ಯುಗ
ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,,,,,
ಬೇವು
ಬೆಲ್ಲವ ಮೆದ್ದು,, ಯುಗಾದಿಯ ಸಂಭ್ರಮವನ್ನಾಚರಿಸುವ ಈ ಸಂದರ್ಭದಲ್ಲಿ,
ಜೀವನದಲ್ಲಿ ಎದುರಾಗುವ ಕಷ್ಟ ಸುಖಗಳನ್ನು ಸಮನಾಗಿ
ಎದುರಿಸುವ ಕಂಕಣ ತೊಡುವ, ಕಷ್ಟವೆಷ್ಟೇ
ಇದ್ದರೂ ತೋರಿಸಿಕೊಳ್ಳದೆ, ಎಲ್ಲವನ್ನೂ ನೀಲಕಂಠನಂತೆ ನುಂಗಿ ಮೇಲೆ ನಗುನಗುತ್ತಲೇ ಇರುವ,
ತಾವು ಹುಟ್ಟಿದ ನೆಲ, ಕುಡಿದ ಜಲ,
ಆಡಿ ಬೆಳೆದ ಗೆಳೆಯರು, ಬಂಧು ಬಳಗ ಎಲ್ಲವನ್ನೂ
ಬಿಟ್ಟು ಹೊರದೇಶಕ್ಕೆ ಬಂದು ಹಗಲಿರುಳೆನ್ನದೆ ದುಡಿಯುತ್ತಾ,
ತಮ್ಮವರ ಏಳಿಗೆಗೆ ಶ್ರಮಿಸುತ್ತಾ, ಸುರಿಯುವ ಬೆವರನ್ನೊರೆಸುತ್ತಾ ವಿಷಾದದ ನಗುವನ್ನು ಮುಖದ ಮೇಲೆ ತೋರಿಸುತ್ತಾ,
ಹೃದಯದೊಳಗಿನಿಂದ ನುಗ್ಗಿ ಬರುವ ನೋವಿನ ನಿಟ್ಟುಸಿರನ್ನು
ತಡೆಯಲೆತ್ನಿಸುತ್ತಾ,, ಏನೇ ಆದರೂ ನಗುನಗುತ್ತಾ
"ಹ್ಯಾಪ್ಪಿ ಯುಗಾದಿ,,,ಈದ್ ಮುಬಾರಕ್,,,ಹ್ಯಾಪ್ಪಿ
ಬಿಶು,,,,ಯುಗಾದಿಯ ಶುಭಾಶಯಗಳು" ಎಂದು ಎಲ್ಲಿಂದಲೋ ಬಂದು
ಜೊತೆಯಾಗಿರುವ ಇತರ ಭಾರತೀಯರೊಡನೆ ಹಬ್ಬದ
ಸಂಭ್ರಮ ಹಂಚಿಕೊಳ್ಳುವ, ಅರಬ್ ದೇಶಗಳಲ್ಲಿರುವ ಲಕ್ಷಾಂತರ
ಭಾರತೀಯರಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಈ ಲೇಖನದ ಅರ್ಪಣೆ. ಈ
ಬರಹ ಅವರಿಂದ, ಅವರಿಗಾಗಿ!
ಇದು
ಕೆಲವು ಸಂದರ್ಭಗಳಲ್ಲಿನ ದೂರವಾಣಿ ಸಂಭಾಷಣೆಗಳನ್ನು ಆಧರಿಸಿ, ಇಲ್ಲಿನ ನನ್ನ ಸಹೋದ್ಯೋಗಿಗಳ ಹಾಗೂ
ಇತರ ಕಾರ್ಮಿಕರ ಸ್ವಾನುಭವದ
ಆಧಾರದಿಂದ, ರೂಪಿಸಲಾಗಿದೆ. ಹೊಟ್ಟೆ
ತುಂಬಿದ ಕೆಲವರ ಹೊರತುಪಡಿಸಿ ಇದು ಬಹುತೇಕ ಭಾರತೀಯರ,
ಅಷ್ಟೇ ಏಕೆ, ಕೊಲ್ಲಿ ರಾಷ್ಟ್ರಗಳಲ್ಲಿರುವ
ಪ್ರತಿಯೊಬ್ಬ ಕಾರ್ಮಿಕನ ನಿಟ್ಟುಸಿರಿನ ಕಥೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು! ಇಷ್ಟು
ವರ್ಷಗಳ ನನ್ನ ಅನುಭವದಲ್ಲಿ ಇಲ್ಲಿರುವ
ಎಲ್ಲ ದೇಶಗಳವರದ್ದೂ ಇದೇ ಕಥೆ! ಇಲ್ಲಿ ಜಾತಿ, ಧರ್ಮ, ಭಾಷೆ, ದೇಶ, ಧರ್ಮಗಳ ಗಡಿಯಿಲ್ಲ,,,,ಎಲ್ಲರೂ ಸಮಾನ ದುಃಖಿತರೇ!
ಕೆಳಗಿನ ಸಂಭಾಷಣೆಗಳನ್ನು ಓದುತ್ತಾ ಹೋದರೆ ಯುಗಾದಿಯ ಬೇವು ಬೆಲ್ಲ ಕುಳಿತಲ್ಲೇ
ತಿಂದಂತಾಗುವುದು, ಓದಿದ ನಂತರ ಯಾರಿಗಾದರೂ
ಮನಸ್ಸಿಗೆ ನೋವಾದಲ್ಲಿ ದಯವಿಟ್ಟು ಕ್ಷಮೆಯಿರಲಿ.
ದೃಶ್ಯ
೧: ದಿನ:
ಶುಕ್ರವಾರ, ವಾರದ ರಜಾ ದಿನ, ಸ್ಥಳ:
ಯು.ಎ.ಇ. ಎಕ್ಸ್ಚೇಂಜ್
ಮುಂಭಾಗ, ಹಮದಾನ್ ರಸ್ತೆ, ಅಬುಧಾಬಿ:
ಕಾರ್ಮಿಕನೊಬ್ಬ
ತನ್ನ ತಿಂಗಳ ಪಗಾರದ ಹಣ ಕೈಗೆ ಬರುತ್ತಿದ್ದಂತೆ
ಉರಿಯುವ ಬಿಸಿಲಿನಲ್ಲಿ ಆತುರಾತುರವಾಗಿ ಬಂದು, ಸುರಿಯುತ್ತಿರುವ ಬೆವರನ್ನೊರೆಸಿಕೊಳ್ಳುತ್ತಾ ಎಕ್ಸ್ಚೇಂಜಿನೊಳಗೆ
ಕಾಲಿಟ್ಟು ಮೊದಲು ಕೇಳುವ ಪ್ರಶ್ನೆ, ಇವತ್ತಿನ ವಿನಿಮಯದ ಬೆಲೆ ಎಷ್ಟು? ಅಲ್ಲಿ ಸಿಕ್ಕ ಉತ್ತರದಿಂದ ತೃಪ್ತನಾಗದೆ ಹೊರಬಂದು ಅದಾಗಲೇ ತಮ್ಮವರಿಗೆ ಹಣ ಕಳುಹಿಸಿ ಹೊರಗಡೆ
ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದ ಇತರ ಕಾರ್ಮಿಕರೊಡನೆ ವಿಚಾರ
ವಿನಿಮಯ ಮಾಡುತ್ತಾನೆ, ಅವರ
ಮಾತಿನಂತೆ ಯಾವ ಎಕ್ಸ್ಚೇಂಜಿನಲ್ಲಿ ಹೆಚ್ಚು
ವಿನಿಮಯ ದೊರೆಯುತ್ತದೋ ಅಲ್ಲಿ ಹೋಗಿ ಸಾಲಿನಲ್ಲಿ ನಿಂತು
ತನ್ನ ಕುಟುಂಬದವರಿಗೆ ಹಣ ಕಳುಹಿಸುತ್ತಾನೆ.
