Wednesday, June 17, 2009

ನಗಬೇಕೋ ಅಳಬೇಕೋ .........

ಇದು ಇಂದು ಬೆಳಿಗ್ಗೆ ಎಂಟರ ಆಸು ಪಾಸಿನಲ್ಲಿ ನಡೆದ ಸ್ವಾರಸ್ಯಕರ ಘಟನೆ..

ಇಂದು, ಭಾನುವಾರ, ಭಾರತೀಯರೆಲ್ಲ ನೆಮ್ಮದಿಯ ನಿದ್ದೆ ಮಾಡಿ ತಡವಾಗಿ ಏಳುವ ದಿನ, ಆದರೆ ನಮಗೆ ದುಬೈನಲ್ಲಿ ವಾರದ ಮೊದಲನೆಯ ಕೆಲಸದ ದಿನ. ಬೆಳಿಗ್ಗೆ ಬೇಗನೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಧರ್ಮಸ್ಥಳದ ಮಂಜುನಾಥನಿಗೂ ತಾಯಿ ಕಬ್ಬಾಳಮ್ಮನಿಗೂ ನಮಸ್ಕರಿಸಿ, ಇಂದು ನನಗೆ ಅಜ್ಮಾನಿನ ಕಾಂಟ್ರಾಕ್ಟ್ ಸಿಗುವಂತೆ ಮಾಡಿ ಎಂದು ಬೇಡಿಕೊಂಡು ನನ್ನ ಕಾರು ನಿಲ್ಲಿಸಿದ್ದ ಜಾಗಕ್ಕೆ ಬರುತ್ತಿದ್ದೆ. ದುಬೈನಲ್ಲಿ ಕಾರು ಕೊಳ್ಳುವುದು ಸುಲಭ, ಆದರೆ ಅದಕ್ಕೆ ಪಾರ್ಕಿಂಗ್ ಜಾಗ ಹುಡುಕುವುದು ತುಂಬಾ ಕಷ್ಟದ ಕೆಲಸ.

ನಾನಿರುವ ಫ್ಲಾಟಿನ ಹತ್ತಿರ, ಕರಾಮಾದಲ್ಲಿ ಒಂದು ಸುಂದರ ಪಾರ್ಕ್ ಇದೆ. ಅಲ್ಲಿ ಸಾಕಷ್ಟು ಪಾರ್ಕಿಂಗ್ ಜಾಗ ಲಭ್ಯ. ಯಾವಾಗಲೂ ನನ್ನ ಕಾರನ್ನು ಅಲ್ಲೇ ನಿಲ್ಲಿಸುತ್ತೇನೆ. ರಸ್ತೆ ದಾಟಲು ಒಂದು ಸುಂದರ ಫುಟ್ ಬ್ರಿಡ್ಜ್ ನಿರ್ಮಿಸಿದ್ದಾರೆ. ಅದನ್ನು ಬೆಳಿಗ್ಗೆ ಸಂಜೆ ಹತ್ತಿ ಇಳಿಯುವುದೇ ಒಂದು ಸುಂದರ ಅನುಭವ. ಎಂದಿನಂತೆ ಇಂದೂ ಸಹಾ ನಾನು ನನಗೆ ಸಿಗಲಿರುವ ಕಾಂಟ್ರಾಕ್ಟಿನ ಬಗ್ಗೆ ಯೋಚಿಸುತ್ತಾ, ಮನಸ್ಸಿನಲ್ಲಿ ಅದೆಂಥೆಂಥದೋ ಮಂಡಕ್ಕಿಗಳನ್ನೆಲ್ಲ ತಿನ್ನುತ್ತ ಫುಟ್ ಬ್ರಿಡ್ಜಿನ ಒಂದು ಪಕ್ಕದಲ್ಲಿ ನಡೆದು ಬರುತ್ತಿರುವಾಗ ಧಡಾರೆಂದು ಹಿಂಬದಿಯಲ್ಲಿ ಸದ್ದಾಯಿತು.

