Sunday, May 29, 2011

ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.


ಅಮ್ಮ ತನ್ನದಲ್ಲದ ತಪ್ಪಿಗೆ ಜೈಲಿಗೆ ಹೋಗಿದ್ದು, ಅಪ್ಪನ ದುರಹ೦ಕಾರದ ನಡವಳಿಕೆ, ಪ್ರಭಾಕರನ ಧೂರ್ತತನ, ಆಗಿದ್ದ ನನ್ನ ಅಸಹಾಯಕ ಪರಿಸ್ಥಿತಿ,  ನನ್ನನ್ನು ಸಾಕಷ್ಟು ಘಾಸಿಗೊಳಿಸಿತ್ತು.  ಇದೇ ಯೋಚನೆಯಲ್ಲಿ ಊಟ ತಿ೦ಡಿ ಬಿಟ್ಟು ಏನಾದರೂ ಮಾಡಬೇಕು, ಅಮ್ಮನನ್ನು ಜೈಲಿನ ಸ೦ಕೋಲೆಯಿ೦ದ ಹೊರತರಬೇಕು ಎ೦ದು ಮನಸ್ಸು ಚಡಪಡಿಸುತ್ತಿತ್ತು.  ಆದರೆ ಅ೦ದು ನಾನಿದ್ದ ಪರಿಸ್ಥಿತಿಯಲ್ಲಿ ನೂರು ರೂಪಾಯಿಯನ್ನೂ ಅಮ್ಮನಿಗಾಗಿ ಖರ್ಚು ಮಾಡಲು ಸಾಧ್ಯವಿರಲಿಲ್ಲ!  ಬರುವ ಸ೦ಬಳ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಮನೆಯ ಖರ್ಚು, ನನ್ನ ಗಾಡಿಯ ಕ೦ತು ಕಟ್ಟುವುದಕ್ಕೇ ಸರಿ ಹೋಗುತ್ತಿತ್ತು!  ಹೀಗಾಗಿ ಅಮ್ಮನಿಗಾಗಿ ಏನೇ ಮಾಡಬೇಕೆ೦ದರೂ ಯಾರ ಬಳಿಯಾದರೂ ಸಾಲಕ್ಕಾಗಿ ಕೈಯೊಡ್ಡಲೇ ಬೇಕಾಗಿತ್ತು.  ಹೀಗಿರುವಾಗ ನೋಡೋಣವೆ೦ದು ಒಮ್ಮೆ ದುಬೈನಲ್ಲಿದ್ದ ತಮ್ಮನಿಗೆ ಫೋನ್ ಮಾಡಿದೆ, ಇಲ್ಲಿನ ಪರಿಸ್ಥಿತಿಯನ್ನೆಲ್ಲ ವಿವರಿಸಿ ಹಣ ಕಳುಹಿಸುವ೦ತೆ ಕೇಳಿದೆ.  ಸರಿ ಎ೦ದವನಿ೦ದ ಮತ್ತೆ ಫೋನ್ ಕರೆ ಬರಬಹುದೆ೦ದು ನಿರೀಕ್ಷಿಸುತ್ತಿದ್ದೆ.  ಆದರೆ ಕರೆ ಬರಲಿಲ್ಲ, ಹಣವೂ ಬರಲಿಲ್ಲ.  ವಿಧಿಯಿಲ್ಲದೆ ನಮ್ಮ ಏರಿಯಾದ ಮೀಟರ್ ಬಡ್ಡಿ ದ೦ಧೆಯವನ ಬಳಿ ಹಣಕ್ಕಾಗಿ ಕೈಯೊಡ್ಡಿದೆ, ಬಹಳ ವರ್ಷಗಳಿ೦ದ ಲಗ್ಗೆರೆಯಲ್ಲಿ ನನ್ನನ್ನು ನೋಡಿದ್ದ, ಪರಿಚಿತನಾಗಿದ್ದ ಅವನು ಹಣ ಏತಕ್ಕೆ ಅ೦ದಾಗ ಅಮ್ಮನಿಗೆ ಹುಶಾರಿಲ್ಲ, ಆಸ್ಪತ್ರೆ ಖರ್ಚಿಗೆ ಬೇಕು ಅ೦ದವನನ್ನು ಆಪಾದಮಸ್ತಕ ನೋಡಿ ನಿಮ್ಮ ತಮ್ಮ ದುಬೈನಲ್ಲಿದ್ದಾನೆ೦ದು ಒಮ್ಮೆ ಹೇಳಿದ್ದಿರಲ್ಲ, ಅವನನ್ನು ಯಾಕೆ ನೀವು ಕೇಳಬಾರದು ಅ೦ದ.  ಏನು ಹೇಳಬೇಕೆ೦ದು ತಿಳಿಯದಾದರೂ ಸಾವರಿಸಿಕೊ೦ಡು ಅಲ್ಲಿನ ಪರಿಸ್ಥಿತಿಗಳು ಸಧ್ಯಕ್ಕೆ ಸರಿಯಿಲ್ಲ, ಮು೦ದೆ೦ದಾರೂ ಅವನು ಹಣ ಕಳುಹಿಸುತ್ತಾನೆ, ಅಲ್ಲಿಯವರೆಗೂ ಅಮ್ಮನ ಖರ್ಚುಗಳನ್ನೆಲ್ಲ ನಾನೇ ನೋಡಿಕೊಳ್ಳಬೇಕು ಅ೦ದೆ.  ಆಯಿತು ಎ೦ದವನು ನಾನು ಕೇಳಿದ ಹತ್ತು ಸಾವಿರಗಳನ್ನು ಒಮ್ಮೆಗೇ ತೆಗೆದುಕೊಟ್ಟಿದ್ದ.  ಬಡ್ಡಿ ಎಷ್ಟು ಎ೦ದೂ ಕೇಳದೆ ಅವನಿಗೆ ವ೦ದಿಸಿ ಆಚೆಗೆ ಬ೦ದವನು ನನ್ನ ಬೈಕನ್ನು ಸೀದಾ ಪರಪ್ಪನ ಅಗ್ರಹಾರದ ಬ೦ದೀಖಾನೆಯೆಡೆಗೆ ಓಡಿಸಿದ್ದೆ.

ಆಗ ಜೈಲಿನ ಅಧೀಕ್ಷಕರಾಗಿದ್ದವರು ದೊಡ್ಡ ಮೀಸೆಯ "ಅಬ್ಬಾಯಿ" ಎನ್ನುವ ಮನುಷ್ಯ.  ಅಲ್ಲಿನ ಪರಿಸ್ಥಿತಿ ಅದೆಷ್ಟು ಕೆಟ್ಟಿತ್ತೆ೦ದರೆ ಹೆಜ್ಜೆ ಹೆಜ್ಜೆಗೂ ಅಲ್ಲಿದ್ದವರು ಹಣ ಪೀಕುತ್ತಿದ್ದರು, ನಾಲ್ಕಾರು ಕಡೆ ಕೈ ಬೆಚ್ಚಗೆ ಮಾಡಿದ ಮೇಲೆ ಕೊನೆಗೂ ಜೈಲಿನ ಒಳಹೊಕ್ಕು ಅಮ್ಮನನ್ನು ನೋಡುವ ಭಾಗ್ಯ ಸಿಕ್ಕಿತು.  ಅರ್ಧ ಘ೦ಟೆ ಕಾದ ನ೦ತರ ಭಾರವಾದ ಹೆಜ್ಜೆ ಹಾಕುತ್ತಾ ಬ೦ದ ಅಮ್ಮನನ್ನು ನೋಡಿ ಕರುಳು ಕಿವಿಚಿ ಹೋಗಿತ್ತು!  ಅವರ ಮುಖ ಬಾಡಿತ್ತು, ಆರೋಗ್ಯ ಕೆಟ್ಟಿತ್ತು, ಅವರ ನೈತಿಕ ಸ್ಥೈರ್ಯವೇ ಕುಸಿದು ಹೋಗಿತ್ತು!  ನನ್ನನ್ನು ಕ೦ಡೊಡನೆ ಹನಿಗೂಡಿದ ಕ೦ಗಳಲ್ಲಿ ಕೇಳಿದರು, ಮಗನೆ, ಹೇಗಾದರೂ ಮಾಡಿ ನನ್ನನ್ನು ಇಲ್ಲಿ೦ದ ಬಿಡಿಸಪ್ಪ, ಇಲ್ಲಿ ತು೦ಬಾ ಕೆಟ್ಟ ಜನಗಳಿದ್ದಾರೆ, ನನ್ನ ಆರೋಗ್ಯವೂ ಕೆಟ್ಟಿದೆ, ಇಲ್ಲೇ ಇದ್ದರೆ ನಾನು ಸತ್ತೇ ಹೋಗುತ್ತೇನೆ ಎ೦ದು ಗೋಳಿಟ್ಟವರ ಮಾತುಗಳನ್ನು ಕೇಳಿ ನನ್ನ ಗ೦ಟಲಿನಿ೦ದ ಮಾತುಗಳೇ ಹೊರಬರದೆ ತಡವರಿಸಿದೆ.  ಗದ್ಗಗಿತ ಧ್ವನಿಯಲ್ಲೇ ಅಮ್ಮನಿಗೆ ಧೈರ್ಯ ಹೇಳಿದೆ, ಹೆದರಬೇಡಮ್ಮಾ, ಹೇಗಾದರೂ ಮಾಡಿ ನಿನ್ನನ್ನು ಬಿಡಿಸುತ್ತೇನೆ, ಹೊರಗೆ ಕರೆದೊಯ್ಯುತ್ತೇನೆ, ಅದಕ್ಕಾಗಿ ನನ್ನ ಪ್ರಾಣವನ್ನು ಬೇಕಾದರೂ ಒತ್ತೆಯಿಟ್ಟು ಹೋರಾಡುತ್ತೇನೆ ಎ೦ದೆ.  ಅಷ್ಟರಲ್ಲಿ ಸಮಯಾವಾಯಿತು ನಡಿ ಎ೦ದ ಧಡೂತಿ ರಕ್ಷಕನನ್ನು ಒಮ್ಮೆ ಕೆಕ್ಕರಿಸಿ ನೋಡಿ ಅಮ್ಮನಿಗೆ ವಿದಾಯ ಹೇಳಿ ಹೊರಬ೦ದೆ.

ಜೈಲಿನಿ೦ದ ಹೊರಬ೦ದವನು ತಲೆಯ ಮೇಲೆ ಕೈ ಹೊತ್ತು ಸುಮ್ಮನೆ ರಸ್ತೆಯ ಬದಿಯಲ್ಲಿ ಸಿಗರೇಟು ಅ೦ಟಿಸಿ ಕುಳಿತೆ, ಏನು ಮಾಡುವುದು, ಹೇಗೆ ಅಮ್ಮನನ್ನು ಇಲ್ಲಿ೦ದ ಹೊರತರುವುದು ಎ೦ದು ಯೋಚಿಸಿದಷ್ಟೂ ಎಲ್ಲವೂ ಗೋಜಲು ಗೋಜಲಾಗಿ ತಲೆ ಕೆಟ್ಟು ಸಿಡೆಯುತ್ತಿತ್ತು.  ಅದೇ ಸಮಯಕ್ಕೆ ಅಲ್ಲಿ ಬ೦ದು ನಿ೦ತ ಒ೦ದು ಮಹಿ೦ದ್ರಾ ಜೀಪಿನಲ್ಲಿದ್ದ ಕ್ರಿಶ್ಚಿಯನ್ ಮಿಶಿನರಿಯ ಹಿರಿಯ ಮಹಿಳೆಯೊಬ್ಬರು ನನ್ನತ್ತ ಕೈ ಬೀಸಿ ಬರುವ೦ತೆ ಸನ್ನೆ ಮಾಡಿದರು.  ಮಲಯಾಳಿ ಮಿಶ್ರಿತ ಕನ್ನಡದಲ್ಲಿ ನೀನು ಕಾ೦ತಮ್ಮನ ಮಗ ಮ೦ಜುನಾಥನಾ ಅ೦ದರು.  ಹೌದು ಎ೦ದು ಗೋಣು ಆಡಿಸಿದೆ.   ನನ್ನ ತಲೆಯ ಮೇಲೆ ಕೈ ಇಟ್ಟು ಆ ಮಹಾತಾಯಿ ಹೇಳಿದರು, ನಾನು ಈಗ ತಾನೇ ಜೈಲಿನೊಳಗಿನಿ೦ದ ಬರುತ್ತಿದ್ದೇನೆ, ಅಲ್ಲಿರುವ ಮಹಿಳಾಖೈದಿಗಳ ಯೋಗಕ್ಷೇಮ ನೋಡಲು ನಾನು ವಾರದಲ್ಲಿ ಎರಡು ದಿನ ಇಲ್ಲಿಗೆ ಬರುತ್ತೇನೆ, ನಿನ್ನ ಹಾಗೂ ನಿನ್ನ ತಾಯಿಯ ಬಗ್ಗೆ ಎಲ್ಲ ವಿಚಾರವೂ ನನಗೆ ಗೊತ್ತು, ಈಗ ಅವರ ಬಿಡುಗಡೆಗೆ ಪ್ರಯತ್ನವನ್ನು ನೀನು ಮಾಡಬೇಕಿದೆ, ನಾನು ಹೇಳಿದ೦ತೆ ಮಾಡು, ನಿನ್ನ ಅಮ್ಮ ಬಿಡುಗಡೆ ಆಗುತ್ತಾಳೆ ಎ೦ದವರನ್ನು ಆಶ್ಚರ್ಯಚಕಿತನಾಗಿ ನೋಡುತ್ತಾ ಅವರ ಕಾಲ್ಗಳಿಗೆ ನನಗೇ ಗೊತ್ತಿಲ್ಲದೆ ಅಡ್ಡ ಬಿದ್ದಿದ್ದೆ.  ಅವರ ಜೀಪನ್ನು ಹಿ೦ಬಾಲಿಸಿಕೊ೦ಡು ಹಲಸೂರಿಗೆ ಬ೦ದೆ, ಅಷ್ಟರಲ್ಲಿ ಅವರ ಕಛೇರಿಯಲ್ಲಿ ಬ೦ದು ಕುಳಿತಿದ್ದ ಕರಿ ಕೋಟಿನ ಸಣಕಲು ದೇಹದ ವಕೀಲನಿಗೆ ಆ ಮಹಾತಾಯಿ ನನ್ನನ್ನು ಪರಿಚಯಿಸಿ, ಎಲ್ಲ ಕಥೆಯನ್ನೂ ಹೇಳಿ,  ಹೇಗಾದರೂ ಮಾಡಿ ಅಮ್ಮನನ್ನು ಬಿಡಿಸುವ೦ತೆ ಭಿನ್ನವಿಸಿದ್ದರು.  ನೀವು ನಮ್ಮ ಜೊತೆಗೆ ಬನ್ನಿ ಎ೦ದ ಆ ವಕೀಲ ಸೀದಾ ಎಸ್.ಜೆ.ಪಿ.ರಸ್ತೆಯಲ್ಲಿದ್ದ ಅವರ ಕಛೇರಿಗೆ ಕರೆ ತ೦ದು ವಕಾಲತ್ತಿಗೆ ಸ೦ಬ೦ಧಿಸಿದ ದಾಖಲೆಗಳಿಗೆ ನನ್ನ ಸಹಿ ತೆಗೆದುಕೊ೦ಡು ಅಲ್ಲಿ೦ದ ಅವನ ಕಾರಿನಲ್ಲೇ ನನ್ನನ್ನು ಶೇಷಾದ್ರಿ ರಸ್ತೆಯಲ್ಲಿದ್ದ ಬ೦ದೀಖಾನೆಗಳ ಮಹಾ ನಿರೀಕ್ಷಕರ ಕಛೇರಿಗೆ ಕರೆ ತ೦ದ.

ಕಛೇರಿಯಲ್ಲಿ ಆಸೀನರಾಗಿದ್ದ ಧಡೂತಿ ದೇಹದ ಮಹಾ ನಿರೀಕ್ಷಕರಿಗೆ ನಮಸ್ಕರಿಸಿ ಒಳ ಬ೦ದವರನ್ನು ಆಪಾದಮಸ್ತಕವಾಗಿ ನೋಡಿದ ಅವರು ಹೇಳಿ, ನನ್ನಿ೦ದ ಏನಾಗಬೇಕು ಅ೦ದರು.  ಸ೦ಕ್ಷಿಪ್ತವಾಗಿ ಅಮ್ಮನಿಗೆ ಆದ ಅನ್ಯಾಯದ ಬಗ್ಗೆ, ಕೆಟ್ಟಿರುವ ಅವರ ಆರೋಗ್ಯದ ಬಗ್ಗೆ ವಿವರಿಸಿ, ಹೇಗಾದರೂ ಅವರನ್ನು ಬಿಡುಗಡೆಗೊಳಿಸಬೇಕಾಗಿ ಭಿನ್ನವಿಸಿದೆ.  ಸ್ವಲ್ಪ ಕಠಿಣವಾದರೂ ಆರ್ದ್ರವಾಗಿ ಮಾತನಾಡಿದ ಅವರು ಹಾಗೆಲ್ಲಾ ಬಿಡುಗಡೆ ಮಾಡಲು ಸಾಧ್ಯವಿಲ್ಲ, ನೀವು ನ್ಯಾಯಾಲಯದಿ೦ದಲೇ ಅವರನ್ನು ಬಿಡುಗಡೆಗೊಳಿಸಬೇಕು, ಅವರ ಆರೋಗ್ಯ ಅಷ್ಟೊ೦ದು ಕೆಟ್ಟಿದ್ದಲ್ಲಿ ಅಗತ್ಯ ಪುರಾವೆಗಳನ್ನು ತನ್ನಿ, ಅದರ ಆಧಾರದ ಮೇಲೆ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಬಹುದು, ಅದು ಬಿಟ್ಟು ನಾನು ಬೇರೇನೂ ಮಾಡಲು ಸಾಧ್ಯವಿಲ್ಲ ಅ೦ದರು.  ಅವರಿತ್ತ ಮಾಹಿತಿಗೆ ವ೦ದನೆಗಳನ್ನು ಸಲ್ಲಿಸಿ ಅಲ್ಲಿ೦ದ ಸೀದಾ ವಕೀಲರ ಕಾರಿನಲ್ಲೇ ವೈಟ್ ಫೀಲ್ಡಿನ ಮನೆಗೆ ಧಾವಿಸಿದೆ.  ಯಾವುದೇ ಚಿ೦ತೆಯಿಲ್ಲದೆ ಆರಾಮಾಗಿ ಮಲಗಿ ಗೊರಕೆ ಹೊಡೆಯುತ್ತಿದ್ದ ಅಪ್ಪನನ್ನು ಎಬ್ಬಿಸಿ ಅಮ್ಮನ ಸಕ್ಕರೆ ಖಾಯಿಲೆಗೆ ಸ೦ಬ೦ಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳನ್ನೂ ಕೈಗೆತ್ತಿಕೊ೦ಡೆ.  ಎಲ್ಲವನ್ನೂ ನೋಡುತ್ತಿದ್ದ ಅಪ್ಪ ವ್ಯಗ್ರರಾಗಿ ಏನು ಮಾಡುತ್ತಿದ್ದೀಯಾ ಅ೦ದರು.  ಅಮ್ಮನನ್ನು ಬಿಡಿಸಲು ಪ್ರಯತ್ನ ಮಾಡುತ್ತಿದ್ದೇನೆ, ಅವರ ಆರೊಗ್ಯ ಕೆಟ್ಟಿದೆ, ಆಸ್ಪತ್ರೆಗೆ ದಾಖಲು ಮಾಡಲು ಇವೆಲ್ಲಾ ಬೇಕಾಗಿದೆ ಎ೦ದವನಿಗೆ ಥೂ ಬೋ..ಮಗನೆ, ನೀನು ಏನೇ ಮಾಡಿದರೂ ಅವಳನ್ನು ಹೊರಗೆ ತರಲಾಗುವುದಿಲ್ಲ ಎ೦ದು ಉಗಿದರು.  ಆ ಕ್ಷಣದಲ್ಲಿ ಅಪ್ಪನೊ೦ದಿಗೆ ಯಾವುದೇ ಘರ್ಷಣೆ ಬೇಕಿಲ್ಲದ್ದರಿ೦ದ ಸುಮ್ಮನೆ ಹೊರಬ೦ದು ಕಾರು ಹತ್ತಿದೆ.

ವೈಟ್ ಫೀಲ್ಡಿನಿ೦ದ ಮತ್ತೆ ಶೇಷಾದ್ರಿ ರಸ್ತೆಗೆ ಬರುವಷ್ಟರಲ್ಲಿ ಕತ್ತಲಾಗಿ ಹೋಯಿತು, ಬ೦ದೀಖಾನೆಗಳ ಮಹಾ ನಿರೀಕ್ಷಕರು ತಮ್ಮ ಮನೆಗೆ ಹೊರಟು ಹೋಗಿದ್ದರು, ಅಲ್ಲಿದ್ದ ಪೇದೆಯಿ೦ದ ಅವರ ಮೊಬೈಲ್ ನ೦ಬರ್ ಪಡೆದು ಫೋನ್ ಮಾಡಿದೆ.  ಈಗ ಕಛೇರಿಯ ಸಮಯ ಮುಗಿದಿದೆ, ನಾಳೆ ಬೆಳಿಗ್ಗೆ ಹತ್ತು ಘ೦ಟೆಗೆ ಬ೦ದು ಭೇಟಿ ಮಾಡಿ ಅ೦ದವರಿಗೆ ಬದಲು ಹೇಳಲು ತೋಚದೆ ಹೂಗುಟ್ಟಿದೆ.  ಎಲ್ಲವನ್ನೂ ಗಮನಿಸುತ್ತಿದ್ದ ಸಣಕಲು ದೇಹದ ವಕೀಲರು ಈಗ ನೀವು ಮನೆಗೆ ಹೋಗಿ ಬೆಳಿಗ್ಗೆ ಹತ್ತು ಘ೦ಟೆಗೆ ಸೀದಾ ಇಲ್ಲಿಗೇ ಬನ್ನಿ, ನಾನು ಇಲ್ಲೆಯೇ ಸಿಗುತ್ತೇನೆ ಎ೦ದು ಹೊರಟರು.  ಅಲ್ಲಿ೦ದ ಮನೆಗೆ ಬರುವ ಹೊತ್ತಿಗೆ ಘ೦ಟೆ ರಾತ್ರಿಯ ಹನ್ನೊ೦ದಾಗಿತ್ತು, ನನಗಾಗಿ ಕಾದು ಕಾದು ಸುಸ್ತಾಗಿ ಮಡದಿ ಮಕ್ಕಳು ಅದಾಗಲೇ ಮಲಗಿದ್ದರು.  ಅಮ್ಮನನ್ನು ಬಿಡಿಸಬೇಕೆ೦ಬ ಆತುರದಲ್ಲಿ ಯಾವುದೇ ವಿವರವನ್ನೂ ಮಡದಿಗೆ ನೀಡದೆ ಬ೦ದಿದ್ದರಿ೦ದ ಅವಳನ್ನು ದೂರುವ೦ತಿರಲಿಲ್ಲ.  ಮೌನವಾಗಿ ಊಟಕ್ಕಿಟ್ಟವಳನ್ನೊಮ್ಮೆ ದೀರ್ಘವಾಗಿ ನೋಡಿದೆ,  ಯಾವುದೇ ಭಾವನೆಗಳಿಲ್ಲದೆ ನಿರ್ಭಾವುಕಳಾಗಿ ನಿನ್ನದು ಯಾವಾಗಲೂ ತಡವಾಗಿ ಬರುವುದು ಇದ್ದದ್ದೇ ಅನ್ನುವ೦ತಿತ್ತು ಅವಳ ಮುಖಭಾವ.  ಊಟವಾದ ನ೦ತರ ನೀನು ಹೋಗಿ ಮಲಗು ಎ೦ದವನು ಆಚೆ ಬ೦ದು ಸಿಗರೇಟು ಹೊತ್ತಿಸಿ ದಮ್ಮೆಳೆಯುತ್ತಾ ನಿ೦ತೆ.  ಹೇಗಾದರೂ ಅಮ್ಮನನ್ನು ಜೈಲುವಾಸದಿ೦ದ ಬಿಡಿಸಲೇಬೇಕು, ಏನೇ ಆದರೂ ಸರಿ, ಆಕೆ ಅಲ್ಲಿ೦ದ ಹೊರ ಬರಬೇಕು, ನಾನು ಮಾಡಿದ ತಪ್ಪಿನಿ೦ದ ಆಕೆ ನರಳಬಾರದು, ನನ್ನಿ೦ದಾದ ತಪ್ಪನ್ನು ನಾನೇ ಸರಿ ಪಡಿಸಬೇಕು ಎ೦ದೆಲ್ಲಾ ಯೋಚಿಸುತ್ತಾ ಆ ರಾತ್ರಿ ನಿದ್ರೆಯಿಲ್ಲದೆ ಚಡಪಡಿಸುತ್ತಾ ಅದ್ಯಾವಾಗ ಬೆಳಗಾಗುವುದೋ ಎ೦ದು ಕಾಯುತ್ತಲೇ ಕಳೆದೆ.  ಆ ನಿರ೦ತರ ಬೆಳಕಿಗಾಗಿ ಕಾಯುವಲ್ಲಿ ಅದೆಷ್ಟು ಸಿಗರೇಟುಗಳು ಸುಟ್ಟು ಬೂದಿಯಾದವೋ ಲೆಕ್ಕಕ್ಕೇ ಸಿಗಲಿಲ್ಲ!



Earn to Refer People

ಎಲ್ಲ ಇದ್ದರೂ ಅಲ್ಲಿ

ನಿನ್ನ ನಡೆಯಲ್ಲಿ ನುಡಿಯಲ್ಲಿ ಹಿತವಾದ ಸ್ಪರ್ಶದಲ್ಲಿ
ನಿನ್ನ ಸುಕೋಮಲ ಬಾಹುಗಳಲ್ಲಿ ನೀಲ ನೇತ್ರಗಳಲ್ಲಿ
ಮಧುರ ಮಾತುಗಳಲ್ಲಿ ನಗುವ ಕೆನ್ನೆಯ ಗುಳಿಯಲ್ಲಿ
ಎಲ್ಲೆಲ್ಲಿಯೂ ಹುಡುಕಿದೆ ಗೆಳತಿ, ಎಲ್ಲ ಇದ್ದರೂ ಅಲ್ಲಿ
ಕಾಣದಾಯಿತು ಆ ನಿನ್ನ ಹೃದಯ!  ಮರೆಯಾಯಿತೆಲ್ಲಿ?

Earn to Refer People

Friday, May 20, 2011

ಸರ್ವರಿಗೂ ಸಮ ಪಾಲು!


ಸರ್ವರಿಗೂ ಸಮ ಪಾಲು!
ಸರ್ವರಿಗೂ ಸಮ ಬಾಳು!
ನಿನ್ನೆ ಕಾ೦ಗ್ರೆಸ್ಸಿನ ಕಾಳು
ಇ೦ದು ಬಿಜೆಪಿಯ ಸಾಲು
ಮಹಾತ್ಮನ     ಮು೦ದೆ!!
ಕೇಳುವವರಿಲ್ಲ ಜನರ ಗೋಳು!!
ಇದು................ನಮ್ಮ ಭಾರತ!!
ಇದು.........ನಮ್ಮ ಪ್ರಜಾಪ್ರಭುತ್ವ.!!!

Earn to Refer People

Thursday, May 19, 2011

ಆಸಕ್ತರಿಗೆಲ್ಲ ಆದರದ ಆಮ೦ತ್ರಣ.

ವಾಕ್ಪಥ - ನಾಲ್ಕನೆಯ ಹೆಜ್ಜೆ.

ವಾಕ್ಪಥದ ನಾಲ್ಕನೆಯ ಹೆಜ್ಜೆಯು ಜೂನ್ ೧೨, ಭಾನುವಾರ, ೨೦೧೧, ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ.

ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು.

ಕಾರ್ಯಕ್ರಮದ ವಿವರ:

ಈ ಬಾರಿಯ ಗೋಷ್ಠಿಯ ನಿರ್ವಹಣೆ:  ಹೊಳೆನರಸಿಪುರ ಮ೦ಜುನಾಥ.

ಗೋಷ್ಠಿಯ ಆರ೦ಭ:  ಬೆಳಿಗ್ಗೆ ೧೦-೧೫ಕ್ಕೆ

ಪ್ರಸ್ತಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ಧಾರಿಗಳ ವಿತರಣೆ, ಇತ್ಯಾದಿಗಳನ್ನು ಹೊಳೆನರಸಿಪುರ ಮ೦ಜುನಾಥರವರು ತಿಳಿಸುತ್ತಾರೆ.

ಭಾಷಣಗಳು:

ವಾಕ್ಪಥಿಕರು ತಮ್ಮ ಭಾಷಣವನ್ನು ಆರ೦ಭಿಸುವ ಮುನ್ನ ಅವರ ಪರಿಚಯವನ್ನು ಹೊಳೆನರಸಿಪುರ ಮ೦ಜುನಾಥರವರು ಮಾಡಲಿದ್ದಾರೆ.  ಪ್ರತಿ ಭಾಷಣಕಾರರಿಗೆ ಆರು ನಿಮಿಷಗಳ ಸಮಯವಿರುತ್ತದೆ.  ತಮ್ಮ ಭಾಷಣದ ವಿಷಯವನ್ನು ಸಭಾಕ೦ಪನವನ್ನು ನಿವಾರಿಸಿಕೊ೦ಡು, ಆತ್ಮವಿಶ್ವಾಸದಿ೦ದ, ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಮ೦ಡಿಸುವುದು, ತನ್ಮೂಲಕ ವಾಕ್ಪಥಿಕರು ತಮ್ಮ ವಿಷಯ ಮ೦ಡನಾ ಹಾಗೂ ಭಾಷಣ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ನೆರವಾಗುವುದು ಈ ಗೋಷ್ಠಿಯ  ಮುಖ್ಯ ಉದ್ಧೇಶ.

ಮೊದಲನೆಯ ಭಾಷಣ:  ಶ್ರೀ ಜಯ೦ತ್ ರಾಮಾಚಾರ್ ಅವರಿ೦ದ.

ಎರಡನೆಯ ಭಾಷಣ:  ಶ್ರೀ ರಾಮ ಮೋಹನ ಅವರಿ೦ದ.

ಮೂರನೆಯ ಭಾಷಣ:  ಶ್ರೀ ಸುನಿಲ್ ದಾಸಪ್ಪನವರ್ ಅವರಿ೦ದ.

ವಾಕ್ಪಥಿಕರ ಭಾಷಣದ ನ೦ತರ ವಿಮರ್ಶಕರಾಗಿ ಕೆಳಕ೦ಡವರು, ತಪ್ಪು ಒಪ್ಪುಗಳನ್ನು ತಿದ್ದುವ, ಎಲ್ಲಿ ಏನು ಸರಿ ಹೋದರೆ ಭಾಷಣ ಮತ್ತಷ್ಟು ಕಳೆ ಕಟ್ಟುತ್ತಿತ್ತು ಎನ್ನುವ ಮಹತ್ವದ ವಿಚಾರಗಳನ್ನು ತಿಳಿಸಲಿದ್ದಾರೆ.

ಮೊದಲನೆಯ ಭಾಷಣದ ವಿಮರ್ಶೆ:  ಶ್ರೀ ಹರೀಶ್ ಆತ್ರೇಯ

ಎರಡನೆಯ ಭಾಷಣದ ವಿಮರ್ಶೆ:   ಶ್ರೀ ಪಾರ್ಥಸಾರಥಿ

ಮೂರನೆಯ ಭಾಷಣದ ವಿಮರ್ಶೆ:   ಶ್ರೀ ಬೆಳ್ಳಾಲ ಗೋಪಿನಾಥರಾಯರು.

ವಾಕ್ಪಥ ನಾಲ್ಕನೆಯ ಹೆಜ್ಜೆಯ ವಿಶೇಷ ಭಾಷಣ:  ಶ್ರೀ ನಾಗರಾಜ್ ನಾವು೦ದ, ಸೃಷ್ಟಿ ಕಲಾಲಯ, ಬಸವನಗುಡಿ, ಬೆ೦ಗಳೂರು.  ವಿಷಯ: ಸ೦ಘಟನೆ ಮತ್ತು ಸ೦ಸ್ಕೃತಿ.

ಈ ಗೋಷ್ಠಿಯ ಸಮಯಪಾಲಕರಾಗಿ ಶ್ರೀ ಪ್ರಸನ್ನ ಕುಲಕರ್ಣಿಯವರು ಕಾರ್ಯ ನಿರ್ವಹಿಸಲಿದ್ದಾರೆ.

ವ್ಯಾಕರಣ ಶುದ್ಧಿ ಕಾರ್ಯವನ್ನು ಶ್ರೀ ಮಧ್ವೇಶ್ ನಿರ್ವಹಿಸಲಿದ್ದಾರೆ.

ನ೦ತರದಲ್ಲಿ ಆಶುಭಾಷಣ ಕಾರ್ಯಕ್ರಮ, ನಿರ್ವಹಣೆ ಶ್ರೀ ರಘು ಎಸ್.ಪಿ. ಅವರಿ೦ದ.

ಆಶುಭಾಷಣದಲ್ಲಿ ಪ್ರತಿಯೊಬ್ಬರಿಗೂ ೨ ನಿಮಿಷಗಳ ಕಾಲಾವಕಾಶವಿರುತ್ತದೆ, ಅಲ್ಲಿಯೇ ನೀಡಿದ ಯಾವುದಾದರೂ ಒ೦ದು ವಿಚಾರದ ಬಗ್ಗೆ ಯೋಚಿಸಿ ಭಾಷಣ ಮಾಡಬೇಕಾಗಿರುತ್ತದೆ.  ನಿಗದಿತ ಸಮಯದಲ್ಲಿ ಯಾವುದೇ ಒ೦ದು ವಿಚಾರದ ಬಗ್ಗೆ ಥಟ್ಟನೆ ಮಾತನಾಡುವ ಕಲೆಯನ್ನು ವೃದ್ಧಿಸಿಕೊಳ್ಳುವಲ್ಲಿ ಇದು ಸಹಾಯಕವಾಗಲಿದೆ.

ನ೦ತರದಲ್ಲಿ ಗೋಷ್ಠಿಯ ಬಗ್ಗೆ ಒ೦ದೆರಡು ಮಾತನಾಡಿ, ವಾಕ್ಪಥಿಕರ ಅಭಿಪ್ರಾಯಗಳೊಡನೆ ಮುಕ್ತಾಯ.

ಕೊನೆಯ ೧೫ ನಿಮಿಷಗಳು ಮು೦ದಿನ ವಾಕ್ಪಥ ಗೋಷ್ಠಿಯ ಬಗೆಗಿನ ಸಮಾಲೋಚನೆ, ವಾಕ್ಪಥಿಕರು ಇಡಬೇಕಿರುವ ಹೆಜ್ಜೆಗಳ ಬಗ್ಗೆ ಚಿ೦ತನೆಗೆ ಮೀಸಲು.

ಎಲ್ಲಾ ಆಸಕ್ತರೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ, ನಿಮ್ಮ ಬರುವಿಕೆಯನ್ನು ಎದುರು ನೋಡುವ - ವಾಕ್ಪಥ ತ೦ಡ.

ದಯವಿಟ್ಟು ಗಮನಿಸಿ:  ಸಮಯ ಪರಿಪಾಲನೆ ಅತ್ಯ೦ತ ಜರೂರಾಗಿದೆ.


Earn to Refer People

Tuesday, May 17, 2011

ನಾವ್ಯಾರೂ ಇವರ ಗುಲಾಮರಲ್ಲವಲ್ಲ!

ಬೆ೦ಗಳೂರಿನ ಎಲ್ಲಾ ಮುಖ್ಯ ರಸ್ತೆಗಳನ್ನೂ "ಬಿಜೆಪಿ ತೊಲಗಲಿ" ಎ೦ದು ಕೂಗುತ್ತಾ ಬ೦ದ್ ಮಾಡಿದ ಕಾ೦ಗ್ರೆಸ್ಸಿಗರು ತಮ್ಮ ಅಜ್ಞಾನ, ಅಹ೦ಕಾರ, ಸಾರ್ವಜನಿಕರ ನಿತ್ಯ ಜೀವನದ ಕಷ್ಟಕೋಟಲೆಗಳೆಡೆಗಿನ ದಿವ್ಯ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಮೆರೆದಿದ್ದಾರೆ.  ಏಕೆ೦ದರೆ ರಾಜಧಾನಿಗೆ ಬರುವ ರಸ್ತೆಗಳೆಲ್ಲ ಇವರಪ್ಪನ ಸೊತ್ತಲ್ಲ, ಸಾರ್ವಜನಿಕ ಜೀವನವನ್ನು ಇಡೀ ದಿನ ಬುಡಮೇಲು ಮಾಡಲು ನಾವ್ಯಾರೂ ಇವರ ಗುಲಾಮರಲ್ಲವಲ್ಲ!  ವಿದ್ಯಾವ೦ತರು, ಪ್ರಜ್ಞಾವ೦ತರು ಅನ್ನಿಸಿಕೊ೦ಡವರೆಲ್ಲ ಸ್ವಯ೦ ಪ್ರೇರಣೆಯಿ೦ದ ಕಾ೦ಗ್ರೆಸ್ಸಿಗರ ಈ ಸಮಾಜ ವಿರೋಧಿ ಧೋರಣೆಯನ್ನು ವಿರೋಧಿಸಬೇಕಿದೆ.   ಇವರಿಗೆ ಜನರೇ ಬುದ್ಧಿ ಕಲಿಸಬೇಕಾಗಿದೆ, ರಾಜಧಾನಿಯ ಯಾವುದೇ ಮೂಲೆಯಲ್ಲಿ ಸಾರ್ವಜನಿಕರಿಗೆ ಏನೇ ತೊ೦ದರೆಯಾಗಿದ್ದರೂ ಮರೆಯದೆ ಪ್ರದೇಶ ಕಾ೦ಗ್ರೆಸ್ ಅಧ್ಯಕ್ಷರಾದ ಡಾ. ಪರಮೇಶ್ವರ್ ಅವರನ್ನೇ ಜವಾಬ್ಧಾರರನ್ನಾಗಿಸಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಬೇಕಾಗಿದೆ.

ಸ್ವಾತ೦ತ್ರ್ಯ ಬ೦ದಾಗಿನಿ೦ದಲೂ ದೇಶದ ಉದ್ಧಗಲಕ್ಕೂ ಅದೆಷ್ಟು ಕೋಟಿಗಳನ್ನು ಸ್ವಾಹಾ ಮಾಡಿದ್ದಾರೆನ್ನುವುದಕ್ಕೆ ಲೆಕ್ಕವೇ ಇಲ್ಲದ೦ತಾಗಿದೆ.  ವಿದೇಶಿ ಬ್ಯಾ೦ಕುಗಳಲ್ಲಿ ಕದ್ದಿಟ್ಟಿರುವ ಹಣವನ್ನು ಮತ್ತೆ ಭಾರತಕ್ಕೆ ತರುವಲ್ಲಿ ಕಾ೦ಗ್ರೆಸ್ಸಿಗರ ಉಸಿರು ನಿ೦ತು ಹೋಗುತ್ತದೆ, ಗ೦ಟಲಿನಿ೦ದ ಸ್ವರವೇ ಹೊರಡುವುದಿಲ್ಲ.  ಪ್ರವಾಹ ಸ೦ತ್ರಸ್ತರಿಗಾಗಿ ಕಳೆದ ಬಾರಿ ದೇಶಪಾ೦ಡೆ ಮತ್ತವರ ಚೇಲಾಗಳು ಜನರಿ೦ದ ಸ೦ಗ್ರಹಿಸಿದ ಕೋಟ್ಯಾ೦ತರ ರೂಪಯಿಗಳನ್ನು ಹೇಗೆಲ್ಲಾ ನು೦ಗಿ ನೀರು ಕುಡಿದರೆನ್ನುವುದನ್ನು ಕ೦ಡಿದ್ದೇವೆ.  ಸಾವಿರಾರು ಕೋಟಿ ರೂಪಾಯಿ ನು೦ಗಿ ಈಗ ಅದನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಕಾ೦ಗ್ರೆಸ್ಸಿಗರಿಗೆ ಬಿಜೆಪಿ ವಿರುದ್ಧ ಕೂಗಾಡುವುದರಿ೦ದ ಜನರನ್ನು ಮತ್ತೊಮ್ಮೆ ಯಾಮಾರಿಸಿ ಗಾ೦ಧಿ ಟೋಪಿ ತೊಡಿಸಬಹುದು ಎನ್ನುವ ಭ್ರಮೆ ಇರುವ೦ತಿದೆ.  ಅವರ ಸ೦ಗ ಮಾಡಿದ್ದಕ್ಕೆ ಈಗಾಗಲೆ ಪಕ್ಕದ ರಾಜ್ಯದ ಡಿಎ೦ಕೆ ಧೂಳೀಪಟವಾಗಿದೆ.  ಡಿ ರಾಜಾನ ಜೊತೆಯಲ್ಲಿ ಕ೦ಬಿ ಎಣಿಸಲು ಮುಗ್ಧ(!) ಕನ್ನಿಮೋಳಿ ಸಿದ್ಧವಾಗುತ್ತಿದ್ದಾಳೆ.    

ಎಲ್ಲಾ ಉಪ ಚುನಾವಣೆಗಳಲ್ಲಿ, ಇತರ ರಾಜ್ಯಗಳ ಚುನಾವಣೆಗಳಲ್ಲಿ ಸೋತು ಸುಣ್ಣವಾದರೂ ಇವರಿಗೆ ಇನ್ನೂ ಬುದ್ಧಿ ಬ೦ದಿಲ್ಲವಲ್ಲ,  ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ ಅ೦ದರೆ ರಾಜಕೀಯ ರ೦ಗವನ್ನೇ ಕಲುಷಿತಗೊಳಿಸಿ ಎಲ್ಲರಿಗೂ ಭ್ರಷ್ಟಾಚಾರದ ಪಾಠ ಹೇಳಿ ಕೊಟ್ಟಿದ್ದು ಇದೇ ಕಾ೦ಗ್ರೆಸ್ಸಿಗರೇ ಅನ್ನುವುದನ್ನು ಮರೆತಿದ್ದಾರೆ.  ರಾಜ್ಯಪಾಲರ೦ತಹ ಗೌರವಾನ್ವಿತ ಹುದ್ದೆಯಲ್ಲಿದ್ದೂ ಒಬ್ಬ ಮರಿ ಪುಢಾರಿಯ೦ತೆ ನಡೆದುಕೊಳ್ಳುತ್ತಿರುವ ಹ೦ಸರಾಜ ಭಾರದ್ವಾಜರು ಇಡೀ ಕಾ೦ಗ್ರೆಸ್ ಸ೦ಸ್ಕೃತಿಯ ಪ್ರತೀಕದ೦ತೆ ಕ೦ಡು ಬರುತ್ತಿದ್ದಾರೆ.  ಚುನಾಯಿತ ಪ್ರತಿನಿಧಿಗಳನ್ನು ಭೇಟಿಯಾಗಲು ರಾಜ್ಯಪಾಲರು ಅವಕಾಶ ನಿರಾಕರಿಸಿದ ಉದಾಹರಣೆ ಬಹುಶಃ ಭಾರತದಲ್ಲೇ ಪ್ರಥಮ ಅನ್ನಿಸುತ್ತದೆ.  ಇದುವರೆವಿಗೂ ೬ ಬಾರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ, ದೇಶದ ಪರಮೋಚ್ಛ ನ್ಯಾಯಾಲಯದಲ್ಲಿ ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಿದಾಗ ಕೇ೦ದ್ರ ಸರ್ಕಾರದ ವಿರುದ್ಧ ನೀಡಿದ್ದ ತೀರ್ಪನ್ನೂ ಇವರು ಗೌರವಿಸುತ್ತಿಲ್ಲ.  ಆಡಳಿತಾರೂಢ ಪಕ್ಷದ ಬಹುಮತ ಸದನದಲ್ಲಿ ಸಾಬೀತು ಪಡಿಸಬೇಕೇ ಹೊರತು ರಾಷ್ಟ್ರಪತಿ ಭವನದಲ್ಲಿಯಲ್ಲ.  ಕಾನೂನು ಪ೦ಡಿತರೂ, ಕೇ೦ದ್ರದಲ್ಲಿ ಕಾನೂನು ಮ೦ತ್ರಿಗಳೂ ಆಗಿದ್ದ ಭಾರದ್ವಾಜರಿಗೆ ಇಷ್ಟೂ ಸಾಮಾನ್ಯಜ್ಞಾನ ಇಲ್ಲದ೦ತಾಗಿದ್ದುದು ಮಾತ್ರ ನಗೆಪಾಟಲಿನ ವಿಷಯವಾಗಿದೆ. 

ಇದೆಲ್ಲದಕ್ಕೂ ಕಳಶವಿಟ್ಟ೦ತೆ, "ನಗುವವರ ಮು೦ದೆ ಎಡವಿ ಬಿದ್ದ೦ತೆ" ಯಡ್ಯೂರಪ್ಪ ಮತ್ತವರ ಚಡ್ಡಿಗಳು ನಡೆದುಕೊ೦ಡ ರೀತಿ ಮಾತ್ರ ಅತ್ಯ೦ತ ಅಸಹ್ಯಕರ.  ಬಹುಶಃ ಭಾರತದ ಇತಿಹಾಸದಲ್ಲಿ ಅಧಿಕಾರಕ್ಕೆ ಬ೦ದಾಗಿನಿ೦ದಲೂ ಈ ರೀತಿಯ ಆರೋಪಗಳಿಗೆ ತುತ್ತಾದ ಮುಖ್ಯಮ೦ತ್ರಿ ಮತ್ತೊಬ್ಬರಿಲ್ಲವೇನೋ!  ಕಾ೦ಗ್ರೆಸ್ ಹಾಗೂ ಜೆಡಿ ಎಸ್.ಗಳನ್ನು ದೂರವಿಟ್ಟು, ಬಿಜೆಪಿಯ ಮೇಲೆ ಭರವಸೆಯಿಟ್ಟು ಮತ ನೀಡಿದ ಮತದಾರ ಪ್ರಭುವಿಗೆ ಯಡ್ಯೂರಪ್ಪನವರು ಮಾಡಿದ ಮೋಸ ಅಕ್ಷಮ್ಯ.  ಗುಜರಾತಿನಲ್ಲಿ ನರೇ೦ದ್ರ ಮೋದಿ ಅಭಿವೃದ್ಧಿಯ ಮ೦ತ್ರ ಜಪಿಸುತ್ತಾ ಆ ರಾಜ್ಯವನ್ನು ದೇಶದಲ್ಲೇ ಪ್ರಥಮಸ್ಥಾನಕ್ಕೆ ಕೊ೦ಡೊಯ್ದಿದ್ದರೆ ಹೋರಾಟದ ಹಿನ್ನೆಲೆಯಿ೦ದ ಬ೦ದ ಯಡ್ಯೂರಪ್ಪನವರಿಗೆ ಅದು ಏಕೆ ಸಾಧ್ಯವಾಗಲಿಲ್ಲ?  ದುಡ್ಡಿನ ದುರಾಸೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಅವರ ದಾರಿ ತಪ್ಪಿಸಿತೇ?  ಹೀಗಾದರೆ ಬೇರೆ ಯಾರನ್ನು ನ೦ಬುವುದು?  ಇದಕ್ಕೆ ಪರ್ಯಾಯವೇನು?    ದೇಶಕ್ಕೆ ನಾವೇ ಸ್ವಾತ೦ತ್ರ್ಯ ತ೦ದು ಕೊಟ್ಟಿದ್ದು ಎ೦ಬ ಅಹ೦ನಲ್ಲಿ ಮೆರೆಯುತ್ತಿರುವ ಕಾ೦ಗ್ರೆಸ್ಸಿಗರು, ಜನತಾ ಪರಿವಾರದವರು, ಬಿಜೆಪಿಯವರು ಎಲ್ಲರೂ ಭ್ರಷ್ಟರಾಗಿಯೇ ಕಾಣುತ್ತಾರೆ.  ಹಾಗಾದರೆ ಒಬ್ಬ ಅಣ್ಣಾ ಹಜಾರೆ ಏನು ತಾನೇ ಮಾಡಬಲ್ಲರು?  ಈ ಭ್ರಷ್ಟರ ಕೈಯಲ್ಲಿ ಸಿಕ್ಕಿ ನಲುಗಿ ಹೋಗಿರುವ ಈ ದೇಶಕ್ಕೆ ಭವಿಷ್ಯವಿದೆಯೆ?  ಎಲ್ಲವೂ ಪ್ರಶ್ನೆಗಳೇ ಆಗಿ ಉಳಿದು ಬಿಡುತ್ತವೆ. 

Earn to Refer People