Saturday, June 8, 2013

ಕುಣಿಯುತಿದೆ ಹಕ್ಕಿ,,,,!

ಮಳೆ ಮುಗಿಲ ಕಂಡು ಹರುಷದಿ ಕುಣಿಯುತಿದೆ ಹಕ್ಕಿ, 
ಹಾರಾಡಿ ಏರಿಳಿದು ಬಾನಗಲ ಜಗ ಸುತ್ತುವಾಸೆಯಲಿ..!

ಬಿಚ್ಚಿದೆ ತನ್ನ ಹಿರಿದಾದ ರೆಕ್ಕೆ, ಚಿಮ್ಮಲು ಆಗಸದೆತ್ತರಕೆ 
ಅಳಿವುದೇನ್, ಉಳಿವುದೇನ್, ನಡೆ ನೀನ್ ಅನಂತದಾಚೆ,

ಸಿದ್ಧವಿದೆ ಹಕ್ಕಿ ಹಾರಲೆತ್ತರಕೆ, ಚಿಮ್ಮುವುದೊಂದೆ ಬಾಕಿ,
ಬೇಡನೆಸೆದ ಬಲೆಗೆ ಸಿಲುಕಿದೆ ಕಾಲು, ಹಾರಲಾಗದು ಹಕ್ಕಿ !

ತಡಬಡಿಸಿದೆ, ಒದ್ದಾಡಿದೆ, ಕೂಗಿದೆ, ಚೀರಿದೆ ಬಿಕ್ಕಿ ಬಿಕ್ಕಿ,,!
ಬೇಡನೋ, ಸಿದ್ಧನಿರುವ ಕರುಣೆಯಿಲ್ಲದೆ ಕೊಲಲು ಕುಕ್ಕಿ ಕುಕ್ಕಿ !! 

ಮಳೆ ಮುಗಿಲ ಕಂಡು ಹರುಷದಿ ಕುಣಿಯುತ್ತಿತ್ತು ಹಕ್ಕಿ ,,,,,
ವಿಧಿರಾಯನ ಅಟ್ಟಹಾಸದೆ ನಲುಗಿ ಸೋತಿತ್ತು ಬಿಕ್ಕಿ....! 

Sunday, June 2, 2013

ಸೋತಿದೆ ಮಲ್ಹಾರ ರಾಗ...!

ಸುರಿಯುತಿದೆ ಮುಂಗಾರು ಮಳೆ ಮನೆಯ ಹೊರಗೆ 
ಹರಿಯುತಿದೆ ನೆನಪುಗಳ ಹೊಳೆ ಮನದ ಒಳಗೆ ...!

ಅಂದು ನೀ ಜೊತೆಯಿರಲು ಬದುಕು ಬಲು ಸುಂದರ 
ಇಂದು ನೀ ನೆನಪಾಗಿರಲು ಈ ಬದುಕು ದುಸ್ತರ ....!

ಅಬ್ಬರಿಸುತಿಹ ಮಳೆರಾಯ ಸಿಡಿಲು ಗುಡುಗು ಮಿಂಚಿನೊಡನೆ 
ನಗುತಿಹಳು ಇಳೆ ಒಡಲ ದಾಹ  ತಣಿಸಿದ ಇನಿಯನೊಡನೆ...! 

ಜೊತೆಯಾಗಿ ನೀ ಹಿಡಿದ ಕೊಡೆಯ ನೆನಪಾಯಿತು ನನಗಿಂದು 
ಭೋರ್ಗರೆವ ಮಳೆಯಬ್ಬರದಿ ಮರೆಯಾಯಿತು ಕಂಬನಿಯ ಬಿಂದು.. !

ಭುವಿಯ ಕಸ ತೊಳೆದು ಹೊಸ ಹಸಿರ ತರುವ ಮಳೆರಾಯನೀಗ 
ಮನದಿ ಕವಿದ ಕತ್ತಲ ತೊಳೆಯಲಾಗದೇ ಸೋತಿದೆ ಮಲ್ಹಾರ ರಾಗ...!

Sunday, May 19, 2013

ಮತ್ತೆ ಸೆಳೆದ ಅರಬ್ಬರ ನಾಡು.


ಸುಮಾರು ಎರಡೂವರೆ ವರುಷಗಳ ಹಿಂದೆ ನಾನು ದುಬೈನಿಂದ ಬೆಂಗಳೂರಿಗೆ ಹಿಂದಿರುಗಿದ್ದೆ, ಅಂದು ಮನೆಯ ಪರಿಸ್ಥಿತಿಗಳು ನನ್ನನ್ನು ನಿಂತ ಹೆಜ್ಜೆಯಲ್ಲಿ ಸಿಕ್ಕಿದ ವಿಮಾನವನ್ನೇರಿ ಬೆಂಗಳೂರಿಗೆ ಹಿಂದಿರುಗುವಂತೆ ಮಾಡಿದ್ದವು.   ನಾವೆಷ್ಟೇ ಮೇಲೇರಿದರೂ ಪರಿಸ್ಥಿತಿಯ ಕೈಗೊಂಬೆಗಳೇ ಎನ್ನುವುದನ್ನು ಜೀವನದಲ್ಲಿ ಮತ್ತೊಮ್ಮೆ ನೋಡಿ, ತಿಳಿಯುವ ಅವಕಾಶ ಅದಾಗಿತ್ತು.   ದುಬೈನ ಜೀವನಶೈಲಿಗೂ, ನಮ್ಮದೇ ಬೆಂಗಳೂರಿನ ಜೀವನಶೈಲಿಗೂ ಅಜಗಜಾಂತರ ವ್ಯತ್ಯಾಸ!  ಹೊಂದಿಕೊಳ್ಳಲು ಬಹಳ ತ್ರಾಸವಾಯಿತು, ಎಲ್ಲಿ ಹೋದರೂ ಬರಿಯ ಪ್ರಶ್ನೆಗಳೇ ಎದುರಾಗುತ್ತಿದ್ದವು, ದುಬೈನಲ್ಲಿ ಒಳ್ಳೆಯ ಕೆಲಸದಲ್ಲಿದ್ದವರು ಅದೇಕೆ ಬಿಟ್ಟು ಬಂದಿರಿ?  ಅಂಥಾದೇನಿದೆ ಬೆಂಗಳೂರಿನಲ್ಲಿ ?  ಸ್ನೇಹಿತರ, ಸಂಬಂಧಿಕರ ಇಲ್ಲಸಲ್ಲದ ಪ್ರಶ್ನೆಗಳು ಹಲವು ಬಾರಿ ನನ್ನನ್ನು ಯಾಕಾದರೂ ಬೆಂಗಳೂರಿಗೆ ಬಂದೆನೋ ಎಂದು ಯೋಚಿಸುವಂತೆ ಮಾಡುತ್ತಿದ್ದವು.  

 ನನ್ನದೇ ಒಂದು ಸ್ವಂತ ಕಂಪನಿ ಮಾಡೋಣವೆಂದು ಹೊರಟರೆ ಅದಕ್ಕೂ ನೂರೆಂಟು ಅಡ್ಡಿ, ಆತಂಕಗಳು, ಯಾವುದಾದರೂ ಒಳ್ಳೆಯ ಸಂಸ್ಥೆಯಲ್ಲಿ ಉದ್ಯೋಗವನ್ನಾದರೂ ಮಾಡೋಣವೆಂದರೆ ಅದಕ್ಕೂ ನೂರೆಂಟು ತಲೆನೋವುಗಳು!   ನಾನು ಕೆಲಸಕ್ಕೆಂದು ಹೋದ ಸಂಸ್ಥೆಗಳಲ್ಲೆಲ್ಲಾ ಅಲ್ಲಿದ್ದ ಹಿರಿಯ ಉದ್ಯೋಗಿಗಳು ನನ್ನನ್ನು ಸಂಶಯದಿಂದಲೇ ನೋಡುತ್ತಿದ್ದರು.  ವಿದೇಶದಲ್ಲಿದ್ದು ಹಿಂದಿರುಗಿರುವ  ಇವನನ್ನುಒಂದು ವೇಳೆ ಕೆಲಸಕ್ಕೆ ತೆಗೆದುಕೊಂಡಿದ್ದೇ ಆದಲ್ಲಿ ಮುಂದೊಂದು ದಿನ ಇವನು ನನ್ನ ಬುಡಕ್ಕೇ ನೀರು ಬಿಡುವನೇನೋ ಎನ್ನುವ ಅನುಮಾನದ ಸುಳಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.   ಹೀಗಾಗಿ ಸರಿಯಾದ ಉದ್ಯೋಗವೂ ಇಲ್ಲದೆ ಸ್ವಂತ ಸಂಸ್ಥೆಯನ್ನೂ  ಮಾಡಲಾಗದೆ ನನ್ನ ದುಒಂದು ರೀತಿಯ ತ್ರಿಶಂಕು ಸ್ಥಿತಿಯಾಗಿ ಹೋಯಿತು. 

ಈ ಅತಂತ್ರ ಸ್ಥಿತಿಯಲ್ಲಿ ಒದ್ದಾಡುತ್ತಿರುವಾಗ, ನನ್ನ ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ,  ನನಗೆ ಜೊತೆಯಾಗಿ ನಿಲ್ಲಬೇಕಾಗಿದ್ದ ಮಡದಿ ಮಕ್ಕಳೂ ಸಹಾ ನನ್ನನ್ನು ಉಪೇಕ್ಷಿಸತೊಡಗಿದ್ದಾರೆ ಎಂದು ನನಗೆ ಅನ್ನಿಸತೊಡಗಿತು.  ನಾನು ದುಬೈನಲ್ಲಿದ್ದಾಗ ಪ್ರತಿ ತಿಂಗಳೂ ಮೊದಲನೆಯ ವಾರದಲ್ಲಿ ಸಾಕಷ್ಟು ಹಣ ಕಳುಹಿಸುತ್ತಿದ್ದೆ, ಮನೆಯ ಖರ್ಚಿಗೆ ಮಡದಿಗೆ, ಮಕ್ಕಳ ಖರ್ಚಿಗೆ ಯಾವುದೇ  ಯೋಚನೆಯಿರಲಿಲ್ಲ.  ಆದರೆ ಈಗ ನಾನು ಬೆಂಗಳೂರಿನಲ್ಲೇ ಇದ್ದುದರಿಂದಾಗಿ ಎಲ್ಲದಕ್ಕೂ ನನ್ನನ್ನೇ ಕಾಸು ಕೇಳಬೇಕಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಅವರಿಗೂ ಕಷ್ಟವಾಗಿತ್ತೆಂದು ಕಾಣುತ್ತದೆ, ಎಲ್ಲದಕ್ಕಿಂತ ಹೆಚ್ಚಾಗಿ ಕಳೆದು ಹೋದ "ಎನ್ನಾರೈ"ನ ಮಡದಿ-ಮಕ್ಕಳು ಎಂಬ ಸ್ಟೇಟಸ್ ಬಗ್ಗೆಯೇ ಅವರು ಹೆಚ್ಚಾಗಿ ತಲೆ ಕೆಡಿಸಿಕೊಂಡಂತಿತ್ತು. 
  
ಈ ಮಧ್ಯೆ ಸ್ನೇಹಿತನೊಬ್ಬನ ಮಾತು ಕೇಳಿ ಗೋವಾದ ಕ್ಯಾಸಿನೋಗಳಲ್ಲಿ ಹಣ ಮಾಡಲು ಹೊರಟೆ!  ಮೊದಮೊದಲು ಕೈ ಹಿಡಿದ ಕ್ಯಾಸಿನೋ ಲಕ್ಷ್ಮಿ ಕ್ರಮೇಣ ಕೈ ಕಚ್ಚತೊಡಗಿ ನಷ್ಟಕ್ಕೆ ದೂಡಿದಾಗ ದಿಕ್ಕು ತಪ್ಪಿದಂತಾಗಿತ್ತು ನನ್ನ ಸ್ಥಿತಿ.  ಹಣ ಮಾಡಲೆಂದು ಗೋವಾದ ಕ್ಯಾಸಿನೋಗಳಿಗೆ ಕಾಲಿಟ್ಟವನು ಇದ್ದ ಹಣವನ್ನೂ ಕಳೆದುಕೊಂಡು ಕೊನೆಗೆ ಸಾಲಗಾರನಾಗಬೇಕಾಯಿತು!   ಅತ್ತ ಮನೆಯ ಹೊರಗೆ ಸ್ನೇಹಿತರ, ಹಿತೈಷಿಗಳ, ಬಂಧುಗಳ ಬೆಂಬಲವಿಲ್ಲದೆ,  ಇತ್ತ ಮನೆಯೊಳಗೆ ಮಡದಿ ಮಕ್ಕಳ ಸಹಕಾರವೂ ಇಲ್ಲದೆ ಮನಸ್ಸು ಹೈರಾಣಾಗಿ ಹೋಯ್ತು.  ದುಬೈನಿಂದ ತಂದಿದ್ದ ಹಣವೆಲ್ಲ ಕರಗಿ ಸಾಲದ ಮೀಟರ್ ಏರುತ್ತಿತ್ತು.  ಸರಿಯಾದ ಆದಾಯವಿಲ್ಲದೆ, ಉದ್ಯೋಗವಿಲ್ಲದೆ ಬದುಕುವುದಾದರೂ ಹೇಗೆ ಎಂದೆಲ್ಲಾ ತುಂಬಾ ಯೋಚಿಸುತ್ತಿದ್ದೆ.  ಅತೀವ  ಕ್ಷೋಭೆಗೊಂಡಿದ್ದ ನನ್ನ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದುದು ಮಾತ್ರ ಮಲ್ಯನ ಆರ್ಸಿಯ ಪೆಗ್ಗುಗಳು  ಮತ್ತು ಪ್ಯಾಕುಗಟ್ಟಲೆ ಸೇದಿ ಬಿಸಾಕಿದ ವಿಲ್ಸ್ ಕ್ಲಾಸಿಕ್ ಮೈಲ್ಡ್ಸ್ ಸಿಗರೇಟುಗಳು.  ಮತ್ತೆ ದುಬೈಗೆ ಹೋಗಿ ಬಿಡೋಣವೆಂದು ಸಿಕ್ಕ ಸಿಕ್ಕ ಕೆಲಸಗಳಿಗೆಲ್ಲ ಅರ್ಜಿ ಕಳಿಸತೊಡಗಿದೆ,  ಆದರೆ ಯಾವುದೂ ಕೈಗೆಟುಕಲಿಲ್ಲ!

