Monday, January 25, 2016

ಎಲ್ಲರಿಗೂ ೬೭ನೆಯ ಗಣರಾಜ್ಯೋತ್ಸವದ ಶುಭಾಶಯಗಳು.



ಒಂದು ಶುಭಾಶಯ ಹೇಳಿ, ಇಷ್ಟವಿದ್ದರೆ ಕೆಲ ಹೊತ್ತು ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್ ಅಥವಾ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡಿ, ಅಥವಾ ಇನ್ನೂ ಹೆಚ್ಚೆಂದರೆ ನಮ್ಮ ಏರಿಯಾದಲ್ಲಿನ ಶಾಲೆಯೊಂದರಲ್ಲಿ ನಡೆಯುವ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದರೆ ಆಯಿತು, ಮತ್ತೆ ಮರುದಿನದಿಂದ ನಮ್ಮ ಮಾಮೂಲಿ ದಿನಚರಿಯಲ್ಲಿ ಮುಳುಗಿ ಬಿಡುತ್ತೇವೆ.  ಇಷ್ಟೇನಾ ಗಣರಾಜ್ಯದಿನವೆಂದರೆ!  ಇದರ ಹಿನ್ನೆಲೆಯನ್ನು ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ. 

೧೯೩೦ರ ಜನವರಿ ೨೬ರ ಇದೇ ದಿನ ಲಾಹೋರಿನಲ್ಲಿ ನಡೆದ ಅಧಿವೇಶನದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷರ ಆಡಳಿತವನ್ನು ವಿರೋಧಿಸಿ "ಪೂರ್ಣ ಸ್ವರಾಜ್ಯ"ವನ್ನು ಘೋಷಿಸುತ್ತದೆ.  ಅಧ್ಯಕ್ಷರಾಗಿದ್ದ ಜವಾಹರ್ ಲಾಲ್ ನೆಹರೂ ರಾವಿ ನದಿಯ ದಡದಲ್ಲಿ ಭಾರತದ ಧ್ವಜವನ್ನು ಹಾರಿಸುತ್ತಾರೆ.  ಆ ದಿನದ ನೆನಪಿಗಾಗಿಯೇ ಜನವರಿ ೨೬ನ್ನು "ಗಣರಾಜ್ಯೋತ್ಸವ ದಿನ" ಎಂದು ಕರೆಯಲಾಗುತ್ತದೆ.  ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟ ಹಾಗೂ ಅಸಹಕಾರ ಚಳುವಳಿ, ಸ್ವದೇಶಿ ಚಳುವಳಿಗಳು ಒಂದೆಡೆ, ಮತ್ತೊಂದೆಡೆ ನೇತಾಜಿ ಸುಭಾಷ್ ಚಂದ್ರ ಬೋಸರ "ಆಝಾದ್ ಹಿಂದ್ ಫೌಜ್ ನ ಅಟ್ಟಹಾಸ, ಹೊರದೇಶಗಳಿಂದಲೂ ಬಂದ ಒತ್ತಡ ಇವೆಲ್ಲವುಗಳಿಂದ ಅಲ್ಲಾಡಿ ಹೋದ ಬ್ರಿಟಿಷ್ ಸಾಮ್ರಾಜ್ಯ ಕೊನೆಗೂ ಭಾರತಕ್ಕೆ ಸ್ವಾತಂತ್ರ್ಯ ನೀಡಲು ಒಪ್ಪಿಕೊಳ್ಳುತ್ತದೆ.  ಅದರಂತೆ ೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿ ಪಾರ್ಲಿಮೆಂಟ್ ಭವನದ ಮೇಲೆ ಹಾರಾಡುತ್ತಿದ್ದ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ ಸ್ವತಂತ್ರ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ.  ಬ್ರಿಟಿಷ್ ಸಾಮ್ರಾಜ್ಯದ ಕೊನೆಯ ವೈಸ್ರಾಯ್ ಮೌಂಟ್ ಬ್ಯಾಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದ ನೆಹರೂಗೆ ಅಧಿಕಾರ ಹಸ್ತಾಂತರ ಮಾಡುತ್ತಾರೆ.  ಇದಿಷ್ಟು ಸ್ವಾತಂತ್ರ್ಯ ಪಡೆಯುವವರೆಗಿನ ಕಥೆ.  ಸ್ವಾತಂತ್ರ್ಯಾ ನಂತರ ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಕರಡು ರಚನಾ ಸಮಿತಿಯನ್ನು ರಚಿಸಲಾಯಿತು.  ಅನೇಕ ಚರ್ಚೆ, ಸಂವಾದ, ತಿದ್ದುಪಡಿಗಳ ನಂತರ ಅಂತಿಮವಾಗಿ ೧೯೫೦ರ ಜನವರಿ ೨೬ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.  ಅಂದಿನಿಂದ ಇಂದಿನವರೆಗೂ ಜನವರಿ ೨೬ನ್ನು "ಗಣರಾಜ್ಯ ದಿನ"ವನ್ನಾಗಿ ಆಚರಿಸಲಾಗುತ್ತಿದೆ.  

ಭಾರತದಾದ್ಯಂತ ಸರ್ಕಾರಿ ರಜಾದಿನ ಎಂದು ಘೋಷಿಸಿದರೂ ಎಲ್ಲಾ ಶಾಲೆಗಳಲ್ಲಿಯೂ ಅಂದು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ, ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ಕಾರ್ಯಕ್ರಮಗಳನ್ನು ವಿಶೇಷವಾಗಿ ರೂಪಿಸಲಾಗುತ್ತದೆ.  ಸ್ಕೌಟ್, ಏನ್.ಸಿ.ಸಿ. ಪೊಲೀಸ್ ದಳಗಳಿಂದ ರಾಜಧಾನಿ ದೆಹಲಿಯಲ್ಲಿ ಭಾರತೀಯ ಸೇನೆ, ನೌಕಾ ಹಾಗೂ ವಾಯುದಳಗಳ ಆಕರ್ಷಕ ಕವಾಯತು ನಡೆಯುತ್ತದೆ.  ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿಯು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.  ಜನತೆಯಲ್ಲಿ ದೇಶಪ್ರೇಮದ ಸಂದೇಶ ಸಾರುವ, ದೇಶದ ಹೆಸರಿನಲ್ಲಿ ನಾವೆಲ್ಲರೂ ಒಂದು ಎಂದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸುಂದರ ಕಾರ್ಯಕ್ರಮಗಳು ಈ ದಿನ ನಡೆಯುತ್ತವೆ. 

ಆದರೆ ಸಾಮಾಜಿಕ ಪರಿಸ್ಥಿತಿಗಳು ಹೇಗಿವೆ ಎಂದು ಅವಲೋಕಿಸಿದಾಗ ನಿಜಕ್ಕೂ ದುಃಖವಾಗುತ್ತದೆ.  ಸ್ವಾತಂತ್ರ್ಯ ಪೂರ್ವದಲ್ಲಿ ಅಂದು ಇದ್ದ ಅದೇ ಬಾನು, ಅದೇ ಸೂರ್ಯ, ಅದೇ ಗಾಳಿ,  ಅದೇ ನೀರು, ಅದೇ ಪ್ರಕೃತಿ.  ಆದರೆ ಮನುಷ್ಯರು ಮಾತ್ರ ಬದಲಾಗಿದ್ದಾರೆ, ಆಗ ಬ್ರಿಟಿಷರ ಆಳ್ವಿಕೆಯಲ್ಲಿ ಅವರ ದಬ್ಬಾಳಿಕೆಗೆ ನಲುಗಿ ಜನ ಸಾಯುತ್ತಿದ್ದರು, ಆದರೆ ಈಗಲೂ ಜನ ಅಸಹಾಯಕರಾಗಿ ಸಾಯುತ್ತಲೇ ಇದ್ದಾರೆ, ಆದರೆ ನಮ್ಮಿಂದಲೇ ಆಯ್ಕೆಯಾದ ಜನನಾಯಕರ ದುರಾಡಳಿತದಿಂದ ಅನ್ನುವುದು ವಿಪರ್ಯಾಸ.   ಸ್ವಾತಂತ್ರ್ಯಾನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಸ್ವಾರ್ಥಿಗಳಾಗಿ, ದೇಶ ಹಿತ, ಜನಹಿತ ಮರೆತು ತಮ್ಮನ್ನು ತಾವು ಚೆನ್ನಾಗಿ ನೋಡಿಕೊಂಡಿದ್ದಲ್ಲದೆ ಬ್ರಿಟಿಷರು ಬಳುವಳಿಯಾಗಿ ಬಿಟ್ಟು ಹೋದ "ಒಡೆದು ಆಳುವ ನೀತಿ"ಯನ್ನು ಚೆನ್ನಾಗಿಯೇ ಪಾಲಿಸಿದ್ದರ ಪರಿಣಾಮ, ಇಂದು ಭಾರತೀಯ ಸಮಾಜ ಒಡೆದು ಚೂರು ಚೂರಾಗಿದೆ.  ಜಾತಿ ಜಾತಿಗಳ ನಡುವೆ, ಧರ್ಮಗಳ ನಡುವೆ ಅಪಾರವಾದ ಕಂದಕ ನಿರ್ಮಾಣವಾಗಿದೆ.   ಸ್ವಾರ್ಥ ರಾಜಕಾರಣಿಗಳು ಬಂಡವಾಳಶಾಹಿಗಳಿಗೆ ಅತಿ ಹೆಚ್ಚು ಬೆಂಬಲ ನೀಡಿದ ಪರಿಣಾಮವಾಗಿ ಸಂಪತ್ತಿನ ಕ್ರೋಢೀಕರಣ ಏಕಮುಖವಾಗಿ ಶ್ರೀಮಂತರು ಅತಿ ಹೆಚ್ಚು ಶ್ರೀಮಂತರಾಗಿದ್ದರೆ ಬಡವರು ಇನ್ನೂ ಬಡವರಾಗಿಯೇ ಉಳಿದಿದ್ದಾರೆ.   ಈ ದಿನ ವಿದೇಶಿ ನಾಯಕರನ್ನು ಕರೆಸಿ ನಮ್ಮ ದೇಶದ ಘನತೆಯನ್ನು ತೋರಿಸುತ್ತಿರುವ ಅದೇ ದೆಹಲಿಯಲ್ಲಿ ಇಂದಿನ ಕೊರೆಯುವ ಛಳಿಯಲ್ಲಿ ಮನೆ ಮಠವಿಲ್ಲದ ನಿರ್ಗತಿಕರು ರಸ್ತೆಬದಿಗಳಲ್ಲಿ ಬೆಂಕಿ ಕಾಯಿಸುತ್ತಾ ಜೀವನ ನಡೆಸುತ್ತಿದ್ದಾರೆನ್ನುವುದು ನಮ್ಮ ದೇಶ ಅಭಿವೃದ್ಧಿಯ ಪಥದಲ್ಲಿ ನಿಜವಾಗಲೂ ಸಾಗಿದೆಯೇ ಎಂದು ಚಿಂತಿಸುವಂತೆ ಮಾಡುತ್ತದೆ. 

ಕಾಂಗ್ರೆಸ್ ಪಕ್ಷದವರು ತಾವು ಅಧಿಕಾರದಲ್ಲುಳಿದುಕೊಳ್ಳಲು ಒಂದೆಡೆ ಪರಿಶಿಷ್ಟ ಜಾತಿ ಪಂಗಡದವರನ್ನು, ಮತ್ತೊಂದೆಡೆ ಮುಸ್ಲಿಮರನ್ನು ಓಲೈಸುತ್ತಾ, ಅವರನ್ನು ತಮ್ಮ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು, ಮುಖ್ಯವಾಹಿನಿಯಲ್ಲಿ ಬೆರೆಯಲು ಬಿಡದೆ ನಡೆಸಿಕೊಂಡ ಪರಿಣಾಮ ಅವರಲ್ಲಿನ ಅನಕ್ಷರತೆ, ಅಜ್ಞಾನ ಹಾಗೆಯೇ ಉಳಿದುಕೊಂಡಿದೆ.  ಅವೈಜ್ಞಾನಿಕವಾದ ಮೀಸಲಾತಿ ಪದ್ಧತಿಯಿಂದಾಗಿ ಪ್ರತಿಭಾವಂತರಿಗೆ ಅವಕಾಶಗಳು ಸಿಗದೇ ಪ್ರತಿಭಾ ಪಲಾಯನ ನಿರಂತರವಾಗಿ ನಡೆಯುತ್ತಿದೆ.  ಓದಿ ವಿದ್ಯಾವಂತರಾಗಿ ನಮ್ಮ ದೇಶದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲಬೇಕಿದ್ದ ವಿದ್ಯಾವಂತ ಸಮುದಾಯವಿಂದು ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗಿ, ಅಸಹಾಯಕರಾಗಿ ಹೊರದೇಶಗಳತ್ತ ಮುಖ ಮಾಡಿದ್ದಾರೆ.  ಇದು ಯಾವುದೇ ಅಭಿವೃದ್ಧಿಶೀಲ ದೇಶದ ಬೆಳವಣಿಗೆಗೆ ದೊಡ್ಡ ಹೊಡೆತವಾಗಿ ಪರಿಣಮಿಸುತ್ತದೆ. 

ಇಷ್ಟೆಲ್ಲ ವೈರುಧ್ಯಗಳ ನಡುವೆಯೂ ಜನವರಿ ೨೬ರ ಧ್ವಜಾರೋಹಣದಂದು ಅರಿವಿಲ್ಲದೆಯೇ ದೇಹ ಸೆಟೆದು ನಿಲ್ಲುತ್ತದೆ, ಎದೆ ಉಬ್ಬುತ್ತದೆ, ಕೈಗಳು ತ್ರಿವರ್ಣ ಧ್ವಜಕ್ಕೆ ನಮಗರಿವಿಲ್ಲದೆಯೇ ಸೆಲ್ಯೂಟ್ ಹೊಡೆದಿರುತ್ತವೆ. ವಂದೇ ಮಾತರಂ, ಸಾರೆ ಜಹಾಂಸೆ ಅಚ್ಚಾ, ಹಿಂದೂಸಿತಾನ್  ಹಮಾರಾ, ಎನ್ನುವ ದೇಶಭಕ್ತಿ ಗೀತೆಗಳನ್ನು ಕೇಳಿದಾಗ ಈಗಲೂ ರೋಮಾಂಚನವಾಗುತ್ತದೆ, ಮನಸ್ಸು ಚಿಂತಾಗ್ರಸ್ತವಾಗಿದ್ದರೂ ಅಲ್ಲಿ ದೇಶಪ್ರೇಮದ ಅಲೆ ಚಿಮ್ಮುತ್ತದೆ.  

ಇರುವ ವೈರುಧ್ಯಗಳೆಲ್ಲ ಕಳೆದು ಎಲ್ಲರಿಗೂ ಸಮಾನ ಅವಕಾಶ, ಸಮಾನ ಬದುಕು ನೀಡುವ ಸುಂದರ ಭಾರತದ ಕನಸು ನಮ್ಮಲ್ಲಿ ಜೀವಂತವಾಗಿರಲಿ, ಆ ಕನಸು ಆದಷ್ಟು ಬೇಗ ನನಸಾಗಲಿ ಎಂದು ಹಾರೈಸೋಣ.  ವಂದೇ ಮಾತರಂ.  ಜೈ ಹಿಂದ್. 

2 comments:

Badarinath Palavalli said...

ಹಲವು ವೈರುಧ್ಯಗಳ ನಡುವೆಯೂ ಹೊಸ ಬೆಳಕನ್ನು ಹುಡುಕುತ್ತಾ, ಜೀವನೋತ್ಸಾಹವನು ಇಮ್ಮಡಿಗೊಳಿಸಲೆಣೆಸುವ ಜನತಂತ್ರದ ಸಮರ್ಥ ಚಿತ್ರಣ ಇಲ್ಲಿದೆ.

ಗಣರಾಜ್ಯೋತ್ಸದ ಔಚಿತ್ಯ ಮತ್ತು ಐತಿಹ್ಯದ ಸವಿವರ ಬರಹವಿದು.

manju said...

ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು. :-)