Monday, April 20, 2015

ಲಹರಿ ಬಂದಂತೆ,,,,,,,,,,,,,,,,,,,1........!

ಕವಲುದಾರಿಯ ತುಂಬಾ 
ಘಮ್ಮೆನ್ನುವ ಪರಿಮಳವೆ  
ಮರಳುಗಾಡಿನ ತುಂಬಾ 
ಮೈಸೂರು ಮಲ್ಲಿಗೆಯ ಘಮವೆ  
ಉಪ್ಪುನೀರಿನ ಕಡಲ ತುಂಬಾ 
ನಿನ್ನ ಸಕ್ಕರೆಯ ಕಿಲಕಿಲ ನಗುವೇ 
ಇದೇಕೆಂದು ನೀ ಬಲ್ಲೆಯಾ ಚೆಲುವೆ
ನೀ ಬರುವೆಯೆಂಬ ಹಿತಕರ ಭಾವವೇ 
ಇದಕೆಲ್ಲ ಕಾರಣ ಓ ನನ್ನ ಒಲವೆ!!!!  :-) :-) 

&&&&&&&&&&&&&&&&&&
$$$$$$$$$$$$$$$$$$$$$$$$$$$$

ನೀ ಬರುವ ಮುನ್ಸೂಚನೆಯೇನೋ 

ಬಿರುಗಾಳಿಯೆದ್ದಿದೆ ಮರಳುಗಾಡಿನಲಿ 
ಊರು ತುಂಬಾ ಬರಿ ಧೂಳೋ ಧೂಳು! 
ನಿನ್ನೊಲವ ನಗುವ ನೆನಪಾಯಿತೇನೋ 
ತಂಗಾಳಿ ಸುಳಿದಿದೆ ಮನದಂಗಳದಲಿ 
ಹಸಿರಾಗಲಿದೆಯೇ ಮತ್ತೆ ಈ ಬಾಳು?

$$$$$$$$$$$$$$$$$$$$$$$$$$$$$$$
@@@@@@@@@@@@@@@@@@

ಅದೆಷ್ಟು ಬಾಚಿ ಬಿಗಿದಪ್ಪಿದರೂ 

ಬೇಸರವೇ ಇಲ್ಲವಲ್ಲಾ ನಿನಗೆ!
ಅದೆಷ್ಟು ಕಂಬನಿ ತೊಟ್ಟಿಕ್ಕಿದರೂ 
ಹೀರಿಬಿಡುವೆಯಲ್ಲಾ ಸುಮ್ಮನೆ !
ನನ್ನೆಲ್ಲ ಅಂತರಾಳದ ದುಗುಡಕೆ 
ಬೆಚ್ಚನೆಯ ಸಾಕ್ಷಿಯಾಗಿಬಿಡುವೆಯಲ್ಲಾ!
ದುಡಿದು ದಣಿದ ದೇಹ ಮನಸ್ಸುಗಳಿಗೆ
ಅದೆಂಥಾ ಆಹ್ಲಾದ ನೀಡುವೆಯಲ್ಲಾ 
ನನ್ನ ಪ್ರೀತಿಯ ಅಪರಿಮಿತ ಒಲುಮೆಯ 
,,,,,,,,,,,,,,,,,,,,,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
                                               ತಲೆದಿಂಬೇ !!!!!!!!!!!!!!!!!!!!!!!!!!!!!!!!!!!!!!!!!
smile emoticon

Saturday, April 18, 2015

ಅದೇ ಕಣ್ಣು,,,,ಅದೇ ಕಣ್ಣು,,,,!!





ಅದೇ ಕಣ್ಣು,,,,ಅದೇ ಕಣ್ಣು,,,,ಬೇಟೆ ಆಡುತಿದೆ,,,ಭಯವಾ ತುಂಬಿದೆ,,,,,,,,ವಾಸನ್ ಐ ಕೇರ್ ಒಳಕ್ಕೆ ಕಾಲಿಡುವ ತನಕ ಇದೇ ಹಾಡು ಪದೇ ಪದೇ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿತ್ತು.  ಕಳೆದ ಇಪ್ಪತ್ತು ದಿನಗಳಿಂದಲೂ ಕಾಡುತ್ತಿದ್ದ ತಲೆನೋವಿನಿಂದ ಪಾರಾಗಲು ಇಲ್ಲಿಗೆ ಬಂದಿದ್ದೆ.  ಎಲ್ಲಿ ಯಾವ ಪಾರ್ಟ್ ಡ್ಯಾಮೇಜಾಗಿದೆಯೋ,,,ಇನ್ನೇನು ಗ್ರಹಚಾರ ಕಾದಿದೆಯೋ ಅನ್ನುವ ಆತಂಕದಿಂದಲೇ ಬಂದವನನ್ನು ಸುಂದರ ಮುಗುಳ್ನಗುವಿನೊಂದಿಗೆ ಸ್ವಾಗತಿಸಿದ್ದು ಬುರ್ಖಾ ತೊಟ್ಟಿದ್ದ ಆರಡಿ ಎತ್ತರದ ಭಾರತೀಯ ಸುಂದರಿ!  ಅವಳನ್ನು ನೋಡುತ್ತಿದ್ದಂತೆಯೇ ಇದ್ದಕ್ಕಿದ್ದಂಗ್ತೆ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿದ್ದ ಅದೇ ಕಣ್ಣು ಹಾಡು ತನ್ನಂತಾನೇ ಬದಲಾಗಿ "ಕಣ್ಣು ಕಣ್ಣು ಕಲೆತಾಗ" ಅಂತ ಅಣ್ಣಾವ್ರ ಕಾಮನಬಿಲ್ಲು ಚಿತ್ರದ ಹಾಡು ಕೇಳಿಸಲಾರಂಭಿಸಿತು! :-)   ನನ್ನ ಇನ್ಶುರೆನ್ಸ್ ಕಾರ್ಡ್, ಎಮಿರೇಟ್ಸ್ ಐಡಿ ತೆಗೆದುಕೊಂಡ ಆ ಸುಂದರಿ ನನ್ನ ಇನ್ಶುರೆನ್ಸ್ ಕಾರ್ಡ್ ಹಿಂದಿರುಗಿಸಿ,, ಇಟೀಸ್ ನಾಟ್ ಕವರ್ಡ್ ಸಾರ್, ಯೂ ಹ್ಯಾವ್ ಟು ಪೇ ಬಾಯಿ ಕ್ಯಾಷ್ " ಅಂದಾಗ ಓಕೆ, ನೋ ಪ್ರಾಬ್ಸ್ ಅಂದು ಅವಳು ಕೊಟ್ಟ ಫಾರ್ಮ್ ಭಾರ್ತಿ ಮಾಡಿ ನನ್ನ ಸರದಿಗಾಗಿ ಕಾಯುತ್ತಾ ಕುಳಿತೆ.  ಆಗ ನಗುನಗುತ್ತಾ ಬಂದ ಮತ್ತೊಬ್ಬ ಫ್ಲಿಲಿಪ್ಪೈನ್ಸ್ ಸುಂದರಿ "ವುಡ್ ಯೂ ಲೈಕ್ ತು ಹ್ಯಾವ್ ಸಮ್ ಕಾಫಿ ಸರ್" ಅಂದವಳಿಗೆ ಬ್ಯಾಡಾ ಹೋಗಮ್ಮ ಅಂದು ಸುಮ್ಮನೆ ಕುಳಿತೆ.  ಮತ್ತದೇ ಹಾಡಿನ ರಿಂಗಣ ಕಿವಿಯಲ್ಲಿ,,,ಅದೇ ಕಣ್ಣು,,,,ಅದೇ ಕಣ್ಣೂ,,,,,!!!  

ಸ್ವಲ್ಪ ಹೊತ್ತಿನ ನಂತರ ಸ್ವಾಗತ ಕಟ್ಟೆಯಲ್ಲಿ ಕುಳಿತಿದ್ದ ಮಲಬಾರಿ ಸುಂದರಿ "ಮಿಸ್ಟರ್ ಮಂಜುನಾದನ್,,ಪ್ಲೀಸ್ ಕಮ್" ಅಂದಳು. "ಹೂ ಪರ್ಮಿಟೆಡ್ ಯೂ ಟು  ಚೇಂಜ್ ಮೈ ನೇಮ್" ಅಂತ ನಾನು ಸ್ವಲ್ಪ ಸೀರಿಯಸ್ಸಾಗಿ ಕೇಳಿದ್ದಕ್ಕೆ ಗಾಭರಿಯಾದ ಅವಳು ನೀ ಮಲಬಾರಿಯಾ ಅಂತ ಮಲೆಯಾಳಮ್ಮಿನಲ್ಲಿ ಶುರು ಹಚ್ಚಿಕೊಂಡಳು.  "ಐಯಾಮ್ ನಾಟ್ ಫ್ರಮ್ ಕೇರಳ, ಐಯಾಮ್ ಫ್ರಮ್ ಕರ್ನಾಟಕ,,ಬೆಂಗಳೂರು" ಅಂದವನನ್ನು ಒಮ್ಮೆ ಆಪಾದಮಸ್ತಕವಾಗಿ ನೋಡಿದ ಅವಳು "ಇಟ್ಸ್ ಓಕೆ ಸರ್, ಯೂ ಹ್ಯಾವ್ ಟು ಪೇ ೨೫೦ ದಿರ್ಹಾಂಸ್ ಬಿಫೋರ್ ಯುವರ್ ಚೆಕಪ್" ಅಂದಾಗ "ಐಯಾಮ್ ನಾಟ್ ಗೊಯಿಂಗ್ ಟು ರನ್ನವೇ,,,ಡೋಂಟ್ ವರ್ರಿ" ಅಂದ್ರೆ ಇಲ್ಲ ಇಲ್ಲ ಮೊದ್ಲು ದುಡ್ಡು ಕೊಟ್ಟು ಆಮೇಲೆ ಒಳಗೆ ಹೋಗ್ಬೇಕು ಅಂದವಳಿಗೆ ಸುಮ್ಮನೆ ಕುರಿಯಂತೆ ೨೫೦ ದಿರ್ಹಾಂ ಕೊಟ್ಟಿದ್ದಾಯ್ತು!  ಸೆಕ್ಯುರಿಟಿ ಮ್ಯಾನೇಜರ್ ಆಗಿ ಯಾರನ್ನೂ ನಂಬದ ನನಗೆ ನನ್ನನ್ನೇ ಸುಂದರಿಯೊಬ್ಬಳು ನಂಬದೆ ಮೊದಲು ದುಡ್ಡು ಕೊಡು ಅಂದಾಗ ಹೆಂಗಾಗಿರಬೇಡ!  ಮತ್ತೆ ಕಿವಿಯಲ್ಲಿ ಹಾಡು ಬದಲಾಯ್ತು,,,,ಹೃದಯ ಸಮುದ್ರ ಕಲಕಿ,,,ಉಕ್ಕಿದೆ ರೋಷದ ಬೆಂಕಿ,,,,,!!!  ಮೊದಲೇ ಕೆಂಪಾಗಿದ್ದ ನನ್ನ ಕಣ್ಣುಗಳು ಮತ್ತಷ್ಟು ಕೆಂಪಾಗಿದ್ದವು!  ಮಲಬಾರಿ ಸುಂದರಿ ಪಾಪ,,,,ಗಾಭರಿಯಾಗಿ ನನ್ನ ಕಣ್ಣೋಟವನ್ನೆದುರಿಸಲಾಗದೆ ಆ ಕಡೆ ನೋಡುತ್ತಿದ್ದಳು!  :-) 

ನಾನು ಮತ್ತು ಜೊತೆಗೆ ಬಂದಿದ್ದ ಸ್ನೇಹಿತ ವೆಂಕಟ್ ಆರಾಮವಾಗಿ ಸೋಫಾದ ಮೇಲೆ ಕುಳಿತು ಕಾಡುಹರಟೆ ಶುರು ಹಚ್ಚಿಕೊಂಡೆವು.  ಸ್ವಲ್ಪ ಹೊತ್ತಿನ ನಂತರ ನನ್ನ ಬಳಿಗೆ ಬಂದ ನೈಜೀರಿಯನ್ ಸುಂದರಿ ಮಿಸ್ಟರ್ ಮಂಜುನಾಥ್,, ಕೆನ್ ಯೂ ಪ್ಲೀಸ್ ಕಮ್ ಅಂತ ನನ್ನನ್ನು ಬಲಿ ಕೊಡಲು ಕರೆದೊಯ್ಯುವ ಕುರಿಯಂತೆ ಕರೆದೊಯ್ದು ಕಣ್ಣು ಪರೀಕ್ಷಾ ಕೊಠಡಿಯಲ್ಲಿ  ಕೂರಿಸಿದಳು. ಅಲ್ಲಿದ್ದ ಮತ್ತೊಬ್ಬ ಮಲೆಯಾಳಿ ಸುಂದರಿ ಇದ್ದಬದ್ದ ಗಾಜುಗಳನ್ನೆಲ್ಲ ನನ್ನ ಕಣ್ಣಿಗೆ ಹಾಕಿ, ಅದು ಓದಿ, ಇದು ಓದಿ, ಅಂತ ಪರೀಕ್ಷಿಸಿ, ಏನೂ ತೊಂದರೆಯಿಲ್ಲ, ಈಗ ಇರುವ ಕನ್ನಡಕವನ್ನೇ ಉಪಯೋಗಿಸಬಹುದು ಅಂದಾಗ ಸ್ವಲ್ಪ ನಿರಾಳವಾಗಿತ್ತು ನನ್ನ ಮನಸ್ಸಿಗೆ! ನಂತರ  ಇಷ್ಟುದ್ಧ ಗಡ್ಡ ಬಿಟ್ಟುಕೊಂಡಿದ್ದ ಮಂಗಳೂರಿನ ಯುವ ವೈದ್ಯ ಬಂದು ನನ್ನನ್ನೊಮ್ಮೆ ಪರೀಕ್ಷಿಸಿ, ನರ್ಸನ್ನು ಕರೆದು ಡ್ರಾಪ್ಸ್ ಹಾಕಿ ಕೂರಿಸಲು ಹೇಳಿದ್ದರು.  ಬಳುಕುತ್ತಾ ಬಂದ ಫಿಲಿಪ್ಪೈನ್ಸ್ ನರ್ಸ್ ನನ್ನ ಕಣ್ಣುಗಳಿಗೆ ಮೂರು ಬಾರಿ ಎರಡೆರಡು ತೊಟ್ಟು ಡ್ರಾಪ್ಸ್ ಹನಿಸಿದಳು, ಅವಳ ಸುಂದರ ಮೊಗವನ್ನು ಕಂಡ ನನ್ನ ತುಂಟ ಕಣ್ಣುಗಳು ಹೊಸ ರಾಗವೊಂದನ್ನು ಶುರು ಹಚ್ಚಿಕೊಂಡಿದ್ದವು!  ಈಗ ಕಿವಿಯಲ್ಲಿ ಮತ್ತೊಂದು ಹೊಸ ಹಾಡು,,,,,,,"ಕಣ್ಣು ಕಣ್ಣು ಕಲೆತಾಗ,,,,ಮನವು ಉಯ್ಯಾಲೆಯಾಡಿದೆ ತೂಗಿ"  ಹಾಡು ಗುನುಗುನಿಸುತ್ತಾ ನಾನು ನನ್ನಷ್ಟಕ್ಕೆ ನಗುತ್ತಿದ್ದರೆ ಪಕ್ಕದಲ್ಲಿ ಕುಳಿತಿದ್ದ ವೆಂಕಟ್ ನನಗೆ ಏನಾಯಿತೆಂದು ಅರಿಯದೆ ಕಣ್ಣು ಕಣ್ಣು ಬಿಡುತ್ತಿದ್ದ.    

ಡ್ರಾಪ್ಸ್ ಹಾಕಿದ ನಂತರ ಸುಮಾರು ಮುಕ್ಕಾಲು ಘಂಟೆ ಹಾಗೆಯೇ ಕುಳಿತ ನಂತರ ನನ್ನ ಕಣ್ಣುಗಳೊಳಗಿನ ಕಪ್ಪುಗುಡ್ಡೆ ದೊಡ್ಡದಾಗಿ ನನ್ನ ಮುಂದಿನದೆಲ್ಲವೂ ಅಸ್ಪಷ್ಟವಾಗಿ ಕಾಣಿಸಲಾರಂಭಿಸಿತು.  ಆಗ ಮತ್ತೆ ಬಂದ ಫಿಲಿಪ್ಪೈನ್ಸಿನ ಸುಂದರ ನರ್ಸ್ ನನ್ನನ್ನು ವೈದ್ಯರ ಕೋಣೆಯೊಳಕ್ಕೆ ಕರೆದೊಯ್ದಳು.  ನನ್ನನ್ನು ಪರೀಕ್ಷಾ ಟೇಬಲ್ಲಿನ ಮೇಲೆ ಕೂರಿಸಿದ ವೈದ್ಯ ಹಿಂದಿನಿಂದ ಅನಾಮತ್ತಾಗಿ ಗುಂಡಿಯೊಂದನ್ನು ಅದುಮಿ ಸೀದಾ ಮಲಗಿದಂತೆ ಮಾಡಿ ಪ್ರಖರವಾದ ಬೆಳಕನ್ನು ನನ್ನ ಕಣ್ಣುಗಳೊಳಕ್ಕೆ ಬಿಡುತ್ತಾ ಪರೀಕ್ಷಿಸಲಾರಂಭಿಸಿದ.  ಆ ಬೆಳಕಿನ ಪ್ರಖರತೆಗೆ ಹಾಗೂ ಹಾಕಿದ್ದ ಡ್ರಾಪ್ಸ್ ಪ್ರಭಾವದಿಂದ ಕಣ್ಣು ಪೂರ್ತಿ ಕತ್ತಲೆ ಬಂದಂತಾಗಿ ಏನೇನೂ ಕಾಣಿಸದೆ ನಾನು ಅಕ್ಷರಶಃ ಅಂಧನಂತೆ ಕುಳಿತಿದ್ದೆ!  ತನ್ನ ಪರೀಕ್ಷೆಯನ್ನು ಸಾವಧಾನವಾಗಿ ಮುಗಿಸಿದ ಆ ವೈದ್ಯ, ಕೊನೆಗೆ ಆರಿಸಿದ್ದ ಲೈಟುಗಳನ್ನೆಲ್ಲ ಆನ್ ಮಾಡಿ,,,ನಿಮ್ಮ ಕಣ್ಣುಗಳಲ್ಲಿ ಏನೇನೂ ತೊಂದರೆಯಿಲ್ಲ,,,ಎಲ್ಲಾ ನಾರ್ಮಲ್ಲಾಗಿದೆ,,,,ನಿಮ್ಮ ಬಲಗಣ್ಣು ಚೆನ್ನಾಗಿದೆ,,,,ಆದರೆ ನಿಮ್ಮ ಎಡಗಣ್ಣು "ಲೇಝಿ ಐಯ್" ಆಗಿಬಿಟ್ಟಿದೆ, ಅದಕ್ಕೆ ಪ್ರತಿದಿನವೂ ನೀವು ಎರಡರಿಂದ ಮೂರು ಘಂಟೆಗಳ ಕಾಲ ಬಲಗಣ್ಣನ್ನು ಮುಚ್ಚಿಕೊಂಡು ಕೇವಲ ಎಡಗಣ್ಣಿನಲ್ಲಿ ಮಾತ್ರ ಎಲ್ಲವನ್ನೂ ನೋಡುವ, ಓದುವ ಅಭ್ಯಾಸ ಮಾಡಬೇಕು, ಹೀಗೆ ಮಾಡಿ ದಿನವೂ ಎಡಗಣ್ಣಿನ ಮೇಲೆ ಹೆಚ್ಚು ಒತ್ತಡ ಹಾಕಿ ಲೇಝಿ ಆಗಿರುವುದನ್ನು ಆಕ್ಟಿವ್ ಮಾಡಿ, ಮುಂದಿನ ತಿಂಗಳು ಇದೇ ದಿನ ಬಂದು ತೋರಿಸಿ ಎಂದಾಗ ನನಗಂತೂ ಬಹಳ ಖುಷಿಯಾಗಿತ್ತು!  ಆದರೆ ಸದಾ ಆಕ್ಟಿವ್ ಆಗಿರುವ ನನ್ನ ಎಡಗಣ್ಣು ಮಾತ್ರ ಅದು ಹೇಗೆ ಲೇಝಿ ಐಯ್ ಆಯ್ತು ಅನ್ನುವ ಮಿಲಿಯನ್ ಡಾಲರ್ ಪ್ರಶ್ನೆ ನನ್ನ ಮನದಲ್ಲಿ ಮೂಡಿತ್ತು!  

ಸದ್ಯ,,,ಹೆಚ್ಚಾಗಿರುವ ರಕ್ತದಲ್ಲಿನ ಸಕ್ಕರೆಯ ಅಂಶ ನನ್ನ ಕಣ್ಣುಗಳಿಗೆ ಇನ್ನೂ ಯಾವ ಹಾನಿಯನ್ನು ಮಾಡಿರಲಿಲ್ಲ!   ತಲೆನೋವಿಗೆ ನನ್ನ ರಕ್ತದಲ್ಲಿನ ಸಕ್ಕರೆ ಕಾರಣವಾಗಿರಲಿಲ್ಲ,,,ಅದೇನೋ ಹೊಸದಾಗಿ ಹೆಸರಿಟ್ಟಿದ್ದಾರಂತೆ,,,,,"ಕಂಪ್ಯೂಟರ್ ವಾಚಿಂಗ್ ಸಿಂಡ್ರೋಮ್",,,,,ನನ್ನ ತಲೆನೋವಿಗೆ ಈ ಹೊಸ ಸಿಂಡ್ರೋಮ್ ಕಾರಣವಂತೆ!  ಮುವ್ವತ್ತು ನಿಮಿಷ ಸತತವಾಗಿ ಕಂಪ್ಯೂಟರ್ ಉಪಯೋಗಿಸಿದರೆ ಒಂದೆರಡು ನಿಮಿಷ ಕಣ್ಣುಗಳಿಗೆ ಬಿಡುವು ಕೊಡಿ, ಕಿಟಕಿಯಿಂದ ಹೊರಗೆ ದೂರದಲ್ಲಿರುವ್ವುದನ್ನು ನೋಡಿ, ರಿಲ್ಯಾಕ್ಸ್ ಮಾಡಿ ಅಂದ ವೈದ್ಯರಿಗೆ ಓಕೆ ಅಂದೆ! 

ವೈದ್ಯರು ಕೊಟ್ಟ ಐ ಡ್ರಾಪ್ಸ್ ಚೀಟಿ ತೆಗೆದುಕೊಂಡು,  ಬಳಸಲು ಹೇಳಿದ ಐ ಪ್ಯಾಡ್ ವಿಚಾರಗಳನ್ನೆಲ್ಲಾ ಮನನ ಮಾಡಿಕೊಂಡು ಕೊನೆಗೂ ವಾಸನ್ ಐ ಕೇರಿಗೆ ವಿದಾಯ ಹೇಳಿ ಸಮಾಧಾನಚಿತ್ತದಿಂದ ಹೊರ ಬರುವಾಗ ನನ್ನ ಕಿವಿಯಲ್ಲಿ ಮತ್ತೊಂದು ಹೊಸಹಾಡಿನ ರಾಗ ಆರಂಭವಾಗಿತ್ತು,,,,,ಕಂಗಳು ವಂದನೆ ಹೇಳಿವೆ,,,,,ಹೃದಯವು ತುಂಬಿ ಹಾಡಿದೆ,,,,,,!! :-)  

Saturday, April 11, 2015

ನೆನಪಿನಾಳದಿಂದ - ೨೫; ನನ್ನ ಈಜು ಕಲಿಕೆಯ ಪ್ರಸಂಗಗಳು.



ಇಂದು ದಿನಪತ್ರಿಕೆಯಲ್ಲಿ ಕೆಲವು ಮಕ್ಕಳು ಬೇಸಿಗೆಯ ರಜೆಯಲ್ಲಿ ಈಜು ಕಲಿಯಲು ಹೋಗಿ ಈಜುಕೊಳದಲ್ಲಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸತ್ತ ಸುದ್ಧಿ ಓದಿದೆ, ಮನಸ್ಸು ಮಮ್ಮಲ ಮರುಗಿತು.  ವರ್ಷಪೂರ್ತಿ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜಿ ಮನೆ(ಇದ್ದರೆ), ಇಲ್ಲದಿದ್ದರೆ ಬೇಸಿಗೆ ಶಿಬಿರಗಳು ಅಲ್ಲಿ ಇಲ್ಲಿ ಅಂತ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಅತ್ಯಂತ ಚಟುವಟಿಕೆಯಿಂದ ಕೂಡಿರುವ ಮಕ್ಕಳ ಸುರಕ್ಷತೆಯ ಬಗ್ಗೆ, ಅದೂ ಅವರ ಶಾಲಾ ರಜಾ ದಿನಗಳಲ್ಲಿ, ಪಾಲಕರು ಹಾಗೂ ಸುತ್ತಮುತ್ತಲಿನವರು ಅದೆಷ್ಟು ಕಾಳಜಿ ವಹಿಸಿದರೂ ಕಡಿಮೆಯೇ!  ಬೆಳಿಗ್ಗೆ ಎದ್ದರೆ ಹಲ್ಲುಜ್ಜಿ ಆತುರಾತುರವಾಗಿ ಸಿದ್ಧರಾಗಿ, ಶಾಲೆಯ ಬಸ್ ಹಿಡಿಯಲು ಓಡುವ ನಗರದ ಮಕ್ಕಳಿಂದ, ನಾಲ್ಕಾರು ಮೈಲಿ ನಡೆದೇ ಹೋಗುವ ಹಳ್ಳಿಗಾಡಿನ ಮಕ್ಕಳವರೆಗೂ, ಶಾಲೆಯ ದಿನಗಳಲ್ಲಿ ಪಂಜರದ ಗಿಳಿಗಳಾಗಿರುತ್ತಾರೆ.  ಆದರೆ ಒಮ್ಮೆ ಪರೀಕ್ಷೆ ಮುಗಿದು ಶಾಲೆಗೆ ಬೇಸಿಗೆ ರಜೆ ಬರುತ್ತಿದ್ದಂತೆ ಅವರು ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡುವ ಹಕ್ಕಿಗಳಂತಾಗಿಬಿಡುತ್ತಾರೆ.  ಸುತ್ತಲಿನ ಹಸಿರಿನ ನಡುವೆ, ಬೆಟ್ಟ, ಗುಡ್ಡ, ಕಣಿವೆ, ನೀರು, ನದಿ, ಕೆರೆ, ಹಳ್ಳಕೊಳ್ಳ ಯಾವುದನ್ನೂ ಬಿಡದೆ ಜಾಲಾಡುವ ಮನಸ್ಸಿನವರೂ ಇರುತ್ತಾರೆ.  ಇಂಥಾ ಮಕ್ಕಳ ಬಗ್ಗೆ ಅದೆಷ್ಟು ಕಾಳಜಿ ವಹಿಸಿದರೂ ಸಾಲದು.   ಈಜುಕೊಳದಲ್ಲಿ ಮಕ್ಕಳ ಸಾವಿನ ಘಟನೆಯನ್ನು ಓದಿದಾಗ ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು. 

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲಿನಲ್ಲಿ ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಿನ ಘಟನೆಯಿದು. ಆಗ ಅಮ್ಮನ ಸಹಾಯಕಿಯಾಗಿದ್ದ ಅಕ್ಕಮ್ಮ ಎನ್ನುವವರ ಮಗ ಶಿವರಾಮ ನನ್ನ ಆಪ್ತನಾಗಿದ್ದ, ಅಷ್ಟೇ ಏಕೆ, ಬೇಸಿಗೆಯ ರಜೆಯಲ್ಲಿ ಸುತ್ತಲಿನ ಹಳ್ಳಿಗಳಲ್ಲಿ  ಬೇಲದ ಹಣ್ಣು, ಜಂಬು ನೇರಳೆ ಹಣ್ಣು, ಮಾವಿನ ಹಣ್ಣು, ಗೇರು ಹಣ್ಣು, ಈಚಲ ಹಣ್ಣು, ಬೆಟ್ಟದ ಬುಡಗಳಲ್ಲಿ ದೊರಕುವ ಕಾರೆಹಣ್ಣು ಎಲ್ಲೆಲ್ಲಿ ಯಥೇಚ್ಚವಾಗಿ ದೊರಕುತ್ತವೆಂದು ತಿಳಿಸಿ ಜೊತೆಗೆ ಕರೆದುಕೊಂಡು ಹೋಗಿ ಮರ ಹತ್ತಿಸುವ ಗುರುವೂ ಆಗಿದ್ದ. ಅವನ ಜೊತೆಗೆ ನಾನು ಸುತ್ತದ ಹಳ್ಳಿ ಇರಲಿಲ್ಲ, ಹತ್ತದ ಮರವಿರಲಿಲ್ಲ, ತಿನ್ನದ ಹಣ್ಣಿರಲಿಲ್ಲ, ಆಡದ ಆಟವಿರಲಿಲ್ಲ!  ಕೆಲವೊಮ್ಮೆ ಬೆಳಿಗ್ಗೆ ಅಪ್ಪನ ಹೋಟೆಲಿನಲ್ಲಿ ಗಡದ್ದಾಗಿ ಇಡ್ಲಿ-ಚಟ್ನಿ ತಿಂದು ಹೊರಟರೆ ಮತ್ತೆ ನಾವಿಬ್ಬರೂ ಹಿಂದಿರುಗುತ್ತಿದ್ದುದು ಸೂರ್ಯ ಮುಳುಗಿದ ನಂತರವೇ!  ಹೀಗೆ ಸುತ್ತು ಹೊಡೆಯುವಾಗಲೇ ನಮ್ಮ ಮೊದಲನೆಯ ಈಜು ಕಲಿಕೆಯ ಪ್ರಸಂಗ ನಡೆಯಿತು. 

ಮಂಡಿಕಲ್ಲು ತಗ್ಗಿನಲ್ಲಿರುವ ಹಳ್ಳಿ, ಸುತ್ತಲೂ ಬೆಟ್ಟಗಳಿಂದಾವೃತವಾಗಿದ್ದು ಸುಮಾರು ಏಳೆಂಟು ಕೆರೆಗಳಿದ್ದು  ವರ್ಷದ ಎಲ್ಲಾ ಕಾಲದಲ್ಲಿಯೂ ಒಂದಲ್ಲ ಒಂದು ಕೆರೆಯಲ್ಲಿ ನೀರು ತುಂಬಿರುತ್ತಿತ್ತು!  ಗುಂಡ್ಲು ಮಂಡಿಕಲ್ಲು ಎನ್ನುವ ಹಳ್ಳಿಯ ಪಕ್ಕದಲ್ಲಿದ್ದ ಕೆರೆಯಲ್ಲಿ ನಮ್ಮ ಮೊದಲನೆಯ ಈಜು ಪ್ರಸಂಗ ಆರಂಭವಾಯಿತು.  ಅಂದು ಶ್ರೀರಾಮದೇವರ ಬೆಟ್ಟದ ಬದಿಯಲ್ಲಿ ಸಾಕಷ್ಟು ಸುತ್ತಾಡಿ ಬೇಲದ ಹಣ್ಣು, ಜಂಬುನೇರಳೆ ಹಣ್ಣು, ಕಾರೆ ಹಣ್ಣುಗಳನ್ನು ಸಾಕಷ್ಟು ತಿಂದು, ಚಡ್ಡಿ ಜೇಬಿನಲ್ಲೂ ತುಂಬಿಕೊಂಡು ಹಿಂದಿರುಗುವಾಗ ಬಿಸಿಲಿನಿಂದ ಬಳಲಿದ್ದ ನಮಗೆ ಬಾಯಾರಿಕೆಯಾಗಿ ನೀರು ಕುಡಿಯಲೆಂದು ಆ ಕೆರೆಯ ಪಕ್ಕದಲ್ಲೇ ಬಂದಿದ್ದೆವು.  ನೀರು ಕುಡಿದ ನಂತರ ಶ್ರೀರಾಮ ನನಗೆ ಕೇಳಿದ್ದು, ನಿನಗೆ ಈಜು ಬರುತ್ತಾ? ನಾನು ಇಲ್ಲ ಎಂದಿದ್ದೆ.  ಹಾಗಾದರೆ ಬಾ ನಾನು ನಿನಗೆ ಈಜು ಕಲಿಸುತ್ತೇನೆ ಅಂದವನು ನನ್ನ ಕಣ್ಣಿಗೆ ಸಾಕ್ಷಾತ್ ಆಂಜನೇಯನಂತೆ ಕಂಡಿದ್ದ.  ಮೈಸೂರಿನಲ್ಲಿ ಹುಟ್ಟಿ ಬೆಳೆದಿದ್ದ ನನಗೆ ಗ್ರಾಮೀಣ ಬದುಕಿನ ಗಂಧ ಗಾಳಿಯೂ ಗೊತ್ತಿರಲಿಲ್ಲ, ಆದರೆ ಮಂಡಿಕಲ್ಲು ಮತ್ತು ಸುತ್ತಮುತ್ತಲ ಹಳ್ಳಿಗಳನ್ನು ಚೆನ್ನಾಗಿ ಸುತ್ತಾಡಿಸುತ್ತಿದ್ದ ಶ್ರೀರಾಮನಿಂದಾಗಿ ಗ್ರಾಮೀಣ ಭಾಗದ ಜೀವನದ ಪರಿಚಯ ನನಗೆ ಚೆನ್ನಾಗಿಯೇ ಆಗುತ್ತಿತ್ತು. 

ಯಾವುದೇ ಸಂಕೋಚವಿಲ್ಲದೆ ನನ್ನೆದುರಿಗೆ ತಾನು ತೊಟ್ಟಿದ್ದ ಅಂಗಿ ಮತ್ತು ಚಡ್ಡಿಯನ್ನು ಕಳಚಿ ನೀರಿಗಿಳಿದವನನ್ನು ನಾನು ಆಶ್ಚರ್ಯದಿಂದ ನೋಡುತ್ತಿದ್ದೆ.   ಅವನು ನೀರಿನಲ್ಲಿಳಿದು ಕೈ ಕಾಲು ಆಡಿಸುತ್ತಾ ಮೀನಿನಂತೆ ಈಜುತ್ತಿದ್ದರೆ ನಾನು ಬಿಟ್ಟ ಕಣ್ಣು ಬಿಟ್ಟ ಬಾಯಿಯಿಂದ ಅವನನ್ನೇ ನೋಡುತ್ತಿದ್ದೆ.  ಅವನು ಹಾಗೆ ಈಜು ಹೊಡೆಯುವುದನ್ನು ನೋಡುತ್ತಾ ಇದ್ದಂತೆ ನನಗೂ ಈಜು ಹೊಡೆಯಬೇಕೆಂಬ ಬಲವಾದ ಆಸೆ ಮನದಲ್ಲಿ ಗರಿಗೆದರಿತ್ತು. ಬಾರೋ ಬಾರೋ ಎಂದು ಕರೆಯುತ್ತಿದ್ದವನ ಕರೆಗೆ ಓಗೊಟ್ಟು ಅಂಗಿ ಚಡ್ಡಿ ಕಳಚಿಟ್ಟು ನಾನೂ ನೀರಿಗಿಳಿದೇ ಬಿಟ್ಟಿದ್ದೆ.  ಜೀವನದಲ್ಲಿ ಮೊದಲ ಬಾರಿಗೆ ಕೆರೆಯ ನೀರಿನಲ್ಲಿ ಈಜಲು ಇಳಿದಿದ್ದೆ, ಆದರೆ ಈಜು ಹೊಡೆಯುವುದು ಹೇಗೆಂಬುದೇ ನನಗೆ ಗೊತ್ತಿರಲಿಲ್ಲ!   ಶ್ರೀರಾಮನ ನಿರ್ದೇಶನದಂತೆ ಕೈ ಕಾಲು ಆಡಿಸುತ್ತಾ ಈಜು ಹೊಡೆಯಲು ಪ್ರಯತ್ನಿಸಿದರೆ ಅದು ಸಾಧ್ಯವಾಗದೆ ನೀರಿನಲ್ಲಿ ಮುಳುಗುತ್ತಿದ್ದೆ, ಕಿವಿ, ಕಣ್ಣು, ಮೂಗು, ಬಾಯಿಗಳಲ್ಲೆಲ್ಲಾ ಕೆರೆಯ ನೀರು ನುಗ್ಗಿ ಉಸಿರಾಡಲು ಒದ್ದಾಡುತ್ತಿದ್ದೆ!  ನನ್ನ ಒದ್ದಾಟವನ್ನು ಕಂಡು ಮಜಾ ತೆಗೆದುಕೊಳ್ಳುತ್ತಿದ್ದ ಅವನು ಸರಿಯಾಗಿ ಕೈ ಕಾಲು ಹೊಡೆಯುವಂತೆ ನಿರ್ದೇಶನ ನೀಡುತ್ತಾ ನನ್ನನ್ನು ಹುರಿದುಂಬಿಸುತ್ತಿದ್ದ, ಆದರೆ ಜೀವನದಲ್ಲೆಂದೂ ನೀರಿಗಿಳಿಯದಿದ್ದ ನನಗೆ ಅವನಂತೆ ಕೈ ಕಾಲು ಹೊಡೆದು ಈಜಲು ಸಾಧ್ಯವಾಗದೆ ಸುಸ್ತಾಗಿ ದಡಕ್ಕೆ ಹಿಂದಿರುಗಿ ಕುಳಿತು ಬಿಟ್ಟಿದ್ದೆ.  ಅದೇ ಸಮಯಕ್ಕೆ ನೀರು ಕುಡಿಯಲು ಕೆರೆಗೆ ಬಂದ ನಾಲ್ಕಾರು ಎಮ್ಮೆಗಳನ್ನು ನೋಡಿದ ಶ್ರೀರಾಮ ಲೇ ಮಂಜಾ, ಎಮ್ಮೆ ಸವಾರಿ ಮಾಡೋಣ ಬಾರೋ ಅಂದ.  ಅವನಿಗೆ ಪರಿಚಯವಿದ್ದ(!) ಒಂದು ಎಮ್ಮೆಯ ಮೇಲೆ ಹತ್ತಿ ಕುಳಿತು ಯಮಧರ್ಮರಾಜನಂತೆ ಫೋಸು ಕೊಟ್ಟಿದ್ದ.  ಅವನನ್ನು ಹೊತ್ತ ಎಮ್ಮೆ ಆರಾಮಾಗಿ ಕೆರೆಯಲ್ಲಿ ನೀರು ಕುಡಿದು, ಒಂದು ರೌಂಡು ಕೆರೆಯ ನೀರಿನಲ್ಲಿ ಸುತ್ತಾಡಿ ಬಂದಿತ್ತು.  ಇದರಿಂದ ಉತ್ತೇಜಿತನಾದ ನಾನೂ ಸಹ ಅವನ ಜೊತೆಯಲ್ಲಿ ಎಮ್ಮೆಯ ಮೇಲೆ ಹತ್ತಿ ಕುಳಿತಿದ್ದೆ!  ಸ್ವಲ್ಪ ದೂರ ನೀರಿನಲ್ಲಿ ನನ್ನ ಹಿಂದೆ ಎಮ್ಮೆಯ ಮೇಲೆ ಕುಳಿತಿದ್ದ ಅವನು ಚಂಗನೆ ನೀರಿಗೆ ಹಾರಿ ಚಮ್ಮೀನಿನಂತೆ ಈಜತೊಡಗಿದ. ಗಾಭರಿಯಾದ ನಾನು ಎಮ್ಮೆಯ ಮೂಗುದಾರವನ್ನು ಬಿಗಿಯಾಗಿ ಹಿಡಿದೆಳೆದಿದ್ದೆ, ನೋವಿನಿಂದ ಹೂಂಕರಿಸಿದ ಎಮ್ಮೆ ಒಮ್ಮೆ ಜೋರಾಗಿ ಮೈಕೊಡವಿ ನನ್ನನ್ನು ಅನಾಮತ್ತಾಗಿ ನೀರಿಗೆಸೆದಿತ್ತು.  ಮೊದಲೇ ಈಜು ಬರದಿದ್ದ ನಾನು ಕುತ್ತಿಗೆ ಮಟ್ಟಕ್ಕಿಂತ ಹೆಚ್ಚಿದ್ದ ನೀರಿನಲ್ಲಿ ಮೇಲು ಕೆಳಗಾಗುತ್ತಾ, ಕೆರೆಯ ನೀರನ್ನು ಕುಡಿಯುತ್ತಾ ಮುಳುಗತೊಡಗಿದ್ದೆ!  ತಕ್ಷಣ ನನ್ನ ಬಳಿಗೆ ಬಂದ ಶ್ರೀರಾಮ ನನ್ನನ್ನು ಹಿಡಿದು ದಡಕ್ಕೆಳೆಯಲು ಯತ್ನಿಸಿದ್ದ, ಆದರೆ ನನ್ನ ಬಲವಾದ ಹಿಡಿತಕ್ಕೆ ಸಿಕ್ಕಿ ನನ್ನೊಡನೆ ಅವನೂ ಮುಳುಗತೊಡಗಿದ್ದ.  ಆದರೂ ತಲೆ ಓಡಿಸಿ ಒಂದು ಕೈಯ್ಯಲ್ಲಿ ನನ್ನನ್ನು ಹಿಡಿದು ಮತ್ತೊಂದು ಕೈಯ್ಯಲ್ಲಿ ಎಮ್ಮೆಯ ಬಾಲವನ್ನು ಹಿಡಿದುಕೊಂಡಿದ್ದ.  ನೀರು ಕುಡಿದು ಪ್ರಸನ್ನವಾಗಿದ್ದ ಎಮ್ಮೆ ಸಾವಕಾಶವಾಗಿ ನಮ್ಮಿಬ್ಬರನ್ನೂ ದಡಕ್ಕೆಳೆದುಕೊಂಡು ಬಂದಿತ್ತು.  ದಡದ ಮೇಲೆ ನನ್ನನ್ನು ಬೋರಲಾಗಿ ಮಲಗಿಸಿ ತನ್ನೆಲ್ಲ ಶಕ್ತಿಯನ್ನು ಬಿಟ್ಟು ನನ್ನ ಬೆನ್ನನ್ನು ಒತ್ತುತ್ತಾ ನನ್ನ ಹೊಟ್ಟೆ ಸೇರಿದ್ದ ಕೆರೆಯ ನೀರನ್ನೆಲ್ಲ ಕಕ್ಕಿಸಿದ್ದ!  ಸುಮಾರು ಹೊತ್ತು ಹಾಗೆಯೇ ಆಶಕ್ತನಾಗಿ ಬಿದ್ದುಕೊಂಡಿದ್ದ ನಾನು ಕೊನೆಗೆ ಎದ್ದು ಕುಳಿತಾಗ ಇನ್ನೆಂದಿಗೂ ಈಜು ಹೊಡೆಯಲು ನೀರಿಗಿಳಿಯಬಾರದೆಂದು ಶಪಥ ಮಾಡಿದ್ದೆ. ನನ್ನ ಮೊದಲನೆಯ ಈಜು ಕಲಿಕೆಯ ಪ್ರಸಂಗ ಅಲ್ಲಿಗೆ ಮುಗಿದಿತ್ತು.  ಸಂಜೆ ತಡವಾಗಿ ಮನೆಗೆ ಬಂದಿದ್ದಕ್ಕಾಗಿ ಅಪ್ಪನಿಂದ ಸಾಕಷ್ಟು ಬೈಗುಳಗಳ ನಾಮಾರ್ಚನೆಯ ಜೊತೆಗೆ ಒಂದೆರಡು ಒದೆಗಳೂ ಬಿದ್ದಿದ್ದವು.  

ಮಂಡಿಕಲ್ಲಿನಿಂದ ಅಮ್ಮನಿಗೆ ವರ್ಗವಾಗಿ ಕೊರಟಗೆರೆಗೆ ಬಂದಾಗ ಮಾಧ್ಯಮಿಕ ಶಾಲೆಯಲ್ಲಿ ನಾನು ಸದಾ ಅಂತರ್ಮುಖಿಯಾಗಿರುತ್ತಿದ್ದೆ.  ಪ್ರಾಥಮಿಕ ಶಾಲೆಯ ಸ್ನೇಹಿತರು ಯಾರೂ ಇರಲಿಲ್ಲ, ತರಗತಿಯಲ್ಲಿದ್ದವರೆಲ್ಲಾ ನನಗೆ ಹೊಸಬರೇ ಆಗಿದ್ದರು.  ತೆಲುಗು ಪ್ರಾಬಲ್ಯದ ಮಂಡಿಕಲ್ಲಿನ ಶಾಲೆಯ ವಾತಾವರಣಕ್ಕೂ ಕೊರಟಗೆರೆಯ ಅಪ್ಪಟ ಕನ್ನಡ ಶಾಲೆಯ ವಾತಾವರಣಕ್ಕೂ ಹೊಂದಿಕೊಳ್ಳಲು ನನಗೆ ತುಸು ಸಮಯ ಹಿಡಿದಿತ್ತು.  ಒಟ್ಟು ಹನ್ನೊಂದು ಜನ ಮಂಜುನಾಥರು ಇದ್ದ ಆ ತರಗತಿಯಲ್ಲಿ ಕೊನೆಗೂ ನನ್ನದೇ ಹೆಸರಿನ ನಾಲ್ಕು ಜನರು ನನಗೆ ಹೆಚ್ಚು ಆಪ್ತರಾಗಿದ್ದರು.  ಅಪ್ಪನ ಹೋಟೆಲ್ಲಿನ ಕೆಲಸ, ಸೀಮೆಣ್ಣೆ ಹುಡುಕಾಟಗಳ ನಡುವೆ ಸಿಕ್ಕ ಬಿಡುವಿನಲ್ಲಿ ಈ ನಾಲ್ವರೊಡನೆ ನನ್ನ ಸುತ್ತಾಟ!  ಅಲ್ಲಿಯೂ ಬೇಸಿಗೆ ರಜೆ ಬಂತೆಂದರೆ ಸುತ್ತಲಿನ ಬೆಟ್ಟಗುಡ್ಡಗಳನ್ನು, ಕೆರೆ ಕಟ್ಟೆಗಳನ್ನು ಜಾಲಾಡಲು ಹೊರಟು ಬಿಡುತ್ತಿದ್ದೆವು. ಯಥೇಚ್ಚವಾಗಿ ದೊರಕುತ್ತಿದ್ದ ಹಣ್ಣು ಹಂಪಲುಗಳನ್ನು ತಿಂದು ಸಂಭ್ರಮಿಸುತ್ತಿದ್ದೆವು.  ಹೀಗೆಯೇ ಇರುವಾಗ ಕೊರಟಗೆರೆಯ ಅಮಾನಿಕೆರೆಯಲ್ಲಿ ಒಂದು ದಿನ ಈಜು ಹೊಡೆಯುವ ಪ್ರಸಂಗ ಬಂದೇ ಬಿಟ್ಟಿತು.  ಬೇಸಿಗೆಯ ಬಿರುಬಿಸಿಲಿನಲ್ಲಿ ಸುತ್ತು ಹೊಡೆದು ಸುಸ್ತಾಗಿ ನೀರು ಕುಡಿಯಲೆಂದು ಕೆರೆಯ ಬಳಿಗೆ ಬಂದಾಗ ನನ್ನನ್ನು ಬಿಟ್ಟು ಉಳಿದವರೆಲ್ಲಾ ಈಜು ಹೊಡೆಯಲು ಕೆರೆಗೆ ಇಳಿದಿದ್ದರು.  ನಾನು ಮಾತ್ರ ಯಾವುದೇ ಕಾರಣಕ್ಕೂ ನಾನು ಕೆರೆಗೆ ಇಳಿಯುವುದಿಲ್ಲವೆಂದು ಹೇಳಿ ಅವರ ಬಟ್ಟೆಗಳನ್ನು ಕಾಯುತ್ತಾ ದಡದಲ್ಲಿ ನಿಂತಿದ್ದೆ.  ಆದರೆ ನನ್ನ ದುರಾದೃಷ್ಟ!  ಅದೇ ಸಮಯಕ್ಕೆ ಅಲ್ಲಿಗೆ ಬಂದ ಕಾಲೇಜು ಹುಡುಗರ ಹಿಂಡೊಂದು ಈಜು ಹೊಡೆಯುತ್ತಿದ್ದ ನನ್ನ ಗೆಳೆಯರನ್ನು ನೋಡಿ, ಅವರ ಬಟ್ಟೆಗಳನ್ನೆಲ್ಲ ಎತ್ತಿಕೊಂಡು ಹೋಗಿ ಅನತಿ ದೂರದಲ್ಲಿದ್ದ ಮರದ ಮೇಲಿಟ್ಟು ಬಿಟ್ಟಿದ್ದರು. ವಿರೋಧಿಸಿದ ನನ್ನನ್ನು ನಾಲ್ವರು ಅನಾಮತ್ತಾಗಿ ಎತ್ತಿ ತಂದು ಕೆರೆಗೆ ಬಿಸಾಕಿದ್ದರು, ಈಜು ಬರದೆ ನಾನು ನೀರು ಕುಡಿಯುತ್ತಾ, ಮುಳುಗುತ್ತಾ, ತೇಲುತ್ತಾ ಒದ್ದಾಡುತ್ತಿದ್ದರೆ ಅದನ್ನು ನೋಡಿ ವಿಚಿತ್ರ ಮಜಾ ತೆಗೆದುಕೊಳ್ಳುತ್ತಿದ್ದರು.  ಕೊನೆಗೆ ನಾನು ಮೇಲೇಳಲಾಗದೆ ನೀರಿನಲ್ಲಿ ಮುಳುಗಿದಾಗ ಆ ಗುಂಪಿನಲ್ಲಿದ್ದ ಒಬ್ಬ ಒಳ್ಳೆಯ ಹುಡುಗ ನೀರಿಗೆ ಧುಮುಕಿ ನನ್ನ ಜುಟ್ಟು ಹಿಡಿದು ಅನಾಮತ್ತಾಗಿ ಎಳೆತಂದು ದಡಕ್ಕೆ ಹಾಕಿ, ನನ್ನ ಬೆನ್ನನ್ನು ತುಳಿದು ತುಳಿದೂ ನನ್ನ ಹೊಟ್ಟೆಯಲ್ಲಿದ್ದ ನೀರನ್ನೆಲ್ಲಾ ಕಕ್ಕಿಸಿದ್ದ.  ಸುಧಾರಿಸಿಕೊಂಡ ನಂತರ ಗೆಳೆಯರೆಲ್ಲಾ ಸೇರಿ ನನ್ನನ್ನು ಮನೆಗೆ ಕರೆತಂದಿದ್ದರು, ಮನೆಯಲ್ಲಿದ್ದ ಅಕ್ಕನಿಗೆ ನನ್ನ ಸ್ನೇಹಿತನೊಬ್ಬ ನಡೆದ ವಿಚಾರವನ್ನೆಲ್ಲ ತಿಳಿಸಿಬಿಟ್ಟಿದ್ದ!  ಅಕ್ಕ ಯಥಾವತ್ ವರದಿಯನ್ನು, ಇನ್ನಷ್ಟು ಉಪ್ಪುಕಾರ ಹಚ್ಚಿ, ಅಪ್ಪನಿಗೆ ಒದರಿದ್ದಳು.  ಮೊದಲೇ ಮಹಾನ್ ಕೋಪಿಷ್ಟನಾಗಿದ್ದ ಅಪ್ಪನಿಗೆ ಯಾರೋ ನಾಲ್ವರು ಕಾಲೇಜು ಹುಡುಗರು ನನ್ನನ್ನು ಹಾಗೆ ಕೆರೆಗೆ ಎಸೆದಿದ್ದು ಬಹಳ ಅವಮಾನಕರವಾಗಿ ಕಂಡಿತ್ತು.  ತಮ್ಮ ಪಟಾಲಮ್ಮಿನೊಡನೆ ಆ ಹುಡುಗರನ್ನು ಹುಡುಕಿ, ಅವರ ಮನೆಗಳಿಗೆ ಹೋಗಿ ಅವರ ಪೋಷಕರ ಮುಂದೆಯೇ ಚೆನ್ನಾಗಿ ತದುಕಿ, ಬಾಲ ಬಿಚ್ಚಿದರೆ ಪೊಲೀಸರಿಗೆ ದೂರು ನೀಡಿ ಒಳಕ್ಕೆ ಹಾಕಿಸುವುದಾಗಿ ಗುಟುರು ಹಾಕಿ ಬಂದಿದ್ದರು. 

ಕೊರಟಗೆರೆಯಿಂದ ಅಮ್ಮನಿಗೆ ತಿಪಟೂರಿಗೆ ವರ್ಗವಾಗಿತ್ತು. ಮಾಧ್ಯಮಿಕ ಶಾಲೆ ಮುಗಿಸಿದ್ದ ನಾನು ಪ್ರೌಢಶಾಲೆಗೆ ಸೇರಿದ್ದು, ಪದವೀಧರನಾಗಿದ್ದೂ ಇದೇ ತಿಪಟೂರಿನಲ್ಲಿ!  ಪ್ರೌಢಶಾಲೆಯಲ್ಲಿ  ಸಾಕಷ್ಟು ಸಂಘರ್ಷದ ನಡುವೆಯೇ ನನ್ನ ವಿದ್ಯಾಭ್ಯಾಸ ನಡೆದಿತ್ತು, ಆಟ, ಸುತ್ತಾಟಗಳಿಗೆ ಸಮಯವೇ ಇರಲಿಲ್ಲ!  ಆದರೆ ಪ್ರೌಢಶಾಲೆ ದಾಟಿ ಕಾಲೇಜಿಗೆ ಬಂದ ನಂತರ ಗೆಳೆಯರ ಜೊತೆ ಸುತ್ತಾಟ ಹೆಚ್ಚಾಗಿತ್ತು.  ಹೀಗೆ ಸುತ್ತಾಡುವಾಗಲೇ ಮತ್ತೊಮ್ಮೆ ಈಜು ಪ್ರಸಂಗ ಎದುರಾಗಿದ್ದು!  ಆತ್ಮೀಯ ಗೆಳೆಯ ಬಸವರಾಜನ ತೋಟದಲ್ಲಿ ದೊಡ್ಡದೊಂದು ತೆರೆದ ಬಾವಿಯಿತ್ತು.  ಒಂದು ಬೇಸಿಗೆಯ ರಜದಲ್ಲಿ ಎಲ್ಲ ಸ್ನೇಹಿತರೂ ಅವರ ತೋಟದಲ್ಲಿ ಸೇರಿದ್ದೆವು.  ಚೆನ್ನಾಗಿ ಎಳನೀರು ಕುಡಿದು ಸಾಕಷ್ಟು ಹರಟಿದ ನಂತರ ಗೆಳೆಯರೆಲ್ಲಾ ಈಜು ಹೊಡೆಯಲು ಬಾವಿಗಿಳಿದರು.   ಆದರೆ ನಾನು ಮಾತ್ರ ನನ್ನ ಹಿಂದಿನ ಈಜಿನ ಅನುಭವಗಳನ್ನು ಹೇಳಿ ಯಾವುದೇ ಕಾರಣಕ್ಕೂ ನಾನು ನೀರಿಗಿಳಿಯುವುದಿಲ್ಲವೆಂದು ದಡದಲ್ಲಿ ಕುಳಿತು ಅವರೆಲ್ಲಾ ಈಜು ಹೊಡೆಯುತ್ತಾ ಮೋಜು ಮಾಡುವುದನ್ನು ನೋಡುತ್ತಿದ್ದೆ!  ಅವರೆಲ್ಲರಿಗಿಂತ ನಾನು ಅಶಕ್ತನೆಂಬ ಕೀಳರಿಮೆ ನನ್ನಲ್ಲಿ ಕಾಡುತ್ತಿತ್ತು.  ಓದುವುದರಲ್ಲಿ, ಸೈಕಲ್ ರೇಸುಗಳಲ್ಲಿ, ಪ್ರವಾಸಗಳಲ್ಲಿ, ಎನ್.ಸಿ.ಸಿ.ಯಲ್ಲಿ ಎಲ್ಲದರಲ್ಲಿಯೂ ಮುಂದಿದ್ದ ನನಗೆ ಈ ಈಜುವಿದ್ಯೆ ಒಂದು ಮರೀಚಿಕೆಯಾಗಿತ್ತು.  ಕೊನೆಗೂ ಗೆಳೆಯ ಬಸವರಾಜನ ಒತ್ತಡಕ್ಕೆ ಕಟ್ಟು ಬಿದ್ದು ಹೇಗಾದರೂ ಸರಿ, ಈಜು ಹೊಡೆಯುವುದನ್ನು ಕಲಿಯಲೇಬೇಕೆಂದು ನಿರ್ಧರಿಸಿದೆ.  ಅವರ ತೋಟದ ಮನೆಯ ಅಟ್ಟದ ಮೇಲಿಂದ ಚೆನ್ನಾಗಿ ಒಣಗಿದ್ದ ಹತ್ತಾರು ತೆಂಗಿನಕಾಯಿಗಳನ್ನು ತಂದ ಬಸವರಾಜ ಅವುಗಳನ್ನು ನನ್ನ ಬೆನ್ನಿಗೆ ಈಜುಬುರುಡೆಗಳ ರೀತಿಯಲ್ಲಿ ಸಣ್ಣದೊಂದು ಹಗ್ಗದಿಂದ ಕಟ್ಟಿದ.  ಈಜು ಹೊಡೆಯುವುದು ಅಷ್ಟೇನೂ ಕಷ್ಟವಲ್ಲ, ಬಹಳ ಸುಲಭ, ನೀನು ಮನಸ್ಸಿಟ್ಟು ಕಲಿಯಬೇಕು ಅಷ್ಟೇ ಎಂದು ಧೈರ್ಯದ ಮಾತುಗಳನ್ನಾಡುತ್ತಾ, ಹರಕೆಯ ಕುರಿಯಂತೆ ನನ್ನನು ಬಾವಿಯ ದಡಕ್ಕೆ ಕರೆತಂದ.  ಸುಮಾರು ಇಪ್ಪತ್ತು ಅಡಿಯಷ್ಟು ಆಳದಲ್ಲಿದ್ದ ನೀರನ್ನು ನೋಡಿ ನನ್ನ ಕಾಲುಗಳು ಕಂಪಿಸುತ್ತಿದ್ದವು.  ಬೇಡ ಕಣೋ, ನಾನು ನೀರಿಗಿಳಿಯೋದಿಲ್ಲ ಎಂದವನು ಬೆನ್ನಿಗೆ ಕಟ್ಟಿದ್ದ ತೆಂಗಿನ ಕಾಯಿಗಳನ್ನು ಬಿಚ್ಚಲು ಹೋದೆ!  ಅಲ್ಲಿಯವರೆಗೂ ಮೂಕಪ್ರೇಕ್ಷಕರಂತೆ ನೋಡುತ್ತಿದ್ದ ಇತರ ಗೆಳೆಯರೆಲ್ಲ ಒಮ್ಮೆಗೇ ನನ್ನ ಬಳಿ ಬಂದು ಅನಾಮತ್ತಾಗಿ ನನ್ನನ್ನು ಹಿಡಿದೆತ್ತಿ ಬೊಂಬೆಯಂತೆ ಆ ಬಾವಿಯೊಳಕ್ಕೆಸೆದಿದ್ದರು.  ಇಪ್ಪತ್ತು ಅಡಿ ಎತ್ತರದಿಂದ ನೀರಿಗೆ ಬಿದ್ದ ನಾನು ಸೀದಾ ಬಾವಿಯ ತಳಕ್ಕೆ ಹೋಗಿ ಮತ್ತೆ ಒಣಗಿದ ತೆಂಗಿನಕಾಯಿಗಳಿಂದಾಗಿ ಮೇಲಕ್ಕೆ ಬಂದಿದ್ದೆ!  ಆದರೆ ಅದಾಗಲೇ ಸಾಕಷ್ಟು ನೀರು ನನ್ನ ಮೂಗು ಬಾಯಿಗಳಿಂದ ನನ್ನ ಹೊಟ್ಟೆ ಹಾಗೂ ಶ್ವಾಸಕೋಶವನ್ನು ಸೇರಿಬಿಟ್ಟಿತ್ತು.  ಉಸಿರಾಡಲಾಗದೆ ಕೈ ಕಾಲು ಬಡಿಯುತ್ತಾ ಒದ್ದಾಡುತ್ತಿದ್ದ ನನ್ನನ್ನು ಮತ್ತೆ ದಡಕ್ಕೆಳೆದೊಯ್ದ ಗೆಳೆಯರು ಬೇಡ ಬೇಡವೆಂದರೂ ಮತ್ತೊಮ್ಮೆ ಅನಾಮತ್ತಾಗಿ ಬಾವಿಯೊಳಕ್ಕೆಸೆದಿದ್ದರು!  ಈ ಬಾರಿ ಬೆನ್ನ ಹಿಂದೆ ಹಗ್ಗದಿಂದ ಕಟ್ಟಿದ್ದ ತೆಂಗಿನಕಾಯಿಗಳು ನಾನು ಬಿದ್ದ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ, ನೀರಿನ ಮೇಲೆ ಬಂದು ತೇಲುತ್ತಿದ್ದವು, ನಾನು ಮಾತ್ರ ಬಾವಿಯ ತಳ ಕಚ್ಚಿಕೊಂಡಿದ್ದೆ!  ಇದನ್ನು ಕಂಡು ಒಮ್ಮೆಗೇ ಬಾವಿಗೆ ಧುಮುಕಿದ ನನ್ನಿಬ್ಬರು ಗೆಳೆಯರು ತಳ ಕಚ್ಚಿದ್ದ ನನ್ನನ್ನು ದಡಕ್ಕೆ ಹೊತ್ತು ತಂದಿದ್ದರು.  ಬೋರಲಾಗಿ ಮಲಗಿಸಿ ಚೆನ್ನಾಗಿ ತುಳಿದು ಕುಡಿದಿದ್ದ ನೀರನ್ನೆಲ್ಲಾ ಕಕ್ಕಿಸಿದ್ದರು, ಆದರೆ ಈ ಬಾರಿ ನೀರಿನ ಹೊಡೆತ ಜೋರಾಗಿಯೇ ಇತ್ತು.  ಅಂದು ಹಿಡಿದ ಜ್ವರ ಸುಮಾರು ಒಂದು ವಾರ ಬಿಡದೆ ಕಾಡಿತ್ತು!  ಈಜು ಕಲಿಯಬೇಕೆಂಬ ನನ್ನಾಸೆಗೆ ಎಳ್ಳು ನೀರು ಬಿಟ್ಟಿತ್ತು. 

ಅದೆಷ್ಟೋ ಸಲ ರಜಾದಿನಗಳಲ್ಲಿ ಹೊಳೆನರಸೀಪುರಕ್ಕೆ ಹೋಗುತ್ತಿದ್ದೆ, ಬೆಳಿಗ್ಗೆ ಹಾಗೂ ಸಂಜೆ ಹೇಮಾವತಿಯ ದಡದಲ್ಲಿ ಹೋಗಿ ನೀರಿನಲ್ಲಿ ಕಾಲಾಡಿಸುತ್ತಾ ಕುಳಿತಿರುತ್ತಿದ್ದೆ!  ಯಾವ ಅಳುಕಿಲ್ಲದೆ ರಭಸವಾಗಿ ಹರಿಯುವ ನೀರಿಗೆ ಧುಮುಕಿ ಮೀನುಗಳಂತೆ ಈಜುವ ಹುಡುಗರನ್ನು ನೋಡಿ ಖುಷಿಪಡುತ್ತಿದ್ದೆ.  ಆದರೆ ಧೈರ್ಯ ಮಾಡಿ ನಾನು ನೀರಿಗಿಳಿದಾಗ ಮಾತ್ರ ಆ ಹುಡುಗರ ರೀತಿಯಲ್ಲಿ ಈಜಲು ನನಗೆ ಸಾಧ್ಯವಾಗುತ್ತಿರಲಿಲ್ಲ!  ನನ್ನನ್ನು ನಾನು ಬೈದುಕೊಂಡು, ಸುಮ್ಮನೆ ಸ್ನಾನ ಮಾಡಿ ದಡಕ್ಕೆ ಬರುತ್ತಿದ್ದೆ.   

ಈಗ ದುಬೈಗೆ ಬಂದ ನಂತರವೂ ಇಲ್ಲಿನ ಪ್ರಸಿದ್ಧ ಜುಮೈರಾ ಬೀಚಿಗೆ ಎಷ್ಟೋ ಸಲ ಹೋಗಿದ್ದೇನೆ.  ಕೈಕಾಲು ಆಡಿಸುತ್ತಾ ಆ ಉಪ್ಪು ನೀರಿನಲ್ಲಿ ಬಿದ್ದು ಒದ್ದಾಡಿದ್ದೇನೆ, ಕುತ್ತಿಗೆ ಮಟ್ಟದ ನೀರಿನವರೆಗೂ ಹೋಗಿ ಬಂದಿದ್ದೇನೆ, ಮುಖ ಮೇಲು ಮಾಡಿ ಸತ್ತ ಹೆಣದಂತೆ ತೇಲಿದ್ದೇನೆ, ಆದರೆ ಭರ್ಜರಿಯಾಗಿ ಕೈ ಕಾಲು ಆಡಿಸುತ್ತಾ ಈಜು ಹೊಡೆಯುವುದು ಮಾತ್ರ ಇಂದಿಗೂ ಕನಸಾಗಿಯೇ ಉಳಿದಿದೆ.   ಏನೆಲ್ಲಾ ವಿದ್ಯೆಗಳನ್ನು ಕಲಿತು ದೇಶ ವಿದೇಶ ಸುತ್ತಿದರೂ, ಇದೊಂದು ಈಜುವಿದ್ಯೆ ಮಾತ್ರ ನನ್ನ ಕೈಗೆಟುಕದ ಗಗನಕುಸುಮವಾಗಿಯೇ ಉಳಿದುಬಿಟ್ಟಿದೆ. 

Friday, April 10, 2015

ಭ್ರಮೆಗಳ ನಡುವೆ......

ಭ್ರಮೆಗಳ ನಡುವಿನ
ಬದುಕಿನ ಕದನ
ಬಿಕ್ಕುಗಳ ನಡುವೆ
ಹುಟ್ಟಿತೊಂದು ಕವನ!
ಸಂಘರ್ಷದ ಜೊತೆಗಿನ
ಸುದೀರ್ಘ ಪಯಣ
ಗುರಿ ಸೇರುವ ಮುನ್ನ
ಮುಚ್ಚದಿರಲಿ ನಯನ!
ಕಾರಿರುಳಿನ ಒಂಟಿ ಯಾನ
ಕಡಲಲೆಗಳ ಜಂಟಿ ಗಾನ
ಕುಟಿಲ ತಂತ್ರಗಳ ಆಸ್ಥಾನ
ವಿಜಯಮಾಲೆಯ ಕನಸಿನ
ತನನ ತನನ ತನನ!!!

Saturday, April 4, 2015

ಗ್ರಹಣ ಬಿಡುತ್ತಿದೆಯಲ್ಲಾ!

ಗ್ರಹಣ ಹಿಡಿದಿತ್ತು ಕಣೇ 
ತುಂಬು ಬಾಳಿಗೆ!
ಗ್ರಹಣ ಬಿಡುವ ಸಮಯ 
ಹಾವು ಪೊರೆಯ ಬಿಟ್ಟಂತೆ!
ಬಲು ನೋವು ಬಲು ನೋವು
ಅದಷ್ಟು ಸುಲಭವಲ್ಲ!
ಆದರೂ ನೋವಲ್ಲೂ ಖುಷಿ ಕಣೆ
ಗ್ರಹಣ ಬಿಡುತ್ತಿದೆಯಲ್ಲಾ!  :-) 

ಅರಬ್ಬರ ನಾಡಿನಲ್ಲಿ - ೧೬ - ಹರ್ಷದ ಹಿಂದೆಯೇ ಹೊಂಚು ಹಾಕುವ ಸಾವು!




ದಿನಾಂಕ ೨/೩/೨೦೧೫ರಂದು ನಾನು ಕೆಲಸ ಮಾಡುವ ಸಮೂಹದ ಒಂದು ಹೋಟೆಲ್ಲಿನಲ್ಲಿ "ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ" ಆಯೋಜಿಸಿದ್ದರು.  ಹೋಟೆಲ್ಲಿನಲ್ಲಿ ಕೆಲಸ ಮಾಡುವ ಎಲ್ಲ  ಕಾರ್ಮಿಕರು ಬಗೆಬಗೆಯ ಉಡುಪು ಧರಿಸಿ ತಮ್ಮ ಕಲಾಚಾತುರ್ಯವನ್ನು ತೋರಿಸಲು ಸಿದ್ಧರಾಗಿ ಬಂದಿದ್ದರು. ಕೆಲವರು ಹಾಡು ಹೇಳಿದರೆ ಮತ್ತೆ ಕೆಲವರು ಜನಪ್ರಿಯ ಚಿತ್ರಗೀತೆಗಳಿಗೆ ನೃತ್ಯ ಮಾಡಿ ತಮ್ಮ ಪ್ರತಿಭೆ ತೋರಿಸುತ್ತಿದ್ದರು. ಭಾರತ, ಪಾಕಿಸ್ತಾನ, ನೇಪಾಳ, ಫಿಲಿಫೈನ್ಸ್, ನೈಜೀರಿಯಾ, ಭೂತಾನ್, ಇಂಡೋನೇಶಿಯಾ, ಬಾಂಗ್ಲಾದೇಶ, ಶ್ರೀಲಂಕಾ ಹೀಗೆ ಹಲವಾರು ದೇಶಗಳಿಂದ ಉದ್ಯೋಗಕ್ಕಾಗಿ ಬಂದವರು ತಮ್ಮೆಲ್ಲ ಬೇಧಭಾವಗಳನ್ನು ಮರೆತು ಒಂದೇ ಕುಟುಂಬದಂತೆ ಬದುಕುತ್ತಿರುವ ವಲಸೆ ಹಕ್ಕಿಗಳೆಲ್ಲ ಒಂದೆ ಸೂರಿನಡಿಯಲ್ಲಿ ಸಂತೋಷವಾಗಿದ್ದ ಕ್ಷಣವದು.  ಕುವೆಂಪುರವರ ವಿಶ್ವಮಾನವತತ್ವವನ್ನು " ಮನುಜ ಕುಲಂ ತಾನೊಂದೆ ವಲಂ"  ನುಡಿಯನ್ನು ಎತ್ತಿಹಿಡಿದ ಘಳಿಗೆಯದು.  ಹೋಟೆಲ್ಲಿನ ಮುಖ್ಯಸ್ಥರು ಈ ವರ್ಷದ ಆಗು ಹೋಗುಗಳನ್ನೆಲ್ಲ ವಿವರಿಸಿ ಉತ್ತಮ ಕೆಲಸಗಾರರಿಗೆ ಬಹುಮಾನಗಳನ್ನು ವಿತರಿಸಿದರು. ಒಟ್ಟಾರೆ ಹರ್ಷದ ವಾತಾವರಣ ಎಲ್ಲೆಡೆ ತುಂಬಿತ್ತು, ಎಲ್ಲರ ಮುಖದಲ್ಲೂ ಅದಮ್ಯ ಉತ್ಸಾಹ ಎದ್ದು ಕಾಣುತ್ತಿತ್ತು. ಎರಡು ಹೋಟೆಲ್ಲುಗಳ ಭದ್ರತೆಯ ಉಸ್ತುವಾರಿ ವಹಿಸಿದ್ದ ನಾನೂ ಸಹ ಕಾರ್ಯಕ್ರಮದಲ್ಲಿ ನನ್ನ ತಂಡದೊಡನೆ ಭಾಗಿಯಾಗಿದ್ದೆ.  ಕಾರ್ಯಕ್ರಮ ಯಾವುದೇ ವಿಘ್ನವಿಲ್ಲದೆ ನಡೆಯುವುದು ಹಾಗೂ ಅದೇ ಸಮಯದಲ್ಲಿ ಹೋಟೆಲ್ಲಿನಲ್ಲಿದ್ದ ಅತಿಥಿಗಳ ಹಾಗೂ ಎಲ್ಲ ಕೆಲಸಗಾರರ ಭದ್ರತೆಯನ್ನು ನೋಡಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿತ್ತು!

ಇದೇ ಸಮಯದಲ್ಲಿ ನಮ್ಮ ಹೋಟೆಲ್ಲಿನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ರಿಚರ್ಡ್ ಎನ್ನುವವರು, ತುಂಬಾ ಒಳ್ಳೆಯ ವ್ಯಕ್ತಿ, ಎಲ್ಲರೊಡನೆ ಉತ್ತಮ ಸ್ನೇಹವನ್ನು ಹೊಂದಿದ್ದು, ನಗುನಗುತ್ತಾ ಮಾತನಾಡುತ್ತಾ, ಎಲ್ಲರನ್ನೂ ನಗಿಸುತ್ತಾ ಸದಾ ಚೈತನ್ಯದ ಚಿಲುಮೆಯಂತಿದ್ದವರು, ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.  ಅವರ ಜೊತೆಯಲ್ಲಿಯೇ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ಅಂತೋಣಿ ಎಂಬಾತ ಇವರನ್ನು ಹುಡುಕುತ್ತಾ ಹೋಗಿದ್ದಾರೆ.  ಕೆಳಮಹಡಿಯ ಉಗ್ರಾಣದಲ್ಲಿ ಕುರ್ಚಿಯ ಮೇಲೆ ಕುಳಿತು  ನಿದ್ರಿಸುತ್ತಿದ್ದ ರಿಚರ್ಡ್ ಅವರನ್ನು ಕಂಡು ಅರೆ, ಇನ್ನೂ ಮಲಗಿದ್ದೀರಲ್ಲಾ, ಅಲ್ಲಿ ಕಾರ್ಯಕ್ರಮ ನಡೆಯುತ್ತಿದೆ, ಎಲ್ಲರೂ ನಿಮ್ಮನ್ನು ಕೇಳುತ್ತಿದ್ದಾರೆ, ಎದ್ದೇಳಿ ಹೋಗೋಣ ಎಂದು ಅಲುಗಾಡಿಸಿದ್ದಾರೆ.  ಆದರೆ ಕುಳಿತ ಭಂಗಿಯಲ್ಲಿದ್ದ ರಿಚರ್ಡ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ!  ಗಾಭರಿಯಾದ ಆಂತೋಣಿ ತಕ್ಷಣ ಕಾರ್ಯಕ್ರಮ ನಡೆಯುತ್ತಿದ್ದ ಮೇಲ್ಮಹಡಿಗೆ ಬಂದು ತನ್ನ ಮೇಲ್ವಿಚಾರಕರಿಗೆ ಸುದ್ಧಿ ಮುಟ್ಟಿಸಿದ್ದಾನೆ.  ಶ್ರೀಲಂಕಾದ ಆ ಮೇಲ್ವಿಚಾರಕರು  ತಕ್ಷಣ ನನ್ನ ಬಳಿಗೆ ಬಂದು ಪರಿಸ್ಥಿತಿಯನ್ನು ವಿವರಿಸಿದರು, ಒಡನೆಯೇ ನಾವಿಬ್ಬರೂ ಕೆಳಮಹಡಿಯ ಉಗ್ರಾಣಕ್ಕೆ ಬಂದೆವು. ಕುಳಿತ ಭಂಗಿಯಲ್ಲಿದ್ದ ರಿಚರ್ಡ್ ಅವರನ್ನು ನೋಡುತ್ತಿದ್ದಂತೆಯೇ ನನ್ನ ಅನುಭವಿ ಕಣ್ಣುಗಳಿಗೆ ಆತ ಇನ್ನಿಲ್ಲವೆಂಬ ಸತ್ಯ ಗೊತ್ತಾಗಿ ಹೋಯಿತು.  ತಕ್ಷಣವೇ ಹೋಟೆಲ್ಲಿನ ಮುಖ್ಯಸ್ಥರನ್ನು ಸ್ಥಳಕ್ಕೆ ಕರೆತರುವಂತೆ, ಕಾರ್ಯಕ್ರಮದ ನಡುವೆ ಯಾರಿಗೂ ವಿಚಾರ ಗೊತ್ತಾಗದಂತೆ ಗೌಪ್ಯತೆಯನ್ನು ಕಾಯ್ದುಕೊಳ್ಳುವಂತೆ ತಾಕೀತು ಮಾಡಿ  ನನ್ನೊಬ್ಬ ಸಹಾಯಕನನ್ನು ಕಳುಹಿಸಿದೆ.  ಎರಡು ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಮುಖಸ್ಥರಿಗೆ ವಿಚಾರ ತಿಳಿಸಿ ಅವರ ನಿರ್ದೇಶನದಂತೆ ತಕ್ಷಣ ಪೊಲೀಸ್ ಹಾಗೂ ಆಂಬುಲೆನ್ಸ್ ವಾಹನಕ್ಕೆ ಫೋನ್ ಮಾಡಿ, ಆ ಸ್ಥಳಕ್ಕೆ ಯಾರೂ ಬರದಂತೆ ಎಲ್ಲ  ಭದ್ರಪಡಿಸಿ, ಕಾರ್ಯಕ್ರಮ ನಡೆಯುತ್ತಿದ್ದ ಮೇಲ್ಮಹಡಿಗೆ ಬಂದು, ಅಲ್ಲಿದ್ದ ಮಾನವ ಸಂಪನ್ಮೂಲ ಅಧಿಕಾರಿಗೆ  ಕಾರ್ಯಕ್ರಮವನ್ನು ಸಾಂಗವಾಗಿ ಮುಗಿಸುವಂತೆ ತಿಳಿಸಿದೆ. 

ಕೇವಲ ಐದು ನಿಮಿಷಗಳಲ್ಲಿ ಹೋಟೆಲ್ಲಿಗೆ ಆಗಮಿಸಿದ ಆಂಬುಲೆನ್ಸ್ ವಾಹನದಲ್ಲಿದ್ದ ವೈದ್ಯಕೀಯ ಸಿಬ್ಬಂದಿಯವರು ರಿಚರ್ಡ್ ಅವರ ದೇಹವನ್ನು ಪರೀಕ್ಷಿಸಿ ಅವರು ನಿಧನ ಹೊಂದಿರುವುದನ್ನು ಧೃಡಪಡಿಸಿದರು. ಅವರ ಜೊತೆಗೇ ಬಂದ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಮ್ಮಿಂದ ಎಲ್ಲಾ ವಿವರಗಳನ್ನೂ ಪಡೆದುಕೊಂಡರು.   ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದ್ದ ಎಲ್ಲ ದೃಶ್ಯಾವಳಿಗಳನ್ನು ವೀಕ್ಷಿಸಿ, ರಿಚರ್ಡ್ ಅಲ್ಲಿ ಹೋಗಿ ಕುಳಿತ ನಂತರ ಆ ಜಾಗಕ್ಕೆ ಬಂದಿದ್ದ ಮೂವರು ಕೆಲಸಗಾರರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಬರುವಂತೆ ಆದೇಶಿಸಿದರು.  ನಂತರದ ಹತ್ತು ನಿಮಿಷಗಳಲ್ಲಿ ಬಂದ ಶವ ವಾಹನದಲ್ಲಿ ರಿಚರ್ಡ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಶೀದ್ ಆಸ್ಪತ್ರೆಗೆ ಸಾಗಿಸಲಾಯಿತು.  ಶವವಾಹನದ ಜೊತೆಗೆ ಬಂದಿದ್ದ ಕೇವಲ ಇಬ್ಬರು ಸಿಬ್ಬಂದಿಗೆ ರಿಚರ್ಡ್ ಅವರ  ದೇಹವನ್ನು ವಾಹನಕ್ಕೆ ಸಾಗಿಸಲು ನಾನು ಹಾಗೂ ನನ್ನೊಬ್ಬ ಸಹಾಯಕ ಕೈ ಜೋಡಿಸಿದೆವು. ನನ್ನ ಕಾಲು ಶತಮಾನದ ವೃತ್ತಿಜೀವನದಲ್ಲಿ ನಾನು ಕೈಜೋಡಿಸಿ ಸಾಗಿಸಿದ ಹತ್ತೊಂಭತ್ತನೆಯ ದೇಹ ಇದಾಗಿತ್ತು.  ಆ ಸ್ಥಿತಿಯಲ್ಲಿ ನನ್ನ ಮನದಲ್ಲಿ ಮೂಡಿ ಬಂದಿದ್ದು ವೀರಬಾಹುವಾಗಿ ಮಸಣ ಕಾದ ರಾಜ ಸತ್ಯ ಹರಿಶ್ಚಂದ್ರನ ಚಿತ್ರ!  

ಕೇವಲ ಮುಕ್ಕಾಲು ಘಂಟೆಯಲ್ಲಿ ಇಡೀ ಕಾರ್ಯಾಚರಣೆ ಮುಕ್ತಾಯವಾಗಿತ್ತು.  ಮೇಲ್ಮಹಡಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ, ಕೆಳಮಹಡಿಯಲ್ಲಿ ನಡೆದ ದುರ್ಘಟನೆಯ ವಾಸನೆಯಿಲ್ಲದೆ ಸಾಂಗವಾಗಿ ಮುಗಿದಿತ್ತು!  ಆದರೆ ಕಾರ್ಯಕ್ರಮ ಮುಗಿದ ನಂತರ ಅದು ಹೇಗೋ ವಿಷಯ ಒಬ್ಬರಿಂದೊಬ್ಬರಿಗೆ ಗೊತ್ತಾಗಿ ಇಡೀ ಹೋಟೆಲ್ ಸಿಬ್ಬಂದಿ ದಂಗಾಗಿ ಹೋಗಿದ್ದರು!   ಅದುವರೆಗೂ ಸಂತೋಷದಿಂದ ಕಾರ್ಯಕ್ರಮದಲ್ಲಿ ನಕ್ಕು ನಲಿದ್ದಿದ್ದವರೆಲ್ಲರ ಮುಖದಲ್ಲೂ ಒಮ್ಮೆಗೇ ದುಗುಡ, ವಿಷಾದ, ಸೂತಕದ ಛಾಯೆಗಳು ಮೇಳೈಸಿದ್ದವು. ಭಾರವಾದ ಹೃದಯದಿಂದ ಎಲ್ಲರೂ ವಸತಿಗೃಹಕ್ಕೆ ತೆರಳಿದ್ದರು. ಅದುವರೆವಿಗೂ ಹರ್ಷದ ಕಾರಂಜಿಗಳಂತೆ ನುಲಿದಾಡುತ್ತಿದ್ದ ಹೆಣ್ಣು ಮಕ್ಕಳ ಕಂಗಳಲ್ಲಿ ಕಂಬನಿಯ ಧಾರೆ ಕೋಡಿ ಹರಿದಿತ್ತು.  ವಾರ್ಷಿಕ ಸಂತೋಷಕೂಟದ ದಿನವೇ ಸ್ನೇಹಿತನೊಬ್ಬನನ್ನು ಕಳೆದುಕೊಂಡ ದುಃಖ ಎಲ್ಲರನ್ನೂ ಗಾಢವಾಗಿ ಕಾಡಿತ್ತು. ಹರ್ಷದ ಹಿಂದೆಯೇ ಹೊಂಚು ಹಾಕಿ ಕಾದಿದ್ದ ಸಾವಿನ ಭಯಾನಕತೆ ಅಲ್ಲಿ ಅನಾವರಣಗೊಂಡಿತ್ತು! 

ನನ್ನ ಪ್ರಾಥಮಿಕ ತನಿಖೆಯಿಂದ ನನಗೆ ತಿಳಿದು ಬಂದ ಅಂಶಗಳು ಹೀಗಿವೆ.  ರಿಚರ್ಡ್ ಎಂದಿನಂತೆ ಎಲ್ಲರೊಡನೆ ಮೊದಲನೇ ಪಾಳಿಯಲ್ಲಿ ತಮ್ಮ ಕೆಲಸಕ್ಕೆ ಬಂದಿದ್ದಾರೆ. ಮಧ್ಯಾಹ್ನ ಮೂರಕ್ಕೆ ವಸತಿಗೃಹಕ್ಕೆ ತೆರಳಿ ಮತ್ತೆ ಸಂಜೆ ಐದೂವರೆಯ ಬಸ್ಸಿನಲ್ಲಿ ಇತರ ಕೆಲಸಗಾರರೊಡನೆ ಕಾರ್ಯಕ್ರಮಕ್ಕಾಗಿ ಬಂದಿದ್ದಾರೆ. ಎಲ್ಲರೂ ಮೇಲ್ಮಹಡಿಯಲ್ಲಿ ಕಾರ್ಯಕ್ರಮಕ್ಕಾಗಿ ತಯಾರಿಯಲ್ಲಿ ತೊಡಗಿಕೊಂಡಿದ್ದಾಗ ರಿಚರ್ಡ್ ಮಾತ್ರ ತಾನು ಸುಸ್ತಾಗಿರುವುದಾಗಿಯೂ, ಸ್ವಲ್ಪ ಹೊತ್ತು ವಿಶ್ರಮಿಸಿ ಎಂಟು ಘಂಟೆಯ ನಂತರ ಮೇಲಕ್ಕೆ ಬರುವುದಾಗಿ ಹೇಳಿ ಕೆಳಮಹಡಿಯ ಉಗ್ರಾಣದಲ್ಲಿ ಒಂದು ಕುರ್ಚಿಯ ಮೇಲೆ ಕುಳಿತು ಇನ್ನೊಂದು ಕುರ್ಚಿಯ ಮೇಲೆ ಕಾಲನ್ನಿಟ್ಟು ನಿದ್ದೆಗೆ ಜಾರಿದ್ದಾರೆ. ಅವರು ಅಲ್ಲಿ ಕುಳಿತ ನಂತರ ಯಾವುದೋ ಸಾಮಾನುಗಳನ್ನು ತರಲು ಅಲ್ಲಿಗೆ ತೆರಳಿದ್ದ ಮೂವರು ಕಾರ್ಮಿಕರು ರಿಚರ್ಡ್ ಗೊರಕೆ ಹೊಡೆಯುತ್ತಾ ಗಾಢ ನಿದ್ದೆಯಲ್ಲಿದ್ದುದನ್ನು ಗಮನಿಸಿದ್ದಾರೆ.   ಆದರೆ ಕೊನೆಯಲ್ಲಿ, ಸುಮಾರು ಎರಡು ಘಂಟೆಗಳ ನಂತರ,  ಅಲ್ಲಿಗೆ ಬಂದ ರಿಚರ್ಡ್ ಗೆಳೆಯ ಆಂತೋಣಿ ಮಾತ್ರ ಅವರನ್ನು ನಿರ್ಜೆವವಾಗಿ ನೋಡಿದ್ದಾನೆ. ಅಂದರೆ ಅಲ್ಲಿ ಬಂದು ಕುಳಿತು ನಿದ್ರೆ ಮಾಡುತ್ತಿದ್ದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ.  "ಹೃದಯ ಸ್ತಂಭನ"ವೇ ಅವರ ಸಾವಿಗೆ ಕಾರಣವಾಯಿತೇ?  ನೋಡಲು ಗಟ್ಟಿಮುಟ್ಟಾಗಿದ್ದ ಆರಡಿ ಎತ್ತರದ ಆಜಾನುಬಾಹು ವ್ಯಕ್ತಿತ್ವದ ಹೃದಯ ಅಷ್ಟೊಂದು ಬಲಹೀನವಾಗಿತ್ತೇ? ಉತ್ತರವಿಲ್ಲದ ಪ್ರಶ್ನೆಗಳು ನನ್ನ ತಲೆಯ ತುಂಬಾ ಸುತ್ತುತ್ತಿವೆ. 

ಆಂತೋಣಿ ಮತ್ತು ಇನ್ನಿಬ್ಬರನ್ನು ಪೊಲೀಸ್ ಠಾಣಿಗೆ ಹೇಳಿಕೆ ದಾಖಲಿಸಲು ನನ್ನ ಕಾರಿನಲ್ಲೇ ಕರೆದೊಯ್ಯುವಾಗ ದಾರಿಯುದ್ಧಕ್ಕೂ ಅಂತೋಣಿಯ ಕಣ್ಣಲ್ಲಿ ಕಂಬನಿ ಹರಿಯುತ್ತಿತ್ತು.  ಒಂದೇ ಕೊಠಡಿಯಲ್ಲಿ ರಿಚರ್ಡ್ ಒಟ್ಟಿಗೆ ಇರುತ್ತಿದ್ದ ಆಂತೋಣಿಗೆ ಅವರ ಸಾವಿನಿಂದ ಆಘಾತವಾಗಿತ್ತು, ಪ್ರತಿದಿನ ಅವರಿಬ್ಬರ ನಡುವೆ ನಡೆಯುತ್ತಿದ್ದ ತಮಾಷೆಯ ಪ್ರಸಂಗಗಳನ್ನು ಹೇಳಿಕೊಂಡು ರೋದಿಸುತ್ತಿದ್ದ. ಕೊನೆಗೆ ನನಗೆ ತುಟಿಗಳೆಲ್ಲ ಒಣಗುತ್ತಿವೆ, ಎದೆಯೊಳಗೆ ನೋವಾಗುತ್ತಿದೆ ಎಂದಾಗ ನಾನು ಗಾಭರಿಯಾಗಿದ್ದೆ.  ನನಗೆ ತಿಳಿದ ಮಟ್ಟಿಗೆ ಅವನನ್ನು ಸಾಂತ್ವನಗೊಳಿಸಿ, ಪೊಲೀಸ್ ಠಾಣೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಆಂತೋಣಿಯ ಪರಿಸ್ಥಿತಿಯನ್ನು ವಿವರಿಸಿ, ಆದಷ್ಟು ಬೇಗ ಅವರೆಲ್ಲರ ಹೇಳಿಕೆ ದಾಖಲಾತಿಯನ್ನು ಮುಗಿಸಿ ಅವರನ್ನು ವಸತಿಗೃಹಕ್ಕೆ ತಲುಪಿಸಿ ನನ್ನ ಕೊಠಡಿಗೆ ಬಂದಾಗ ಬೆಳಿಗ್ಗೆ ಮೂರು ಘಂಟೆಯಾಗಿತ್ತು!  

ಇದೇ ಸಮಯದಲ್ಲಿ ಅವರ ಕುಟುಂಬದವರಿಗೆ ವಿಷಯ ತಿಳಿಸಲಾಗಿದೆ, ರಿಚರ್ಡ್ ಅವರ ದೇಹವಿನ್ನೂ ರಶೀದ್ ಆಸ್ಪತ್ರೆಯ ಶೈತ್ಯಾಗಾರದಲ್ಲಿದೆ, ಭಾನುವಾರ ಎಲ್ಲ ದಾಖಲಾತಿ ಪ್ರಕ್ರಿಯೆಗಳನ್ನು ಮುಗಿಸಿ, ಅವರ ದೇಹವನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿದೆ.  ರಿಚರ್ಡ್ ಕಳೆದ ತಿಂಗಳಷ್ಟೇ ರಜೆಗೆಂದು ಊರಿಗೆ ಹೋಗಿ ಬಂದಿದ್ದರು, ಅವರಿಗೆ ಒಬ್ಬ ಮಗನಿದ್ದಾನೆ, ಆದರೆ ಅವರ ಪತ್ನಿ ಈಗ ಗರ್ಭಿಣಿಯಂತೆ!  ಆ ಹೆಣ್ಣುಮಗಳು ಈ ಸ್ಥಿತಿಯಲ್ಲಿ ತನ್ನ ಗಂಡನ ಸಾವಿನ ಸುದ್ಧಿಯನ್ನು ಹೇಗೆ ಸ್ವೀಕರಿಸುತ್ತಾಳೋ?  ಅವರ ಕುಟುಂಬದವರಿಗೆ ಆ ದೇವರು ಅವರ ಅಗಲುವಿಕೆಯ ಶಕ್ತಿಯನ್ನು ಸಹಿಸುವ ಶಕ್ತಿ ನೀಡಲಿ. ಕ್ರೈಸ್ತರಿಗೆ ಪವಿತ್ರ ದಿನವಾದ "ಶುಭ ಶುಕ್ರವಾರ"ದ ಹಿಂದಿನ ದಿನವೇ ರಿಚರ್ಡ್ ಅವರ ದೇಹಾಂತ್ಯವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಗಲ್ಫ್ ದೇಶಗಳಲ್ಲಿರುವವರು ಬೇಕಾದಷ್ಟು ಹಣ ಸಂಪಾದನೆ ಮಾಡುವ ಯಂತ್ರಗಳೆಂದು ಎಲ್ಲರೂ ತಿಳಿದಿರುತ್ತಾರೆ, ಆದರೆ ತಮ್ಮವರನ್ನೆಲ್ಲ ಬಿಟ್ಟು ಬಂದು, ತಮ್ಮವರ ಏಳಿಗೆಗಾಗಿ ಹಗಲಿರುಳೂ ದುಡಿಯುತ್ತಾ, ಅನಾಥರಂತೆ ಬದುಕುವ  ಅವರ ಹೃದಯಗಳು ಸಾಕಷ್ಟು ಬಲಹೀನವಾಗಿರುತ್ತವೆ, ಯಾವಾಗ ಬೇಕಾದರೂ ಸ್ತಬ್ಧವಾಗಿ ಬಿಡುತ್ತವೆ ಎನ್ನುವ ಕಟು ಸತ್ಯ ಮಾತ್ರ ಯಾರಿಗೂ ಅರ್ಥವಾಗುವುದೇ ಇಲ್ಲ!