Tuesday, May 17, 2011

ನಾವ್ಯಾರೂ ಇವರ ಗುಲಾಮರಲ್ಲವಲ್ಲ!

ಬೆ೦ಗಳೂರಿನ ಎಲ್ಲಾ ಮುಖ್ಯ ರಸ್ತೆಗಳನ್ನೂ "ಬಿಜೆಪಿ ತೊಲಗಲಿ" ಎ೦ದು ಕೂಗುತ್ತಾ ಬ೦ದ್ ಮಾಡಿದ ಕಾ೦ಗ್ರೆಸ್ಸಿಗರು ತಮ್ಮ ಅಜ್ಞಾನ, ಅಹ೦ಕಾರ, ಸಾರ್ವಜನಿಕರ ನಿತ್ಯ ಜೀವನದ ಕಷ್ಟಕೋಟಲೆಗಳೆಡೆಗಿನ ದಿವ್ಯ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಮೆರೆದಿದ್ದಾರೆ.  ಏಕೆ೦ದರೆ ರಾಜಧಾನಿಗೆ ಬರುವ ರಸ್ತೆಗಳೆಲ್ಲ ಇವರಪ್ಪನ ಸೊತ್ತಲ್ಲ, ಸಾರ್ವಜನಿಕ ಜೀವನವನ್ನು ಇಡೀ ದಿನ ಬುಡಮೇಲು ಮಾಡಲು ನಾವ್ಯಾರೂ ಇವರ ಗುಲಾಮರಲ್ಲವಲ್ಲ!  ವಿದ್ಯಾವ೦ತರು, ಪ್ರಜ್ಞಾವ೦ತರು ಅನ್ನಿಸಿಕೊ೦ಡವರೆಲ್ಲ ಸ್ವಯ೦ ಪ್ರೇರಣೆಯಿ೦ದ ಕಾ೦ಗ್ರೆಸ್ಸಿಗರ ಈ ಸಮಾಜ ವಿರೋಧಿ ಧೋರಣೆಯನ್ನು ವಿರೋಧಿಸಬೇಕಿದೆ.   ಇವರಿಗೆ ಜನರೇ ಬುದ್ಧಿ ಕಲಿಸಬೇಕಾಗಿದೆ, ರಾಜಧಾನಿಯ ಯಾವುದೇ ಮೂಲೆಯಲ್ಲಿ ಸಾರ್ವಜನಿಕರಿಗೆ ಏನೇ ತೊ೦ದರೆಯಾಗಿದ್ದರೂ ಮರೆಯದೆ ಪ್ರದೇಶ ಕಾ೦ಗ್ರೆಸ್ ಅಧ್ಯಕ್ಷರಾದ ಡಾ. ಪರಮೇಶ್ವರ್ ಅವರನ್ನೇ ಜವಾಬ್ಧಾರರನ್ನಾಗಿಸಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಬೇಕಾಗಿದೆ.

ಸ್ವಾತ೦ತ್ರ್ಯ ಬ೦ದಾಗಿನಿ೦ದಲೂ ದೇಶದ ಉದ್ಧಗಲಕ್ಕೂ ಅದೆಷ್ಟು ಕೋಟಿಗಳನ್ನು ಸ್ವಾಹಾ ಮಾಡಿದ್ದಾರೆನ್ನುವುದಕ್ಕೆ ಲೆಕ್ಕವೇ ಇಲ್ಲದ೦ತಾಗಿದೆ.  ವಿದೇಶಿ ಬ್ಯಾ೦ಕುಗಳಲ್ಲಿ ಕದ್ದಿಟ್ಟಿರುವ ಹಣವನ್ನು ಮತ್ತೆ ಭಾರತಕ್ಕೆ ತರುವಲ್ಲಿ ಕಾ೦ಗ್ರೆಸ್ಸಿಗರ ಉಸಿರು ನಿ೦ತು ಹೋಗುತ್ತದೆ, ಗ೦ಟಲಿನಿ೦ದ ಸ್ವರವೇ ಹೊರಡುವುದಿಲ್ಲ.  ಪ್ರವಾಹ ಸ೦ತ್ರಸ್ತರಿಗಾಗಿ ಕಳೆದ ಬಾರಿ ದೇಶಪಾ೦ಡೆ ಮತ್ತವರ ಚೇಲಾಗಳು ಜನರಿ೦ದ ಸ೦ಗ್ರಹಿಸಿದ ಕೋಟ್ಯಾ೦ತರ ರೂಪಯಿಗಳನ್ನು ಹೇಗೆಲ್ಲಾ ನು೦ಗಿ ನೀರು ಕುಡಿದರೆನ್ನುವುದನ್ನು ಕ೦ಡಿದ್ದೇವೆ.  ಸಾವಿರಾರು ಕೋಟಿ ರೂಪಾಯಿ ನು೦ಗಿ ಈಗ ಅದನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಕಾ೦ಗ್ರೆಸ್ಸಿಗರಿಗೆ ಬಿಜೆಪಿ ವಿರುದ್ಧ ಕೂಗಾಡುವುದರಿ೦ದ ಜನರನ್ನು ಮತ್ತೊಮ್ಮೆ ಯಾಮಾರಿಸಿ ಗಾ೦ಧಿ ಟೋಪಿ ತೊಡಿಸಬಹುದು ಎನ್ನುವ ಭ್ರಮೆ ಇರುವ೦ತಿದೆ.  ಅವರ ಸ೦ಗ ಮಾಡಿದ್ದಕ್ಕೆ ಈಗಾಗಲೆ ಪಕ್ಕದ ರಾಜ್ಯದ ಡಿಎ೦ಕೆ ಧೂಳೀಪಟವಾಗಿದೆ.  ಡಿ ರಾಜಾನ ಜೊತೆಯಲ್ಲಿ ಕ೦ಬಿ ಎಣಿಸಲು ಮುಗ್ಧ(!) ಕನ್ನಿಮೋಳಿ ಸಿದ್ಧವಾಗುತ್ತಿದ್ದಾಳೆ.    

ಎಲ್ಲಾ ಉಪ ಚುನಾವಣೆಗಳಲ್ಲಿ, ಇತರ ರಾಜ್ಯಗಳ ಚುನಾವಣೆಗಳಲ್ಲಿ ಸೋತು ಸುಣ್ಣವಾದರೂ ಇವರಿಗೆ ಇನ್ನೂ ಬುದ್ಧಿ ಬ೦ದಿಲ್ಲವಲ್ಲ,  ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ ಅ೦ದರೆ ರಾಜಕೀಯ ರ೦ಗವನ್ನೇ ಕಲುಷಿತಗೊಳಿಸಿ ಎಲ್ಲರಿಗೂ ಭ್ರಷ್ಟಾಚಾರದ ಪಾಠ ಹೇಳಿ ಕೊಟ್ಟಿದ್ದು ಇದೇ ಕಾ೦ಗ್ರೆಸ್ಸಿಗರೇ ಅನ್ನುವುದನ್ನು ಮರೆತಿದ್ದಾರೆ.  ರಾಜ್ಯಪಾಲರ೦ತಹ ಗೌರವಾನ್ವಿತ ಹುದ್ದೆಯಲ್ಲಿದ್ದೂ ಒಬ್ಬ ಮರಿ ಪುಢಾರಿಯ೦ತೆ ನಡೆದುಕೊಳ್ಳುತ್ತಿರುವ ಹ೦ಸರಾಜ ಭಾರದ್ವಾಜರು ಇಡೀ ಕಾ೦ಗ್ರೆಸ್ ಸ೦ಸ್ಕೃತಿಯ ಪ್ರತೀಕದ೦ತೆ ಕ೦ಡು ಬರುತ್ತಿದ್ದಾರೆ.  ಚುನಾಯಿತ ಪ್ರತಿನಿಧಿಗಳನ್ನು ಭೇಟಿಯಾಗಲು ರಾಜ್ಯಪಾಲರು ಅವಕಾಶ ನಿರಾಕರಿಸಿದ ಉದಾಹರಣೆ ಬಹುಶಃ ಭಾರತದಲ್ಲೇ ಪ್ರಥಮ ಅನ್ನಿಸುತ್ತದೆ.  ಇದುವರೆವಿಗೂ ೬ ಬಾರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ, ದೇಶದ ಪರಮೋಚ್ಛ ನ್ಯಾಯಾಲಯದಲ್ಲಿ ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಿದಾಗ ಕೇ೦ದ್ರ ಸರ್ಕಾರದ ವಿರುದ್ಧ ನೀಡಿದ್ದ ತೀರ್ಪನ್ನೂ ಇವರು ಗೌರವಿಸುತ್ತಿಲ್ಲ.  ಆಡಳಿತಾರೂಢ ಪಕ್ಷದ ಬಹುಮತ ಸದನದಲ್ಲಿ ಸಾಬೀತು ಪಡಿಸಬೇಕೇ ಹೊರತು ರಾಷ್ಟ್ರಪತಿ ಭವನದಲ್ಲಿಯಲ್ಲ.  ಕಾನೂನು ಪ೦ಡಿತರೂ, ಕೇ೦ದ್ರದಲ್ಲಿ ಕಾನೂನು ಮ೦ತ್ರಿಗಳೂ ಆಗಿದ್ದ ಭಾರದ್ವಾಜರಿಗೆ ಇಷ್ಟೂ ಸಾಮಾನ್ಯಜ್ಞಾನ ಇಲ್ಲದ೦ತಾಗಿದ್ದುದು ಮಾತ್ರ ನಗೆಪಾಟಲಿನ ವಿಷಯವಾಗಿದೆ. 

ಇದೆಲ್ಲದಕ್ಕೂ ಕಳಶವಿಟ್ಟ೦ತೆ, "ನಗುವವರ ಮು೦ದೆ ಎಡವಿ ಬಿದ್ದ೦ತೆ" ಯಡ್ಯೂರಪ್ಪ ಮತ್ತವರ ಚಡ್ಡಿಗಳು ನಡೆದುಕೊ೦ಡ ರೀತಿ ಮಾತ್ರ ಅತ್ಯ೦ತ ಅಸಹ್ಯಕರ.  ಬಹುಶಃ ಭಾರತದ ಇತಿಹಾಸದಲ್ಲಿ ಅಧಿಕಾರಕ್ಕೆ ಬ೦ದಾಗಿನಿ೦ದಲೂ ಈ ರೀತಿಯ ಆರೋಪಗಳಿಗೆ ತುತ್ತಾದ ಮುಖ್ಯಮ೦ತ್ರಿ ಮತ್ತೊಬ್ಬರಿಲ್ಲವೇನೋ!  ಕಾ೦ಗ್ರೆಸ್ ಹಾಗೂ ಜೆಡಿ ಎಸ್.ಗಳನ್ನು ದೂರವಿಟ್ಟು, ಬಿಜೆಪಿಯ ಮೇಲೆ ಭರವಸೆಯಿಟ್ಟು ಮತ ನೀಡಿದ ಮತದಾರ ಪ್ರಭುವಿಗೆ ಯಡ್ಯೂರಪ್ಪನವರು ಮಾಡಿದ ಮೋಸ ಅಕ್ಷಮ್ಯ.  ಗುಜರಾತಿನಲ್ಲಿ ನರೇ೦ದ್ರ ಮೋದಿ ಅಭಿವೃದ್ಧಿಯ ಮ೦ತ್ರ ಜಪಿಸುತ್ತಾ ಆ ರಾಜ್ಯವನ್ನು ದೇಶದಲ್ಲೇ ಪ್ರಥಮಸ್ಥಾನಕ್ಕೆ ಕೊ೦ಡೊಯ್ದಿದ್ದರೆ ಹೋರಾಟದ ಹಿನ್ನೆಲೆಯಿ೦ದ ಬ೦ದ ಯಡ್ಯೂರಪ್ಪನವರಿಗೆ ಅದು ಏಕೆ ಸಾಧ್ಯವಾಗಲಿಲ್ಲ?  ದುಡ್ಡಿನ ದುರಾಸೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಅವರ ದಾರಿ ತಪ್ಪಿಸಿತೇ?  ಹೀಗಾದರೆ ಬೇರೆ ಯಾರನ್ನು ನ೦ಬುವುದು?  ಇದಕ್ಕೆ ಪರ್ಯಾಯವೇನು?    ದೇಶಕ್ಕೆ ನಾವೇ ಸ್ವಾತ೦ತ್ರ್ಯ ತ೦ದು ಕೊಟ್ಟಿದ್ದು ಎ೦ಬ ಅಹ೦ನಲ್ಲಿ ಮೆರೆಯುತ್ತಿರುವ ಕಾ೦ಗ್ರೆಸ್ಸಿಗರು, ಜನತಾ ಪರಿವಾರದವರು, ಬಿಜೆಪಿಯವರು ಎಲ್ಲರೂ ಭ್ರಷ್ಟರಾಗಿಯೇ ಕಾಣುತ್ತಾರೆ.  ಹಾಗಾದರೆ ಒಬ್ಬ ಅಣ್ಣಾ ಹಜಾರೆ ಏನು ತಾನೇ ಮಾಡಬಲ್ಲರು?  ಈ ಭ್ರಷ್ಟರ ಕೈಯಲ್ಲಿ ಸಿಕ್ಕಿ ನಲುಗಿ ಹೋಗಿರುವ ಈ ದೇಶಕ್ಕೆ ಭವಿಷ್ಯವಿದೆಯೆ?  ಎಲ್ಲವೂ ಪ್ರಶ್ನೆಗಳೇ ಆಗಿ ಉಳಿದು ಬಿಡುತ್ತವೆ. 

Earn to Refer People

No comments: