Saturday, May 7, 2016




(ಮೇ ತಿಂಗಳ "ನಿಮ್ಮೆಲ್ಲರ ಮಾನಸ" ದಲ್ಲಿ  ನನ್ನ ಅಂಕಣ ನಿಮ್ಮೆಲ್ಲರ ಓದಿಗಾಗಿ ಗೆಳೆಯರೆ.) 

ಭದ್ರತೆಯ ಲೋಕದಲ್ಲಿ - ೧೭

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ಸಾವಿರ ಕೈಗಾರಿಕೆಗಳು ಒಂದೇ ಪ್ರದೇಶದಲ್ಲಿದ್ದು ಏಷ್ಯಾ ಖಂಡದ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂದು ಹೆಸರಾಗಿದೆನನ್ನ ವೃತ್ತಿಜೀವನದ ಅತಿ ಹೆಚ್ಚು ಕಾಲ ಅಲ್ಲಿನ ವಿವಿಧ ಕಾರ್ಖಾನೆಗಳಿಗೆ  ಭದ್ರತೆ ಒದಗಿಸುತ್ತಾ ಹೆಚ್ಚು ಕಡಿಮೆ ಎರಡು ಸಾವಿರದಷ್ಟು ಭದ್ರತಾ ರಕ್ಷಕರ ಮೇಲುಸ್ತುವಾರಿಯನ್ನು ಹೊತ್ತಿದ್ದೆಪ್ರತಿ ಭಾನುವಾರ ಬೆಳಿಗ್ಗೆ ಎಂಟರಿಂದ ಹನ್ನೊಂದರವರೆಗೆ ವಿವಿಧ ಪ್ರದೇಶಗಳಲ್ಲಿ ಭದ್ರತಾ ರಕ್ಷಕರಿಗೆ ತರಬೇತಿ ನೀಡುತ್ತಿದ್ದೆವು ಸಮಯದಲ್ಲಿ ಹತ್ತಿರದಲ್ಲಿದ್ದ ಹೋಟೆಲ್ಲಿಗೆ ಭರ್ಜರಿ ವ್ಯಾಪಾರವಾಗುತ್ತಿತ್ತುನಮ್ಮ ಕಡೆಯಿಂದ ತಲೆಗೆರಡು ಇಡ್ಲಿ ವಡೆ ಮತ್ತು ಟೀ ಕೊಡುತ್ತಿದ್ದೆವುನಮ್ಮ ಸಂಸ್ಥೆಯಿಂದ ಹಣ ಪಾವತಿಸಿ ತರಬೇತಿಗೆ ಹಾಜರಾಗದೆ ಇದ್ದ ಭದ್ರತಾ ರಕ್ಷಕರ ಸಂಬಳದಲ್ಲಿ ಹಣವನ್ನು ಕಡಿತ ಮಾಡುತ್ತಿದ್ದೆವುಹೀಗಾಗಿ ಭಾನುವಾರದ ತರಬೇತಿಗೆ ಯಾರೂ ತಪ್ಪಿಸಿಕೊಳ್ಳದೆ ಬರುತ್ತಿದ್ದರುನಮಗೆ ಉಪಾಹಾರ ಒದಗಿಸುತ್ತಿದ್ದ ಪುಟ್ಟ ಹೋಟೆಲ್ಲಿನ ಮಾಲೀಕರಿಂದಲೂ ನನಗೆ ಆಗಾಗ ಬಹಳ ಮುಖ್ಯವಾದ ವಿಷಯಗಳು ತಿಳಿದು ಬರುತ್ತಿದ್ದವುಹೀಗೆ ನನ್ನ ತರಬೇತಿಯಲ್ಲಿ ಪಳಗಿದ ಭದ್ರತಾ ರಕ್ಷಕರು ಈಗಲೂ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿದ್ದಾರೆ, ಕಳೆದ ನವಂಬರಿನಲ್ಲಿ ಬೆಂಗಳೂರಿಗೆ ಹೋಗಿದ್ದಾಗ ಕೆಲವರನ್ನು ಭೇಟಿ ಮಾಡಿ ಜೊತೆಯಲ್ಲಿ ಟೀ ಕುಡಿದಾಗ ಅದೇನೋ ಅರಿಯದ ಆನಂದ!