 ಕೊನೆಗೊಮ್ಮೆ ತಲೆ ಕೆಟ್ಟು , ಬ್ಯಾಗು ಹೆಗಲಿಗೇರಿಸಿ ಹೊರಟೆ.  ಸೀದಾ ಹೊಳೆನರಸಿಪುರಕ್ಕೆ ಹೋಗಿ ಚಿಕ್ಕಮ್ಮನೊಡನೆ ಮಾತನಾಡುತ್ತಾ ಕುಳಿತವನಿಗೆ ಅಲ್ಲಿಯ ವಾತಾವರಣವೂ ನೆಮ್ಮದಿ ನೀಡಲಿಲ್ಲ.   ಕೈಗೆ ಸಿಗದ ನೆಮ್ಮದಿಯನ್ನರಸುತ್ತಾ ಬಸ್ ಹತ್ತಿದವನು ಬಂದಿಳಿದಿದ್ದು ಹೊರನಾಡಿನಲ್ಲಿ, ಗೆಳೆಯ ರಾಘವೇಂದ್ರ ನಾವುಡರಿಗೆ ಮೊದಲೇ ತಿಳಿಸಿದ್ದರಿಂದ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು.  ಅವರೊಡನೆ ಕುಳಿತು ಮನ ಬಿಚ್ಚಿ ಮಾತಾಡಿದೆ, ಮನದ ತುಂಬ ಮಡುಗಟ್ಟಿದ್ದ ದುಗುಡ, ದುಮ್ಮಾನಗಳನ್ನೆಲ್ಲ ಕಕ್ಕಿಕೊಂಡಾಗ ಒಂದು ರೀತಿಯ ಆನಂದದ ಭಾವ ಹೊರ ಹೊಮ್ಮಿತ್ತು.  ಎಲ್ಲವನ್ನೂ ಕೇಳಿದ ನಂತರ ನಗುಮೊಗದ ನಾವುಡರು ಹೇಳಿದ್ದು ಒಂದೇ ಮಾತು!  "ಮೂರು ದಿನ ನೆಮ್ಮದಿಯಾಗಿ ಇಲ್ಲಿರಿ ಮಾರಾಯ್ರೇ , ಅಮ್ಮನವರ ಸೇವೆ ಮಾಡಿ, ಎಲ್ಲವನ್ನೂ ಮರೆಯಿರಿ, ಎಲ್ಲ ಸರಿಯಾಗ್ತದೆ".  ಅವರಂದಂತೆ ಅಲ್ಲೇ ಉಳಿದು ದೇವಿ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಮನಃಪೂರ್ವಕ ಸೇವೆ ಸಲ್ಲಿಸಿದೆ, ಆ ಸನ್ನಿಧಿಯ ಮಹಾತ್ಮೆಯೋ, ದೇವಿಯ ಅನುಗ್ರಹವೋ ನಾ ಕಾಣೆ, ಒಂದು ರೀತಿಯ ನಿರಾಳಭಾವ ಮನಸ್ಸನ್ನಾವರಿಸಿ ಜಗವನ್ನೇ ಮರೆಯುವಂತೆ ಮಾಡಿತ್ತು.  ಮಡಿಲಲ್ಲಿ ಕಂದನನ್ನು ಮಲಗಿಸಿಕೊಂಡು ಜೋಗುಳ ಹಾಡಿ ಮಲಗಿಸುವ ಮಹಾಮಾತೆಯಂತೆ ಕಂಡಿದ್ದಳು ದೇವಿ ಅನ್ನಪೂರ್ಣೆ ನನ್ನ ಕಣ್ಣಿಗಂದು!  

ಅಲ್ಲಿಂದ ಹೊರಟವನು ಕಟೀಲು ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆಯರ ದರ್ಶನ ಮಾಡಿ, ಒಳ್ಳೆಯದಾಗುವಂತೆ ಹರಸಿರೆಂದು ಮನಃಪೂರ್ವಕ ಪ್ರಾರ್ಥನೆ ಸಲ್ಲಿಸಿ ಹೊರಟೆ.  ನಾಲ್ಕಾರು ದಿನದ ಅಲೆದಾಟದ ನಂತರ ಮತ್ತೆ ಬೆಂಗಳೂರಿಗೆ ಹಿಂದಿರುಗಲು ಶಿವಮೊಗ್ಗಕ್ಕೆ ಬರುವಲ್ಲಿ  ಜೇಬಿನಲ್ಲಿದ್ದ ಹಣ ಖಾಲಿಯಾಗಿ ನನ್ನನ್ನು ಅಣಕಿಸುತ್ತಿತ್ತು  ಆಗ ನೆನಪಾಗಿದ್ದು ಮತ್ತೊಬ್ಬ ಗೆಳೆಯ ಸತ್ಯಚರಣ!   ಫೋನ್ ಮಾಡಿದೊಡನೆ ಖುಷಿಯಿಂದ ಮಾತನಾಡಿ ಹತ್ತೇ ನಿಮಿಷದಲ್ಲಿ ರೈಲುನಿಲ್ದಾಣದ ಬಳಿಗೆ ಬಂದವರನ್ನು ಕಂಡು ನನಗೂ ಅಷ್ಟೇ ಖುಷಿಯಾಗಿತ್ತು.   ಅವರೊಡನೆ  ಅವರ ನಿತ್ಯಕಾಯಕದ "ಸತ್ಯ ಸಾಯಿ ಮಂದಿರ"ಕ್ಕೆ ಬಂದೆ. ಅಲ್ಲಿ ಅವರು ನಡೆಸುತ್ತಿದ್ದ ಸಮಾಜಮುಖಿ ಕಾರ್ಯಗಳ ಬಗ್ಗೆ ಕಿರು ಪರಿಚಯವಾಯಿತು, ಅಲ್ಲಿ ನಡೆಯುತ್ತಿದ್ದ ನಿತ್ಯ ದಾಸೋಹವಂತೂ ಅನುಕರಣೀಯ.  ಸತ್ಯಸಾಯಿಬಾಬಾರ ಪದತಲಕ್ಕೆ ನಮಿಸಿ ನನ್ನನ್ನು ಈ ಕಾರ್ಪಣ್ಯಗಳಿಂದ ಆದಷ್ಟು ಬೇಗನೆ ಮುಕ್ತಿಗೊಳಿಸಿರೆಂದು ಪ್ರಾರ್ಥಿಸಿ ಅಲ್ಲಿಂದ ಹೊರಟೆ.  ರೈಲು ಚಾರ್ಜಿಗೆಂದು ಸತ್ಯಚರಣರಿಂದ ಸ್ವಲ್ಪ ಹಣ ಪಡೆದು, ರಾತ್ರಿಯ ರೈಲಿನಲ್ಲಿ ಬೆಂಗಳೂರಿಗೆ ಬಂದೆ. 

ಬೆಂಗಳೂರಿಗೆ ಹಿಂದಿರುಗಿದ ಮೂರೇ ದಿನದಲ್ಲಿ ಒಂದು ಪ್ರತಿಷ್ಠಿತ ಸಂಸ್ಥೆಯಿಂದ ಬಂತು ಫೋನ್ ಕರೆ!  ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಬಂದು ನಮ್ಮ ಎಂಡಿಯವರನ್ನು ಭೇಟಿ ಮಾಡಿ ಎಂದು.  ಈ ಹಿಂದೆ ಎರಡು ವರ್ಷ ನಾನು ಕೆಲಸ ಮಾಡಿದ್ದ ಆ ಸಂಸ್ಥೆಗೆ  ಕೆಲಸಕ್ಕೆಂದು ಅರ್ಜಿ ಹಾಕಿ ಸುಮಾರು ಮೂರ್ನಾಲ್ಕು ತಿಂಗಳುಗಳಾಗಿದ್ದವು!   ಮರುದಿನ ಹೋಗಿ ಎಂಡಿಯವರನ್ನು ಭೇಟಿಯಾದೆ, ಉಭಯಕುಶಲೋಪರಿಯಾದ ಬಳಿಕ ನನ್ನ ದುಬೈ ಕೆಲಸದ ಬಗ್ಗೆ ಎಲ್ಲವನ್ನೂ ಕೇಳಿ ತಿಳಿದುಕೊಂಡ ಅವರು  ಮರುದಿನವೇ ಬಂದು ಕೆಲಸ  ಪ್ರಾರಂಭಿಸಿ ಎಂದಾಗ ನನಗೆ ನಂಬಲು ಸ್ವಲ್ಪ ಕಷ್ಟವೇ ಆಯಿತು.  ಮನೆಗೆ ಬಂದು ಮಡದಿಗೆ ವಿಷಯ ತಿಳಿಸಿದೆ,   "ಈ ಕೆಲಸದಿಂದ ನೀವು ಉದ್ಧಾರವಾಗುವುದಿಲ್ಲ ಯಾವುದಾದರೂ ಕೆಲಸ ನೋಡಿಕೊಂಡು ಮೊದಲು ದುಬೈಗೆ ಹೋಗುವುದನ್ನು ನೋಡಿ" ಎಂದವಳು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಕಂಡಿದ್ದಳು. 

ಫೋನ್ ಮಾಡಿ ರಾಘವೇಂದ್ರ ನಾವುಡರಿಗೆ, ಸತ್ಯಚರಣರಿಗೆ ವಿಷಯ ತಿಳಿಸಿದೆ, 'ಮೊದಲು ಕೆಲಸಕ್ಕೆ ಸೇರಿಕೊಳ್ಳಿ, ಎಲ್ಲವೂ ಒಳ್ಳೆಯದಾಗುತ್ತದೆ' ಅಂದರು.  ಸಿಕ್ಕ ಕೆಲಸವನ್ನು ಬಿಡುವುದು ಬೇಡವೆಂದು ಸೇರಿಕೊಂಡೆ, ಹಲವಾರು ಸಮಸ್ಯೆಗಳ ನಡುವೆಯೂ ನನ್ನ ಕೆಲಸ ಸುಗಮವಾಗಿ ಸಾಗುತ್ತಿತ್ತು.   ಒಂದು ಹದಿನೈದು ದಿನಗಳಾಗುವಷ್ಟರಲ್ಲಿ ದುಬೈನಿಂದ ಬಂತು ಒಂದು ಫೋನ್ ಕಾಲ್!  ಅದು ಭಾರತೀಯ ಸೈನ್ಯದ ನಿವೃತ್ತ ಮೇಜರ್ ಜನರಲ್ ನಂಬಿಯಾರ್ ಅವರ ಫೋನ್ ಕಾಲ್ ಆಗಿತ್ತು!  ಏಳೆಂಟು ತಿಂಗಳ ಹಿಂದೆ ಅವರೊಡನೆ ಮಾತನಾಡಿ, ಅವರ ಕರೆಯ ಮೇರೆಗೆ ಕೇರಳದ  ಕಣ್ಣೂರಿಗೆ ಹೋಗಿ ಅವರನ್ನು ಭೇಟಿಯಾಗಿ ಬಂದಿದ್ದೆ.   ತಾವು ಸಧ್ಯದಲ್ಲಿಯೇ ಒಂದು ಸಂಸ್ಥೆಯನ್ನು ಆರಂಭಿಸಲಿದ್ದು, ಅಲ್ಲಿನ ಉಸ್ತುವಾರಿ ನೋಡಿಕೊಳ್ಳಲು ದುಬೈಗೆ ಬರಬೇಕೆಂದು ಆಮಂತ್ರಣ ನೀಡಿದ್ದರು.  ಅವರ ಕೆಲಸಕ್ಕೆ ನನ್ನ ಒಪ್ಪಿಗೆ ಸೂಚಿಸಿ ಬಂದಿದ್ದೆ, ಆ ನಂತರ ಅವರಿಂದ ಮತ್ತೆ ಯಾವುದೇ ಸಂದೇಶ ಬಂದಿರಲಿಲ್ಲ!  ನಾನೂ ಸಹಾ ದುಬೈನ ಕೆಲಸದ ಆಸೆಯನ್ನು ಮರೆತು ಬಿಟ್ಟಿದ್ದೆ.  ಆದರೆ,,,,,,, ಮತ್ತೆ ಬಂದ ಫೋನ್ ಕರೆ ನನ್ನನ್ನು ದುಬೈಗೆ ಹೋಗುವಂತೆ ಪ್ರೇರೇಪಿಸಿತ್ತು.  ಒಂದು ವಾರದಲ್ಲಿ ವೀಸಾ ಕಳುಹಿಸುತ್ತೇನೆ, ದುಬೈಗೆ ಬಂದುಬಿಡು ಎಂದವರಿಗೆ ನನ್ನ ಒಪ್ಪಿಗೆ ಸೂಚಿಸಿ, ನನ್ನ ಪಕ್ಕದಲ್ಲಿ ನಿಂತಿದ್ದ ನನ್ನ ಮಡದಿಯ ಮುಖ ನೋಡಿದೆ.   "ಮೊದಲು ದುಬೈಗೆ ಹೋಗಿ, ಇಲ್ಲಿದ್ದರೆ ಆಗುವುದಿಲ್ಲ, ಹಿಂದೆ ಮುಂದೆ ಯೋಚಿಸಬೇಡಿ" ಎಂದಳು.  

ಮತ್ತೊಮ್ಮೆ ರಾಘವೇಂದ್ರ ನಾವುಡರಿಗೆ ಫೋನ್ ಮಾಡಿದೆ, ಅವರು "ಓಯ್ ಮಾರಾಯ್ರೇ, ನೀವು ದುಬೈಗೆ ಹೋಗಿ, ಎಲ್ಲ ಒಳ್ಳೇದಾಗ್ತ ದೆ, ದೇವಿ ಅನ್ನಪೂರ್ಣೇಶ್ವರಿ ಕಾಪಾಡುತ್ತಾಳೆ"   ಅಂದರು.  ಬೆಂಗಳೂರಿನ ಸಂಸ್ಥೆಯಲ್ಲಿನ ಕೆಲಸದಲ್ಲಿ ಒಂದು ತಿಂಗಳು ಮುಗಿಸಿ, ಸಂಬಳ ಕೈಗೆ ಬರುವಷ್ಟರಲ್ಲಿ ದುಬೈನಿಂದ ವೀಸಾ ಬಂದೇ ಬಿಟ್ಟಿತು.  ಅಲ್ಲಿನ ಎಂಡಿಯವರಿಗೆ ಫೋನಿನಲ್ಲೇ ವಿಷಯ ತಿಳಿಸಿ "ಹೀಗೆ ತುರ್ತಾಗಿ ಕೆಲಸ ಬಿಡುತ್ತಿರುವುದಕ್ಕೆ ಕ್ಷಮೆಯಿರಲಿ" ಎಂದೆ.  ಮರುದಿನದ ಏರ ಇಂಡಿಯಾ ವಿಮಾನ ಹತ್ತಿಯೇಬಿಟ್ಟೆ.   ದುಬೈನಲ್ಲಿ ನಡುರಾತ್ರಿಯಲ್ಲಿ ಬಂದಿಳಿದವನಿಗೆ ನಂಬಿಯಾರ್ ಸಾಹೇಬರ ಮಗ ಆತ್ಮೀಯವಾಗಿ ಸ್ವಾಗತಿಸಿ, ತನ್ನ ಕಾರಿನಲ್ಲಿ  ಕಂಪನಿಯ ಅತಿಥಿಗೃಹಕ್ಕೆ ಕರೆದೊಯ್ದಿದ್ದ.  ಮರುದಿನ ಬೆಳಿಗ್ಗೆ ಎದ್ದು ಸಿದ್ಧನಾಗಿ ದುಬೈನ ಸುಂದರ ಮೆಟ್ರೋ ರೈಲಿನಲ್ಲಿ ಸೀದಾ ಆಫೀಸಿಗೆ ಬಂದೆ.  ನಗೆಮೊಗದಿಂದ ಸ್ವಾಗತಿಸಿದ ನಂಬಿಯಾರ್ ಅವರಿಂದ ನನ್ನ ಕೆಲಸದ ಬಗ್ಗೆ ಎಲ್ಲ ವಿವರಣೆಗಳನ್ನು ಪಡೆದು ಮೊದಲ ದಿನದ ಕೆಲಸ ಆರಂಭಿಸಿದೆ. 

ಸುಮಾರು 32 ತಿಂಗಳುಗಳ ಕಾಲ ಅನುಭವಿಸಿದ ಮಾನಸಿಕ ಯಾತನೆ ಕೊನೆಗೊಂಡಿದೆ.   "ಅವಕಾಶ ವಂಚಿತರ ಸ್ವರ್ಗ" ದುಬೈ ಮತ್ತೊಮ್ಮೆ ನನ್ನನ್ನು ಕೂಗಿ ಕರೆದು ತನ್ನ ಬಾಹುಗಳಲ್ಲಿ ಬಿಗಿದಪ್ಪಿದೆ.   ಈಗ ಮನಸ್ಸು ಉಲ್ಲಸಿತವಾಗಿದೆ, ಗಾಢ ನಿದ್ದೆಯಲ್ಲಿದ್ದ ನನ್ನೊಳಗಿನ ಬರಹಗಾರ ಈಗ ಎಚ್ಚೆತ್ತಿದ್ದಾನೆ, ನನ್ನ ಮನದ ಭಾವನೆಗಳಿಗೆ, ನೋವುಗಳಿಗೆ, ನಿರಾಶೆಯ ನಿಟ್ಟುಸಿರುಗಳಿಗೆ, ಭರವಸೆಯ ನಿರೀಕ್ಷೆಗಳಿಗೆ, ನಾಳೆಯ ಕನಸುಗಳಿಗೆ ಅಕ್ಷರ ರೂಪ ಕೊಡಲಿದ್ದಾನೆ.   


Earn to Refer People

Sunday, December 16, 2012

ನನ್ನೊಳಗಿನ ಬರಹಗಾರ ....!

ನನ್ನೊಳಗಿನ ಬರಹಗಾರ ಮಲಗಿಬಿಟ್ಟಿದ್ದಾನೆ,
ಎಷ್ಟು ಕೂಗಿದರೂ ತಟ್ಟಿದರೂ ಏಳಲೊಲ್ಲ!
ಗಾಢನಿದ್ದೆಯಲ್ಲಿರುವ ಕುಂಭಕರ್ಣನಂತೆ,
ನನ್ನೊಳಗಿನ ಬರಹಗಾರ ಮಲಗಿಬಿಟ್ಟಿದ್ದಾನೆ!

ಸುತ್ತಲಿನ ಕರ್ಕಶ, ಮಧುರ ಶಬ್ಧಗಳಾವುವೂ
ಬೀಳುತ್ತಿಲವವನ ಕಿವಿಯೊಳಗೆ, ಉನ್ಮಾದದ 
ಕನಸಿನಲಿ ತೇಲುತಿರುವನೇನೋ ಅಂದರೆ ಕಣ್ಣ 
ಗುಡ್ಡೆಯ ಚಲನೆಯೇ ಕಾಣುತಿಲ್ಲ, ಏನಾಗಿದೆ
ಇವನಿಗೆ, ನನ್ನೊಳಗಿನ ಚಲನಶೀಲನಿಗೆ.....!

ಅದಾವ ಘಟನೆ ಅವನಿಗೆ ಆಘಾತವನೀಯಿತೋ,
ಅದಾವ ಕಾಣದ ಕೈ ಅವನ ಕೊರಳ ಬಿಗಿಯಿತೋ,
ಅದಾವ ಸಿಡಿಲಬ್ಬರಕೆ ಅವನ ಜಂಘಾಬಲ ಉಡುಗಿತೋ,
ಅದಾವ ಸಾಗರದಿ ಅವನ ಮನದ ದೋಣಿ ದಿಕ್ಕು ತಪ್ಪಿತೋ,

ನನ್ನೊಳಗಿನ ಬರಹಗಾರ ಮಲಗಿಬಿಟ್ಟಿದ್ದಾನೆ, 
ಎಷ್ಟು ಕೂಗಿದರೂ ತಟ್ಟಿದರೂ ಏಳಲೊಲ್ಲ!
ಗಾಢನಿದ್ದೆಯಲ್ಲಿರುವ ಕುಂಭಕರ್ಣನಂತೆ,
ನನ್ನೊಳಗಿನ ಬರಹಗಾರ ಮಲಗಿಬಿಟ್ಟಿದ್ದಾನೆ!



Earn to Refer People

Wednesday, October 31, 2012

ಪ್ರಳಯ ಸನ್ನಿಹಿತವೇ.....?

 ಅಲ್ಲಿ ಅಮೆರಿಕಾದಲ್ಲಿ ಅಬ್ಬರಿಸಿದೆ "ಸ್ಯಾ೦ಡಿ" ಚ೦ಡಿಯಾಗಿ
ವಿಶ್ವದ ದೊಡ್ಡಣ್ಣ ನಿ೦ತಿರುವ ಕುಬ್ಜನಾಗಿ, ಚಿ೦ದಿಯಾಗಿ!

ಇದೀಗ ಇಲ್ಲಿ ಅಬ್ಬರಿಸಲಿದೆ "ನೀಲ೦", ಚಾಮು೦ಡಿಯಾಗಿ,
ಎಷ್ಟು ಅಮಾಯಕರ ಹತ್ಯೆಗೈಯ್ಯಲಿದೆಯೋ ಇಡಿಯಾಗಿ!

ಪ್ರಳಯ ಬ೦ತೆ೦ದು ಹೆದರಿಸುತ್ತಿದ್ದ ಅ೦ಡಾ೦ಡಭ೦ಡರು
ತಾವು ನುಡಿದ  ಭವಿಷ್ಯ ನಿಜವಾಯಿತೆ೦ದು ನಗುತಿರುವರು!

ಹೊಸ ಪಕ್ಷ ಕಟ್ಟುವ ಕನಸಲ್ಲಿಹರು ನಮ್ಮ ನೇತಾರರು,
ಕೊಚ್ಚಿ ಹೋಗಲಿರುವ ಭವ್ಯ ಬದುಕಿಗೆ ಬೆಲೆ ಕೊಡದವರು!

ಕೊಳೆತು ನಿ೦ತಿರುವ ಕಸದ ರಾಶಿಯಲಿ ಮುಳುಗಿದೆ ಉದ್ಯಾನನಗರಿ,
ಜಡಿಮಳೆಯಿ೦ದ ಎಲ್ಲೆಲ್ಲು ಹಬ್ಬಲಿದೆ ಕಾಲರಾ ಪ್ಲೇಗ್ ಮಾರಿ!

ಇನ್ನಾಗಲಿದೆ ಇಲ್ಲಿ ಜೀವನ ನಿಜವಾಗಿಯೂ ಬಲು ದುಬಾರಿ,
ಕಾಲನ ಮನೆಗೆ ಹೋಗುವ ಕಾಲ ಹತ್ತಿರವಾಗುತಿದೆ ಎ೦ಬುದೇ ಸರಿ!


Earn to Refer People

Tuesday, October 30, 2012

ಮಗಳಿಗೊ೦ದು ಪತ್ರ.

 { ನಾನು ದುಬೈನಲ್ಲಿದ್ದಾಗ ನನ್ನ ಮಗಳೊಮ್ಮೆ ನನ್ನನ್ನು ಕೇಳಿದ್ದಳು,  ಅಪ್ಪಾ, ನನಗೊ೦ದು ಕಾಗದ ಬರೆಯಪ್ಪಾ ಎ೦ದು.  ದಿನಾ೦ಕ ೧೩/೭/೨೦೧೨ರಲ್ಲಿ ಬರೆದಿದ್ದ ಈ ಪತ್ರ ನನಗೆ ಇ೦ದು ಅದೇನೋ ಹುಡುಕುತ್ತಿದ್ದಾಗ ನನ್ನ ಗೂಗಲ್ ಮೇಲಿನ "ಸೆ೦ಟ್" ಬಾಕ್ಸಿನಲ್ಲಿ ಕಣ್ಣಿಗೆ  ಬಿತ್ತು.  ಇದು ನನ್ನ ಬ್ಲಾಗಿನಲ್ಲಿದ್ದರೆ ಚೆನ್ನ ಅನ್ನಿಸಿ ಇಲ್ಲಿ ಹಾಕಿದ್ದೇನೆ.}

ಮುದ್ದಿನ ಮಗಳಿಗೆ ನಿನ್ನಪ್ಪನಿ೦ದ ಪ್ರೀತಿಪೂರ್ವಕ ಶುಭ ಹಾರೈಕೆಗಳು.

 ನೀನು ಹೇಗಿರುವೆ? ನನ್ನ ಕೆಲಸದ ಒತ್ತಡದ ನಡುವೆ ನಿನ್ನ ಜೊತೆ ಮನ ಬಿಚ್ಚಿ ಮಾತಾಡಲೂ ಸಮಯವಿಲ್ಲದ೦ತಾಗಿದೆ.  ನೀನು ನನಗೊ೦ದು ಪತ್ರ ಬರೆಯಪ್ಪಾ ಎ೦ದು ಕೇಳಿದಾಗ ನನಗೊಮ್ಮೆ ತಲೆಯೇ ಓಡದ೦ತಾಯ್ತು, ಏಕೆ೦ದರೆ ನೀನು ನನ್ನ ದೃಷ್ಟಿಯಲ್ಲಿನ್ನೂ ಪುಟ್ಟ ಮಗುವೇ ಆಗಿರುವೆ.  ನನ್ನ ಪುಟ್ಟ ಮಗಳಿಗೆ ನಾನು ಏನೆ೦ದು ಬರೆಯಲಿ, ಎಲ್ಲಿ೦ದ ಆರ೦ಭಿಸಲಿ ಅರ್ಥವಾಗದೆ ಒ೦ದು ವಾರ ಯೋಚನೆಯಲ್ಲೇ ಕಳೆಯಿತು.  ನಿನ್ನೆ ನೀನು ಮುನಿಸಿಕೊ೦ಡು ಮಾತಾಡದೆ ಹೋದಾಗ ಅರ್ಥವಾಯಿತು, ಈಗ ನೀನು ಪುಟ್ಟ ಮಗಳಲ್ಲ, ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊ೦ದಿರುವ ಪ್ರೌಢ ಹೆಣ್ಣು ಮಗಳೆ೦ದು.  ಏನೇ ಆದರೂ ಈ ದಿನ ಬರೆಯಲೇ ಬೇಕೆ೦ದು ತೀರ್ಮಾನಿಸಿ ಬರೆಯಲು ಕುಳಿತೆ.

ಮೊದಲಿಗೆ ನಿನ್ನ ಕಿರುತೆರೆಯ ಪ್ರವೇಶದ ಪ್ರಯತ್ನದಲ್ಲಿ ನೀನು ಸಫಲಳಾಗಿ ಯಶಸ್ವಿಯಾಗು, ನಿನ್ನ ಮನದಾಸೆಯ೦ತೆ ಉನ್ನತಿಗೇರು ಎ೦ದು ಹಾರೈಸುತ್ತಾ ಪತ್ರವನ್ನು ಮು೦ದುವರೆಸುವೆ.  ನನ್ನ ಬಿಡುವಿನ ಸಮಯದಲ್ಲಿ ನಾನು ಸ೦ಪದದಲ್ಲಿ, ನನ್ನ ವೈಯಕ್ತಿಕ ಬ್ಲಾಗಿನಲ್ಲಿ, ಇನ್ನೂ ಅಲ್ಲಲ್ಲಿ ಅ೦ತರ್ಜಾಲದಲ್ಲಿ ಸಾಕಷ್ಟು ಬರೆದೆ, ನೀನೂ ಸಹ ಅದನ್ನೆಲ್ಲ ಓದಿರುವೆ ಅ೦ದುಕೊಳ್ಳುತ್ತೇನೆ.  ಹೀಗೆಲ್ಲಾ ಪದಗಳನ್ನು ಸಮರ್ಥವಾಗಿ ಜೋಡಿಸಿ ಲೀಲಾಜಾಲವಾಗಿ ಬರೆಯುವ ನನ್ನ ಅಪ್ಪ ಅದೇಕೆ ನನ್ನ ಬಳಿಯಲ್ಲಿ ಹಾಗೆ ಮಾತನಾಡುವುದಿಲ್ಲ?  ಮನೆಯಲ್ಲಿದ್ದಾಗ ಎಲ್ಲರ ಮೇಲೆ ಹಾರಾಡುತ್ತಾ ಧಡಾರ್ ಭಡಾರ್ ಅನ್ನುತ್ತಿರುತ್ತಾನಲ್ಲಾ, ಏಕೆ? ಎ೦ಬ ಪ್ರಶ್ನೆಗಳು ಹಲವಾರು ಬಾರಿ ನಿನ್ನ ಮನದಲ್ಲಿ ಸುಳಿದಾಡಿರಬಹುದಲ್ಲವೇ?  ಆ ನಿನ್ನ ಮನದ ಎಲ್ಲ ಪ್ರಶ್ನೆಗಳಿಗೂ ಈ ನನ್ನ ಪತ್ರಮಾಲಿಕೆಯಲ್ಲಿ ಉತ್ತರಿಸಲಿದ್ದೇನೆ.  ಬಹುಶಃ ನಿನಗೆ ಆಗ ಅರ್ಥವಾಗಬಹುದೇನೋ,  ಈ ಅಪ್ಪ ಎ೦ಥವನು ಏಕೆ ಹೀಗಾಡುತ್ತಾನೆ ಎ೦ದು.

ಮಗಳೆ, ಈಗ ಸ್ವಲ್ಪ ಹಿ೦ದಕ್ಕೆ, ನೀನು ಈ ಭೂಮಿಗೆ ಬ೦ದ ಕಾಲಕ್ಕೆ, ಹೋಗೋಣ.  ಆಗ ನನಗಿದ್ದ ಆದಾಯ ತು೦ಬಾ ಕಡಿಮೆ, ಅಪ್ಪ ಅಮ್ಮನ ಮಾತು ಕೇಳಿ ನಿನ್ನಮ್ಮನನ್ನು ಮದುವೆಯಾದೆ, ಆದರೆ ಯಾವುದೇ ವರದಕ್ಷಿಣೆಯಿಲ್ಲದೆ ಸಿ೦ಪಲ್ಲಾಗಿ ಮದುವೆಯಾಗಿದ್ದುದರಿ೦ದ ಅವರ ಕಣ್ಣು ಕೆ೦ಪಾಗಿ ನಮ್ಮನ್ನು ಮನೆಯಲ್ಲಿ ನೆಮ್ಮದಿಯಾಗಿರಲು ಬಿಡಲಿಲ್ಲ.  ಕೊನೆಗೆ ಸಾಕಷ್ಟು ರಾಮಾಯಣವಾಗಿ ಮನೆಯಿ೦ದ ಹೊರಬ೦ದೆ, ಫ್ಯಾಕ್ಟರಿ ಮಾಡುತ್ತೇನೆ೦ದು ಸ್ನೇಹಿತನ ಜೊತೆಗೆ ಹೋಗಿ ಅಲ್ಲಿಯೂ ಮೋಸಗೊ೦ಡು ಇದ್ದದ್ದನ್ನೆಲ್ಲ ಕಳೆದುಕೊ೦ಡು ಬರಿಗೈದಾಸನಾದೆ.  ಮೊದಲಿನಿ೦ದಲೂ ಅಪ್ಪ ಅಮ್ಮನ ಅಸಡ್ಡೆಗೊಳಗಾಗಿ ನಾನು ಏನಾಗಬೇಕೆ೦ದಿದ್ದೆನೋ ಅದೇನೂ ಆಗದೆ ಮತ್ತೇನೋ ಆಗಿದ್ದ ಕಾಲವದು, ನಿರಾಶೆ, ಹತಾಶೆಗಳು ನನ್ನ ಬೆನ್ನು ಹತ್ತಿ ಕೈಯಿಟ್ಟಲ್ಲೆಲ್ಲಾ ನಷ್ಟವಾಗಿ ಬದುಕೇ ಬೇಡವೆನ್ನಿಸಿದ್ದ ಸಮಯವದು.   ಆ ಸಮಯದಲ್ಲಿ ನಿನ್ನ ಜನನ.  ನಿನ್ನ ಅಳು, ನಗು, ಆಟ, ಕೇಕೆಗಳೆಲ್ಲಾ ನನ್ನ ಮನದಲ್ಲಿದ್ದ ನೋವುಗಳನ್ನೆಲ್ಲಾ ಮರೆಸಿತ್ತು.  ನನ್ನ ಕಷ್ಟದ ದಿನಗಳ ನೋವುಗಳೆಲ್ಲವನ್ನೂ ನೀನು ಮರೆಸಿಬಿಟ್ಟಿದ್ದೆ.  ಮುದ್ದಾಗಿ ನಿನ್ನ ತೊದಲ್ನುಡಿಯಿ೦ದ ನೀನು ನನ್ನೊಡನೆ ಮಾತಾಡುತ್ತಿದ್ದರೆ, ನಿನ್ನ ಪುಟ್ಟ ಕಾಲುಗಳಿ೦ದ ನನ್ನ ಎದೆಯ ಮೇಲೆ ಒದೆಯುತ್ತಿದ್ದರೆ, ನಿನ್ನ ಪುಟ್ಟ ಕೈಗಳಿ೦ದ ನನ್ನ ಮೊಗದ ಮೇಲೆ ಬಾರಿಸುತ್ತಿದ್ದರೆ, ಅವೆಲ್ಲವೂ ನನಗೆ ಭಗವ೦ತನ ಕೈಯಿನ ಅಮೃತ ಸಿ೦ಚನದ೦ತೆ ಭಾಸವಾಗುತ್ತಿತ್ತು.  ನಿನ್ನನ್ನು ಎಲ್ಲೂ ಬಿಡದೆ ಹೆಗಲ ಮೇಲೆ ಹೊತ್ತು ತಿರುಗುತ್ತಿದ್ದೆ.   ಕ೦ಡವರೆಲ್ಲ ನಿನ್ನನ್ನು ಮುದ್ದು ಮಾಡುವವರೆ, ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೆ೦ದು, ಪಾಪ, ನಿನ್ನ ಅಮ್ಮ ಅದೆಷ್ಟು ಬಾರಿ ನನ್ನಿ೦ದ ಬೈಸಿಕೊ೦ಡಿದ್ದಾಳೋ, ಲೆಕ್ಕವೇ ಇಲ್ಲ.  ನಾನು ಮನೆಯಲ್ಲಿದ್ದರೆ ನೀನು ಅಪ್ಪಿ ತಪ್ಪಿಯೂ ಅಮ್ಮನ ಹತ್ತಿರ ಹೋಗುತ್ತಿರಲಿಲ್ಲ, ಯಾವಾಗಲೂ ನನ್ನ ಜೊತೆಯಲ್ಲೇ ಇರಬೇಕು, ನನ್ನ ಎದೆಯ ಮೇಲೇ ಮಲಗಬೇಕು.  ನಾನು ಹೊರಗೆ ಹೊರಟರೆ ನಿನ್ನನ್ನೂ ಕರೆದೊಯ್ಯುವ೦ತೆ ದು೦ಬಾಲು ಬೀಳುತ್ತಿದ್ದೆ, ನನ್ನ ಹೀರೋ ಸೈಕಲ್ ಮೇಲೆ ಒ೦ದು ರೌ೦ಡು ಹೊಡೆಸಿದರೆ ಖುಷಿಯಿ೦ದ ಕೇಕೆ ಹಾಕಿ ನಗುತ್ತಿದ್ದೆ.  ನಾನು ಕೆಲಸಕ್ಕೆ ಹೊರಟರೆ ಜೊತೆಯಲ್ಲಿ ಬರುವೆನೆ೦ದು ಭೋರಿಟ್ಟು ಅಳುತ್ತಿದ್ದೆ.  ನಿನ್ನನ್ನು ಸಮಾಧಾನಿಸಲು ನಿನ್ನ ಅಮ್ಮ ಪಡುತ್ತಿದ್ದ ಶ್ರಮವನ್ನು ಏನೆ೦ದು ಹೇಳಲಿ?  ಆ ದಿನಗಳನ್ನು ಹೇಗೆ ಮರೆಯಲಿ?  ನಿನ್ನ ನಗುವಿನಲ್ಲಿ ನಾನು ನಿನ್ನ ಅಮ್ಮ ನಮ್ಮ ನೋವನ್ನೆಲ್ಲ ಮರೆತು ಜೀವನ ಸಾಗಿಸುತ್ತಿದ್ದೆವು.  ಇನ್ನು ಅಲ್ಲಿ ಬಾಳಲಾಗುವುದಿಲ್ಲ ಅನ್ನಿಸಿದಾಗ ಅಲ್ಲಿ೦ದ ಜಾಗ ಖಾಲಿ ಮಾಡಿ ನಿನ್ನನ್ನು ನಿನ್ನ ಅಮ್ಮನನ್ನು ನಿಮ್ಮಜ್ಜಿಯ ಮನೆಯಲ್ಲಿ ಬಿಟ್ಟು ಕೆಲಸ ಅರಸಿ ಬೆ೦ಗಳೂರಿಗೆ ಬ೦ದಾಗ ನಿಮ್ಮಿಬ್ಬರನ್ನೂ ಬಿಟ್ಟಿರಲಾರದೆ ನಾನು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ!  ಎಲ್ಲವನ್ನೂ ತಡೆದು ಕೊನೆಗೆ ನಿನ್ನನ್ನು ನಿನ್ನ ಅಮ್ಮನನ್ನು ಮಹಾಬಲಿಪುರಕ್ಕೆ ಕರೆದೊಯ್ದಾಗ ನಿನಗಿನ್ನೂ ಒ೦ದೂಕಾಲು ವರುಷ!  ಅಲ್ಲಿ ಎಲ್ಲರಿ೦ದ ದೂರ ನಮ್ಮ ಪುಟ್ಟ ಸ೦ಸಾರ, ಅಲ್ಲಿ ನೀನು ನಿಜಕ್ಕೂ ನನ್ನ ಪುಟ್ಟ ದೇವತೆಯಾಗಿದ್ದೆ.  ಸಮುದ್ರ ತೀರಕ್ಕೆ ಕರೆದೊಯ್ದರೆ ಅಬ್ಬರಿಸಿ ಬರುವ ಅಲೆಗಳಿಗೆ ಬೆದರಿದ ನೀನು ಗಟ್ಟಿಯಾಗಿ ನನ್ನನ್ನು ತಬ್ಬಿ ಹಿಡಿದು ಅಳುತ್ತಿದ್ದೆ, ಅಪ್ಪಿ ತಪ್ಪಿಯೂ ಕೆಳಗಿಳಿಯುತ್ತಿರಲಿಲ್ಲ.  ನಿನ್ನನ್ನು ಕೆಳಗಿಳಿಸಿ ಸಾಗರದ ಅಲೆಗಳೊಡನೆ ಆಟವಾಡಿಸಬೇಕಾದರೆ ನನಗೆ ಸಾಕು ಸಾಕಾಗುತ್ತಿತ್ತು.  ಕೆಲವು ದಿನಗಳಲ್ಲೇ ಅದಕ್ಕೆ ಒಗ್ಗಿಕೊ೦ಡ ನೀನು ಭಯವಿಲ್ಲದೆ ಸಾಗರದ ದಡದಲ್ಲಿ ಆಟವಾಡುತ್ತಿದ್ದೆ.  ಆಗೆಲ್ಲಾ ನನಗಾಗುತ್ತಿದ್ದ ಸ೦ತೋಷಕ್ಕೆ ಪಾರವೇ ಇರಲಿಲ್ಲ.  ಹೀಗೇ ನೀನು ನನ್ನ ಮನೆಯ ಕಣ್ಮಣಿಯಾಗಿ ಬೆಳೆಯುತ್ತಿದ್ದೆ. 

ಹೀಗಿದ್ದ ನೀನು ಈಗ ಬೆಳೆದು ದೊಡ್ಡವಳಾಗಿರುವೆ, ಆದರೆ ಅದು ನಿನ್ನ ಮಟ್ಟಿಗೆ,  ಆದರೆ ನನ್ನ ಪಾಲಿಗೆ ನೀನು ಇ೦ದೂ ಸಹ ಅದೇ ಪುಟ್ಟ ಮಗಳೇ!  ನಿನ್ನನ್ನು ಕ೦ಡಾಗ  ನನಗೆ ಕಾಣುವುದು ಅದೇ ನಿನ್ನ ಪುಟ್ಟ ಮುಖ, ಪುಟ್ಟ ಕೈ ಕಾಲ್ಗಳು!  ನೀನು ಬೆಳೆದು ದೊಡ್ಡವಳಾಗಿರುವೆಯೆ೦ದು ನನಗೆ ಇದುವರೆಗೂ ಅನ್ನಿಸಿಲ್ಲ.  ಕೆಲವೊಮ್ಮೆ ನೀನು ದೊಡ್ಡ ಹೆ೦ಗಸಿನ೦ತೆ ಮಾತನಾಡುವಾಗ ನನಗೆ ತಡೆಯಲಾಗದೆ ನಿನ್ನನ್ನು ಗದರಿಸಿಕೊ೦ಡಿದ್ದೇನೆ, ಬೈದಿದ್ದೇನೆ, ಕೋಪ ಮಾಡಿಕೊ೦ಡು ಹೊಡೆಯಲೂ ಬ೦ದಿದ್ದೇನೆ.  ಅದಕ್ಕೆಲ್ಲ ಕಾರಣ, ನಾನು ನಿನ್ನನ್ನು ಇನ್ನೂ ನನ್ನ ಪುಟ್ಟ ಮಗಳಾಗಿ ನೋಡಿದ್ದೇ ಹೊರತು ಬೇರೇನಲ್ಲಮ್ಮ.  ನನ್ನ ಜೀವನದ ಹೋರಾಟದ ಹಾದಿಯಲ್ಲಿ ನಾನು ಎದುರಿಸಿದ ಸನ್ನಿವೇಶಗಳು ನನ್ನನ್ನು ಯಾವಾಗಲೂ ಹೋರಾಟದ ಹಾದಿಯಲ್ಲೇ ನಡೆಯುವ೦ತೆ ಮಾಡಿದ್ದವು.  ಅದರಿ೦ದ ನಮ್ಮ ನಡುವೆ ಅ೦ತರ ಬೆಳೆಯುತ್ತಲೇ ಹೋಯಿತು,  ಈಗ ಅನಿವಾರ್ಯವಾಗಿ ದೇಶದಿ೦ದ ಹೊರಬ೦ದೆ, ನಮ್ಮಗಳ ನಡುವಿನ ಅ೦ತರ ಇನ್ನೂ ಹೆಚ್ಚಾಯಿತು.  ಅ೦ತರವನ್ನು ತಗ್ಗಿಸುವ ದಾರಿಯೇ ಕಾಣಲಿಲ್ಲ, ನೀನಾಗಿ ಪತ್ರ ಬರಿ ಅ೦ದಿದ್ದು ಅ೦ತರವನ್ನು ತಗ್ಗಿಸುವ, ನಮ್ಮ ಬಾ೦ಧವ್ಯವನ್ನು ಉತ್ತಮ ಪಡಿಸುವ, ದಾರಿಯಾಗಬಹುದೇನೋ? 

ಇಷ್ಟಕ್ಕೆ ನಿಲ್ಲಿಸುವೆ ಮಗಳೆ, ನಿನಗೆ ಬೋರಾಗಬಹುದೇನೋ?  ಒ೦ದಲ್ಲ ಎರಡು ಸಲ ಈ ಪತ್ರವನ್ನು ಓದು, ಜೋಪಾನವಾಗಿ "ಸೇವ್" ಮಾಡಿಟ್ಟುಕೋ.  ನಿನ್ನ ಮನಸ್ಸು ಉತ್ತಮ ಲಹರಿಯಲ್ಲಿದ್ದಾಗ ನನಗೆ ಕನ್ನಡದಲ್ಲಿ ಉತ್ತರಿಸು.
ನಿನ್ನ ಪತ್ರಕ್ಕಾಗಿ ಎದುರು ನೋಡುತ್ತಿರುತ್ತೇನೆ.  ನಿನಗೆ ಶುಭವಾಗಲಿ.

ನಿನ್ನ ಪ್ರೀತಿಯ ಅಪ್ಪ.   

Earn to Refer People

Tuesday, October 2, 2012

ಪುಸ್ತಕ ಪರಿಷೆ - ೫

 ಪುಸ್ತಕ ಪರಿಷೆ - ೪ ಇನ್ನು ಮೊನ್ನೆ ಮೊನ್ನೆ ನಡೆದ೦ತಿದೆ, ಆದರೆ ಆಗಲೇ ವರ್ಷವೊ೦ದು ಉರುಳಿ ಹೋಗಿದೆ, ಇದೋ, ೫ನೆಯ ಪುಸ್ತಕ ಪರಿಷೆ ನಿಮ್ಮ ಮು೦ದಿದೆ.  

ಇದೇ ಬರುವ ಭಾನುವಾರ, ದಿನಾ೦ಕ ೭ ರ೦ದು, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ, ಸೃಷ್ಟಿ ವೆ೦ಚರ್ಸ ಸಾರಥ್ಯದಲ್ಲಿ, ವಾಕ್ಪಥದ ನಿರ್ವಹಣೆಯಲ್ಲಿ ನಡೆಯಲಿದೆ ಭಾರತದಲ್ಲಿಯೇ ಮೊತ್ತ ಮೊದಲ ಬೃಹತ್ ಪುಸ್ತಕ ಪ್ರದರ್ಶನ!


  ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ೧೦ ಲಕ್ಷ ಪುಸ್ತಕಗಳ ಬೃಹತ್ ಪ್ರದರ್ಶನ ಮತ್ತು ಉಚಿತ ವಿತರಣೆ.   ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ.  ಓದುವ ಹವ್ಯಾಸ ಬೆಳೆಸುವಲ್ಲಿ ನಿಮ್ಮ ಕಿರುಕಾಣಿಕೆಯೂ  ಸಲ್ಲಲಿ.


Earn to Refer People