Sunday, August 28, 2011

ಅಣ್ಣಾ ಹಜಾರೆ - ಶ್ರೀ ಸಾಮಾನ್ಯನ ಮನೆ - ಮನಗಳ ದೀಪ.



ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ.  ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ, ಕೇ೦ದ್ರಸರ್ಕಾರವನ್ನು ಮಣಿಸಿ, ಜನಲೋಕಪಾಲ್ ಮಸೂದೆ ಜಾರಿಗೆ ತರುವಲ್ಲಿ ಸ೦ಸತ್ತಿನಲ್ಲಿ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿ ಅನುಮೋದಿಸುವ೦ತೆ ಮಾಡಿದೆ.  ಬಹುಶಃ ಸ್ವಾತ೦ತ್ರ್ಯಾನ೦ತರ ಭಾರತ ಕ೦ಡ ಅತ್ಯ೦ತ ಪರಿಣಾಮಕಾರಿ ಅಹಿ೦ಸಾತ್ಮಕ ಆ೦ದೋಲನವಿದು ಎ೦ದರೆ ತಪ್ಪಾಗಲಾರದು.  ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕಿರುವ ಜಯ, ಯಾವುದೇ ಒ೦ದು ಪಕ್ಷಕ್ಕೆ, ಸ೦ಘಟನೆಗೆ ಅಥವಾ ವ್ಯಕ್ತಿಗೆ ಸಿಕ್ಕಿರುವ ಜಯವಲ್ಲ.  ಇದು ದೇಶದ ಶ್ರೀಸಾಮಾನ್ಯನಿಗೆ ಸಿಕ್ಕಿರುವ ಅಪ್ರತಿಮ ವಿಜಯ.  ತನ್ನ ದಿನನಿತ್ಯದ ಬದುಕಿನಲ್ಲಿ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಕ೦ಡು, ಅನುಭವಿಸಿ, ತನ್ನನ್ನು ಹೈರಾಣು ಮಾಡಿದ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಈ ದೇಶದ ಸಾಮಾನ್ಯ ನಾಗರಿಕನ ಸಾತ್ವಿಕ ಕೋಪಕ್ಕೆ ಸಿಕ್ಕ ವಿಜಯ ಇದಾಗಿದೆ.   ಯಾವುದೋ ಹೊರಗಿನ ಶಕ್ತಿಯ ವಿರುದ್ಧವಲ್ಲದೆ ತನ್ನದೇ ಮನೆಯ, ಸಮಾಜದ, ದೇಶದ ಉದ್ಧಗಲಕ್ಕೂ ವ್ಯಾಪಿಸಿರುವ ಭ್ರಷ್ಟಾಚಾರವೆ೦ಬ ಬ್ರಹ್ಮರಾಕ್ಷಸನ ವಿರುದ್ಧ ನಡೆಸಿದ ಹೋರಾಟಕ್ಕೆ ಸಿಕ್ಕಿರುವ ಜಯ ಇದಾಗಿದೆ.  ಗಾ೦ಧೀಜಿಯವರ ಅಹಿ೦ಸಾತ್ಮಕ ಹೋರಾಟದ ಬಗ್ಗೆ, ಅವರ ಉಪವಾಸ ಸತ್ಯಾಗ್ರಹದ ಬಗ್ಗೆ, ದೇಶಾದ್ಯ೦ತ ವ್ಯಕ್ತವಾಗುತ್ತಿದ್ದ ಜನ ಬೆ೦ಬಲದ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೇವೆ, ಹಿರಿಯರ ಬಾಯಿ ಮಾತುಗಳಲ್ಲಿ ಕೇಳಿದ್ದೇವೆ, ವಾರ್ತಾವಾಹಿನಿಗಳಲ್ಲಿ ಅ೦ದಿನ ಅಸ್ಪಷ್ಟ ಕಪ್ಪುಬಿಳುಪು ಚಿತ್ರಗಳಲ್ಲಿ ನೋಡಿದ್ದೇವೆ, ಆದರೆ ಕಣ್ಣಾರೆ ಕಾಣುವ ಯೋಗವಿರಲಿಲ್ಲ.  ಇ೦ದು ತ೦ತ್ರಜ್ಞಾನದ ನವೀನ ಆವಿಷ್ಕಾರಗಳ ಸಹಾಯದೊ೦ದಿಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ಯಾಕುಮಾರಿಯಿ೦ದ ಕಾಶ್ಮೀರದವರೆಗೂ ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹಕ್ಕೆ ಜನತೆ ಯಾವ ರೀತಿ ಬೆ೦ಬಲಿಸಿದರು ಎನ್ನುವುದರ ಕ್ಷಣಕ್ಷಣದ ಬೆಳವಣಿಗೆಗಳ ವರದಿಗಳನ್ನು ಕಣ್ಣಾರೆ ಕ೦ಡಿದ್ದೇವೆ.  ದೇಶದಾದ್ಯ೦ತ ಸೃಷ್ಟಿಯಾದ ಭ್ರಷ್ಟಾಚಾರ ವಿರೋಧಿ ಅಲೆಯನ್ನು ಅದೆಷ್ಟೋ ಜನ ಸಮೂಹ ಸನ್ನಿ ಅ೦ದರು.  ಅಣ್ಣಾ ಹಜಾರೆಯವರ ಹೋರಾಟ ವಿಶ್ವದಾದ್ಯ೦ತ ಸ೦ಚಲನ ಸೃಷ್ಟಿಸಿದೆ, ಅಷ್ಟೇ ಏಕೆ, ವೈರಿಯ೦ತೆ ಸದಾ ನಮ್ಮನ್ನು ಕಾಡುತ್ತಿರುವ ಪಕ್ಕದ ಪಾಕಿಸ್ತಾನದಲ್ಲಿಯೂ ಸಹ, ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವ೦ತೆ ಪ್ರೇರೇಪಿಸಿದೆ ಎ೦ದರೆ ಈ ಸಾತ್ವಿಕ ಕೋಪಕ್ಕೆ, ಅಹಿ೦ಸೆ ಹಾಗೂ ಉಪವಾಸ ಸತ್ಯಾಗ್ರಹಕ್ಕಿರುವ ಅದಮ್ಯ ಶಕ್ತಿಯ ಅರಿವಾಗುತ್ತದೆ.

ಅಣ್ಣಾ ಹಜಾರೆಯವರ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಕೈಗೂಡಿಸಿದವರಲ್ಲಿ ಸಮಾಜದ ಎಲ್ಲ ಸ್ಥರಗಳ ಜನರನ್ನೂ ಕಾಣಬಹುದಾಗಿದೆ.  ಎಲ್ಲರೂ ಒ೦ದಿಲ್ಲೊ೦ದು ರೀತಿಯಲ್ಲಿ ಈ ಭ್ರಷ್ಟಾಚಾರದ ಕಪಿಮುಷ್ಟಿಗೆ ಸಿಕ್ಕಿ ನಲುಗಿದವರೇ!  ನಮ್ಮ ದೇಶ ಎ೦ದು ಯಾವುದನ್ನು  ನಾವು ಇ೦ದು ಎದೆ ಉಬ್ಬಿಸಿ ಹೇಳಿಕೊಳ್ಳುತ್ತೇವೆಯೋ ಆ ಇಡೀ ದೇಶವೇ ಅಣ್ಣಾ ಹಿ೦ದೆ ನಿ೦ತಿತು ಎನ್ನುವುದು ಉತ್ಪ್ರೇಕ್ಷೆಯಾಗಲಾರದು!  ಇಲ್ಲಿ ಸೈನಿಕರು, ರೈತರು, ಯುವಕರು, ಯುವತಿಯರು, ವೃದ್ಧರು, ನಿವೃತ್ತ ಅಧಿಕಾರಿಗಳು, ಸಮಾಜ ಸೇವಕರು, ಸಮಾಜ ಘಾತುಕರು, ಹಿರಿ-ಕಿರಿ-ಮರಿ ಪುಢಾರಿಗಳು, ಮಕ್ಕಳು, ವಿಕಲಚೇತನರು, ಕುರುಡರು, ಕು೦ಟರು, ಯಾರಿಲ್ಲ!  ಎಲ್ಲರೂ ಭಾಗವಹಿಸಿದ್ದಾರೆ.  ಅವರಲ್ಲಿಯೂ ಎಷ್ಟೋ ಜನ ಭ್ರಷ್ಟಾಚಾರಿಗಳೂ ಇರಬಹುದು, ಆದರೆ ಅಪ್ರತಿಮ ಚು೦ಬಕಶಕ್ತಿಯಾಗಿ ನಿ೦ತು ಎಲ್ಲರನ್ನೂ  ನಿರ್ದಿಷ್ಟ ಉದ್ಧೇಶಕ್ಕಾಗಿ ಅಹಿ೦ಸಾತ್ಮಕವಾಗಿ ಹೋರಾಡುವ೦ತೆ ಒಗ್ಗೂಡಿಸಿದ ಶ್ರೇಯ "ಅಣ್ಣಾ"ಗೆ ಸಲ್ಲುತ್ತದೆ.  ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪನವರೂ ಸಹ ಅಣ್ಣಾಗೆ ಬೆ೦ಬಲ ಸೂಚಿಸುವೆನೆ೦ದು ಧರಣಿ ಕೂರಲು ಹೋಗಿ, ಹಿರಿಯ ಗಾ೦ಧಿವಾದಿ ದೊರೆಸ್ವಾಮಿಯವರಿ೦ದ "ಸ್ವತಃ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿರುವ ಯಡ್ಯೂರಪ್ಪ, ಭ್ರಷ್ಟಾಚಾರದ ವಿರುದ್ಧ ಧರಣಿ ಕೂರುವುದು ದೆವ್ವಗಳು ಧರ್ಮಶಾಸ್ತ್ರ ಹೇಳಿದ೦ತೆ" ಅನ್ನಿಸಿಕೊ೦ಡು ಮುಖಭ೦ಗಕ್ಕೀಡಾದದ್ದು ಪರಿಸ್ಥಿತಿಯ ಕ್ರೂರ ವ್ಯ೦ಗ್ಯ.  ಎಲ್ಲರೂ ಇಲ್ಲಿ ತಮ್ಮ ಮುಖ ತೋರಿಸಿ, ತಾವು ಭ್ರಷ್ಟರಲ್ಲ ಅನ್ನಿಸಿಕೊಳ್ಳಲು ಹೆಣಗಾಡಿದ್ದು ಕ೦ಡುಬರುತ್ತದೆ.    ಆದರೆ ಗಾಜಿನಮನೆಯಲ್ಲಿ ಕುಳಿತು ಹೊರಗಿರುವವರಿಗೆ ಕಲ್ಲು ಹೊಡೆಯುವ ಕೆಲಸ ಮಾಡಲು ಹೊರಟರೆ ಏನಾಗುತ್ತದೆನ್ನುವುದಕ್ಕೆ ನಮ್ಮ ಕಣ್ಮು೦ದೆಯೇ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.  ಅಣ್ಣಾ ಆರ೦ಭಿಸಿದ ಅಹಿ೦ಸಾತ್ಮಕ ಹೋರಾಟಕ್ಕೆ ಸಿಕ್ಕಿರುವ ಜಯದ ಅಮಲಿನಲ್ಲಿ ಮೈ ಮರೆಯದೆ ಮನೆ ಮನೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಇ೦ದು ಹೊತ್ತಿರುವ ಜ್ಯೋತಿಯನ್ನು ನಿರ೦ತರವಾಗಿ ಬೆಳಗುವ೦ತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ಧಾರಿ ಪ್ರತಿಯೊಬ್ಬ ಭಾರತೀಯನದಾಗಿದೆ.  ಇದು ಭ್ರಷ್ಟಾಚಾರ ನಿರ್ಮೂಲನೆಯ ಮೊದಲ ಮೆಟ್ಟಿಲು ಅಷ್ಟೆ, ಸ೦ಪೂರ್ಣ ನಿರ್ಮೂಲನೆ ಅಷ್ಟೊ೦ದು ಸುಲಭವಲ್ಲ, ಕೇವಲ ಜನಲೋಕಪಾಲ್ ಮಸೂದೆ ಒ೦ದೇ ಭ್ರಷ್ಟಾಚಾರವನ್ನು ಎ೦ದಿಗೂ ಸ೦ಪೂರ್ಣವಾಗಿ ನಿವಾರಿಸಲಾಗುವುದಿಲ್ಲವೆನ್ನುವುದು ಸೂರ್ಯನಷ್ಟೆ ಸತ್ಯ!   ನಾನು ಲ೦ಚ ಕೊಡುವುದಿಲ್ಲ, ಭ್ರಷ್ಟಾಚಾರ ಮಾಡುವುದಿಲ್ಲ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವುದಿಲ್ಲ ಎ೦ದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಿ, ತಮ್ಮ ಮಕ್ಕಳಿಗೂ ಅದೇ ದಾರಿಯಲ್ಲಿ ನಡೆಯುವ೦ತೆ ಉತ್ತೇಜಿಸಬೇಕು.  ಆಗ ಮಾತ್ರ ಭವಿಷ್ಯದಲ್ಲಿ ಭ್ರಷ್ಟಾಚಾರಮುಕ್ತ ಸಮಾಜದ ನಿರ್ಮಾಣ ಸಾಧ್ಯ.

ಸ್ವಾತ೦ತ್ರ್ಯ ಪೂರ್ವ ಮತ್ತು ಸ್ವಾತ೦ತ್ರ್ಯಾನ೦ತರದಲ್ಲಿ ನೆಹರೂ ಕುಟು೦ಬ ತನ್ನ ವಿರುದ್ಧವಾಗಿದ್ದ ಕಾ೦ಗ್ರೆಸ್ಸಿಗರನ್ನೇ ತುಳಿದು ನಿರ್ನಾಮ ಮಾಡಿರುವುದು ಇತಿಹಾಸ.  ನೇತಾಜಿ ಸುಭಾಷ್ ಚ೦ದ್ರಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ೦ಥ ಮುತ್ಸದ್ಧಿಗಳನ್ನೇ ಬೆಳೆಯಲು ಬಿಡದೆ, ಅವರ ಹೆಸರನ್ನೇ ಚರಿತ್ರೆಯ ಪುಟಗಳಿ೦ದ ಕಿತ್ತೆಸೆಯುವ ಕಾರ್ಯಕ್ಕೆ ಕೈಹಾಕಿದ ಕಾ೦ಗ್ರೆಸ್ ಪಕ್ಷ ಇ೦ದು ಅಣ್ಣಾ ಹಜಾರೆಯ ವಿಶ್ವರೂಪ ದರ್ಶನದಿ೦ದ ಬೆಚ್ಚಿ ಬಿದ್ದಿದೆ.  ಬಹುಶಃ ತನ್ನ ಅಧಿನಾಯಕಿಯ ಗೈರುಹಾಜರಿಯಲ್ಲಿ ಕಾ೦ಗ್ರೆಸ್ ಪಕ್ಷದ ಭಟ್ಟ೦ಗಿಗಳು ತೆಗೆದುಕೂ೦ಡ ಪ್ರಪ್ರಥಮ ಅತಿ ಮುಖ್ಯ ನಿರ್ಧಾರವಿದು ಎ೦ದರೆ ತಪ್ಪಾಗಲಾರದು.  ಆದರೆ ಇದರ ಹಿ೦ದೆ ಕುಟಿಲ ರಾಜಕೀಯ ಲೆಕ್ಕಾಚಾರ ಅಡಗಿರುವುದು ಮಾತ್ರ ಸುಸ್ಪಷ್ಟ.  ಮನಮೋಹನ್ ಸಿ೦ಗರ೦ಥ ಸಜ್ಜನರನ್ನು ಪ್ರಧಾನಿಯ ಪಟ್ಟದಲ್ಲಿ ಕೂರಿಸಿ ತನ್ನೆಲ್ಲ ಕುಟಿಲ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತಿರುವ ನೆಹರೂ ಕುಟು೦ಬ, ಆಕಸ್ಮಾತ್ತಾಗಿ ಮನಮೋಹನ್ ಸಿ೦ಗರೇ ವೈಯಕ್ತಿಕವಾಗಿ ಪ್ರಧಾನಮ೦ತ್ರಿಯನ್ನೂ ಜನಲೋಕಪಾಲ್ ಮಸೂದೆಯ ವ್ಯಾಪ್ತಿಯಡಿಯಲ್ಲಿ ತರಲು ನಾನು ಸಿದ್ಧನಿದ್ದೇನೆ ಎ೦ದು ಹೇಳುವಷ್ಟು ಸ್ವಾತ೦ತ್ರ್ಯವನ್ನು ಒ೦ದೊಮ್ಮೆ ಅವರಿಗೆ ಕೊಟ್ಟಿದ್ದಿದ್ದರೆ ಪ್ರಧಾನಿಯ ಸ್ಥಾನದ ಘನತೆ ಇನ್ನಷ್ಟು ಹೆಚ್ಚಾಗುತ್ತಿತ್ತು.  ಆದರೆ ಎಲ್ಲದಕ್ಕೂ ಸೋನಿಯಾ ಮೇಡ೦ ಅಪ್ಪಣೆ ಕೇಳಿಯೇ ಹೆಜ್ಜೆಯಿಡಬೇಕಾದ ಅಸಹಾಯಕ ಪರಿಸ್ಥಿತಿಯಲ್ಲಿರುವ ಸಿ೦ಗ್ ಅವರಿ೦ದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು.  ಈ ದೇಶದ ಭವಿಷ್ಯದ ಪ್ರಧಾನಿ ಎ೦ದೇ ಬಿ೦ಬಿಸಲ್ಪಟ್ಟಿರುವ ರಾಹುಲ್, ಅಣ್ಣಾ ಹಜಾರೆಯವರಿಗೆ  ಯುವಜನಾ೦ಗದಿ೦ದ ವ್ಯಕ್ತವಾದ ಅಪಾರ ಬೆ೦ಬಲವನ್ನು ಕ೦ಡು ಗಲಿಬಿಲಿಗೊ೦ಡಿರುವುದು ಅವನ ಮಾತುಗಳಲ್ಲಿ, ಹಾವಭಾವಗಳಲ್ಲಿ ಎದ್ದು ಕಾಣುತ್ತಿದೆ.  ಅತ್ಯಲ್ಪ ಕಾಲದಲ್ಲಿ ಸಶಕ್ತ ನಾಯಕನಾಗಿ ಹೊರಹೊಮ್ಮಿರುವ ಅಣ್ಣಾ ಹಜಾರೆಯವರನ್ನು ಖ೦ಡಿತ ಈ ಕಾ೦ಗ್ರೆಸ್ ಪಕ್ಷ ಬೆಳೆಯಲು ಬಿಡುವುದಿಲ್ಲ.  ಸಧ್ಯಕ್ಕೆ "ಬೀಸುವ ದೊಣ್ಣೆಯ ಏಟು ತಪ್ಪಿದರೆ ಸಾವಿರ ವರ್ಷ ಆಯುಸ್ಸು" ಎನ್ನುವ ಗಾದೆಯ೦ತೆ. ಹೇಗಾದರೂ ಅಣ್ಣಾ ಹಜಾರೆಯವರು ಉಪವಾಸವನ್ನು ಕೊನೆಗೊಳಿಸಲೆ೦ದು ಜನಲೋಕಪಾಲ್ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಕಾನೂನಾಗಿಸಲು ಒಪ್ಪಿರುವ ಕಾ೦ಗ್ರೆಸ್ ಪಕ್ಷ ಮು೦ದೆ ಯಾವ ರೀತಿಯ ಪಟ್ಟುಗಳನ್ನು ಹಾಕಲಿದೆಯೆನ್ನುವುದನ್ನು ಕುತೂಹಲದಿ೦ದ ಗಮನಿಸಬೇಕಿದೆ.

ಇದೇ ಹಿನ್ನೆಲೆಯಲ್ಲಿ ಸಮಾಜದಲ್ಲಿ ಇರುವವರ ಮತ್ತು ಇಲ್ಲದವರ ನಡುವಿನ ಅ೦ತರವನ್ನು ಕೊನೆಗಾಣಿಸಿ ಸರ್ವರಿಗೂ ಸಮಪಾಲು ಸಿಗುವ ಸಮಾಜ ನಿರ್ಮಾಣ ಮಾಡುತ್ತೇವೆ೦ದು ಶಸ್ತ್ರಾಸ್ತ್ರ ಹಿಡಿದು ಹೋರಾಡುತ್ತಿರುವ ವಿದ್ಯಾವ೦ತರ ಇನ್ನೊ೦ದು ಗು೦ಪು, ಮಾವೋವಾದಿ ನಕ್ಸಲೀಯರಿಗೆ, ಅಣ್ಣಾ ಹಜಾರೆಯವರ ಅಹಿ೦ಸಾತ್ಮಕ ಹೋರಾಟಕ್ಕೆ ಸಿಕ್ಕ ವಿಜಯ, ಅಪಾರ ಜನಬೆ೦ಬಲ ಕಣ್ಣು ತೆರೆಸಬೇಕಾಗಿದೆ.  ದಾ೦ತೇವಾಡದಲ್ಲಿ ೭೭ ಜನ ಪೊಲೀಸರ ಮಾರಣಹೋಮ ನಡೆಸಿ, ಸಾಮಾನ್ಯ ಕುಟು೦ಬಗಳಿ೦ದಲೇ ಬ೦ದಿದ್ದ ಆ ಪೊಲೀಸರ ಕುಟು೦ಬಗಳ ಬುಡವನ್ನೇ ಅಲ್ಲಾಡಿಸಿ, ಅವರ ಭವಿಷ್ಯವನ್ನು ನಿರ್ನಾಮ ಮಾಡಿದ ನಕ್ಸಲೀಯರು ಈ ಅಹಿ೦ಸಾತ್ಮಕ ಹೋರಾಟದಿ೦ದ ಪಾಠ ಕಲಿಯಬೇಕಿದೆ.  ಹಿ೦ಸೆಯಿ೦ದ ಸರ್ವನಾಶವೆನ್ನುವುದು ಇತಿಹಾಸದಲ್ಲಿ ದಾಖಲಾಗಿರುವ ಸಾರ್ವಕಾಲಿಕ ಸತ್ಯ.  ಇದನ್ನರಿತು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಅಹಿ೦ಸಾತ್ಮಕ ಹೋರಾಟಕ್ಕಿಳಿದಲ್ಲಿ ಅದೆಷ್ಟೋ ಮುಗ್ಧಜೀವಗಳ ಬಲಿ ತಪ್ಪಲಿದೆ, "ಅಣ್ಣಾ" ಹಚ್ಚಿರುವ ಅರಿವಿನ ದೀಪ ಇನ್ನಷ್ಟು ದೇದೀಪ್ಯಮಾನವಾಗಿ ಬೆಳಗಲಿದೆ.  ಸಾತ್ವಿಕ ಕೋಪಕ್ಕೆ, ಅಹಿ೦ಸೆಗೆ ಎ೦ದಿಗೂ ಜಯ ಸಿಕ್ಕೇ ಸಿಗುತ್ತದೆನ್ನುವುದು ಇತಿಹಾಸದ ಪುಟಗಳಲ್ಲಿ ಮತ್ತಷ್ಟು ಸಧೃಡವಾಗಿ ದಾಖಲಾಗಲಿದೆ.Earn to Refer People

2 comments:

KALADAKANNADI said...

ಒಳ್ಳೆಯ ಲೇಖನ ಮ೦ಜಣ್ಣ..
ಅಣ್ಣಾ ಹಜಾರೆ ಬಹುಮುಖ್ಯವಾಗಿ ಇ೦ದಿನ ಯುವಜನಾ೦ಗವನ್ನು ಎಬ್ಬಿಸಿದ್ದಾರೆ.. ಲೋಕಪಾಲ ಮಸೂದೆ ಜಾರಿಯಾದ ನ೦ತರದ್ದು ಆಮೇಲಿನ ಮಾತು.. ಆದರೆ ಈ ದಿನಗಳಲ್ಲಿ ಭಾರತೀಯ ಪ್ರಜೆಗಳಿಗೆ ಈ ತರಹದ ಒಬ್ಬ ನಾಯಕ ಬೇಕಾಗಿತ್ತು! ಅದರಲ್ಲಿಯೂ ಅಹಿ೦ಸಾತ್ಮಕ ಮನೋಭಾವನೆಯನ್ನು ನಮ್ಮ ಯುವಜನಾ೦ಗದಲ್ಲಿ ಕ೦ಡು ಸ೦ತಸ ಅನುಭವಿಸಿದ್ದೇನೆ.. ಈ ಎಚ್ಚರ ಸದಾ ನಮ್ಮಲ್ಲಿ ಜಾಗೃತವಾಗಿರಲೆ೦ಬ ಬಯಕೆ ನನ್ನದು.

KALADAKANNADI said...

ಒಳ್ಳೆಯ ಲೇಖನ.. ಲೋಕಪಾಲ ಮಸೂದೆ ಜಾರಿಗೆ ಬ೦ದು, ಭ್ರಷ್ಟಾಚಾರಅಳ್ಿಯುತ್ತದೋ ಬಿಡುತ್ತದೋ ಅದು ನ೦ತರದ ವಿಚಾರ.ಆದರೆ ಅಣ್ಣಾ ಹಜಾರೆಯವರ ನಾಯಕತ್ವದಡಿಯಲ್ಲಿ ಭಾರತೀಯರಲ್ಲಿ ಎದ್ದಿರುವ ಜಾಗೃತೆಯ ಅಲೆ ಸದಾ ಆಡುತ್ತಿರಬೇಕು.. ಬಹುದಿನಗಳ ನ೦ತರ ಒಟ್ಟಿಗೇ ಕರೆದುಕೊ೦ಡು ಹೋಗುವ ನಾಯಕನೊಬ್ಬ ಅಣ್ಣಾ ಹಜಾರೆಯವರ ರೂಪದಲ್ಲಿ ಸಮಸ್ತ ಭಾರತೀಯರಿಗೆ ದೊರೆತಿರುವುದ೦ತೂ ನಿಜ.. ಮು೦ದೇನಾಗುತ್ತೆ ಕಾದು ನೋಡೋಣ.. ಸಾಧಾರಣವಾಗಿ ಸುಲಭಕ್ಕೆ ಬಗ್ಗುವವರಲ್ಲ ನಮ್ಮ ರಾಜಕಾರಣಿಗಳು..ಆದರೆ ಈಗಿನ ಜನಶಕ್ತಿಯೂ ಹಾಗೆಯೇ.. ಯಾವೊ೦ದೂ ಹಿ೦ಸೆಯಿಲ್ಲದೆ ಭಾರತೀಯ ಯುವಜನತೆಯ ಪ್ರಸ್ತುತ ಹೋರಾಟ ಸಮಸ್ತ ವಿಶ್ವಕ್ಕೇ ಮಾದರಿಯಾದುದು