Wednesday, June 1, 2016

ಪೊಲೀಸರೆಂದರೆ ಮನುಷ್ಯರಲ್ಲವೇ,,,,,,,,,,,,,,,,,,,,,???





ಬರುವ ಜೂನ್ ತಿಂಗಳ ನಾಲ್ಕರಂದು ಕರ್ನಾಟಕದ ಪೊಲೀಸರು ಮುಷ್ಕರ ನಡೆಸಲಿದ್ದಾರೆ ಎನ್ನುವುದು ಇಡೀ ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿದೆಸದಾ ಸಮವಸ್ತ್ರ ಧರಿಸಿ ಶಿಸ್ತಿನ ಸಿಪಾಯಿಗಳಂತಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸರ ಮುಷ್ಕರಕ್ಕೆ ಅವರದ್ದೇ ಆದ ಕಾರಣಗಳಿವೆವೇತನ ತಾರತಮ್ಯ, ಭಡ್ತಿ ತಡೆ, ಮೇಲಧಿಕಾರಿಗಳ ಕಿರುಕುಳ, ರಾಜಕಾರಣಿಗಳ ಒತ್ತಡ, ಅಪರಾಧಿಗಳಿಂದ ಸದಾ ಪ್ರಾಣ ಬೆದರಿಕೆ, ಸಂಸಾರದ ಆಗುಹೋಗುಗಳಿಗೆ ಸಮಯದ ಅಭಾವ, ಕೌಟುಂಬಿಕ ಕಲಹಗಳು, ಅನಾರೋಗ್ಯಕರ ವಾತಾವರಣದಲ್ಲಿ  ನಿರ್ವಹಿಸುವ ಸಂಚಾರ ಪೊಲೀಸರಿಗಂತೂ ಸದಾ ತಮ್ಮ ಆರೋಗ್ಯದ ಚಿಂತೆ, ಹೀಗೆ ಹತ್ತು ಹಲವಾರು ಪ್ರಬಲ ಕಾರಣಗಳಿಂದಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚು ಪೊಲೀಸರು ಸಾಮೂಹಿಕ ರಜೆಯ ಮೇಲೆ ತೆರಳುತ್ತಿದ್ದಾರೆಪೊಲೀಸರು ತುಂಬಾ ಶಿಸ್ತಿನವರು, ಹಾಗೆಲ್ಲಾ ಮುಷ್ಕರ ಮಾಡುವುದಿಲ್ಲ ಎಂದು ಹುಸಿ ನಗುತ್ತಿದ್ದಾರೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರುಹಾಗೊಮ್ಮೆ ಮುಷ್ಕರದಲ್ಲಿ ಭಾಗಿಯಾದರೆ ಎಸ್ಮಾ(ಅವಶ್ಯಕ ಸೇವೆಗಳ) ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಅನ್ನುತ್ತಾರೆ ಹಿರಿಯ ಅಧಿಕಾರಿಗಳು ಹಾಗೂ ಗೃಹಮಂತ್ರಿಗಳು.   ಹಿನ್ನೆಲೆಯಲ್ಲಿ ಪೊಲೀಸರೊಂದಿಗಿನ ನನ್ನ ಒಡನಾಟದ ಕೆಲವು ನೆನಪುಗಳು.

ನಾನಾಗ ಆರನೆಯ ತರಗತಿಯಲ್ಲಿ ಓದುತ್ತಿದ್ದೆ, ಅಪ್ಪನ ಹೋಟೆಲ್ಲಿಗೆ ಒಬ್ಬರು ವಯಸ್ಕ ಪೊಲೀಸ್ ಪೇದೆ ಖಾಯಂ ಗಿರಾಕಿಯಾಗಿದ್ದರುಅಪ್ಪ ಮಾಡುತ್ತಿದ್ದ "ಕೇಟೀ" ಅವರಿಗೆ ತುಂಬಾ ಇಷ್ಟ.   ಬೆಳಿಗ್ಗೆ ಮತ್ತು ಸಂಜೆ ಅಪ್ಪನ ಹೋಟೆಲ್ಲಿಗೆ ಬಂದು "ಕೇಟೀ" ಕುಡಿಯುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರುಅದಾಗಲೇ ನಿವೃತ್ತಿಯ ಅಂಚಿನಲ್ಲಿದ್ದ ಅವರು ತಮ್ಮ ಕೆಲಸದ ಅವಧಿಯ ಬಹು ಭಾಗವನ್ನು ತಮ್ಮ ಮೇಲಧಿಕಾರಿಯ ಮನೆಕೆಲಸದಲ್ಲಿಯೇ  ಕಳೆಯುತ್ತಿದ್ದರಂತೆಬೆಳಿಗ್ಗೆಯೇ ಅವರ ಹೋಗಿ ಅವರ ಮಕ್ಕಳನ್ನು ಶಾಲೆಗೆ ಬಿಡುವುದು, ನಂತರ ಬಂದು ಮನೆಯವರ ಬಟ್ಟೆಗಳನ್ನು ಒಗೆದು  ,ನಂತರ ಮಾಡಿ ಸಾಹೇಬರಿಗೆ ಊಟ ತೆಗೆದುಕೊಂಡು ಠಾಣೆಗೆ ಹೋಗುತ್ತಿದ್ದರಂತೆಊಟದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಸಾಹೇಬರು ಎಲ್ಲರೆದುರಿಗೆ ಅವರ ವಯಸ್ಸಿಗೂ ಬೆಲೆ ಕೊಡದೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರಂತೆ!  "ಕೇಟೀ" ಕುಡಿಯುತ್ತಾ  ಅವರು ಕಥೆಗಳನ್ನೆಲ್ಲಾ ಅಪ್ಪನೊಡನೆ ಹಂಚಿಕೊಳ್ಳುತ್ತಿದ್ದರೆ ನಾನು ಮೂಕನಂತೆ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆತಾತ, ನೀವು ಅವರಿಗೆ ಡಿಶುಂ ಡಿಶುಂ ಅಂತ ಹೊಡೀಬೇಕು ತಾನೇ ಅಂತ ನಾನು ಕೇಳಿದರೆ ನನ್ನ ಗಲ್ಲ ನೇವರಿಸಿ ಸುಮ್ಮನಾಗುತ್ತಿದ್ದರುಬಹುಶಃ ನನ್ನ ಜೀವನದಲ್ಲಿ ನಾನೆಂದಿಗೂ ಮರೆಯಲಾಗದ  ಪೊಲೀಸಪ್ಪ ಅವರು!

ಅಮ್ಮನಿಗೆ ತಿಪಟೂರಿಗೆ ವರ್ಗವಾದಾಗ ಅಪ್ಪ ಅಲ್ಲಿನ ತರಕಾರಿ ಮಾರ್ಕೆಟ್ ಪಕ್ಕದಲ್ಲಿ ಒಂದು ಸಣ್ಣ ಹೋಟೆಲ್ ಆರಂಭಿಸಿದ್ದರುಪಕ್ಕದಲ್ಲಿದ್ದ ತಾಲ್ಲೂಕು ಕಚೇರಿ, ಪೊಲೀಸ್ ಠಾಣೆ ಹಾಗೂ ಇತರ ಸರ್ಕಾರಿ ಕಚೇರಿಗಳಿಗೆ ಅಪ್ಪನ ಹೋಟೆಲ್ಲಿನಿಂದ ಟೀ  ಸರಬರಾಜಾಗುತ್ತಿತ್ತು. ಆಗ ಅಲ್ಲಿದ್ದ ಪ್ರತಿಯೊಬ್ಬ  ಪೊಲೀಸ್ ಪೇದೆಯಿಂದ ಹಿರಿಯ ಅಧಿಕಾರಿಗಳವರೆಗೂ ಎಲ್ಲರೂ ಪರಿಚಿತರಾಗಿದ್ದರುಆಗ ಹೊಸದಾಗಿ ಬಿಡುಗಡೆಯಾಗಿದ್ದ ಬಿ.ಎಸ.. ಸೈಕಲ್ಲನ್ನು ಕೊಂಡಿದ್ದ ಪೇದೆಯೊಬ್ಬರು  ನಾನು ಕೇಳಿದಾಗೆಲ್ಲಾ  ತುಳಿಯಲು ಕೊಡುತ್ತಿದ್ದರುಟೀ ಕೊಡಲು ಠಾಣೆಗೆ ಹೋದಾಗ ಅಲ್ಲಿದ್ದ ಬಂದೂಕುಗಳನ್ನು ನನ್ನ ಕೈಗಳಿಂದ ಮುಟ್ಟಿ ಸಂಭ್ರಮಿಸುತ್ತಿದ್ದೆಗತ್ತಿನಿಂದ ನಡೆದು ಬರುವ ಹಿರಿಯ ಅಧಿಕಾರಿಗಳಿಗೆ ಪೇದೆಗಳೆಲ್ಲಾ ಠಕ್ಕೆಂದು ಸೆಲ್ಯೂಟ್ ಹೊಡೆಯುವಾಗ  ನಾನೂ ಸಹ ಅವರಂತೆಯೇ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿದ್ದೆಒಮ್ಮೊಮ್ಮೆ ಠಾಣೆಯಲ್ಲಿ  ಅಧಿಕಾರಿಗಳ ಅಟ್ಟಹಾಸಕ್ಕೆ ಪೇದೆಗಳು ನಡುಗುತ್ತಿದ್ದರು, ಎದುರು ಮಾತನಾಡಲಾಗದೆ ಭಯಭೀತರಾಗಿ ತಲೆಬಗ್ಗಿಸಿ ನಿಲ್ಲುತ್ತಿದ್ದರು, ಆಗೆಲ್ಲಾ  ಯಾವುದೇ ಕಾರಣಕ್ಕೂ ಪೊಲೀಸ್ ಪೇದೆಯ ಕೆಲಸಕ್ಕೆ ಮಾತ್ರ ಸೇರಲೇಬಾರದು ಅಂದುಕೊಳ್ಳುತ್ತಿದ್ದೆ

ಕಾಲೇಜು ದಿನಗಳಲ್ಲಿ ಕಂಡ ಪ್ರಭಾಕರ್ ಎಂಬ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ದರ್ಪ, ನೇರ ನಡವಳಿಕೆ, ಗತ್ತಿನ ಮಾತುಗಳಿಂದ ಇಂದಿಗೂ  ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆವೈದ್ಯನೊಬ್ಬ  ಹೆಂಡತಿಗೆ ವಿಷದ ಇಂಜೆಕ್ಷನ್ ಕೊಟ್ಟು ಕೊಂದಾಗ, ಅವನನ್ನು ಬಂಧಿಸಿ ಮೆರವಣಿಗೆ ಮಾಡಿ ಜೈಲಿಗಟ್ಟಿದ್ದ ಅವರ ಖದರ್  ಇಂದಿಗೂ ಚಿರನೂತನಆದರೆ ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಪ್ರಭಾವದಿಂದ ವೈದ್ಯರು ಜೈಲಿನಿಂದ ಹೊರಬಂದಿದ್ದಲ್ಲದೆ ಮತ್ತೊಂದು ಮದುವೆಯನ್ನೂ  ಮಾಡಿಕೊಂಡಿದ್ದರು

ನಮ್ಮ ಜೊತೆಗೆ ಕಾಲೇಜಿನಲ್ಲಿ ಓದುತ್ತಿದ್ದ ಗೆಳೆಯನೊಬ್ಬ ಮನೆಯಲ್ಲಿ ಪೋಷಕರು ಅವನಿಗೆ ಒಂದು "ಲೂನಾ" ಕೊಡಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಆಗ ಅವನ ಮೃತಶರೀರವನ್ನು ಕಾವಲು ಕಾಯ್ದು, ಅಲ್ಲಿಂದ ಆಸ್ಪತ್ರೆಗೆ ಸಾಗಿಸಿ, ಶವಪರೀಕ್ಷೆಯ ನಂತರ ಪೋಷಕರಿಗೊಪ್ಪಿಸಿ, ಅಪಾರ ದುಃಖದಲ್ಲಿದ ಅವರನ್ನು ಸಮಾಧಾನಪಡಿಸುತ್ತಿದ್ದ ಪೊಲೀಸರನ್ನು ಕಂಡು  ನಮಗೆ ಅವರ ಬಗ್ಗೆ ಹೆಮ್ಮೆ ಎನ್ನಿಸಿತ್ತು.

ವಿ.ಪಿ.ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ನಡೆದ ಮಂಡಲ್ ವರದಿ ವಿರೋಧಿ ಚಳುವಳಿಯಲ್ಲಿ ನನಗೆ ಪೊಲೀಸರ ಲಾಠಿಯ ಪರಿಚಯವಾಗಿತ್ತುವಿದ್ಯಾರ್ಥಿ ಸಂಘದ ಮುಖಂಡನಾಗಿ ಮೀಸಲಾತಿ ವಿರೋಧಿ ಚಳುವಳಿಯ ಮುಂಚೂಣಿಯಲ್ಲಿದ್ದ ನನಗೆ ಸಾಕಷ್ಟು ಏಟುಗಳು ಬಿದ್ದಿದ್ದವಲ್ಲದೆ ಜೈಲಿನ ದರ್ಶನವೂ ಆಗಿತ್ತುಮೊದಲ ಬಾರಿಗೆ ಪೊಲೀಸರ ಕ್ರೌರ್ಯದ ಪರಿಚಯವಾಗಿ ಅವರ ಮೇಲಿದ್ದ ಗೌರವ ಕಡಿಮೆಯಾಗಿತ್ತು.   ಆದರೆ ಆಗ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದರು.

ಪದವಿ ಮುಗಿಸಿ ಉದ್ಯೋಗನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದಾಗ ನನ್ನ ಹಾಗೂ ಪೊಲೀಸರ ನಡುವಿನ ಸಂಪರ್ಕ ತುಂಬಾ ಹೆಚ್ಚಾಯಿತುಪೊಲೀಸ್ ಇಲಾಖೆ ಸೇರಬೇಕೆಂದಿದ್ದ ನನಗೆ  ಅಲ್ಲಿ ಉದ್ಯೋಗ ದೊರಕದೆ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಮೇಲ್ವಿಚಾರಕನಾಗಿ ಸೇರಿಕೊಂಡಿದ್ದೆಗಸ್ತು ಬರುವ ಪೊಲೀಸರೆಲ್ಲ ನನಗೆ ಮಿತ್ರರಾಗಿದ್ದರುನನ್ನ ಉದ್ಯೋಗಕ್ಕೆ ಸಂಬಂಧಿಸಿದಂತೆ ಹಲವಾರು ಕಳ್ಳತನ, ಅಪಘಾತ ಪ್ರಕರಣಗಳಲ್ಲಿ ಸಂಬಂಧಿತ ಪೊಲೀಸ್ ಠಾಣೆಗಳೊಡನೆ  ನನ್ನ ಸಂಪರ್ಕ ಅವ್ಯಾಹತವಾಗಿತ್ತುಆಗೆಲ್ಲಾ ಪೊಲೀಸರ ಜೀವನದ ಹಲವಾರು ಮಹತ್ವದ ವಿಷಯಗಳು ತಿಳಿದು ಬರುತ್ತಿದ್ದವುಕೆಲವು ಪೊಲೀಸ್ ಪೇದೆಗಳಂತೂ ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾಗದೆ ರಾಜಿನಾಮೆ ನೀಡುವ ಮಟ್ಟಕ್ಕೆ ರೋಸಿ ಹೋಗಿದ್ದರುಮತ್ತೆ ಕೆಲವು ಪೇದೆಗಳು ಹಿರಿಯ ಅಧಿಕಾರಿಗಳು ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರೂ ಯಾರ ಅಂಕೆಗೂ ಸಿಗದೆ  ಸಿಕ್ಕಸಿಕ್ಕವರಿಂದ ಸಾಕಷ್ಟು ಮಾಮೂಲಿ ವಸೂಲಿ ಮಾಡುತ್ತಾ ಬ್ರಹ್ಮಾಂಡ ಭ್ರಷ್ಟರಾಗಿದ್ದರುಕೆಲವು ಪೊಲೀಸರು ತಾವು ಸಂಪಾದಿಸುವ ಲಂಚದ ಹಣದಿಂದಲೇ  ಐಷಾರಾಮಿ ಜೀವನ ನಡೆಸುತ್ತಿದ್ದರೆ ಮತ್ತೆ ಕೆಲವರು ತಮ್ಮಆದರ್ಶಗಳಿಗೆ ಜೋತು ಬಿದ್ದು ತಮಗೆ ಬರುವ ಸಂಬಳದಲ್ಲಿಯೇ ಜೀವನ ನಡೆಸಲು ಹೆಣಗುತ್ತಿದ್ದರು.

ಕೆಲವು ಪೊಲೀಸರ ಮನೆಗಳಲ್ಲಿ ಮಹಾಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದು ಅಲ್ಲಿ ಸುಖ ವೈಭೋಗಗಳು ತಾಂಡವವಾಡುತ್ತಿದ್ದರೆ ಇನ್ನು ಕೆಲವರ ಮನೆಗಳಲ್ಲಿ ದರಿದ್ರಲಕ್ಷ್ಮಿ ತಾಂಡವವಾಡುತ್ತಿದ್ದಳುಸಂಜೆಯಾದರೆ ಕೆಲವರ ಮನೆಯಲ್ಲಿ ಮಲ್ಲಿಗೆಯ ಘಮಲಿನೊಡನೆ ಮೈಸೂರ್ ಪಾಕ್ ಸಂಭ್ರಮವಿದ್ದರೆ ಮತ್ತೆ ಕೆಲವರ ಮನೆಯ ಮುಂದೆ  ಗಂಡ ಹೆಂಡಿರ ಜಗಳ ಹಾದಿರಂಪ ಬೀದಿರಂಪವಾಗಿ ಅವರ ಸಂಸಾರ ನಗೆಪಾಟಲಿಗೀಡಾಗುತ್ತಿತ್ತು.  

ಅದೆಷ್ಟೋ ಸಂದರ್ಭಗಳಲ್ಲಿ ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಮನೆಗೆ ಜೀವಂತವಾಗಿ ಬರುವ ಗ್ಯಾರಂಟಿಯೇ ಇಲ್ಲದೆ ಯಾವಾಗಲೂ ಅನಿಶ್ಚಿತತೆಯಲ್ಲಿಯೇ ಬದುಕಬೇಕಾದ ಅನಿವಾರ್ಯತೆ ಪೊಲೀಸರ ಕುಟುಂಬದವರಿಗಿದೆಬೆಂಗಳೂರಿನಲ್ಲಿ ಕಾವೇರಿ ನೀರಿನ ಗಲಾಟೆಯಾದಾಗ ಮಾಗಡಿ ರಸ್ತೆಯಲ್ಲಿ  ಒಬ್ಬ ಪೊಲೀಸ್ ಪೇದೆಯ ಕೈಯ್ಯನ್ನೇ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದರು. ಕರ್ತವ್ಯ ನಿರತರಾಗಿದ್ದಾಗ ವೇಗವಾಗಿ ಬಂದ ವಾಹನವೊಂದರಿಂದ ಪಾದಚಾರಿಗಳನ್ನು ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ಬಲಿದಾನ ನೀಡಿದ ಗಿರಿಜಾ ಮೀಸೆಯ "ಪೊಲೀಸ್ ತಿಮ್ಮಯ್ಯ" ನವರನ್ನು ಯಾರಾದರೂ ಮರೆಯಲಾದೀತೆ? ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಮಹಾಲಕ್ಷ್ಮಿ ಲೇ ಔಟಿನ ಬಳಿ ಗಲಭೆಯಲ್ಲಿನ ಹಿಂಸಾಚಾರಕ್ಕೆ ಬಲಿಯಾದ ಮಂಜುನಾಥ ಎಂಬ  ಪೊಲೀಸ್ ಅಧಿಕಾರಿಯ ತ್ಯಾಗವನ್ನು ಮರೆಯಲು ಸಾಧ್ಯವೇ?

  ಖದೀಮರ ಗುಂಡೇಟಿಗೆ ಬಲಿಯಾದ ಮಲ್ಲಿಕಾರ್ಜುನ್ ಬಂಡೆ, ನೆಲಮಂಗಲದಲ್ಲಿ ಕಳ್ಳರ ಆಕ್ರಮಣಕ್ಕೆ ಬಲಿಯಾದ ಜಗದೀಶ್ ಮುಂತಾದ ಪೊಲೀಸ್ ಅಧಿಕಾರಿಗಳನ್ನು ಹೇಗೆ ಮರೆಯಲಾದೀತುಇನ್ನು ನಕ್ಸಲರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ದಿನನಿತ್ಯವೂ ಒಂದಿಲ್ಲೊಂದು ಪ್ರಕರಣಗಳಲ್ಲಿ ಪೊಲೀಸರು ಸಾಯುತ್ತಲೇ ಇದ್ದಾರೆಸ್ವಸ್ಥ ಸಮಾಜಕ್ಕಾಗಿ, ಸಾರ್ವಜನಿಕರ ರಕ್ಷಣೆಗಾಗಿ, ನಮ್ಮ ಸುರಕ್ಷಿತ ನಾಳೆಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿರುವ ಪೊಲೀಸರ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ, ಏಕೆಂದರೆ ಅವರೂ ನಮ್ಮಂತೆಯೇ ಮನುಷ್ಯರು ಎನ್ನುವುದು  ಎಲ್ಲರಿಗೂ ಅರಿವಾಗಬೇಕಿದೆ.  

ತಮ್ಮ ವೇತನ ತಾರತಮ್ಯ, ರಜೆಯಿಲ್ಲದೆ ನಿರಂತರ ದುಡಿತ, ಹಿರಿಯಧಿಕಾರಿಗಳ ಹಾಗೂ ರಾಜಕಾರಣಿಗಳ ದಬ್ಬಾಳಿಕೆಯನ್ನು ವಿರೋಧಿಸಿ ಪೊಲೀಸರು ನಡೆಸುತ್ತಿರುವ ಮುಷ್ಕರಕ್ಕೆ ನನ್ನ ಬೆಂಬಲವಿದೆಎಂದೋ ಎಲ್ಲೋ ಒಬ್ಬ ಪೊಲೀಸ್ ಪೇದೆ ನಿಮ್ಮಿಂದ ನೂರು ರೂಪಾಯಿ ಲಂಚ ಪಡೆದ ಸನ್ನಿವೇಶವನ್ನು ಮರೆತುಬಿಡಿ, ಇಡೀ ಸಮಾಜದ ಹಿತದೃಷ್ಟಿಯಿಂದ ಯೋಚಿಸಿ, ಪೊಲೀಸರ ತ್ಯಾಗ, ಬಲಿದಾನಗಳನ್ನು ಮನದಲ್ಲಿ ಸ್ಮರಿಸಿ, ಅವರ ಪ್ರತಿಭಟನೆಗೆ ನಿಮ್ಮ ಸಹಕಾರವಿರಲಿ, ಬೆಂಬಲವಿರಲಿನಮ್ಮ ಸಮಾಜದ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುವ ಅವರಿಗೂ ಒಂದು ಬದುಕಿದೆಯಲ್ಲವೇನಮ್ಮಂತೆಯೇ ತಮ್ಮ ಕುಟುಂಬದವರೊಡನೆ ಸಂತೋಷದ ಘಳಿಗೆಗಳನ್ನು ಅನುಭವಿಸಲು ಅವರಿಗೂ ಹಕ್ಕಿದೆಯಲ್ಲವೇ?




No comments: