ಪೊಲೀಸರ
ರಾಜಾತಿಥ್ಯದಿಂದಾಗಿ ಜರ್ಝರಿತವಾಗಿದ್ದ ನನ್ನ ಕೈ ಕಾಲುಗಳು ಕೆಲವು ದಿನ ನನಗೆ ಸಹಕಾರವನ್ನೇ ನೀಡಲಿಲ್ಲ! ಸ್ವಲ್ಪ ಸುಧಾರಿಸಿಕೊಂಡ ನಂತರ ಲಾಯರ್ ಕುಮಾರನನ್ನು ಭೇಟಿ
ಮಾಡಿ ಹೊಸಕೋಟೆಯ ಪೊಲೀಸರ ವಿರುದ್ಧ ಒಂದು ಕ್ರಿಮಿನಲ್ ಕೇಸ್ ಹಾಗೂ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ಲಾಯರ್ ಕುಮಾರ ತನಗಿಂತಲೂ ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರಾದ
ಹೊನ್ನೇಗೌಡ ಎನ್ನುವವರನ್ನು ನಮ್ಮ ಪರವಾಗಿ ವಾದಿಸಲು ನಿಯೋಜಿಸಿದ್ದ. ಹೊನ್ನೇಗೌಡರ ಅನುಭವದಿಂದ ನಮ್ಮ ಪ್ರಕರಣ ಹೊಸಕೋಟೆಯ ನ್ಯಾಯಾಲಯದಲ್ಲಿ
ಒಂದು ರೀತಿಯ ಸಂಚಲನವನ್ನೇ ಸೃಷ್ಟಿಸಿತ್ತು. ನನ್ನ
ಜೊತೆಗೆ ಪೊಲೀಸರ ರಾಜಾತಿಥ್ಯವನ್ನು ಅನುಭವಿಸಿದ್ದ ಇತರ ಭದ್ರತಾ ರಕ್ಷಕರು ಈ ಎರಡೂ ಪ್ರಕರಣಗಳಲ್ಲಿ
ಸಾಕ್ಷಿಗಳಾಗಿ ನಿಂತು ತಮ್ಮ ಹೇಳಿಕೆಗಳನ್ನು ದಾಖಲಿಸಿದರು.
ಹೆಣ್ಣೊಬ್ಬಳನ್ನು ಬಂಧಿಸಿ ನ್ಯಾಯಧೀಶರ ಮುಂದೆ ಹಾಜರುಪಡಿಸದೆ ಇಪ್ಪತ್ನಾಲ್ಕು ಘಂಟೆಗಳ ಕಾಲ
ಬಂಧನದಲ್ಲಿಟ್ಟದ್ದು, ಜೊತೆಗೆ ನಿರಪರಾಧಿಗಳಾದ ನಮ್ಮನ್ನು ಅಪರಾಧಿಗಳೆಂದು ಬಿಂಬಿಸಿ, ಬಂಧನದಲ್ಲಿಟ್ಟು
ಚಿತ್ರಹಿಂಸೆ ಕೊಟ್ಟಿದ್ದು ಹಾಗೂ ಹಲ್ಲೆ ಮತ್ತು ಕೊಲೆ ಪ್ರಯತ್ನದ ಸುಳ್ಳು ಪ್ರಕರಣ ದಾಖಲಿಸಿ ಸುಖಾಸುಮ್ಮನೆ
ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿ ಸಮಾಜದಲ್ಲಿ ನಮ್ಮ ಮರ್ಯಾದೆ ಕಳೆದಿದ್ದು ನಮ್ಮ ದೂರಿನ ಮುಖ್ಯಾಂಶಗಳಾಗಿದ್ದವು. ಸಾಕ್ಷಿಗಳ ಹೇಳಿಕೆ ದಾಖಲಾಗಿ ಪ್ರಕರಣ ದಿನಕ್ಕೊಂದು ಹೊಸ
ರೂಪ ತಳೆಯುತ್ತಾ ಕುತೂಹಲಕರವಾಗಿ ಮುಂದುವರೆಯುತ್ತಿದ್ದಂತೆ ನಮ್ಮ ಬಂಧನದಲ್ಲಿ ಭಾಗಿಗಳಾಗಿದ್ದ ಪೊಲೀಸರಲ್ಲಿ
ಸಣ್ಣದೊಂದು ನಡುಕ ಶುರುವಾಗಿತ್ತು.
ಕೆಲ ತಿಂಗಳುಗಳ
ನಂತರ ಇದ್ದಕ್ಕಿದ್ದಂತೆ ಸರ್ಕಾರಿ ವಕೀಲನ ಕುಟಿಲ ತಂತ್ರದಿಂದಾಗಿ ನಮ್ಮ ಪ್ರಕರಣ ಹೊಸಕೋಟೆ ನ್ಯಾಯಾಲಯದ
ವ್ಯಾಪ್ತಿಗೆ ಬರುವುದಿಲ್ಲವೆಂದು ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾಯಿಸಿಬಿಟ್ಟರು. ಅದುವರೆಗೂ ಹೊಸಕೋಟೆ ನ್ಯಾಯಾಲಯದಲ್ಲಿ ದಾಖಲಾಗಿದ್ದ ಸಾಕ್ಷಿ
ಹೇಳಿಕೆಗಳನ್ನು ಹೊಸ ನ್ಯಾಯಾಧೀಶರ ಮುಂದೆ ಮತ್ತೊಮ್ಮೆ ದಾಖಲಿಸಬೇಕಿತ್ತು. ಇದರಿಂದಾಗಿ ನಮ್ಮ ತಂಡದ ಆತ್ಮಸ್ಥೈರ್ಯ ಕೊಂಚ ಕುಗ್ಗಿತ್ತು. ಇದೇ ಸಮಯಕ್ಕೆ ನಮ್ಮ ಪ್ರಕರಣದಲ್ಲಿ ನಮ್ಮ ಪರವಾಗಿ ವಾದಿಸುತ್ತಿದ್ದ
ಹಿರಿಯ ನ್ಯಾಯವಾದಿ ಹೊನ್ನೇಗೌಡರು ಒಂದು ಕರಾಳ ರಾತ್ರಿಯಲ್ಲಿ ಮಲಗಿದ್ದಂತೆಯೇ ಹೃದಯಾಘಾತದಿಂದ ಮರಣ
ಹೊಂದಿದ್ದರು. ಅವರ ಮರಣದಿಂದಾಗಿ ನಮ್ಮ ಹೋರಾಟಕ್ಕೆ
ದೊಡ್ಡ ಹೊಡೆತವೇ ಬಿದ್ದಂತಾಗಿತ್ತು. ಅದೇ ಸಮಯಕ್ಕೆ
ಹೊನ್ನೇಗೌಡರ ಸಲಹೆಯಂತೆ ಕಪ್ಪುಬಿಳುಪು ಪತ್ರಿಕೆಯೊಂದಕ್ಕೆ ನಮ್ಮ ಇಡೀ ಪ್ರಕರಣದ ಬಗ್ಗೆ ಮಾಹಿತಿ ನೀಡಿ
ಪ್ರಕಟಿಸುವಂತೆ ವಿನಂತಿಸಿಕೊಂಡಿದ್ದೆವು. ಆದರೆ ಆ
ಸಂಪಾದಕ ಮಹಾಶಯ ಪೊಲೀಸ್ ಅಧಿಕಾರಿಗಳೊಡನೆ ವ್ಯವಹಾರ ಕುದುರಿಸಿ ನಮ್ಮ ಪ್ರಕರಣದ ಬಗ್ಗೆ ಯಾವ ವರದಿಯನ್ನೂ
ಪ್ರಕಟಿಸದೆ ದುಡ್ಡು ಮಾಡಿಕೊಂಡಿದ್ದ. ಇತ್ತ ಲಾಯರ್
ಹೊನ್ನೇಗೌಡರ ಮರಣದ ನಂತರ ನಮ್ಮ ಪರವಾಗಿ ವಕಾಲತ್ತು ವಹಿಸಿಕೊಂಡಿದ್ದ ಲಾಯರ್ ಕುಮಾರನೂ ಸಹ ಪೊಲೀಸ್
ಅಧಿಕಾರಿಗಳೊಡನೆ ಕೈ ಮಿಲಾಯಿಸಿ, ನಮ್ಮ ಪ್ರಕರಣಗಳೆರಡನ್ನೂ ಹಳ್ಳ ಹಿಡಿಸಿದ್ದ.
No comments:
Post a Comment