ನಂತರ ಅಲ್ಲೇ ಪಾದಚಾರಿ ಮಾರ್ಗದ ಪಕ್ಕದಲ್ಲಿ ನಿಂತು ರೀಚಾರ್ಜ್
ಕಾರ್ಡುಗಳನ್ನು ಮಾರುತ್ತಿದ್ದ ಹುಡುಗನ ಬಳಿಗೆ ಹೋಗಿ ಒಂದು ಇಪ್ಪತ್ತೈದು
ದಿರ್ಹಾಂನ ಕಾರ್ಡು ಖರೀದಿಸಿ, ಅದುವರೆಗೂ ಖಾಲಿಯಾಗಿದ್ದ ತನ್ನ ಮೊಬೈಲನ್ನು
ರೀಚಾರ್ಜ್ ಮಾಡಿ ದೂರದಲ್ಲಿರುವ ತನ್ನ
ಪತ್ನಿಗೆ/ಅಪ್ಪನಿಗೆ/ಮಗನಿಗೆ/ಮಗಳಿಗೆ ಕಾಲ್ ಮಾಡುತ್ತಾನೆ.
ಖುಷಿಯಿಂದ ಎದೆಯುಬ್ಬಿಸಿ ತಾನು
ಕಳುಹಿಸಿದ ಹಣ ಹಾಗೂ ಅದಕ್ಕೆ
ಸಂಬಂಧಿಸಿದ ದಾಖಲಾತಿ ಸಂಖ್ಯೆಯನ್ನು ನೀಡಿ, ತಕ್ಷಣ ಹೋಗಿ, ಹಣ ಪಡೆದುಕೊಂಡು, ಮಿಸ್ಡ್
ಕಾಲ್ ಕೊಡಲು ಹೇಳುತ್ತಾನೆ. ಅತ್ತಲಿಂದ
ಕರೆ ಬರುವುದನ್ನೇ ಕಾತುರದಿಂದ ಕಾಯುತ್ತಿರುತ್ತಾನೆ, ಕರೆ ಬಂದ ತಕ್ಷಣ
ಅದನ್ನು ಕಟ್ ಮಾಡಿ ತಾನೇ
ಇಲ್ಲಿಂದ ಕರೆ ಮಾಡಿ ತಾನು
ಕಳುಹಿಸಿದ ಹಣದಲ್ಲಿ ಮನೆಗೆ
ಏನೆಲ್ಲಾ ತರಬೇಕು, ಏನೆಲ್ಲಾ ಮಾಡಬೇಕು ಎಂದು ಹತ್ತು ನಿಮಿಷ
ಮಾತನಾಡುತ್ತಾನೆ. ಅಷ್ಟರಲ್ಲಿ
ಅವನ ಮೊಬೈಲಿನ ಕರೆನ್ಸಿ ಖಾಲಿಯಾಗುತ್ತದೆ. ಇನ್ನೂ
ಸಾಕಷ್ಟು ಮಾತನಾಡಬೇಕಿತ್ತಾದರೂ ಸಾಧ್ಯವಿಲ್ಲದ ತನ್ನ ಅಸಹಾಯಕತೆಗೆ ಬೈದುಕೊಳ್ಳುತ್ತಾ
ಅನತಿ ದೂರದಲ್ಲಿ ತನಗಾಗಿ ಕಾದಿದ್ದ ಕಂಪನಿಯ ವಾಹನದೆಡೆಗೆ ತನ್ನ ಸಹಕಾರ್ಮಿಕರೊಡನೆ ಹೆಜ್ಜೆ
ಹಾಕುತ್ತಾನೆ. ಕೆಲವರ
ಮುಖದಲ್ಲಿ ಯುದ್ಧ ಗೆದ್ದ ಖುಷಿ ಎದ್ದು ಕಾಣುತ್ತಿದ್ದರೆ
ಮತ್ತೆ ಕೆಲವರ ಮುಖದಲ್ಲಿ ತನ್ನ
ಸಂಸಾರಕ್ಕೆ ಸಾಕಾಗುವಷ್ಟು ಹಣ ಕಳುಹಿಸಲಾಗದ ಅಸಹಾಯಕತೆ
ಎದ್ದು ಕಾಣುತ್ತಿರುತ್ತದೆ!
ದೃಶ್ಯ
೨ : ದಿನ:
ಶುಕ್ರವಾರ, ವಾರದ ರಜಾದಿನ, ಸ್ಥಳ: ಕರಾಮಾ, ದುಬೈ, ಕರಾಮಾ ಸೆಂಟರಿನ ಮುಂಭಾಗದ ಪಾರ್ಕಿಂಗ್ ಲಾಟ್. ಸಮಯ: ಸಂಜೆ ೬
ಘಂಟೆ.
ಅವಿವಾಹಿತ
ಕಾರ್ಮಿಕನೊಬ್ಬ ಸಂಜೆಯ ತಂಗಾಳಿಯಲ್ಲಿ ಅಡ್ಡಾಡುತ್ತಾ ತನ್ನ ಮೊಬೈಲ್ ಫೋನಿನಲ್ಲಿ
ತನ್ನ ಅಪ್ಪನೊಡನೆ ಸಂಭಾಷಿಸುತ್ತಿದ್ದಾನೆ. ಅವನ
ಮುಖದಲ್ಲಿ ಸಂತಸದ ಹೊನಲು ಉಕ್ಕಿ ಹರಿಯುತ್ತಿದೆ. ತಂಗಿಯ
ಮದುವೆಗಾಗಿ ಅಪ್ಪ ಕೇಳಿದ್ದಷ್ಟು ಹಣವನ್ನು
ಹೊಂದಿಸಿ ಅದೇ ತಾನೇ ಕಳುಹಿಸಿ
ಬಂದಿದ್ದ ಅವನನ್ನು ಅಪ್ಪ ಹೊಗಳುತ್ತಿದ್ದರು. ದೂರದಲ್ಲಿದ್ದರೂ
ನಿಮಿಷಗಳಲ್ಲಿ ಅವರ ಕೈಗೆ ಹಣ
ಸಿಕ್ಕಿದ್ದಲ್ಲದೆ ಯಾವುದೇ ತೊಂದರೆಯಿಲ್ಲದೆ ತಂಗಿಯ ಮದುವೆಯ ಸಿದ್ಧತೆಗಳು ನಡೆಯುತ್ತಿವೆಯಲ್ಲದೆ ಇವನು
ಕೇವಲ ಒಂದು ವಾರದ ರಜೆಯ
ಮೇಲೆ ಊರಿಗೆ ಹೋಗಿ ಬಂದರೆ ಸಾಕು,
ನಿರ್ವಿಘ್ನವಾಗಿ ತಂಗಿಯ ಮಾಡುವೆ ನಡೆದು ಹೋಗುತ್ತದೆಯೆನ್ನುವ ಖುಷಿಯಲ್ಲಿ ಅವನು ತೇಲಾಡುತ್ತಿದ್ದ.
ಅದೇ ಖುಷಿಯಲ್ಲಿ ಅವನು ರಾತ್ರಿಯ ಊಟವನ್ನೇ
ಮರೆತಿದ್ದ.
ದೃಶ್ಯ
೩ : ದಿನ:
ಶುಕ್ರವಾರ, ವಾರದ ರಜಾದಿನ. ಸ್ಥಳ: ದೆಯ್ರಾ
ಸಿಟಿ ಸೆಂಟರ್ ಮುಂಭಾಗ, ದುಬೈ, ಸಮಯ:
ಮಧ್ಯಾಹ್ನ ೩ ಘಂಟೆ.
ಅವನೊಬ್ಬ
ವಿವಾಹಿತ, ತನ್ನೂರಿನಲ್ಲಿ ತಾನು ಮಾಡುತ್ತಿದ್ದ ಉದ್ಯೋಗದಿಂದ
ಬರುತ್ತಿದ್ದ ಆದಾಯದಲ್ಲಿ ಸಂಸಾರವನ್ನು ಸಾಕಲಾಗದೆ ಕಷ್ಟಪಟ್ಟು ಹೇಗೋ ಮಾಡಿ ದುಬೈ
ಸೇರಿದ್ದ, ಪ್ರತಿ
ತಿಂಗಳು ಸಂಬಳ ಬರುತ್ತಿದ್ದಂತೆ ತನ್ನ
ಅರ್ಧಾಂಗಿಗೆ ಫೋನಾಯಿಸಿ, ಅವಳ ಹಾಗೂ ತನ್ನಿಬ್ಬರು
ಪುಟ್ಟ ಮಕ್ಕಳ ಅಗತ್ಯಗಳಿಗೆ ತಕ್ಕಂತೆ ಹಣ ಕಳುಹಿಸಿ, ಅವರ
ಖುಷಿಯಲ್ಲಿ ತನ್ನ ಜೀವನದ ಔನ್ನತ್ಯವನ್ನು
ಕಾಣುತ್ತಿದ. ಪತ್ನಿಯ
ಪ್ರೀತಿಯ ನುಡಿಗಳು ಹಾಗೂ ಮುದ್ದು ಮಕ್ಕಳ
ತೊದಲು ನುಡಿಗಳಲ್ಲಿಯೇ ಸಾರ್ಥಕ್ಯವನ್ನು
ಕಾಣುತ್ತಾ ತನ್ನೆಲ್ಲ ನೋವುಗಳನ್ನು ಮರೆಯುತ್ತಿದ್ದ.
ಮೇಲಿನ
ಮೂರು ಸನ್ನಿವೇಶಗಳು ಯುಗಾದಿಯ ಶುಭದಿನದಂದು ಸವಿಯುವ ಬೇವು ಬೆಲ್ಲದಲ್ಲಿ ಬೆಲ್ಲವನ್ನು
ಮಾತ್ರ ಪ್ರತಿನಿಧಿಸುತ್ತವೆ. ಬೇವನ್ನು
ಪ್ರತಿನಿಧಿಸುವ ಸನ್ನಿವೇಶಗಳು ಮುಂದಿವೆ ನೋಡಿ!
ದೃಶ್ಯ
೧ : ದಿನ:
ಶುಕ್ರವಾರ, ವಾರದ ರಜಾದಿನ, ಸ್ಥಳ: ಕರಾಮಾ, ದುಬೈ, ಕರಾಮಾ ಪಾರ್ಕಿನ ಒಂದು ಮಬ್ಬುಗತ್ತಲ ಮೂಲೆ,
ಸಮಯ: ಸಂಜೆ ೮ ಘಂಟೆ.
ಮಬ್ಬುಗತ್ತಲಿನಲ್ಲಿ
ಪಾರ್ಕಿನ ಮೂಲೆಯೊಂದರಲ್ಲಿ ಕುಳಿತು ಯಾರೂ ತನ್ನನ್ನು ನೋಡುತ್ತಿಲ್ಲವೆಂದು
ಖಚಿತ ಪಡಿಸಿಕೊಂಡ ನಂತರ ನಿಧಾನವಾಗಿ ಮೊಬೈಲ್
ತೆಗೆದು ಊರಿಗೆ ಫೋನ್ ಮಾಡುತ್ತಾನೆ.
ಈ ಬಾರಿ ಅವನ ಸಂಬಳದ
ಹಣವೆಲ್ಲಾ ಇಲ್ಲಿನ ಕ್ರೆಡಿಟ್ ಕಾರ್ಡುಗಳಿಗೆ ಕಟ್ಟಿ ಖಾಲಿಯಾಗಿದೆ, ಮನೆಯ ಖರ್ಚಿಗೆ ಎರಡು
ತಿಂಗಳಿನಿಂದ ಅವನು ಹಣ ಕಳುಹಿಸಿಲ್ಲ,
ಇತ್ತಲಿಂದ ಇವನು ದಯನೀಯವಾದ
ಧ್ವನಿಯಲ್ಲಿ ಮಾತನಾಡಿದರೆ ಅತ್ತಲಿಂದ ಅವನಪ್ಪನ ಬಿರುಸಾದ ಧ್ವನಿ, ಇಷ್ಟೊತ್ತಲ್ಲಿ
ಯಾಕೆ ಫೋನ್ ಮಾಡಿದ್ದು, ನೀನು
ಅಲ್ಲೇ ಎಲ್ಲಾದರೂ ಸಾಯಿ, ನಮಗೆ ಇನ್ನು ಮುಂದೆ
ಫೋನ್ ಮಾಡಲೇಬೇಡ ಎಂದು ಚೆನ್ನಾಗಿ ಝಾಡಿಸಿ ಫೋನ್
ಕಟ್ ಮಾಡುತ್ತಾನೆ ಅಪ್ಪ. ಪಾರ್ಕಿನ
ಹುಲ್ಲುಹಾಸಿನ ಮೇಲೆ ಹಾಗೆಯೇ ಅಂಗಾತ
ಮಲಗಿ ಬಿಕ್ಕುತ್ತಾನೆ ಮಗ. ಅವನ
ಕಣ್ಣಿನಿಂದ ಹರಿದ ಕಂಬನಿಗೆ ನಿಡುಸುಯ್ಯುತ್ತದೆ
ಅವನಡಿಯಲ್ಲಿ ನಲುಗಿದ ಹಸಿರುಹುಲ್ಲು! ದೂರದ
ದೇಶದಲ್ಲಿ ಬಂದು ತನ್ನವರಿಗಾಗಿ ತಾನು
ದುಡಿದ ಹಣವನ್ನೆಲ್ಲಾ ಕಳುಹಿಸಿ, ಸಿಕ್ಕ ಸಿಕ್ಕ ಬ್ಯಾಂಕುಗಳಲ್ಲಿ ಸಾಲ ತೆಗೆದು, ಕ್ರೆಡಿಟ್
ಕಾರ್ಡುಗಳನ್ನು ಬಳಸಿ, ಊರಿಗೆ ಹಣ ಕಳುಹಿಸಿ, ಪುಟ್ಟದಾದ
ಸುಂದರ ಮನೆಯೊಂದನ್ನು ಕಟ್ಟಿಸಿ, ಆ ಸಾಲ ತೀರಿಸಲು
ಇಲ್ಲಿ ಪ್ರತಿ ತಿಂಗಳೂ ಹೆಣಗುತ್ತಾ, ಒಮ್ಮೊಮ್ಮೆ ದೈನಂದಿನ ಖರ್ಚುಗಳಿಗೆ ಮನೆಯವರಿಗೆ ಹಣ ಕಳುಹಿಸಲಾಗದೆ ಪರದಾಡುತ್ತಿರುತ್ತಾನೆ. ಒಮ್ಮೆ
ಮಾತನಾಡಿಸಲೆಂದು ಅಪ್ಪನಿಗೋ, ಅಮ್ಮನಿಗೋ, ಅಕ್ಕನಿಗೋ, ಹೆಂಡತಿಗೋ ಫೋನ್ ಮಾಡಿದರೆ ಅತ್ತಲಿಂದ
ಬಾಣಗಳಂತೆ ಬರುವ ಮಾತುಗಳ ಹೊಡೆತಕ್ಕೆ
ಸಿಲುಕಿ ಒದ್ದಾಡಿ
ಹೋಗುತ್ತಾನೆ. ಅವನ
ಆತ್ಮ ಸ್ಥೈರ್ಯ ಕುಸಿಯುತ್ತದೆ, ಅದೇ ಕೊರಗಿನಲ್ಲಿ ಅವನು
ತನ್ನ ಊಟ ತಿಂಡಿ ಸರಿಯಾಗಿ
ಮಾಡದೆ, ಕೊನೆಗೊಮ್ಮೆ ಆರೋಗ್ಯ ಹದಗೆಟ್ಟು ಮೂಳೆ ಚಕ್ಕಳವಾಗಿಬಿಡುತ್ತಾನೆ. ಇಂಥಾ
ಸನ್ನಿವೇಶಕ್ಕೆ ಸಿಲುಕಿದ ಕೆಲವರು ಇಲ್ಲಿಯೇ ಕೊರಗಿ ಮಣ್ಣಾಗಿ ಹೋಗಿದ್ದೂ ಉಂಟು!
ದೃಶ್ಯ
೨ : ದಿನ:
ಶುಕ್ರವಾರ, ವಾರದ ರಜಾದಿನ, ಸ್ಥಳ: ಕರಾಮಾ, ದುಬೈ, ಕರಾಮಾ ಹೋಟೆಲ್ಲಿನ "ನಶಾ" ಬಾರಿನ ಮಬ್ಬುಗತ್ತಲ ಮೂಲೆ, ಸಮಯ: ರಾತ್ರಿ ೧೦
ಘಂಟೆ.
ಅದಾಗಲೇ
ಎರಡು ಪೆಗ್ ಏರಿಸಿದ್ದ ಯುವಕನೊಬ್ಬ
ಸ್ವಲ್ಪ ಜೋರಾಗಿಯೇ ತನ್ನ ಮೊಬೈಲಿನಲ್ಲಿ ಮಾತನಾಡುತ್ತಿದ್ದಾನೆ,
ಅಕ್ಕಪಕ್ಕದವರಿಗೆ ಕಿರಿಕಿರಿಯಾಗುತ್ತಿದ್ದರೂ ಅವನ ಮಾತುಗಳಿಂದ ಅವರೂ
ಸಹ ಸ್ವಲ್ಪ ಕನಲಿ ಹೋಗುತ್ತಿದ್ದರು.
ಅತ್ತಲಿಂದ ಅವನ ಪತ್ನಿ ಆಡುತ್ತಿದ್ದ
ಕಟು ಮಾತುಗಳಿಂದ ನೊಂದಿದ್ದ ಅವನು ತಾನು ಎಷ್ಟೆಲ್ಲಾ
ಹಣವನ್ನು ಅವಳಿಗಾಗಿ ಕಳುಹಿಸಿದ್ದ, ಆದರೆ ಅವಳು ಆ
ಹಣವನ್ನೆಲ್ಲಾ ತನ್ನ ತವರುಮನೆಗೆ ಸಾಗಿಸಿ,
ಅಪ್ಪ ಅಮ್ಮನ ಕಾಳಜಿ ನೋಡದೆ ಆದಷ್ಟು ಕಾಲ ಮನೆಯಿಂದ ಹೊರಗೆ
ಕಳೆಯುತ್ತಿರುವುದು ಹಾಗೂ ಇತ್ತೀಚೆಗೆ ಅವಳ
ಶಾಲಾ ಸ್ನೇಹಿತನೊಬ್ಬ ಅವಳೊಡನೆ ತುಂಬಾ ಸಲಿಗೆಯಿಂದಿರುವುದರ ಬಗ್ಗೆ ಕೋಪದಿಂದ ಮಾತನಾಡುತ್ತಿದ್ದ. ಮಾತು
ಬೆಳೆಯುತ್ತಾ ಹೋದಂತೆ ಕೋಪದಿಂದ ಕುದಿಯುತ್ತಾ ಒಂದರ ಮೇಲೊಂದು ಪೆಗ್
ಏರಿಸಿ ಕೊನೆಗೆ ಉನ್ಮತ್ತನಾಗಿ ತಾನು ಮಾತನಾಡುತ್ತಿದ್ದ ಮೊಬೈಲ್
ಫೋನನ್ನೇ ನೆಲಕ್ಕಪ್ಪಳಿಸಿ ಚೂರು ಚೂರು ಮಾಡಿದ್ದ! ಅದುವರೆಗೂ
ಅವನನ್ನು ಅತಿಥಿಯಂತೆ ಸತ್ಕರಿಸಿದ್ದ ಬಾರ್ ಸಿಬ್ಬಂದಿ ಬಲವಂತವಾಗಿ
ಅವನಿಂದ ಬಿಲ್ ಚುಕ್ತಾ ಮಾಡಿಸಿಕೊಂಡು
ಎಳೆದೊಯ್ದು ಆಚೆಗೆ ನೂಕಿದ್ದರು! ಅವನ
ಮನಸ್ಸಿನ ನೋವೆಲ್ಲಾ ಕರಾಮಾದ ಡಾಂಬರು ರಸ್ತೆಯಲ್ಲಿ ಕಣ್ಣೀರಾಗಿ ಹರಿದಿತ್ತು.
ಬೆಲ್ಲದ
ಬಗ್ಗೆ ಬರೆದರೂ ಸಾಕಷ್ಟಿದೆ, ಬೇವಿನ ಬಗ್ಗೆ ಬರೆದರೆ ಅದಕ್ಕಿಂತಲೂ ಹೆಚ್ಚೇ ಇದೆ! ಆದರೆ
ಒಂದಂತೂ ಸತ್ಯ, ತನ್ನವರಿಗಾಗಿ ತಾನು ದುಡಿದಿದ್ದನ್ನೆಲ್ಲಾ ಕಳುಹಿಸಿ ಬರಿಗೈಯಾಗುವ
ಯಾವನೂ ಇಲ್ಲಿ ಸುಖವಾಗಿಲ್ಲ, ನೆಮ್ಮದಿಯಾಗಿಲ್ಲ! ಪ್ರತಿ
ತಿಂಗಳೂ ಇವನು ಕಳುಹಿಸುವ ಹಣಕ್ಕೆ
ಮಾತ್ರ ಬೆಲೆ, ಯಾವಾಗ
ಇಲ್ಲಿ ಸ್ವಲ್ಪ ತೊಂದರೆಯಾಗಿ ಹಣ ಕಳುಹಿಸುವುದನ್ನು ನಿಲ್ಲಿಸುತ್ತಾನೋ
ಆಗ ಎಲ್ಲಾ ಸಂಬಂಧಗಳೂ ಇದ್ದಕ್ಕಿದ್ದಂತೆ ತುಂಡರಿಸಿ ಹೋಗುತ್ತವೆ. ಅವನು
ಮಾಡಿದ ಎಲ್ಲಾ ತ್ಯಾಗವು ನೀರಿನಲ್ಲಿ ಹೋಮ ಮಾಡಿದಂತಾಗಿ ಬಿಡುತ್ತದೆ! ಇದು
ಒಬ್ಬಿಬ್ಬರ ಕಥೆಯಲ್ಲ, ಬಹುಶಃ ಕೊಲ್ಲಿ
ರಾಷ್ಟ್ರಗಳಲ್ಲಿರುವ ಎಲ್ಲ ಕಾರ್ಮಿಕರ ಕಥೆ.
ಯುಗಾದಿಯ
ಈ ಶುಭ ದಿನಕ್ಕೆ ಒಂದು
ಸುಂದರ ಸಂದೇಶ, ನಿಮಗಾಗಿ,
ನಿಮ್ಮ ಶ್ರೇಯಸ್ಸಿಗಾಗಿ ದೇಶ ಬಿಟ್ಟು ಹೊರದೇಶಕ್ಕೆ
ಬಂದು ಹಲವಾರು ಸಂಕಷ್ಟಗಳನ್ನು ಅನುಭವಿಸಿ ದುಡಿಯುತ್ತಿರುವ ನಿಮ್ಮವರನ್ನು ಎಂದಿಗೂ ಅವಮಾನಿಸಬೇಡಿ, ಅವರು ಒಂದೆರಡು ತಿಂಗಳು
ನಿಮಗೆ ಹಣ ಕಳುಹಿಸಲಿಲ್ಲವೆನ್ನುವ ಕಾರಣಕ್ಕಾಗಿ ಕಟು
ಮಾತುಗಳಿಂದ ಅವರ ಮನಸ್ಸನ್ನು
ಘಾಸಿಗೊಳಿಸದಿರಿ. ಭಾವನಾತ್ಮಕವಾಗಿ ನೊಂದಿರುವವರಿಗೆ ಬೇಕಾದ್ದು ಸ್ವಂತದವರಿಂದ ಸಾಂತ್ವನದ ನುಡಿಗಳೇ ಹೊರತು ಹೃದಯವನ್ನು ಘಾಸಿಗೊಳಿಸುವ ಕಟು ಮಾತುಗಳಲ್ಲ,
ಈ ಯುಗಾದಿ ಎಲ್ಲರಿಗೂ ಶುಭವನ್ನು ತರಲಿ. ಹಣವೊಂದೇ
ಎಲ್ಲವೂ ಅಲ್ಲ, ಹಣಕ್ಕೆ ಮೀರಿ ನಿಲ್ಲಬೇಕಿರುವುದು ಪ್ರೀತಿ
ಮತ್ತು ವಾತ್ಸಲ್ಯ.
No comments:
Post a Comment