Thursday, June 16, 2016

ಏನೇ ತಿಮ್ಮಿ ಈಗ ನಿಂಗೇನ್ ಕಮ್ಮಿ


ಏನೇ ತಿಮ್ಮಿ ಈಗ ನಿಂಗೇನ್ ಕಮ್ಮಿ 
ಏನೇ ತಿಮ್ಮಿ ಈಗ ನಿಂಗೇನ್ ಕಮ್ಮಿ!

ಬಾ ಅಂದಾಗ ನೀ ಬರಾಕಿಲ್ಲಾ 
ಬ್ಯಾಡಂದಾಗ ನೀ ಬರ್ತೀಯಲ್ಲಾ!

ಯಾಕೀಂಗಾಡ್ತೀ ಯಾಕಿಂಗ್ಮಾಡ್ತಿ 
ನಿನ್ ಬುದ್ಧೀಗಿಂದು ಅದೇನಾಗೈತಿ!

ಉಣ್ಣೋ ಟೈಮ್ನಾಗ್ ಮುನುಸ್ಕೊಂತಿ 
ಮಲ್ಗೋ  ಟೈಮ್ನಾಗ್ ಮುದುರ್ಕೊಂತಿ! 

ಯಾಕೇ ತಿಮ್ಮಿ ಅದ್ಯಾಕ್   ನೀನಿಂಗಾಡ್ತಿ 
ನೊರೆ ಹಾಲ್ನಾಗ್ ಹುಳಿ ಯಾಕ್ ಹಿಂಡ್ತಿ!!!

ಏನೇ ತಿಮ್ಮಿ ಯಾಕೇ ತಿಮ್ಮಿ ನಿಂಗೇನ್ ಕಮ್ಮಿ 
ಏನೇ ತಿಮ್ಮಿ ಒಸಿ ನಕ್ರೆ ನಿಂಗೇನಾಯ್ತದಮ್ಮಿ!! 

(ಚಿತ್ರ: ಅಂತರ್ಜಾಲದಿಂದ) 

Sunday, June 5, 2016

ಹೀಗೊಬ್ಬನಿದ್ದ ಅಪ್ಪ - ಭಾಗ ೨.



ಅವನ ಮನಸ್ಸು ಅಂದು ಕೊಂಚ ಗಲಿಬಿಲಿಗೊಳಗಾಗಿತ್ತು.  ಮಾಡುತ್ತಿದ್ದ ಕೆಲಸಗಳಲ್ಲಿ ತಪ್ಪುಗಳಾಗುತ್ತಿದ್ದವು, ಮೇಲಧಿಕಾರಿಗಳಿಗೆ ಸಿದ್ಧಪದಿಸಬೇಕಿದ್ದ ವರದಿಗಳಲ್ಲಿ ಹಲವಾರು ತಪ್ಪುಗಳಾಗಿದ್ದವು, ಕೈಕೆಳಗಿನ ಕೆಲವರು ಬೇಕೆಂದೇ ತಪ್ಪು ಮಾಡಿ ಇವನಿಗೆ ಬೈಗುಳ ಕೇಳುವಂತಾಗಿತ್ತು.  ಹೇಗೋ ಎಲ್ಲವನ್ನೂ ಸರಿದೂಗಿಸಿ ಒಂದು ಹಂತಕ್ಕೆ ತರುವಷ್ಟರಲ್ಲಿ ಮಧ್ಯಾಹ್ನವಾಗಿತ್ತು, ಧುಮುಧುಮನೆ ಉರಿಯುತ್ತಿದ್ದ ಸಿಡುಕು ಮೂತಿಯ ಬಾಸ್ ಅಪ್ಪಣೆ ಪಡೆದು ಊಟಕ್ಕೆಂದು  ಬಂದವನಿಗೆ ಸಿಕ್ಕಿದ್ದು  ತಿಳಿಸಾರು, ಅನ್ನ, ಕೊಂಚ ಮಜ್ಜಿಗೆ!  ನಮ್ಮ ಹಣೆಬರಹಕ್ಕೆ ಇಷ್ಟಾದರೂ ದೊರಕಿತಲ್ಲ ಎಂದು ಸಮಾಧಾನದಿಂದ ಅದನ್ನೇ ತಿಂದು  ಮತ್ತೆ ಕಛೇರಿಗೆ ಬಂದಿದ್ದ.  

ಉರಿಮೂತಿಯ ಬಾಸ್ ಕೊಂಚ ಬಿಡುವಾಗುವುದನ್ನೇ ಕಾಯುತ್ತಿದ್ದವನು ನಾಲ್ಕು ಘಂಟೆಗೆ ಸರಿಯಾಗಿ ಅವನ ಕಛೇರಿಯೊಳಕ್ಕೆ ಕಾಲಿಟ್ಟಿದ್ದ.  ಏಕೆ ಬಂದಿದ್ದು ಎಂದು ಪ್ರಶ್ನಾರ್ಥಕವಾಗಿ ನೋಡಿದವನಿಗೆ ತಲೆ ಕೆರೆಯುತ್ತಾ ದೈನೇಪಿ ಭಾವದಲ್ಲಿ ನಿನ್ನೆ ನಿಮ್ಮಲ್ಲಿ ಕೊಂಚ ಹಣ ಕೇಳಿದ್ದೆನಲ್ಲ ಸರ್, ಅದಕ್ಕೇ ಬಂದೆ ಎಂದು ಮೈಯ್ಯನ್ನು ಹಿಡಿ ಮಾಡಿಕೊಂಡು ನಿಂತಿದ್ದ.  ತನ್ನ ಪರ್ಸಿನಿಂದ ಐದುನೂರರ ನೋಟೊಂದನ್ನು ತೆಗೆದು ಟೇಬಲ್ ಮೇಲೆ ಬಿಸಾಡಿದ ಬಾಸ್ ಸಂಬಳ ಬಂದ ತಕ್ಷಣ ಹಿಂದಿರುಗಿಸಬೇಕು ಎಂದಿದ್ದ.  ಬಹಳ ವಿನಮ್ರತೆಯಿಂದ ಆ ನೋಟನ್ನೆತ್ತಿಕೊಂಡು ತುಂಬಾ ಧನ್ಯವಾದಗಳು ಸರ್, ಸಂಬಳ ಬಂದ ತಕ್ಷಣ ಹಿಂದಿರುಗಿಸುವೆ ಎಂದು ತನ್ನ ಜಾಗಕ್ಕೆ ಹಿಂದಿರುಗಿದ್ದ. 

ಸರಿಯಾಗಿ ನಾಲ್ಕೂ ಮುಕ್ಕಾಲಿಗೆ ಅವನ ಟೇಬಲ್ ಮೇಲಿದ್ದ ದೂರವಾಣಿ ರಿಂಗಣಿಸಿತ್ತು, ಅತ್ತಲಿಂದ ಅವನ ಅರ್ಧಾಂಗಿ ನಾನು ಮಕ್ಕಳೊಡನೆ ಹೊರಟಿದ್ದೀನಿ, ಶಿವಾಜಿನಗರದ ಬಸ್ ನಿಲ್ದಾಣದಲ್ಲಿ ವಿನುತಾ ಹೋಟೆಲ್ ಮುಂದೆ ಕಾಯುತ್ತಿರುತ್ತೇನೆ ಎಂದಿದ್ದಳು.  ಸರಿ, ನಾನು ಆರೂಕಾಲಿಗೆ ಬರುತ್ತೇನೆ ಎಂದು ಫೋನ್ ಇಟ್ಟಿದ್ದ.  ಮಗಳು ಓದುತ್ತಿದ್ದ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ, ಓದಿನಲ್ಲಿ, ಇತರ ಚಟುವಟಿಕೆಗಳಲ್ಲಿ ಸದಾ ಮುಂದಿದ್ದ ಮಗಳು ವಾರ್ಷಿಕೋತ್ಸವದ ಕೆಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಳು.  ಆ ಪುಟಾಣಿಯ ಆಸೆಯಂತೆ ಅವಳಿಗೆ ಬೇಕಾದ ಬಣ್ಣ ಬಣ್ಣದ ಬಟ್ಟೆ, ಕೈ ಬಳೆ, ಕಾಲು ಚೀಲ, ಚಪ್ಪಲಿ ಇತ್ಯಾದಿಗಳನ್ನು ಕೊಡಿಸಲು ಶಿವಾಜಿನಗರಕ್ಕೆ ಬರಲು ಹೇಳಿದ್ದ.  ದಿನಸಿ ಅಂಗಡಿಯ ಕರಿಗೌಡನಿಗೆ  ಐವತ್ತು ರೂಪಾಯಿ ಸಾಲ ಕೊಡುವಂತೆ ಹೇಳಿ ಬಂದಿದ್ದ, ಅದನ್ನು ಪಡೆದುಕೊಂಡ ಹೆಂಡತಿ ಬಸ್ ಹಿಡಿದು ಮಕ್ಕಳೊಡನೆ ಶಿವಾಜಿನಗರಕ್ಕೆ ಬಂದಿದ್ದಳು.  ತನ್ನ ಕೆಲಸಗಳನ್ನೆಲ್ಲ ಮುಗಿಸಿ, ಜನರಿಂದ ತುಂಬಿದ್ದ ಬಸ್ಸಿನಲ್ಲಿ ವಾಲಾಡುತ್ತಾ ಶಿವಾಜಿನಗರಕ್ಕೆ ಬಂದು ಇಳಿಯುವುದರಲ್ಲಿ ಆರೂ ಮುಕ್ಕಾಲಾಗಿ ಹೋಗಿತ್ತು.  

ಅತ್ತಿತ್ತ ನೋಡುತ್ತಾ ಚಡಪಡಿಸುತ್ತಾ ವಿನುತಾ ಹೋಟೆಲ್ಲಿನ ಮುಂದಿದ್ದ ಮರದ ಕೆಳಗೆ ನಿಂತಿದ್ದ ಅರ್ಧಾಂಗಿಯೆಡೆಗೆ ಬಂದವನಿಗೆ ಯಾಕಿಷ್ಟು ತಡ ಎಂದು ಸಿಡುಕಿದವಳ ಮಾತಿಗೆ ಉತ್ತರ ಕೊಡುವಷ್ಟು ವ್ಯವಧಾನವಿರಲಿಲ್ಲ.  ಅವಳ ಕೈಯ್ಯಲ್ಲಿದ್ದ ಪುಟ್ಟ ಮಗನನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಸೇಂಟ್ ಮೇರೀಸ್ ಚರ್ಚಿನ ಕಡೆಗೆ ನಡೆಯತೊಡಗಿದ.  ಅವನ ಹಿಂದೆಯೇ ಓಡಿದ ಮಗಳು ಅಪ್ಪಾ, ನನ್ನ ಗೆಳತಿಯರೆಲ್ಲಾ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಕಿಡ್ಸ್ ಕೆಂಪಿನಲ್ಲೇ ಬಟ್ಟೆಗಳನ್ನು ತಂದಿದ್ದಾರೆ, ನಾವೂ ಅಲ್ಲಿಗೇ ಹೋಗೋಣ ಎಂದಿದ್ದಳು.  ಅಲ್ಲಿಗಿಂತಾ ಚೆನ್ನಾಗಿರುವ ಬಟ್ಟೆಗಳನ್ನು ಕೊಡಿಸುತ್ತೇನೆ ಬಾ ಮಗಳೆ, ನಾಳೆ ನಿನಗೆ ಪ್ರಥಮ ಬಹುಮಾನ ಬರೋದು ಗ್ಯಾರಂಟಿ ಎಂದು ಸಮಾಧಾನಿಸಿದ್ದ.  ಒಲ್ಲದ ಮನಸ್ಸಿನಿಂದಲೇ ಜೊತೆಗೆ ಬಂದ ಮಗಳನ್ನು ಕರೆದೊಯ್ದು ಚರ್ಚಿನ ಮುಂಭಾಗದ ರಸ್ತೆಯ ಕೋಣೆಯಲ್ಲಿದ್ದ ಫುಟ್ಪಾತಿನಲ್ಲಿದ್ದ ಅಂಗಡಿಗಳಲ್ಲಿ ಮಗಳು ಕೇಳಿದ್ದ ಬಣ್ಣ ಬಣ್ಣದ ಬಟ್ಟೆಗಳು, ಬಳೆಗಳು, ಕಾಲುಚೀಲ, ಟೊಪ್ಪಿ ಎಲ್ಲಾ ಕೊಡಿಸಿದ್ದ.  ಮುಗ್ಧನಗೆ ನಗುತ್ತಿದ್ದ ಪುಟ್ಟ ಮಗನಿಗೊಂದು ಶರ್ಟು ಖರೀದಿಸಿದ್ದ.  

ಹಿಂದಿರುಗಿ ಬರುವಾಗ ಸೇಂಟ್ ಮೇರಿ ಚರ್ಚಿನೊಳಕ್ಕೆ ಹೋಗಿ ಹೆಂಡತಿ ಮಕ್ಕಳೊಡನೆ ಒಳ್ಳೆಯದು ಮಾಡು ತಾಯಿ ಎಂದು ಪ್ರಾರ್ಥಿಸಿ  ಬಂದಿದ್ದ.   ಕುಳಿತಿದ್ದ ಅಜ್ಜಿಯ ಬುಟ್ಟಿಯಿಂದ  ಎರಡು ಮೊಳ ಮಲ್ಲಿಗೆ ಹೂವು ಖರೀದಿಸಿ ಹೆಂಡತಿಗೆ ಮುಡಿಸಿದ್ದ.  ಪಕ್ಕದಲ್ಲೇ ಇದ್ದ ಸರ್ದಾರ್ಜಿ ಅಂಗಡಿಯಲ್ಲಿ ಕಡಿಮೆಬೆಲೆಯಲ್ಲಿ ತನಗೆಂದು ಒಂದು ಜೋಡಿ ಶೂಗಳನ್ನು ಖರೀದಿಸಿ, ತನ್ನ ಕಿತ್ತು ಹೋಗಿದ್ದ ಹಳೆಯ ಶೂಗಳನ್ನು ಅಲ್ಲೇ ಬಿಸಾಡಿ  ಶೂಗಳನ್ನು ಧರಿಸಿ ಸಂಭ್ರಮಿಸಿದ್ದ.  ಹಾಗೆಯೇ ರಸೆಲ್ ಮಾರ್ಕೆಟ್ ಮುಂಭಾಗಕ್ಕೆ ಬಂದಾಗ ಅಲ್ಲಿನ ಹೋಟೆಲ್ಲುಗಳಲ್ಲಿ ಕೆಂಡದ ಮೇಲೆ ಬೇಯುತ್ತಿದ್ದ ದನದ ಮಾಂಸದ ಘಮ್ಮೆನ್ನುವ ವಾಸನೆಗೆ ಮನಸೋತು ಮಗಳು ಅಪ್ಪಾ, ಕಬಾಬ್ ಕೊಡಿಸಪ್ಪಾ ಎಂದಾಗ ಇದು ಬೇಡ ಮಗಳೆ, ದನದ ಮಾಂಸ, ಎಂದಿದ್ದವನು ಅನತಿ ದೂರದಲ್ಲಿದ್ದ ಕೋಳಿ ಮಾಂಸದ ಹೋಟೆಲ್ಲಿಗೆ ಕರೆದೊಯ್ದು ಎರಡು ಪ್ಲೇಟ್ ಕಬಾಬ್ ತರಿಸಿ ಮಗಳಿಗೂ, ಮಗನಿಗೂ  ಹೆಂಡತಿಗೂ ತಿನ್ನಿಸಿ, ಅವರ ಜೊತೆಗೆ ತಾನೂ ಒಂದರ್ಧ ಪೀಸು ತಿಂದು ಅಲ್ಲಿಂದ ಸೀದಾ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿದ್ದ.  ಜನರಿಂದ ತುಂಬಿದ್ದ ಬಸ್ಸಿನಲ್ಲಿ ಹೇಗೋ ಸೀಟು ಗಿಟ್ಟಿಸಿ, ಹೆಂಡತಿ ಮಕ್ಕಳನ್ನು ಕೂರಿಸಿ, ತಾನು ಕೊನೆಯ ನಿಲ್ದಾಣದವರೆಗೂ ನಿಂತೇ ಪಯಣಿಸಿದ್ದ. 

ಮರುದಿನ ಎಂದಿನಂತೆ ನಾಲ್ಕೂವರೆಗೆಲ್ಲ ಎದ್ದು ತನ್ನ ಕೆಲಸಕ್ಕೆ ಹೊರಟು ಬಂದಿದ್ದ.  ಬಾಸ್ ಅನುಮತಿ ಕೊಟ್ಟಲ್ಲಿ ಶಾಲೆಯ ಕಾರ್ಯಕ್ರಮಕ್ಕೆ ಬರುವೆನೆಂದು ಹೇಳಿದ್ದ.  ಆದರೆ ಕಛೇರಿಯಲ್ಲಿದ್ದ ಕೆಲಸದ ಒತ್ತಡದಲ್ಲಿ ಅನುಮತಿ ಕೇಳಲಾಗಲೇ ಇರಲಿಲ್ಲ, ಶಾಲೆಯ ಕಾರ್ಯಕ್ರಮಕ್ಕೆ ಹೋಗಲೂ ಆಗಿರಲಿಲ್ಲ.  ಮತ್ತೆ ಅವನು ಮನೆಗೆ ಹಿಂದಿರುಗುವಾಗ ಅಂದು ಮಗಳು ಮಲಗದೇ ಇವನಿಗಾಗಿ ಕಾದು ಕುಳಿತಿದ್ದಳು.  ಶಾಲೆಯಲ್ಲಿ ಕೊಟ್ಟ ಬಹುಮಾನಗಳನ್ನು ತನ್ನ ಮುಂದಿಟ್ಟುಕೊಂಡು ಅರಳುಗಣ್ಣುಗಳಿಂದ ತುಟಿ ಉಬ್ಬಿಸಿ ತನ್ನ ನಾಟ್ಯದ ಬಗ್ಗೆ, ತಾನು ಗೆದ್ದ ಸ್ಪರ್ಧೆಗಳ ಬಗ್ಗೆ  ಅವಳು ವರ್ಣಿಸುತ್ತಿದ್ದರೆ ಅವನಿಗೆ ಸ್ವರ್ಗ ಮೂರೇ ಗೇಣಿನಲ್ಲಿದ್ದಂತ್ತಿತ್ತು. ಕೈಕಾಲು ತೊಳೆದು ಬಂದವನು ಊಟಕ್ಕೆ ಕುಳಿತಾಗ ಅವನ ತೊಡೆಯ ಮೇಲೆ ತಲೆಯಿಟ್ಟು ತನ್ನ ಶಾಲೆಯ ವೈಭವವನ್ನು ವರ್ಣಿಸುತ್ತಿದ್ದ ಮಗಳು ಅದ್ಯಾವಾಗಲೋ ನಿದ್ದೆಗೆ ಜಾರಿದ್ದಳು.  ನಿಧಾನವಾಗಿ ಅವಳನ್ನು ಎತ್ತಿ ಹಾಸಿಗೆಯ ಮೇಲೆ ಮಲಗಿಸಿ ಅವಳ ಕೆನ್ನೆಗೊಂದು ಮುತ್ತನ್ನಿಟ್ಟಿದ್ದ.   ಮಗಳ ಯಶಸ್ಸಿನ ಬಗ್ಗೆ ಖುಷಿಯಾಗಿದ್ದ ಅರ್ಧಾಂಗಿಯೂ ಅಂದು ಅವನೊಡನೆ ತುಂಬಾ  ಒಲವಿನಿಂದಿದ್ದಳು. 

 (ಮುಂದುವರೆಯುವುದು,,,,,,,,)

Wednesday, June 1, 2016

ಪೊಲೀಸರೆಂದರೆ ಮನುಷ್ಯರಲ್ಲವೇ,,,,,,,,,,,,,,,,,,,,,???





ಬರುವ ಜೂನ್ ತಿಂಗಳ ನಾಲ್ಕರಂದು ಕರ್ನಾಟಕದ ಪೊಲೀಸರು ಮುಷ್ಕರ ನಡೆಸಲಿದ್ದಾರೆ ಎನ್ನುವುದು ಇಡೀ ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿದೆ.  ಸದಾ ಸಮವಸ್ತ್ರ ಧರಿಸಿ ಶಿಸ್ತಿನ ಸಿಪಾಯಿಗಳಂತಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸರ ಮುಷ್ಕರಕ್ಕೆ ಅವರದ್ದೇ ಆದ ಕಾರಣಗಳಿವೆ.  ವೇತನ ತಾರತಮ್ಯ, ಭಡ್ತಿ ತಡೆ, ಮೇಲಧಿಕಾರಿಗಳ ಕಿರುಕುಳ, ರಾಜಕಾರಣಿಗಳ ಒತ್ತಡ, ಅಪರಾಧಿಗಳಿಂದ ಸದಾ ಪ್ರಾಣ ಬೆದರಿಕೆ, ಸಂಸಾರದ ಆಗುಹೋಗುಗಳಿಗೆ ಸಮಯದ ಅಭಾವ, ಕೌಟುಂಬಿಕ ಕಲಹಗಳು, ಅನಾರೋಗ್ಯಕರ ವಾತಾವರಣದಲ್ಲಿ  ನಿರ್ವಹಿಸುವ ಸಂಚಾರ ಪೊಲೀಸರಿಗಂತೂ ಸದಾ ತಮ್ಮ ಆರೋಗ್ಯದ ಚಿಂತೆ, ಹೀಗೆ ಹತ್ತು ಹಲವಾರು ಪ್ರಬಲ ಕಾರಣಗಳಿಂದಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚು ಪೊಲೀಸರು ಸಾಮೂಹಿಕ ರಜೆಯ ಮೇಲೆ ತೆರಳುತ್ತಿದ್ದಾರೆ.  ಪೊಲೀಸರು ತುಂಬಾ ಶಿಸ್ತಿನವರು, ಹಾಗೆಲ್ಲಾ ಮುಷ್ಕರ ಮಾಡುವುದಿಲ್ಲ ಎಂದು ಹುಸಿ ನಗುತ್ತಿದ್ದಾರೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು.  ಹಾಗೊಮ್ಮೆ ಮುಷ್ಕರದಲ್ಲಿ ಭಾಗಿಯಾದರೆ ಎಸ್ಮಾ(ಅವಶ್ಯಕ ಸೇವೆಗಳ) ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಅನ್ನುತ್ತಾರೆ ಹಿರಿಯ ಅಧಿಕಾರಿಗಳು ಹಾಗೂ ಗೃಹಮಂತ್ರಿಗಳು.   ಈ ಹಿನ್ನೆಲೆಯಲ್ಲಿ ಪೊಲೀಸರೊಂದಿಗಿನ ನನ್ನ ಒಡನಾಟದ ಕೆಲವು ನೆನಪುಗಳು.

ನಾನಾಗ ಆರನೆಯ ತರಗತಿಯಲ್ಲಿ ಓದುತ್ತಿದ್ದೆ, ಅಪ್ಪನ ಹೋಟೆಲ್ಲಿಗೆ ಒಬ್ಬರು ವಯಸ್ಕ ಪೊಲೀಸ್ ಪೇದೆ ಖಾಯಂ ಗಿರಾಕಿಯಾಗಿದ್ದರು.  ಅಪ್ಪ ಮಾಡುತ್ತಿದ್ದ "ಕೇಟೀ" ಅವರಿಗೆ ತುಂಬಾ ಇಷ್ಟ.   ಬೆಳಿಗ್ಗೆ ಮತ್ತು ಸಂಜೆ ಅಪ್ಪನ ಹೋಟೆಲ್ಲಿಗೆ ಬಂದು "ಕೇಟೀ" ಕುಡಿಯುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರು.  ಅದಾಗಲೇ ನಿವೃತ್ತಿಯ ಅಂಚಿನಲ್ಲಿದ್ದ ಅವರು ತಮ್ಮ ಕೆಲಸದ ಅವಧಿಯ ಬಹು ಭಾಗವನ್ನು ತಮ್ಮ ಮೇಲಧಿಕಾರಿಯ ಮನೆಕೆಲಸದಲ್ಲಿಯೇ  ಕಳೆಯುತ್ತಿದ್ದರಂತೆ!  ಬೆಳಿಗ್ಗೆಯೇ ಅವರ ಹೋಗಿ ಅವರ ಮಕ್ಕಳನ್ನು ಶಾಲೆಗೆ ಬಿಡುವುದು, ನಂತರ ಬಂದು ಮನೆಯವರ ಬಟ್ಟೆಗಳನ್ನು ಒಗೆದು  ,ನಂತರ ಮಾಡಿ ಸಾಹೇಬರಿಗೆ ಊಟ ತೆಗೆದುಕೊಂಡು ಠಾಣೆಗೆ ಹೋಗುತ್ತಿದ್ದರಂತೆ!  ಊಟದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಸಾಹೇಬರು ಎಲ್ಲರೆದುರಿಗೆ ಅವರ ವಯಸ್ಸಿಗೂ ಬೆಲೆ ಕೊಡದೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರಂತೆ!  "ಕೇಟೀ" ಕುಡಿಯುತ್ತಾ  ಅವರು ಈ ಕಥೆಗಳನ್ನೆಲ್ಲಾ ಅಪ್ಪನೊಡನೆ ಹಂಚಿಕೊಳ್ಳುತ್ತಿದ್ದರೆ ನಾನು ಮೂಕನಂತೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ!  ತಾತ, ನೀವು ಅವರಿಗೆ ಡಿಶುಂ ಡಿಶುಂ ಅಂತ ಹೊಡೀಬೇಕು ತಾನೇ ಅಂತ ನಾನು ಕೇಳಿದರೆ ನನ್ನ ಗಲ್ಲ ನೇವರಿಸಿ ಸುಮ್ಮನಾಗುತ್ತಿದ್ದರು.  ಬಹುಶಃ ನನ್ನ ಜೀವನದಲ್ಲಿ ನಾನೆಂದಿಗೂ ಮರೆಯಲಾಗದ  ಪೊಲೀಸಪ್ಪ ಅವರು!

ಅಮ್ಮನಿಗೆ ತಿಪಟೂರಿಗೆ ವರ್ಗವಾದಾಗ ಅಪ್ಪ ಅಲ್ಲಿನ ತರಕಾರಿ ಮಾರ್ಕೆಟ್ ಪಕ್ಕದಲ್ಲಿ ಒಂದು ಸಣ್ಣ ಹೋಟೆಲ್ ಆರಂಭಿಸಿದ್ದರು.  ಪಕ್ಕದಲ್ಲಿದ್ದ ತಾಲ್ಲೂಕು ಕಚೇರಿ, ಪೊಲೀಸ್ ಠಾಣೆ ಹಾಗೂ ಇತರ ಸರ್ಕಾರಿ ಕಚೇರಿಗಳಿಗೆ ಅಪ್ಪನ ಹೋಟೆಲ್ಲಿನಿಂದ ಟೀ  ಸರಬರಾಜಾಗುತ್ತಿತ್ತು. ಆಗ ಅಲ್ಲಿದ್ದ ಪ್ರತಿಯೊಬ್ಬ  ಪೊಲೀಸ್ ಪೇದೆಯಿಂದ ಹಿರಿಯ ಅಧಿಕಾರಿಗಳವರೆಗೂ ಎಲ್ಲರೂ ಪರಿಚಿತರಾಗಿದ್ದರು.  ಆಗ ಹೊಸದಾಗಿ ಬಿಡುಗಡೆಯಾಗಿದ್ದ ಬಿ.ಎಸ.ಎ. ಸೈಕಲ್ಲನ್ನು ಕೊಂಡಿದ್ದ ಪೇದೆಯೊಬ್ಬರು  ನಾನು ಕೇಳಿದಾಗೆಲ್ಲಾ  ತುಳಿಯಲು ಕೊಡುತ್ತಿದ್ದರು.  ಟೀ ಕೊಡಲು ಠಾಣೆಗೆ ಹೋದಾಗ ಅಲ್ಲಿದ್ದ ಬಂದೂಕುಗಳನ್ನು ನನ್ನ ಕೈಗಳಿಂದ ಮುಟ್ಟಿ ಸಂಭ್ರಮಿಸುತ್ತಿದ್ದೆ.  ಗತ್ತಿನಿಂದ ನಡೆದು ಬರುವ ಹಿರಿಯ ಅಧಿಕಾರಿಗಳಿಗೆ ಪೇದೆಗಳೆಲ್ಲಾ ಠಕ್ಕೆಂದು ಸೆಲ್ಯೂಟ್ ಹೊಡೆಯುವಾಗ  ನಾನೂ ಸಹ ಅವರಂತೆಯೇ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿದ್ದೆ.  ಒಮ್ಮೊಮ್ಮೆ ಠಾಣೆಯಲ್ಲಿ  ಅಧಿಕಾರಿಗಳ ಅಟ್ಟಹಾಸಕ್ಕೆ ಪೇದೆಗಳು ನಡುಗುತ್ತಿದ್ದರು, ಎದುರು ಮಾತನಾಡಲಾಗದೆ ಭಯಭೀತರಾಗಿ ತಲೆಬಗ್ಗಿಸಿ ನಿಲ್ಲುತ್ತಿದ್ದರು, ಆಗೆಲ್ಲಾ  ಯಾವುದೇ ಕಾರಣಕ್ಕೂ ಪೊಲೀಸ್ ಪೇದೆಯ ಕೆಲಸಕ್ಕೆ ಮಾತ್ರ ಸೇರಲೇಬಾರದು ಅಂದುಕೊಳ್ಳುತ್ತಿದ್ದೆ! 

ಕಾಲೇಜು ದಿನಗಳಲ್ಲಿ ಕಂಡ ಪ್ರಭಾಕರ್ ಎಂಬ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ದರ್ಪ, ನೇರ ನಡವಳಿಕೆ, ಗತ್ತಿನ ಮಾತುಗಳಿಂದ ಇಂದಿಗೂ  ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.  ವೈದ್ಯನೊಬ್ಬ  ಹೆಂಡತಿಗೆ ವಿಷದ ಇಂಜೆಕ್ಷನ್ ಕೊಟ್ಟು ಕೊಂದಾಗ, ಅವನನ್ನು ಬಂಧಿಸಿ ಮೆರವಣಿಗೆ ಮಾಡಿ ಜೈಲಿಗಟ್ಟಿದ್ದ ಅವರ ಖದರ್  ಇಂದಿಗೂ ಚಿರನೂತನ.  ಆದರೆ ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಪ್ರಭಾವದಿಂದ ಆ ವೈದ್ಯರು ಜೈಲಿನಿಂದ ಹೊರಬಂದಿದ್ದಲ್ಲದೆ ಮತ್ತೊಂದು ಮದುವೆಯನ್ನೂ  ಮಾಡಿಕೊಂಡಿದ್ದರು. 

ನಮ್ಮ ಜೊತೆಗೆ ಕಾಲೇಜಿನಲ್ಲಿ ಓದುತ್ತಿದ್ದ ಗೆಳೆಯನೊಬ್ಬ ಮನೆಯಲ್ಲಿ ಪೋಷಕರು ಅವನಿಗೆ ಒಂದು "ಲೂನಾ" ಕೊಡಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.  ಆಗ ಅವನ ಮೃತಶರೀರವನ್ನು ಕಾವಲು ಕಾಯ್ದು, ಅಲ್ಲಿಂದ ಆಸ್ಪತ್ರೆಗೆ ಸಾಗಿಸಿ, ಶವಪರೀಕ್ಷೆಯ ನಂತರ ಪೋಷಕರಿಗೊಪ್ಪಿಸಿ, ಅಪಾರ ದುಃಖದಲ್ಲಿದ ಅವರನ್ನು ಸಮಾಧಾನಪಡಿಸುತ್ತಿದ್ದ ಪೊಲೀಸರನ್ನು ಕಂಡು  ನಮಗೆ ಅವರ ಬಗ್ಗೆ ಹೆಮ್ಮೆ ಎನ್ನಿಸಿತ್ತು.

ವಿ.ಪಿ.ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ನಡೆದ ಮಂಡಲ್ ವರದಿ ವಿರೋಧಿ ಚಳುವಳಿಯಲ್ಲಿ ನನಗೆ ಪೊಲೀಸರ ಲಾಠಿಯ ಪರಿಚಯವಾಗಿತ್ತು.  ವಿದ್ಯಾರ್ಥಿ ಸಂಘದ ಮುಖಂಡನಾಗಿ ಮೀಸಲಾತಿ ವಿರೋಧಿ ಚಳುವಳಿಯ ಮುಂಚೂಣಿಯಲ್ಲಿದ್ದ ನನಗೆ ಸಾಕಷ್ಟು ಏಟುಗಳು ಬಿದ್ದಿದ್ದವಲ್ಲದೆ ಜೈಲಿನ ದರ್ಶನವೂ ಆಗಿತ್ತು.  ಮೊದಲ ಬಾರಿಗೆ ಪೊಲೀಸರ ಕ್ರೌರ್ಯದ ಪರಿಚಯವಾಗಿ ಅವರ ಮೇಲಿದ್ದ ಗೌರವ ಕಡಿಮೆಯಾಗಿತ್ತು.   ಆದರೆ ಆಗ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದರು.

ಪದವಿ ಮುಗಿಸಿ ಉದ್ಯೋಗನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದಾಗ ನನ್ನ ಹಾಗೂ ಪೊಲೀಸರ ನಡುವಿನ ಸಂಪರ್ಕ ತುಂಬಾ ಹೆಚ್ಚಾಯಿತು.  ಪೊಲೀಸ್ ಇಲಾಖೆ ಸೇರಬೇಕೆಂದಿದ್ದ ನನಗೆ  ಅಲ್ಲಿ ಉದ್ಯೋಗ ದೊರಕದೆ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಮೇಲ್ವಿಚಾರಕನಾಗಿ ಸೇರಿಕೊಂಡಿದ್ದೆ.  ಗಸ್ತು ಬರುವ ಪೊಲೀಸರೆಲ್ಲ ನನಗೆ ಮಿತ್ರರಾಗಿದ್ದರು,  ನನ್ನ ಉದ್ಯೋಗಕ್ಕೆ ಸಂಬಂಧಿಸಿದಂತೆ ಹಲವಾರು ಕಳ್ಳತನ, ಅಪಘಾತ ಪ್ರಕರಣಗಳಲ್ಲಿ ಸಂಬಂಧಿತ ಪೊಲೀಸ್ ಠಾಣೆಗಳೊಡನೆ  ನನ್ನ ಸಂಪರ್ಕ ಅವ್ಯಾಹತವಾಗಿತ್ತು.  ಆಗೆಲ್ಲಾ ಪೊಲೀಸರ ಜೀವನದ ಹಲವಾರು ಮಹತ್ವದ ವಿಷಯಗಳು ತಿಳಿದು ಬರುತ್ತಿದ್ದವು.  ಕೆಲವು ಪೊಲೀಸ್ ಪೇದೆಗಳಂತೂ ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾಗದೆ ರಾಜಿನಾಮೆ ನೀಡುವ ಮಟ್ಟಕ್ಕೆ ರೋಸಿ ಹೋಗಿದ್ದರು.  ಮತ್ತೆ ಕೆಲವು ಪೇದೆಗಳು ಹಿರಿಯ ಅಧಿಕಾರಿಗಳು ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರೂ ಯಾರ ಅಂಕೆಗೂ ಸಿಗದೆ  ಸಿಕ್ಕಸಿಕ್ಕವರಿಂದ ಸಾಕಷ್ಟು ಮಾಮೂಲಿ ವಸೂಲಿ ಮಾಡುತ್ತಾ ಬ್ರಹ್ಮಾಂಡ ಭ್ರಷ್ಟರಾಗಿದ್ದರು.  ಕೆಲವು ಪೊಲೀಸರು ತಾವು ಸಂಪಾದಿಸುವ ಲಂಚದ ಹಣದಿಂದಲೇ  ಐಷಾರಾಮಿ ಜೀವನ ನಡೆಸುತ್ತಿದ್ದರೆ ಮತ್ತೆ ಕೆಲವರು ತಮ್ಮಆದರ್ಶಗಳಿಗೆ ಜೋತು ಬಿದ್ದು ತಮಗೆ ಬರುವ ಸಂಬಳದಲ್ಲಿಯೇ ಜೀವನ ನಡೆಸಲು ಹೆಣಗುತ್ತಿದ್ದರು.

ಕೆಲವು ಪೊಲೀಸರ ಮನೆಗಳಲ್ಲಿ ಮಹಾಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದು ಅಲ್ಲಿ ಸುಖ ವೈಭೋಗಗಳು ತಾಂಡವವಾಡುತ್ತಿದ್ದರೆ ಇನ್ನು ಕೆಲವರ ಮನೆಗಳಲ್ಲಿ ದರಿದ್ರಲಕ್ಷ್ಮಿ ತಾಂಡವವಾಡುತ್ತಿದ್ದಳು.  ಸಂಜೆಯಾದರೆ ಕೆಲವರ ಮನೆಯಲ್ಲಿ ಮಲ್ಲಿಗೆಯ ಘಮಲಿನೊಡನೆ ಮೈಸೂರ್ ಪಾಕ್ ಸಂಭ್ರಮವಿದ್ದರೆ ಮತ್ತೆ ಕೆಲವರ ಮನೆಯ ಮುಂದೆ  ಗಂಡ ಹೆಂಡಿರ ಜಗಳ ಹಾದಿರಂಪ ಬೀದಿರಂಪವಾಗಿ ಅವರ ಸಂಸಾರ ನಗೆಪಾಟಲಿಗೀಡಾಗುತ್ತಿತ್ತು.  

ಅದೆಷ್ಟೋ ಸಂದರ್ಭಗಳಲ್ಲಿ ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಮನೆಗೆ ಜೀವಂತವಾಗಿ ಬರುವ ಗ್ಯಾರಂಟಿಯೇ ಇಲ್ಲದೆ ಯಾವಾಗಲೂ ಅನಿಶ್ಚಿತತೆಯಲ್ಲಿಯೇ ಬದುಕಬೇಕಾದ ಅನಿವಾರ್ಯತೆ ಪೊಲೀಸರ ಕುಟುಂಬದವರಿಗಿದೆ.  ಬೆಂಗಳೂರಿನಲ್ಲಿ ಕಾವೇರಿ ನೀರಿನ ಗಲಾಟೆಯಾದಾಗ ಮಾಗಡಿ ರಸ್ತೆಯಲ್ಲಿ  ಒಬ್ಬ ಪೊಲೀಸ್ ಪೇದೆಯ ಕೈಯ್ಯನ್ನೇ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದರು. ಕರ್ತವ್ಯ ನಿರತರಾಗಿದ್ದಾಗ ವೇಗವಾಗಿ ಬಂದ ವಾಹನವೊಂದರಿಂದ ಪಾದಚಾರಿಗಳನ್ನು ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ಬಲಿದಾನ ನೀಡಿದ ಗಿರಿಜಾ ಮೀಸೆಯ "ಪೊಲೀಸ್ ತಿಮ್ಮಯ್ಯ" ನವರನ್ನು ಯಾರಾದರೂ ಮರೆಯಲಾದೀತೆ? ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಮಹಾಲಕ್ಷ್ಮಿ ಲೇ ಔಟಿನ ಬಳಿ ಗಲಭೆಯಲ್ಲಿನ ಹಿಂಸಾಚಾರಕ್ಕೆ ಬಲಿಯಾದ ಮಂಜುನಾಥ ಎಂಬ  ಪೊಲೀಸ್ ಅಧಿಕಾರಿಯ ತ್ಯಾಗವನ್ನು ಮರೆಯಲು ಸಾಧ್ಯವೇ?

  ಖದೀಮರ ಗುಂಡೇಟಿಗೆ ಬಲಿಯಾದ ಮಲ್ಲಿಕಾರ್ಜುನ್ ಬಂಡೆ, ನೆಲಮಂಗಲದಲ್ಲಿ ಕಳ್ಳರ ಆಕ್ರಮಣಕ್ಕೆ ಬಲಿಯಾದ ಜಗದೀಶ್ ಮುಂತಾದ ಪೊಲೀಸ್ ಅಧಿಕಾರಿಗಳನ್ನು ಹೇಗೆ ಮರೆಯಲಾದೀತು?  ಇನ್ನು ನಕ್ಸಲರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ದಿನನಿತ್ಯವೂ ಒಂದಿಲ್ಲೊಂದು ಪ್ರಕರಣಗಳಲ್ಲಿ ಪೊಲೀಸರು ಸಾಯುತ್ತಲೇ ಇದ್ದಾರೆ.  ಸ್ವಸ್ಥ ಸಮಾಜಕ್ಕಾಗಿ, ಸಾರ್ವಜನಿಕರ ರಕ್ಷಣೆಗಾಗಿ, ನಮ್ಮ ಸುರಕ್ಷಿತ ನಾಳೆಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿರುವ ಪೊಲೀಸರ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ, ಏಕೆಂದರೆ ಅವರೂ ನಮ್ಮಂತೆಯೇ ಮನುಷ್ಯರು ಎನ್ನುವುದು  ಎಲ್ಲರಿಗೂ ಅರಿವಾಗಬೇಕಿದೆ.  

ತಮ್ಮ ವೇತನ ತಾರತಮ್ಯ, ರಜೆಯಿಲ್ಲದೆ ನಿರಂತರ ದುಡಿತ, ಹಿರಿಯಧಿಕಾರಿಗಳ ಹಾಗೂ ರಾಜಕಾರಣಿಗಳ ದಬ್ಬಾಳಿಕೆಯನ್ನು ವಿರೋಧಿಸಿ ಪೊಲೀಸರು ನಡೆಸುತ್ತಿರುವ ಈ ಮುಷ್ಕರಕ್ಕೆ ನನ್ನ ಬೆಂಬಲವಿದೆ.  ಎಂದೋ ಎಲ್ಲೋ ಒಬ್ಬ ಪೊಲೀಸ್ ಪೇದೆ ನಿಮ್ಮಿಂದ ನೂರು ರೂಪಾಯಿ ಲಂಚ ಪಡೆದ ಸನ್ನಿವೇಶವನ್ನು ಮರೆತುಬಿಡಿ, ಇಡೀ ಸಮಾಜದ ಹಿತದೃಷ್ಟಿಯಿಂದ ಯೋಚಿಸಿ, ಪೊಲೀಸರ ತ್ಯಾಗ, ಬಲಿದಾನಗಳನ್ನು ಮನದಲ್ಲಿ ಸ್ಮರಿಸಿ, ಅವರ ಈ ಪ್ರತಿಭಟನೆಗೆ ನಿಮ್ಮ ಸಹಕಾರವಿರಲಿ, ಬೆಂಬಲವಿರಲಿ.  ನಮ್ಮ ಸಮಾಜದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುವ ಅವರಿಗೂ ಒಂದು ಬದುಕಿದೆಯಲ್ಲವೇ?  ನಮ್ಮಂತೆಯೇ ತಮ್ಮ ಕುಟುಂಬದವರೊಡನೆ ಸಂತೋಷದ ಘಳಿಗೆಗಳನ್ನು ಅನುಭವಿಸಲು ಅವರಿಗೂ ಹಕ್ಕಿದೆಯಲ್ಲವೇ?




Tuesday, May 31, 2016

ಹೀಗೊಬ್ಬನಿದ್ದ ಅಪ್ಪ!


ಬೆಳಗಿನ ನಾಲ್ಕೂವರೆಗಿಟ್ಟಿದ್ದ ಅಲಾರಾಂ ಒಮ್ಮೆಲೇ ಬಡಿದುಕೊಂಡಾಗ ಎಚ್ಚರಾದ ಅವನು ತನ್ನೆದೆಯ ಮೇಲಿದ್ದ ಪತ್ನಿಯ ಕೈಯ್ಯನ್ನು ಮೃದುವಾಗಿ ಎತ್ತಿ ಬದಿಗಿಟ್ಟು, ಸದ್ದಾಗದಂತೆ ಎದ್ದ! ಬಚ್ಚಲುಮನೆಗೆ ಹೋಗಿ ಬಂದು, ಬಿಸಿಬಿಸಿಯಾಗಿ ಒಂದು ಕಾಫಿ ಮಾಡಿ ಕುಡಿದು, ನಿದಿರೆಯ ನಶೆಯಲ್ಲಿದ್ದ ಮಕ್ಕಳಿಬ್ಬರನ್ನೂ ಒಮ್ಮೆ ಕಣ್ತುಂಬಾ ನೋಡಿ, ತನ್ನ ಬೂಟುಗಳನ್ನು ಧರಿಸಿ, ತನ್ನಲ್ಲಿದ್ದ ಬೀಗದ ಕೈಯ್ಯಿಂದ ಮುಂಬಾಗಿಲಿಗೆ ಬೀಗ ಜಡಿದು, ಮನೆಯಿಂದ ಹೊರಬಿದ್ದ. ರಾತ್ರಿಯೇ ಗೇಟಿನ ಪಕ್ಕದಲ್ಲಿಟ್ಟಿದ್ದ ನಾಲ್ಕು ಕಲ್ಲುಗಳನ್ನು ಕೈಯ್ಯಲ್ಲಿ ಹಿಡಿದು ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದ. ನಿಶ್ಯಬ್ಧವಾಗಿದ್ದ ಆ ಬೀದಿಯಲ್ಲಿ ಅವನ ಬೂಟಿನ ಸದ್ದಿಗೆ ಬೆದರಿ ಭಯಂಕರವಾಗಿ ಬೊಗಳುತ್ತಾ ಬರುತ್ತಿದ್ದ ಬೀದಿ ನಾಯಿಗಳನ್ನು ಹೊಡೆದೋಡಿಸಲು ಅವನ ಕೈಯ್ಯಲ್ಲಿದ್ದ ನಾಲ್ಕು ಕಲ್ಲುಗಳೇ ಆಯುಧಗಳಾಗಿದ್ದವು. ಐದು ಘಂಟೆಗೆ ಹೊರಡುವ ಮೊದಲ ಬಸ್ಸಿನಲ್ಲಿ ಶಿವಾಜಿನಗರಕ್ಕೆ ತಲುಪಿ ಅಲ್ಲಿಂದ ಮಾರತ್ ಹಳ್ಳಿಗೆ ಹೋಗುವ ಇನ್ನೊಂದು ಬಸ್ ಹಿಡಿದು ಮಣಿಪಾಲ್ ಆಸ್ಪತ್ರೆಯ ಬಳಿ ಇಳಿದು ತನ್ನ ಕರ್ತವ್ಯದ ಸ್ಥಳಕ್ಕೆ ತಲುಪುವಷ್ಟರಲ್ಲಿ ಪಾಳಿಯ ಇತರ ಭದ್ರತಾ ರಕ್ಷಕರು ಅಲ್ಲಿ ಹಾಜರಾಗಿರುತ್ತಿದ್ದರು.
ಆರೂ ಮುಕ್ಕಾಲಿಗೆ ಎಲ್ಲರನ್ನೂ ಸೇರಿಸಿ ಅಂದು ಯಾರ್ಯಾರು ಎಲ್ಲೆಲ್ಲಿ ಕೆಲಸ ಮಾಡಬೇಕು, ಹಿಂದಿನ ದಿನ ನಡೆದ ಘಟನೆಗಳೇನು, ಯಾವುದೇ ಅವಘಡ ನಡೆಯದಂತೆ ಹೇಗೆ ಕಾರ್ಯ ನಿರ್ವಹಿಸಬೇಕು ಎಂದು ಹದಿನೈದು ನಿಮಿಷಗಳ ವಿವರಣೆ ನೀಡಿ, ಅವರೆಲ್ಲರ ಹಾಜರಾತಿ ತೆಗೆದುಕೊಂಡು ಕೆಲಸಕ್ಕೆ ನಿಯುಕ್ತಿಗೊಳಿಸಿ ತನ್ನ ಕಚೇರಿಗೆ ಬಂದು ಕೂರುವಷ್ಟರಲ್ಲಿ ಬೆಳಗಿನ ಏಳೂವರೆಯಾಗಿ ಹೋಗಿತ್ತು.
ಒಂಭತ್ತು ಘಂಟೆಗೆ ಕಛೇರಿಗೆ ಬರುವ ಉರಿಮೂತಿ ಸಿಂಗಪ್ಪನಂಥ ಭದ್ರತಾ ವಿಭಾಗದ ಮುಖ್ಯಸ್ಥನಿಗೆ ವರದಿಗಳನ್ನು ಸಿದ್ಧಪಡಿಸುವಲ್ಲಿ ಅವನ ಸಮಯ ಕಳೆದು ತಿಂಡಿ ತಿನ್ನಲಾಗದೆ ಅದೆಷ್ಟೋ ದಿನ ಖಾಲಿ ಹೊಟ್ಟೆಯಲ್ಲಿಯೇ ಮಧ್ಯಾಹ್ನದವರೆಗೂ ಕೆಲಸ ಮಾಡುತ್ತಿದ್ದ. ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದ ಆ ಸಂಸ್ಥೆಯಲ್ಲಿ ಯಾವ ಮೂಲೆಯಲ್ಲಿ ಏನೇ ಆದರೂ ಭದ್ರತಾ ವಿಭಾಗದವರು ಅಲ್ಲಿ ಹಾಜರಿರಬೇಕಿತ್ತು. ನಡೆದ ಘಟನೆಯ ಬಗ್ಗೆ ಕೂಲಂಕುಷ ವಿವರಣೆಯನ್ನು ಮುಖ್ಯಸ್ಥರಿಗೆ ಕೊಡದಿದ್ದಲ್ಲಿ ಎಲ್ಲರೆದುರಿಗೆ ವಾಚಾಮಗೋಚರ ಬೈಗುಳ ಕೇಳಬೇಕಿದ್ದುದಲ್ಲದೆ ಕೆಲಸಕ್ಕೆ ಸಂಚಕಾರ ಬರುವ ಸಂಭವವಿತ್ತು. ತನಗೆ ಎಷ್ಟೇ ಹಿಂಸೆಯಾದರೂ, ನೋವಾದರೂ ಬೆಳಿಗ್ಗೆ ಮನೆಯಿಂದ ಹೊರ ಬರುವಾಗ ಕಂಡ ಪತ್ನಿ ಮಕ್ಕಳ ಮುಗ್ಧ ಮುಖವನ್ನು ನೆನಪಿಸಿಕೊಂಡು ಅವನು ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದ! ಮುಂದೊಂದು ದಿನ ತನಗೂ ಒಳ್ಳೆಯ ದಿನಗಳು ಬರುತ್ತವೆ, ಆಗ ತನ್ನ ಕೈ ಕೆಳಗೆ ಕೆಲಸ ಮಾಡುವವರನ್ನು ಎಂದಿಗೂ ಈ ರೀತಿ ನಡೆಸಿಕೊಳ್ಳದೆ ಪ್ರೀತಿಯಿಂದಲೇ ಅವರನ್ನು ಗೆದ್ದು ಕೆಲಸ ಸಾಧಿಸಬೇಕು ಅಂದುಕೊಳ್ಳುತ್ತಿದ್ದ.
ದಿನವಿಡೀ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸಿ ಸಂಜೆ ಮೇಲಧಿಕಾರಿಗಳೆಲ್ಲಾ ಮನೆಗೆ ತೆರಳಿದ ನಂತರ ತಾನು ಎಲ್ಲವೂ ಸರಿಯಿದೆ ಎಂದು ಖಾತ್ರಿಪಡಿಸಿಕೊಂಡು, ರಾತ್ರಿ ಪಾಳಿಯ ರಕ್ಷಕರಿಗೂ ಅವರ ಕೆಲಸ ಕಾರ್ಯಗಳ ಬಗ್ಗೆ ನಿರ್ದೇಶನಗಳನ್ನು ನೀಡಿ, ಮಣಿಪಾಲ್ ಆಸ್ಪತ್ರೆಯ ಬಸ್ ನಿಲ್ದಾಣಕ್ಕೆ ಬಂದು, ಬಸುರಿಯ ಹೊಟ್ಟೆಯಂತೆ ಜನರಿಂದ ಉಬ್ಬಿಕೊಂಡು ಬಂದ ಬಸ್ಸಿನಲ್ಲಿ ತನ್ನದೊಂದು ಕಾಲೂರಿ ನೇತಾಡುತ್ತಾ, ಶಿವಾಜಿನಗರಕ್ಕೆ ಬರುವ ಹೊತ್ತಿಗೆ, ಅವನ ಅರ್ಧ ಜೀವ ಹೋಗಿರುತ್ತಿತ್ತು. ಅಲ್ಲಿಳಿದು ಮತ್ತೆ ತನ್ನ ಮನೆಯೆಡೆಗೆ ಹೋಗುವ ಬಸ್ ಹತ್ತಿ ಜೋತಾಡುತ್ತಾ ಹೋಗಿ ಮನೆ ತಲುಪುವ ವೇಳೆಗೆ ರಾತ್ರಿಯ ಒಂಭತ್ತಾದರೂ ಆಯಿತು, ಒಮ್ಮೊಮ್ಮೆ ಹತ್ತಾದರೂ ಆಯಿತು! ಬೆಳಿಗ್ಗೆ ತಾನು ಕೆಲಸಕ್ಕೆ ಹೋಗುವಾಗ ಸವಿ ನಿದ್ದೆಯಲ್ಲಿದ್ದ ಮಕ್ಕಳಾಗಲೆ ಶಾಲೆಗೆ ಹೋಗಿ ಬಂದು, ತಮ್ಮ ಮನೆಗೆಲಸವನ್ನು ಮುಗಿಸಿ, ಆಟವಾಡಿ ಬಂದು ಯಾವಾಗಲೋ ಬರಲಿರುವ ಅಪ್ಪನಿಗಾಗಿ ಕಾದು ಸುಸ್ತಾಗಿ ಮಲಗಿ ಬಿಟ್ಟಿರುತ್ತಿದ್ದರು! ಪತ್ನಿ ಅದಾಗಲೇ ಅರೆ ನಿದ್ರೆಯಲ್ಲಿ ಹಾದಿ ಕಾದು ಸಾಕಾಗಿ, ಗಂಡ ಮಾಡುತ್ತಿರುವ ಅರ್ಥವಿಲ್ಲದ ಕೆಲಸಕ್ಕೆ ಹಿಡಿ ಶಾಪ ಹಾಕುತ್ತಿದ್ದಳು.
ದಿನವಿಡೀ ದುಡಿದು, ದಣಿದು ಸಾಕಾಗಿ ಮನೆಗೆ ಬಂದವನಿಗೆ ಸಿಗುತ್ತಿದ್ದದ್ದು ಪತ್ನಿಯ ಕೋಪದ ನೋಟ, ಸಿಡುಕು ಮಾತುಗಳೇ ಹೊರತು ಸಾಂತ್ವನದ ನುಡಿಗಳಲ್ಲ! ಅದೇನು ಕೆಲಸ ಮಾಡ್ತೀಯೋ ನಾ ಕಾಣೆ, ಈ ಜಗತ್ತಿನಾಗೆ ಬೇರೆ ಯಾರೂ ಮಾಡ್ದೆ ಇರೋಂಥದ್ದು,,,ಏನು ಮನೆಗೆ ಬರೋದಿಕ್ಕೆ ಹೊತ್ತು ಗೊತ್ತು ಇಲ್ಲವಾ ಎಂದು ಮೂತಿ ತಿರುವುತ್ತಿದ್ದ ಪತ್ನಿಗೆ ಅವನ ಮೌನವೇ ಉತ್ತರವಾಗಿರುತ್ತಿತ್ತು.
(ಮುಂದುವರೆಯುತ್ತದೆ..... )
ಪ್ರೀತಿಹೆಚ್ಚಿ

Tuesday, May 10, 2016

ಮಧುಶಾಲೆಯ ಸಾಲುಗಳು,,,,,,,,,,,

ಆ ಮಧು ಬಟ್ಘ್ಟಲಿನ ಕೊನೆಯ ಹನಿಯಲ್ಲಿ 
ಚಪ್ಪರಿಸಿ ಆಸ್ವಾದಿಸುವ ವಿಶಿಷ್ಟ ರುಚಿಯಲ್ಲಿ
 
ಮತ್ತೇರಿದ ಕಂಗಳ ಮುಂದೆ ನೀ ನಿಂತೆಯಲ್ಲೆ 
ನಶೆಯೆಲ್ಲ ಇಳಿದು ಎದೆಬಡಿತ ಹೆಚ್ಚಾಯಿತಲ್ಲೇ!  :-) 

"""""""""""""""""""""""""""""""""""""""""""""""""""""""""""""

ಅಂದು ದೇವರ ಗುಡಿಯಲ್ಲಿ ಪ್ರಮಾಣ ಮಾಡಿದ್ದೆ 
ಮತ್ತೆಂದೂ ನಿನ್ನ ಮುಖವನ್ನು ನೋಡಲಾರೆನೆಂದು!

ಇಂದು ಮುಸ್ಸಂಜೆಯಲಿ ಮಧುಬಟ್ಟಲಿನ ತುಂಬಾ 
ಧಿಮಿತಕ ಧಿಮಿತಕ ಕುಣಿಯುತಿದೆ ನಿನ್ನದೇ ಬಿಂಬ! 

**************************************************************

ದಿನ ಮುಗಿದು ರವಿ ಮುಳುಗಿ ಕತ್ತಲಾವರಿಸುತಿರಲು 
ದಣಿದ ದೇಹವು ತಿರುಗಿ ಮನೆಯೆಡೆಗೆ ತೆರಳುತಿರಲು 

ಮಾರ್ಗಮಧ್ಯದಲಿ ನಶೆಯೇರಿಪ ಮಧುಶಾಲೆಯಿರಲು
ನಿನ್ನ ನೆನಪಲಿ ಒಳಗೊಯ್ದವಲ್ಲೇ ನನ್ನವೇ ಕಾಲು!  :-) 

***************************************************************

ಮನವು ನಿರ್ಧರಿಸಿತ್ತು ಹೌದು ನನ್ನೀ ಮನವು ನಿರ್ಧರಿಸಿತ್ತು 
ಇನ್ನೆಂದಿಗೂ ಹೌದು ಎಂದೆಂದಿಗೂ ಕುಡಿಯಬಾರದೆಂದಿತ್ತು!

ನಿನ್ನ ನಗುಮೊಗದ ಸುಳಿಮಿಂಚ ಸವಿ ನೆನಪು  ಬಂದಿತ್ತು 
ನನ್ನ ಅರಿವಿಲ್ಲದೆ ಕಾಲತ್ತ ನಡೆದಿತ್ತು ಬಾಟಲಿ ಬರಿದಾಗಿತ್ತು! :-(   

***********************************************************************

ಅಂದು ನಾ ತಂದ ಮಲ್ಲಿಗೆ ಪಾಪ, ಮುದುಡಿ ಮಲಗಿತ್ತು 
ನಿನ್ನ ತಿರಸ್ಕಾರದ ನೋಟದಲಿ ಅದು ನೊಂದು ನರಳಿತ್ತು

ಇಂದು ಮಧುಶಾಲೆಯದು ನಗುತ  ಕೈ ಬೀಸಿ ಕರೆದಿತ್ತು
ನನ್ನ ಮನದಾಳದ ನೋವನ್ನೆಲ್ಲ ತಣಿಸಿ ನಿನ್ನ ಮರೆಸಿತ್ತು!  :-(   
 
************************************************************************

Saturday, May 7, 2016




(ಮೇ ತಿಂಗಳ "ನಿಮ್ಮೆಲ್ಲರ ಮಾನಸ" ದಲ್ಲಿ  ನನ್ನ ಅಂಕಣ ನಿಮ್ಮೆಲ್ಲರ ಓದಿಗಾಗಿ ಗೆಳೆಯರೆ.) 

ಭದ್ರತೆಯ ಲೋಕದಲ್ಲಿ - ೧೭ - 

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ೮ ಸಾವಿರ ಕೈಗಾರಿಕೆಗಳು ಒಂದೇ ಪ್ರದೇಶದಲ್ಲಿದ್ದು ಏಷ್ಯಾ ಖಂಡದ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂದು ಹೆಸರಾಗಿದೆ.  ನನ್ನ ವೃತ್ತಿಜೀವನದ ಅತಿ ಹೆಚ್ಚು ಕಾಲ ಅಲ್ಲಿನ ವಿವಿಧ ಕಾರ್ಖಾನೆಗಳಿಗೆ  ಭದ್ರತೆ ಒದಗಿಸುತ್ತಾ ಹೆಚ್ಚು ಕಡಿಮೆ ಎರಡು ಸಾವಿರದಷ್ಟು ಭದ್ರತಾ ರಕ್ಷಕರ ಮೇಲುಸ್ತುವಾರಿಯನ್ನು ಹೊತ್ತಿದ್ದೆ.  ಪ್ರತಿ ಭಾನುವಾರ ಬೆಳಿಗ್ಗೆ ಎಂಟರಿಂದ ಹನ್ನೊಂದರವರೆಗೆ ವಿವಿಧ ಪ್ರದೇಶಗಳಲ್ಲಿ ಭದ್ರತಾ ರಕ್ಷಕರಿಗೆ ತರಬೇತಿ ನೀಡುತ್ತಿದ್ದೆವು.  ಆ ಸಮಯದಲ್ಲಿ ಹತ್ತಿರದಲ್ಲಿದ್ದ ಹೋಟೆಲ್ಲಿಗೆ ಭರ್ಜರಿ ವ್ಯಾಪಾರವಾಗುತ್ತಿತ್ತು.  ನಮ್ಮ ಕಡೆಯಿಂದ ತಲೆಗೆರಡು ಇಡ್ಲಿ ವಡೆ ಮತ್ತು ಟೀ ಕೊಡುತ್ತಿದ್ದೆವು.  ನಮ್ಮ ಸಂಸ್ಥೆಯಿಂದ ಆ ಹಣ ಪಾವತಿಸಿ ತರಬೇತಿಗೆ ಹಾಜರಾಗದೆ ಇದ್ದ ಭದ್ರತಾ ರಕ್ಷಕರ ಸಂಬಳದಲ್ಲಿ ಆ ಹಣವನ್ನು ಕಡಿತ ಮಾಡುತ್ತಿದ್ದೆವು.  ಹೀಗಾಗಿ ಭಾನುವಾರದ ತರಬೇತಿಗೆ ಯಾರೂ ತಪ್ಪಿಸಿಕೊಳ್ಳದೆ ಬರುತ್ತಿದ್ದರು.  ನಮಗೆ ಉಪಾಹಾರ ಒದಗಿಸುತ್ತಿದ್ದ ಪುಟ್ಟ ಹೋಟೆಲ್ಲಿನ ಮಾಲೀಕರಿಂದಲೂ ನನಗೆ ಆಗಾಗ ಬಹಳ ಮುಖ್ಯವಾದ ವಿಷಯಗಳು ತಿಳಿದು ಬರುತ್ತಿದ್ದವು.  ಹೀಗೆ ನನ್ನ ತರಬೇತಿಯಲ್ಲಿ ಪಳಗಿದ ಭದ್ರತಾ ರಕ್ಷಕರು ಈಗಲೂ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿದ್ದಾರೆ, ಕಳೆದ ನವಂಬರಿನಲ್ಲಿ ಬೆಂಗಳೂರಿಗೆ ಹೋಗಿದ್ದಾಗ ಕೆಲವರನ್ನು ಭೇಟಿ ಮಾಡಿ ಜೊತೆಯಲ್ಲಿ ಟೀ ಕುಡಿದಾಗ ಅದೇನೋ ಅರಿಯದ ಆನಂದ!

ಗೊರಗುಂಟೆ ಪಾಳ್ಯದಿಂದ ಸುಂಕದಕಟ್ಟೆಯವರೆಗೂ ಹರಡಿದ್ದ ವಿಶಾಲ ಕೈಗಾರಿಕಾ ಪ್ರದೇಶದ ಗಲ್ಲಿಗಳೆಲ್ಲಾ ನನ್ನ ರೋಡ್ ಕಿಂಗ್ ಗಾಡಿಗೆ ಚೆನ್ನಾಗಿ ಪರಿಚಿತ.  ಹಗಲು ರಾತ್ರಿಯೆನ್ನದೆ ಎಲ್ಲ ಕೈಗಾರಿಕೆಗಳಿಗೆ ಭೇಟಿ ನೀಡುತ್ತಾ, ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುತ್ತಾ ತಿರುಗಾಡುತ್ತಿದ್ದ ನನಗೆ ಅದೆಷ್ಟು ಜನ ಕಳ್ಳರು, ಸಮಾಜ ಘಾತುಕರು ಶಾಪ ಹಾಕುತ್ತಿದ್ದರೋ ಅದಕ್ಕಿಂತ ಹೆಚ್ಚು ಶುಭಾಶಯಗಳನ್ನು ನಮ್ಮ ಭದ್ರತಾ ರಕ್ಷಕರು ಹಾಗೂ ಮಹಿಳಾ ಕಾರ್ಮಿಕರು ಕೊಡುತ್ತಿದ್ದರು.  ಪ್ರತಿನಿತ್ಯ ಒಂದಿಲ್ಲೊಂದು ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದುದರಿಂದಾಗಿ ಯಶವಂತಪುರ, ಪೀಣ್ಯ, ರಾಜಗೋಪಾಲನಗರ,ಕಾಮಾಕ್ಷಿ ಪಾಳ್ಯ, ವಿಜಯನಗರ, ಜ್ಞಾನಭಾರತಿ ಠಾಣೆಗಳ ಪೊಲೀಸರ ಜೊತೆಗೆ ನಿಕಟ ಸಂಪರ್ಕವಿತ್ತು.  ಯಾವುದಾದರೂ ಪ್ರಕರಣದಲ್ಲಿ ಏನಾದರೊಂದು ವಿಚಾರದಲ್ಲಿ ಒಂದಿಲ್ಲೊಂದು ಠಾಣೆಯಿಂದ ಫೋನ್ ಕರೆ ಬರುತ್ತಿತ್ತು, ನನ್ನ ಕೆಲಸದಲ್ಲಿ ಅವರ ಸಹಕಾರ, ಅವರ ಕೆಲಸಗಳಲ್ಲಿ ನನ್ನ ಪತ್ತೇದಾರಿಕೆಯ ಸಹಭಾಗಿತ್ವ ಸಹಜವೆನ್ನುವಂತೆ ನಡೆಯುತ್ತಿತ್ತು.  ಅಲ್ಲದೆ ಆಯುಧಪೂಜೆಯ ಸಂದರ್ಭದಲ್ಲಿ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಿಹಿಯ ಜೊತೆಗೆ ಸಾಕಷ್ಟು ಉಡುಗೊರೆಗಳನ್ನೂ ನೀಡುತ್ತಿದ್ದ ನಮ್ಮ ಸಂಸ್ಥೆಯ ಬಗ್ಗೆ ಪೊಲೀಸರಲ್ಲಿ ಒಂದು ವಿಶೇಷವಾದ ಅಭಿಮಾನವೂ ಇತ್ತು!  ಇದು ನಮ್ಮ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಉದ್ಭವಿಸುತ್ತಿದ್ದ ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯಕವಾಗಿತ್ತು.

ಹೀಗಿರುವಾಗ ಒಮ್ಮೆ ಪ್ರಖ್ಯಾತ ಸಿದ್ಧ ಉಡುಪು ಕಂಪನಿಯೊಂದರಿಂದ ಬಂದ ದೂರು ನಮ್ಮೆಲ್ಲರ ನಿದ್ದೆ ಕೆಡಿಸಿತ್ತು.   ನಮ್ಮ ಭದ್ರತಾ ಸಂಸ್ಥೆಯ ಮುಖ್ಯಸ್ಥರನ್ನು ಕರೆಸಿದ ಸಿದ್ಧ ಉಡುಪು ಕಂಪನಿಯ ಮಾಲೀಕರು ಸಂಸ್ಥೆಯ ಕೆಲವು ಬಹು ಮುಖ್ಯ ದಾಖಲಾತಿಗಳು ಹಾಗೂ ವಿದೇಶಕ್ಕೆ ರಫ್ತು ಮಾಡಲೆಂದು ತಯಾರಿಸಿದ್ದ ಕೆಲವು ದುಬಾರಿ ವಿಶಿಷ್ಟ ಉಡುಪುಗಳ ಮಾದರಿಗಳು ಸಂಸ್ಥೆಯಿಂದ ಕಣ್ಮರೆಯಾಗಿರುವುದಾಗಿಯೂ, ಅವರಿಗೆ ಕೆಲವು ಉತ್ತರ ಭಾರತದ ವ್ಯವಸ್ಥಾಪಕ ಹುದ್ದೆಯಲ್ಲಿರುವವರ ಮೇಲೆ ಅನುಮಾನವಿರುವುದಾಗಿಯೂ ತಿಳಿಸಿದ್ದರು.  ಒಂದೊಮ್ಮೆ ಆ ದಾಖಲಾತಿಗಳು ಹಾಗೂ ಮಾದರಿಗಳು ಪ್ರತಿಸ್ಪರ್ಧಿ ಸಂಸ್ಥೆಗಳ ಕೈ ಸೇರಿದಲ್ಲಿ ತಮ್ಮ ಸಂಸ್ಥೆಗೆ ಬಹು ದೊಡ್ಡ ನಷ್ಟವಾಗುವುದಾಗಿ ಕಳವಳ ವ್ಯಕ್ತಪಡಿಸಿದ್ದರು.   ಪೊಲೀಸ್ ಕೇಸ್ ಆಗದಂತೆ, ಎಲ್ಲಿಯೂ ಸಂಸ್ಥೆಯ ಹೆಸರು ಹೊರಬರದಂತೆ, ಸಂಸ್ಥೆಯ ಪ್ರತಿಷ್ಠೆಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಹುಷಾರಾಗಿ ಕಾರ್ಯ ನಿರ್ವಹಿಸಿ, ಕಳುವಾಗಿರುವ ದಾಖಲಾತಿಗಳು ಹಾಗೂ ಅತ್ಯಂತ ದುಬಾರಿ ಉಡುಪಿನ ಮಾದರಿಗಳನ್ನು ವಾಪಸ್ ತಂದೊಪ್ಪಿಸುವಂತೆ ವಿನಂತಿಸಿದ್ದರು.  

ಸಾಕಷ್ಟು ಜನ ಭದ್ರತಾ ರಕ್ಷಕರು ಆ ಸಂಸ್ಥೆಯ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದುದರಿಂದ ನಮ್ಮ ಸಂಸ್ಥೆಗೆ ಒಳ್ಳೆಯ ಲಾಭವೂ ಇತ್ತು, ಜೊತೆಗೆ ಅಲ್ಲಿ ನಮ್ಮ ಭದ್ರತಾ ರಕ್ಷಕರನ್ನು ನಿಯೋಜಿಸಿದ್ದುದು ಇತರ ಪ್ರತಿಸ್ಪರ್ಧಿಗಳ ಮುಂದೆ ಪ್ರತಿಷ್ಠೆಯ ವಿಷಯವಾಗಿತ್ತು.  ಹೀಗಾಗಿ ಈ ವಿಚಾರವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ ನಮ್ಮ ಸಂಸ್ಥೆಯ ಮುಖ್ಯಸ್ಥರು ನನ್ನ ಜೊತೆಗೆ ಇನ್ನೂ ಕೆಲವು ಅನುಭವಿಗಳ ತಂಡವನ್ನು ರಚಿಸಿ, ಈ ಪ್ರಕರಣವನ್ನು ಬೇಧಿಸುವ ಜವಾಬ್ಧಾರಿಯನ್ನು ನಮ್ಮ ಹೆಗಲಿಗೆ ಕಟ್ಟಿದರು.

ಅವರ ನಿರ್ದೇಶನದಂತೆ ನಾವು ಮೊದಲು ಮಾಡಿದ ಕೆಲಸವೆಂದರೆ ಪೀಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿದ್ದ ಉಸ್ತುವಾರಿ ಅಧಿಕಾರಿಗೆ ಇಡೀ ಪ್ರಕರಣವನ್ನು ವಿವರಿಸಿ, ಅವರ ಸಹಕಾರವನ್ನು ಗಿಟ್ಟಿಸುವುದಾಗಿತ್ತು.  ಅದರಂತೆ ಠಾಣೆಗೆ ಭೇಟಿ ನೀಡಿದಾಗ ನಮ್ಮ ಅದೃಷ್ಟಕ್ಕೆ ಕಳ್ಳತನದ ಪ್ರಕರಣವೊಂದರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ಮಿತಿಯಲ್ಲಿ ಇಬ್ಬರು ಕಳ್ಳರನ್ನು ಬಂಧಿಸಲು ನನ್ನ ಸಹಾಯ ಪಡೆದಿದ್ದ ಅಧಿಕಾರಿಯೊಬ್ಬರು  ಪದೋನ್ನತಿಯಾಗಿ ಅಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದರು.  ನನ್ನನ್ನು ಕಂಡೊಡನೆ ಆತ್ಮೀಯತೆಯಿಂದ ಮಾತನಾಡಿ, ಕಾಫಿ ತರಿಸಿ, ಪ್ರಕರಣದ ವಿವರಗಳನ್ನು ಕೂಲಂಕುಷವಾಗಿ ತಿಳಿದುಕೊಂಡು, ತಮ್ಮ ಕಡೆಯಿಂದ ಸಾಧ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದರು.  ಅಲ್ಲಿಗೆ ನಮ್ಮ ಪ್ರಕರಣ ಅರ್ಧ ಮುಗಿದಂತೆ ಆಗಿತ್ತು, ಏಕೆಂದರೆ ಖಾಸಗಿ ಪತ್ತೇದಾರಿಕೆಯಲ್ಲಿ ಪೊಲೀಸರ ಸಹಕಾರ ಬಹು ಮುಖ್ಯ, ಅದಿಲ್ಲದಿದ್ದಲ್ಲಿ ಕೆಲವೊಮ್ಮೆ ನಾವೇ ಜೈಲಿಗೆ ಹೋಗುವ ಹಾಗಾಗಿಬಿಡುತ್ತದೆ!  ನಂತರ ಆ ಉತ್ತರ ಭಾರತದ ವ್ಯವಸ್ಥಾಪಕರು ಉಳಿದುಕೊಂಡಿದ್ದ ವಸತಿಗೃಹಗಳ ಸಮುಚ್ಚಯ ಇರುವ ಪ್ರದೇಶವನ್ನು ತಿಳಿಸಿ, ಅಂದು ರಾತ್ರಿಗೇ ಪ್ರಕರಣದ ತನಿಖೆ ಶುರು ಮಾಡಬೇಕೆಂದೂ, ನಮ್ಮ ತಂಡದ ಜೊತೆಗೆ ಇಬ್ಬರು ಅನುಭವಿ ಅಪರಾಧ ವಿಭಾಗದ ಪೊಲೀಸರನ್ನು ಕಳಿಸಬೇಕೆಂದು ವಿನಂತಿಸಿಕೊಂಡಿದ್ದೆವು.  ಅದಕ್ಕೊಪ್ಪಿದ ಅವರು ತಮ್ಮ ಇಬ್ಬರು ಪೊಲೀಸರಿಗೆ ನಮ್ಮ ತಂಡದ ಜೊತೆಗೆ ರಾತ್ರಿಯ ಕಾರ್ಯಾಚರಣೆ ಮುಗಿಯುವವರೆಗೂ ಆಯುಧ ಸಹಿತರಾಗಿ ಜೊತೆಯಲ್ಲಿರುವಂತೆ ತಾಕೀತು ಮಾಡಿದ್ದರು.
ಅಂದುಕೊಂಡಂತೆ ಅಂದು ರಾತ್ರಿಗೆ ಸುಮಾರು ಹತ್ತುಜನರ ನಮ್ಮ ತಂಡ, ಇಬ್ಬರು ಶಸ್ತ್ರ ಸಹಿತ ಪೊಲೀಸರೊಡನೆ,  ಆ ಉತ್ತರ ಭಾರತೀಯ ವ್ಯವಸ್ಥಾಪಕರು ಹಾಗೂ ಅಧಿಕಾರಿಗಳು ವಾಸವಿದ್ದ ಜಾಲಹಳ್ಳಿ ಕ್ರಾಸ್ ಬಳಿಯ ವಸತಿ ಸಮುಚ್ಚಯದ ಮೇಲೆ ಧಾಳಿಯಿಟ್ಟಿತ್ತು.  ಸುಮಾರು ಹದಿನೈದು ಫ್ಲಾಟುಗಳಲ್ಲಿ ವಾಸವಿದ್ದ ಅವರೆಲ್ಲಾ ರಾತ್ರಿ ಎಂಟರಿಂದ ಹನ್ನೊಂದರವರೆಗೂ ಒಬ್ಬ ಮುಖ್ಯ ಅಧಿಕಾರಿಯ ಫ್ಲಾಟಿನಲ್ಲಿ ಚೆನ್ನಾಗಿ ಕುಡಿದು, ತಿಂದು ಪಾರ್ಟಿ ಮಾಡುತ್ತಿದ್ದರು.  ಇದನ್ನು ಪತ್ತೆ ಮಾಡಿದ್ದ ನಮ್ಮ ತಂಡ ಪಾರ್ಟಿ ಮುಗಿಸಿ ಒಬ್ಬೊಬ್ಬರೇ ಮನೆಗೆ ಹೋಗುವ ಸಮಯಕ್ಕಾಗಿ   ಕಾದು ಕುಳಿತು, ಆ ಗುಂಪಿನಲ್ಲಿ ಹೆಚ್ಚು ಅನುಮಾನಾಸ್ಪದವಾಗಿದ್ದವನೊಬ್ಬ ಹೊರ ಬರುತ್ತಿದ್ದಂತೆ ಅವನನ್ನು ಹಿಂಬಾಲಿಸಿ, ಅವನು ಮನೆಯೊಳಕ್ಕೆ ಹೋಗುತ್ತಿದ್ದಂತೆ, ಅನಾಮತ್ತಾಗಿ ಅವನ ಹಿಂದೆಯೇ ಅವನ ಮನೆಯೊಳಕ್ಕೆ ಪ್ರವೇಶಿಸಿ, ಅವನು ಸದ್ದೇ ಮಾಡದಂತೆ ಅವನ ಬಾಯಿ ಮುಚ್ಚಿ ನಮ್ಮ ವಶಕ್ಕೆ ತೆಗೆದುಕೊಂಡಿದ್ದೆವು.  ಈ ರೀತಿಯ ಧಾಳಿಯ ಕಿಂಚಿತ್ತೂ ಅನುಮಾನವಿಲ್ಲದಿದ್ದ ಅವನು ಒಮ್ಮೆಲೇ ಅಧೀರನಾಗಿ ಹೋಗಿದ್ದ!

ಮೊದಮೊದಲು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರತಿರೋಧಿಸಿದರೂ ಕೊನೆಗೆ ನಮ್ಮ ಬಲಪ್ರಯೋಗಕ್ಕೆ ಮಣಿದು ಒಂದೊಂದಾಗಿ ಬಾಯಿಬಿಟ್ಟಿದ್ದ!  ಅವನೊಡನೆ ಇನ್ನೂ ನಾಲ್ವರು ಸಹೋದ್ಯೋಗಿಗಳು ಕೈ ಮಿಲಾಯಿಸಿ ಅಮೂಲ್ಯ ದಾಖಲಾತಿಗಳು ಹಾಗೂ ಉಡುಪಿನ ಮಾದರಿಗಳನ್ನು ಕದ್ದು ತಂದಿದ್ದರು. ಅವನನ್ನು ಜೊತೆಗಿಟ್ಟುಕೊಂಡು ಉಳಿದ ನಾಲ್ವರ ಫ್ಲಾಟುಗಳನ್ನೂ ಪ್ರವೇಶಿಸಿ, ಅವರನ್ನು ಕೈ ಕಾಲು ಕಟ್ಟಿ ಕೂಡಿ ಹಾಕಿ, ಇಡೀ ಮನೆಯನ್ನು ಜಾಲಾಡಿ, ಅವರು ಕದ್ದು ತಂದಿದ್ದ ದಾಖಲಾತಿಗಳನ್ನು ಮತ್ತು ದುಬಾರಿ ಉಡುಪಿನ ಮಾದರಿಗಳನ್ನು ನಮ್ಮ ವಶಕ್ಕೆ ಪಡೆದಿದ್ದೆವು.  ಒಟ್ಟಾರೆ ಐದು ಜನರನ್ನು ಒಂದೆ ಫ್ಲಾಟಿನಲ್ಲಿ ಕೂಡಿ ಹಾಕಿ, ಅಕ್ಷರಶಃ ಗೃಹಬಂಧನದಲ್ಲಿರಿಸಿ, ಅವರ ಕಾವಲಿಗೆ ಆರು ಜನರನ್ನಿಟ್ಟು ನಾವು ಜಪ್ತಿ ಮಾಡಿದ್ದ ದಾಖಲಾತಿಗಳೊಡನೆ ಪೀಣ್ಯ ಪೊಲೀಸ್ ಠಾಣೆಗೆ ಹಿಂದಿರುಗಿದ್ದೆವು.   ಪ್ರತಿಯೊಬ್ಬನ ಮನೆಯಲ್ಲೂ ನಾಲ್ಕರಿಂದ ಐದು ಉದ್ಧುದ್ಧದ ಕತ್ತಿಗಳು ಸಿಕ್ಕಿದ್ದವು!  ಅವು ಹೇಗಿದ್ದವೆಂದರೆ ಹಿಂದಿನ ಕಾಲದ ಮಹಾರಾಜರು ಯುದ್ಧಗಳಲ್ಲಿ ಬಳಸುತ್ತಿದ್ದ ಖಡ್ಗಗಳಂತಿದ್ದವು, ಅವುಗಳಿಂದ ಒಬ್ಬ ಮನುಷ್ಯನನ್ನು ಕ್ಷಣಾರ್ಧದಲ್ಲಿ ತುಂಡು ತುಂಡಾಗಿ ಕತ್ತರಿಸಿ ಹಾಕಬಹುದಾಗಿತ್ತು.  ಮೊದಲು ಸಂಸ್ಥೆಯ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಅವರು ಅವೆಲ್ಲವನ್ನೂ ತೆಗೆದುಕೊಂಡು ಅವರ ಕಛೇರಿಗೆ ಬರುವಂತೆ ತಿಳಿಸಿದ್ದರು.  ನಾವು ಅಲ್ಲಿ ತಲುಪಿದಾಗ ಬೆಳಗಿನ ಮೂರು ಘಂಟೆಯಾಗಿತ್ತು.   ಅಪಾರ ಒತ್ತಡಕ್ಕೆ ಸಿಲುಕಿದ್ದ ಅವರು ಮನೆಗೆ ಹೋಗದೆ ನಮ್ಮ ತನಿಖಾತಂಡದ ವರದಿಗಾಗಿ ಕಚೇರಿಯಲ್ಲಿಯೇ ಕಾದು ಕುಳಿತಿದ್ದರು! 

ನಾಲ್ಕಾರು ತಿಂಗಳುಗಳಿಂದ ವಿದ್ರೋಹಿಗಳು ಸಂಚು ಹೂಡಿ ಸಂಸ್ಥೆಯಿಂದ ಅಪಹರಿಸಿದ್ದ ಅಮೂಲ್ಯ ದಾಖಲಾತಿಗಳು ಹಾಗೂ ವಿಶೇಷ ಉಡುಪಿನ ಮಾದರಿಗಳು  ಕೇವಲ ನಾಲ್ಕೈದು ಘಂಟೆಗಳ ಕಾರ್ಯಾಚರಣೆಯಲ್ಲಿ ವಾಪಸ್ ಅವರ ಕೈ ಸೇರಿದ್ದವು.  ಪ್ರತಿಸ್ಪರ್ಧಿ ಸಂಸ್ಥೆಗಳ ಕೈ ಸೇರಿದ್ದರೆ ಆಗಬಹುದಾಗಿದ್ದ ಲಕ್ಷಾಂತರ ರೂಪಾಯಿಗಳ ನಷ್ಟವನ್ನು ತಡೆದ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.  ಅದೇ ಖುಷಿಯಲ್ಲಿ ನಮ್ಮ ತನಿಖಾ ತಂಡಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ಘೋಷಿಸಿದ್ದರು, ಜೊತೆಗೆ ಗೃಹಬಂಧನದಲ್ಲಿದ್ದ ವಿದ್ರೋಹಿಗಳನ್ನು ಮರುದಿನ ಸಂಜೆಯ ರೈಲು ಹತ್ತಿಸಿ ಅವರ ಊರಿಗೆ ಕಳುಹಿಸಬೇಕೆಂದು ವಿನಂತಿಸಿದ್ದರು.  ಅದರಂತೆ ಆ ವಿದ್ರೋಹಿ ಅಧಿಕಾರಿಗಳನ್ನು ಮರುದಿನ ಸಂಜೆಯ ರೈಲಿನಲ್ಲಿ ಕೂರಿಸಿ ಅವರ ಊರಿಗೆ ಕಳುಹಿಸಿ, ಮತ್ತೊಮ್ಮೆ ಬೆಂಗಳೂರಿಗೆ ಬಂದರೆ ಉಡಾಯಿಸಿಬಿಡುವುದಾಗಿ ಧಮಕಿ ಹಾಕಿ ಬಂದಿದ್ದೆವು.   ನಾವು ಭದ್ರತೆ ನೀಡಿದ್ದ ಸಂಸ್ಥೆಗೆ ಒದಗಿ ಬಂದಿದ್ದ ಗಂಡಾಂತರವೊಂದು, ಒಂದೇ ರಾತ್ರಿಯ ಕಾರ್ಯಾಚರಣೆಯಿಂದಾಗಿ ತೊಲಗಿ ಎಲ್ಲವೂ ಸುಖಾಂತ್ಯವಾಗಿತ್ತು.