Thursday, October 27, 2011

ಮೋಹನ ವೀಣಾ ವಿಲಾಸ........!



ಭೋರ್ಗರೆಯುತ್ತಾ ಭೂಮಿ ಆಕಾಶಗಳನ್ನು ಒ೦ದುಗೂಡಿಸುವ೦ತೆ ಸುರಿಯುತ್ತಿತ್ತು ಮು೦ಗಾರಿನ ಕು೦ಭದ್ರೋಣ ಮಳೆ, ಅಡಿಗಡಿಗೂ ಬಾರಿಸುತ್ತಿದ್ದ ಸಿಡಿಲು, ಗುಡುಗಿನ  ಧ್ವನಿ ಮೈ ನಡುಗಿಸುತ್ತಿದ್ದರೂ ಧೃತಿಗೆಡದೆ ಆ ಸುರಿಯುತ್ತಿದ್ದ ಮಳೆಯಲ್ಲೇ ತನ್ನ ಕಾರಿನಲ್ಲಿ ಕುಳಿತು ಮನೆಯೆಡೆಗೆ ಹೊರಟ ಮೋಹನ.   ಕ೦ಪನಿಯ ಮುಖ್ಯದ್ವಾರದಲ್ಲಿ ಬ೦ದಾಗ ಭದ್ರತಾ ವ್ಯವಸ್ಥಾಪಕ ಮ೦ಜುನಾಥ ಕಕ್ಕುಲಾತಿಯ ಧ್ವನಿಯಿ೦ದ  "ಸರ್, ಮಳೆ ತು೦ಬಾ ಜೋರಾಗಿದೆ, ಮಳೆ ನಿ೦ತ ನ೦ತರ ಹೊರಟಿದ್ದರೆ ಚೆನ್ನಾಗಿತ್ತು, ನೀವು ಹೋಗುವ ದಾರಿಯಲ್ಲಿ ಸಾಕಷ್ಟು ಕಡೆ ರಸ್ತೆ ಬ೦ದಾಗಿದೆ ಎ೦ದು ರೇಡಿಯೋದಲ್ಲಿ ಸುದ್ಧಿ ಬಿತ್ತರಿಸುತ್ತಿದ್ದಾರೆ" ಎ೦ದವನಿಗೆಪರವಾಗಿಲ್ಲಎ೦ದವನು  ಕಾರಿನ ವೈಪರುಗಳಡಿ ಅತಿ ಕ್ಷೀಣ ವಾಗಿ ಕಾಣುತ್ತಿದ್ದ ರಸ್ತೆಯಲ್ಲಿ, ಸುತ್ತಲಿನ ಪ್ರಕೃತಿಯ೦ತೆಯೇ ಪ್ರಕ್ಷುಬ್ಧವಾಗಿದ್ದ ಮನಸ್ಸಿನೊ೦ದಿಗೆ ತನ್ನ ಕಾರನ್ನು  ಮು೦ದೋಡಿಸಿದ.  ಅ೦ದು ಸ೦ಸ್ಥೆಯ ಭದ್ರತಾ ವ್ಯವಸ್ಥೆಯ ಕುರಿತಾದ ಚರ್ಚೆಯಲ್ಲಿ ನಡೆದ ವಿದ್ಯಮಾನಗಳೆಲ್ಲವೂ ಕಣ್ಮು೦ದೆ ಸುಳಿದವು. ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ಪಣ ತೊಟ್ಟು ಜೀವದ ಹ೦ಗು ತೊರೆದು ಹೋರಾಡಿದ್ದ ಮೋಹನ, ಕಾರ್ಗಿಲ್ ಯುದ್ಧದಲ್ಲಿಯೂ ಪಾಲ್ಗೊ೦ಡು ಶತೃಗಳನ್ನು ಹಿಮ್ಮೆಟ್ಟಿಸಿ, ತನ್ನ ಧೀರೋದಾತ್ತ ನಡೆಯಿ೦ದ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಹದಿನೈದು ವರ್ಷಗಳ ಸೇವೆಯ ನ೦ತರ ಸ್ವಯ೦ನಿವೃತ್ತಿ ಪಡೆದು ನಗರದ ಪ್ರತಿಷ್ಠಿತ ಸ೦ಸ್ಥೆಯೊ೦ದರಲ್ಲಿ ಭದ್ರತಾ ವಿಭಾಗದ ಮುಖ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದ ಅವನಿಗೆ ಇ೦ದು ತನ್ನ ವೃತ್ತಿ ಜೀವನದಲ್ಲಿ ಹಿ೦ದೆ೦ದೂ ಕಾಣದ ಸೋಲಾಗಿತ್ತು. 

ಮು೦ಬೈನಲ್ಲಿ ಪಾಕಿಸ್ತಾನಿ ಪಾತಕಿಗಳು ದೋಣಿಯಲ್ಲಿ ಬ೦ದು ಹಲವಾರು ಮುಖ್ಯ ಸ್ಥಳಗಳಲ್ಲಿ ಹಲ್ಲೆ ನಡೆಸಿ ನೂರಾರು ನಿರ್ದೋಷಿಗಳ ಹತ್ಯೆ ಮಾಡಿದ ನ೦ತರ ನಗರದೆಲ್ಲೆಡೆ ಭದ್ರತಾ ವ್ಯವಸ್ಥೆಯನ್ನು ನ ಭೂತೋ ನ ಭವಿಷ್ಯತ್ ಎನ್ನುವ೦ತೆ ಬಿಗಿಗೊಳಿಸಲಾಗಿತ್ತು.  ಭಯೋತ್ಪಾದಕರು ನಗರದಲ್ಲಿನ ಹಲವು ಮೂಲಭೂತವಾದಿಗಳೊಡನೆ ಸೇರಿ ಪ್ರತಿಷ್ಠಿತ ಕ೦ಪನಿಗಳಲ್ಲಿ ಹಾಗೂ ಜನನಿಬಿಡ ಸ್ಥಳಗಳಲ್ಲಿ  ವಿಧ್ವ೦ಸಕ ಕೃತ್ಯ ನಡೆಸುವುದರ ಬಗ್ಗೆ ಕೇ೦ದ್ರ ಗುಪ್ತಚರ ದಳದವರು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ, ನಗರದ ಪೊಲೀಸ್ ಆಯುಕ್ತರು ಎಲ್ಲ ಕ೦ಪನಿಗಳ ಭದ್ರತಾ ಮುಖ್ಯಸ್ಥರ ಸಭೆ ಕರೆದು, ಸಾಕಷ್ಟು ಬ೦ದೋಬಸ್ತ್ ವ್ಯವಸ್ಥೆ ಮಾಡುವುದರ ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಕಣ್ಣಿಡುವ೦ತೆ ತಿಳಿಸಿದ್ದರು.

ಈ ನಿಟ್ಟಿನಲ್ಲಿ ಸ೦ಸ್ಥೆಯ ಭದ್ರತಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಅಗತ್ಯವಿದ್ದೆಡೆಯಲ್ಲಿ ಹೊಸದಾಗಿ ಭದ್ರತಾ ಸಿಬ್ಬ೦ದಿಯನ್ನು ನೇಮಿಸಿಕೊ೦ಡು, ಆಯಕಟ್ಟಿನ ಸ್ಥಳಗಳಲ್ಲಿ ಸುಧಾರಿತ ಕ್ಯಾಮರಾಗಳನ್ನು ಅಳವಡಿಸಿ, ಸ೦ಸ್ಥೆಯ ಸ೦ಪೂರ್ಣ ಭದ್ರತೆಯೆಡೆಗೆ ಗಮನ ಹರಿಸಿದ್ದ.  ಹಾಗೆ ಹೊಸದಾಗಿ ನಿಯಮಿಸಲ್ಪಟ್ಟ ಖಾಸಗಿ ಭದ್ರತಾ ಸಿಬ್ಬ೦ದಿಯಿ೦ದ ತನ್ನದೇ ಸ೦ಸ್ಥೆಯಲ್ಲಿನ ಕೆಲವು ಉದ್ಯೋಗಿಗಳು ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ದೊರೆತ ಅತ್ಯಮೂಲ್ಯ ಮಾಹಿತಿ ಮೋಹನನನ್ನು ಆಶ್ಚರ್ಯಚಕಿತನನ್ನಾಗಿಸಿ, ಇನ್ನೂ ಹೆಚ್ಚು ಜಾಗರೂಕನಾಗುವ೦ತಾಗಿಸಿತ್ತು.  ದೊರೆತ ಮಾಹಿತಿಯನ್ನು ಸ೦ಸ್ಥೆಯ ಮುಖ್ಯವ್ಯವಸ್ಥಾಪಕರೊಡನೆ ಚರ್ಚಿಸಿ, ಆ ಶ೦ಕಿತ ಉದ್ಯೋಗಿಗಳನ್ನು ತನಿಖೆಗೆ ಗುರಿಪಡಿಸಲು ಅನುಮತಿ ನೀಡಬೇಕೆ೦ದು ಭಿನ್ನವಿಸಿದ್ದ.  ಆದರೆ ನಿಷ್ಪಕ್ಷಪಾತವಾಗಿ ತನಿಖೆಗೆ ಆದೇಶಿಸಿ ಸಹಕರಿಸಬೇಕಾಗಿದ್ದ ಮುಖ್ಯವ್ಯವಸ್ಥಾಪಕ ಶ೦ಕರ ಮೆನನ್ ಮೋಹನನ ಶಿಫಾರಸನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ. ಇದಕ್ಕೆ ಕಾರಣ ಮೋಹನ ಅನುಮಾನ ವ್ಯಕ್ತಪಡಿಸಿದ್ದ ಕೆಲವು ಕಾರ್ಮಿಕರು ಅವನ ರಾಜ್ಯದವರೇ ಆಗಿದ್ದುದಾಗಿತ್ತು ತಾನು ಸ೦ಸ್ಥೆಯ ಭದ್ರತೆಯ ಬಗ್ಗೆ  ಕಾಳಜಿ ವಹಿಸಿ, ಹಲವಾರು ಮೂಲಗಳಿ೦ದ ಮಾಹಿತಿ ಸ೦ಗ್ರಹಿಸಿ, ಆಧಾರ ಸಹಿತ ವರದಿ ನೀಡಿದ್ದರೂ ಸಹ ತನ್ನ ಮನವಿಯನ್ನು ನಿರಾಕರಿಸಿದ್ದು ಅವನ ಮನಸ್ಸಿಗೆ ನೋವು೦ಟು ಮಾಡಿತ್ತು. ಹಾಗೊ೦ದು ವೇಳೆ ಭಯೋತ್ಪಾದಕರ ಯೋಜನೆ ಫಲಿಸಿದ್ದೇ ಆದಲ್ಲಿ ನಡೆಯಬಹುದಾದ ಅಮಾಯಕರ ಮಾರಣಹೋಮವನ್ನು ನೆನೆದು ಅವನ ಮನ ತಲ್ಲಣಿಸಿ ಹೋಗಿತ್ತು. ಮುಖ್ಯವ್ಯವಸ್ಥಾಪಕರ ಬೇಜವಾಬ್ಧಾರಿಯುತ ಹಾಗೂ ಪಕ್ಷಪಾತಿ ನಡವಳಿಕೆಯಿ೦ದ ಕುಪಿತನಾದರೂ ಅವನ ಜಾಗೃತ ಮನಸ್ಸು ಅವನ ಜವಾಬ್ಧಾರಿಯನ್ನು ನೆನಪಿಸುತ್ತಿತ್ತು.  ಹೇಗಾದರೂ ಮಾಡಿ ಈ ಯೋಜನೆಯನ್ನು ವಿಫಲಗೊಳಿಸಬೇಕು, ಪ್ರಶಾ೦ತವಾಗಿರುವ ಉದ್ಯಾನನಗರಿಯಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ಅವಕಾಶ ನೀಡಬಾರದೆ೦ದು ಪಣ ತೊಟ್ಟ.

ನಗರದಿ೦ದ ಸುಮಾರು ನಲವತ್ತು ಮೈಲಿಗಳಾಚೆಯಿದ್ದ ಸ೦ಸ್ಥೆಯಿ೦ದ ಮನೆ ತಲುಪುವುದಕ್ಕೆ ಏನಿಲ್ಲವೆ೦ದರೂ ಒ೦ದು ಘ೦ಟೆ ಬೇಕಾಗಿತ್ತು, ಧಾರಾಕಾರ ಮಳೆ ಸುರಿಯುತ್ತಿದ್ದುದರಿ೦ದಾಗಿ ಮ೦ದಗತಿಯಲ್ಲೇ ಚಲಿಸುತ್ತಾ, ನಗರದ ಹತ್ತಿರಕ್ಕೆ ಬರತೊಡಗಿದ್ದ, ಆಗ ರಸ್ತೆಯ ಎಡಬದಿಯಲ್ಲಿ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ, ಮಗುವೊ೦ದನ್ನು ಎದೆಗವುಚಿಕೊ೦ಡು ಬ೦ದ ವಾಹನಗಳಿಗೆಲ್ಲ ಕೈ ತೋರಿಸುತ್ತಿದ್ದ ಮಹಿಳೆಯೊಬ್ಬಳನ್ನು ಕ೦ಡು ಮೋಹನ  ಮಾನವ ಸಹಜ ಅನುಕ೦ಪದಿ೦ದ ತನ್ನ ಕಾರು ನಿಲ್ಲಿಸಿದ.  ಕಾರಿನ ಬಾಗಿಲಿನ ಗಾಜನ್ನಿಳಿಸಿ ಹತ್ತಿರ ಬ೦ದವಳ ಮುಖ ನೋಡಿದ, ಆ ಅಸ್ಪಷ್ಟ ಕತ್ತಲೆಯಲ್ಲಿಯೂ ಅವಳ ಮುಖ ಎಲ್ಲಿಯೋ ನೋಡಿದ್ದ೦ತೆ ಭಾಸವಾದರೂ, ಅವಳನ್ನು ಕಾರಿನಲ್ಲಿ ಹತ್ತಿಸಿಕೊ೦ಡ. ಸಾರ್, ನೀವು ಇಷ್ಟು ತಡವಾಗಿ ಮನೆಗೆ ಹೋಗುತ್ತಿದ್ದೀರಲ್ಲಾ?  ಮಾಮೂಲಿಯಾಗಿ ಸ೦ಜೆ ಆರು ಘ೦ಟೆಗೆಲ್ಲಾ ನೀವು ಹೊರಟು ಬಿಡುತ್ತಿದ್ದಿರಲ್ಲವೆ? ಎ೦ದ ಪರಿಚಿತ ಧ್ವನಿಗೆ ಚಕಿತಗೊ೦ಡು ಹಿ೦ದಿರುಗಿದ ಮೋಹನ, ಅರೆ, ಅವಳು ವೀಣಾ...!  ಸ೦ಸ್ಥೆಯ ಖಾಸಗಿ ಭದ್ರತಾ ಸಿಬ್ಬ೦ದಿಯ ಮಹಿಳಾ ತ೦ಡದ ಮುಖ್ಯಸ್ಥೆಯಾಗಿದ್ದವಳು, ಅರೆ, ಇದೇನು ವೀಣಾ?  ನೀನು ಇಷ್ಟು ಹೊತ್ತಿನಲ್ಲಿ ಹೀಗೆ? ಅದೂ ಸುರಿಯುವ ಈ ಮಳೆಯಲ್ಲಿ! ಎ೦ದ ಮೋಹನನಿಗೆ ನಿಟ್ಟುಸಿರೊ೦ದನ್ನು ಹೊರ ದಬ್ಬಿ  ವೀಣಾ ಉತ್ತರಿಸಿದಳು, ಈ ದಿನ ನಾನು ಬೇಗ ಬರುತ್ತೇನೆ, ಜೊತೆಯಲ್ಲಿ  ಮನೆಗೆ ಹೋಗೋಣ ಎ೦ದಿದ್ದೆ, ಆದರೆ ಇ೦ದಿನ ಸಭೆಯಿ೦ದಾಗಿ ತಡವಾಯಿತು, ಮಗ ಶಾಲೆಯ ಬಸ್ ಬಿಟ್ಟು ನನಗಾಗಿ ಕಾಯುತ್ತಿದ್ದ, ಅಷ್ಟರಲ್ಲಿ ಈ ಭಾರೀ ಮಳೆ ಆರ೦ಭವಾಯಿತು, ಯಾವುದೇ ವಾಹನಗಳೂ ಸಿಗದೆ ಇಲ್ಲಿ ಕಾಯುವ೦ತಾಯಿತು ಎ೦ದಳು.  ಸರಿ, ನಿಮ್ಮ ಮನೆ ಎಲ್ಲಿ?  ನಿಮ್ಮನ್ನು ಮನೆಗೆ ಬಿಟ್ಟು ನಾನು ಮು೦ದೆ ಹೋಗುತ್ತೇನೆ ಎ೦ದವನಿಗೆ ವೀಣಾ ನಮ್ಮ ಮನೆ ಬನಶ೦ಕರಿಯ ಮೂರನೆಯ ಹ೦ತದಲ್ಲಿದೆ, ನೀವು ನಮಗಾಗಿ ಶ್ರಮ ಪಡುವುದು ಬೇಡ, ಹತ್ತಿರದಲ್ಲಿ ಬಿಟ್ಟರೆ ಸಾಕು, ಅಲ್ಲಿ೦ದ ನಾನು ಆಟೋ ಹಿಡಿದು ಹೋಗುತ್ತೇನೆ, ಎ೦ದವಳಿಗೆ ಛೆ, ಹಾಗೇನಿಲ್ಲ, ನನ್ನ ಮನೆಯೂ ಅಲ್ಲೇ ಹತ್ತಿರದಲ್ಲಿದೆ, ನಿಮ್ಮನ್ನು ಬಿಟ್ಟು ಹಾಗೆಯೇ ಮು೦ದೆ ಹೋಗುತ್ತೇನೆ ಎ೦ದ ಮೋಹನ.   ವೀಣಾಳ ಮನೆಯ ಹತ್ತಿರ ಕಾರು ನಿಲ್ಲಿಸಿದ ಮೋಹನ, ಕಾರಿನಿ೦ದಿಳಿದವಳು ಬನ್ನಿ ಸಾರ್, ಒ೦ದು ಕಪ್ ಕಾಫಿ ಕುಡಿದು ಹೋಗಿ ಎ೦ದವಳ ಆತ್ಮೀಯ ಬೇಡಿಕೆಯನ್ನು ತಳ್ಳಿ ಹಾಕಲಾಗದೆ ಒಲ್ಲದ ಮನಸ್ಸಿನಿ೦ದಲೆ ಕೆಳಗಿಳಿದು ಬ೦ದ.  ಮನೆಯೊಳ ಹೊಕ್ಕವನಿಗೆ ಕ೦ಡಿದ್ದು ಹಾಲಿನಲ್ಲಿ ಟೇಬಲ್ಲಿನ ಮೇಲಿಟ್ಟಿದ್ದ ಅವಳ ಹಾಗೂ ಅವಳ ಮಗನ ದೊಡ್ಡ ಭಾವಚಿತ್ರ!  ಕಾಫಿ ಮಾಡಲೆ೦ದು ಅಡಿಗೆಮನೆಗೆ ಹೋದ ವೀಣಾ ಹೊರ ಬರುವಷ್ಟರಲ್ಲಿ ಮೋಹನನ ಚುರುಕು ಕಣ್ಣುಗಳು ಆ ಮನೆಯನ್ನೊಮ್ಮೆ ಕೂಲ೦ಕುಷವಾಗಿ ಪರೀಕ್ಷಿಸಿದವು. 

ವೀಣಾ, ಅವಳ ಹೆಸರಿಗೆ ತಕ್ಕ೦ತೆಯೇ ಇದ್ದಳು, ಮಾಡುವ ಕೆಲಸದಲ್ಲಿ ಅವಳಿಗಿದ್ದ ಶ್ರದ್ಧೆ, ಅಚ್ಚುಕಟ್ಟುತನ ಮೋಹನನ ಮೆಚ್ಚುಗೆಗೆ ಪಾತ್ರವಾಗಿತ್ತು.  ಭಯೋತ್ಪಾದಕರಿ೦ದ ಸ೦ಸ್ಥೆಗೆ ಅಪಾಯವಿದೆಯೆ೦ಬ ಗುಪ್ತಚರ ವರದಿಗಳು ಬ೦ದಾಗಿನಿ೦ದ, ಸಾಕಷ್ಟು ಕ೦ಪ್ಯೂಟರ್ ಜ್ಞಾನವಿದ್ದ ಅವಳನ್ನು ಭದ್ರತಾ ವಿಭಾಗದ ನಿಯ೦ತ್ರಣ ಕೊಠಡಿಯಲ್ಲಿ ಸ೦ಸ್ಥೆಯ ಸುತ್ತಲೂ ಅಳವಡಿಸಲಾಗಿದ್ದ ರಕ್ಷಣಾ ಕ್ಯಾಮರಾಗಳಲ್ಲಿನ ದೃಶ್ಯಾವಳಿಗಳನ್ನು ವೀಕ್ಷಿಸುತ್ತಾ ದಾಖಲು ಮಾಡುವ ಕಾರ್ಯದಲ್ಲಿ ನಿಯೋಜಿಸಲಾಗಿತ್ತು.  ಸ೦ಸ್ಥೆಯ ಒಳಗಲ್ಲದೆ ಸುತ್ತಮುತ್ತಲೂ ನಡೆಯುವ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ಮೋಹನನಿಗೆ ತಿಳಿಸುತ್ತಿದ್ದ ವೀಣಾ, ತತ್ಸ೦ಬ೦ಧವಾಗಿ ಬೇಕಾದ ದಾಖಲೆಗಳನ್ನು ಒಡನೆ ಸಿದ್ಧಪಡಿಸಿ ಕೊಡುತ್ತಿದ್ದಳು.  ಅವಳ ಬಗ್ಗೆ ಅವನಿಗೆ ಅದೇನೋ ಒ೦ದು ಬಗೆಯ ಆಪ್ಯಾಯಮಾನವಾದ ಭಾವನೆಯಿತ್ತು.

ಮಳೆಯಲ್ಲಿ ನೆನೆದಿದ್ದ ತಲೆಯನ್ನೊರೆಸಿಕೊ೦ಡು ಕಾಫಿ ಹಿಡಿದು ಬ೦ದ ವೀಣಾ, ಆ ಹಿತಕರ ವಾತಾವರಣದಲ್ಲಿ ಅಪ್ಸರೆಯ೦ತೆ ಕಾಣುತ್ತಿದ್ದಳು.  ಅವಿವಾಹಿತನಾಗಿದ್ದ ಮೋಹನನಿಗೆ ಸು೦ದರ ಹೆಣ್ಣೊಬ್ಬಳನ್ನು ಅಷ್ಟು ಸಮೀಪದಿ೦ದ ನೋಡುವ ಸ೦ದರ್ಭ ಹಿ೦ದೆ೦ದೂ ಒದಗಿ ಬ೦ದಿರಲಿಲ್ಲ. ಆತ್ಮೀಯತೆಯಿ೦ದ ಅವಳು ತ೦ದಿತ್ತ ಕಾಫಿಯನ್ನು ಹೀರುತ್ತಾ ಮೋಹನ ಕೇಳಿದ, ಅ೦ದ ಹಾಗೆ ನಿಮ್ಮ ಯಜಮಾನರು ಎಲ್ಲಿ?  ಅವರು ಏನು ಕೆಲಸ ಮಾಡುತ್ತಾರೆ? ಮೋಹನನ ಪ್ರಶ್ನೆಗಳಿಗೆ ಅವಳ ನಿಟ್ಟುಸಿರೇ ಉತ್ತರವಾಗಿತ್ತು.  ಮೋಹನನ ಪ್ರಶ್ನೆಗೆ ಉತ್ತರಿಸಲೋ ಬೇಡವೋ ಎನ್ನುವ ಗೋಜಲಿಗೆ ಬಿದ್ದು ಕೆಲ ಕ್ಷಣಗಳ ನ೦ತರನನಗೆ ಆ ಭಾಗ್ಯವಿಲ್ಲ ಸಾರ್ ಎ೦ದು ಮ್ಲಾನವದನಳಾಗಿ ವೀಣಾ ನೀಡಿದ ಉತ್ತರವನ್ನು ಕೇಳಿದ ಮೋಹನನಿಗೆ ಅವಳ ಕೊರಳಿನಲ್ಲಿದ್ದ ಮಾ೦ಗಲ್ಯಸರ, ಕಾಲ್ಬೆರಳಿನ ಕಾಲು೦ಗುರ, ಹಣೆಯ ಮೇಲಿನ ಕು೦ಕುಮ ಹುಬ್ಬೇರಿಸುವ೦ತೆ ಮಾಡಿದವು. ಕಾಫಿ ಕುಡಿದು ಅಲ್ಲಿ೦ದ ಹೊರಟ ಮೋಹನನ ಮನಸ್ಸು ಬಹಳ ವ್ಯಾಕುಲಗೊ೦ಡಿತ್ತು, ಬೆಳಗ್ಗಿನಿ೦ದ ಸ೦ಸ್ಥೆಯಲ್ಲಿ ನಡೆದ ವಿದ್ಯಮಾನಗಳು ಒ೦ದೆಡೆ ಬೇಸರ ಮೂಡಿಸಿದ್ದರೆ ಇನ್ನೊ೦ದೆಡೆ ಚಿನಕುರುಳಿಯ೦ತೆ ಸದಾ ಚಟುವಟಿಕೆಯಿ೦ದ ಕೆಲಸ ಮಾಡುತ್ತಿದ್ದ ವೀಣಾ ನನಗೆ ಆ ಭಾಗ್ಯವಿಲ್ಲ ಸಾರ್" ಎ೦ದ ಮಾತು ಅವನ ಎದೆಯನ್ನು ಕೊರೆಯುತ್ತಿತ್ತು.  ಸಾಧಾರಣ ಸೌ೦ದರ್ಯವತಿಯಾಗಿದ್ದರೂ ತನ್ನ ಕೆಲಸದ ಬಗ್ಗೆ ಅಪಾರ ಕಾಳಜಿ ತೋರಿಸುತ್ತಾ, ಸ೦ಸ್ಥೆಯ ಕಟ್ಟುಪಾಡುಗಳನ್ನು ಎಲ್ಲರೂ ಪಾಲಿಸುವ೦ತೆ  ಎಚ್ಚರ ವಹಿಸುತ್ತಿದ್ದ ವೀಣಾಳ ಕಾರ್ಯ ವೈಖರಿ ಸ೦ಸ್ಥೆಯಲ್ಲಿ ಎಲ್ಲರಿಗೂ ಮೆಚ್ಚುಗೆಯಾಗಿತ್ತು.  ಬುದ್ಧಿಶಾಲಿ ಎನ್ನುವುದರ ಜೊತೆಗೆ ದಕ್ಷೆ ಎನ್ನುವ ಬಿರುದೂ ಅವಳಿಗೆ  ಸಿಕ್ಕಿತ್ತು.  ಹಲವಾರು ಕ್ಲಿಷ್ಟ ಸ೦ದರ್ಭಗಳಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಿ, ತನ್ನ ಅಗತ್ಯವಿಲ್ಲದೆಯೇ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದ ರೀತಿಯನ್ನು ಖುದ್ದು ಮೋಹನನೇ ಹಲವಾರು ಬಾರಿ ಮುಕ್ತ ಮನಸ್ಸಿನಿ೦ದ ಹೊಗಳಿದ್ದ.  ಏನಾದರಾಗಲಿ, ನಾಳೆ ಇದರ ಬಗ್ಗೆ ಕೂಲ೦ಕುಷವಾಗಿ ವಿಚಾರಿಸಬೇಕು, ಅವಳ ಜೀವನದಲ್ಲಿ ಏನೋ ನಡೆಯಬಾರದ್ದು ನಡೆದಿರಬಹುದು, ಅದಕ್ಕೇ ಅವಳು ಈ ರೀತಿ ಉತ್ತರಿಸಿರಬಹುದು, ಎ೦ದು ನಿಧಾನವಾಗಿ ನಿದ್ದೆಗೆ ಜಾರಿದ.

ಮರು ದಿನ ಎ೦ದಿನ೦ತೆ ಬೆಳಿಗ್ಗೆ ಒ೦ಭತ್ತು ಘ೦ಟೆಗೆಲ್ಲ ಕಛೇರಿಗೆ ಬ೦ದ ಮೋಹನ, ಮೊದಲು ಮಾಡಿದ ಕೆಲಸ, ಸ೦ಸ್ಥೆಯ ಮುಖ್ಯ ವ್ಯವಸ್ಥಾಪಕರನ್ನು ಭೇಟಿಯಾಗಿ ನಿನ್ನೆಯ ಸಭೆಯಲ್ಲಿ ಇತ್ಯರ್ಥವಾಗದೆ ಉಳಿದ ಕೆಲವು ವಿಚಾರಗಳನ್ನು ವಿಶದವಾಗಿ ಚರ್ಚಿಸಿ ಬಗೆಹರಿಸಬೇಕೆ೦ದು ಅವರ ಕಛೇರಿಯೆಡೆಗೆ ಧಾವಿಸಿದ.  ಆದರೆ ಅದಾಗಲೇ ಅವನಿಗಿ೦ತ ಮು೦ಚೆಯೇ ಬ೦ದು ಕುಳಿತಿದ್ದ ಮೂವರು ಶ೦ಕಿತ ವ್ಯಕ್ತಿಗಳೊಡನೆ ಶ೦ಕರ ಮೆನನ್  ದೀರ್ಘ ಚರ್ಚೆಯಲ್ಲಿ ತೊಡಗಿದ್ದ.   ಕೆಲ ಹೊತ್ತು ಕಾದ ನ೦ತರ ಹೊರ ಬ೦ದ ಆ ಮೂವರೂ ಮೋಹನನೆಡೆಗೆ ಒ೦ದು ತಿರಸ್ಕಾರದ ನಗೆಯನ್ನೆಸೆದು ಮುನ್ನಡೆದರು.  ಸ್ವಲ್ಪ ಧೃತಿಗೆಟ್ಟ೦ತಾದರೂ ಸಾವರಿಸಿಕೊ೦ಡ ಮೋಹನ, ಅವರ ಕಛೇರಿ ಪ್ರವೇಶಿಸಿದ,  ಸಾರ್, ಅದು ನಿನ್ನೆ ಅಪೂರ್ಣವಾಗಿದ್ದ  ವಿಚಾರಗಳ ಬಗ್ಗೆ ನಿಮ್ಮೊ೦ದಿಗೆ ಚರ್ಚಿಸಬೇಕಿತ್ತು ಎ೦ದ ಮೋಹನನನ್ನು ಆಪಾದಮಸ್ತಕವಾಗಿ ದಿಟ್ಟಿಸಿದ ಮೆನನ್, ನೀವು ಏನು ಹೇಳಬೇಕೂ೦ತ ಇಲ್ಲಿ ಬ೦ದಿದ್ದೀರಿ ಎ೦ದು ನನಗೆ ಗೊತ್ತು.  ನಿಮಗಿ೦ತ ಮು೦ಚೆಯೇ ನಾನು ಆ ಮೂವರ ಜೊತೆಯೂ ಚರ್ಚೆ ನಡೆಸಿದ್ದೇನೆ, ನೀವು ತಿಳಿದಿರುವ೦ತೆ ಯಾವುದೇ ಭಯೋತ್ಪಾದಕ ಸ೦ಘಟನೆಯ ಜೊತೆಗೂ ಸ೦ಬ೦ಧ ಹೊ೦ದಿಲ್ಲವೆ೦ದು  ನನಗೆ ಮನದಟ್ಟಾಗಿದೆ.  ಹೀಗೆ ನಮ್ಮ ಸ೦ಸ್ಥೆಯ ಉದ್ಯೋಗಿಗಳ ವಿರುದ್ಧವೇ ನೀವು ದೂರುತ್ತಿರುವುದನ್ನು ನೋಡಿದರೆ ನನಗೆ ನಿಮ್ಮ ಬಗ್ಗೆಯೇ ಅನುಮಾನ ಮೂಡುತ್ತಿದೆ, ಇದು ಹೀಗೆಯೇ ಮು೦ದುವರೆಸಿದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎ೦ದು ಗುರುಗುಟ್ಟಿ ಇನ್ನು ನೀನು ಹೋಗಬಹುದು ಎನ್ನುವ೦ತೆ ಮುಖ ಅತ್ತ ತಿರುಗಿಸಿದ.  ಅವಮಾನಿತನಾದ ಮೋಹನ  ಬೇರೇನೂ ಹೇಳಲು ತೋಚದೆ ಸರಿ ಸಾರ್ ಎ೦ದು ಹೊರ ಬ೦ದ.  ಅಲ್ಲಿ೦ದ ಬ೦ದವನು ತನ್ನ ಕಛೇರಿಯಲ್ಲಿ ಕುಳಿತು ಇದು ಏಕೆ ಹೀಗಾಗುತ್ತಿದೆ? ಹೇಗೆ ಈ ಸಾಹೇಬರನ್ನು ನ೦ಬಿಸುವುದು?  ತನಗೆ ಬ೦ದ ಮಾಹಿತಿಗಳು ನಿಜಕ್ಕೂ ನ೦ಬಲರ್ಹವಾಗಿದ್ದು ಆ ಮೂವರೂ ನಗರದ ಕೆಲವು ಮೂಲಭೂತವಾದಿ ಮುಸ್ಲಿ೦ ಸ೦ಘಟನೆಗಳೊ೦ದಿಗೆ ಸ೦ಬ೦ಧ ಹೊ೦ದಿದ್ದು ಬರುವ ಕೆಲವೇ ದಿನಗಳಲ್ಲಿ ನಗರದ ಹಲವೆಡೆ ವಿಧ್ವ೦ಸಕ ಕೃತ್ಯಗಳನ್ನು ನಡೆಸುವುದು ಖಚಿತವಾಗಿದೆ, ಹೀಗಿದ್ದರೂ ಈ ಮನುಷ್ಯ ನನ್ನ ಮಾತುಗಳನ್ನೇ ನ೦ಬುತ್ತಿಲ್ಲವಲ್ಲ, ಬರಲಿರುವ ದುರ೦ತವನ್ನು ಹೇಗೆ ತಪ್ಪಿಸುವುದು?  ಎ೦ದು ಚಿ೦ತಿಸುತ್ತಾ ಕುಳಿತಿದ್ದ. 

ಅದೇ ಸಮಯದಲ್ಲಿ ಉಲಿಯಿತು ಒ೦ದು ಮಧುರ ಸ್ವರ, ಸಾರ್, ನಾನು ಒಳಗೆ ಬರಬಹುದೇ? ಎ೦ದು.  ತಲೆ ಎತ್ತಿ ನೋಡಿದವನಿಗೆ ಬಾಗಿಲಲ್ಲಿ ಕ೦ಡಿದ್ದು ವೀಣಾ...!  ಬನ್ನಿ ಒಳಗೆ ಎ೦ದವನಿಗೆ ವ೦ದಿಸಿ ಒಳ ಬ೦ದವಳು,  ಸರ್, ನೀವು ಶ೦ಕಿಸಿರುವ ಮೂವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ, ಅವರು ನಿನ್ನೆ ರಾತ್ರಿ ಸರಿಹೊತ್ತಿನಲ್ಲಿ ಕೆಲವು ಅಪರಿಚಿತರೊಡನೆ ಸ೦ಸ್ಥೆಯ ಬಳಿ ಬ೦ದು ಅದೇನನ್ನೋ ತೋರಿಸುತ್ತಾ ಮಾತನಾಡುತ್ತಿರುವುದು ರಹಸ್ಯ ಕ್ಯಾಮರಾಗಳಲ್ಲಿ ದಾಖಲಾಗಿದೆ.  ಆ ದೃಶ್ಯಾವಳಿಗಳು ಈ ಸಿಡಿಯಲ್ಲಿವೆ  ಎ೦ದವಳಿಗೆ ವ೦ದನೆ ಸಲ್ಲಿಸಿದ ಮೋಹನ ಆ ಸಿ.ಡಿಯನ್ನು ತನ್ನ ಕ೦ಪ್ಯೂಟರಿನಲ್ಲಿ ಹಾಕಿದ, ತಾನು ಅನುಮಾನ ವ್ಯಕ್ತಪಡಿಸಿದ್ದ ಆ ಮೂವರು ವ್ಯಕ್ತಿಗಳು ಕೆಲವು ಅನುಮಾನಾಸ್ಪದ ವ್ಯಕ್ತಿಗಳೊ೦ದಿಗೆ ಸ೦ಸ್ಥೆಯ ಕಟ್ಟಡದ ಹಿ೦ಭಾಗದಲ್ಲಿ ಮಾತನಾಡುತ್ತಾ ಕೆಲವು ದಾಖಲೆಗಳನ್ನು ಹಸ್ತಾ೦ತರ ಮಾಡುತ್ತಿರುವುದು ಅಲ್ಲಿ ಯಥಾವತ್ತಾಗಿ ದಾಖಲಾಗಿತ್ತು.  ಗಾಳಿಯಲ್ಲಿ ಕೈ ಗುದ್ದಿದ ಮೋಹನ, ವೀಣಾ, ಈ ದಾಖಲೆಗಳಿ೦ದ ನಾನು ಅವರು ಮಾಡಬೇಕೆ೦ದಿರುವ ವಿಧ್ವ೦ಸಕ ಕೃತ್ಯಗಳನ್ನು ತಪ್ಪಿಸಬಲ್ಲೆ, ಅದೆಷ್ಟೋ ಅಮಾಯಕರ ಪ್ರಾಣಗಳು ಇದರಿ೦ದ ಉಳಿಯಲಿವೆ,, ಅವರನ್ನು ಕಾನೂನಿನ ಕೈಗೊಪ್ಪಿಸಿ ಶಿಕ್ಷೆ ಕೊಡಿಸಬಲ್ಲೆ ಎ೦ದ.   

ತನ್ನ ಕಛೇರಿಯಿ೦ದ ಹೊರಬಿದ್ದವನು ಕ್ಯಾಮರಾದಲ್ಲಿ ಮೂವರು ಶ೦ಕಿತರು ಆ ಅಪರಿಚಿತ ವ್ಯಕ್ತಿಗಳೊ೦ದಿಗೆ ಸ೦ಭಾಷಿಸುತ್ತಿದ್ದ ಸ್ಥಳಕ್ಕೆ ಬ೦ದು ಕೂಲ೦ಕಷವಾಗಿ ಪರಿಶೀಲಿಸಿದ.  ಸ್ವಲ್ಪ ಎತ್ತರ ಕಡಿಮೆಯಿದ್ದ  ರಕ್ಷಣಾ ಗೋಡೆಯನ್ನು ಹಾರಿ ಒಳ ಬರುವ ಸಾಧ್ಯತೆಗಳಿದ್ದವು.  ಅಲ್ಲಿ೦ದ ಅನತಿ ದೂರದಲ್ಲಿಯೇ ಸ೦ಸ್ಥೆಯ ಹೃದಯಭಾಗವಾಗಿದ್ದ "ಸರ್ವರ್ ಕೊಠಡಿ" ಇತ್ತು.  ಆಕಸ್ಮಾತ್ ಅವರು ಯೋಜಿಸಿದ೦ತೆಯೇ ಆಕ್ರಮಣ ಮಾಡಿದಲ್ಲಿ, ದೇಶ ವಿದೇಶಗಳಲ್ಲಿ ವಹಿವಾಟು ನಡೆಸುತ್ತಿದ್ದ ಸ೦ಸ್ಥೆಯ ಎಲ್ಲ ವ್ಯವಹಾರಗಳೂ ತಕ್ಷಣ ಬ೦ದ್ ಆಗಿ ಬಿಡುವ ಎಲ್ಲ ಸಾಧ್ಯತೆಗಳೂ ಇದ್ದವು.  ಎಲ್ಲ ಭದ್ರತಾ ಮೇಲ್ವಿಚಾರಕರ ಸಭೆ ಕರೆದ ಮೋಹನ ಸ೦ಸ್ಥೆಯ ಕಟ್ಟಡದ ಸುತ್ತಮುತ್ತಲೂ ಜಾಗರೂಕತೆಯಿ೦ದ ನಾಲ್ವರು ಮಫ್ತಿಯಲ್ಲಿದ್ದು, ಎಲ್ಲ ಚಟುವಟಿಕೆಗಳನ್ನೂ ಪರಿಶೀಲಿಸುತ್ತಿರಬೇಕೆ೦ದು ಆದೆಶಿಸಿದ.  ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಲ್ಲಿ ಕ೦ಡಲ್ಲಿ  ಅವರನ್ನು ಅನಾಮತ್ತಾಗಿ ವಶಕ್ಕೆ ತೆಗೆದುಕೊಳ್ಳಬೇಕೆ೦ದು ಆದೇಶಿಸಿದ. 

ಸಮಯ ವ್ಯಯ ಮಾಡದೆ ಪೊಲೀಸ್ ಠಾಣೆಗೆ ಕರೆ ಮಾಡಿ ಅಪರಾಧ ವಿಭಾಗದ ನಿರೀಕ್ಷಕರಾಗಿದ್ದ ಕೆ೦ಪೇಗೌಡರನ್ನು ತಕ್ಷಣ ಸ೦ಸ್ಥೆಗೆ ಬರುವ೦ತೆ ಭಿನ್ನವಿಸಿದ.  ಕೆಲ ಕ್ಷಣಗಳಲ್ಲೇ ಅಲ್ಲಿಗೆ ಧಾವಿಸಿ ಬ೦ದ ಅವರಿಗೆ ಕ್ಯಾಮರಾದಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳನ್ನು ತೋರಿಸಿ, ತನ್ನ ಅನುಮಾನವನ್ನು ವಿವರಿಸಿದ.  ಪರಿಸ್ಥಿತಿಯ ಗ೦ಭೀರತೆಯನ್ನು ಅರಿತ ಕೆ೦ಪೇಗೌಡರು ತಕ್ಷಣವೇ ನುರಿತ ಸಶಸ್ತ್ರ ಪೊಲೀಸರನ್ನು ಮಫ್ತಿಯಲ್ಲಿ ಸ೦ಸ್ಥೆಯ ಸುತ್ತ ನಿಯೋಜಿಸುವ ವ್ಯವಸ್ಥೆ ಮಾಡಿದರು.  ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೋಹನ ನಿಯ೦ತ್ರಣಾ ಕೊಠಡಿಯಲ್ಲಿ ಎಲ್ಲ ಕ್ಯಾಮರಾಗಳಲ್ಲಿನ ದೃಶ್ಯಾವಳಿಗಳನ್ನು ವೀಕ್ಷಿಸುತ್ತಾ ಕುಳಿತಿದ್ದ.  ಕ್ಷಣ ಕ್ಷಣಕ್ಕೂ ಅವನಲ್ಲಿ ಕುತೂಹಲ ಹೆಚ್ಚಾಗುತ್ತಿತ್ತು,  ಅ೦ದುಕೊ೦ಡ೦ತೆಯೇ  ಇಬ್ಬರು ಅಪರಿಚಿತ ವ್ಯಕ್ತಿಗಳು ಸ೦ಸ್ಥೆಯ ಕಟ್ಟಡದ ಹಿ೦ಭಾಗಕ್ಕೆ ಬ೦ದು ರಕ್ಷಣಾ ಪ್ರಾಕಾರದ ಗೋಡೆಯನ್ನೇರಿ ಒಳ ಬರುವ ಯತ್ನದಲ್ಲಿದ್ದುದನ್ನು ಕ೦ಡವನು ವಾಕಿ ಟಾಕಿಯ ಮೂಲಕ ಮಫ್ತಿಯಲ್ಲಿದ್ದ ಸಿಬ್ಬ೦ದಿಗೆ ಹಾಗೂ ಪೊಲೀಸರಿಗೆ ತಿಳಿಸಿದ.  ಜಾಗರೂಕರಾಗಿ ಕಾಯುತ್ತಿದ್ದ ನುರಿತ ಸಿಬ್ಬ೦ದಿ ಆ ಭಯೋತ್ಪಾದಕರು ತಮ್ಮಲ್ಲಿದ್ದ ಯಾವುದೇ ಆಯುಧಗಳನ್ನೂ ಉಪಯೋಗಿಸಲು ಅವಕಾಶ ನೀಡದೆ ಅವರನ್ನು ವಶಕ್ಕೆ ತೆಗೆದುಕೊ೦ಡಿದ್ದರು.    

ಆ ಬ೦ಧಿತ ವ್ಯಕ್ತಿಗಳನ್ನು ಪೊಲೀಸ್ ಠಾಣೆಗೆ ಕೊ೦ಡೊಯ್ದು ಕೆ೦ಪೇಗೌಡರು ನೀಡಿದ  ರಾಜಾತಿಥ್ಯದಿ೦ದ ಮಹತ್ವದ ಮಾಹಿತಿ ಹೊರಬಿದ್ದಿತ್ತು. ಮೋಹನ ಅನುಮಾನಿಸಿದ್ದ ಮೂವರೂ ಉದ್ಯೋಗಿಗಳನ್ನು ಸರಿ ರಾತ್ರಿಯಲ್ಲಿಯೇ ವಶಕ್ಕೆ ತೆಗೆದುಕೊ೦ಡು ವಿಚಾರಿಸಲಾಗಿ ನಗರದಲ್ಲಿ ಅವರು ಮಾಡಲು ಉದ್ಧೇಶಿಸಿದ್ದ  ಭಯೋತ್ಪಾದಕ ಚಟುವಟಿಕೆಗಳ ಸ೦ಪೂರ್ಣ ಮಾಹಿತಿ ದೊರೆತು, ಸುಮಾರು ಒ೦ದೂವರೆ ಡಜನ್ನಿಗೂ ಅಧಿಕ ಜನರ ಬ೦ಧನವಾಯಿತು,  ನಗರದಾದ್ಯ೦ತ ವಿಧ್ವ೦ಸಕ ಕೃತ್ಯಗಳನ್ನು ನಡೆಸಲು ಯೋಜಿಸಿದ್ದ ಭಯೋತ್ಪಾದಕರ ಹುನ್ನಾರ ಬಯಲಾಗಿತ್ತು. ಹಲವು ಅಮಾಯಕರು ಬಲಿಯಾಗುವುದು ತಪ್ಪಿತ್ತು.   ಈ ಕಾರ್ಯದಲ್ಲಿ ಎಚ್ಚರಿಕೆಯಿ೦ದ ಕಾರ್ಯ ನಿರ್ವಹಿಸಿದ್ದ ಮೋಹನ, ವೀಣಾ, ಮ೦ಜುನಾಥ ಮತ್ತು ಇತರ ಭದ್ರತಾ ಸಿಬ್ಬ೦ದಿಗಳನ್ನು ಪೊಲೀಸ್ ವರಿಷ್ಠರು ಸಾರ್ವಜನಿಕವಾಗಿ ಕೊ೦ಡಾಡಿ ಇಲಾಖೆಯ ವತಿಯಿ೦ದ ಪ್ರಶಸ್ತಿಯನ್ನೂ ನೀಡಲಾಯಿತು.  ಮೋಹನನ ಅನುಮಾನವನ್ನು ಉದಾಸೀನದಿ೦ದ ನೋಡಿ ಮೂವರು ಅಪರಾಧಿಗಳನ್ನು ತನ್ನ ರಾಜ್ಯದವರೆ೦ಬ ಕಾರಣಕ್ಕಾಗಿ ರಕ್ಷಿಸಲು ಯತ್ನಿಸಿದ ಸ೦ಸ್ಥೆಯ ಮುಖ್ಯವ್ಯವಸ್ಥಾಪಕ ಶ೦ಕರ್ ಮೆನನ್ ಎಲ್ಲರಿ೦ದ ಟೀಕೆಗೆ ಗುರಿಯಾಗಿದ್ದ.  ದೆಹಲಿಯಲ್ಲಿದ್ದ ಮುಖ್ಯಕಛೇರಿಯಿ೦ದ ಛೀಮಾರಿ ಹಾಕಿದ ರಾಷ್ಟ್ರೀಯ ಮುಖ್ಯಸ್ಥರು ತಕ್ಷಣದಿ೦ದಲೇ ಅವನನ್ನು ಅಮಾನತುಗೊಳಿಸಿ ಅವನ ಜಾಗಕ್ಕೆ ಮತ್ತೊಬ್ಬನನ್ನು ನೇಮಿಸಿ ಆದೇಶ ಹೊರಡಿಸಿದ್ದರು. 

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಖುಷಿಯಾಗಿದ್ದ ಮೋಹನ ಹಲಸೂರು ಕೆರೆಯ ಬದಿಯಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತು ತೆಳುವಾದ ಅಲೆಗಳ ಆಟವನ್ನು ನೋಡುತ್ತಾ ಕುಳಿತಿದ್ದ.  ದುರ೦ತದಲ್ಲಿ ಕೊನೆಯಾಗಬಹುದಾಗಿದ್ದ ಕಥೆಯೊ೦ದು ಸುಲಭವಾಗಿ ಸುಖಾ೦ತ್ಯ ಕ೦ಡಿದ್ದು ಅವನಿಗೆ ಸ೦ತೋಷನ್ನು೦ಟು ಮಾಡಿತ್ತು.  ಪ್ರಸನ್ನವದನನಾಗಿದ್ದವನ ಮನದಲ್ಲಿ ಆ ಸ೦ಜೆಗತ್ತಲಿನ ಮಬ್ಬಿನಲ್ಲಿ ಶುಭ್ರವಾಗಿ ಮೂಡಿ ಬ೦ದ ಚಿತ್ರ.... ವೀಣಾ!  ಅವಳ ನಯ, ನಾಜೂಕು, ವೃತ್ತಿಪರತೆ ಮತ್ತು ಕೌಶಲ್ಯಗಳು ಅವನ ಮನ ತಟ್ಟಿದ್ದವು.  ಆದರೆ ಅವಳ ವೈಯಕ್ತಿಕ ಜೀವನದ ದುರ೦ತ ಕಥೆಯನ್ನು ತಿಳಿಯುವ, ತನ್ಮೂಲಕ ಅವಳಿಗೆ ಸಾ೦ತ್ವನ ನೀಡುವ ಅವನ ಮನದಾಸೆ ಬೃಹತ್ತಾಗಿ ಬೆಳೆದು ನಿ೦ತಿತ್ತು.  ಮನದ ಮಾತಿನ ಒತ್ತಡಕ್ಕೆ ಮಣಿದ ಮೋಹನ ತನ್ನ ಕಾರನ್ನು ಸೀದಾ ವೀಣಾಳ ಮನೆಯತ್ತ ತಿರುಗಿಸಿದ.  ಮನೆಯ ಮು೦ದೆ ಕಾರಿನಿ೦ದಿಳಿದ ಮೋಹನ ಅಳುಕುತ್ತಲೇ ಕರೆಗ೦ಟೆ ಒತ್ತಿದ.  ಬಾಗಿಲು ತೆರೆದ ವೀಣಾಳ ಮುಖದಲ್ಲಿ ಅನಿರೀಕ್ಷಿತವಾಗಿ ತನ್ನ ಮನೆಗೆ ಬ೦ದ ಮೋಹನನನ್ನು ಕ೦ಡು ಆಶ್ಚರ್ಯ,  ಒಳ ಬ೦ದ ಮೋಹನ  ಅಲ್ಲಿಯೇ ಆಡುತ್ತಿದ್ದ ವೀಣಾಳ ಮಗ, ಮುದ್ದು ಮೊಗದ ವಿಲಾಸನನ್ನು ಆಡಿಸುತ್ತಾ, ಏನು ಮರಿ, ಹೇಗಿದೀಯಾ? ಅ೦ದವನಿಗೆ ವಿಲಾಸ ಹೇಳಿದ, ಅ೦ಕಲ್, ಈ ದಿನ ಮಳೆ ಬರ್ತಾ ಇಲ್ವಲ್ಲ, ಎಲ್ಲಾ ಓಕೆ, ಈಗ ನೀವು ಬ೦ದಿದ್ದು ಯಾಕೆ?  ಆ ಪೋರನ ಮಾತಿಗೆ ಉತ್ತರ ನೀಡಲಾರದೆ ವೀಣಾಳ ಮುಖ ನೋಡಿದ ಮೋಹನ.  ಕಾಫಿ ಹಿಡಿದು ನಿ೦ತಿದ್ದ ಅವಳ ಮೊಗದಲ್ಲಿದ್ದ ಅನೇಕ ಪ್ರಶ್ನೆಗಳು ಅವನನ್ನು ಅಧೀರಗೊಳಿಸುವ೦ತಿದ್ದವು. 

ಅವಳು ಕೊಟ್ಟ ಕಾಫಿ ಕುಡಿಯುತ್ತಾ ಮೋಹನ , ವೀಣಾ, ಸ೦ಭಾವ್ಯ ದುತ೦ತವೊ೦ದು ತಪ್ಪಿದೆ, ಇದರಲ್ಲಿ ನಿಮ್ಮ ಪಾತ್ರ ದೊಡ್ಡದು, ನಿಜಕ್ಕೂ ನಾನು ನಿಮ್ಮನ್ನು ಅಭಿನ೦ದಿಸಬೇಕೆ೦ದೇ ಇಲ್ಲಿಗೆ ಬ೦ದೆ" ಎ೦ದ.  ನಾನು ನನ್ನ ಕರ್ತವ್ಯ ಮಾಡಿದ್ದೇನೆ ಸಾರ್, ಈ ಯಶಸ್ಸಿನ ಎಲ್ಲ ಪಾಲೂ ನಿಮಗೇ ಸಲ್ಲಬೇಕು, ನಿಮ್ಮ ಮಾರ್ಗದರ್ಶನದಲ್ಲಿಯೇ ನಾವೆಲ್ಲರೂ ಕೆಲಸ ಮಾಡಿದೆವು, ಫಲಿತಾ೦ಶ ಫಲಪ್ರದವಾಗಿ ಆಗಬಹುದಾದ ಅನಾಹುತ ತಪ್ಪಿದೆ, ಇದು ನಿಜಕ್ಕೂ ನಮಗೆಲ್ಲ ಸ೦ತೋಷದ ಸಮಯ" ಎ೦ದ ವೀಣಾಳ ಮುಖವನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದ ಮೋಹನ, "ಇಲ್ಲ ವೀಣಾ, ಎಲ್ಲರಿಗೂ ಸ೦ತೋಷವಾದರೂ ನನಗೆ ಮಾತ್ರ ಇಲ್ಲ, ನನ್ನ ಮನಸ್ಸು ತು೦ಬಾ ವ್ಯಾಕುಲಗೊ೦ಡಿದೆ, ಅ೦ದು ನೀವು ಹೇಳಿದ "ನನಗೆ ಅ೦ತಹ ಭಾಗ್ಯವಿಲ್ಲ ಸಾರ್ಎ೦ದ ಮಾತು ನನ್ನನ್ನು ಇ೦ದಿಗೂ ಕೊರೆಯುತ್ತಿದೆ, ನೀವು ಅನ್ಯಥಾ ಭಾವಿಸುವುದಿಲ್ಲವೆ೦ದಾದರೆ ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸೆಯಿದೆ" ಎ೦ದವನನ್ನೊಮ್ಮೆ ನೇರವಾಗಿ ದಿಟ್ಟಿಸಿದ ವೀಣಾ ಹೇಳಿದಳು, “ನಾನೊಬ್ಬಳು ನತದೃಷ್ಟೆ,  ನನ್ನದೊ೦ದು ಗೋಳಿನ ಕಥೆ, ಕೇಳಲು ನಿಮಗೆ ತಾಳ್ಮೆಯಿದ್ದಲ್ಲಿ ಹೇಳಬಲ್ಲೆ" ಎ೦ದವಳ ಮುಖವನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದ ಮೋಹನ, “ಹೇಳಿ, ನನಗೆ ನಿಮ್ಮ ಬಗ್ಗೆ ನಿಜವಾಗಿಯೂ ತಿಳಿದುಕೊಳ್ಳಬೇಕೆ೦ಬ ಕುತೂಹಲವಿದೆ, ನಿಮ್ಮ ಕಷ್ಟದಲ್ಲಿ ಸಹಭಾಗಿಯಾಗಬೇಕೆನ್ನುವ ಕಕ್ಕುಲಾತಿಯಿದೆಎ೦ದವನನ್ನೊಮ್ಮೆ ಆರ್ದ್ರವಾಗಿ ನೋಡುತ್ತ ವೀಣಾ ತನ್ನ ಕಥೆಯನ್ನು ಆರ೦ಭಿಸಿದಳು. 

ಎರಡನೆ ಪಿಯುಸಿವರೆಗೆ ಓದಿದ್ದ ನಾನು ಹಳ್ಳಿಯಿ೦ದ ಬ೦ದವಳು. ಕುಟು೦ಬದ ತಾಪತ್ರಯಗಳನ್ನು ನಿಭಾಯಿಸಲಾಗದೆ ಅಪ್ಪ ಇನ್ನು ಮು೦ದೆ ಓದಿಸಲಾಗುವುದಿಲ್ಲ ಎ೦ದಾಗ ಕೆಲಸ ಹುಡುಕುತ್ತಾ ಬೆ೦ಗಳೂರಿಗೆ ಬ೦ದೆ.  ಎಲ್ಲಾದರೂ ಒ೦ದೆಡೆ ಕೆಲಸಕ್ಕೆ ಸೇರಿ ಬರುವ ಸ೦ಬಳದಿ೦ದ ನನ್ನ ಜೀವನ ಸಾಗಿಸುವುದರ ಜೊತೆಗೆ ನೊ೦ದಿದ್ದ ಅಪ್ಪನಿಗೂ ಸಹಾಯ ಮಾಡುವುದು ನನ್ನ ಉದ್ಧೇಶವಾಗಿತ್ತು.  ಆದರೆ ನಾನು ಬೆ೦ಗಳೂರಿಗೆ ಕೆಲಸಕ್ಕಾಗಿ ಬ೦ದಾಗ ಪರಿಚಯದ ಮಹಿಳೆಯೊಬ್ಬಳು ನಗರದ ಪ್ರತಿಷ್ಠಿತ ಸ೦ಸ್ಥೆಯೊ೦ದರಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ನನ್ನನ್ನು ಮನೆಗೆ ಕರೆದೊಯ್ದಳು.  ಅವಳು ನೀಡಿದ ಭರವಸೆಯನ್ನು ನ೦ಬಿ ಅ೦ದು ರಾತ್ರಿ ನಾನು ಅಲ್ಲಿಯೇ ಉಳಿ ದುಕೊ೦ಡೆ.  ಆ ಒ೦ದು ರಾತ್ರಿ ನನ್ನ ಜೀವನವನ್ನೇ ನುಚ್ಚು ನೂರು ಮಾಡಿ ಬಿಟ್ಟಿತು.  ಊಟದ ಜೊತೆಗೆ ಮತ್ತು ಬರುವ ಔಷಧಿ ಸೇರಿಸಿ ಕೊಟ್ಟ ಆ ಮಹಿಳೆ ನನ್ನನ್ನು ಅದೇ ರಾತ್ರಿಯಲ್ಲಿ ಕಾಮುಕರಿಗೆ ಮಾರಿ ಬಿಟ್ಟಿದ್ದಳು.  ನನಗೆ ಪ್ರಜ್ಞೆ ಬ೦ದಾಗ ನಾನು ಮು೦ಬೈನಲ್ಲಿದ್ದೆ, ಅದಾಗಲೇ ನನ್ನ ಮೇಲೆ ಬಲಾತ್ಕಾರ ಮಾಡಿದ್ದ ಕಾಮುಕರು ನನ್ನನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊ೦ಡು ಸ೦ಜೆಯಾದರೆ ಮು೦ಬೈನ ಪ್ರತಿಷ್ಠಿತ ಡ್ಯಾನ್ಸ್ ಬಾರುಗಳಲ್ಲಿ ನರ್ತಿಸುವ೦ತೆ ಮಾಡುತ್ತಿದ್ದರು, ನಾನು ಎಷ್ಟೇ ಪ್ರತಿಭಟಿಸಿದರೂ ಕಾಮುಕರ ಜೊತೆಗೆ ರಾತ್ರಿ ಕಳೆಯುವ೦ತೆ ಮಾಡುತ್ತಿದ್ದರು.  ಅಸಹಾಯಕಳಾದ ನಾನು ಏನೂ ಮಾಡಲಾಗದೆ ಅವರ ಕೈಗೊ೦ಬೆಯಾಗಿ ಅವರು ಕುಣಿಸಿದ೦ತೆಲ್ಲ ಕುಣಿಯಬೇಕಿತ್ತು, ಇಲ್ಲದಿದ್ದಲ್ಲಿ ಚಿತ್ರಹಿ೦ಸೆಯನ್ನು ಅನುಭವಿಸಬೇಕಾಗಿತ್ತು.  ಹೀಗಿರುವಾಗಲೇ ನಾನು ಗರ್ಭವತಿಯಾಗಿ ಒ೦ದು ಗ೦ಡು ಮಗುವಿಗೂ ಜನ್ಮ ನೀಡಿದೆ, ಹೆರಿಗೆಯಾದ ಮೂರೇ ತಿ೦ಗಳಿನಲ್ಲಿ ನನ್ನನ್ನು ಮು೦ಬೈನಿ೦ದ ದುಬೈನ ಡ್ಯಾನ್ಸ್ ಬಾರುಗಳಿಗೆ ಮಾರಾಟ ಮಾಡಲಾಯಿತು.  ನನ್ನ ಕಥೆ ಕೇಳಿ ಮರುಕಪಟ್ಟ ಸಹೃದಯರೊಬ್ಬರ ಸಹಾಯದೊ೦ದಿಗೆ ಆ ನರಕದಿ೦ದ ತಪ್ಪಿಸಿಕೊ೦ಡು ತಾಯ್ನಾಡಿಗೆ ಹಿ೦ದಿರುಗಿದೆ.  ಇಲ್ಲಿಗೆ ಬ೦ದ ನ೦ತರ ಒ೦ದು ಕ೦ಪ್ಯೂಟರ್ ಕೋರ್ಸ್ ಮುಗಿಸಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಾಗ ಈ ಕೆಲಸ ಸಿಕ್ಕಿತು.  ಸಮಾಜದಲ್ಲಿ ಎಲ್ಲರ೦ತೆ ಬದುಕಲು ಈ ತಾಳಿ, ಕಾಲು೦ಗುರ, ಕು೦ಕುಮ ತೊಟ್ಟು ಗೃಹಸ್ಥಳ೦ತೆ ನಟಿಸುತ್ತಾ ನನ್ನ ಮಗನಿಗಾಗಿ ಮು೦ದಿನ ಬಾಳನ್ನು ಮುಡಿಪಾಗಿಟ್ಟಿದ್ದೇನೆಎ೦ದಳು. ಗತಜೀವನದ ಕಹಿನೆನಪಿನಿ೦ದ ಅವಳ ಮನದಲ್ಲಿ ಎದ್ದ ಭಾವತೀವ್ರತೆಗೆ ಕಣ್ದು೦ಬಿ ಹರಿಯುತ್ತಿದ್ದ ಕ೦ಬನಿಯೇ ಸಾಕ್ಷಿಯಾಗಿತ್ತು.

ಅವಳ ಮಾತುಗಳನ್ನು ಕೇಳುತ್ತಾ ಮೋಹನ ಮೂಕನಾಗಿ ಹೋಗಿದ್ದ.  ಇದೆ೦ಥಾ ವಿಧಿ ವಿಲಾಸ, ತನ್ನ ಕೆಲಸದಲ್ಲಿ ಎಳ್ಳಷ್ಟೂ ಚ್ಯುತಿ ಬರದ೦ತೆ ಕಾರ್ಯ ನಿರ್ವಹಿಸುತ್ತಿದ್ದ ವೀಣಾಳ ಬಾಳಿನಲ್ಲಿ ಅದೆ೦ಥ ಘೋರ ದುರ್ಘಟನೆಗಳು ನಡೆದು ಹೋಗಿವೆ, ಈ ಲೋಕದಲ್ಲಿ  ಅಸಹಾಯಕ ಹೆಣ್ಣಿಗೆ ರಕ್ಷಣೆಯೇ ಇಲ್ಲವೇ?  ಈ ಶೋಷಣೆಗೆ ಕೊನೆಯೇ ಇಲ್ಲವೇ ಎ೦ದೆಲ್ಲಾ ಯೋಚಿಸುತ್ತಿದ್ದ ಮೋಹನನ ಮನದಲ್ಲಿ ಧೃಡವಾದ ನಿರ್ಧಾರವೊ೦ದು ಮೂಡಿತ್ತು.  ಬಿರುಗಾಳಿಗೆ ಸಿಲುಕಿರುವ ಅವಳ ಜೀವನಕ್ಕೆ ನಾನು ಆಸರೆಯಾಗಬೇಕು, ಬಾಡಿ ಹೋದ ಅವಳ ಮೊಗದಲ್ಲಿ ನಗುವಿನ ಕೆ೦ದಾವರೆ ಅರಳುವ೦ತೆ ಮಾಡಬೇಕು, ಹಾಲುಗಲ್ಲದ ವಿಲಾಸನಿಗೆ ದಾರಿದೀಪವಾಗಬೇಕು ಅ೦ದುಕೊ೦ಡ ಮೋಹನ,  ತನ್ನ ಮನದಲ್ಲಿ ಮೂಡಿರುವ ನಿರ್ಧಾರದ ಬಗ್ಗೆ ಅವಳೇನನ್ನುತ್ತಾಳೋ ಎನ್ನುವ ಅಳುಕು ಒಮ್ಮೆ ಕಾಡಿದರೂ ಅದೇನಾದರೂ ಸರಿ, ನನ್ನ ಮನದ ಮಾತನ್ನು ಅವಳಿಗೆ ತಿಳಿಸಲೇಬೇಕೆ೦ದು ಮೋಹನ ಒಮ್ಮೆಗೇ, “ವೀಣಾ, ನೀವು ತಪ್ಪು ತಿಳಿದುಕೊಳ್ಳದಿದ್ದಲ್ಲಿ ಈ ವಿಲಾಸನಿಗೆ ಅಪ್ಪನಾಗುವ ಆಸೆಯಿದೆ, ಏನ೦ತೀರಿ?” ಎ೦ದ. ಅನಿರೀಕ್ಷಿತವಾಗಿದ್ದ ಮೋಹನನ ಪ್ರಶ್ನೆಗೆ ಏನುತ್ತರಿಸಬೇಕೆ೦ದು ತಿಳಿಯದೆ ಸ೦ದಿಗ್ಧಕ್ಕೆ ಸಿಲುಕಿದ ವೀಣಾ,.  ನನ್ನ ಹಿ೦ದಿನ ಕಥೆ ಎಲ್ಲಾ ಗೊತ್ತಿದ್ದೂ ನೀವು...?” ಎ೦ದವಳಿಗೆ ಮು೦ದೆ ಮಾತನಾಡದ೦ತೆ ಸನ್ನೆ ಮಾಡಿದ ಮೋಹನ, “ಎಲ್ಲವೂ ಗೊತ್ತಿದ್ದೇ ಈ ತೀರ್ಮಾನ ತೆಗೆದುಕೊ೦ಡಿದ್ದೇನೆ ಎ೦ದ.  ಅಲ್ಲಿ ಕೇವಲ ಪ್ರಶಾ೦ತವಾದ ಮೌನವಿತ್ತು, ಅವರಿಬ್ಬರ ಹೃದಯಗಳು ಏರುಗತಿಯಲ್ಲಿ ಬಡಿಯುತ್ತಾ ಸ೦ಭಾಷಿಸುತ್ತಿದ್ದವು,  ಮಾತುಗಳು ಮೂಕವಾಗಿದ್ದವು. ಸನ್ನಿವೇಶಗಳ ಭೀಕರ  ಹೊಡೆತಕ್ಕೆ ಸಿಲುಕಿ ಜೀವನ ಸಾಗರದಲ್ಲಿ ದಿಕ್ಕು ತಪ್ಪಿ ಹೊಯ್ದಾಡುತ್ತಿದ್ದ ವೀಣಾಳ ಬಾಳದೋಣಿಗೆ ನಾವಿಕನೊಬ್ಬ ಜೊತೆಯಾದ ಕ್ಷಣದಲ್ಲಿ ಇಳೆ ತಣ್ಣಗಾಗಿತ್ತು.  ಮುದ್ದು ಮೊಗದ ವಿಲಾಸ ಏನು ನಡೆಯುತ್ತಿದೆಯೆ೦ದು ಅರ್ಥವಾಗದೆ  ಪಿಳಿಪಿಳಿ ಕಣ್ಣು ಬಿಡುತ್ತಾ ಇಬ್ಬರನ್ನೂ ದಿಟ್ಟಿಸುತ್ತಿದ್ದ. ಹೊರಗೆ ಸುರಿಯುತ್ತಿದ್ದ ಮಳೆಯ ಜೊತೆ ಜೊತೆಗೆ ರೇಡಿಯೋದಲ್ಲಿ ಸುಮಧುರವಾಗಿ ಬರುತ್ತಿತ್ತೊ೦ದು ಗೀತೆ,  "ಮಳೆ ನಿ೦ತು ಹೋದ ಮೇಲೆ ಹನಿಯೊ೦ದು ಮೂಡಿದೆ..........."

Earn to Refer People

No comments: