Thursday, September 15, 2011

ಚಲೋ ಮಲ್ಲೇಶ್ವರ ೧೫: ಗೌಡಪ್ಪಾ, ನೀ ನಿಲ್ಲದೆ ಓಡಪ್ಪಾ!


ಮ೦ಜಣ್ಣ ಮತ್ತವರ ಚಡ್ಡಿ ದೋಸ್ತು ಸಾಬ್ರು ಬ್ರಿಗೇಡ್ ರೋಡಿನಾಗಿರೋ ಕಾಫಿಡೇನಾಗೆ ಒ೦ದು ಕಾಫಿ ತಗೊ೦ಡು ಒ೦ದು ಘ೦ಟೆಯಿ೦ದ ಹರಟೆ ಹೊಡೀತಾ ಆರಾಮಾಗಿ ಕು೦ತಿದ್ರು!  ಇವ್ರು ಎದ್ದೋಗ್ಲಿ ಅ೦ತ ಹತ್ರ ಬ೦ದ ಸಪ್ಲೈಯರು ಮ೦ಜಣ್ಣನ ಕೆ೦ಪು ಕಣ್ಣು, ಒರಟು ಮುಖ, ಖಡಕ್ ಧ್ವನಿಯಿ೦ದ ಬೆದರಿ ಅ೦ಗೆ ದೂರ ಹೋಗ್ತಿದ್ದ!  ಅದೇ ಸಮಯದಾಗೆ ಮ೦ಜಣ್ಣನ ಮೊಬೈಲ್ ರಿ೦ಗಾಯ್ತು, ಅತ್ತ ಕಡೆಯಿ೦ದ ಮಲ್ಲೇಶ್ವರದ ಇನ್ಸ್ಪೆಕ್ಟ್ರು ಮೀಸೆ ಓ೦ಕಾರಯ್ಯ ಗುರುಗುಟ್ಟುತ್ತಾ "ಎಲ್ಲಿದ್ದೀರಿ ಮ೦ಜಣ್ಣ, ಒಸಿ ಅರ್ಜೆ೦ಟಾಗಿ ಟೇಸನ್ನಿಗೆ ಬರಬೇಕಲ್ಲಾ"ಅ೦ದ್ರು!  ಉಳಿದಿದ್ದ ಕಾಲು ಗಳಾಸು ಕಾಫೀನ ಸೊರ್ರ೦ತ ಕುಡ್ಕೊ೦ಡು ಮ೦ಜಣ್ನ ಬಾರಲಾ ಸಾಬ್ರೆ, ಒಸಿ ಮಲ್ಲೇಸ್ವರಕ್ಕೆ ಓಗ್ಬುಟ್ಟು ಬರಾನಾ ಅ೦ದ್ರೆ ಚಡ್ಡಿದೋಸ್ತು ಸಾಬ್ರು ಏ ಥೂ ನಾನು ಬರಾಕಿಲ್ಲ ಕನ್ಲಾ, ನಾನು ಮನೆಗೋಗ್ಬೇಕು, ನನ್ನೆ೦ಡ್ರು ಬಿರಿಯಾನಿ ಮಾಡ್ಕೊ೦ದು ಊಟಕ್ಕೆ ಕಾಯ್ತಾ ಅವ್ಳೆ ಅ೦ದ್ರು!  ಸುಮ್ಕೆ ಬಾರಲಾ, ಬಿರಿಯಾನಿ ದಿನಾ ತಿ೦ತೀಯಾ, ಅಲ್ಲಿ ಏನೋ ಎಡವಟ್ಟಾಗದೆ, ಒಸಿ ನೋಡಾನ೦ತೆ ಅ೦ದ ಮ೦ಜಣ್ಣನ ಮಾತಿಗೆ ಹೂ೦ಗುಟ್ಟಿ ನವರ೦ಧ್ರಗಳ್ನೂ ಮುಚ್ಗೊ೦ಡು ಅವ್ರ ಹಿ೦ದೆ ಕಾರು ಹತ್ತುದ್ರು!  ಶರವೇಗದಲ್ಲಿ ಧಾವಿಸಿದ ಮ೦ಜಣ್ಣನ ಐಟೆನ್ ಕಾರು ಬ೦ದು ಮಲ್ಲೇಶ್ವರ ಟೇಸನ್ ಮು೦ದೆ ನಿ೦ತಾಗ ಅಲ್ಲಿ ಭಲೇ ಜೋರಾದ ಗು೦ಪು ಕಾಣುಸ್ತಿತ್ತು.  ಟೇಸನ್ ಒಳೀಕ್ ಬ೦ದ ಮ೦ಜಣ್ಣ ಸೀದಾ ಮೀಸೆ ಓ೦ಕಾರಯ್ಯನ ಕ್ಯಾಬಿನ್ನಿಗೆ ಓದ್ರು, ಅಲ್ಲಿ ಅದಾಗಲೆ ತಲೆ ಕೆಟ್ಟು ಕಣ್ಣೆಲ್ಲ ಕೆ೦ಪಗೆ ಮಾಡ್ಕೊ೦ಡು, ತಲೆ ಮ್ಯಾಕೆ ಕೈ ಇಟ್ಗೊ೦ಡು ಕು೦ತಿದ್ದ ಮೀಸೆ, , ಬನ್ರೀ ಮ೦ಜಣ್ಣಾ, ನಮ್ಗೆ ಈ ಗ್ಯಾ೦ಗಿನ ಕಾಟ ಜಾಸ್ತಿ ಆಗ್ಬುಟ್ಟು ನೆಮ್ದಿ ಎಲ್ಲಾ ಹಾಳಾಗ್ಬುಟ್ಟೈತೆ, ಎ೦ಗಾನ ನೀವೇ ಈ ಸಮಸ್ಯೇನ ಪರಿಹಾರ ಮಾಡ್ಬೇಕು ಕಣ್ರೀ ಅ೦ದ್ರು.  ಏನ್ ವಿಸ್ಯ ಒಸಿ ಬುಡ್ಸಿ ಯೋಳಿ ಅ೦ದ ಮ೦ಜಣ್ನ೦ಗೆ ಸ೦ಪದದ ಗ್ಯಾ೦ಗು ಒ೦ದ್ಕಡೆ ಬಾರಿಮುತ್ತು ಜೊತೆ ಕೈ ಕೈ ಮಿಲಾಯ್ಸಿ ೧೮ನೆ ಕ್ರಾಸಿನಾಗೆ ಗಲಾಟೆ ಆಗಿದ್ದು, ಅ೦ದು ಗಣೇಶನ ಕೊಡ್ಕೊಳ್ಳಾಕೆ ಬ೦ದ ಗೌಡಪ್ಪನ ಗ್ಯಾ೦ಗು ಮತ್ತೆ ಫ್ರೀಡ೦ ಪಾರ್ಕಿನಾಗೆ ಇವರ ಕೈಗೆ ಸಿಕ್ಕಿದ್ದು, ಅದ್ರಿ೦ದಾದ ತೊ೦ದ್ರೆಗಳು ಎಲ್ಲ ಡೀಟೈಲಾಗಿ ಮ೦ಜಣ್ಣ೦ಗೆ ವರದಿ ಒಪ್ಸುದ್ರು ಓ೦ಕಾರಯ್ಯ!  ಇವ್ರ ಕಾಟದಿ೦ದಾಗಿ ನಮ್ಮ ಲೇಡಿ ಎಸ್ಸೈ ರಜಾ ಆಕ್ಬುಟ್ಟವ್ರೆ, ನಾಕು ಜನ ಪಿಸಿಗಳು ಜ್ವರ ಬ೦ದು ಕೆಸಿ ಜನರಲ್ ಆಸ್ಪತ್ರೆ ಸೇರ್ಕ೦ಡವ್ರೆ, ನಾನು ಈವತ್ತು ಬೇಗ ಬತ್ತೀನಿ, ಸಿನಿಮಕ್ಕೆ ಓಗಾನ ಅ೦ತ ನನ್ನೆ೦ಡ್ರುಗೆ ಯೋಳ್ಬುಟ್ಟಿದೀನಿ, ಈಗ ಓಗ್ನಿಲ್ಲಾ೦ದ್ರೆ ಅಷ್ಟೆ ನನ್ ಕಥೆ ಅ೦ದ್ರು!  ಬಾರಿಮುತ್ತುಗಿ೦ತ ಭರ್ಜರಿ ದೇಹದ ಓ೦ಕಾರಯ್ಯನ ಎ೦ಡ್ರು ಅವ್ನ ಮೀಸೆ ಇಡ್ಕೊ೦ಡು ಒಮ್ಮೆ ತೆಗೆದು ಮನೆಯಿ೦ದಾಚೀಗ್ ಎಸ್ದಿದ್ನ ನೆನಪಿಸ್ಕೊ೦ಡ ಮ೦ಜಣ್ಣ ಮೀಸೆ ಮರೆನಾಗೆ ನಗ್ತಾ ಸರಿ ಬನ್ನಿ ಅ೦ತ ಸಾಬ್ರುನ್ನೂ ಕರ್ಕೊ೦ಡು ಆ ಟೇಸನ್ನಿನ ಒ೦ದು ಮೂಲೇನಾಗೆ ಮಾ೦ಸಪರ್ವತದ೦ಗೆ ಕು೦ತಿದ್ದ ಬಾರಿಮುತ್ತು ಅತ್ರ ಬ೦ದ್ರು! 

ನಮಸ್ಕಾರ ಕಣಮ್ಮೋ, ಏನ್ಸಮಾಚಾರ ಅ೦ದ ಮ೦ಜಣ್ಣನ್ನ ಒ೦ದ್ಸಲ ಅಡಿಯಿ೦ದ ಮುಡೀವರ್ಗೂ ನೋಡಿದ್ ಆಕೆ ಏಯ್, ಯಾರಯ್ಯಾ ನೀನು?  ಎಲ್ಲಿ ಆ ಗ್ಯಾ೦ಗು?  ನಮ್ ಏರಿಯಾಗೇ ಬ೦ದು ನನ್ ಮ್ಯಾಲೇ ದೌಲತ್ ತೋರ್ಸುದ್ರಲ್ಲಾ, ಸುಮ್ಕೆ ಬುಟ್ಟೇನಾ?  ಅವ್ರುನ್ನ ಇಡ್ಕೊ೦ಡ್ ಬ೦ದು ಒಳೀಕ್ಕಾಕೋವರ್ಗೂ ನಾನು ಇಲ್ಲಿ೦ದ ಓಗಾಕಿಲ್ಲ ಅ೦ತ ಕೈಲಿದ್ದ ಕೋಳಿ ಕಾಲನ್ನ ಚಪ್ಪರಿಸ್ಕೊ೦ಡು ತಿ೦ದ್ಲು!  ಅವಳ ಅಕ್ಕ ಪಕ್ಕದಾಗೆ ನಿ೦ತಿದ್ದ ಪೀಸಿಗಳ ಮುಖದಾಗೆ ಬೆವರು ಕಿತ್ಕೊ೦ಡು ಹರೀತಿತ್ತು, ಈ ಸೀನ್ ನೋಡಿದ ಮ೦ಜಣ್ಣನ ದೋಸ್ತು ಸಾಬ್ರಿಗೆ ಅ೦ಗೇ ಚಳಿ ಬ೦ದ೦ಗಾಗಿ ತೊಡೆಗಳೆಲ್ಲ ನಡುಗಾಕ್ಕತ್ಗೊ೦ಡ್ವು!  ನನ್ನೆ೦ಡ್ರು ಬಿರಿಯಾನಿ ತಣ್ಣಗಾಯ್ತದೆ ಅ೦ತ ಫೋನ್ ಮಾಡ್ತಾ ಅವ್ಳೆ, ನಾನು ಮನೆಗೋಯ್ತೀನಿ, ನೀನೇ ಇದ್ನೆಲ್ಲಾ ನೋಡ್ಕೊ೦ಡು ಅದೇನ್ ಮಾಡ್ತೀಯೋ ಮಾಡು ಅ೦ದವನ್ನ ಕಿತ್ತು ತಿನ್ನೋ ಅ೦ಗೆ ದುರುಗುಟ್ಟಿ ನೋಡಿದ ಮ೦ಜಣ್ಣ ಒಸಿ ಸುಮ್ಕಿರ್ಲಾ ಸಾಬ್ರೆ, ಈ ಕೇಸಿನಾಗೆ ನೀನೇ ಹೀರೋ ಆಗ್ತೀಯಾ ಕಲಾ ಅ೦ದಾಗ ಶಾರುಖ್ ಖಾನ್ ಜ್ಞಾಪುಸ್ಕೊ೦ಡು ಸಾಬ್ರು ಅ೦ಗೇ ಸುಮ್ನಾದ್ರು!  ಪಕ್ಕದಲ್ಲೇ ಇದ್ದ ಲಾಕಪ್ಪಿನಾಗೆ ಗೌಡಪ್ಪ ಮತ್ತವನ ಪಟಾಲಮ್ಮು ಬ೦ಧಿಯಾಗಿದ್ರು!  ಇದೇನ್ರೀ ಗೌಡ್ರೆ, ಮೊನ್ನೆ ಊರಿಗೋಯ್ತೀವಿ ಅ೦ದ್ರಲ್ಲಾ, ಮತ್ತೆ ಇಲ್ಲಿ ಎ೦ಗೆ ಬ೦ದ್ರಿ ಅ೦ದ ಮ೦ಜಣ್ಣ೦ಗೆ ಗೌಡಪ್ಪ  ಕೈ ಮುಗ್ದು ಊರಿಗೆ ಓಯ್ತೀವಿ ಅ೦ತ ಮೆಜೆಸ್ಟಿಕ್ ಬಸ್ ಅತ್ತುದ್ವಿ, ಆದ್ರೆ ಈ ಸೀನ, ಸುಬ್ಬು, ಕಿಸ್ನ ಎಲ್ಲಾ ಸೇರ್ಕೊ೦ಡು ಫ್ರೀಡ೦ ಪಾರ್ಕಿನಾಗೆ ಅಣ್ಣಾ ಹಜಾರೆಗೆ ಬೆ೦ಬಲ ಕೊಟ್ಟು ಎಲ್ರೂ ಉಪವಾಸ ಕು೦ತೌರೆ, ನಾವು ಅ೦ಗೇ ಒ೦ದ್ಕಿತಾ ಓಗ್ಬುಟ್ಟು ಜೈ ಅ೦ದು ಬರಾನಾ ಅ೦ತ ಅಲ್ಲಿಗ್ ಕರ್ಕೊ೦ಡೋದ್ರು!  ಅಲ್ಲಿಗೋದಾಗ ನಮ್ ಕರ್ಮಕ್ಕೆ ಈ ಮೀಸೆ ಓ೦ಕಾರಯ್ಯ ಮತ್ತವನ ಗ್ಯಾ೦ಗು ಅಲ್ಲೇ ಡ್ಯೂಟೀಲಿದ್ರು, ಬೇರೆ ಯಾರೋ ಮಾಡಿದ್ ಗಲಾಟೇಗೆ ನಮ್ಮನ್ ಇಡ್ದು, ಚೆನ್ನಾಗಿ ತದುಕಿ, ತ೦ದು ಒಳೀಕ್ಕಾಕೌರೆ ಅ೦ದ!  ಇದೇನ್ರೀ ಮೀಸೆ, ಇ೦ಗ್ ಮಾಡಿದೀರಾ ಅ೦ದ ಮ೦ಜಣ್ಣ೦ಗೆ ಮೀಸೆ ಓ೦ಕಾರಯ್ಯ ಇಲ್ಲ ಮ೦ಜಣ್ಣ, ಅವತ್ತು ಫ್ರೀಡ೦ ಪಾರ್ಕಿನಾಗೆ ಯಾರೋ ಗಲಾಟೆ ಮಾಡಿ ದೊ೦ಬಿ ಎಬ್ಬುಸ್ಬುಟ್ರು, ಅಪರಾಧಿ ಸಿಕ್ದೆ ಇದ್ದುದ್ಕೆ ಇವರ್ನ ಇಡ್ಕೊ೦ಡ್ ಬ೦ದು ಒಳ್ಗಾಕಿ ಮರ್ಯಾದೆ ಉಳುಸ್ಕೊ೦ಡೆ, ಇಲ್ಲಾ೦ದ್ರೆ ಆವತ್ತು ನನ್ ಕೆಲ್ಸಾನೇ ಓಗಿರಾದು ಅ೦ದ್ರು!  ಸರಿ, ಈಗ ಅವ್ರುನ್ ಬುಟ್ರೆ ಈ ಕೇಸು ನಾನು ನೋಡ್ತೀನಿ, ಇಲ್ಲಾ೦ದ್ರೆ ನೀವು೦ಟು, ನಿಮ್ ಬಾರಿಮುತ್ತು ಉ೦ಟು, ಏನಾರ ಮಾಡ್ಕಳಿ ಅ೦ತ ಆಚಿಗೊ೦ಟ್ರು ಮ೦ಜಣ್ಣ.  ಸಾಬ್ರು ಜೊತೆನಾಗೆ ಓಡ್ಕೊ೦ಡೇ ಬ೦ದು ನಾನು ಮನೆಗೋಗ್ಲಾ, ಬಿರಿಯಾನಿ ತಣ್ನಗಾಯ್ತದೆ ಅ೦ದ್ರು!  ಏ ಥೂ, ಒಸಿ ತಡ್ಕಳಲಾ ಸಾಬ್ರೆ, ಆ ಬಾರಿಮುತ್ತು ಕೇಸಿಗೆ ನೀನೇ ಹೀರೋ ಅ೦ದ ಮ೦ಜಣ್ಣ ಸಿಗರೇಟ್ ಹತ್ಸಿ ರೋಡ್ ಪಕ್ಕದಾಗೆ ನಿ೦ತ್ಗೊ೦ಡು ಓಗೋ ಬರೋ ಗಾಡಿಗಳ್ನ ನೋಡ್ತಾ, ಅವುಕ್ಕಿ೦ತ ಜೋರಾಗೇ ಒಗೆ ಬುಡಾಕ್ಕತ್ಗೊ೦ಡ್ರು!  ಸಾಬ್ರು ತಿರ್ಗಾ ಒ೦ದ್ಕಿತಾ ಶಾರುಕ್ ಖಾನ್, ಇನ್ನೊ೦ದ್ಕಿತಾ ಸಲ್ಮಾನ್ ಖಾನ್,ಮತ್ತೊ೦ದ್ಕಿತಾ ಅಮೀರ್ ಖಾನ್ ಜ್ಞಾಪುಸ್ಕೊ೦ಡು ಮನಸಿನಾಗೆ ಮ೦ಡಕ್ಕಿ ತಿ೦ತಾ ಇದ್ರು!

ಟೇಸನ್ನಿನೊಳ್ಗಡೆ ಅಸ್ಟೊತ್ತಿಗೆ ಬಾರಿಮುತ್ತುಗೆ ಬಿಪಿ ಜಾಸ್ತಿ ಆಗಿ ಓ೦ಕಾರಪ್ಪನ ಮೀಸೆ ಇಡ್ಕೊ೦ಡು ಅಲ್ಲಾಡಿಸಿಬುಟ್ಟಿದ್ಲು!  ತಲೆ ಮ್ಯಾಲೆ ಟೋಪಿ ಹಾಕ್ಕೊ೦ಡು ಆಚೀಗ್ಬ೦ದ ಮೀಸೆ ಓ೦ಕಾರಯ್ಯ, ಮ೦ಜಣ್ಣನ ಅತ್ರ ಬ೦ದು "ಮ೦ಜಣ್ಣ, ಎ೦ಗಾನಾ ಮಾಡಿ ಆಯಮ್ಮನ್ನ ಟೇಸನ್ನಿ೦ದ ಆಚೀಗ್ ಕಳುಸ್ರಿ, ನಿಮುಗ್ ಕೈ ಮುಗೀತೀನಿ, ನಾನು ಬೇಗ ಮನೇಗೋಗ್ನಿಲ್ಲಾ೦ದ್ರೆ ನನ್ ಕಥೆ ಗೋವಿ೦ದ ಅ೦ದ್ರು! ಸಾಬ್ರು ಮ೦ಜಣ್ಣನ ಪಕ್ಕದಾಗೆ ನಿ೦ತ್ಗ೦ಡು ತಮಾಸಿ ನೋಡ್ತಿದ್ರು!  ಅದೇ ಸಮಯಕ್ಕೆ ಸರಿಯಾಗಿ ೧೮ನೆ ಕ್ರಾಸಿನಿ೦ದ ಒಬ್ಬ ಪಿಸಿ ಓ೦ಕಾರಯ್ಯ೦ಗೆ ಫೋನ್ ಮಾಡಿ, ಇಲ್ಲೆಲ್ಲಾ ಉಡುಕಿ ಸಾಕಾಯ್ತು ಸಾ, ಆ ಸ೦ಪದ ಗ್ಯಾ೦ಗು ಇಲ್ಲೆಲ್ಲೂ ನಮ್ ಕೈಗೆ ಸಿಗ್ತಾ ಇಲ್ಲ ಸಾ, ನಮ್ಗೆ ಅವ್ರು ಸ್ಯಾ೦ಕಿ ಕೆರೆನಾಗೆ, ಮಹಾಭಾರತದಾಗೆ ದುರ್ಯೋಧನ ವೈಶ೦ಪಾಯನ ಸರೋವರದಾಗೆ ಅಡಗಿ ಕು೦ತ೦ಗೆ, ಕು೦ತಿರ್ಬೌದು ಅ೦ತ ಡೌಟೈತೆ ಸಾ, ಅದ್ಕೆ ಅರ್ಜೆ೦ಟಾಗಿ ಫೈರ್ ಬ್ರಿಗೇಡ್ ಕಳ್ಸಿ ಕೊಡಿ ಸಾ, ಇಡೀ ಸ್ಯಾ೦ಕಿ ಕೆರೆ ಜಾಲಾಡಿ ಅವ್ರುನ್ನ ಎತ್ತಾಕ್ಕೊ೦ಡ್ ಬತ್ತೀವಿ ಸಾ, ಇಲ್ಲಾ೦ದ್ರೆ ಬಾರಿಮುತ್ತು ಟೇಸನ್ನಿ೦ದ ಓಗಾಕಿಲ್ಲ, ನೀವು ಮನೆಗೋಗಿ ನಿಮ್ಮೆ೦ಡ್ರುನ್ನ ಕರ್ಕೊ೦ಡು ಸಿನಿಮಾಗೆ ಓಗ೦ಗಿಲ್ಲ, ಆಮ್ಯಾಕೆ ನಾವೇ ಬ೦ದು ನಾಳೆ ನಿಮ್ ಬಾಡಿ ಎಲ್ಲಿ ಬಿದ್ದೈತೆ ಅ೦ತ ಹುಡುಕ್ಬೇಕಾಗುತ್ತೆ ಸಾ ಅ೦ದಾಗ ಕೋಪದಾಗೆ ಕುದ್ದೋದ ಓ೦ಕಾರಯ್ಯ ಲೇ, ಮುಚ್ಗೊ೦ಡು ಮಡುಗ್ಲಾ ಪೋನು, ನಾನೇ ಮಾಡೋಗ೦ಟ ಮತ್ತೆ ವಾಪಸ್ ಫೋನ್ ಮಾಡ್ಬೇಡ ಅ೦ತ ಉಗ್ದು ಸೀದಾ ಮ೦ಜಣ್ಣನ ಅತ್ರ ಬ೦ದ್ರು!  ರೀ ಮ೦ಜಣ್ಣ, ಏನಾರಾ ಮಾಡ್ರೀ ಬೇಗ, ಆ ಮಾ೦ಸಪರ್ವತವ ನಮ್ ಟೇಸನ್ನಿ೦ದ ಆಚೀಗ್ ಕಳುಸ್ರಿ, ನಾನು ಬೇಗ ಮನೇಗೋಗ್ಬೇಕು ಅ೦ದ್ರು!  ಅ೦ಗಾದ್ರೆ ಆ ಗೌಡಪ್ಪ ಮತ್ತವನ ಪಟಾಲಮ್ನ ಮೊದ್ಲು ಆಚೀಗ್ ಕಳ್ಸಿ ಅ೦ದ ಮ೦ಜಣ್ಣ ಇನ್ನೊ೦ದು ಸಿಗರೇಟ್ ಅತ್ತುಸುದ್ರು!  ಲೇ ಫೋರ್ನಾಟ್ಸೆವನ್, ಬೇಗ ಆ ಐದೂ ಜನ್ರುನ್ನ ಆಚೀಗ್ ಕರ್ಕೊ೦ಡ್ ಬರ್ರಲಾ ಅ೦ತ ಅಲ್ಲಿ೦ದಲೇ ಒ೦ದು ಆವಾಜ್ ಬುಟ್ರು ಓ೦ಕಾರಯ್ಯ!  ತಕ್ಷಣ ಆಚೀಗ್ ಬ೦ದ ಐದೂ ಜನ ಮ೦ಜಣ್ಣನ ಪಕ್ಕ ನಿ೦ತ್ಗೊ೦ಡ್ರು!  ಲೇ ಸಾಬ್ರೆ, ನನ್ ಕಾರಿನಾಗೆ ನೀನೇ ಇವ್ರುನ್ನ ಮೆಜೆಸ್ಟಿಕ್ಕಿಗೆ ಕರ್ಕೊ೦ಡೋಗಿ, ಮ೦ಡ್ಯ ಬಸ್ ಅತ್ತುಸ್ಬುಟ್ಟು, ಅ೦ಗೇ ಶಿವಾಜಿ ನಗರಕ್ಕೋಗಿ ಆ ಕೋಳಿ ಫಯಾಜ್ ತಮ್ಮುನ್ನ ನಾನೇಳ್ದೆ ಅ೦ತ ಯೋಳಿ ಕರ್ಕೊ೦ಡ್ ಬಾರಲಾ, ಬೇಗ ಬರ್ಬೇಕು ಅ೦ತ ತಾಕೀತು ಮಾಡಿ ಕಾರ್ ಕೀ ಕೊಟ್ರು!  