Tuesday, May 31, 2016

ಹೀಗೊಬ್ಬನಿದ್ದ ಅಪ್ಪ!


ಬೆಳಗಿನ ನಾಲ್ಕೂವರೆಗಿಟ್ಟಿದ್ದ ಅಲಾರಾಂ ಒಮ್ಮೆಲೇ ಬಡಿದುಕೊಂಡಾಗ ಎಚ್ಚರಾದ ಅವನು ತನ್ನೆದೆಯ ಮೇಲಿದ್ದ ಪತ್ನಿಯ ಕೈಯ್ಯನ್ನು ಮೃದುವಾಗಿ ಎತ್ತಿ ಬದಿಗಿಟ್ಟು, ಸದ್ದಾಗದಂತೆ ಎದ್ದ! ಬಚ್ಚಲುಮನೆಗೆ ಹೋಗಿ ಬಂದು, ಬಿಸಿಬಿಸಿಯಾಗಿ ಒಂದು ಕಾಫಿ ಮಾಡಿ ಕುಡಿದು, ನಿದಿರೆಯ ನಶೆಯಲ್ಲಿದ್ದ ಮಕ್ಕಳಿಬ್ಬರನ್ನೂ ಒಮ್ಮೆ ಕಣ್ತುಂಬಾ ನೋಡಿ, ತನ್ನ ಬೂಟುಗಳನ್ನು ಧರಿಸಿ, ತನ್ನಲ್ಲಿದ್ದ ಬೀಗದ ಕೈಯ್ಯಿಂದ ಮುಂಬಾಗಿಲಿಗೆ ಬೀಗ ಜಡಿದು, ಮನೆಯಿಂದ ಹೊರಬಿದ್ದ. ರಾತ್ರಿಯೇ ಗೇಟಿನ ಪಕ್ಕದಲ್ಲಿಟ್ಟಿದ್ದ ನಾಲ್ಕು ಕಲ್ಲುಗಳನ್ನು ಕೈಯ್ಯಲ್ಲಿ ಹಿಡಿದು ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದ. ನಿಶ್ಯಬ್ಧವಾಗಿದ್ದ ಆ ಬೀದಿಯಲ್ಲಿ ಅವನ ಬೂಟಿನ ಸದ್ದಿಗೆ ಬೆದರಿ ಭಯಂಕರವಾಗಿ ಬೊಗಳುತ್ತಾ ಬರುತ್ತಿದ್ದ ಬೀದಿ ನಾಯಿಗಳನ್ನು ಹೊಡೆದೋಡಿಸಲು ಅವನ ಕೈಯ್ಯಲ್ಲಿದ್ದ ನಾಲ್ಕು ಕಲ್ಲುಗಳೇ ಆಯುಧಗಳಾಗಿದ್ದವು. ಐದು ಘಂಟೆಗೆ ಹೊರಡುವ ಮೊದಲ ಬಸ್ಸಿನಲ್ಲಿ ಶಿವಾಜಿನಗರಕ್ಕೆ ತಲುಪಿ ಅಲ್ಲಿಂದ ಮಾರತ್ ಹಳ್ಳಿಗೆ ಹೋಗುವ ಇನ್ನೊಂದು ಬಸ್ ಹಿಡಿದು ಮಣಿಪಾಲ್ ಆಸ್ಪತ್ರೆಯ ಬಳಿ ಇಳಿದು ತನ್ನ ಕರ್ತವ್ಯದ ಸ್ಥಳಕ್ಕೆ ತಲುಪುವಷ್ಟರಲ್ಲಿ ಪಾಳಿಯ ಇತರ ಭದ್ರತಾ ರಕ್ಷಕರು ಅಲ್ಲಿ ಹಾಜರಾಗಿರುತ್ತಿದ್ದರು.
ಆರೂ ಮುಕ್ಕಾಲಿಗೆ ಎಲ್ಲರನ್ನೂ ಸೇರಿಸಿ ಅಂದು ಯಾರ್ಯಾರು ಎಲ್ಲೆಲ್ಲಿ ಕೆಲಸ ಮಾಡಬೇಕು, ಹಿಂದಿನ ದಿನ ನಡೆದ ಘಟನೆಗಳೇನು, ಯಾವುದೇ ಅವಘಡ ನಡೆಯದಂತೆ ಹೇಗೆ ಕಾರ್ಯ ನಿರ್ವಹಿಸಬೇಕು ಎಂದು ಹದಿನೈದು ನಿಮಿಷಗಳ ವಿವರಣೆ ನೀಡಿ, ಅವರೆಲ್ಲರ ಹಾಜರಾತಿ ತೆಗೆದುಕೊಂಡು ಕೆಲಸಕ್ಕೆ ನಿಯುಕ್ತಿಗೊಳಿಸಿ ತನ್ನ ಕಚೇರಿಗೆ ಬಂದು ಕೂರುವಷ್ಟರಲ್ಲಿ ಬೆಳಗಿನ ಏಳೂವರೆಯಾಗಿ ಹೋಗಿತ್ತು.
ಒಂಭತ್ತು ಘಂಟೆಗೆ ಕಛೇರಿಗೆ ಬರುವ ಉರಿಮೂತಿ ಸಿಂಗಪ್ಪನಂಥ ಭದ್ರತಾ ವಿಭಾಗದ ಮುಖ್ಯಸ್ಥನಿಗೆ ವರದಿಗಳನ್ನು ಸಿದ್ಧಪಡಿಸುವಲ್ಲಿ ಅವನ ಸಮಯ ಕಳೆದು ತಿಂಡಿ ತಿನ್ನಲಾಗದೆ ಅದೆಷ್ಟೋ ದಿನ ಖಾಲಿ ಹೊಟ್ಟೆಯಲ್ಲಿಯೇ ಮಧ್ಯಾಹ್ನದವರೆಗೂ ಕೆಲಸ ಮಾಡುತ್ತಿದ್ದ. ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದ ಆ ಸಂಸ್ಥೆಯಲ್ಲಿ ಯಾವ ಮೂಲೆಯಲ್ಲಿ ಏನೇ ಆದರೂ ಭದ್ರತಾ ವಿಭಾಗದವರು ಅಲ್ಲಿ ಹಾಜರಿರಬೇಕಿತ್ತು. ನಡೆದ ಘಟನೆಯ ಬಗ್ಗೆ ಕೂಲಂಕುಷ ವಿವರಣೆಯನ್ನು ಮುಖ್ಯಸ್ಥರಿಗೆ ಕೊಡದಿದ್ದಲ್ಲಿ ಎಲ್ಲರೆದುರಿಗೆ ವಾಚಾಮಗೋಚರ ಬೈಗುಳ ಕೇಳಬೇಕಿದ್ದುದಲ್ಲದೆ ಕೆಲಸಕ್ಕೆ ಸಂಚಕಾರ ಬರುವ ಸಂಭವವಿತ್ತು. ತನಗೆ ಎಷ್ಟೇ ಹಿಂಸೆಯಾದರೂ, ನೋವಾದರೂ ಬೆಳಿಗ್ಗೆ ಮನೆಯಿಂದ ಹೊರ ಬರುವಾಗ ಕಂಡ ಪತ್ನಿ ಮಕ್ಕಳ ಮುಗ್ಧ ಮುಖವನ್ನು ನೆನಪಿಸಿಕೊಂಡು ಅವನು ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದ! ಮುಂದೊಂದು ದಿನ ತನಗೂ ಒಳ್ಳೆಯ ದಿನಗಳು ಬರುತ್ತವೆ, ಆಗ ತನ್ನ ಕೈ ಕೆಳಗೆ ಕೆಲಸ ಮಾಡುವವರನ್ನು ಎಂದಿಗೂ ಈ ರೀತಿ ನಡೆಸಿಕೊಳ್ಳದೆ ಪ್ರೀತಿಯಿಂದಲೇ ಅವರನ್ನು ಗೆದ್ದು ಕೆಲಸ ಸಾಧಿಸಬೇಕು ಅಂದುಕೊಳ್ಳುತ್ತಿದ್ದ.
ದಿನವಿಡೀ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸಿ ಸಂಜೆ ಮೇಲಧಿಕಾರಿಗಳೆಲ್ಲಾ ಮನೆಗೆ ತೆರಳಿದ ನಂತರ ತಾನು ಎಲ್ಲವೂ ಸರಿಯಿದೆ ಎಂದು ಖಾತ್ರಿಪಡಿಸಿಕೊಂಡು, ರಾತ್ರಿ ಪಾಳಿಯ ರಕ್ಷಕರಿಗೂ ಅವರ ಕೆಲಸ ಕಾರ್ಯಗಳ ಬಗ್ಗೆ ನಿರ್ದೇಶನಗಳನ್ನು ನೀಡಿ, ಮಣಿಪಾಲ್ ಆಸ್ಪತ್ರೆಯ ಬಸ್ ನಿಲ್ದಾಣಕ್ಕೆ ಬಂದು, ಬಸುರಿಯ ಹೊಟ್ಟೆಯಂತೆ ಜನರಿಂದ ಉಬ್ಬಿಕೊಂಡು ಬಂದ ಬಸ್ಸಿನಲ್ಲಿ ತನ್ನದೊಂದು ಕಾಲೂರಿ ನೇತಾಡುತ್ತಾ, ಶಿವಾಜಿನಗರಕ್ಕೆ ಬರುವ ಹೊತ್ತಿಗೆ, ಅವನ ಅರ್ಧ ಜೀವ ಹೋಗಿರುತ್ತಿತ್ತು. ಅಲ್ಲಿಳಿದು ಮತ್ತೆ ತನ್ನ ಮನೆಯೆಡೆಗೆ ಹೋಗುವ ಬಸ್ ಹತ್ತಿ ಜೋತಾಡುತ್ತಾ ಹೋಗಿ ಮನೆ ತಲುಪುವ ವೇಳೆಗೆ ರಾತ್ರಿಯ ಒಂಭತ್ತಾದರೂ ಆಯಿತು, ಒಮ್ಮೊಮ್ಮೆ ಹತ್ತಾದರೂ ಆಯಿತು! ಬೆಳಿಗ್ಗೆ ತಾನು ಕೆಲಸಕ್ಕೆ ಹೋಗುವಾಗ ಸವಿ ನಿದ್ದೆಯಲ್ಲಿದ್ದ ಮಕ್ಕಳಾಗಲೆ ಶಾಲೆಗೆ ಹೋಗಿ ಬಂದು, ತಮ್ಮ ಮನೆಗೆಲಸವನ್ನು ಮುಗಿಸಿ, ಆಟವಾಡಿ ಬಂದು ಯಾವಾಗಲೋ ಬರಲಿರುವ ಅಪ್ಪನಿಗಾಗಿ ಕಾದು ಸುಸ್ತಾಗಿ ಮಲಗಿ ಬಿಟ್ಟಿರುತ್ತಿದ್ದರು! ಪತ್ನಿ ಅದಾಗಲೇ ಅರೆ ನಿದ್ರೆಯಲ್ಲಿ ಹಾದಿ ಕಾದು ಸಾಕಾಗಿ, ಗಂಡ ಮಾಡುತ್ತಿರುವ ಅರ್ಥವಿಲ್ಲದ ಕೆಲಸಕ್ಕೆ ಹಿಡಿ ಶಾಪ ಹಾಕುತ್ತಿದ್ದಳು.
ದಿನವಿಡೀ ದುಡಿದು, ದಣಿದು ಸಾಕಾಗಿ ಮನೆಗೆ ಬಂದವನಿಗೆ ಸಿಗುತ್ತಿದ್ದದ್ದು ಪತ್ನಿಯ ಕೋಪದ ನೋಟ, ಸಿಡುಕು ಮಾತುಗಳೇ ಹೊರತು ಸಾಂತ್ವನದ ನುಡಿಗಳಲ್ಲ! ಅದೇನು ಕೆಲಸ ಮಾಡ್ತೀಯೋ ನಾ ಕಾಣೆ, ಈ ಜಗತ್ತಿನಾಗೆ ಬೇರೆ ಯಾರೂ ಮಾಡ್ದೆ ಇರೋಂಥದ್ದು,,,ಏನು ಮನೆಗೆ ಬರೋದಿಕ್ಕೆ ಹೊತ್ತು ಗೊತ್ತು ಇಲ್ಲವಾ ಎಂದು ಮೂತಿ ತಿರುವುತ್ತಿದ್ದ ಪತ್ನಿಗೆ ಅವನ ಮೌನವೇ ಉತ್ತರವಾಗಿರುತ್ತಿತ್ತು.
(ಮುಂದುವರೆಯುತ್ತದೆ..... )
ಪ್ರೀತಿಹೆಚ್ಚಿ

No comments: