತ್ಸಿತ ಮನೋಭಾವವನ್ನು ಕಂಡು ರೋಸಿ ಹೋಗಿದ್ದಾಗ ಬಿಡುಗಡೆಯಾದ ಅವರ ಅಭಿನಯದ ಮತ್ತೊಂದು ಚಿತ್ರ, "ಯಜಮಾನ". ಈ ಸಮಾಜದ ಬಗ್ಗೆ, ನನ್ನ ಸುತ್ತ ಮುತ್ತ ಇದ್ದ ಜನರ ಬಗ್ಗೆ ಅಪಾರ ಪ್ರೀತಿಯನ್ನು ಹುಟ್ಟಿಸಿತ್ತು. ಎಲ್ಲರನ್ನೂ ಕ್ಷಮಿಸುವ, ಎಲ್ಲರನ್ನೂ ಪ್ರೀತಿಸುವ, ಆ ಯಜಮಾನ ನನ್ನ ಮಟ್ಟಿಗೆ ನಿಜವಾದ ಹೀರೋ ಆಗಿದ್ದರು. ನನ್ನ ಮನಸಿನಲ್ಲೆದ್ದಿದ್ದ ಅತೃಪ್ತಿಯ ಬೇಗೆಯನ್ನು ತೊಡೆದು ಹಾಕಿದ್ದರು, ಎಲ್ಲರನ್ನೂ ಪ್ರೀತಿಸುವುದನ್ನು, ಎಲ್ಲರೊಂದಿಗೆ ಸುಮಧುರ ಸಂಬಂಧದೊಂದಿಗೆ ಬದುಕುವುದನ್ನು ಕಲಿಸಿ ಕೊಟ್ಟಿದ್ದರು. ಚಿತ್ರದಲ್ಲಿನ ತಮ್ಮ ಅಭಿನಯದಿಂದಲೇ ನನಗೆ ಜೀವನದ ಪಾಠ ಹೇಳಿ ಕೊಟ್ಟಿದ್ದರು. ನನ್ನ ಪಾಲಿಗೆ ಅವರೇ "ಚಾಮಯ್ಯ ಮೇಷ್ಟ್ರು" ಆಗಿಬಿಟ್ಟಿದ್ದರು.

ಹೀಗೆ ನನ್ನ ಜೀವನದ ಒಂದಲ್ಲ ಒಂದು ಘಟನೆಗಳೊಂದಿಗೆ ತಳುಕು ಹಾಕಿಕೊಂಡೇ ಬಂದ ವಿಷ್ಣುವರ್ಧನ್, ನನ್ನ ಮಗನ ಬಹು ಮೆಚ್ಚಿನ ನಟರಾಗಿದ್ದುದೂ ವಿಶೇಷ. ಅವರ ಅಭಿನಯಕ್ಕೆ ಮನಸೋತಿದ್ದ ನಾನು, ನನ್ನ ಮಗನಿಗೆ "ವಿಷ್ಣು" ಎಂದು ಅವರ ಹೆಸರನ್ನೇ ನಾಮಕರಣ ಮಾಡಿದ್ದೆ! ಅವನೋ, ಚಿಕ್ಕಂದಿನಿಂದಲೂ, ವಿಷ್ಣುವರ್ಧನ್ ಚಿತ್ರ ಟಿವಿಯಲ್ಲಿ ಬಂತೆಂದರೆ ಕಣ್ಣು ರೆಪ್ಪೆ ಹೊಡೆಯದೆ, ರಾತ್ರಿ ಹನ್ನೊಂದಾದರೂ ಕುಳಿತು ಪೂರಾ ಚಿತ್ರ ನೋಡಿಯೇ ಮಲಗುತ್ತಿದ್ದ. ಮೈಸೂರು ರಸ್ತೆಯಲ್ಲಿ ಕೈನೆಟಿಕ್ ಹೋಂಡಾ ಶೋರೂಂ ಶುರುವಾದಾಗ ಪ್ರಾರಂಭೋತ್ಸವಕ್ಕೆ ವಿಷ್ಣುವರ್ಧನ್ ದಂಪತಿಗಳು ಬಂದಿದ್ದರು. ಅಂದು ಆ ಶೋರೂಂಗೆ ನಮ್ಮ ಕಂಪನಿಯ ಭದ್ರತಾ ರಕ್ಷಕರನ್ನು ನಿಯೋಜಿಸಿದ್ದೆ. ಮಗನಿಗೆ ಹೇಳಿದ್ದೇ ತಡ, ಹಠ ಹಿಡಿದು ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗುವವರೆಗೂ ಬಿಟ್ಟಿರಲಿಲ್ಲ. ತುಂಬಾ ಹತ್ತಿರದಿಂದ ವಿಷ್ಣುವರ್ಧನ್ ಅವರನ್ನು ನೋಡಿದ ಮಗ ಜೋರಾಗಿ ಅವರ ಹೆಸರನ್ನೊಮ್ಮೆ ಕೂಗಿದಾಗ ಹತ್ತಿರ ಬಂದ ಅವರು ಅವನ ಕೆನ್ನೆ ಚಿವುಟಿದ್ದರು.

ಇಂದು ಬೆಳಿಗ್ಗೆಯೇ ಬೇಗ ಎದ್ದು, ಅಬುಧಾಬಿಯ ಕೇಂದ್ರ ಕಛೇರಿಯಲ್ಲಿದ್ದ ಮೀಟಿಂಗಿಗಾಗಿ ಹೋಗಿದ್ದೆ. ನಡುವೆ ಬೆಂಗಳೂರಿನಿಂದ ಗೆಳೆಯ ಮಲ್ಲೇಶ್ ಎರಡು ಮೂರು ಸಲ ಫೋನ್ ಮಾಡಿದ್ದ, ಮಧ್ಯಾಹ್ನ ಭೋಜನ ವಿರಾಮದ ವೇಳೆಯಲ್ಲಿ ಅವನಿಗೆ ವಾಪಸ್ ಫೋನ್ ಮಾಡಿದಾಗ "ವಿಷ್ಣುವರ್ಧನ್ ಹೋಗಿಬಿಟ್ಟರು" ಅಂದವನ ಮಾತಿನಲ್ಲಿ ನಂಬಿಕೆಯೇ ಬರಲಿಲ್ಲ. ಸಂಜೆ ದುಬೈಗೆ ಬಂದ ನಂತರ ಎಲ್ಲಾ ಸುದ್ಧಿ ಚಾನಲ್ಗಳನ್ನೂ ನೋಡಿದೆ, ಸಂಪದ ನೋಡಿದೆ, ನೋವಿನಿಂದ ಮನ ಹಿಂಡಿ ಹೋಯಿತು. ಆ ನೋವುಗಳನ್ನು ಬರೆದಿಡಲು ಮೆದುಳಿನಲ್ಲಿದ್ದ ಎಲ್ಲಾ ಪದಗಳೂ ಸೋತುಬಿಟ್ಟವು, ಕಂಬನಿ ಧಾರೆಯಾಗಿ ಹರಿಯಿತು, ಮನ ನೋವಿನಿಂದ ಚೀರಿಟ್ಟಿತು.

ತನ್ನ ಅಭಿನಯದಿಂದ ಕೋಟ್ಯಾಂತರ ಜನರ ಮನ ಗೆದ್ದ, ವಿನಯವನ್ನೇ ತನ್ನ ಸಂಪತ್ತನ್ನಾಗಿ ತೋರಿಸಿದ ಆ ನಮ್ಮ ನೆಚ್ಚಿನ "ಸಂಪತ್ ಕುಮಾರ" ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಮತ್ತೊಮ್ಮೆ ಸಾಧ್ಯವಿದ್ದರೆ ಹುಟ್ಟಿ ಬಂದು ನನ್ನಂಥ ನೂರಾರು ಅಸಹಾಯಕರಿಗೆ, ತಮ್ಮ ಅಭಿನಯದಿಂದಲೇ ಆತ್ಮವಿಶ್ವಾಸ ಹೆಚ್ಚಿಸಿ, ಆರಿ ಹೋಗ ಬಹುದಾದ ಬದುಕುಗಳಿಗೆ ಬೆಳಕು ತುಂಬಲಿ, ನೊಂದ ಮನಗಳಲ್ಲಿ ಭರವಸೆಯ ನಂದಾದೀಪವಾಗಲಿ ಎಂದು ಹೃದಯ ಪೂರ್ವಕವಾಗಿ ಹಾರೈಸುತ್ತೇನೆ.

No comments: