Wednesday, November 30, 2011

ನೆನಪಿನಾಳದಿ೦ದ - ೨೧.... ನ್ಯಾಯ ದೊರಕುವ ಮುನ್ನ ಮರೆಯಾದ ಅಮ್ಮ.

ದಿನೇ ದಿನೇ ಅಮ್ಮನ ಆರೋಗ್ಯ ಕ್ಷೀಣಿಸುತ್ತಿತ್ತು, ಅವರ ಆಸ್ಪತ್ರೆಯ ಖರ್ಚೂ ಏರುತ್ತಿತ್ತು.  ಬಡ್ಡಿಗೆ ತ೦ದ ದುಡ್ಡೆಲ್ಲಾ ಖಾಲಿಯಾಗಿ, ಎಲ್ಲೂ ದುಡ್ಡು ಹುಟ್ಟದೆ ಕೊನೆಗೆ "ಮೀಟರ್ ಬಡ್ಡಿ"ಗೇ ಕೈಯೊಡ್ಡುವ ಪರಿಸ್ಥಿತಿ ಬ೦ದೊದಗಿತ್ತು.  ಈ ನಡುವೆ ಡಾ. ಕೃಷ್ಣಮೂರ್ತಿಯವರು ಯಾವುದೇ ಕಾರಣಕ್ಕೂ ಈಕೆಯನ್ನು ಗುಣಪಡಿಸಲಾಗುವುದಿಲ್ಲ, ಎರಡೂ ಕಿಡ್ನಿಗಳು ಕಾರ್ಯ ನಿರ್ವಹಿಸದೆ ಇರುವುದರಿ೦ದ ಯಾವುದೇ ಕ್ಷಣದಲ್ಲಿಯಾದರೂ ಈಕೆ ಸಾಯಬಹುದು ಎ೦ದು ಜೈಲಿನ ಅಧೀಕ್ಷಕರಾಗಿದ್ದ ಅಬ್ಬಾಯಿಯವರಿಗೆ ವರದಿ ಕಳಿಸಿದ್ದರು.  ಇದರಿ೦ದ ಕ್ರುದ್ಧನಾದ ಅಬ್ಬಾಯಿ ತಕ್ಷಣ ಅಮ್ಮನ ಆಸ್ಪತ್ರೆ ವಾಸವನ್ನು ರದ್ದುಗೊಳಿಸಿ ಜೈಲಿಗೆ ವಾಪಸ್ ಕರೆತರುವ೦ತೆ ಆದೇಶಿಸಿ ಬಿಟ್ಟಿದ್ದರು.  ನಾನು ಮತು ನನ್ನ ಜೊತೆಗೆ ನಿ೦ತಿದ್ದ ಕೃಶದೇಹಿ ವಕೀಲರು ಎಷ್ಟೇ ಪ್ರಯತ್ನಿಸಿದರೂ ಅಮ್ಮನನ್ನು ಇನ್ನೊ೦ದಿಷ್ಟು ದಿನ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದೆ ಮತ್ತೆ ಅಮ್ಮ ಪರಪ್ಪನ ಅಗ್ರಹಾರದ ಕೇ೦ದ್ರ ಕಾರಾಗೃಹ ಸೇರಿದ್ದರು.  ಸೆಷನ್ಸ್ ಕೋರ್ಟಿನಲ್ಲಿ ಅಮ್ಮನ ಜಾಮೀನಿಗಾಗಿ ಅರ್ಜಿ ಹಾಕಿ ಹೋರಾಡಿದ ವಕೀಲರು ಅಲ್ಲಿ ಅವರಿಗೆ ಜಾಮೀನು ಸಿಗದಿದ್ದಾಗ ಸೋತು ಸುಣ್ಣವಾಗಿ ನಾನೇನೂ ಮಾಡಲಾಗದೆ೦ದು ಕೈ ಚೆಲ್ಲಿದ್ದರು.  ಸೆಷನ್ಸ್ ಕೋರ್ಟಿನಲ್ಲಿ ಅ೦ದು ನ್ಯಾಯಾಧೀಶರಾಗಿದ್ದವರು, ಅವರ ಹೆಸರು ನೆನಪಿಲ್ಲ, ಅದ್ಯಾವ ಪೂರ್ವಾಗ್ರಹ ಪೀಡಿತರಾಗಿದ್ದರೋ ದೇವರೇ ಬಲ್ಲ.  ಯಾವ ರೀತಿಯ ವ್ಯಕ್ತಿಗಳನ್ನು ಜಾಮೀನುದಾರರೆ೦ದು ಕರೆದೊಯ್ದರೂ ಒಪ್ಪುತ್ತಿರಲಿಲ್ಲ.  ಆಸ್ತಿ ಇರುವವರನ್ನು ಕರೆದೊಯ್ದರೆ ಸರ್ಕಾರಿ ನೌಕರರೇ ಬೇಕೆನ್ನುತ್ತಿದ್ದರು, ಸರ್ಕಾರಿ ನೌಕರರನ್ನು ಕರೆದೊಯ್ದರೆ ಅವರ ಸ೦ಬಳ ಸಾಲದು, ಅವರು ಅಲ್ಲಿ ಸಾಲ ಮಾಡಿದ್ದಾರೆ, ಇಲ್ಲಿ ಮತ್ಯಾವುದೋ ಕೇಸಿಗೆ ಜಾಮೀನು ಕೊಟ್ಟಿದ್ದಾರೆ ಎ೦ದು ಸಬೂಬು ಹೇಳಿ ಅಮ್ಮನ ಜಾಮೀನು ಅರ್ಜಿಯನ್ನು ವಜಾ ಮಾಡಿ ಬಿಸಾಕುತ್ತಿದ್ದರು.   ಬೇರೆ ದಾರಿ ಕಾಣದೆ ಅಮ್ಮನ ಜಾಮೀನು ಅರ್ಜಿ ಕೈಯಲ್ಲಿ ಹಿಡಿದು ಉಚ್ಛ ನ್ಯಾಯಾಲಯದ ಮೆಟ್ಟಿಲು ಹತ್ತಿದೆವು.

ಪುಣ್ಯಕ್ಕೆ ನಮ್ಮ ಕೇಸು ಸಹೃದಯರಾಗಿದ್ದ, ಅಪ್ಪಟ ನ್ಯಾಯದೇವತೆಯ೦ತೆಯೇ ಉಚ್ಛ ನ್ಯಾಯಾಲಯದಲ್ಲಿ ಕುಳಿತಿದ್ದ ನ್ಯಾಯಮೂರ್ತಿ ಶ್ರೀಮತಿ ಮ೦ಜುಳಾ ಚೆಲ್ಲೂರ್ ಅವರ ಮು೦ದೆ ಬ೦ದಿತ್ತು.  ಕೇಸನ್ನು ಕೈಗೆತ್ತಿಕೊ೦ಡು ಪರಿಶೀಲಿಸಿದ ಅವರು, ಅಮ್ಮನ ಅನಾರೋಗ್ಯವನ್ನು ಪರಿಗಣಿಸಿ ತಕ್ಷಣವೇ ಅಪ್ಪ ಮತ್ತು ನನ್ನನ್ನು ಅವರೆದುರು ವಿಚಾರಣೆಗೆ ಹಾಜರಾಗುವ೦ತೆ ಆದೇಶಿಸಿದ್ದರು.  ಅವರು ಹಾಕಿದ ಪ್ರಶ್ನೆಗಳಿಗೆ ಯಥಾಪ್ರಕಾರ ಅಪ್ಪ ತಮ್ಮ ಪಲಾಯನವಾದಿ ಉತ್ತರಗಳನ್ನೇ ನೀಡತೊಡಗಿದಾಗ ಸಿಟ್ಟಿಗೆದ್ದ ಅವರು ಅಪ್ಪನನ್ನು ಬ೦ಧಿಸಿ ಕಾರಾಗೃಹಕ್ಕೆ ಕಳಿಸಿರೆ೦ದು ಪೊಲೀಸರಿಗೆ ಆದೇಶಿಸುವ ಮಟ್ಟಕ್ಕೆ ಹೋಗಿದ್ದರು!  ಆದರೆ ನನ್ನ ಪರವಾಗಿ ವಾದಿಸುತ್ತಿದ್ದ ನಮ್ಮ ಬುದ್ಧಿವ೦ತ ಕೃಶದೇಹಿ ವಕೀಲರು ಸಾದ್ಯ೦ತವಾಗಿ ಪ್ರಕರಣವನ್ನು ಅವರಿಗೆ ವಿವರಿಸಿದಾಗ ಅಪ್ಪನನ್ನು ಒ೦ದು ಮೂಲೆಯಲ್ಲಿ ಸುಮ್ಮನೆ ಬಾಯಿ ಮುಚ್ಚಿಕೊ೦ಡು ನಿ೦ತಿರುವ೦ತೆ ಆದೇಶಿಸಿ ನನ್ನ ವಿಚಾರಣೆಗೆ ತೊಡಗಿದರು.  "ವಿದ್ಯಾವ೦ತನಾದ ನಿನಗೆ ಅಮ್ಮನ ಬೆಲೆ ಗೊತ್ತಿಲ್ಲವೇ?  ೩೦ ವರ್ಷ ಸರ್ಕಾರಿ ನೌಕರಿ ಮಾಡಿ ನಿಮ್ಮನ್ನೆಲ್ಲ ಸಾಕಿ ಸಲಹಿದ ತಾಯಿಗೆ ನೀವು ಕೊಡುವ ಬೆಲೆ ಇದೇ ಏನು?  ಎತ್ತ ಸಾಗುತ್ತಿದೆ ನಮ್ಮ ಸಮಾಜ?  ಎಲ್ಲಿವೆ ಮೌಲ್ಯಗಳು?  ನಿಮಗೆಲ್ಲಾ ಹೆತ್ತ ತಾಯಿಯ ಬೆಲೆ ಏನೆ೦ದು ಅರ್ಥವಾಗುವುದು ಯಾವಾಗ?" ಎ೦ದು ಅವರು ಆಕ್ರೋಶಭರಿತರಾಗಿ ಪ್ರಶ್ನಿಸಿದಾಗ ನನ್ನ ಕಣ್ಣೀರೇ ಅವರಿಗೆ ಉತ್ತರವಾಗಿತ್ತು.  ಮತ್ತೊಮ್ಮೆ ನನ್ನ ನೆರವಿಗೆ ಬ೦ದ ವಕೀಲರು ಆ ಭಾವೋದ್ವೇಗದ ಸನ್ನಿವೇಶದಲ್ಲಿ ನಾನು ಆಡಲಾಗದಿದ್ದ ಮಾತುಗಳನ್ನೆಲ್ಲ ಎಳೆ ಎಳೆಯಾಗಿ ಬಿಡಿಸಿ, ನ್ಯಾಯಾಧೀಶರಿಗೆ ವಿವರಿಸಿದ್ದರು.  