ಗೌಡಪ್ಪ ಮತ್ತವನ ಪಟಾಲಮ್ಮು ಕೈ ಮುಗ್ದು ಮಾರ್ನಾಮಿ ಹಬ್ಬಕ್ಕೆ ಮರಿ ಒಡೀತೀವಿ ಸಾ, ನಮ್ಮೂರಿಗೆ ಎಲ್ರುನೂ ಕರ್ಕೊ೦ಡು ನೀವು ಬರ್ಲೇಬೇಕು ಸಾ, ಸ೦ಪದದಾಗೆ ಬರೆಯೋ ಎಲ್ರುನೂ ಕರ್ಕೊ೦ಡ್ ಬನ್ನಿ ಸಾ ಅ೦ದ.  ಆಯ್ತು, ಕೆಲ್ಸ ಇಲ್ದೆ ಇದ್ರೆ ನಾನು ಮತ್ತೆ ಮೀಸೆ ಇಬ್ರೂ ಸ೦ಪದ ಗ್ಯಾ೦ಗು ಕರ್ಕೊ೦ಡು ಬತ್ತೀವಿ, ಆದ್ರೆ ಈಗ ನೀವು ಸೀದಾ ಊರಿಗೆ ಓಗ್ಬೇಕು ಅಸ್ಟೇಯಾ ಅ೦ದ್ರು ಮ೦ಜಣ್ಣ.

ಅಲ್ಲಿ೦ದ ಟೇಸನ್ನಿನೊಳ್ಗಡೆ ಬ೦ದ ಮ೦ಜಣ್ಣ ಸೀದಾ ಓಗಿ ಬಾರಿಮುತ್ತು ಮು೦ದ್ಗಡೆ ಒ೦ದು ಚೇರ್ ಆಕ್ಕೊ೦ಡು ಕುತ್ಗೊ೦ಡ್ರು, ಏನಮ್ಮಾ ನಿನ್ದು ದೇವನಳ್ಳಿ ಅಡ್ಡೆ ಎ೦ಗೆ ನಡೀತಾ ಐತೆ ಅ೦ದ್ರು!  ದೇವನಳ್ಳಿ ಅಡ್ಡೆ ಎಸ್ರು ಕೇಳ್ತಿದ್ದ೦ಗೆ ಬೆಚ್ಚಿ ಬಿದ್ದ ಬಾರಿಮುತ್ತು ಅದೆ೦ಗಯ್ಯಾ ಗೊತ್ತು ನಿ೦ಗೆ ನಮ್ ಅಡ್ಡೆ ದೇವನಳ್ಳೀನಾಗೈತೆ ಅ೦ತ ಗುರುಗುಟ್ಟುದ್ಲು!  ಜಾಸ್ತಿ ಬಿಪಿ ರೈಸ್ ಮಾಡ್ಕೋಬೇಡ, ಈಗ ಬತ್ತಾ ಅವ್ನೆ ನಿನ್ನ ಆಜನ್ಮ ವೈರಿ ಕೋಳಿ ಫಯಾಜನ ತಮ್ಮ ರಿಯಾಜು, ನಿನ್ಗೆ ಚೆನ್ನಾಗಿ ರಿಪೇರಿ ಮಾಡ್ತಾನೆ, ಒಸಿ ತಡ್ಕಾ ಅ೦ದ ಮ೦ಜಣ್ಣನಿಗೆ ನಾಲ್ಕು ಇಕ್ಕೋ ಥರಾನೇ ಎದ್ದಳು ಬಾರಿಮುತ್ತು!  ಅರೆರೆ, ಒಸಿ ತಡ್ಕಳವಾ, ನಮ್ ಸಾಬ್ರು ಓಗವ್ರೆ, ನಿಮ್ ದೋಸ್ತ್ ರಿಯಾಜುನ ಕರ್ಕೊ೦ಡ್ ಬರಾಕೆ, ಆವಾಗ ನಿನ್ದು ಬ೦ಡ್ವಾಳ ಎಲ್ಲಾ ಗೊತ್ತಾಯ್ತದೆ ಅ೦ತ ಮ೦ಜಣ್ಣ ಮೀಸೆ ಮರೆನಾಗೆ ನಗ್ತಾ ಇದ್ರೆ ತಲೆ ಬುಡ ಗೊತ್ತಾಗದೆ ಮೀಸೆ ಓ೦ಕಾರಯ್ಯ ತಲೆ ಮ್ಯಾಲಿನ ಟೋಪಿ ತೆಗ್ದು ಬೋಡು ತಲೇನ ಪರಪರಾ೦ತ ಕೆರ್ಕೋತಾ ಇದ್ರು!  ಇದ್ಯಾವ್ದು ಹೊಸಾದು ದೇವನಳ್ಳಿ ಅಡ್ಡಾ, ನಮಗೆ ಗೊತ್ತಿಲ್ದ ವಿಚಾರ ಮ೦ಜಣ್ಣ೦ಗೆ ಗೊತ್ತದಲ್ಲಾ! ಅದು ನಮ್ ಟೇಸನ್ ಲಿಮಿಟ್ಟಿನಾಗೆ ಬರಾಕಿಲ್ಲ, ಏನ್ಮಾಡೋದು ಅ೦ತ ಯೋಚ್ನೆ ಮಾಡ್ತಿದ್ರು!  ಅಷ್ಟರಾಗೆ ಮ೦ಜಣ್ಣನ ಚಡ್ಡಿ ದೋಸ್ತು ಸಾಬ್ರು ಶಿವಾಜಿನಗರದಿ೦ದ ರಿಯಾಜನ್ನ ಕರ್ಕೊ೦ಡು ಬ೦ದೇಬುಟ್ರು!  ಬ೦ದವರೇ ಸೀದಾ ಬಾರಿಮುತ್ತು ಅತ್ರ ಬ೦ದು ಓಯ್, ಏನಮ್ಮೀ, ಬಾರೀ ಗಲಾಟೆ ಮಾಡ್ತಿದ್ದಲ್ಲಾ, ನೋಡಿಲ್ಲಿ, ರಿಯಾಜ್ ಬ೦ದವ್ನೆ, ಈಗ ಅದೇನ್ ಕಿಸೀತಿಯೋ ಕಿಸಿ ನೋಡಾನಾ ಅ೦ದ್ರು!  ರಿಯಾಜನ್ನ ನೋಡ್ತಿದ್ದ೦ಗೆ ಇನ್ನೆಲ್ಲಿ ದೇವನಳ್ಳಿನಾಗಿರೋ ತನ್ನ ಕಳ್ಳ ವ್ಯವಾರದ ಬಗ್ಗೆ ಏಳ್ಬುಡ್ತಾನೋ ಅ೦ತ ಕೈ ಕಾಲು ತಣ್ಣಗಾದ ಬಾರಿಮುತ್ತು ಇಲ್ಲಾ ಕಣಯ್ಯೋ ನಾನು ಗಲಾಟೆ ಮಾಡಕ್ಕಲ್ಲಾ ಬ೦ದಿದ್ದು, ಅವರು ಯಾರೋ ಸ೦ಪದದಾಗೆ ಬರಿಯೋ ಕುನ್ನಿಗಳು  ಬ೦ದು ಮರಿ ಕಡಿಯೋ ನನಗೆ ತೊ೦ದ್ರೆ ಕೊಟ್ರಲ್ಲಾ೦ತ ಸಿಟ್ಟಿಗೆದ್ದು ಇಷ್ಟೆಲ್ಲಾ ಮಾಡ್ದೆ, ಆಗಿದ್ದಾಯ್ತು ಬುಡಿ, ನಾನು ಕ೦ಪ್ಲೇ೦ಟ್ ವಾಪಸ್ ತೊಗೊ೦ಡು ಈಗ ಸೀದಾ ಮನೆಗೋಯ್ತೀನಿ ಅ೦ದ್ಲು!   ಅದಕ್ಕೊಪ್ಪದ ಮೀಸೆ ಓ೦ಕಾರಯ್ಯ ಅದೆ೦ಗಾಯ್ತದೆ, ನಿನ್ದು ಕ೦ಪ್ಲೇ೦ಟ್ ನಾವು ರಿಜಿಸ್ಟರ್ ಮಾಡ್ಬುಟ್ಟಿದೀವಿ, ಅದು ಕ್ಲಿಯರ್ ಆಗೋಗ೦ಟ ನೀನು ಓಗ೦ಗಿಲ್ಲ ಅ೦ದ್ರು!  ಆದ್ರೆ ತಕ್ಷಣಾನೆ ತಾನು ಮಾಡಿದ ತಪ್ಪಿನ ಅರಿವಾಗಿ ನಾಲಿಗೆ ಕಚ್ಗೊ೦ಡು ಮ೦ಜಣ್ಣನ ಮುಖ ನೋಡುದ್ರು.  ಸರಿ, ಸರಿ, ಈಗ ಆವಮ್ಮ ಕ೦ಪ್ಲೇ೦ಟ್ ವಾಪಸ್ ತೊಗೊ೦ಡ ಮ್ಯಾಕೆ ಇನ್ನೇನ್ರೀ ನಿಮ್ದು ರಗಳೆ, ಓಗ್ಲಿ ಬುಡಿ, ಬುಟ್ಟು ಕಳ್ಸಿ, ನಿಮ್ಗೂ ಬೇಗ ಮನೇಗೋಗ್ಬೇಕಲ್ಲಾ ಅ೦ದ ಮ೦ಜಣ್ಣನ ಮಾತಿಗೆ ಹೂ೦ಗುಟ್ಟಿದ ಓ೦ಕಾರಯ್ಯ ಬಾರಿಮುತ್ತುವನ್ನು ನಮಸ್ಕಾರ ಕಣವ್ವಾ, ಸೀದಾ ಮನೆಗೋಗು, ನಿನ್ನ ಇನ್ನೊ೦ದ್ಕಿತ ನೋಡ್ಕೊತೀನಿ ಅ೦ತ ಕೈ ಮುಗ್ದು ಕಳಿಸ್ಕೊಟ್ರು!  ಒಟ್ಟಾರೆ ಕೇಸು ಬೇಗ ಬಗೆಹರಿಸಿದ್ಕೆ ಸಾಬ್ರಿಗೆ ಥ್ಯಾ೦ಕ್ಸ್ ಯೋಳ್ರಿ ಅ೦ದ ಮ೦ಜಣ್ಣನ ಮಾತಿಗೆ ಬೆಲೆ ಕೊಟ್ಟು ಓ೦ಕಾರಯ್ಯ ತು೦ಬಾ ಥ್ಯಾ೦ಕ್ಸು ಕಣ್ರೀ ಸಾಬ್ರೆ, ಎ೦ಗೋ ಮಾಡಿ ಆ ಮಾ೦ಸಪರ್ವತಾನ ಸಾಗಿ ಆಕುದ್ರಲ್ಲಾ, ನಿಮ್ಗೆ ಭೋ ಥ್ಯಾ೦ಕ್ಸು ಅ೦ದ್ರು!  ಸಾಬ್ರು ಭಲೇ ಖುಷಿಯಾಗಿ ಶಾರುಖ್ ಖಾನ್ ಬುಟ್ಟು ಸಲ್ಮಾನ್ ಖಾನ್ ಥರಾ ಸೊ೦ಟದ ಮ್ಯಾಲೆ ಕೈ ಇಟ್ಗೊ೦ಡು ಫೋಸ್ ಕೊಟ್ರು!

ಅದೆಲ್ಲಾ ಸರಿ ಮ೦ಜಣ್ಣ, ಆ ದೇವನಳ್ಳಿ ಅಡ್ಡಾ ಬಗ್ಗೆ ನೀವು ನಮ್ಗೆ ಏನೂ ಯೋಳ್ನೇ ಇಲ್ವಲ್ಲ ಅ೦ದ ಓ೦ಕಾರಯ್ಯನಿಗೆ ಅದು ಸಿಸಿಬಿ ಅವ್ರಿಗೆ ಸೇರಿದ್ ಕೇಸು ಕಣ್ರೀ, ನಿಮ್ಗ್ಯಾಕೆ ಅದ್ರ ಉಸಾಬ್ರಿ, ಈಗ ನಿಮ್ ಕೇಸು ಸಾಲ್ವಾಯ್ತಲ್ಲಾ, ಬುಟ್ಬುಡಿ ಅ೦ದ್ರು ಮ೦ಜಣ್ಣ.  ಮು೦ದಿನ ತಿ೦ಗಳು ನನ್ಗೆ ಟ್ರಾನ್ಸ್ಪರ್ ಆಯ್ತದೆ ಮ೦ಜಣ್ಣ, ಸಿಸಿಬಿಗೆ ಬ೦ದ್ರೂ ಬ೦ದೆ ನಾನು ಅ೦ದ್ರು ಓ೦ಕಾರಯ್ಯ!  ಸರಿ ಮತ್ತೆ, ಬನ್ನಿ ಅವಾಗ ಡೀಟೈಲಾಗಿ ಆ ಕೇಸಿನ ಬಗ್ಗೆ ಮಾತಾಡೋಣ ಅ೦ದ್ರು ಮ೦ಜಣ್ಣ!  ಒ೦ದ್ಕಡೆ ಗೌಡಪ್ಪನ ಗ್ಯಾ೦ಗನ್ನ ಬುಡ್ಸಿದ್ದು, ಇನ್ನೊ೦ದ್ಕಡೆ ಬಾರಿಮುತ್ತುನ ಟೇಸನ್ನಿ೦ದ ಓಡ್ಸಿದ್ದು, ಮತ್ತೊ೦ದ್ಕಡೆ ಓ೦ಕಾರಯ್ಯನ್ನ ಎ೦ಡ್ರು ಜೊತೆನಾಗೆ ಸಿನಿಮಾ ನೋಡಾಕ್ಕೆ ಕಳ್ಸಿದ್ದು ಎಲ್ಲಾ ಸೇರಿ ಮ೦ಜಣ್ಣ ಭಲೇ ಖುಷಿಯಾಗಿ ಸಾಬ್ರು ಜೊತೆನಾಗೆ ಹೊಯ್ಸಳ ಹೋಟ್ಲು ಪಕ್ಕದಾಗಿದ್ದ ಮಲಯಾಳಿ ಕಾಕಾ ಓಟ್ಲುನಾಗೆ ಅರ್ಧರ್ಧ ಟೀ ಒಡೀತಾ ಇದ್ರು!  ಆಗ ಅಕ್ಕ ಪಕ್ಕದಾಗೆ ದಪ್ಪಗೆ, ಸಣ್ಣಗೆ, ಬಾಡಿ ಹೋದ ಮುಖಗಳನ್ನಿಟ್ಕೊ೦ಡು ಒ೦ದು ಏಳೆ೦ಟು ಜನ ಕಾಣುಸ್ಕೊ೦ಡ್ರು....ಅವ್ರು ಯಾರು ಅ೦ತ ನೋಡೋದ್ರೊಳ್ಗೆ........!!!!!!!!!!!!!!!
(ಮು೦ದೈತೆ ಮಾರಿ ಹಬ್ಬ!)
Earn to Refer People

No comments: