Friday, April 15, 2016

ಶ್ರೀರಾಮನವಮಿಯ ಹಗದೂರಿನ ಬ್ರಹ್ಮರಥೋತ್ಸವದ ಚಿತ್ರ ಕಲಕಿದ ಚಿತ್ತ!


ಸುಮಾರು ೩೦ ವರ್ಷಗಳ ಸುದೀರ್ಘ ಸೇವೆಯ ನಂತರ ೨೦೦೨ರಲ್ಲಿ ನಿವೃತ್ತರಾದ ಅಮ್ಮ, ತಮ್ಮ ಕೈಗೆ ಬಂದ ಹಣದಲ್ಲಿ ಸೈಟೊಂದನ್ನು ಖರೀದಿಸಿ ಸ್ವಂತ ಮನೆ ಕಟ್ಟಬೇಕೆಂಬ ಆಲೋಚನೆಯಲ್ಲಿದ್ದರು.  ಆಗ ಲಗ್ಗೆರೆಯಲ್ಲಿದ್ದ ನಾನು ಇಲ್ಲಿಗೇ ಬನ್ನಿ, ಇಲ್ಲಿಯೇ ಒಂದು ಸೈಟು ತೊಗೊಂಡು ದೊಡ್ಡದೊಂದು ಮನೆಯನ್ನು ಕಟ್ಟಿ ಎಲ್ಲರೂ ಒಟ್ಟಿಗೇ ಇರೋಣ ಎಂದಿದ್ದೆ.   ಆಯಿತು, ನಿಮ್ಮಪ್ಪನನ್ನೊಂದು ಮಾತು ಕೇಳಿ ಹೇಳುತ್ತೇನೆ ಎಂದು ಹೇಳಿ ಹೋದ ನನ್ನ ಅಮ್ಮ ಮತ್ತೆ ನನ್ನ ಮನೆಗೆ ಬರಲೇ ಇಲ್ಲ!  ಅದಕ್ಕೆ ಕಾರಣ ಅಪ್ಪ ಹೇಳಿದ ಮಾತು, "ಅವನು ಮಾಡಿದ ಮನೆಗೆ ನಾನು ಹೋಗುವುದಾ?  ನಾನು ಮಾಡುವ ಮನೆಗೆ ಅವನನ್ನೇ ಬರಲು ಹೇಳು, ನಾನು ಅಲ್ಲಿಗೆ ಬರುವುದಿಲ್ಲ!"  ಹೀಗಾಗಿ ಅಪ್ಪನ ಮಾತಿಗೆ ಕಟ್ಟು ಬಿದ್ದ ಅಮ್ಮ ಅವರಿಚ್ಛೆಯಂತೆ, ಅಪ್ಪನ ಹುಟ್ಟೂರಾದ ಹಗದೂರಿನಲ್ಲಿ ಒಂದು ೫೦/೬೦ ಅಳತೆಯ ಸೈಟು ತೆಗೆದು ಮನೆ ಕಟ್ಟಿಸಿದ್ದರು.  ಇಬ್ಬರು ಗಂಡು ಮಕ್ಕಳೊಡನೆ, ಸೊಸೆ ಮೊಮ್ಮಕ್ಕಳೊಡನೆ ಇರಬೇಕೆಂಬ ಆಸೆ ಮನದಲ್ಲಿದ್ದರೂ ಅಪ್ಪನಿಗೆ ನನ್ನ ಮೇಲಿದ್ದ ಕೋಪ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ!  ನನ್ನ ಮೇಲೆ ಅವರಿಗಿರುವ ಕೋಪಕ್ಕೆ ನಿಮ್ಮೆಲ್ಲರ ನೆಮ್ಮದಿ ಹಾಳಾಗುವುದು ಬೇಡ, ನೀವು ಚೆನ್ನಾಗಿರಿ ಎಂದು ನಾನು ದೂರದ ಲಗ್ಗೆರೆಯಲ್ಲಿ, ನನ್ನ ಪುಟ್ಟ ಬಾಡಿಗೆ ಮನೆಯಲ್ಲಿಯೇ ಉಳಿದಿದ್ದೆ!

ಮನೆ ಕಟ್ಟಿದ ನಂತರ  ತಮ್ಮನ ಅದೃಷ್ಟ ಖುಲಾಯಿಸಿ ದುಬೈನಲ್ಲಿ ಕೆಲಸ ಸಿಕ್ಕಿತ್ತು.  ಗೃಹಪ್ರವೇಶ ಮುಗಿಸಿ ತಮ್ಮ ದುಬೈಗೆ ಹೊರಟುಬಿಟ್ಟಿದ್ದ, ಆಗಲೂ ನನ್ನ ಮೇಲೆ ಕರುಬಿದ ಅಪ್ಪ, ತನ್ನ ಕಟು ಮಾತುಗಳ ಗದಾಪ್ರಹಾರವನ್ನು ಮುಂದುವರೆಸಿ ನನ್ನನ್ನೂ, ಪತ್ನಿಮಕ್ಕಳನ್ನೂ ಉಗಿದು ಹೊಸಮನೆಯಿಂದ ಆಚೆಗಟ್ಟಿದ್ದ!  ಅಲ್ಲಿಂದ ಅವಮಾನಿತರಾಗಿ ಬಂದ ನಮ್ಮ ಮನೆಯಲ್ಲಿ ಮೂರು ದಿನಗಳ ಕಾಲ ನೀರವಮೌನ!  ನನ್ನ ಪುಟ್ಟ ಮಕ್ಕಳಿಬ್ಬರೂ ತಮ್ಮ ಮನಸ್ಸಿಗಾದ ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿದಿತ್ತು.

ಕಾಲಕ್ರಮೇಣ ಎಲ್ಲವನ್ನೂ  ಜೀವನ ನಿರಾಳವಾಗಿ ನಡೆಯುತ್ತಿದ್ದಾಗ ಅಮ್ಮ ಕೇಸೊಂದರಲ್ಲಿ ಸಿಲುಕಿಕೊಂಡು, ಮೊದಲೇ ಕೆಟ್ಟಿದ್ದ ಅವರ ಆರೋಗ್ಯ ಮತ್ತಷ್ಟು ಉಲ್ಬಣಿಸಿ, ಎರಡೂ ಕಿಡ್ನಿಗಳು ವಿಫಲವಾಗಿ, ಸುಮಾರು ಏಳೆಂಟು ತಿಂಗಳ ಹೋರಾಟದ ನಂತರ ಕಣ್ಮುಚ್ಚಿದ್ದರು.  ಅಮ್ಮನ ಅಂತ್ಯಸಂಸ್ಕಾರಕ್ಕೂ ದುಬೈನಿಂದ ಬರಲಾಗದ ತಮ್ಮಅಲ್ಲಿಂದಲೇ ಶ್ರದ್ಧಾಂಜಲಿ ಕೋರಿದ್ದ.  ಅಮ್ಮನ ಕ್ರಿಯಾಕರ್ಮಗಳನ್ನೆಲ್ಲ ಮುಗಿಸಿ ನಾವು ನಮ್ಮ ಮನೆಗೆ ಹೊರಟು ನಿಂತಾಗಲೂ ಅಮ್ಮನ ಒಡವೆಗಳನ್ನು ನನ್ನ ಹೆಂಡತಿ ಕದ್ದಿರಬಹುದೆಂಬ ಅನುಮಾನದಲ್ಲಿ ಅಪ್ಪ ಆರ್ಭಟಿಸಿದ್ದ!  ಆದರೆ ಅಮ್ಮನ ಒಡವೆಗಳೆಲ್ಲಾ ಎಲ್ಲಿದ್ದವೋ ಅಲ್ಲಿಯೇ ಭದ್ರವಾಗಿದ್ದವು, ನನ್ನ ಹೆಂಡತಿ ಅವುಗಳನ್ನು ಎಡಗೈನಲ್ಲಿಯೂ ಮುಟ್ಟಿರಲಿಲ್ಲ!  ಮತ್ತೊಮ್ಮೆ ಎಲ್ಲರೆದುರು ಅಪ್ಪನಿಂದ ಅವಮಾನಿತರಾಗಿ ಬಂದಿದ್ದೆವು.

ಅಪ್ಪ ಆ ದೊಡ್ಡ ಮನೆಯಲ್ಲಿ ಏಕಾಂಗಿಯಾಗಿದ್ದರು.  ತಾರಸಿಯ ಮೇಲೆ ಎರಡು ರೂಮುಗಳನ್ನು ಕಟ್ಟಿಸಿ ಒಂದರಲ್ಲಿ ತಾವಿದ್ದುಕೊಂಡು, ಇನ್ನೊಂದರಲ್ಲಿ ನನ್ನ ಎರಡನೆಯ ಅಕ್ಕನ ಸಂಸಾರವಿರಲು ಅವಕಾಶ ಮಾಡಿ ಕೊಟ್ಟು ಕೆಳಗಿನ ವಿಶಾಲ ಮನೆಯನ್ನು ಯಾರಿಗೋ ಬಾಡಿಗೆಗೆ ಕೊಟ್ಟಿದ್ದರು.   ಕಾಲ ಓಡುತ್ತಾ ಹೋದಂತೆ ದುಬೈನಲ್ಲಿದ್ದ  ತಮ್ಮ ಸಂಸಾರದೊಡನೆ ಹಿಂದಿರುಗಿ ಬಂದಿದ್ದ, ಅವನೊಡನೆಯೂ ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದು ಕಿತ್ತಾಡಿಕೊಂಡ ಅಪ್ಪ ಹೋಗಿ ತಿಪಟೂರು ಸೇರಿಕೊಂಡಿದ್ದರು.  ಉನ್ನತ ಉದ್ಯೋಗಗಳು ಅರಸಿ ಬಂದು ತಮ್ಮ ಮತ್ತೆ ಕುಟುಂಬದೊಡನೆ ದೆಹಲಿ ಸೇರಿಕೊಂಡ, ನನಗೆ ಉದ್ಯೋಗ ದೊರೆತು ನಾನು ಬಂದು ದುಬೈನಲ್ಲಿ ನೆಲೆ ನಿಂತೆ.

ಪುಟ್ಟ ಬಾಡಿಗೆ ಮನೆಯೊಂದರಲ್ಲಿ ಕ್ಯಾನ್ಸರ್ ಪೀಡಿತೆ ಅಕ್ಕ, ಅಪಘಾತಕ್ಕೀಡಾಗಿ ಮುಖ ಸೊಟ್ಟಗಾದ ಅವಳ ಮಗ, ಅವನ ಹೆಂಡತಿ, ಚಿನಕುರಳಿಯಂಥಾ ಅವರ ಪುಟ್ಟ ಮಗ ಮಾತ್ರ ಅಲ್ಲಿದ್ದಾರೆ. ಅಮ್ಮನ ಕನಸಿನ ಮನೆಯಲ್ಲಿ ಬಾಡಿಗೆದಾರರಿದ್ದಾರೆ!   ನಾನು ದುಬೈನಲ್ಲಿ, ತಮ್ಮನ ಕುಟುಂಬ ದೆಹಲಿಯಲ್ಲಿ, ಅಪ್ಪ ತಿಪಟೂರಿನಲ್ಲಿ!  ಒಂದೊಮ್ಮೆ ಎಲ್ಲರಂತೆ ಅಪ್ಪ ಸ್ಥಿತಪ್ರಜ್ಞನಾಗಿದ್ದು ಅಂದು ಜವಾಬ್ಧಾರಿಯಿಂದ ವರ್ತಿಸಿದ್ದಿದ್ದರೆ ನಮ್ಮ ಕೂಡು ಕುಟುಂಬ ಇಂದು ಹಗದೂರಿನಲ್ಲಿಯೇ ನೆಲೆಯಾಗಿ ನಿಂತಿರುತ್ತಿತ್ತು.  ನೀರವ ಮೌನ ತುಂಬಿರುವ ಆ ಮನೆಯಲ್ಲಿ ಸೊಸೆಯಂದಿರ ಮೊಮ್ಮಕ್ಕಳ ನಗು, ಕೇಕೆ, ಕಲರವ, ತುಂಟಾಟಗಳ ನಡುವೆ ೮೬ ವರ್ಷದ ಅಪ್ಪ ಕೊನೆಯದಿನಗಳನ್ನು ಸಂತಸಮಯವಾಗಿ ಕಳೆಯಬಹುದಿತ್ತು.  ಉದ್ಧಕ್ಕೂ ದುಡುಕುಬುದ್ಧಿ, ಆವೇಶ, ಕೋಪ, ದರ್ಪ, ಒಣಜಂಭಗಳಿಂದಲೇ ಬದುಕಿದ ಅಪ್ಪ ಈಗ ತನ್ನ ಕೊನೆಗಾಲದಲ್ಲಿಯೂ ತನ್ನ ಹಳೆಚಾಳಿಗೇ ಅಂಟಿಕೊಂಡು ಒಬ್ಬಂಟಿಯಾಗಿರುವುದು ಮಾತ್ರ ಈ ಬದುಕಿನ ಬಹು ದೊಡ್ಡ ವಿಪರ್ಯಾಸ.

ಬಹುಶಃ ಹಗದೂರಿನ ಸ್ಮಶಾನದಲ್ಲಿ ಮಲಗಿರುವ ಅಮ್ಮನ ಆತ್ಮ ಈ ಶ್ರೀರಾಮನವಮಿಯ ದಿನದಂದು ಮೌನವಾಗಿ ಬಿಕ್ಕುತ್ತಿರಬಹುದು!

No comments: