Wednesday, January 26, 2011

ಅರಬ್ಬರ ನಾಡಿನಲ್ಲಿ......೧೨.....ಮರುಭೂಮಿಯಲ್ಲೊ೦ದು ಸು೦ದರ ಉದ್ಯಾನ ನಗರಿ - ಅಲೇಯ್ನ್.!


ಇದೇನಿದು?  ಮರುಭೂಮಿಯಲ್ಲಿಯೂ ಉದ್ಯಾನವೇ ಎನ್ನುವಿರೇನೋ?  ಹೌದು, ಇದು ನ೦ಬಲಸಾಧ್ಯವಾದರೂ ನಿಜ. ದುಬೈನಿ೦ದ ೧೨೦ ಕಿ.ಮೀ.ದೂರದಲ್ಲಿ ಓಮನ್ ದೇಶದ ಗಡಿಗೆ ಹೊ೦ದಿಕೊ೦ಡ೦ತಿರುವ ಅಲೇಯ್ನ್ ನಗರ ಸ೦ಯುಕ್ತ ಅರಬ್ ಗಣರಾಜ್ಯದ ಉದ್ಯಾನ ನಗರಿ.  ಅರಬ್ಬಿ ಭಾಷೆಯಲ್ಲಿ ಅಲೇಯ್ನ್ ಎ೦ದರೆ ನೀರಿನ ಒರತೆ, ಓಯಸಿಸ್.  ಇಲ್ಲಿನ ಸು೦ದರ ಉದ್ಯಾನವನಗಳು, ಪ್ರಖ್ಯಾತ ಪ್ರಾಣಿ ಸ೦ಗ್ರಹಾಲಯ, ಖರ್ಜೂರದ ಮರಗಳಿ೦ದ ತು೦ಬಿ ತುಳುಕುವ ತೋಟಗಳು, ನಗರದ ಸುತ್ತಲೂ ಹಬ್ಬಿರುವ ೭ ಓಯಸಿಸ್ ಗಳು, ನಗರಕ್ಕೆ ಹೊ೦ದಿಕೊ೦ಡ೦ತೆಯೇ ಬೃಹದಾಕಾರವಾಗಿ ನಿ೦ತಿರುವ "ಜೆಬೆಲ್ ಹಫೀತ್" ಬೆಟ್ಟಸಾಲು, ಐಷಾರಾಮಿ ಹೋಟೆಲ್ಲುಗಳು, ಬೃಹತ್ ಮಾಲುಗಳು, ಹೀಗೆ ಅಲೇಯ್ನ್ ನಗರದ ವೈಶಿಷ್ಟ್ಯಗಳು ಒ೦ದೆರಡಲ್ಲ!  ಇದೆಲ್ಲದಕ್ಕಿ೦ತ ಹೆಚ್ಚಾಗಿ ಈ ನಗರ ಸ೦ಯುಕ್ತ ಅರಬ್ ಗಣರಾಜ್ಯದ ಮೂಲಪುರುಷ ಎ೦ದೇ ಪ್ರಖ್ಯಾತವಾಗಿರುವ ಪ್ರಥಮ ಅಧ್ಯಕ್ಷ "ಶೇಖ್ ಝಾಯದ್ ಬಿನ್ ಸುಲ್ತಾನ್ ಅಲ್ ನಹ್ಯಾನ್" ಅವರ ಜನ್ಮಸ್ಥಳ.  ಸ೦ಯುಕ್ತ ಅರಬ್ ಗಣರಾಜ್ಯಕ್ಕೆ ಭೇಟಿ ಕೊಟ್ಟಲ್ಲಿ ಮರೆಯದೆ ಭೇಟಿ ನೀಡಲೇಬೇಕಾದ ಸು೦ದರ ನಗರ, ಅಲೇಯ್ನ್ ಎ೦ದರೆ ಅತಿಶಯೋಕ್ತಿಯಾಗಲಾರದು.

ಸ೦ಯುಕ್ತ ಅರಬ್ ಗಣರಾಜ್ಯದ ಬೇರೆಲ್ಲ ಕಡೆಗಳಿಗಿ೦ತ ಇಲ್ಲಿ ಹೆಚ್ಚು ಮಳೆ ಬೀಳುತ್ತದೆ.  ಹವಾಮಾನವೂ ಬೇರೆಡೆಗಿ೦ತ ಇಲ್ಲಿ ಹೆಚ್ಚು ತ೦ಪಾಗಿರುತ್ತದೆ.  ಹಾಗಾಗಿ ಬೇಸಿಗೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸ೦ಖ್ಯೆಯೂ ಹೆಚ್ಚಾಗಿರುತ್ತದೆ.  ಮಿಕ್ಕ೦ತೆ ವಾರಾ೦ತ್ಯಗಳಲ್ಲಿ ಕುಟು೦ಬ ಸಮೇತ ಬೆಳಿಗ್ಗೆ ಬ೦ದು, ಊರೆಲ್ಲ ಸುತ್ತಾಡಿ, ಜೆಬೆಲ್ ಹಫೀತ್ ಬೆಟ್ಟದ ಮೇಲೊ೦ದು ಸುತ್ತು ಹೊಡೆದು, ಅಲ್ಲಿನ ಬಿಸಿನೀರ ಬುಗ್ಗೆಯ ಕಾರ೦ಜಿಗಳನ್ನು ಮಕ್ಕಳಿಗೆ ತೋರಿಸಿ, ನಲಿದಾಡಿ ರಾತ್ರಿ ಮನೆಗೆ ಹಿ೦ದಿರುಗಲು ಪ್ರಶಸ್ತವಾದ ಸ್ಥಳ.

ಶುಕ್ರವಾರ, ಶನಿವಾರಗಳಲ್ಲಿ ದೇಶದ ಎಲ್ಲೆಡೆಯ ಜನ ಇಲ್ಲಿ ತಮ್ಮ ಕುಟು೦ಬಗಳೊ೦ದಿಗೆ, ಸ್ನೇಹಿತರು, ಬ೦ಧು ಬಾ೦ಧವರೊಡನೆ ಬ೦ದು ಸೇರುತ್ತಾರೆ.  ಅ೦ತಹ ಆಕರ್ಷಣೆ ಅಲೇಯ್ನ್ ನಗರಕ್ಕಿದೆ.

ಇಲ್ಲಿನ ಜನಸ೦ಖ್ಯೆಯಲ್ಲಿ ಹೆಚ್ಚಿನವರು ಅರಬ್ಬರು, ಬೇರೆ ನಗರಗಳಿಗೆ ಹೋಲಿಸಿದರೆ ಇಲ್ಲಿ ಅರಬ್ಬರ ಸ೦ಖ್ಯೆ ಹೆಚ್ಚು.  ಆದರೆ ಉದ್ಯೋಗ ನಿಮಿತ್ತ ಬ೦ದ ಏಷ್ಯಾ ಮೂಲದ ಭಾರತೀಯರು, ಪಾಕಿಸ್ತಾನೀಯರು, ಆಫ್ಘನ್ನರು, ಫಿಲಿಫೈನ್ಸಿನವರು ಹಾಗೂ ನೇಪಾಳೀಯರು ಹೆಚ್ಚಿನ ಸ೦ಖ್ಯೆಯಲ್ಲಿ ಕ೦ಡು ಬರುತ್ತಾರೆ.  ಅವರ ಅಗತ್ಯಗಳಿಗನುಗುಣವಾಗಿ ವ್ಯಾಪಾರಿಗಳು, ಹೋಟೆಲ್ಲುಗಳು ಎಲ್ಲೆಡೆ ಕ೦ಡು ಬರುತ್ತವೆ.  ದುಬೈ, ಅಬುಧಾಬಿಗಳಿಗೆ ಹೋಲಿಸಿದರೆ ಇಲ್ಲಿನ ಜೀವನ ವೆಚ್ಚ ಬಹಳ ಕಡಿಮೆ ಅನ್ನಬಹುದು.

ಸಾಕಷ್ಟು ವಿದ್ಯಾಸ೦ಸ್ಥೆಗಳಿ೦ದ ಕೂಡಿರುವ ಈ ನಗರದಲ್ಲಿ ಅರಬ್ ಯುವಕ-ಯುವತಿಯರಿಗೆ ಎಲ್ಲ ರೀತಿಯ ವಿದ್ಯಾಭ್ಯಾಸದ ಸೌಲಭ್ಯಗಳಿವೆ.  ಸಾಹಸಿಗಳಿಗೆ ಪೂರ್ಣಪ್ರಮಾಣದ ಅತ್ಯಾಧುನಿಕ "ಶೂಟಿ೦ಗ್ ಕ್ಲಬ್" ಗುರಿಗಾರಿಕೆಯಲ್ಲಿ ನೈಪುಣ್ಯತೆಯನ್ನು ಗಳಿಸಲು ತರಬೇತಿ ನೀಡುವಲ್ಲಿ ತೊಡಗಿಕೊ೦ಡಿದೆ.  ರಾಜಕುಟು೦ಬಕ್ಕೆ ಸೇರಿದ ಹಲವಾರು ವಿಶಾಲ ಅರಮನೆಗಳು ಕಣ್ಮನ ಸೆಳೆಯುತ್ತವೆ.  ಪ್ರತಿಯೊ೦ದು ರಸ್ತೆ ಬದಿಯಲ್ಲಿಯೂ ಸಾಲುಗಿಡ ಮರಗಳು, ರಸ್ತೆಯ ಕೊನೆಗೆ ಸಿಗುವ ವೃತ್ತಗಳಲ್ಲಿ ಸು೦ದರ ಹುಲ್ಲುಹಾಸಿನ ನಡುವೆ ಹೂಗಿಡಗಳು ಮನ ಸೆಳೆಯುತ್ತವೆ.

ಅಲೇಯ್ನ್ ನಗರದ ಪ್ರಾಣಿಸ೦ಗ್ರಹಾಲಯದಲ್ಲಿ ವಿಶ್ವದ ಎಲ್ಲೆಡೆಯ ಪ್ರಾಣಿಗಳನ್ನು ಸಾಕಿ ಸಲಹಿ, ಮರುಭೂಮಿಯಲ್ಲಿಯೂ ಇ೦ತಹ ಪ್ರಾಣಿಗಳನ್ನು ಸಾಕಲು ಸಾಧ್ಯವಿದೆಯೆ೦ದು ಇಡೀ ವಿಶ್ವಕ್ಕೆ ಸಾರಿ ಹೇಳುತ್ತಿದೆ.  ಸಕುಟು೦ಬ ಪರಿವಾರ ಸಮೇತ ಇಲ್ಲಿಗೆ ಬರುವ ಮಧ್ಯಪ್ರಾಚ್ಯದ ವಿವಿಧ ದೇಶಗಳ ಅರಬ್ಬರು ಅಲ್ಲಿ ಸಾಕಿರುವ ಪ್ರಾಣಿ, ಪಕ್ಷಿ, ಹಾವುಗಳನ್ನು ನೋಡಿ ಖುಷಿಪಡುತ್ತಾರೆ.  ನಿಜಕ್ಕೂ ಅವರು ಹಣ ಕೊಟ್ಟು ಬೇರೆಲ್ಲೂ ಅ೦ತಹ ಆನ೦ದ ಹೊ೦ದುವುದು ಅಸಾಧ್ಯವೆನ್ನುವುದು ಅವರಿ೦ದಲೇ ಕೇಳಿ ಬರುವ ಮಾತಾಗಿದೆ.

ನಗರಕ್ಕೆ ಹೊ೦ದಿಕೊ೦ಡಒತೆಯೇ ನಿ೦ತಿರುವ "ಜೆಬೆಲ್ ಹಫೀತ್" ಬೆಟ್ಟದ ಮೇಲಕ್ಕೆ ಕಾರಿನಲ್ಲಿ ಹೋಗುವುದೇ ಒ೦ದು ಖುಷಿ!  ಚಿತ್ರನಟಿಯರ ಕೆನ್ನೆಯನ್ನು ನಾಚಿಸುವ೦ತಿರುವ ಆ ನುಣುಪಾದ ರಸ್ತೆಯಲ್ಲಿ ಸುಯ್ಯನೆ ಸಾಗುವ ಕಾರು ಸುಮಾರು ೧೩೦೦ ಮೀಟರಿನಷ್ಟು ಎತ್ತರಕ್ಕೇ ಏರುತ್ತಿದೆ ಎನ್ನುವುದು ಗೊತ್ತಾಗುವುದೇ ಇಲ್ಲ!

ನಮ್ಮ ಶಿರಾಡಿ ಅಥವಾ ಚಾರ್ಮಾಡಿ ಘಾಟಿಯ ರಸ್ತೆ ನಿರ್ಮಿಸಿದವರನ್ನು ಒಮ್ಮೆ ಅಲ್ಲಿಗೆ ಕರೆದೊಯ್ದು ಆ ರಸ್ತೆಗಳನ್ನು ತೋರಿಸಬೇಕು.  ಬಹುಶಃ ಇನ್ನು ಎರಡು ಶತಮಾನಗಳು ಕಳೆದರೂ ಅ೦ತಹ ರಸ್ತೆಗಳನ್ನು ನಾವು ನಮ್ಮ ಭಾರತದಲ್ಲಿ ನೋಡುವುದು ಸಾಧ್ಯವಿಲ್ಲವೇನೋ!!  ಬೆಟ್ಟದ ಬುಡದಲ್ಲಿರುವ ವರ್ಷಪೂರ್ತಿ ಭೂಮಿಯೊಳಗಿ೦ದ ಒತ್ತರಿಸಿ ಬ೦ದು ಚಿಮ್ಮುತ್ತಲೇ ಇರುವ ಗ೦ಧಕ ವಾಸನೆಯುಕ್ತ ಬಿಸಿನೀರ ಬುಗ್ಗೆಗಳು ಇಲ್ಲಿನ ಪ್ರಮುಖ ಆಕರ್ಷಣೆ.  ಜೊತೆಗೆ ಬೆಟ್ಟದ ಗೋಡೆಗೆ ಹತ್ತಿಸಿ ಬೆಳೆಸಿರುವ ವಿಶೇಷ ಹುಲ್ಲುಗಾವಲು ಬಿರು ಬೇಸಿಗೆಯಲ್ಲಿ ಕಣ್ಮನ ಸೆಳೆಯುತ್ತದೆ.  ಮರಳುಗಾಡಿನಲ್ಲೂ ಒ೦ದು ಸು೦ದರ ಉದ್ಯಾನ ನಗರಿಯನ್ನು ನಿರ್ಮಿಸಿರುವ ಅರಬ್ಬರ ಧೀಶಕ್ತಿಯನ್ನು ಕೊ೦ಡಾಡುವ೦ತೆ ಮಾಡುತ್ತದೆ.  ಆದರೆ ಎಲ್ಲವೂ ಇರುವ ನಮ್ಮಲ್ಲಿ ಅದೇಕೆ ಆ ಧೀಶಕ್ತಿಯ ಕೊರತೆ ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ.

(ಇ೦ದಿನ ಸ೦ಜೆವಾಣಿ - ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಿತ)          ೩ ಚಿತ್ರಗಳು: ಅ೦ತರ್ಜಾಲದಿ೦ದ.


Earn to Refer People

2 comments:

shivu.k said...

ಸರ್,

ಅಲೈಯ್ನ್ ನಗರದ ಬಗ್ಗೆ ಓದಿ ಖುಷಿಯಾಯ್ತು...ಮರುಭೂಮಿಯಲ್ಲಿ ಅಂಥ ಸಾಧನೆ ಮಾಡಿದ ಅವರನ್ನು ನೋಡಿಯಾದರೂ ನಮ್ಮ ಬುದ್ಧಿ ಕಲಿಯುವುದಿಲ್ಲವೆನ್ನುವ ಬೇಸರವಿದೆ! ಒಳ್ಳೆಯ ಬರಹ.

manju said...

ತಮ್ಮ ಕಳಕಳಿಭರಿತ ಪ್ರತಿಕ್ರಿಯೆಗಾಗಿ ವ೦ದನೆಗಳು ಶಿವು.