ಏನಾಯಿತೆಂದು ನೋಡುವ ಮೊದಲೇ ನನ್ನ ದೇಹ ಗಾಳಿಯಲ್ಲಿ ಹಾರಿತ್ತು, ದಪ್ಪಗಿನ ಅಕ್ಕಿ ಮೂಟೆಯೊಂದು ಜೋರಾಗಿ ಬಂದು ನನ್ನನ್ನು ಹಿಂದಿನಿಂದ ಝಾಡಿಸಿದಂತೆ ಅನುಭವವಾಯಿತು. ಕೈಯಲ್ಲಿ ಹಿಡಿದಿದ್ದ ಬ್ಯಾಗು ಅದೆಲ್ಲಿ ಹೋಯಿತೋ, ನನ್ನ ಕನ್ನಡಕ ಎಲ್ಲಿ ಬಿತ್ತೋ, ಜೇಬಲ್ಲಿದ್ದ ಮೊಬೈಲ್ ಫೋನ್ ನನಗಿಂತಾ ವೇಗವಾಗಿ ಗಾಳಿಯಲ್ಲಿ ಹಾರಿ ಹೋಗಿ ಅದೆಲ್ಲಿ ಬಿತ್ತೋ, ದೇವರೇ ಬಲ್ಲ. ಒಂದು, ಎರಡು, ಮೂರು, ನಾಲ್ಕು ಸುತ್ತು ಆ ಅಕ್ಕಿ ಮೂಟೆಯ ಜೊತೆ ಉರುಳಿ ಬಿದ್ದದ್ದೇ ಗೊತ್ತು. ಅಯ್ಯೋ ದೇವರೇ, ಇದೇನಾಯ್ತು ಎಂದು ಸಾವರಿಸಿಕೊಂಡು ಕಣ್ಣು ಬಿಟ್ಟಾಗ ನನ್ನೆದುರಿನಲ್ಲಿ ದಪ್ಪ ಅಕ್ಕಿ ಮೂಟೆಯಂಥ ಒಬ್ಬ ಸಣ್ಣ ಪ್ರಾಯದ ಹುಡುಗ ಗಡಗಡನೆ ನಡುಗುತ್ತ ನಿಂತಿದ್ದ. ಅದಾಗ ತಾನೆ ಚಿಗುರು ಮೀಸೆ ಬರುತ್ತಿದ್ದ ಅವನ ಮುಖದಲ್ಲಿ ಅತೀವ ಭಯ, ತಪ್ಪಿತಸ್ಥನೆಂಬ ಭಾವನೆ ಎದ್ದು ಕಾಣುತ್ತಿತು. ( ಇಲ್ಲಿ ಒಂದು ಮಾತು, ದುಬೈನಲ್ಲಿ ಎಲ್ಲ ಹುಡುಗ ಹುಡುಗಿಯರು ಎಳೆ ಪ್ರಾಯದಲ್ಲಿಯೆ ಸಾಮಾನ್ಯವಾಗಿ ನೂರು ಕೆ.ಜಿ ಯ ಹತ್ತಿರ ಮುಟ್ಟಿರುತ್ತಾರೆ. ಏಕೆಂದರೆ, ಅವರು ತಿನ್ನುವ ಅಸಾಮಾನ್ಯವಾದ ಕೆ ಎಫ್ ಸಿ ಯ ಕಬಾಬುಗಳು, ಮ್ಯಕ್ ಡೊನಾಲ್ದ್ಸ್ ನ ಬರ್ಗರ್ ಗಳು ಅವರಿಗೆ ಅಪಾರವಾದ ತೂಕವನ್ನು ತಂದು ಕೊಟ್ಟು ಅವರನ್ನು ಇನ್ನಿಲ್ಲದಂತೆ ದಪ್ಪಗೆ ಮಾಡಿ ಬಿಡುತ್ತವೆ. ರಾಗಿ ಮುದ್ದೆ - ಸೊಪ್ಪಿನ ಸಾರು ತಿಂದು ಬಂದ ನನ್ನಂಥವರ ಮೇಲೆ ಅವರು ಬಿದ್ದರೆ, ಪರಿಣಾಮ ನೀವೇ ಊಹಿಸಿ.)

ಫುಟ್ ಬ್ರಿಡ್ಜಿನ ಮೇಲೆ ಅಂಗಾತ ಬಿದ್ದಿದ್ದ ನಾನು ಏಳುವ ಮೊದಲೇ ಒಬ್ಬ ಮಧ್ಯ ವಯಸ್ಕ ಮಹಿಳೆ ನನ್ನ ಕನ್ನಡಕ, ಬ್ಯಾಗು, ಮೊಬೈಲ್ಗಳನ್ನು ಹುಡುಕಿ ತಂದು ನಾನು ಮೇಲೇಳಲು ಸಹಾಯ ಹಸ್ತ ನೀಡಿದರು. ನಾನು ಕೋಪದಿಂದ ಆ ಧಡಿಯ ಹುಡುಗನನ್ನು ದುರುಗುಟ್ಟಿ ನೋಡುವುದನ್ನು ಕಂಡು ಆಕೆ ಸ್ಸಾರಿ, ಪ್ಲೀಸ್, ಯೆಸ್ತೆರ್ಡೇ ಓನ್ಲಿ ಹಿ ಬಾಟ್ ದ ಸೈಕಲ್, ಹಿ ಡೋಂಟ್ ನೋ ಹೌ ಟು ಹ್ಯಾಂಡಲ್, ಸ್ಸಾರಿ ಪ್ಲೀಸ್ ಎಂದು ಒದರತೊಡಗಿದರು. ನನಗೋ ಎರಡೂ ಕೈ ಕಾಲುಗಳಲ್ಲಿ ಭಯಂಕರ ನೋವಾಗತೊಡಗಿತು. ಏನು ಹೇಳಬೇಕೆಂದು ತೋಚದೆ ಸುಮ್ಮನೆ ನಿಂತೆ. ಈ ಮಹಾತಾಯಿ ತನ್ನ ವಕ್ರ ತುಂಡ ಮಹಾಕಾಯನಾದ ಮಗನ ದೇಹವನ್ನು ಕರಗಿಸಲು ನಿನ್ನೆಯಷ್ಟೆ ಅವನಿಗೆ ಹೊಸ ಸೈಕಲ್ ಕೊಡಿಸಿದ್ದರಂತೆ. ಅದರ ಪ್ರಯೋಗ ಇಂದು ನನ್ನ ಮೇಲೇ ಆಗಬೇಕೇ??

ಆಕೆ ಆ ಹುಡುಗನನ್ನು ತೆಲುಗಿನಲ್ಲಿ ಬೈದು ನನ್ನ ಕ್ಷಮೆ ಕೇಳುವಂತೆ ಹೇಳುತ್ತಿದ್ದರು. ಆಗ ಗೊತ್ತಾಯಿತು, ಅವರೂ ನಮ್ಮವರೇ, ನಮ್ಮ ಪಕ್ಕದ "ನೈಬರ್ರೇ" ಅಂತ. ಸರಿಯಮ್ಮ, ನಿನ್ನ ಅಕ್ಕಿ ಮೂಟೆಯಂಥ ಮಗನನ್ನು ಮೊದಲು ಸಣ್ಣಗೆ ಮಾಡು, ಇಲ್ಲದಿದ್ದರೆ ನನ್ನಂಥ ಸಣ್ಣ ಪ್ರಾಣಿಗಳು ಅನ್ಯಾಯವಾಗಿ ಕೈ ಕಾಲು ಮುರಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿ ನನ್ನ ಕಾರಿನತ್ತ ನಡೆದೆ.

ಸಂಜೆ ಮನೆಗೆ ಬಂದು ಕೈ ಕಾಲುಗಳಿಗೆಲ್ಲಾ ಚೆನ್ನಾಗಿ "ಮೂವ್" ತಿಕ್ಕಿ ಈ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹೇಳಿ, ಸಂಪದಿಗರೇ, ಇಂಥ ಅಕ್ಕಿ ಮೂಟೆಗಳು ಅನಿರೀಕ್ಷಿತವಾಗಿ ಮೈ ಮೇಲೆ ಬಿದ್ದಾಗ, ಅಳಬೇಕೋ, ನಗಬೇಕೋ ??

2 comments:

ಗೋಪಾಲ್ ಮಾ ಕುಲಕರ್ಣಿ said...

ಸ್ವಾರಸ್ಯಕರವಾಗಿ ಬರೆದಿದ್ದೀರ....ತುಂಬಾ ಹಿಂದಿನ ಘಟನೆಎಂದು ಕಾಣುತ್ತೆ.... ನಾನು ಮಾತ್ರ ನಗುತ್ತಿದ್ದೇನೆ....:-)).
ಈಗ ಆ ಘಟನೆ ನೆನದರೆ ನಿಮಗೂ ನಗು ಬರಬಹುದು....

manju said...

ಹೌದು ಗೋಪಾಲರೆ, ಇದು ನಿಜಕ್ಕೂ ಎ೦ದಿಗೂ ನಗು ಉಕ್ಕಿಸುವ ಘಟನೆಯೇ!!