Sunday, June 5, 2016

ಹೀಗೊಬ್ಬನಿದ್ದ ಅಪ್ಪ - ಭಾಗ ೨.



ಅವನ ಮನಸ್ಸು ಅಂದು ಕೊಂಚ ಗಲಿಬಿಲಿಗೊಳಗಾಗಿತ್ತು.  ಮಾಡುತ್ತಿದ್ದ ಕೆಲಸಗಳಲ್ಲಿ ತಪ್ಪುಗಳಾಗುತ್ತಿದ್ದವು, ಮೇಲಧಿಕಾರಿಗಳಿಗೆ ಸಿದ್ಧಪದಿಸಬೇಕಿದ್ದ ವರದಿಗಳಲ್ಲಿ ಹಲವಾರು ತಪ್ಪುಗಳಾಗಿದ್ದವು, ಕೈಕೆಳಗಿನ ಕೆಲವರು ಬೇಕೆಂದೇ ತಪ್ಪು ಮಾಡಿ ಇವನಿಗೆ ಬೈಗುಳ ಕೇಳುವಂತಾಗಿತ್ತು.  ಹೇಗೋ ಎಲ್ಲವನ್ನೂ ಸರಿದೂಗಿಸಿ ಒಂದು ಹಂತಕ್ಕೆ ತರುವಷ್ಟರಲ್ಲಿ ಮಧ್ಯಾಹ್ನವಾಗಿತ್ತು, ಧುಮುಧುಮನೆ ಉರಿಯುತ್ತಿದ್ದ ಸಿಡುಕು ಮೂತಿಯ ಬಾಸ್ ಅಪ್ಪಣೆ ಪಡೆದು ಊಟಕ್ಕೆಂದು  ಬಂದವನಿಗೆ ಸಿಕ್ಕಿದ್ದು  ತಿಳಿಸಾರು, ಅನ್ನ, ಕೊಂಚ ಮಜ್ಜಿಗೆ!  ನಮ್ಮ ಹಣೆಬರಹಕ್ಕೆ ಇಷ್ಟಾದರೂ ದೊರಕಿತಲ್ಲ ಎಂದು ಸಮಾಧಾನದಿಂದ ಅದನ್ನೇ ತಿಂದು  ಮತ್ತೆ ಕಛೇರಿಗೆ ಬಂದಿದ್ದ.  

ಉರಿಮೂತಿಯ ಬಾಸ್ ಕೊಂಚ ಬಿಡುವಾಗುವುದನ್ನೇ ಕಾಯುತ್ತಿದ್ದವನು ನಾಲ್ಕು ಘಂಟೆಗೆ ಸರಿಯಾಗಿ ಅವನ ಕಛೇರಿಯೊಳಕ್ಕೆ ಕಾಲಿಟ್ಟಿದ್ದ.  ಏಕೆ ಬಂದಿದ್ದು ಎಂದು ಪ್ರಶ್ನಾರ್ಥಕವಾಗಿ ನೋಡಿದವನಿಗೆ ತಲೆ ಕೆರೆಯುತ್ತಾ ದೈನೇಪಿ ಭಾವದಲ್ಲಿ ನಿನ್ನೆ ನಿಮ್ಮಲ್ಲಿ ಕೊಂಚ ಹಣ ಕೇಳಿದ್ದೆನಲ್ಲ ಸರ್, ಅದಕ್ಕೇ ಬಂದೆ ಎಂದು ಮೈಯ್ಯನ್ನು ಹಿಡಿ ಮಾಡಿಕೊಂಡು ನಿಂತಿದ್ದ.  ತನ್ನ ಪರ್ಸಿನಿಂದ ಐದುನೂರರ ನೋಟೊಂದನ್ನು ತೆಗೆದು ಟೇಬಲ್ ಮೇಲೆ ಬಿಸಾಡಿದ ಬಾಸ್ ಸಂಬಳ ಬಂದ ತಕ್ಷಣ ಹಿಂದಿರುಗಿಸಬೇಕು ಎಂದಿದ್ದ.  ಬಹಳ ವಿನಮ್ರತೆಯಿಂದ ಆ ನೋಟನ್ನೆತ್ತಿಕೊಂಡು ತುಂಬಾ ಧನ್ಯವಾದಗಳು ಸರ್, ಸಂಬಳ ಬಂದ ತಕ್ಷಣ ಹಿಂದಿರುಗಿಸುವೆ ಎಂದು ತನ್ನ ಜಾಗಕ್ಕೆ ಹಿಂದಿರುಗಿದ್ದ. 

ಸರಿಯಾಗಿ ನಾಲ್ಕೂ ಮುಕ್ಕಾಲಿಗೆ ಅವನ ಟೇಬಲ್ ಮೇಲಿದ್ದ ದೂರವಾಣಿ ರಿಂಗಣಿಸಿತ್ತು, ಅತ್ತಲಿಂದ ಅವನ ಅರ್ಧಾಂಗಿ ನಾನು ಮಕ್ಕಳೊಡನೆ ಹೊರಟಿದ್ದೀನಿ, ಶಿವಾಜಿನಗರದ ಬಸ್ ನಿಲ್ದಾಣದಲ್ಲಿ ವಿನುತಾ ಹೋಟೆಲ್ ಮುಂದೆ ಕಾಯುತ್ತಿರುತ್ತೇನೆ ಎಂದಿದ್ದಳು.  ಸರಿ, ನಾನು ಆರೂಕಾಲಿಗೆ ಬರುತ್ತೇನೆ ಎಂದು ಫೋನ್ ಇಟ್ಟಿದ್ದ.  ಮಗಳು ಓದುತ್ತಿದ್ದ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ, ಓದಿನಲ್ಲಿ, ಇತರ ಚಟುವಟಿಕೆಗಳಲ್ಲಿ ಸದಾ ಮುಂದಿದ್ದ ಮಗಳು ವಾರ್ಷಿಕೋತ್ಸವದ ಕೆಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಳು.  ಆ ಪುಟಾಣಿಯ ಆಸೆಯಂತೆ ಅವಳಿಗೆ ಬೇಕಾದ ಬಣ್ಣ ಬಣ್ಣದ ಬಟ್ಟೆ, ಕೈ ಬಳೆ, ಕಾಲು ಚೀಲ, ಚಪ್ಪಲಿ ಇತ್ಯಾದಿಗಳನ್ನು ಕೊಡಿಸಲು ಶಿವಾಜಿನಗರಕ್ಕೆ ಬರಲು ಹೇಳಿದ್ದ.  ದಿನಸಿ ಅಂಗಡಿಯ ಕರಿಗೌಡನಿಗೆ  ಐವತ್ತು ರೂಪಾಯಿ ಸಾಲ ಕೊಡುವಂತೆ ಹೇಳಿ ಬಂದಿದ್ದ, ಅದನ್ನು ಪಡೆದುಕೊಂಡ ಹೆಂಡತಿ ಬಸ್ ಹಿಡಿದು ಮಕ್ಕಳೊಡನೆ ಶಿವಾಜಿನಗರಕ್ಕೆ ಬಂದಿದ್ದಳು.  ತನ್ನ ಕೆಲಸಗಳನ್ನೆಲ್ಲ ಮುಗಿಸಿ, ಜನರಿಂದ ತುಂಬಿದ್ದ ಬಸ್ಸಿನಲ್ಲಿ ವಾಲಾಡುತ್ತಾ ಶಿವಾಜಿನಗರಕ್ಕೆ ಬಂದು ಇಳಿಯುವುದರಲ್ಲಿ ಆರೂ ಮುಕ್ಕಾಲಾಗಿ ಹೋಗಿತ್ತು.  

ಅತ್ತಿತ್ತ ನೋಡುತ್ತಾ ಚಡಪಡಿಸುತ್ತಾ ವಿನುತಾ ಹೋಟೆಲ್ಲಿನ ಮುಂದಿದ್ದ ಮರದ ಕೆಳಗೆ ನಿಂತಿದ್ದ ಅರ್ಧಾಂಗಿಯೆಡೆಗೆ ಬಂದವನಿಗೆ ಯಾಕಿಷ್ಟು ತಡ ಎಂದು ಸಿಡುಕಿದವಳ ಮಾತಿಗೆ ಉತ್ತರ ಕೊಡುವಷ್ಟು ವ್ಯವಧಾನವಿರಲಿಲ್ಲ.  ಅವಳ ಕೈಯ್ಯಲ್ಲಿದ್ದ ಪುಟ್ಟ ಮಗನನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಸೇಂಟ್ ಮೇರೀಸ್ ಚರ್ಚಿನ ಕಡೆಗೆ ನಡೆಯತೊಡಗಿದ.  ಅವನ ಹಿಂದೆಯೇ ಓಡಿದ ಮಗಳು ಅಪ್ಪಾ, ನನ್ನ ಗೆಳತಿಯರೆಲ್ಲಾ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಕಿಡ್ಸ್ ಕೆಂಪಿನಲ್ಲೇ ಬಟ್ಟೆಗಳನ್ನು ತಂದಿದ್ದಾರೆ, ನಾವೂ ಅಲ್ಲಿಗೇ ಹೋಗೋಣ ಎಂದಿದ್ದಳು.  ಅಲ್ಲಿಗಿಂತಾ ಚೆನ್ನಾಗಿರುವ ಬಟ್ಟೆಗಳನ್ನು ಕೊಡಿಸುತ್ತೇನೆ ಬಾ ಮಗಳೆ, ನಾಳೆ ನಿನಗೆ ಪ್ರಥಮ ಬಹುಮಾನ ಬರೋದು ಗ್ಯಾರಂಟಿ ಎಂದು ಸಮಾಧಾನಿಸಿದ್ದ.  ಒಲ್ಲದ ಮನಸ್ಸಿನಿಂದಲೇ ಜೊತೆಗೆ ಬಂದ ಮಗಳನ್ನು ಕರೆದೊಯ್ದು ಚರ್ಚಿನ ಮುಂಭಾಗದ ರಸ್ತೆಯ ಕೋಣೆಯಲ್ಲಿದ್ದ ಫುಟ್ಪಾತಿನಲ್ಲಿದ್ದ ಅಂಗಡಿಗಳಲ್ಲಿ ಮಗಳು ಕೇಳಿದ್ದ ಬಣ್ಣ ಬಣ್ಣದ ಬಟ್ಟೆಗಳು, ಬಳೆಗಳು, ಕಾಲುಚೀಲ, ಟೊಪ್ಪಿ ಎಲ್ಲಾ ಕೊಡಿಸಿದ್ದ.  ಮುಗ್ಧನಗೆ ನಗುತ್ತಿದ್ದ ಪುಟ್ಟ ಮಗನಿಗೊಂದು ಶರ್ಟು ಖರೀದಿಸಿದ್ದ.  

ಹಿಂದಿರುಗಿ ಬರುವಾಗ ಸೇಂಟ್ ಮೇರಿ ಚರ್ಚಿನೊಳಕ್ಕೆ ಹೋಗಿ ಹೆಂಡತಿ ಮಕ್ಕಳೊಡನೆ ಒಳ್ಳೆಯದು ಮಾಡು ತಾಯಿ ಎಂದು ಪ್ರಾರ್ಥಿಸಿ  ಬಂದಿದ್ದ.   ಕುಳಿತಿದ್ದ ಅಜ್ಜಿಯ ಬುಟ್ಟಿಯಿಂದ  ಎರಡು ಮೊಳ ಮಲ್ಲಿಗೆ ಹೂವು ಖರೀದಿಸಿ ಹೆಂಡತಿಗೆ ಮುಡಿಸಿದ್ದ.  ಪಕ್ಕದಲ್ಲೇ ಇದ್ದ ಸರ್ದಾರ್ಜಿ ಅಂಗಡಿಯಲ್ಲಿ ಕಡಿಮೆಬೆಲೆಯಲ್ಲಿ ತನಗೆಂದು ಒಂದು ಜೋಡಿ ಶೂಗಳನ್ನು ಖರೀದಿಸಿ, ತನ್ನ ಕಿತ್ತು ಹೋಗಿದ್ದ ಹಳೆಯ ಶೂಗಳನ್ನು ಅಲ್ಲೇ ಬಿಸಾಡಿ  ಶೂಗಳನ್ನು ಧರಿಸಿ ಸಂಭ್ರಮಿಸಿದ್ದ.  ಹಾಗೆಯೇ ರಸೆಲ್ ಮಾರ್ಕೆಟ್ ಮುಂಭಾಗಕ್ಕೆ ಬಂದಾಗ ಅಲ್ಲಿನ ಹೋಟೆಲ್ಲುಗಳಲ್ಲಿ ಕೆಂಡದ ಮೇಲೆ ಬೇಯುತ್ತಿದ್ದ ದನದ ಮಾಂಸದ ಘಮ್ಮೆನ್ನುವ ವಾಸನೆಗೆ ಮನಸೋತು ಮಗಳು ಅಪ್ಪಾ, ಕಬಾಬ್ ಕೊಡಿಸಪ್ಪಾ ಎಂದಾಗ ಇದು ಬೇಡ ಮಗಳೆ, ದನದ ಮಾಂಸ, ಎಂದಿದ್ದವನು ಅನತಿ ದೂರದಲ್ಲಿದ್ದ ಕೋಳಿ ಮಾಂಸದ ಹೋಟೆಲ್ಲಿಗೆ ಕರೆದೊಯ್ದು ಎರಡು ಪ್ಲೇಟ್ ಕಬಾಬ್ ತರಿಸಿ ಮಗಳಿಗೂ, ಮಗನಿಗೂ  ಹೆಂಡತಿಗೂ ತಿನ್ನಿಸಿ, ಅವರ ಜೊತೆಗೆ ತಾನೂ ಒಂದರ್ಧ ಪೀಸು ತಿಂದು ಅಲ್ಲಿಂದ ಸೀದಾ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿದ್ದ.  ಜನರಿಂದ ತುಂಬಿದ್ದ ಬಸ್ಸಿನಲ್ಲಿ ಹೇಗೋ ಸೀಟು ಗಿಟ್ಟಿಸಿ, ಹೆಂಡತಿ ಮಕ್ಕಳನ್ನು ಕೂರಿಸಿ, ತಾನು ಕೊನೆಯ ನಿಲ್ದಾಣದವರೆಗೂ ನಿಂತೇ ಪಯಣಿಸಿದ್ದ. 

ಮರುದಿನ ಎಂದಿನಂತೆ ನಾಲ್ಕೂವರೆಗೆಲ್ಲ ಎದ್ದು ತನ್ನ ಕೆಲಸಕ್ಕೆ ಹೊರಟು ಬಂದಿದ್ದ.  ಬಾಸ್ ಅನುಮತಿ ಕೊಟ್ಟಲ್ಲಿ ಶಾಲೆಯ ಕಾರ್ಯಕ್ರಮಕ್ಕೆ ಬರುವೆನೆಂದು ಹೇಳಿದ್ದ.  ಆದರೆ ಕಛೇರಿಯಲ್ಲಿದ್ದ ಕೆಲಸದ ಒತ್ತಡದಲ್ಲಿ ಅನುಮತಿ ಕೇಳಲಾಗಲೇ ಇರಲಿಲ್ಲ, ಶಾಲೆಯ ಕಾರ್ಯಕ್ರಮಕ್ಕೆ ಹೋಗಲೂ ಆಗಿರಲಿಲ್ಲ.  ಮತ್ತೆ ಅವನು ಮನೆಗೆ ಹಿಂದಿರುಗುವಾಗ ಅಂದು ಮಗಳು ಮಲಗದೇ ಇವನಿಗಾಗಿ ಕಾದು ಕುಳಿತಿದ್ದಳು.  ಶಾಲೆಯಲ್ಲಿ ಕೊಟ್ಟ ಬಹುಮಾನಗಳನ್ನು ತನ್ನ ಮುಂದಿಟ್ಟುಕೊಂಡು ಅರಳುಗಣ್ಣುಗಳಿಂದ ತುಟಿ ಉಬ್ಬಿಸಿ ತನ್ನ ನಾಟ್ಯದ ಬಗ್ಗೆ, ತಾನು ಗೆದ್ದ ಸ್ಪರ್ಧೆಗಳ ಬಗ್ಗೆ  ಅವಳು ವರ್ಣಿಸುತ್ತಿದ್ದರೆ ಅವನಿಗೆ ಸ್ವರ್ಗ ಮೂರೇ ಗೇಣಿನಲ್ಲಿದ್ದಂತ್ತಿತ್ತು. ಕೈಕಾಲು ತೊಳೆದು ಬಂದವನು ಊಟಕ್ಕೆ ಕುಳಿತಾಗ ಅವನ ತೊಡೆಯ ಮೇಲೆ ತಲೆಯಿಟ್ಟು ತನ್ನ ಶಾಲೆಯ ವೈಭವವನ್ನು ವರ್ಣಿಸುತ್ತಿದ್ದ ಮಗಳು ಅದ್ಯಾವಾಗಲೋ ನಿದ್ದೆಗೆ ಜಾರಿದ್ದಳು.  ನಿಧಾನವಾಗಿ ಅವಳನ್ನು ಎತ್ತಿ ಹಾಸಿಗೆಯ ಮೇಲೆ ಮಲಗಿಸಿ ಅವಳ ಕೆನ್ನೆಗೊಂದು ಮುತ್ತನ್ನಿಟ್ಟಿದ್ದ.   ಮಗಳ ಯಶಸ್ಸಿನ ಬಗ್ಗೆ ಖುಷಿಯಾಗಿದ್ದ ಅರ್ಧಾಂಗಿಯೂ ಅಂದು ಅವನೊಡನೆ ತುಂಬಾ  ಒಲವಿನಿಂದಿದ್ದಳು. 

 (ಮುಂದುವರೆಯುವುದು,,,,,,,,)

No comments: