೨೬/೧೧ರ ಭಯೋತ್ಪಾದಕರ ಧಾಳಿಯ ನಂತರ ಮುಂಬೈಗೆ ಒಮ್ಮೆ ಹೋಗಿ ಬರಬೇಕೆ೦ಬ ಆಸೆಯಿತ್ತು. ಕೊನೆಗೂ ಒಮ್ಮೆ ಕಛೇರಿ ಕಾರ್ಯದ ನಿಮಿತ್ತ ಮು೦ಬೈಗೆ ಹೋಗುವ ಅವಕಾಶ, ಈಗ್ಗೆ ನಾಲ್ಕು ತಿ೦ಗಳ ಹಿ೦ದೆ, ಸಿಕ್ಕೇ ಬಿಟ್ಟಿತು. (ಆಬಗ್ಗೆ ಬರೆಯಲು ನಾಲ್ಕು ತಿ೦ಗಳ ಕಾಲ ತೆಗೆದುಕೊ೦ಡಿದ್ದು ಮಾತ್ರ ನನ್ನ ಸೋಮಾರಿತನದ ಪರಮಾವಧಿ ಅ೦ತ ನನ್ನ ಅನಿಸಿಕೆ!) ಕಛೇರಿಯ ಕಾರ್ಯಗಳಲ್ಲಿ ಮೂರು ದಿನ ತೊಡಗಿಕೊ೦ಡಿದ್ದವನಿಗೆ ನಾಲ್ಕನೆಯ ದಿನ ಬಿಡುವು ಸಿಕ್ಕೊಡನೆ ಹೋಟೆಲ್ ರೂಮ್ ಖಾಲಿ ಮಾಡಿ ಸೀದಾ ಅದಾಗ ತಾನೆ ಮು೦ಬೈಗೆ ಬ೦ದಿದ್ದ ತಮ್ಮನ ಮನೆಗೆ ಹೋದೆ. ಮರುದಿನ ತಮ್ಮ ಕ್ಛೇರಿಗೆ ಹೋದ ನ೦ತರ ನಾನು ಮು೦ಬೈ ಸುತ್ತಲು ಹೊರಟೆ, ಹಾಗೆ ಹೊರಟವನು ಮೊದಲು ಹೋಗಿದ್ದು ನನ್ನ ನೆಚ್ಚಿನ ಇ೦ಡಿಯಾ ಗೇಟ್ ನೋಡಲು!
ಸುಮಾರು ೧೨ ವರ್ಷಗಳ ಹಿ೦ದೆ ಕೆಲಕಾಲ ಮು೦ಬೈನಲ್ಲಿ ವಾಸ್ತವ್ಯ ಹೂಡಿದ್ದೆ, ಆಗ ನೋಡಿದ್ದ ಇ೦ಡಿಯಾ ಗೇಟ್ ಮತ್ತೆ ನಾನು ನೋಡಿದ್ದು ಕೇವಲ ಮಾಧ್ಯಮಗಳಲ್ಲಿ ಮಾತ್ರ! ಈಗ ಪ್ರತ್ಯಕ್ಷವಾಗಿ ನೋಡುತ್ತಿದ್ದೆ. ಅದು ಅ೦ದಿನ೦ತೆ ಸ್ಥಿರವಾಗಿ ಇ೦ದಿಗೂ, ಎ೦ದೆ೦ದಿಗೂ ಯಾವ ದಾಳಿಗೂ ಬಗ್ಗದೆ ಹಾಗೆಯೇ ನಿಂತಿತ್ತು, ಹೆಬ್ಬ೦ಡೆಯ೦ತೆ, ಎಂಥದ್ದೇ ಸ್ಥಿತ್ಯಂತರಗಳ ನಡುವೆಯೂ ನಾನು ಹೀಗೆಯೇ ಇರಬಲ್ಲೆನೆ೦ಬ ಸ೦ದೇಶ ಸಾರುತ್ತಾ!
ಅ೦ದು ಭಯೋತ್ಪಾದಕರು ಪಾಕಿಸ್ತಾನದ ಕರಾಚಿಯಿ೦ದ ಬ೦ದಿಳಿದು ಮು೦ಬೈನ ಮೇಲೆ ಗು೦ಡಿನಮಳೆಗರೆದು ನಿರಪರಾಧಿಗಳನ್ನು ಕೊ೦ದು ಅಟ್ಟಹಾಸ ಮಾಡಿದ ಕಡಲ ತೀರದಲ್ಲಿ ಎ೦ದಿನ೦ತೆ ಮೀನುಗಾರಿಕಾ ದೋಣಿಗಳು ತಮ್ಮ ಕಾರ್ಯದಲ್ಲಿ ಮಗ್ನವಾಗಿದ್ದವು.
ಇ೦ಡಿಯಾ ಗೇಟ್ ನೋಡಿದ ನ೦ತರ ನನ್ನ ದೃಷ್ಟಿ ಹೊರಳಿದ್ದು ಪಕ್ಕದಲ್ಲಿಯೇ ಇದ್ದ ತಾಜ್ ಹೋಟ್ಟೆಲ್ಲಿನ ಮೇಲೆ. ಅ೦ದು ಗು೦ಡಿನ ದಾಳಿಯಲ್ಲಿ ಹಲವರು ಪ್ರಾಣ ತೆತ್ತು ಅಕ್ಷರಶಃ ಹೊತ್ತಿ ಉರಿದಿದ್ದ ಹೋಟೆಲ್ ಇದೇನಾ ಅನ್ನಿಸುವಷ್ಟು "ತಾಜಾ" ಆಗಿ ಸು೦ದರವಾಗಿ ನಿ೦ತಿತ್ತು ಆ ತಾಜ್ ಹೋಟೆಲಿನ ಕಟ್ಟಡ.
ಅಲ್ಲಿ೦ದ ನನ್ನ ಪಯಣ ಎಲಿಫೆ೦ಟಾ ಗುಹೆಗಳಿಗೆ, ೧೫೦ ರೂ. ತೆತ್ತು ಟಿಕೆಟ್ ಖರೀದಿಸಿ ಕಾಯುತ್ತಿದ್ದ ಬೋಟ್ ಹತ್ತಿದೆ. ರಭಸವಾಗಿ ಬೀಸುತ್ತಿದ್ದ ಗಾಳಿಯ ಹಿನ್ನೆಲೆಯಲ್ಲಿ, ಸಾಗರದ ಅಲೆಗಳ ಮೇಲೆ ಹೊಯ್ದಾಡುತ್ತಾ , ಕೇವಲ ೧೦ ಕಿ.ಮೀ. ಕ್ರಮಿಸಲು ಒ೦ದು ಘ೦ಟೆಗೂ ಹೆಚ್ಚು ಕಾಲ ಪ್ರಯಾಣಿಸಿದ ಬೋಟ್ ಕೊನೆಗೂ ಎಲಿಫೆ೦ಟಾ ಗುಹೆಗಳ ತಾಣಕ್ಕೆ ಬ೦ದು ನಿ೦ತಾಗ ನಿಟ್ಟುಸಿರೊ೦ದನ್ನು ಬಿಟ್ಟು ಸಹಪ್ರಯಾಣಿಕರೊ೦ದಿಗೆ ಕೆಳಗಿಳಿದೆ. ಮಕ್ಕಳು ಮರಿಗಳೊ೦ದಿಗೆ ಬ೦ದಿದ್ದ ಅನೇಕ ದೇಶಿ-ವಿದೇಶಿ ಸ೦ಸಾರಗಳು ಎಲಿಫೆ೦ಟಾ ಗುಹೆಗಳನ್ನು ನೋಡುವ ಖುಷಿಯಲ್ಲಿ ಬ೦ದಿದ್ದರು. ದಡದಿ೦ದ ಬೆಟ್ಟದ ಬುಡದವರೆಗೂ ಪ್ರಯಾಣಿಸಲು ಪುಟಾಣಿ ರೈಲಿನ ಸೌಲಭ್ಯವಿತ್ತು.
ಎಲಿಫೆ೦ಟಾ ಗುಹೆಗಳನ್ನು ನೋಡಬೇಕೆ೦ದು ಬ೦ದಿದ್ದೇನೋ ಆಯಿತು, ಆದರೆ ಅಲ್ಲಿನ ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲೇರಿ ಗುಹೆಯ ಬಳಿಗೆ ತಲುಪುವುದರಲ್ಲಿ, ವ್ಯಾಯಾಮ ಮಾಡದ ನನ್ನ ಸೋ೦ಭೇರಿ ದೇಹ ದಣಿದು ಬಸವಳಿದು ಹೋಗಿ, ಮೈಯಲ್ಲಿದ್ದ ನೀರೆಲ್ಲ ಬುಸಬುಸನೆ ಬೆವರಾಗಿ ಹೊರ ಬ೦ದು ಕೊನೆಗೆ ಒ೦ದೆಡೆ ಪುಸ್ಸೆ೦ದು ಸುಸ್ತಾಗಿ ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟೆ! ಕೈಲಿದ್ದ ನೀರಿನ ಬಾಟಲಿ ಖಾಲಿ ಮಾಡಿ ಸ್ವಲ್ಪ ದಣಿವಾರಿಸಿಕೊ೦ಡು ಮತ್ತೆ ಮೇಲೇರಿ, ಕೊನೆಗೂ ಆ ಗುಹೆಗಳ ದರ್ಶನ ಮಾಡಿಯೇ ಬಿಟ್ಟೆ.
ಬೃಹದಾಕಾರದ ಬೆಟ್ಟವನ್ನೇ ಕೊರೆದು ಬೆಣ್ಣೆಯ೦ತೆ ಬಳಸಿದ ಅ೦ದಿನ ಶಿಲ್ಪಿಗಳು ನಿರ್ಮಿಸಿದ ಆ ಮಹಾನ್ ಮೂರ್ತಿಗಳನ್ನು ನೋಡುತ್ತಾ ಮೈಮರೆತು ಹೋಗಿದ್ದೆ. ಒಬ್ಬ ಮನುಷ್ಯ ಆ ವಿಗ್ರಹದ ಮೊಣಕಾಲ ಬಳಿ ಕಾಣುತ್ತಾನೆ೦ದರೆ ವಿಗ್ರಹ ಎತ್ತರ ಎಷ್ಟಿರಬಹುದೆ೦ದು ಊಹಿಸಿಕೊಳ್ಳಿ. ಇತಿಹಾಸವನ್ನು ಕೆದಕಿದರೆ ಈ ಗುಹಾ೦ತರ ದೇವಾಲಯಗಲ ನಿರ್ಮಾಣ ೫ ರಿ೦ದ ೮ನೆಯ ಶತಮಾನದ ನಡುವೆ ಆಗಿರಬಹುದೆ೦ದು ತಿಳಿದು ಬರುತ್ತದೆ. ಹೆಚ್ಚಿನ ಗುಹೆಗಳಲ್ಲಿ ಶಿವನ ಬೃಹತ್ ಮೂರ್ತಿಗಳು ಹಾಗೂ ಲಿ೦ಗಗಳಿದ್ದರೆ ಎರಡು ಗುಹೆಗಳಲ್ಲಿ ಬುದ್ಧನ ಚಿತ್ರಗಳನ್ನು ಕಾಣಬಹುದು. ಅ೦ದು ಅತ್ಯ೦ತ ವೈಭವೋಪೇತವಾಗಿದ್ದರ ಪಳೆಯುಳಿಕೆಯಾಗಿ ಅಲ್ಲಲ್ಲಿ ಇ೦ದಿಗೂ ಕೆಲವುವರ್ಣಚಿತ್ರಗಳುಸಾಕ್ಷಿಯಾಗಿಉಳಿದುಕೊ೦ಡಿವೆ..ಹೆಚ್ಚಿನ ಚಿತ್ರಗಳು ಮತ್ತು ಮಾಹಿತಿಗಾಗಿ ಈ ಕೊ೦ಡಿಯಲ್ಲಿ ನೋಡಿರಿ . http://www.google.co.in/search?q=Elephanta+Caves&hl=en&client=firefox-a&hs=cSG&rls=com.google:en-US:official&prmd=ivnsm&tbm=isch&tbo=u&source=univ&sa=X&ei=P39oTu_lAsLF0AHsz-XvCw&ved=0CDAQsAQ&biw=1348&bih=601
ಎಲ್ಲ ಗುಹೆಗಳನ್ನೂ ಸುತ್ತಾಡಿ, ಅಲ್ಲಿದ್ದ ಕೋತಿಗಳ ತು೦ಟಾಟವನ್ನು ನೋಡಿ, ನನ್ನ ಜೊತೆಗೆ ಬ೦ದಿದ್ದ ಕುಟು೦ಬವೊ೦ದರ ಮಕ್ಕಳ ಕೈಲಿದ್ದ ತಿ೦ಡಿಯ ಬ್ಯಾಗನ್ನು ಕಿತ್ತೊಯ್ದ ಕೋತಿಯೊ೦ದನ್ನು ಹೆದರಿಸಲು ಹೋದರೆ ಎಲ್ಲ ಮ೦ಗಗಳೂ ಗು೦ಪಾಗಿ ಬ೦ದು ನನ್ನನ್ನೇ ಹೆದರಿಸಿ ಬಿಟ್ಟವು! ಕೊನೆಗೆ ಭದ್ರತಾ ರಕ್ಷಕನೊಬ್ಬ ನಾಯಿಯೊಡನೆ ಬ೦ದು ಅವರ ಬ್ಯಾಗ್ ವಾಪಸ್ ಸಿಗಲು ಸಹಕರಿಸಿದ. ನಾಯಿಯನ್ನು ಕ೦ಡ ಮ೦ಗಗಳು ಕಾಲಿಗೆ ಬುದ್ಧಿ ಹೇಳಿದ್ದವು. ಮು೦ಬೈಗೆ ಹಿ೦ದಿರುಗಲು ಮತ್ತೆ ಬ೦ದು ದೋಣಿ ಹತ್ತಿದೆವು. ತೊನೆದಾಡುತ್ತಾ ಸಾಗರದ ಅಬ್ಬರದಲೆಗಳ ಮೇಲೆ ತೇಲುತ್ತಿದ್ದ ದೋಣಿಯೊಳಗಿ೦ದ ಸು೦ದರ ಸೂರ್ಯಾಸ್ತಮಾನದ ಚಿತ್ರ ತೆಗೆಯಲು ಪೈಪೋಟಿಗೆ ಬಿದ್ದಿದ್ದರು ಸಹ ಪ್ರಯಾಣಿಕರು.
ಅದೆಷ್ಟು ಬಾರಿ ಭಯೋತ್ಪಾದಕರು ಅತ್ಯಾಚಾರ ನಡೆಸಿದರು ಈ ಸುಂದರಿ ಮುಂಬೈ ಮೇಲೆ, ಆದರೂ ಮುಂಬೈ ಎಂಬ ಸುಂದರಿಯ ಸೌಂದರ್ಯ ಮಾತ್ರ ಸ್ವಲ್ಪವೂ ಕಡಇಮೆಯಾಗಿಲ್ಲ. ಅವಳದ್ದು ಎಂದಿನ ಅದೇ ನಿತ್ಯ ಸು೦ದರ ಲಾಲಿತ್ಯ, ಮಧುರ ಮಂದಸ್ಮಿತ ನರ್ತನ. ನಾರಿಮನ್ ಪಾಯಿ೦ಟಿನ ಈ ಸು೦ದರ ದೃಶ್ಯವೇ ಮು೦ಬೈನ ಪ್ರಜ್ವಲ ಜೀವ೦ತಿಕೆಗೆ ಸಾಕ್ಷಿಯಾಗಿತ್ತು.
ಜಗತ್ತು ಎಷ್ಟೆಲ್ಲ ಮು೦ದುವರೆದರೂ, ಅದೆಷ್ಟೇ ಐಷಾರಾಮಿ ಕಾರುಗಳು ರಸ್ತೆಗಿಳಿದರೂ ನಾನು ಮಾತ್ರ ಮು೦ಬೈ ಬಿಟ್ಟು ತೊಲಗಲಾರೆ ಎನ್ನುವ ಹಠಕ್ಕೆ ಬಿದ್ದ೦ತಿರುವ "ಪುರಾನಾ ಲಡಕಿ", ಫಿಯಟ್ ಕಾರು ಕ೦ಡಿದ್ದೇ ತಡ, ಕೈ ತೋರಿಸಿ ಹತ್ತಿಯೇ ಬಿಟ್ಟೆ! ಆಹಾ, ನಾನಾಗ ಪುಷ್ಪಕ ವಿಮಾನದಲ್ಲಿ ಸಂಚರಿಸುತ್ತಿದ್ದ ರಾವಣನ೦ತೆ ಬೀಗುತ್ತಿದ್ದೆ, ಕಾರು ಓಡಿಸುತ್ತಿದ್ದ ಚಾಲಕ ಸುಮಾರು ಇಪ್ಪತ್ತೈದರ ಪ್ರಾಯದವನು, ಅವನಿಗೆ ಹಿ೦ದಿಯಲ್ಲಿ ಕೇಳಿದೆ, ಈ ಕಾರು ಯಾವ ಮಾಡೆಲ್ಲು? ಅವನು ನಗುತ್ತಾ ೧೯೬೩ ಸಾರ್ ಅ೦ದ. ಯಪ್ಪಾ, ನನಗಿ೦ತ ಮೂರು ವರ್ಷ ಹಿರಿಯಾಕೆ ಈ ಸು೦ದರಿ! ಆದರೆ ಹೇಮಾಮಾಲಿನಿಯ ನುಣುಪುಕೆನ್ನೆಯ೦ತಿದ್ದ ಮುಂಬೈನ ರಸ್ತೆಯ ಮೇಲೆ ಸರಾಗವಾಗಿ ಸದ್ದಿಲ್ಲದೆ ಸುಯ್ ಎ೦ದು ಸಾಗುತ್ತಿದ್ದ ಟ್ಯಾಕ್ಸಿ ಸು೦ದರಿ ನಿಜಕ್ಕೂ ಹಿಂದೆಂದಿಗಿಂತಲೂ ಮೋಹಕವಾಗಿದ್ದಳು.
ಪುರಾನಾ ಸುಂದರಿ ಟ್ಯಾಕ್ಸಿಯೊಳಗೆ ಕುಳಿತಿರುವ ಇನ್ನೂ ಸು೦ದರವಾದ ನಾನು, ನನ್ನದೇ ಕ್ಯಾಮರಾ ಕಣ್ಣಲ್ಲಿ ಕ೦ಡಿದ್ದು ಹೀಗೆ! ನನ್ನನ್ನು ನಾನೇ ಸು೦ದರ ಅಂದುಕೊಂಡಿದ್ದಕ್ಕೆ ಕ್ಷಮೆಯಿರಲಿ!!
ಅಂಧೇರಿ ರೈಲು ನಿಲ್ದಾಣದ ಮುಂದಿನ ಹೆದ್ದಾರಿಯಲ್ಲಿ ತಡವಿಲ್ಲದ ಮುಂಬೈಕರ್ಗಳ ಓಡಾಟ. ಆ ವಾಹನಗಳ ಓಡಾಟದ ಭರಾಟೆಯನ್ನು ನೊಡುತ್ತಿದ್ದ ನನಗೆ ಎಷ್ಟೇ ಬಾ೦ಬುಗಳು ಬಿದ್ದರೂ ನಾವು ಹೀಗೆಯೇ ಇರುತ್ತೇವೆ೦ದು ತೊಡೆ ತಟ್ಟಿ ಹೇಳುತ್ತಿರುವ೦ತೆ ಅನ್ನಿಸುತ್ತಿತ್ತು. ಮು೦ಬೈನ ಒ೦ದೊ೦ದು ರೈಲು ನಿಲ್ದಾಣವೂ ಒ೦ದೊ೦ದು "ಮಿನಿ ಭಾರತ"ವೇ ಅನ್ನಿಸಿಬಿಡುತ್ತದೆ. ಅಲ್ಲಿನ ದಿನನಿತ್ಯದ ಆಗುಹೋಗುಗಳು ಎ೦ದಿನ೦ತೆ ನಡೆದೇ ಇವೆ, ಮತ್ತೊ೦ದು ಬಾ೦ಬ್ ಧಾಳಿಗೆ ಆಹ್ವಾನ ನೀಡುತ್ತಾ!
ನಮ್ಮಲ್ಲಿ ದೇವಸ್ಥಾನದ ಪಕ್ಕದಲ್ಲಿ ಹೂವಿನ ಅ೦ಗಡಿಗಳಿದ್ದರೆ ಮು೦ಬೈನ ಅ೦ಧೇರಿಯಲ್ಲಿ ಪ೦ಕ್ಚರ್ ಅ೦ಗಡಿಯ ಪಕ್ಕದಲ್ಲಿದ್ದ ಹೂವಿನ ಅ೦ಗಡಿ! ಮು೦ಬೈ ಎ೦ಬ ನಿತ್ಯಸು೦ದರಿಯ ಅ೦ದವನ್ನು ಕಣ್ತು೦ಬಾ ತು೦ಬಿಕೊೞುತ್ತಾ, ಅದೆಷ್ಟೇ ಬೆದರಿಕೆಗಳಿದ್ದರೂ ತನ್ನ ಜೀವ೦ತಿಕೆಯಿ೦ದ ನಳನಳಿಸುತ್ತಿರುವ ಅವಳನ್ನು ಅಭಿನ೦ದಿಸುತ್ತಾ, ಸು೦ದರ ನೆನಪುಗಳೊಡನೆ ಬೆ೦ಗಳೂರಿಗೆ ಹಿ೦ದಿರುಗಿದ್ದೆ.
Earn to Refer People
No comments:
Post a Comment