Tuesday, October 20, 2015

ಮಾಟ ಮಂತ್ರ ಮಾಯೆ,,ಭಯದ ಭೀಭತ್ಸ ಛಾಯೆ - ಭಾಗ ೨: ಮಿಡಿ ನಾಗರ ಕಡಿದಾಗ,,,,,,





ಅದೊಂದು ಅಮಾವಾಸ್ಯೆಯ ಸಂಜೆ, ದಿನಕರನಾಗಲೆ ತನ್ನ ದಿನದ ವ್ಯವಹಾರ ಮುಗಿಸಿ ಕೆಂಪಗಾಗಿ ಮನೆಯೆಡೆಗೆ ಓಡುತ್ತಿದ್ದ!  ಶಾಲೆಯ ಕೆಲಸ ಮುಗಿಸಿ ಬಸ್ಸಿಗಾಗಿ ಕಾಯುತ್ತಿದ್ದ ನಮ್ಮಲ್ಲಿಗೆ ಹುಡುಗನೊಬ್ಬ ಏದುಸಿರು ಬಿಡುತ್ತಾ ಓಡೋಡಿ ಬಂದು ಗೌಡ್ರ ಮನೆಗೆ ಬರಬೇಕಂತೆ ಅಂದಾಗ ವಿಧಿಯಿಲ್ಲದೆ ಎದ್ದು ಅವನೊಡನೆ ಹೆಜ್ಜೆ ಹಾಕಿದ್ದೆ. ಗೌಡರ ಮನೆ ತಲುಪಿದಾಗ ಅಲ್ಲಿ ಕಂಡ ದೃಶ್ಯ ಭಯಾನಕವಾಗಿತ್ತು!   ಭಯವೆಂದರೇನೆಂದೇ ಅರಿಯದ ನನ್ನ ಬೆನ್ನ ಹುರಿಯಲ್ಲಿಯೂ ಸಣ್ಣದೊಂದು ಛಳುಕು ಹೊಡೆದಂತಾಗಿತ್ತು.  ನಾನು ಅಲ್ಲಿಗೆ ಹೋಗುವಷ್ಟರಲ್ಲಿ  ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಹನುಮಂತೇಗೌಡರು ಸಹ ಬಂದಿದ್ದರು.  ಅವರ ಸಂಬಂಧಿಕ, ಶಿರಾದ ಬಳಿ ಯಾವುದೋ ಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ರಂಗಪ್ಪ ಗೌಡ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದ.  ಮನೆಯ ಹಾಲಿನಲ್ಲಿದ್ದ ಸಾಮಾನುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ತನ್ನ ಶರೀರದಲ್ಲಿ ಆಗುತ್ತಿದ್ದ ಅಪಾರ ನೋವಿನಿಂದ, ಉರಿಯಿಂದ ತಡೆದುಕೊಳ್ಳಲಾಗದೆ ಉರಿ, ಉರಿ ಎಂದು ಚೀರಾಡುತ್ತಿದ್ದ.  ಅವನ ಕಾಲಿನ ಹೆಬ್ಬೆರಳಿನಿಂದ ಶುರುವಾದ ಉರಿ ಕ್ರಮೇಣ ಇಡೀ ಶರೀರವನ್ನೆಲ್ಲಾ ವ್ಯಾಪಿಸಿ ತಡೆಯಲಾಗದ ಯಾತನೆಯಿಂದ ಆತ  ನರಳುತ್ತಿದ್ದ.

ಬಗ್ಗೆ ಹನುಮಂತೇಗೌಡರು ನನಗೆ ಕೆಲವು ಬಾರಿ ಹೇಳಿದ್ದರೂ ನಾನು ನಂಬಿರಲಿಲ್ಲ!   ಅಮಾವಾಸ್ಯೆಯ ದಿನ ಅವನಿಗೆ ರೀತಿ ಉರಿ ಶುರುವಾಗುತ್ತದೆ, ಅವನ ಕಾಲಿನ ಹೆಬ್ಬೆರಳಿನಿಂದ ಶುರುವಾಗುವ ಉರಿ ಇಡೀ ದೇಹಕ್ಕೆಲ್ಲಾ ವ್ಯಾಪಿಸಿ, ಇಡೀ ರಾತ್ರಿ ಅವನು ನೋವಿನಿಂದ ಒದ್ದಾಡುತ್ತಾನೆ, ಆಸ್ತಿಯ ವಿಚಾರಕ್ಕಾಗಿ ಅಪ್ಪ ಮಕ್ಕಳ ನಡುವೆಯೇ ಜಗಳವಾಗಿ ಕೊನೆಗೆ ಮಾಟ ಮಂತ್ರ ಮಾಡಿಸಿ ಒಬ್ಬರಿಗೊಬ್ಬರು ತೊಂದರೆ ಕೊಟ್ಟುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾಗ ವೈಜ್ಞಾನಿಕ ಯುಗದಲ್ಲಿ ಅದು ಹೇಗೆ ಸಾಧ್ಯ? ಮಾಟ ಮಂತ್ರ ಏನೂ ಇಲ್ಲ ಎಂದು ವಾದಿಸಿದ್ದೆ.   ಯಾವುದು ಸಾಧ್ಯವಿಲ್ಲ ಎಂದು ನಾನು ನಂಬಿದ್ದೆನೋ ಅದು ಸಾಧ್ಯವೆಂಬುದನ್ನು ನಾನು ಈಗ ಕಣ್ಣಾರೆ ಕಾಣುತ್ತಿದ್ದೆ.  ಅವನ ನರಳಾಟ ಇಡೀ ರಾತ್ರಿ ಮುಂದುವರೆಯುವುದು ನಿಶ್ಚಿತವಾಗಿತ್ತು.  ಅಲ್ಲಿದ್ದು ನಾನು ಮಾಡುವುದು ಏನೂ ಇರಲಿಲ್ಲವಾಗಿ ರಾತ್ರಿ ಒಂಭತ್ತು ಘಂಟೆಯ ಪ್ರಕಾಶ ಬಸ್ಸಿಗೆ ಮನೆಗೆ ಹಿಂದಿರುಗಿದ್ದೆ.  ಆದರೆ ರಾತ್ರಿಯಿಡೀ ನನ್ನ ತಲೆಯ ತುಂಬಾ ವಾಮಾಚಾರದ ಪರಿಣಾಮಗಳ ವಿಚಾರವೇ ಸುಳಿದಾಡುತ್ತಾ ಕಣ್ಣಿಗೆ ನಿದ್ದೆ ಹತ್ತಿರಲಿಲ್ಲ.



ನಾನು ಬಹಳ ವರ್ಷಗಳ ಹಿಂದೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಉಪಾಧ್ಯಾಯನಾಗಿ ಕೆಲಸ ಮಾಡಿದ್ದೆ.  ಅಲ್ಲಿ ನಡೆದ ಮಾಟ ಮಂತ್ರದ   ಘಟನೆ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.  ಅದೊಂದು ಗೌಡರ ಮನೆ, ಸಾಕಷ್ಟು ಅಡಿಕೆ, ತೆಂಗಿನ ತೋಟ, ಹೊಲ, ಮನೆಗಳೆಲ್ಲ ಇದ್ದು ಚೆನ್ನಾಗಿ ಬಾಳಿ ಬದುಕಿದ ಮನೆತನ.  ಆಸ್ತಿಯ ವಿಚಾರವಾಗಿ ಅಪ್ಪ ಮಕ್ಕಳ ನಡುವೆ ಭುಗಿಲೆದ್ದ ಅಸಮಾಧಾನ ಕೊನೆಗೆ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿತ್ತು.   ಟಿಸಿಎಚ್ ಪಾಸ್ ಮಾಡಿಕೊಂಡು ಸರ್ಕಾರಿ ಶಾಲೆಯಲ್ಲಿ ಉಪಾಧ್ಯಾಯನಾಗಿದ್ದ ಗೌಡರ ಮಗನಿಗೆ  ಸ್ವತ: ತಂದೆಯೇ ಮಾಟ ಮಾಡಿಸಿದ್ದನಂತೆ,  ಅದನ್ನು ತೆಗೆಸಲು ಹೋದ ಮಗ ಅಪ್ಪನ ಮೇಲೆ ಪ್ರತಿ ವಾಮಾಚಾರ ಮಾಡಿಸಿದ್ದನಂತೆ!   ವಾಮಾಚಾರದ ಯುದ್ಧದಲ್ಲಿ ಮೊದಲು ಮಗ ಸತ್ತು ನಂತರ ಅಪ್ಪನೂ ಹೆಣವಾದ ದುರಂತ ಕಥೆ ಇಲ್ಲಿದೆ.

 ತನ್ನ ಅಪ್ಪ ಆಸ್ತಿಯಲ್ಲಿ ತನಗೆ ಸಮಪಾಲು ಕೊಡಲಿಲ್ಲ, ಅಣ್ಣನಿಗೆ ಹೆಚ್ಚಿಗೆ ಕೊಟ್ಟು ತನಗೆ ಕಡಿಮೆ ಕೊಟ್ಟಿದ್ದಾನೆ ಎನ್ನುವುದು ರಂಗಪ್ಪಗೌಡನ ಕೊರಗಾಗಿತ್ತು.  ಇದನ್ನು ತನ್ನ ತಾಯಿ ಹಾಗೂ ದೊಡ್ಡಪ್ಪಂದಿರ ಮುಂದೆಯೂ ಸಾಕಷ್ಟು ಸಲ ತೋಡಿಕೊಂಡಿದ್ದಾನೆ.  ವಿದ್ಯಾವಂತನಲ್ಲದ ಅಣ್ಣ ಊರಿನಲ್ಲಿಯೇ ರೈತನಾಗಿ ಬದುಕಬೇಕಾಗಿದೆ, ನಿನಗಾದರೆ ಸರ್ಕಾರಿ ನೌಕರಿಯಿದೆ, ಸುಮ್ಮನೆ ರಗಳೆ ಮಾಡದೆ ಹೊಂದಿಕೊಂಡು ಹೋಗು ಎಂದು ದೊಡ್ಡಪ್ಪಂದಿರು ಬುದ್ಧಿವಾದ ಹೇಳಿದರೂ ಕೇಳದೆ ತನಗೆ ಆಸ್ತಿ ಹಂಚ್ವಿಕೆಯಲ್ಲಿ ಮೋಸ ಮಾಡಿದ ಅಪ್ಪ ಹಾಗೂ ಅಣ್ಣನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆಂದು ಕೋರ್ಟ್ ಮೆಟ್ಟಿಲೇರಿದ್ದ.  ಕೋರ್ಟಿನಲ್ಲಿ ಕೇಸು ವಿಚಾರಣೆ ನಡೆಯುತ್ತಿರುವಾಗಲೆ ಶಿರಾ ನಗರದ ಜಾಜಿಕಟ್ಟೆಯ ಬಳಿಯಿದ್ದ ಕೊಳ್ಳೇಗಾಲದ ಮಾಂತ್ರಿಕನೊಬ್ಬನ ಬಳಿ ಹೋಗಿ ಅಣ್ಣ ಹಾಗೂ ಅಪ್ಪನ ಮೇಲೆ ವಾಮಾಚಾರ ಪ್ರಯೋಗ ಮಾಡಿಸಿ, ಪೂಜಿಸಿದ ನಿಂಬೆಹಣ್ಣು, ಕೋಳಿಮೊಟ್ಟೆ ಇತ್ಯಾದಿಗಳನ್ನು ತಂದು ಅವರ ಮನೆ ಬಾಗಿಲಿನ ಮುಂದೆ ರಾತ್ರೋರಾತ್ರಿ ಹಾಕಿ ಹೆದರಿಸುತ್ತಿದ್ದ.   ಬಹಳ ದಿನ ತಾಳ್ಮೆಯಿಂದಲೇ ಇದ್ದು ಕೊನೆಗೆ ಇವನ ಉಪಟಳದಿಂದ ರೋಸಿ ಹೋದ ಅವನ ಅಪ್ಪ ಹಾಗೂ ಅಣ್ಣ ಇವನಿಗೆ ಹೇಗಾದರೂ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿ ಅವನ ವಿರುದ್ಧವಾಗಿ ತೊಡೆ ತಟ್ಟಿ ಅಖಾಡಕ್ಕಿಳಿದಾಗಲೇ ನಡೆದಿದ್ದು ವಿಶಿಷ್ಟ ವಾಮಾಚಾರ!

ಸರ್ಕಾರಿ ಶಾಲೆಯ ಕೆಲಸಕ್ಕೆ ಹೋಗಲು ಪ್ರತಿ ದಿನವೂ ಶಿರಾಗೆ ಹೋಗುತ್ತಿದ್ದ ರಂಗಪ್ಪನಿಗೆ ಶಿರಾ ನಗರದಲ್ಲಿ ಸಾಕಷ್ಟು ಪರಿಚಿತರಿದ್ದರು,  ಆದರೆ ಅವನಿಗಿಂತ ಮುಂಚಿನಿಂದಲೂ ಅವನ ಅಪ್ಪ ದೊಡ್ಡ ಗೌಡ ಶಿರಾ ನಗರದಲ್ಲಿ ವ್ಯವಹಾರ ನಡೆಸುತ್ತಿದ್ದುದರಿಂದ ಅವನಿಗೂ ಎಲ್ಲರೂ ಪರಿಚಿತರೇ!  ಅವನಿಗೆ ತಿಳಿದಿದ್ದ ಮಾಂತ್ರಿಕರಲ್ಲಿ ರೀತಿ ವಾಮಾಚಾರದ ನಿಂಬೆಹಣ್ಣು, ಕೋಳಿಮೊಟ್ಟೆ ಮುಂತಾದವುಗಳನ್ನು ತಂದು ಮನೆಯ ಮುಂದೆ ಹಾಕುತ್ತಿರುವುದರ ಬಗ್ಗೆ ಹೇಳಿಕೊಂಡಾಗ ಒಬ್ಬ ಕೊಳ್ಳೇಗಾಲದ ಮಾಂತ್ರಿಕ ಅವನಿಗೆ ಸರಿಯಾಗಿ ಬುದ್ಧಿ ಕಲಿಸುವುದಾಗಿ ಹೇಳಿ ಒಂದು ಅಮಾವಾಸ್ಯೆಯ ದಿನ ವಾಮಾಚಾರ ಪ್ರಯೋಗ ಮಾಡುತ್ತಾನೆ.  ಅದರಂತೆ ವಾಮಾಚಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನೂ ಸಿದ್ಧಪಡಿಸಿ, ಜೊತೆಗೆ ಒಂದು ನಾಗರಹಾವಿನ ಮರಿಯನ್ನು ತರಿಸುತ್ತಾನೆ.  ಅಮಾವಾಸ್ಯೆಯ ರಾತ್ರಿಯಲ್ಲಿ ಶಿರಾದ ರುದ್ರಭೂಮಿಯಲ್ಲಿ ಕುಳಿತು ವಾಮಾಚಾರವನ್ನು ನಡೆಸಿ ಜೀವಂತವಿದ್ದ ನಾಗರಹಾವಿನ ಮರಿಯನ್ನು ವಾಮಾಚಾರದ ಎಲ್ಲ ವಸ್ತುಗಳೊಡನೆ ಒಂದು ಕುಡಿಕೆಯೊಳಗೆ ಹಾಕಿ ಬಾಯನ್ನು ಭದ್ರವಾಗಿ ಮುಚ್ಚಿ, ಅದನ್ನು ತೆಗೆದುಕೊಂಡು ಹೋಗಿ ರಂಗಪ್ಪಗೌಡನ ಮನೆಯ ಗೋಡೆಯಲ್ಲಿ ಅವಿತಿಡಲು ಹೇಳುತ್ತಾನೆ. ಅದರಂತೆಯೇ ದೊಡ್ಡಗೌಡ ತನ್ನಮನೆಯ ಗೋಡೆಯೊಂದಲೇ ರಂಧ್ರ ಕೊರೆದು ಮಗನಿಗೆ ಭಾಗ ಕೊಟ್ಟಿದ್ದ ಅದೇ ಮನೆಯ ಗೋಡೆಯಲ್ಲಿ ಕುಡಿಕೆಯನ್ನಿಟ್ಟು ಮಣ್ಣು ಮುಚ್ಚಿಬಿಡುತ್ತಾನೆ.

ಅದರ ನಂತರದ ಅಮಾವಾಸ್ಯೆಯಿಂದ ರಂಗಪ್ಪಗೌಡನಿಗೆ ವಾಮಾಚಾರದ ಪ್ರಭಾವ ಆರಂಭವಾಗುತ್ತದೆ, ಕಾಲಿನ ಹೆಬ್ಬೆರಳಿಗೆ ನಾಗರಹಾವು ಕಚ್ಚಿದರೆ ವಿಷದ ಪ್ರಭಾವದಿಂದ ಹೇಗೆ ಉರಿ ಶುರುವಾಗುತ್ತದೆಯೋ ಅದೇ ರೀತಿ ಅವನ ಕಾಲಿನ ಹೆಬ್ಬೆರಳಿನಿಂದ ಉರಿ ಶುರುವಾಗುತ್ತಿತ್ತು, ಕ್ರಮೇಣ ಹಾವಿನ ವಿಷ ಇಡಿ ದೇಹವನ್ನೆಲ್ಲಾ ವ್ಯಾಪಿಸಿಕೊಂಡಂತೆ  ಉರಿ  ದೇಹದ ಎಲ್ಲಾ ಭಾಗಗಳಿಗೂ ಪ್ರಸರಿಸಿ ಒದ್ದಾಡುವಂತೆ ಮಾಡುತ್ತಿತ್ತು.  ಸತತವಾಗಿ ಆರು ತಿಂಗಳು ಹೀಗೆ ಒದ್ದಾಡಿ ಆರನೆಯ ತಿಂಗಳಿನ ಅಮಾವಾಸ್ಯೆಯ ರಾತ್ರಿಯಂದು ಅವನು ಸಾಯುವ ಹಾಗೆ  ವಾಮಾಚಾರ ಮಾಡಲಾಗಿತ್ತು.   ಮಗನ ಪರವಾಗಿದ್ದ ಮಂತ್ರವಾದಿಯೊಬ್ಬ ರೀತಿ ನಾಗರಹಾವಿನ ಮರಿಯೊಡನೆ ವಾಮಾಚಾರವಾಗಿರುವುದನ್ನು ಪತ್ತೆ ಹಚ್ಚಿ, ಮನೆಯೊಳಗೆ ಅವಿತಿಟ್ಟಿದ್ದ ಕುಡಿಕೆಯನ್ನು ತೆಗೆದು ನಾಶ ಮಾಡುತ್ತಾನೆ. ಅದರಿಂದ ಮುಕ್ತಿ ಸಿಗಬೇಕಾದರೆ ಆಂಜನೇಯನ ದೇವಾಲಯದಲ್ಲಿಯೇ ಇವನನ್ನು ಇರಿಸಬೇಕು, ಮನೆಯಲ್ಲಿದ್ದರೆ ಮೃತ್ಯು ಕಟ್ಟಿಟ್ಟಬುತ್ತಿ ಎಂದು ಹೇಳುತ್ತಾನೆ.  ಅದರಂತೆ ಅವನನ್ನು ಊರಾಚೆಯ ಕೆರೆಯ ಪಕ್ಕದಲ್ಲಿದ್ದ ಆಂಜನೇಯನ ಗುಡಿಗೆ ಸಾಗಿಸಿ ಅವನ ಸೇವೆಗಾಗಿ ಇಬ್ಬರನ್ನು ನೇಮಿಸಲಾಗುತ್ತದೆ.  

ಹಗಲು ರಾತ್ರಿ ಅವನ ಸೇವೆ ಮಾಡುತ್ತಾ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಇಬ್ಬರು ಸಂಬಂಧಿಕರಿಗೆ ಕೊನೆಯ ಅಮಾವಾಸ್ಯೆಯ ರಾತ್ರಿಯಲ್ಲಿ ತಡೆಯಲಾಗದಂಥ ನಿದ್ದೆ ಬಂದು ಮಲಗಿ ಬಿಡುತ್ತಾರೆ.  ಕೆಲ ಸಮಯದ ನಂತರ ಎಚ್ಚೆತ್ತ ಅವರಿಗೆ ರಂಗಪ್ಪಗೌಡ ಕಾಣಿಸುವುದಿಲ್ಲ!  ಸುತ್ತಮುತ್ತ ಎಲ್ಲೆಡೆ ಹುಡುಕಿದರೂ ಅವನ ಸುಳಿವೇ ಇರುವುದಿಲ್ಲ, ಕೊನೆಗೆ ಅವನ ನಿಗೂಢ ಕಣ್ಮರೆಯ ಬಗ್ಗೆ  ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗುತ್ತದೆ.  ಪೊಲೀಸರು ಸಹಾ ರಂಗಪ್ಪಗೌಡನ ಬಗ್ಗೆ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಾರೆ.  ಆದರೆ ಯಾವುದೇ ಫಲ ದೊರೆಯುವುದಿಲ್ಲ,  ಮೂರು ದಿನಗಳ ನಂತರ ದೇವಾಲಯದಿಂದ ಅನತಿ ದೂರದಲ್ಲಿದ್ದ ಕೆರೆಯಲ್ಲಿ ರಂಗಪ್ಪಗೌಡನ ಶವ ತೇಲಿ ಬರುತ್ತದೆ! ಅವನ ಮೇಲೆ ನಡೆದ ವಾಮಾಚಾರದ ಪ್ರಭಾವಕ್ಕೆ ತಕ್ಕಂತೆ ಅವನ ಸಾವು ಆರನೆಯ ತಿಂಗಳಿನ ಅಮಾವಾಸ್ಯೆಯಂದೇ ಆಗಿರುತ್ತದೆ.

ಪೊಲೀಸರ ಮಹಜರು ಎಲ್ಲಾ ಮುಗಿದು ಅವನ ಅಂತ್ಯಸಂಸ್ಕಾರದ ನಂತರ ಅವನ ದೊಡ್ಡಪ್ಪನ ಮಗನೊಬ್ಬ ಅವನ ಸಾವಿಗೆ ಕಾರನನಾದವರ ಮೇಲೆ ಸೇಡು ತೀರಿಸಿಕೊಳ್ಳಲೇಬೇಕೆಂದು ಹಗೆ ತೊಟ್ಟು ಮಗನ ಪರವಾಗಿದ್ದ ಮಂತ್ರವಾದಿಯ ಬಳಿಗೆ ಹೋಗುತ್ತಾನೆ. ಆದರೆ ಮಂತ್ರವಾದಿ ಮತ್ತೇನೋ ಮಾಡುವಷ್ಟರಲ್ಲಿಯೇ, ಕೇವಲ ಒಂದೇ ತಿಂಗಳಿನಲ್ಲಿ, ಶಿರಾ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದೊಡ್ಡಗೌಡ ಸತ್ತು ಹೋಗುತ್ತಾನೆ, ಅಲ್ಲಿಂದ ಒಂದು ತಿಂಗಳಿನೊಳಗೆ ನಾಗರಹಾವಿನ ಮಾಟ ಮಾಡಿದ್ದ ಕೊಳ್ಳೇಗಾಲದ ಮಾಂತ್ರಿಕನೂ ರಕ್ತ ಕಾರುತ್ತಾ ಸತ್ತು ಹೋಗುತ್ತಾನೆ.  ದೊಡ್ಡಗೌಡ ಮತ್ತು ಮಾಂತ್ರಿಕನ ಸಾವು ಮಾತ್ರ ನಿಗೂಢವಾಗಿಯೇ ಉಳಿದು ಹೋಗುತ್ತದೆ.  ಪೊಲೀಸರು ಅಸಹಜ ಸಾವಿನ ಪ್ರಕರಣ ಎಂದು ಷರಾ ಬರೆದು ಕೈ ತೊಳೆದುಕೊಳ್ಳುತ್ತಾರೆ.

ಘಟನೆಯ ಸಂಪೂರ್ಣ ವಿವರವನ್ನು ಮುಖ್ಯೋಪಾಧ್ಯಾಯರಾದ ಹನುಮಂತೇಗೌಡರಿಂದ ಕೇಳಿದ ನಂತರ ನಾನು ಮಾತಿಲ್ಲದ ಮೂಕನಂತಾಗಿದ್ದೆ. ಕ್ಷುಲ್ಲಕ ವಿಚಾರಕ್ಕೆ ಅಪ್ಪ ಮಕ್ಕಳ ನಡುವಿನ ಮನಸ್ತಾಪ ಇಡೀ ಕುಟುಂಬದ ಶಾಂತಿ ನೆಮ್ಮದಿಯನ್ನು ನಾಶ ಮಾಡಿದ್ದಲ್ಲದೆ ಇಬ್ಬರ ಸಾವಿಗೂ ಕಾರಣವಾಗಿತ್ತು.

 (ಸಾಂದರ್ಭಿಕ ಚಿತ್ರಗಳು: ಅಂತರ್ಜಾಲದಿಂದ)

No comments: