ಆ ಮಧು ಬಟ್ಘ್ಟಲಿನ ಕೊನೆಯ ಹನಿಯಲ್ಲಿ
ಚಪ್ಪರಿಸಿ ಆಸ್ವಾದಿಸುವ ವಿಶಿಷ್ಟ ರುಚಿಯಲ್ಲಿ
ಮತ್ತೇರಿದ ಕಂಗಳ ಮುಂದೆ ನೀ ನಿಂತೆಯಲ್ಲೆ
ನಶೆಯೆಲ್ಲ ಇಳಿದು ಎದೆಬಡಿತ ಹೆಚ್ಚಾಯಿತಲ್ಲೇ! :-)
"""""""""""""""""""""""""""""""""""""""""""""""""""""""""""""
ಅಂದು ದೇವರ ಗುಡಿಯಲ್ಲಿ ಪ್ರಮಾಣ ಮಾಡಿದ್ದೆ
ಮತ್ತೆಂದೂ ನಿನ್ನ ಮುಖವನ್ನು ನೋಡಲಾರೆನೆಂದು!
ಇಂದು ಮುಸ್ಸಂಜೆಯಲಿ ಮಧುಬಟ್ಟಲಿನ ತುಂಬಾ
ಧಿಮಿತಕ ಧಿಮಿತಕ ಕುಣಿಯುತಿದೆ ನಿನ್ನದೇ ಬಿಂಬ!
**************************************************************
ದಿನ ಮುಗಿದು ರವಿ ಮುಳುಗಿ ಕತ್ತಲಾವರಿಸುತಿರಲು
ದಣಿದ ದೇಹವು ತಿರುಗಿ ಮನೆಯೆಡೆಗೆ ತೆರಳುತಿರಲು
ಮಾರ್ಗಮಧ್ಯದಲಿ ನಶೆಯೇರಿಪ ಮಧುಶಾಲೆಯಿರಲು
ನಿನ್ನ ನೆನಪಲಿ ಒಳಗೊಯ್ದವಲ್ಲೇ ನನ್ನವೇ ಕಾಲು! :-)
***************************************************************
ಮನವು ನಿರ್ಧರಿಸಿತ್ತು ಹೌದು ನನ್ನೀ ಮನವು ನಿರ್ಧರಿಸಿತ್ತು
ಇನ್ನೆಂದಿಗೂ ಹೌದು ಎಂದೆಂದಿಗೂ ಕುಡಿಯಬಾರದೆಂದಿತ್ತು!
ನಿನ್ನ ನಗುಮೊಗದ ಸುಳಿಮಿಂಚ ಸವಿ ನೆನಪು ಬಂದಿತ್ತು
ನನ್ನ ಅರಿವಿಲ್ಲದೆ ಕಾಲತ್ತ ನಡೆದಿತ್ತು ಬಾಟಲಿ ಬರಿದಾಗಿತ್ತು! :-(
***********************************************************************
ಅಂದು ನಾ ತಂದ ಮಲ್ಲಿಗೆ ಪಾಪ, ಮುದುಡಿ ಮಲಗಿತ್ತು
ನಿನ್ನ ತಿರಸ್ಕಾರದ ನೋಟದಲಿ ಅದು ನೊಂದು ನರಳಿತ್ತು
ಇಂದು ಮಧುಶಾಲೆಯದು ನಗುತ ಕೈ ಬೀಸಿ ಕರೆದಿತ್ತು
ನನ್ನ ಮನದಾಳದ ನೋವನ್ನೆಲ್ಲ ತಣಿಸಿ ನಿನ್ನ ಮರೆಸಿತ್ತು! :-(
************************************************************************
No comments:
Post a Comment