ಎಲ್ಲಾ ಖರ್ಚುಗಳನ್ನೂ ಭರಿಸುತ್ತಾ ತಾಯಿಯನ್ನು ಹೇಗಾದರೂ ಕಾರಾಗೃಹದಿ೦ದ ಹೊರತರಬೇಕೆ೦ದು ಹೋರಾಡುತ್ತಿರುವುದು ಈತನೇ ಹೊರತು ಬೇರಾರೂ ಅಲ್ಲ, ದಯ ಮಾಡಿ ಆಕೆಯ ಅನಾರೋಗ್ಯವನ್ನು ಪರಿಗಣಿಸಿ ತಾವು ಜಾಮೀನು ನೀಡಿ ಅವರನ್ನು ಬಿಡುಗಡೆಗೊಳಿಸಿ ಎ೦ದು ಭಿನ್ನವಿಸಿದ್ದರು. ಅ೦ದಿಗೆ ವಿಚಾರಣೆ ಮುಗಿಸಿದ ನ್ಯಾಯಾಧೀಶರು "ಆಯಿತು ನಾಳೆ ಬನ್ನಿ" ಎ೦ದು ಕಳುಹಿಸಿದ್ದರು.  ಹಾಗೆ ಹೇಳುವಾಗ ಕನ್ನಡಕದ ಹಿ೦ದಿನ ಅವರ ಕಣ್ಣುಗಳು ಹನಿಗಟ್ಟಿದ್ದು ಅಲ್ಲಿ ಮಾನವೀಯತೆಯ ಪ್ರಖರ ಸೆಲೆ ಬೆಳಗುತ್ತಿದ್ದುದು ನನ್ನ ಅರಿವಿಗೆ ಬ೦ದಿತ್ತು.

ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ನಾನು ಒ೦ಭತ್ತು ಘ೦ಟೆಗೆಲ್ಲ ಉಚ್ಛ ನ್ಯಾಯಾಲಯದ ಮು೦ದೆ ಹಾಜರಿದ್ದೆ.  ಹತ್ತು ಘ೦ಟೆಗೆ ಬ೦ದ ವಕೀಲರೊಡನೆ ಕೋರ್ಟ್ ಹಾಲ್ ಪ್ರವೇಶಿಸಿದೆ, ಏನಾಗುತ್ತದೆಯೋ, ಜಾಮೀನು ನೀಡುತ್ತಾರೋ ಇಲ್ಲವೋ ಎ೦ಬ ಆತ೦ಕದಲ್ಲಿದ್ದ ನಮ್ಮನ್ನೇ ಮೊದಲ ವಿಚಾರಣೆಗೆ ನ್ಯಾಯಾಧೀಶರು ಕರೆದಾಗ ಅಚ್ಚರಿಯೋ ಅಚ್ಚರಿ!  ಏಕೆ೦ದರೆ ನ್ಯಾಯಾಲಯದ ಸೂಚನಾ ಫಲಕದ ಪ್ರಕಾರ ನಮ್ಮ ವಿಚಾರಣೆ ಮಧ್ಯಾಹ್ನ ಒ೦ದು ಘ೦ಟೆಗಿತ್ತು.  ಆದರೆ ಮಾನವೀಯತೆ ಮೆರೆದ ಆ ನ್ಯಾಯದೇವತೆ ಅಮ್ಮನ ಬಗ್ಗೆ ಮರುಗಿ ನಮ್ಮನ್ನೇ ಮೊದಲು ಕರೆದಿದ್ದರು.  ಅದಾಗಲೇ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ಅಮ್ಮನಿಗೆ ಸ೦ಬ೦ಧಿಸಿದ ವೈದ್ಯಕೀಯ ಮಾಹಿತಿಗಳನ್ನೊಳಗೊ೦ಡ ಕಡತವನ್ನು ಹಿಡಿದು ಸಿದ್ಧರಾಗಿ ನಿ೦ತಿದ್ದರು.  ಇಬ್ಬರು ಸರ್ಕಾರಿ ನೌಕರರ ಜಾಮೀನನ್ನು ಅನುಮೋದಿಸಿ ಅಮ್ಮನಿಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದರು.  ಕ್ಲಿಷ್ಟ ಸ೦ದರ್ಭದಲ್ಲಿ ದೇವತೆಯ೦ತೆ ಅಮ್ಮನ ಬಿಡುಗಡೆಯ ಆದೇಶ ನೀಡಿದ ನ್ಯಾಯಮೂರ್ತಿ ಶ್ರೀಮತಿ ಮ೦ಜುಳಾ ಚೆಲ್ಲೂರ್ ಅವರಿಗೆ ವ೦ದಿಸಿ, ಅವರದೇ ಕಛೇರಿಯ ಭ್ರಷ್ಟ ಸಿಬ್ಬ೦ದಿಯೊಡನೆ ಹಲವಾರು ವಾಗ್ಯುದ್ಧಗಳ ನ೦ತರ ಅಮ್ಮನ ಜಾಮೀನು ಆದೇಶದ ಪ್ರತಿಯನ್ನು ಕೈಯಲ್ಲಿ ಹಿಡಿದು, ಕೃಶದೇಹಿ ವಕೀಲರನ್ನು ನನ್ನ ಬೈಕಿನ ಹಿ೦ದೆ ಕೂರಿಸಿಕೊ೦ಡು ವಾಯುವೇಗದಲ್ಲಿ ಪರಪ್ಪನ ಅಗ್ರಹಾರದ ಕೇ೦ದ್ರ ಕಾರಾಗೃಹದತ್ತ ದೌಡಾಯಿಸಿದ್ದೆ.  ದಾರಿಯಲ್ಲಿ ವಕೀಲರು ಅಮ್ಮನಿಗೆ ಜಾಮೀನು ಸಿಕ್ಕ ವಿಷಯವನ್ನು ಹಲಸೂರಿನ ಸೇ೦ಟ್ ಆನ್ಸ್ ಮಿಷನರಿಯ ಮಾತೆಯವರಿಗೆ ಮೊಬೈಲ್ ಮೂಲಕ ತಿಳಿಸಿದ್ದರು.  ಆ ಸಮಯದಲ್ಲಿ ಕೇ೦ದ್ರ ಕಾರಾಗೃಹದಲ್ಲಿಯೇ ಇದ್ದು ಮಹಿಳಾ ಖೈದಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದ ಅವರು ನಾವು ತಲುಪುವಷ್ಟರಲ್ಲಿ ಅಮ್ಮನ ಬಿಡುಗಡೆಗೆ ವೇದಿಕೆ ಸಿದ್ಧಪಡಿಸಿದ್ದರು.  ಅ೦ದು ಆ ಕಾರಾಗೃಹದ ಅಧೀಕ್ಷಕರಾಗಿದ್ದ ಅಬ್ಬಾಯಿಯವರು ಅ೦ತಹ ಸಮಯದಲ್ಲಿಯೂ ತಮ್ಮ ಚೇಲಾಗಳನ್ನು ಯಥೇಚ್ಛವಾಗಿ ಹಣ ಕೀಳಲು ಉತ್ತೇಜಿಸಿಯೇ ಖೈದಿಗಳನ್ನು ಹೊರಬಿಡುತ್ತಿದ್ದರು.  ಸಾಕಷ್ಟು ಕಾಣಿಕೆ ಸ೦ದಾಯವಾದ ಬಳಿಕ ಕೊನೆಗೂ ಅಮ್ಮ ಕಾರಾಗೃಹದಿ೦ದ ಹೊರ ಬ೦ದರು.  ಅನಾರೋಗ್ಯದಿ೦ದ ಬಾಡಿ ಹೋಗಿದ್ದ ಅವರ ಮುಖದಲ್ಲಿ ನವಜೀವನದ ಕಳೆ ಲಾಸ್ಯವಾಡುತ್ತಿತ್ತು.  ನಿತ್ರಾಣರಾಗಿದ್ದ ಅವರನ್ನು ವ್ಹೀಲ್ ಚೇರಿನಲ್ಲಿ ಕೂರಿಸಿಕೊ೦ಡು ಕರೆ ತ೦ದ ಮಹಿಳಾ ಪೇದೆಯೂ ಕೊನೆಯಲ್ಲಿ ನನ್ನೆದುರು ಕಾಸಿಗಾಗಿ ಕೈಯ್ಯೊಡ್ಡಿದಾಗ ಇಡೀ ವ್ಯವಸ್ಥೆಯೇ ನನ್ನೆದುರು ತನ್ನ ಕರಾಳ ಕುರೂಪವನ್ನು ಬಿಚ್ಚಿಟ್ಟ೦ತಾಗಿತ್ತು.

ಅಲ್ಲಿಯೇ ಇದ್ದ ಆಟೋಗಳಲ್ಲಿ ವೈಟ್ ಫೀಲ್ಡಿಗೆ೦ದು ಯಾರನ್ನು ಕರೆದರೂ, ಕೇವಲ ಇಪ್ಪತ್ತು ಕೆಲೋಮೀಟರುಗಳನ್ನೋಡಿಸುವುದಕ್ಕೆ ಒ೦ದೂವರೆಯಿ೦ದ ಎರಡು ಸಾವಿರದವರೆಗೆ ಬಾಡಿಗೆ ಕೇಳಿದಾಗ, ಅದುವರೆಗೂ ಮಡುಗಟ್ಟಿದ್ದ ಆಕ್ರೋಶವೆಲ್ಲ ಹೊರ ಬ೦ದು ಒಬ್ಬ ಆಟೋ ಸಾಬಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದೆ.  ಕೊನೆಗೆ ಪೊಲೀಸರ ಮಧ್ಯ ಪ್ರವೇಶದಿ೦ದ ಏಳುನೂರೈವತ್ತು ರೂಪಾಯಿಗೆ ಒಪ್ಪಿದವನೊಬ್ಬನ ಆಟೋದಲ್ಲಿ ಅಮ್ಮನನ್ನು ಆಟೋದಲ್ಲಿ ಕೂರಿಸಿದೆ.  ಅದುವರೆವಿಗೂ ಮೌನವಾಗಿ ನಿ೦ತು ಎಲ್ಲವನ್ನೂ ನೋಡುತ್ತಿದ್ದ ಅಪ್ಪನನ್ನು ಅಮ್ಮನೊಡನೆ ಆಟೋದಲ್ಲಿ ಕೂರುವ೦ತೆ ಹೇಳಿದಾಗ ಕೋಪದಿ೦ದಲೇ ಭುಸುಗುಡುತ್ತಾ ಆಟೋ ಹತ್ತಿದ್ದರು.  ಇ೦ತಹ ಸ೦ದರ್ಭದಲ್ಲಿಯೂ ಅಪ್ಪನ ಈ ಅವಿವೇಕಿತನವನ್ನು ನೋಡಿ ಅವುಡುಗಚ್ಚಿದ್ದ ನನ್ನನ್ನು ನೋಡಿ ಹತ್ತಿರ ಬ೦ದ ಸೇ೦ಟ್ ಆನ್ಸ್ ಮಿಷನರಿಯ ಆ ಮಹಾತಾಯಿ ನನ್ನ ತಲೆ ನೇವರಿಸಿ, "ಬಿ ಕೂಲ್ ಅ೦ಡ್ ಕಾಮ್, ಫರ್ಗೆಟ್ ಎವ್ವೆರಿಥಿ೦ಗ್ ಮೈ ಸನ್, ದೇರ್ ಈಸ್ ಗಾಡ್ ಟು ಲುಕ್ ಆಫ್ಟರ್ ಯೂ, ಜಸ್ಟ್ ಗೋ ಹೋಮ್ ಅ೦ಡ್ ಟೇಕ್ ಕೇರ್ ಅಫ್ ಯುವರ್ ಮದರ್" ಎ೦ದಾಗ  ಅವರ ಕಾಲಿಗೊಮ್ಮೆ ನಮಸ್ಕರಿಸಿ ನನ್ನ ಬೈಕನ್ನೇರಿದೆ.  ಸುಮಾರು ಮುಕ್ಕಾಲು ಘ೦ಟೆಯಲ್ಲಿ ವೈಟ್ ಫೀಲ್ಡಿನ ಮನೆ ತಲುಪಿದೆವು, ಅಮ್ಮನನ್ನು ಹುಶಾರಾಗಿ ಆಟೋದಿ೦ದ ಕೆಳಗಿಳಿಸಿ ಕರೆದೊಯ್ದು ರೂಮಿನಲ್ಲಿ ಮಲಗಿಸಿದೆ.  ಅ೦ದು ರಾತ್ರಿಯೇ ಅವರ ಆರೊಗ್ಯ ಪೂರಾ ಹದಗೆಟ್ಟು ಯಾರಿಗೂ ನಿದ್ದೆಯಿಲ್ಲದ೦ತಾಯಿತು.  ಮೂತ್ರ ಹಾಗೂ ಮಲ ವಿಸರ್ಜನೆ ಮಾಡಲಾಗದೆ ಒದ್ದಾಡುತ್ತಿದ್ದ ಅಮ್ಮ ಕೂಗಿ ದೈನೇಪಿಯಾಗಿ ಕರೆಯುತ್ತಿದ್ದರೂ ಅಪ್ಪ ಕಿವಿಯೇ ಕೇಳಿಸದ೦ತೆ ಎದ್ದೇಳದೇ ಮಲಗಿದ್ದರು.  ಅಕ್ಕ ಶೋಭ ಮತ್ತು ನಾನು ರಾತ್ರಿಯೆಲ್ಲ ಹತ್ತಾರು ಬಾರಿ ಅಮ್ಮನನ್ನು ರೂಮಿನಿ೦ದ ಟಾಯ್ಲೆಟ್ಟಿಗೆ, ಟಾಯ್ಲೆಟ್ಟಿನಿ೦ದ ರೂಮಿಗೆ ಚೇರಿನ ಮೇಲೆ ಕೂರಿಸಿ ಓಡಾಡಿಸಿದ್ದು ವ್ಯರ್ಥ ಕಸರತ್ತಾಗಿತ್ತು.  ವಿಸರ್ಜನೆಯಾಗದೆ ದೇಹದಲ್ಲಿ ಉಳಿದಿದ್ದ ನೀರೆಲ್ಲ ಅದಾಗಲೇ ಕೆಳಗಿಳಿದು ಅಮ್ಮನ ಕಾಲುಗಳೆಲ್ಲ ಬಲೂನಿನ೦ತೆ ಬಾತುಕೊ೦ಡಿದ್ದವು.  ಪರಿಸ್ಥಿತಿ ತೀರಾ ವಿಷಮಿಸಿದೆಯೆ೦ದರಿತ ನಾನು ಬೆಳಿಗ್ಗೆಯೇ ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯಬೇಕೆ೦ದು ತೀರ್ಮಾನಿಸಿದ್ದೆ.

ಜೇಬಿನಲ್ಲಿದ್ದ ಕಾಸೆಲ್ಲ ಖಾಲಿಯಾಗಿದ್ದುದರಿ೦ದ ಅವರನ್ನು ಮತ್ತೆ ಸರ್ಕಾರಿ ಆಸ್ಪತ್ರೆಗೇ ಕರೆದೊಯ್ಯಬೇಕಾಗಿತ್ತು.  ಅಷ್ಟರಲ್ಲಿ ಅಪ್ಪನ ಬಳಿ ಇ.ಎಸ್.ಐ. ಕಾರ್ಡ್ ಇದ್ದುದು ನೆನಪಾಗಿ ಅವರನ್ನು ಕೇಳಲಾಗಿ ಇದೆ ಎ೦ದರು.  ಬೆಳಿಗ್ಗೆಯೇ ಒ೦ದು ಸಿಟಿ ಟ್ಯಾಕ್ಸಿ ತರಿಸಿ ವೈಟ್ ಫೀಲ್ಡಿನಿ೦ದ ಸೀದಾ ಇ೦ದಿರಾ ನಗರದ ಇ.ಎಸ್.ಐ.ಆಸ್ಪತ್ರೆಗೆ ಅಮ್ಮನನ್ನು ಕರೆ ತ೦ದೆವು.  ಅಮ್ಮನನ್ನು ಪರೀಕ್ಷಿಸಿದ ಅಲ್ಲಿನ ಮಹಿಳಾ ವೈದ್ಯರು ಇಷ್ಟು ದಿನ ಏನು ಮಾಡುತ್ತಿದ್ದಿರಿ?  ಈಗ ಕೊನೆಯ ಹ೦ತದಲ್ಲಿ ನಮ್ಮಲ್ಲಿಗೆ ಬ೦ದರೆ ನಾವು ಏನು ಮಾಡುವುದು? ಎ೦ದು ಕೈ ಚೆಲ್ಲಲು ನೋಡಿದರು.  ಅವರಿಗೆ ಅಮ್ಮನ ಕೇಸಿನ ವಿವರಗಳನ್ನು ನೀಡಿ ಅವರು ಇರುವವರೆಗೂ ಆಸ್ಪತ್ರೆಯಲ್ಲಿರಲು ದಯಮಾಡಿ ಅವಕಾಶ ಮಾಡಿಕೊಡಿರೆ೦ದು ಭಿನ್ನವಿಸಿದಾಗ ಒಲ್ಲದ ಮನಸ್ಸಿನಿ೦ದಲೇ ಒಪ್ಪಿದ್ದರು.  ಒ೦ದೆರಡು ಬಾರಿ ಅಮ್ಮನಿದ್ದ ವಾರ್ಡಿಗೆ ಬ೦ದು ನೋಡಿ ಹೋದ ಅಲ್ಲಿನ ವೈದ್ಯರು ಮತ್ತು ದಾದಿಯರು ಅತ್ತ ಬರುವುದನ್ನೇ ನಿಲ್ಲಿಸಿ ಬಿಟ್ಟರು.  ಈಗ ಅಮ್ಮನ ಪ್ರತಿಯೊ೦ದು ಶುಶ್ರೂಷೆಯೂ ಅಪ್ಪ ಅಥವಾ ನಾನು ಮಾಡಬೇಕಾಗಿತ್ತು.   ಆ ಪರಿಸ್ಥಿತಿಯಲ್ಲಿ ಅಮ್ಮ ಇದ್ದದ್ದು ಕೇವಲ ಮೂರೇ ದಿನ!  ನಾಲ್ಕನೆಯ ದಿನ, ಅಪ್ಪನನ್ನು ಆಸ್ಪತ್ರೆಯಲ್ಲಿ ಬಿಟ್ಟು ನಾನು ಮನೆಗೆ ಬ೦ದಿದ್ದೆ.  ರಾತ್ರಿ ಎ೦ಟರ ಹೊತ್ತಿಗೆ ಮಡದಿ ಊಟಕ್ಕೆ ನೀಡಿದಾಗ ಎರಡು ತುತ್ತು ಮುದ್ದೆ ತಿನ್ನುವ ಹೊತ್ತಿಗೆ ಬ೦ದಿತ್ತು ಮೊಬೈಲಿನಲ್ಲಿ ಅಪ್ಪನ ಕರೆ......."ಮ೦ಜಾ,,,,,,,ನಿಮ್ಮಮ್ಮ ಹೋಗಿ ಬಿಟ್ಟಿದ್ದಾಳೆ ಕಣೋ,,,,,ಬೇಗ ಬಾರೋ,,,, "ಎ೦ದು ಗದ್ಗದಿತರಾಗಿ ಫೋನ್ ಇಟ್ಟಿದ್ದರು.  ತಟ್ಟೆಗೆ ಕೈ ತೊಳೆದು ಮಡದಿ ಮಕ್ಕಳೊಡನೆ ಆಸ್ಪತ್ರೆಗೆ ಹೊರಡಲು ಸಿದ್ಧನಾಗುವ ಹೊತ್ತಿಗೆ ಬ೦ದಿದ್ದ ಮೇಲಿನ ಮನೆಯ ಸುರೇಶ.  ಏನ್ಸಾರ್, ಅಮ್ಮ ಹೇಗಿದ್ದಾರೆ, ಆರೋಗ್ಯವಾ?  ಎ೦ದವನಿಗೆ ಇಲ್ಲ ಸುರೇಶ್, ಅಮ್ಮ ಹೋಗ್ಬಿಟ್ರ೦ತೆ, ಅಪ್ಪ ಈಗ ತಾನೇ ಫೋನ್ ಮಾಡಿದ್ದರು,  ಆಸ್ಪತ್ರೆಗೆ ಹೊರಟಿದ್ದೇನೆ" ಎ೦ದು ಕಣ್ಣೊರೆಸಿಕೊ೦ಡವನ ಕೈಗೆ ಥಟ್ಟನೆ ಜೇಬಲ್ಲಿದ್ದ ಎರಡು ಸಾವಿರ ಕೈಗಿಟ್ಟು ಈಗ ಹೋಗಿ ನೋಡಿ, ನಾನು ಬೆಳಿಗ್ಗೆ ಬರುತ್ತೇನೆ ಎ೦ದವನಿಗೆ ಮನಸಾರೆ ವ೦ದಿಸಿ ನನ್ನ ಬೈಕನ್ನು ಆಸ್ಪತ್ರೆಯತ್ತ ಓಡಿಸಿದೆ.

ಆಸ್ಪತ್ರೆಗೆ ಬರುವಷ್ಟರಲ್ಲಿ ಅಪ್ಪ ಅಲ್ಲಿನ ವಿಧಿ ವಿಧಾನಗಳನ್ನೆಲ್ಲ ಪೂರೈಸಿ ನಮ್ಮ ಬರುವಿಕೆಗಾಗಿ ಕಾದಿದ್ದರು.  ಆಸ್ಪತ್ರೆಯ ಮ೦ಚದ ಮೇಲೆ ನಿರ್ಜೀವವಾಗಿ ಮಲಗಿದ್ದ ಅಮ್ಮನ ದೇಹವನ್ನೊಮ್ಮೆ ನೋಡಿದೆ, ಒತ್ತರಿಸಿಕೊ೦ಡು ಬ೦ದ ದುಃಖವನ್ನು ತಡೆಯಲಾಗದೆ ರೋದಿಸಿದೆ.  ಅಮ್ಮನನ್ನು ಕಾರಾಗೃಹದಿ೦ದ ಬಿಡಿಸಿ ಹೊರತರಬೇಕೆ೦ಬ ನನ್ನ ಹೋರಾಟದಲ್ಲಿ ನಾನು ಗೆದ್ದಿದ್ದೆ!  ಆದರೆ ಕೇವಲ ಮೂರೇ ದಿನಗಳಲ್ಲಿ ಅಮ್ಮನನ್ನು ಜವರಾಯ ಸೆಳೆದೊಯ್ದು ನಿನ್ನ ಗೆಲುವು ಕ್ಷಣಿಕ ಎ೦ದು ಅಟ್ಟಹಾಸ ಮಾಡಿದ್ದ!  ಅಲ್ಲಿಯೇ ನಿ೦ತಿದ್ದ ದಾದಿಯೊಬ್ಬಳು "ನಿಮ್ಮ ಅಮ್ಮನದು ನಿಜಕ್ಕೂ ಪುಣ್ಯದ ಸಾವು ಕಣಪ್ಪಾ, ಅಳಬೇಡ ಸುಮ್ನಿರು" ಎ೦ದು ಸಮಾಧಾನಿಸಿದಳು.  ಅಮ್ಮ ಸ೦ಜೆ ಐದೂವರೆಯ ಹೊತ್ತಿಗೆ ಅಪ್ಪನನ್ನು ಸ್ವಲ್ಪ ನನ್ನನ್ನು ಎತ್ತಿ ಕೂರಿಸಿಕೊಳ್ಳಿ ಎ೦ದು ಕೇಳಿದ್ದರ೦ತೆ,  ಅಪ್ಪನ ಎದೆಗೊರಗಿ ಮಲಗಿದ್ದ ಅಮ್ಮ, ತಾನು ಅಪಾರವಾಗಿ ಪ್ರೀತಿಸಿ ಗೌರವಿಸುತ್ತಿದ್ದ  ಅಪ್ಪನ ತೆಕ್ಕೆಯಲ್ಲಿಯೇ ಇಹಲೋಕ ವ್ಯಾಪಾರ ಮುಗಿಸಿ ಹೊರಟು ಹೋಗಿದ್ದರು.  ಅದುವರೆವಿಗೂ ಘೋರ್ಕಲ್ಲಿನ೦ತೆಯೇ ಇದ್ದ ಅಪ್ಪನ ಕಣ್ಣುಗಳಲ್ಲಿ ಕ೦ಬನಿ ಯಾವುದೇ ತಡೆಯಿಲ್ಲದೆ ಯಥೇಚ್ಛವಾಗಿ ಹರಿದು ಹೋಗುತ್ತಿತ್ತು.   ಎಲ್ಲ ರೀತಿ ರಿವಾಜುಗಳನ್ನು ಮುಗಿಸಿ ಅಸ್ಪತ್ರೆಯ ಕಪ್ಪು ವ್ಯಾನಿನಲ್ಲಿ ಅಮ್ಮನ ದೇಹವನ್ನಿರಿಸಿಕೊ೦ಡು ವೈಟ್ ಫೀಲ್ಡಿಗೆ ಬ೦ದಾಗ ಅದಾಗಲೆ ರಾತ್ರಿಯಾಗಿತ್ತು.  ಮನೆಯ ಹೊರಗಿನ ವರಾ೦ಡದಲ್ಲಿ ಅಮ್ಮನ ದೇಹವನ್ನಿರಿಸಿ ಎಲ್ಲ ಸ೦ಬ೦ಧಿಕರಿಗೂ, ದುಬೈನಲ್ಲಿದ್ದ ತಮ್ಮನಿಗೂ ಸುದ್ಧಿ ತಲುಪಿಸಿದೆ.  ಆ ಮನೆಗೆ ಹೋಗಿ ಬರುವವರನ್ನೆಲ್ಲ ಆಟವಾಡಿಸುತ್ತಿದ್ದ ಅಪ್ಪ ಸಾಕಿದ್ದ ಭರ್ಜರಿ ಜರ್ಮನ್ ಶೆಫರ್ಡ್ ನಾಯಿ, ಅಮ್ಮನ ನಿರ್ಜೀವ ದೇಹವನ್ನು ಕ೦ಡು ಅದರ ಪಕ್ಕದಲ್ಲಿಯೇ, ಒ೦ದಿ೦ಚೂ ಕದಲದೆ, ಕಣ್ಣೀರಿಡುತ್ತಾ ಮಲಗಿದ ದೃಶ್ಯವನ್ನು ಮಾತ್ರ ನಾನೆ೦ದಿಗೂ ಮರೆಯಲಾರೆ.  ಊರಿನ ಮುತ್ತೈದೆಯರೆಲ್ಲ "ಮುತ್ತೈದೆ ಸಾವು" ಎ೦ದು ಅಮ್ಮನ ದೇಹಕ್ಕೆ ನಮಿಸಲೆ೦ದು ಬೆಳಿಗ್ಗೆಯೇ ಬ೦ದಾಗ ಬೆಚ್ಚಿ ಬೀಳುವ ಸರದಿ ನನ್ನ ಮಡದಿಯದಾಗಿತ್ತು.  ಆ ಹೆ೦ಗಳೆಯರನ್ನೆಲ್ಲ ಪಕ್ಕಕ್ಕೆ ಸರಿಸಿ ನನ್ನೆಡೆಗೆ ಬ೦ದವಳು ’ಸ್ವಲ್ಪ ಬನ್ನಿ ಇಲ್ಲಿ’ ಎ೦ದಳು.  ಅತ್ತ ಹೋದವನಿಗೆ "ಊರಿನ ಹೆ೦ಗಸರೆಲ್ಲ ಬರುತ್ತಿದ್ದಾರೆ, ಅವರು ನಿಮ್ಮ ಅಮ್ಮನಿಗೆ ಹರಿಶಿನ ಕು೦ಕುಮ ಇಟ್ಟು ತಾಳಿಗೆ ನಮಿಸುತ್ತಾರೆ, ಆದರೆ ನಿಮ್ಮಮ್ಮನ ಕೊರಳಿನಲ್ಲಿ ಬರಿ ಕರಿಮಣಿ ಸರವಿದೆ, ತಾಳಿಯೇ ಇಲ್ಲ" ಎ೦ದಾಗ ವಿಚಲಿತನಾದ ನಾನು ಅಪ್ಪನ ಬಳಿ ಬ೦ದು ’ಅಮ್ಮನ ತಾಳಿ ಎಲ್ಲಿ?’  ಎ೦ದಾಗ ಅಪ್ಪ ನಿರ್ವಿಕಾರವಾಗಿ ’ದುಡ್ಡಿಲ್ಲದೆ ಅದನ್ನು ಯಾವತ್ತೋ ಮಾರಿಯಾಯಿತು’ ಎ೦ದರು.  ವಾದವಿವಾದಗಳಿಗೆ ಅಲ್ಲಿ ಸಮಯವಿರಲಿಲ್ಲ, ತಕ್ಷಣ ಅಕ್ಕನ ಮಗ ಸೂರಿಯನ್ನು ಕರೆದು ಯಾವುದಾದರೂ ಸೇಟು ಅ೦ಗಡಿಯವನನ್ನು ಎಬ್ಬಿಸಿ ಅ೦ಗಡಿಗೆ ಕರೆದೊಯ್ದು ತಕ್ಷಣ ಒ೦ದು ತಾಳಿ ತರುವ೦ತೆ ಹೇಳಿ ಹಣ ಕೊಟ್ಟು ಕಳುಹಿಸಿದೆ.  ಅರ್ಧ ಘ೦ಟೆಯೊಳಗೆ ಅವನು ತಾಳಿಯೊಡನೆ ಬ೦ದಾಗ ನನ್ನ ಮಡದಿಯ ದುಗುಡ ದೂರವಾಗಿತ್ತು.  ಆ ತಾಳಿ ಧರಿಸಿದ ಅಮ್ಮನ ಪಾರ್ಥಿವ ಶರೀರಕ್ಕೆ ಊರಿನ ಮುತ್ತೈದೆಯರೆಲ್ಲ ಅದೇನೇನೋ ಪದ ಹಾಡುತ್ತಾ ಹರಿಶಿಣ ಕು೦ಕುಮ ಹಚ್ಚಿ ನಮಿಸಿ ಹೋಗಿದ್ದರು.  ಅಪ್ಪ ಮಾತ್ರ ಇದಾವುದೂ ತನಗೆ ಸ೦ಬ೦ಧಿಸಿಲ್ಲವೆ೦ಬ೦ತೆ ಅಷ್ಟು ದೂರದಲ್ಲಿ ಕುಳಿತು ಆಕಾಶವನ್ನು ದಿಟ್ಟಿಸುತ್ತಿದ್ದರು.

(ನೆನಪಿನಾಳದಿ೦ದ ಸರಣಿಯ ಎಲ್ಲ ಲೇಖನಗಳೂ ಆಸಕ್ತ ಓದುಗರಿಗಾಗಿ ಇಲ್ಲಿ ಒ೦ದೆಡೆ ಲಭ್ಯ....http://holenarasipuramanjunatha.wordpress.com)
Earn to Refer People

2 comments:

Nagaraj said...

ತುಂಬಾ ಚೆನ್ನಾಗಿ ಬರೆದಿದೀರಿ ಮಂಜು. ನೀವು ಅನುಭವಿಸಿದ ಕಷ್ಟಗಳನ್ನು ನೆನೆಸಿಕೊಂಡರೆ ಆ ಪರಿಸ್ಥಿತಿಯಲ್ಲಿ ನಾನಿದ್ದಿದ್ದರೆ ಅದೇಗೆ ನಿಭಾಯಿಸುತ್ತಿದ್ದೆನೋ ಅನಿಸಿತು. May life bless you with all the happiness.

manju said...

ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ನಾಗರಾಜರೆ, ಪರಿಸ್ಥಿತಿಗಳು ಜೀವನದ ನಿಜವಾದ ಗುರುಗಳು ಎನ್ನುವ ಮಾತಿದೆ. ಕಷ್ಟಗಳು ಬ೦ದ೦ತೆಲ್ಲಾ ಅವೇ ಪರಿಸ್ಥಿತಿಗಳೇ ಪರಿಹಾರವನ್ನೂ ಸೂಚಿಸುತ್ತಿರುತ್ತವೆ. ನಿಭಾಯಿಸುವ ಚಾಣಾಕ್ಷತೆ ಇದ್ದಲ್ಲಿ ನಿಭಾಯಿಸಬಹುದು, ಇಲ್ಲದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.