ಗೊರಗುಂಟೆ ಪಾಳ್ಯದಿಂದ ಸುಂಕದಕಟ್ಟೆಯವರೆಗೂ ಹರಡಿದ್ದ ವಿಶಾಲ ಕೈಗಾರಿಕಾ ಪ್ರದೇಶದ ಗಲ್ಲಿಗಳೆಲ್ಲಾ ನನ್ನ ರೋಡ್ ಕಿಂಗ್ ಗಾಡಿಗೆ ಚೆನ್ನಾಗಿ ಪರಿಚಿತಹಗಲು ರಾತ್ರಿಯೆನ್ನದೆ ಎಲ್ಲ ಕೈಗಾರಿಕೆಗಳಿಗೆ ಭೇಟಿ ನೀಡುತ್ತಾ, ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುತ್ತಾ ತಿರುಗಾಡುತ್ತಿದ್ದ ನನಗೆ ಅದೆಷ್ಟು ಜನ ಕಳ್ಳರು, ಸಮಾಜ ಘಾತುಕರು ಶಾಪ ಹಾಕುತ್ತಿದ್ದರೋ ಅದಕ್ಕಿಂತ ಹೆಚ್ಚು ಶುಭಾಶಯಗಳನ್ನು ನಮ್ಮ ಭದ್ರತಾ ರಕ್ಷಕರು ಹಾಗೂ ಮಹಿಳಾ ಕಾರ್ಮಿಕರು ಕೊಡುತ್ತಿದ್ದರುಪ್ರತಿನಿತ್ಯ ಒಂದಿಲ್ಲೊಂದು ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದುದರಿಂದಾಗಿ ಯಶವಂತಪುರ, ಪೀಣ್ಯ, ರಾಜಗೋಪಾಲನಗರ,ಕಾಮಾಕ್ಷಿ ಪಾಳ್ಯ, ವಿಜಯನಗರ, ಜ್ಞಾನಭಾರತಿ ಠಾಣೆಗಳ ಪೊಲೀಸರ ಜೊತೆಗೆ ನಿಕಟ ಸಂಪರ್ಕವಿತ್ತುಯಾವುದಾದರೂ ಪ್ರಕರಣದಲ್ಲಿ ಏನಾದರೊಂದು ವಿಚಾರದಲ್ಲಿ ಒಂದಿಲ್ಲೊಂದು ಠಾಣೆಯಿಂದ ಫೋನ್ ಕರೆ ಬರುತ್ತಿತ್ತು, ನನ್ನ ಕೆಲಸದಲ್ಲಿ ಅವರ ಸಹಕಾರ, ಅವರ ಕೆಲಸಗಳಲ್ಲಿ ನನ್ನ ಪತ್ತೇದಾರಿಕೆಯ ಸಹಭಾಗಿತ್ವ ಸಹಜವೆನ್ನುವಂತೆ ನಡೆಯುತ್ತಿತ್ತು.  ಅಲ್ಲದೆ ಆಯುಧಪೂಜೆಯ ಸಂದರ್ಭದಲ್ಲಿ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಿಹಿಯ ಜೊತೆಗೆ ಸಾಕಷ್ಟು ಉಡುಗೊರೆಗಳನ್ನೂ ನೀಡುತ್ತಿದ್ದ ನಮ್ಮ ಸಂಸ್ಥೆಯ ಬಗ್ಗೆ ಪೊಲೀಸರಲ್ಲಿ ಒಂದು ವಿಶೇಷವಾದ ಅಭಿಮಾನವೂ ಇತ್ತುಇದು ನಮ್ಮ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಉದ್ಭವಿಸುತ್ತಿದ್ದ ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯಕವಾಗಿತ್ತು.

ಹೀಗಿರುವಾಗ ಒಮ್ಮೆ ಪ್ರಖ್ಯಾತ ಸಿದ್ಧ ಉಡುಪು ಕಂಪನಿಯೊಂದರಿಂದ ಬಂದ ದೂರು ನಮ್ಮೆಲ್ಲರ ನಿದ್ದೆ ಕೆಡಿಸಿತ್ತು.   ನಮ್ಮ ಭದ್ರತಾ ಸಂಸ್ಥೆಯ ಮುಖ್ಯಸ್ಥರನ್ನು ಕರೆಸಿದ ಸಿದ್ಧ ಉಡುಪು ಕಂಪನಿಯ ಮಾಲೀಕರು ಸಂಸ್ಥೆಯ ಕೆಲವು ಬಹು ಮುಖ್ಯ ದಾಖಲಾತಿಗಳು ಹಾಗೂ ವಿದೇಶಕ್ಕೆ ರಫ್ತು ಮಾಡಲೆಂದು ತಯಾರಿಸಿದ್ದ ಕೆಲವು ದುಬಾರಿ ವಿಶಿಷ್ಟ ಉಡುಪುಗಳ ಮಾದರಿಗಳು ಸಂಸ್ಥೆಯಿಂದ ಕಣ್ಮರೆಯಾಗಿರುವುದಾಗಿಯೂ, ಅವರಿಗೆ ಕೆಲವು ಉತ್ತರ ಭಾರತದ ವ್ಯವಸ್ಥಾಪಕ ಹುದ್ದೆಯಲ್ಲಿರುವವರ ಮೇಲೆ ಅನುಮಾನವಿರುವುದಾಗಿಯೂ ತಿಳಿಸಿದ್ದರು.  ಒಂದೊಮ್ಮೆ ದಾಖಲಾತಿಗಳು ಹಾಗೂ ಮಾದರಿಗಳು ಪ್ರತಿಸ್ಪರ್ಧಿ ಸಂಸ್ಥೆಗಳ ಕೈ ಸೇರಿದಲ್ಲಿ ತಮ್ಮ ಸಂಸ್ಥೆಗೆ ಬಹು ದೊಡ್ಡ ನಷ್ಟವಾಗುವುದಾಗಿ ಕಳವಳ ವ್ಯಕ್ತಪಡಿಸಿದ್ದರು.   ಪೊಲೀಸ್ ಕೇಸ್ ಆಗದಂತೆ, ಎಲ್ಲಿಯೂ ಸಂಸ್ಥೆಯ ಹೆಸರು ಹೊರಬರದಂತೆ, ಸಂಸ್ಥೆಯ ಪ್ರತಿಷ್ಠೆಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಹುಷಾರಾಗಿ ಕಾರ್ಯ ನಿರ್ವಹಿಸಿ, ಕಳುವಾಗಿರುವ ದಾಖಲಾತಿಗಳು ಹಾಗೂ ಅತ್ಯಂತ ದುಬಾರಿ ಉಡುಪಿನ ಮಾದರಿಗಳನ್ನು ವಾಪಸ್ ತಂದೊಪ್ಪಿಸುವಂತೆ ವಿನಂತಿಸಿದ್ದರು.  

ಸಾಕಷ್ಟು ಜನ ಭದ್ರತಾ ರಕ್ಷಕರು ಸಂಸ್ಥೆಯ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದುದರಿಂದ ನಮ್ಮ ಸಂಸ್ಥೆಗೆ ಒಳ್ಳೆಯ ಲಾಭವೂ ಇತ್ತು, ಜೊತೆಗೆ ಅಲ್ಲಿ ನಮ್ಮ ಭದ್ರತಾ ರಕ್ಷಕರನ್ನು ನಿಯೋಜಿಸಿದ್ದುದು ಇತರ ಪ್ರತಿಸ್ಪರ್ಧಿಗಳ ಮುಂದೆ ಪ್ರತಿಷ್ಠೆಯ ವಿಷಯವಾಗಿತ್ತುಹೀಗಾಗಿ ವಿಚಾರವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ ನಮ್ಮ ಸಂಸ್ಥೆಯ ಮುಖ್ಯಸ್ಥರು ನನ್ನ ಜೊತೆಗೆ ಇನ್ನೂ ಕೆಲವು ಅನುಭವಿಗಳ ತಂಡವನ್ನು ರಚಿಸಿ, ಪ್ರಕರಣವನ್ನು ಬೇಧಿಸುವ ಜವಾಬ್ಧಾರಿಯನ್ನು ನಮ್ಮ ಹೆಗಲಿಗೆ ಕಟ್ಟಿದರು.

ಅವರ ನಿರ್ದೇಶನದಂತೆ ನಾವು ಮೊದಲು ಮಾಡಿದ ಕೆಲಸವೆಂದರೆ ಪೀಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿದ್ದ ಉಸ್ತುವಾರಿ ಅಧಿಕಾರಿಗೆ ಇಡೀ ಪ್ರಕರಣವನ್ನು ವಿವರಿಸಿ, ಅವರ ಸಹಕಾರವನ್ನು ಗಿಟ್ಟಿಸುವುದಾಗಿತ್ತುಅದರಂತೆ ಠಾಣೆಗೆ ಭೇಟಿ ನೀಡಿದಾಗ ನಮ್ಮ ಅದೃಷ್ಟಕ್ಕೆ ಕಳ್ಳತನದ ಪ್ರಕರಣವೊಂದರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ಮಿತಿಯಲ್ಲಿ ಇಬ್ಬರು ಕಳ್ಳರನ್ನು ಬಂಧಿಸಲು ನನ್ನ ಸಹಾಯ ಪಡೆದಿದ್ದ ಅಧಿಕಾರಿಯೊಬ್ಬರು  ಪದೋನ್ನತಿಯಾಗಿ ಅಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದರುನನ್ನನ್ನು ಕಂಡೊಡನೆ ಆತ್ಮೀಯತೆಯಿಂದ ಮಾತನಾಡಿ, ಕಾಫಿ ತರಿಸಿ, ಪ್ರಕರಣದ ವಿವರಗಳನ್ನು ಕೂಲಂಕುಷವಾಗಿ ತಿಳಿದುಕೊಂಡು, ತಮ್ಮ ಕಡೆಯಿಂದ ಸಾಧ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದರುಅಲ್ಲಿಗೆ ನಮ್ಮ ಪ್ರಕರಣ ಅರ್ಧ ಮುಗಿದಂತೆ ಆಗಿತ್ತು, ಏಕೆಂದರೆ ಖಾಸಗಿ ಪತ್ತೇದಾರಿಕೆಯಲ್ಲಿ ಪೊಲೀಸರ ಸಹಕಾರ ಬಹು ಮುಖ್ಯ, ಅದಿಲ್ಲದಿದ್ದಲ್ಲಿ ಕೆಲವೊಮ್ಮೆ ನಾವೇ ಜೈಲಿಗೆ ಹೋಗುವ ಹಾಗಾಗಿಬಿಡುತ್ತದೆನಂತರ ಉತ್ತರ ಭಾರತದ ವ್ಯವಸ್ಥಾಪಕರು ಉಳಿದುಕೊಂಡಿದ್ದ ವಸತಿಗೃಹಗಳ ಸಮುಚ್ಚಯ ಇರುವ ಪ್ರದೇಶವನ್ನು ತಿಳಿಸಿ, ಅಂದು ರಾತ್ರಿಗೇ ಪ್ರಕರಣದ ತನಿಖೆ ಶುರು ಮಾಡಬೇಕೆಂದೂ, ನಮ್ಮ ತಂಡದ ಜೊತೆಗೆ ಇಬ್ಬರು ಅನುಭವಿ ಅಪರಾಧ ವಿಭಾಗದ ಪೊಲೀಸರನ್ನು ಕಳಿಸಬೇಕೆಂದು ವಿನಂತಿಸಿಕೊಂಡಿದ್ದೆವುಅದಕ್ಕೊಪ್ಪಿದ ಅವರು ತಮ್ಮ ಇಬ್ಬರು ಪೊಲೀಸರಿಗೆ ನಮ್ಮ ತಂಡದ ಜೊತೆಗೆ ರಾತ್ರಿಯ ಕಾರ್ಯಾಚರಣೆ ಮುಗಿಯುವವರೆಗೂ ಆಯುಧ ಸಹಿತರಾಗಿ ಜೊತೆಯಲ್ಲಿರುವಂತೆ ತಾಕೀತು ಮಾಡಿದ್ದರು.
ಅಂದುಕೊಂಡಂತೆ ಅಂದು ರಾತ್ರಿಗೆ ಸುಮಾರು ಹತ್ತುಜನರ ನಮ್ಮ ತಂಡ, ಇಬ್ಬರು ಶಸ್ತ್ರ ಸಹಿತ ಪೊಲೀಸರೊಡನೆ ಉತ್ತರ ಭಾರತೀಯ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ವಾಸವಿದ್ದ ಜಾಲಹಳ್ಳಿ ಕ್ರಾಸ್ ಬಳಿಯ ವಸತಿ ಸಮುಚ್ಚಯದ ಮೇಲೆ ಧಾಳಿಯಿಟ್ಟಿತ್ತುಸುಮಾರು ಹದಿನೈದು ಫ್ಲಾಟುಗಳಲ್ಲಿ ವಾಸವಿದ್ದ ಅವರೆಲ್ಲಾ ರಾತ್ರಿ ಎಂಟರಿಂದ ಹನ್ನೊಂದರವರೆಗೂ ಒಬ್ಬ ಮುಖ್ಯ ಅಧಿಕಾರಿಯ ಫ್ಲಾಟಿನಲ್ಲಿ ಚೆನ್ನಾಗಿ ಕುಡಿದು, ತಿಂದು ಪಾರ್ಟಿ ಮಾಡುತ್ತಿದ್ದರುಇದನ್ನು ಪತ್ತೆ ಮಾಡಿದ್ದ ನಮ್ಮ ತಂಡ ಪಾರ್ಟಿ ಮುಗಿಸಿ ಒಬ್ಬೊಬ್ಬರೇ ಮನೆಗೆ ಹೋಗುವ ಸಮಯಕ್ಕಾಗಿ   ಕಾದು ಕುಳಿತು, ಗುಂಪಿನಲ್ಲಿ ಹೆಚ್ಚು ಅನುಮಾನಾಸ್ಪದವಾಗಿದ್ದವನೊಬ್ಬ ಹೊರ ಬರುತ್ತಿದ್ದಂತೆ ಅವನನ್ನು ಹಿಂಬಾಲಿಸಿ, ಅವನು ಮನೆಯೊಳಕ್ಕೆ ಹೋಗುತ್ತಿದ್ದಂತೆ, ಅನಾಮತ್ತಾಗಿ ಅವನ ಹಿಂದೆಯೇ ಅವನ ಮನೆಯೊಳಕ್ಕೆ ಪ್ರವೇಶಿಸಿ, ಅವನು ಸದ್ದೇ ಮಾಡದಂತೆ ಅವನ ಬಾಯಿ ಮುಚ್ಚಿ ನಮ್ಮ ವಶಕ್ಕೆ ತೆಗೆದುಕೊಂಡಿದ್ದೆವು ರೀತಿಯ ಧಾಳಿಯ ಕಿಂಚಿತ್ತೂ ಅನುಮಾನವಿಲ್ಲದಿದ್ದ ಅವನು ಒಮ್ಮೆಲೇ ಅಧೀರನಾಗಿ ಹೋಗಿದ್ದ!

ಮೊದಮೊದಲು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರತಿರೋಧಿಸಿದರೂ ಕೊನೆಗೆ ನಮ್ಮ ಬಲಪ್ರಯೋಗಕ್ಕೆ ಮಣಿದು ಒಂದೊಂದಾಗಿ ಬಾಯಿಬಿಟ್ಟಿದ್ದಅವನೊಡನೆ ಇನ್ನೂ ನಾಲ್ವರು ಸಹೋದ್ಯೋಗಿಗಳು ಕೈ ಮಿಲಾಯಿಸಿ ಅಮೂಲ್ಯ ದಾಖಲಾತಿಗಳು ಹಾಗೂ ಉಡುಪಿನ ಮಾದರಿಗಳನ್ನು ಕದ್ದು ತಂದಿದ್ದರು. ಅವನನ್ನು ಜೊತೆಗಿಟ್ಟುಕೊಂಡು ಉಳಿದ ನಾಲ್ವರ ಫ್ಲಾಟುಗಳನ್ನೂ ಪ್ರವೇಶಿಸಿ, ಅವರನ್ನು ಕೈ ಕಾಲು ಕಟ್ಟಿ ಕೂಡಿ ಹಾಕಿ, ಇಡೀ ಮನೆಯನ್ನು ಜಾಲಾಡಿ, ಅವರು ಕದ್ದು ತಂದಿದ್ದ ದಾಖಲಾತಿಗಳನ್ನು ಮತ್ತು ದುಬಾರಿ ಉಡುಪಿನ ಮಾದರಿಗಳನ್ನು ನಮ್ಮ ವಶಕ್ಕೆ ಪಡೆದಿದ್ದೆವುಒಟ್ಟಾರೆ ಐದು ಜನರನ್ನು ಒಂದೆ ಫ್ಲಾಟಿನಲ್ಲಿ ಕೂಡಿ ಹಾಕಿ, ಅಕ್ಷರಶಃ ಗೃಹಬಂಧನದಲ್ಲಿರಿಸಿ, ಅವರ ಕಾವಲಿಗೆ ಆರು ಜನರನ್ನಿಟ್ಟು ನಾವು ಜಪ್ತಿ ಮಾಡಿದ್ದ ದಾಖಲಾತಿಗಳೊಡನೆ ಪೀಣ್ಯ ಪೊಲೀಸ್ ಠಾಣೆಗೆ ಹಿಂದಿರುಗಿದ್ದೆವು.   ಪ್ರತಿಯೊಬ್ಬನ ಮನೆಯಲ್ಲೂ ನಾಲ್ಕರಿಂದ ಐದು ಉದ್ಧುದ್ಧದ ಕತ್ತಿಗಳು ಸಿಕ್ಕಿದ್ದವುಅವು ಹೇಗಿದ್ದವೆಂದರೆ ಹಿಂದಿನ ಕಾಲದ ಮಹಾರಾಜರು ಯುದ್ಧಗಳಲ್ಲಿ ಬಳಸುತ್ತಿದ್ದ ಖಡ್ಗಗಳಂತಿದ್ದವು, ಅವುಗಳಿಂದ ಒಬ್ಬ ಮನುಷ್ಯನನ್ನು ಕ್ಷಣಾರ್ಧದಲ್ಲಿ ತುಂಡು ತುಂಡಾಗಿ ಕತ್ತರಿಸಿ ಹಾಕಬಹುದಾಗಿತ್ತುಮೊದಲು ಸಂಸ್ಥೆಯ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಅವರು ಅವೆಲ್ಲವನ್ನೂ ತೆಗೆದುಕೊಂಡು ಅವರ ಕಛೇರಿಗೆ ಬರುವಂತೆ ತಿಳಿಸಿದ್ದರುನಾವು ಅಲ್ಲಿ ತಲುಪಿದಾಗ ಬೆಳಗಿನ ಮೂರು ಘಂಟೆಯಾಗಿತ್ತು.   ಅಪಾರ ಒತ್ತಡಕ್ಕೆ ಸಿಲುಕಿದ್ದ ಅವರು ಮನೆಗೆ ಹೋಗದೆ ನಮ್ಮ ತನಿಖಾತಂಡದ ವರದಿಗಾಗಿ ಕಚೇರಿಯಲ್ಲಿಯೇ ಕಾದು ಕುಳಿತಿದ್ದರು

ನಾಲ್ಕಾರು ತಿಂಗಳುಗಳಿಂದ ವಿದ್ರೋಹಿಗಳು ಸಂಚು ಹೂಡಿ ಸಂಸ್ಥೆಯಿಂದ ಅಪಹರಿಸಿದ್ದ ಅಮೂಲ್ಯ ದಾಖಲಾತಿಗಳು ಹಾಗೂ ವಿಶೇಷ ಉಡುಪಿನ ಮಾದರಿಗಳು  ಕೇವಲ ನಾಲ್ಕೈದು ಘಂಟೆಗಳ ಕಾರ್ಯಾಚರಣೆಯಲ್ಲಿ ವಾಪಸ್ ಅವರ ಕೈ ಸೇರಿದ್ದವುಪ್ರತಿಸ್ಪರ್ಧಿ ಸಂಸ್ಥೆಗಳ ಕೈ ಸೇರಿದ್ದರೆ ಆಗಬಹುದಾಗಿದ್ದ ಲಕ್ಷಾಂತರ ರೂಪಾಯಿಗಳ ನಷ್ಟವನ್ನು ತಡೆದ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತುಅದೇ ಖುಷಿಯಲ್ಲಿ ನಮ್ಮ ತನಿಖಾ ತಂಡಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ಘೋಷಿಸಿದ್ದರು, ಜೊತೆಗೆ ಗೃಹಬಂಧನದಲ್ಲಿದ್ದ ವಿದ್ರೋಹಿಗಳನ್ನು ಮರುದಿನ ಸಂಜೆಯ ರೈಲು ಹತ್ತಿಸಿ ಅವರ ಊರಿಗೆ ಕಳುಹಿಸಬೇಕೆಂದು ವಿನಂತಿಸಿದ್ದರುಅದರಂತೆ ವಿದ್ರೋಹಿ ಅಧಿಕಾರಿಗಳನ್ನು ಮರುದಿನ ಸಂಜೆಯ ರೈಲಿನಲ್ಲಿ ಕೂರಿಸಿ ಅವರ ಊರಿಗೆ ಕಳುಹಿಸಿ, ಮತ್ತೊಮ್ಮೆ ಬೆಂಗಳೂರಿಗೆ ಬಂದರೆ ಉಡಾಯಿಸಿಬಿಡುವುದಾಗಿ ಧಮಕಿ ಹಾಕಿ ಬಂದಿದ್ದೆವು.   ನಾವು ಭದ್ರತೆ ನೀಡಿದ್ದ ಸಂಸ್ಥೆಗೆ ಒದಗಿ ಬಂದಿದ್ದ ಗಂಡಾಂತರವೊಂದು, ಒಂದೇ ರಾತ್ರಿಯ ಕಾರ್ಯಾಚರಣೆಯಿಂದಾಗಿ ತೊಲಗಿ ಎಲ್ಲವೂ ಸುಖಾಂತ್ಯವಾಗಿತ್ತು.   

No comments: