ಸಾವಿನ ಸುತ್ತ ಮುತ್ತ, ಶೋಕದ ಕಟು ಹುತ್ತ.. ಈ ನಲವತ್ತೈದು ವರುಷಗಳಲ್ಲಿ ಹಲವಾರು ಬಾರಿ ಅತ್ಯಂತ ಸಮೀಪದಲ್ಲಿಯೇ ಸಾವನ್ನು ಕಂಡಿದ್ದೇನೆ, ಏನೆಲ್ಲಾ ಮಾಡುವೆನೆಂದು "ಛಲದೋಳ್ ದುರ್ಯೋಧನ"ನಂತೆ ಮುನ್ನುಗ್ಗಿ ಏನೇನೋ ಮಾಡಿದರೂ ಸಹಾ ಆ ಸಾವಿನ ಮುಂದೆ ಸೋತಿದ್ದೇನೆ. ಹುಲು ಮಾನವನಾಗಿ ಅಸಹಾಯಕನಾಗಿ ಆ ನಿರ್ದಯಿ ಸಾವಿನ ಮುಂದೆ ನಿಂತಿದ್ದೇನೆ, ನನ್ನ ಸೋಲನ್ನು ಒಪ್ಪಿಕೊಂಡಿದ್ದೇನೆ, ಆ ನಿರ್ದಯಿ ಸಾವಿನ ಗೆಲುವನ್ನು ಕಂಡಿದ್ದೇನೆ, ನನ್ನ ಬಗ್ಗೆ ನಾನೇ ಅಸಹ್ಯ ಪಟ್ಟುಕೊಂಡಿದ್ದೇನೆ. ಅದರ ಕೆಲವೊಂದು ಝಲಕುಗಳನ್ನು ನಿಮ್ಮ ಮುಂದಿಡುತ್ತೇನೆ.
ಸಾವು ೧: ಅಂದು, ೧೯೮೭ನೆಯ ಇಸವಿಯ ಒಂದು ಭಾನುವಾರ, ತಿಪಟೂರಿನ ಕಲ್ಪತರು ಕಾಲೇಜಿನ ಮುಂಭಾಗದ, ಬಿ.ಹೆಚ್.ರಸ್ತೆಯ ಪಕ್ಕದಲ್ಲಿನ ದೊಡ್ಡ ಮೈದಾನದಲ್ಲಿ, ಗಂಜಿ ಹಾಕಿ ನೀಟಾಗಿ ಇಸ್ತ್ರಿ ಮಾಡಿದ್ದ ಖಾಕಿ ಸಮವಸ್ತ್ರ ತೊಟ್ಟು ನಮ್ಮ ಕಾಲೇಜಿನ ಎನ್.ಸಿ;ಸಿ.ತಂಡದ ಮುಖಂಡನಾಗಿ, ೧೬೦ ಜನರ ಸಾಲಿನ ಮುಂದೆ ನಿಂತು ಭಾರತೀಯ ಸೈನ್ಯದ ಮೇಜರ್ ರವೀಂದ್ರ ಪಿಳ್ಳೆ ಕೊಡುತ್ತಿದ್ದ ನಿರ್ದೇಶನಗಳ ಅನುಸಾರವಾಗಿ ಕವಾಯತು ಮಾಡುತ್ತಿದ್ದೆವು. ಸ್ಟೆಲ್ಲಾ ಮೇರಿ ಕಾನ್ವೆಂಟಿನ ಪಕ್ಕದಲ್ಲೇ ಇದ್ದ ಪ್ರಾಟಿಸ್ಟ್ಂಟ್ ಚರ್ಚಿನಲ್ಲಿ ಭಾನುವಾರದ ಪ್ರಾರ್ಥನೆಗೆಂದು ಹೋಗಿದ್ದ "ನನ್ನ ಪ್ರೀತಿಯ ಹುಡುಗಿ" ತನ್ನ ಬೈಸಿಕಲ್ನಲ್ಲಿ ಹಿಂತಿರುಗಿ ಬರುವುದನ್ನೇ ಕಾಯುತ್ತಿದ್ದ ನನ್ನ ಕಣ್ಗಳು ಆ ನೀಳ ಬಿ.ಹೆಚ್.ರಸ್ತೆಯ ಮೇಲೇ ನೆಟ್ಟಿದ್ದವು. ಅವಳು ಆ ಕಡೆಯಿಂದ ಬರುವ ಹೊತ್ತಿಗೆ ಸರಿಯಾಗಿ ನನ್ನ ಜೊತೆಯಲ್ಲೇ ಪ್ರೌಢಶಾಲೆಯಿಂದ ಪ್ರಥಮ ಪದವಿಯವರೆಗೂ ಓದುತ್ತಿದ್ದ ಹರೇಕೃಷ್ಣ ತನ್ನ ಹೊಸ ಬಜಾಜ್ ಸ್ಕೂಟರಿನಲ್ಲಿ ಆ ಕಡೆಯಿಂದ ವೇಗವಾಗಿ ಬಂದು ಶಿವಮೊಗ್ಗೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಟಾಟಾ ಬಸ್ಸಿಗೆ ಧಡಾರಂತ ಢಿಕ್ಕಿ ಹೊಡೆದು ಅಂಗಾತ ಬಿದ್ದು ಬಿಟ್ಟಿದ್ದ. ತಕ್ಷಣ ನಮ್ಮ ಕವಾಯತನ್ನು ಬಿಟ್ಟು ಓಡಿದ ನಾವುಗಳು ಅವನನ್ನು ಒಮ್ಮೆಗೇ ಎತ್ತಿಕೊಂಡು, ಹತ್ತಿರದಲ್ಲೇ ಇದ್ದ ಸರ್ಕಾರಿ ಆಸ್ಪತ್ರೆಗೆ ಓಡಿದೆವು. ಅಲ್ಲಿ ವೈದ್ಯರು ಅವನನ್ನು ಪರೀಕ್ಷಿಸಿ, ತಕ್ಕ ಔಷಧಗಳನ್ನು ನೀಡುವ ಮುಂಚೆಯೇ ಅವನ ಪ್ರಾಣ ಪಕ್ಷಿ ಹಾರಿ ಹೋಗಿತ್ತು, ಬಿಗಿಯಾಗಿ ನನ್ನ ಕೈಗಳನ್ನು ಹಿಡಿದಿದ್ದ ಅವನ ಕೈಗಳಲ್ಲಿನ್ನೂ ಬಿಸಿಯಿತ್ತು, ಆದರೆ ಕಣ್ಗಳು ಮುಚ್ಚಿದ್ದವು, ಹೃದಯ ನಿಂತು ಹೋಗಿತ್ತು. ಇದು ನನ್ನ ಜೀವನದಲ್ಲಿ ನಾ ಕಂಡ ಮೊದಲ ಸಾವು, ಈಗಲೂ ಒಮ್ಮೊಮ್ಮೆ ಆ ಪ್ರಸಂಗ ನೆನಪಾಗುತ್ತದೆ, ತುಂಬಾ ಸಾಧು ಸ್ವಭಾವದ ಅವನ ಆ ದುರಂತ ಸಾವು ಕಾಡುತ್ತದೆ.
ಸಾವು ೨: ಇದು ೧೯೮೮ರಲ್ಲಿ ನಡೆದ ಪ್ರಸಂಗ. ನನ್ನ ಮತ್ತೊಬ್ಬ ಸ್ನೇಹಿತ ಕೃಷ್ಣಮೂರ್ತಿ, ಪದವಿ ಮುಗಿಸಿ, ಯಾವುದೇ ಕೆಲಸ ಸಿಗದೆ, ಚಿಕ್ಕದೊಂದು ಅಂಗಡಿ ಇಟ್ಟುಕೊಂಡಿದ್ದ, ಅನ್ಯ ಜಾತಿಯ ಹುಡುಗಿಯನ್ನು ಪ್ರೇಮಿಸಿ, ಮನೆಯಲ್ಲಿ ವರದಕ್ಷಿಣೆಗಾಗಿ ಹಾತೊರೆಯುತ್ತಿದ್ದ ಅವರಮ್ಮ ಅಪ್ಪ ಒಪ್ಪದಿದ್ದಾಗ "ಮೆಟಾಸಿಡ್" ಒಂದು ಪೂರ್ತಿ ಬಾಟಲನ್ನೇ ಕುಡಿದು ಬಿಟ್ಟಿದ್ದ. ಮೂರು ದಿನ ಸಾವು ಬದುಕಿನ ಮಧ್ಯೆ ಒದ್ದಾಡಿ ಕೊನೆಗೆ ಯಾವುದೇ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದ. ಅಂದು, ಅವನ ಸಾವಿನ ದಿನ, ಅವನು ಮೇಲುಸಿರೆಳೆಯುತ್ತಿದ್ದಾಗ, ಆಗ ಅಲ್ಲಿನ ವೈದ್ಯಾಧಿಕಾರಿಗಳಾಗಿದ್ದ ಶರಭಲಿಂಗಸ್ವಾಮಿಯವರು ಮನೆಯಲ್ಲಿರಲಿಲ್ಲ. ಹುಡುಕಿಕೊಂಡು ಹೋದ ನನಗೆ ಅವರು ಸಿಕ್ಕಿದ್ದು, ಪ್ರವಾಸಿ ಮಂದಿರದ ಮುಂದಿದ್ದ ಕಾಸ್ಮೊಪಾಲಿಟನ್ ಕ್ಲಬ್ಬಿನಲ್ಲಿ, ನಾನು ಬನ್ನಿ ಸಾರ್, ಸಾಯುತ್ತಿರುವ ನನ್ನ ಸ್ನೇಹಿತನನ್ನು ಒಮ್ಮೆ ನೋಡಿ, ಅವನನ್ನು ಉಳಿಸಿ ಕೊಡಿ ಎಂದಾಗ ನಿರ್ಭಾವುಕರಾಗಿ ಅವರು " ಅವನ ಹೊಟ್ಟೆಯೊಳಗಿನ ಸಕಲ ಅಂಗಗಳೂ ಸುಟ್ಟು ಹೋಗಿವೆ, ಅವನು ಉಳಿಯುವುದಿಲ್ಲ ಕಣಯ್ಯಾ" ಅಂದಾಗ ನಖಶಿಖಾಂತ ಉರಿದು ಹೋಗಿ ಬಹುತೇಕ ಅವರನ್ನು ಆ ಕ್ಲಬ್ಬಿನಿಂದ ಆಚೆಗೆ ಎಲ್ಲರೆದುರಿಗೆ ಎಳೆದುಕೊಂಡೇ ಬಂದು ಬಿಟ್ಟಿದ್ದೆ. ನನ್ನ ಉಗ್ರರೂಪಕ್ಕೆ ಸೋತು ಬಂದ ಅವರು ಏನೆಲ್ಲಾ ಚಿಕಿತ್ಸೆ ಮಾಡಿದರೂ ಆ ನನ್ನ ಗೆಳೆಯ ಉಳಿಯಲಿಲ್ಲ, ಅವನು ಸಾಯುವ ಮುನ್ನ ನನ್ನ ಕೈ ಹಿಡಿದು "ಮಂಜು, ನಾನು ತಪ್ಪು ಮಾಡ್ಬಿಟ್ಟೆ ಕಣೋ, ನಾನು ಬದುಕಬೇಕು, ಹೇಗಾದ್ರೂ ಮಾಡಿ ನನ್ನನ್ನು ಉಳಿಸಿಕೊಳ್ಳೋ" ಅಂತ ಹೇಳುತ್ತಲೇ ಪ್ರಾಣ ತ್ಯಾಗ ಮಾಡಿದ್ದ. ಹಿಡಿದ ಕೈಗಳು, ತೆರೆದ ಕಂಗಳು ಹಾಗಯೇ ಇದ್ದವು, ಚೈತನ್ಯವಿರಲಿಲ್ಲ. ಅವನು ಈಗಲೂ ಆಗಾಗ ನನ್ನನ್ನು ಕಾಡುತ್ತಾನೆ.
ಸಾವುಗಳು ೩: ಇದು ೧೯೮೯ರಲ್ಲಿ ನಡೆದ ಪ್ರಸಂಗ, ಗುಬ್ಬಿಯ ಒಂದು ಮುಸ್ಲಿಂ ಕುಟುಂಬದ ಫಾರೂಕ ಎಂಬ ಯುವಕ ತುಮಕೂರು-ತಿಪಟೂರಿನ ನಡುವೆ ಆಗಿನ ಮೆಟಡಾರ್ ವ್ಯಾನ್ ಓಡಿಸುತ್ತಿದ್ದ. ಸರ್ಕಾರಿ ಕೆಂಪು ಬಸ್ಸು ತಿಪಟೂರಿನಿಂದ ತುಮಕೂರು ತಲುಪಲು ಒಂದೂವರೆ ಘಂಟೆ ತೆಗೆದುಕೊಂಡರೆ ಅವನು ತನ್ನ ವ್ಯಾನಿನಲ್ಲಿ ಕೇವಲ ಒಂದು ಘಂಟೆಯಲ್ಲಿ ತಲುಪಿಸುತ್ತಿದ್ದ. ಅವನು ಆ ವ್ಯಾನು ಓಡಿಸುತ್ತಿದ್ದ ರೀತಿ, ತಿರುವುಗಳಲ್ಲಿ ತುಂಬಾ ವಿಚಿತ್ರವಾದ ರೀತಿಯಲ್ಲಿ ಅವನು ತನ್ನ ಸ್ಟಿಯರಿಂಗ್ ವ್ಹೀಲ್ ತಿರುಗಿಸುತ್ತಾ ತನ್ನ ಪ್ರೇಯಸಿಗೆ ಹೇಳುವಂತೆ ಪ್ರಿಯವಾದ ಮಾತುಗಳನ್ನು ಹೇಳುತ್ತಾ ಗಾಡಿ ಓಡಿಸುತ್ತಿದ್ದ ಠೀವಿಗೆ ಮರುಳಾಗಿದ್ದ ನಾವೊಂದಷ್ಟು ಜನ ಯಾವಾಗಲೂ ಅವನ ಗಾಡಿಯಲ್ಲೇ ತುಮಕೂರಿಗೆ ಹೋಗುತ್ತಿದ್ದೆವು. ಅಂದು ತುಮಕೂರಿನ ಬಟವಾಡಿಯ ಅಡಿಕೆ ಮಂಡಿಯೊಂದಕ್ಕೆ ಹೋಗಬೇಕಿದ್ದ ನಾನು ಬಸ್ ನಿಲ್ದಾಣಕ್ಕೆ ಬರುವ ಕೇವಲ ಐದು ನಿಮಿಷ ಮುಂಚೆ ಅವನ ವ್ಯಾನು ಹೊರಟು ಹೋಗಿತ್ತು. ವಿಧಿಯಿಲ್ಲದೆ ಕೆಂಪುಮೂತಿಯ ಸರ್ಕಾರಿ ಬಸ್ಸು ಹತ್ತಿದೆ. ಕೇವಲ ತಿಪಟೂರಿನಿಂದ ಐದು ಕಿ.ಮೀ.ಬರುವಷ್ಟರಲ್ಲಿ ಹಿಂಡಿಸ್ಕೆರೆ ಗ್ರಾಮಕ್ಕಿಂತ ಸ್ವಲ್ಪ ಮುಂಚೆ ಒಂದು ದೊಡ್ಡ ಅಪಘಾತವಾಗಿತ್ತು. ಇಳಿದು ನೋಡಿದರೆ, ಅದು ನಮ್ಮ ಫಾರೂಕನ ವ್ಯಾನು, ೧೫ ಜನ ಕೂರುವ ಕಡೆ ೨೨ ಜನರನ್ನು ತುಂಬಿಕೊಂಡು ತನ್ನ ಎಂದಿನ ವೇಗದಲ್ಲಿ ತುಮಕೂರಿಗೆ ಹೊರಟಿದ್ದ ಫಾರೂಕ, ತನ್ನ ಮುಂದಿದ್ದ ಲಾರಿಯನ್ನು ಹಿಂದಿಕ್ಕುವ ಅವಸರದಲ್ಲಿ, ಎದುರಿನಿಂದ ವೇಗವಾಗಿ ಬರುತ್ತಿದ್ದ ಕೋಲಾರ-ಧರ್ಮಸ್ಥಳ ಬಸ್ಸಿಗೆ ಮುಖಾಮುಖಿಯಾಗಿ ಗುದ್ದಿಬಿಟ್ಟಿದ್ದ. ಆ ವ್ಯಾನಿನಲ್ಲಿದ್ದ ೨೨ ಜನರ ಪೈಕಿ ೧೮ ಜನ ಸ್ಥಳದಲ್ಲಿಯೇ ಸತ್ತಿದ್ದರು. ಆ ಸಿಮೆಂಟು ರಸ್ತೆಯ ಮೇಲೆ ವ್ಯಾನಿನ ತೈಲದ ಜೊತೆಗೆ ರಕ್ತವೂ ಕೋಡಿಯಾಗಿ ಹರಿಯುತ್ತಿತ್ತು. ಸಾಹಸ ಮಾಡಿ ಸುಮಾರು ೧೨ ದೇಹಗಳನ್ನು ಹೊರತೆಗೆದ ನಾನು ಮತ್ತು ಕೆಲವು ಸಹಪ್ರಯಾಣಿಕರು ಅದೆಷ್ಟೇ ಪ್ರಯತ್ನಿಸಿದರೂ ಅವರ ಜೀವ ಉಳಿಯಲಿಲ್ಲ, ನಮ್ಮ ಕಣ್ಮುಂದೆಯೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಆ ಸಾವಿನ ಅನಂತ ಶಕ್ತಿಯ ಮುಂದೆ ನಾವು ತುಂಬಾ ಕುಬ್ಜರಾಗಿ ನಿಂತಿದ್ದೆವು. ಚೈತನ್ಯದ ಚಿಲುಮೆಯಾಗಿ ಆ ವ್ಯಾನು ಓಡಿಸುತ್ತಿದ್ದ ಫಾರೂಕನ ದೇಹ ಲೆಕ್ಕವಿಲ್ಲದಷ್ಟು ಹೋಳುಗಳಾಗಿ ಆ ಗಾಡಿಯ ಅಳಿದುಳಿದ ಅವಶೇಷಗಳ ಜೊತೆ ಅಂಟಿ ಹೋಗಿತ್ತು. ನಂಬಲಸಾಧ್ಯವಾದ ಸಾವಿನ ರಕ್ತದೋಕುಳಿ ಅಲ್ಲಿ ನಡೆದು ಹೋಗಿತ್ತು. ಆಗಾಗ ನೆನಪಾಗಿ ಈ ಪ್ರಸಂಗ ನನ್ನ ನಿದ್ದೆಗೆಡಿಸುವುದುಂಟು.
ಸಾವು ೪: ಚಂಪಾವತಿ, ಹೆಸರಿಗೆ ತಕ್ಕಂತೆ ಆಕರ್ಷಕವಾಗಿದ್ದ ಕೃಷ್ಣ ಸುಂದರಿ. ನಮ್ಮ ಜೊತೆಯಲ್ಲಿ ಪದವಿ ಓದುತ್ತಿದ್ದ ಒಂದು ಮಧ್ಯಮವರ್ಗದ ಕುಟುಂಬದ ಹುಡುಗಿ. ಅವಳು ತರಗತಿಯಲ್ಲಿದ್ದರೆ ಅದೇನೋ ಒಂದು ರೀತಿಯ ಮಿಂಚು ಹರಿದಾಡುತ್ತಿತ್ತು. ಜೊತೆಗಾರ ಅರುಣ ಮತ್ತು ಗೋವಿಂದನ ನಡುವೆ ಅವಳಿಗೆ ಲೈನು ಹೊಡೆಯುವ ವಿಪರೀತ ಸ್ಪರ್ಧೆ ತರಗತಿಯ ಎಲ್ಲರಿಗೂ ಖುಷಿ ಕೊಡುತ್ತಿತ್ತು. ಆದರೆ ಇವರ್ಯಾರ ಪುಂಗಿಗಳಿಗೂ ತಲೆ ಕೆಡಿಸಿಕೊಳ್ಳದೆ, ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡುತ್ತಾ, ತನ್ನ ಸ್ನಿಗ್ಧ ನಗುವಿನಿಂದ ತನ್ನದೇ ಆದ ಛಾಪನ್ನು ಒತ್ತಿದ್ದ ವಿಶಿಷ್ಟ ವ್ಯಕ್ತಿತ್ವ ಅವಳದ್ದು. ಒಂದು ದಿನ, ಪದವಿಯ ಅಂತಿಮ ವರ್ಷದಲ್ಲಿದ್ದಾಗ ಬರ ಸಿಡಿಲಿನಂತೆ ಬಡಿದ ಸುದ್ಧಿ, ಈ ಕೃಷ್ಣ ಸುಂದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂಬುದಾಗಿತ್ತು. ಕಾರೊನೇಷನ್ ರಸ್ತೆಯಲ್ಲಿದ್ದ ಅವರ ಮನೆಗೆ ನಾವೆಲ್ಲ ದೌಡಾಯಿಸಿದೆವು. ಕೆಲವು ಸಾಂಸಾರಿಕ ಕಾರಣಗಳಿಂದ ನೊಂದಿದ್ದ ಅವಳು, ತನ್ನಪ್ಪನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಸಾವಿಗೆ ಶರಣಾಗಿದ್ದಳು. ಸದಾ ಚೈತನ್ಯದ ಚಿಲುಮೆಯಾಗಿದ್ದ ಅವಳ ಪಾರ್ಥಿವ ದೇಹವನ್ನು ನೋಡುವಾಗ ನಮಗೆ ಜಗತ್ತೇ ಬರಿದಾದಂತೆ ಅನ್ನಿಸಿತು. ಅವಳ ಪ್ರೀತಿಗಾಗಿ ಹಂಬಲಿಸಿ ತೀವ್ರವಾಗಿ ಸ್ಪರ್ಧಿಸುತ್ತಿದ್ದ ಇಬ್ಬರೂ ಸ್ನೇಹಿತರು ಅಂದು ಕಣ್ಣೀರು ಸುರಿಸುತ್ತಾ ಅವಳ ಅಂತಿಮ ಸಂಸ್ಕಾರವಾಗುವವರೆಗೂ ಎಲ್ಲದಕ್ಕೂ ಭುಜ ಕೊಟ್ಟು ಅವರ ಮನೆಯಲ್ಲೇ ನಿಂತಿದ್ದರು. ಇದೆಂಥಾ ಸಾವು, ಕೊಡುವುದದೆಂಥಾ ನೋವು!
ಸಾವು ೫: ಮುಕ್ತಾಂಬ, ನನ್ನ ಸಹಪಾಠಿ, ಚಿಕ್ಕನಾಯಕನಹಳ್ಳಿ ಪಕ್ಕದ ಶೆಟ್ಟಿಕೆರೆಯಿಂದ ದಿನಾ ಬಸ್ಸಿನಲ್ಲಿ ಕಾಲೇಜಿಗೆ ಬರುತ್ತಿದ್ದಳು. ಸದಾ ಓದಿನಲ್ಲಿ ಚುರುಕು, ಎಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ಸದಾ ಮುಂದು. ಎಲ್ಲೇ ಚರ್ಚಾ ಸ್ಪರ್ಧೆಗಳಿರಲಿ, ಪ್ರಬಂಧ, ಸ್ವರಚಿತ ಕವನ ಸ್ಪರ್ಧೆಗಳಿರಲಿ, ಅವಳು ಖಂಡಿತ ಬರುತ್ತಿದ್ದಳು, ಭಾಗವಹಿಸುತ್ತಿದ್ದಳು, ಒಂದಲ್ಲ ಒಂದು ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದಳು. ಹಲವಾರು ಬಾರಿ ಚರ್ಚಾ ಸ್ಪರ್ಧೆಗಳಲ್ಲಿ ನಾವಿಬ್ಬರೂ ಪರ-ವಿರೋಧವಾಗಿ ವಾದಿಸುತ್ತಿದ್ದೆವು, ಕೆಲವೊಂದು ಚರ್ಚೆಗಳಲ್ಲಿ ನನ್ನ ಕೈ ಮೇಲಾಗಿ ಗೆಲುವು ನನ್ನದಾದಾಗ ಬಳಿ ಬಂದು ನನ್ನನ್ನು ಮುಕ್ತ ಕಂಠದಿಂದ ಪ್ರಶಂಸಿಸುತ್ತಿದ್ದಳು. ಒಬ್ಬ ಉತ್ತಮ ಸ್ನೇಹಿತೆಯಾಗಿದ್ದಳು, ನನ್ನ ಮೀನಾಳ ಪ್ರೇಮಕಥೆಯ ಬಗ್ಗೆ ಅರಿತಿದ್ದ ಅವಳು ನಮಗೆ ಯಾವಾಗಲೂ ಶುಭ ಹಾರೈಸುತ್ತಿದ್ದಳು. ಸಹಪಾಠಿ ಯುವಕರು ಮಾಡುತ್ತಿದ್ದ ಯಾವ ತರಲೆಗಳಿಗೂ ಗಮನ ಕೊಡದೆ ತನ್ನ ವಿದ್ಯಾಭ್ಯಾಸದ ಬಗ್ಗೆ ಅತಿ ಹೆಚ್ಚು ಗಮನ ಕೊಡುತ್ತಿದ್ದಳು. ಬಹುಶ: ಅಂದು, ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಓದಿದ ಹೆಗ್ಗಳಿಕೆ ಅವಳಿಗೆ ಸಲ್ಲುತ್ತದೆ. ಇಂತಹ ವಿದ್ಯಾದಾಹಿಯಾಗಿದ್ದವಳು, ಇದ್ದಕ್ಕಿದ್ದಂತೆ ಒಮ್ಮೆ ಸಾವಿಗೆ ಶರಣಾಗಿ ಬಿಟ್ಟಿದ್ದಳು. ಮನೆಯಲ್ಲಿನ ಅಸಹಜ ವಾತಾವರಣವೇ ಅವಳ ಸಾವಿಗೆ ಕಾರಣವಾಯಿತು ಎಂದು ಹಲವು ಸ್ನೇಹಿತರು ನಂತರ ನಮಗೆ ತಿಳಿಸಿದ್ದರು. ಸುದ್ಧಿ ತಿಳಿದ ನಾವುಗಳು ಶೆಟ್ಟಿಕೆರೆಗೆ ತಲುಪುವ ವೇಳೆಗಾಗಲೇ ಅವಳ ಅಂತ್ಯ ಸಂಸ್ಕಾರ ಮುಗಿದು ಹೋಗಿತ್ತು. ಮಿಂಚಿನ ಬಳ್ಳಿಯಂತೆ ನಮ್ಮ ಸಹಪಾಠಿಯಾಗಿದ್ದವಳ ಬದುಕು ಮುಗಿದು ಹೋಗಿತ್ತು. ಸಾವು, ಮತ್ತೊಮ್ಮೆ ನಮ್ಮ ಮುಂದೆ ಬೃಹದಾಕಾರವಾಗಿ ನಿಂತು ವಿಕಟಾಟ್ಟಹಾಸ ಮಾಡಿತ್ತು.
ಸಾವು ೬: ಚಂದ್ರಪ್ಪ, ನನ್ನ ಅಕ್ಕನ ಗಂಡ, ಅಪ್ಪನ ದುಡುಕುತನಕ್ಕೆ ಬಲಿಯಾಗಿ ಅಕ್ಕನಿಂದ, ತನ್ನ ಮಕ್ಕಳಿಂದ ಬೇರಾಗಿ ಬದುಕುತ್ತಿದ್ದ. ಅವರಿಬ್ಬರನ್ನು ಮತ್ತೆ ಒಂದಾಗಿಸಲು ನನ್ನ ಶಕ್ತಿ ಮೀರಿ ನಾನು ಪ್ರಯತ್ನಿಸುತ್ತಿದ್ದೆ. ತಿಂಗಳಿಗೊಮ್ಮೆ ಅಥವಾ ಎರಡು ಸಲ ಅವನೂರಿಗೆ ಹೋಗಿ, ಅವನೊಂದಿಗೆ ಕುಳಿತು, ಅವನ ಮನದ ಮಾತುಗಳನ್ನು ಕೇಳಿ, ಸಾಧ್ಯವಾದಷ್ಟು ಸಾಂತ್ವನದ ಮಾತುಗಳನ್ನು ಹೇಳಿ ಬರುತ್ತಿದ್ದೆ. ನನ್ನ ಭೇಟಿ, ಹೆಂಡತಿ ಮಕ್ಕಳಿಂದ ದೂರಾಗಿ, ತನ್ನವರಿಂದಲೇ ಅವಹೇಳನಕ್ಕೆ ಗುರಿಯಾಗಿ, ಮಾನಸಿಕವಾಗಿ ಜರ್ಝರಿತನಾಗಿದ್ದ ಆ ಮನುಷ್ಯನಿಗೆ ಅಷ್ಟಿಷ್ಟು ನೆಮ್ಮದಿ ಕೊಡುತ್ತಿತ್ತು. ತನ್ನ ಒಂಟಿತನವನ್ನು ಮರೆಯಲು, ಮನದ ನೋವನ್ನು ಇಂಗಿಸಲು, ಚಂದ್ರಪ್ಪ ಕುಡಿತದ ದಾಸನಾಗಿ ಬಿಟ್ಟಿದ್ದ. ಹಾಗೆಯೇ ಒಮ್ಮೆ ವಿಪರೀತ ಕುಡಿದು ಮಲಗಿದವನು ಮತ್ತೆ ಮೇಲೇಳಲೇ ಇಲ್ಲ, ಇಲ್ಲಿನ ವ್ಯಾಪಾರ ಮುಗಿಸಿ ಅಪಾರ ಕೊರಗಿನೊಂದಿಗೆ ಸಾವಿನರಮನೆಗೆ ನಡೆದು ಬಿಟ್ಟಿದ್ದ. ವಿಷಯ ತಿಳಿದು ಆತುರಾತುರವಾಗಿ ಅವನೂರಿಗೆ ಧಾವಿಸಿದ ನಾನು ಮುಂದೆ ನಿಂತು ಅಂತ್ಯಸಂಸ್ಕಾರಗಳನ್ನು ಮುಗಿಸಿ ಬಂದಿದ್ದೆ. ವಿಷಯ ತಿಳಿಸಿ, ಬರಬಹುದೆಂದು ಸಂಜೆಯವರೆಗೂ ಕಾದರೂ ಅಕ್ಕನಾಗಲಿ, ಅವಳ ಮಕ್ಕಳಾಗಲಿ, ಅವರನ್ನು ತೊರೆಸಿದ್ದ ಅಪ್ಪನಾಗಲಿ, ಕೊನೆ ಪಕ್ಷ ಅವನ ಅಂತಿಮ ದರ್ಶನಕ್ಕೂ ಬರಲಿಲ್ಲ. ಇಲ್ಲಿಯೂ ಸಾವು ಗೆದ್ದಿತ್ತು, ಕ್ರೂರವಾಗಿ ನಕ್ಕಿತ್ತು.
ಸಾವು ೭: ಮಂಜುಳ, ನನ್ನಕ್ಕ, ಹೆಸರಿಗೆ ತಕ್ಕಂತೆ ಮಾಸದ ಮುಗುಳ್ನಗೆಯೊಂದಿಗೆ ಅಪಾರ ಜೀವನಪ್ರೀತಿಯಿಂದ ಬದುಕುತ್ತಿದ್ದವಳು. ಗಂಡನೊಂದಿಗಿನ ಭಿನ್ನಾಭಿಪ್ರಾಯ, ಅಪ್ಪನ ಸಂಪೂರ್ಣ ಬೆಂಬಲ, ಸರ್ಕಾರಿ ಕೆಲಸ, ಸಹೋದ್ಯೋಗಿಗಳ ಸಹಕಾರ, ಕುಹಕ, ವಿಷಾದಗಳೆಲ್ಲವನ್ನೂ ಅನುಭವಿಸುತ್ತ ಬದುಕಿ, ಕೊನೆಗೊಂದು ದಿನ, ತನ್ನಿಬ್ಬರು ಹೆಣ್ಣು ಮಕ್ಕಳನ್ನು ಅನಾಥರಾಗಿಸಿ, ಆತ್ಮಹತ್ಯೆಗೆ ಶರಣಾಗಿದ್ದಳು. ಅಂದು ಗೆಳೆಯ ಗಂಗಾಧರನನ್ನು ನೋಡಲು ಹುಳಿಯಾರಿಗೆ ಹೋಗಿ ಅವನು ಸಿಕ್ಕದಿದ್ದಾಗ ಚಿಕ್ಕನಾಯಕನಹಳ್ಳಿಯಲ್ಲಿದ್ದ ಅಕ್ಕನ ಮನಗೆ ಬಂದಿದ್ದೆ. ಬೀಗ ಹಾಕಿದ್ದ ಅಕ್ಕನ ಮನೆಯ ಮುಂದೆ ಮನೆಯ ಮಾಲೀಕ ಗೋವಿಂದಪ್ಪ ಮತ್ತವರ ಮಕ್ಕಳು ವಿಷಣ್ಣ ವದನರಾಗಿ ನಿಂತಿದ್ದರು. ನನ್ನನ್ನು ಕಂಡೊಡನೆ ಅವರಲ್ಲಿ ಸ್ವಲ್ಪ ಗೆಲುವು ಕಂಡು ಬಂದು "ಸಧ್ಯ ಬಂದಿರಲ್ಲ" ಎಂದವರಿಗೆ ’ಅಕ್ಕ ಎಲ್ಲಿ’ ಅಂದರೆ ಪೂರಾ ಬೇಸ್ತು ಬಿದ್ದಿದ್ದರು. ಅವರಾಗಲೇ ಎಲ್ಲರಿಗೂ ಅಕ್ಕನ ಸಾವಿನ ಸುದ್ಧಿಯನ್ನು ಫೋನ್ ಮೂಲಕ ತಿಳಿಸಿ ನಮ್ಮವರ ನಿರೀಕ್ಷೆಯಲ್ಲಿದ್ದರು. ಆದರೆ ಬೆಳಿಗ್ಗೆಯೇ ಬೆಂಗಳೂರಿನಿಂದ ಹುಳಿಯಾರಿಗೆ ಹೋಗಿದ್ದ ನನಗೆ ಆ ವಿಷಯವೇ ಗೊತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಅಕ್ಕನ ಮೃತದೇಹವನ್ನು ನೋಡಿ ಸ್ತಂಬೀಭೂತನಾಗಿ ಬಿಟ್ಟಿದ್ದೆ. ಎಲ್ಲರನ್ನೂ ಛೇಡಿಸುತ್ತಾ, ತಾನು ಮಾಡುವುದೆಲ್ಲ ಸರಿ ಎಂದೇ ವಾದಿಸುತ್ತಾ ಅಪಾರ ಆತ್ಮ ವಿಶ್ವಾಸದ ಪ್ರತೀಕದಂತಿದ್ದ ಅವಳ ಸಾವು, ನನಗೆ ನಂಬಲಸಾಧ್ಯವಾಗಿತ್ತು. ಆದರೂ ಅದು ತಣ್ಣಗಿನ ನಿಜವಾಗಿತ್ತು. ಸಾವು, ಮತ್ತೊಮ್ಮೆ ಗೆದ್ದಿತ್ತು. ತನ್ನ ವಿಶ್ವರೂಪ ತೋರಿಸಿತ್ತು.
ಸಾವು ೮: ಮೇಲಿನೆಲ್ಲ ಪ್ರಸಂಗಗಳಿಗಿಂತ ಮನಸ್ಸಿಗೆ ಅತಿ ಹೆಚ್ಚು ನೋವನ್ನು ಕೊಟ್ಟು ನನ್ನನ್ನು ಅಕ್ಷರಶ: ದಿವಾಳಿಯನ್ನಾಗಿಸಿದ್ದು ನನ್ನ ಅಮ್ಮನ ಸಾವು. ದಾದಿಯಾಗಿ ಮುಮ್ಮತ್ತು ವರ್ಷ ಕೆಲಸ ಮಾಡಿ ನಿವೃತ್ತರಾಗಿ ನೆಮ್ಮದಿಯ ಬದುಕಿನ ಕನಸು ಕಂಡಿದ್ದ ಅಮ್ಮನಿಗೆ ಸಕ್ಕರೆ ಖಾಯಿಲೆ "ನಿಗೂಢ ಹಂತಕ"ನಾಗಿ ಕಾಡಿತ್ತು. ತನ್ನ ಅತ್ಯಂತ ಉನ್ನತ ಮಟ್ಟಕ್ಕೇರಿದ್ದ ಆ ಖಾಯಿಲೆ ಅಮ್ಮನ ಎರಡೂ ಮೂತ್ರ ಪಿಂಡಗಳನ್ನು ಘಾಸಿಗೊಳಿಸಿ, ಅವರನ್ನು ಜರ್ಝರಿತಗೊಳಿಸಿತ್ತು. ವಿಕ್ಟೋರಿಯಾ ಆಸ್ಪತ್ರೆಯ ಮೂತ್ರಪಿಂಡ ಖಾಯಿಲೆಗಳ ಖ್ಯಾತ ವೈದ್ಯ ಡಾ.ಕೃಷ್ಣಮೂರ್ತಿಯವರು ಅಮ್ಮನನ್ನು ಪರೀಕ್ಷಿಸಿದ ಮೊದಲ ದಿನವೇ ಹೇಳಿ ಬಿಟ್ಟರು, " ಮಂಜು, ಸಕ್ಕರ್ ಖಾಯಿಲೆ ಅಂತಿಮ ಮಟ್ಟಕ್ಕೆ ಮುಟ್ಟಿ ಅವರ ಎರಡೂ ಮೂತ್ರಪಿಂಡಗಳು ತಮ್ಮ ಕೆಲಸ ನಿಲ್ಲಿಸಿವೆ. ಈ ಖಾಯಿಲೆ ಇರುವವರಿಗೆ ಮೂತ್ರಪಿಂಡ ಕಸಿ ಮಾಡಲೂ ಆಗುವುದಿಲ್ಲ. ಅವರು ಅಬ್ಬಬ್ಬಾ ಅಂದರೆ ಇನ್ನಾರು ತಿಂಗಳು ಬದುಕಬಹುದು. ಇರುವವರೆಗೆ ಅವರನ್ನು ಚೆನ್ನಾಗಿ ನೋಡಿಕೋ, ಏನೂ ಮಾಡಲು ಸಾಧ್ಯವಿಲ್ಲ" ಅಂದವರ ಮುಖ ನಿರ್ಭಾವುಕವಾಗಿತ್ತು. ಅಲ್ಲಿಂದ ಅಮ್ಮ ಸುಮಾರು ಎಂಟು ತಿಂಗಳು ಆ ಆಸ್ಪತ್ರೆಯ ವಾಸಿಯಾಗಿದ್ದರು. ಅವರು ಅನುಭವಿಸಿದ ನೋವು ಅಪಾರ, ಪ್ರತಿದಿನ ಅವರ ಚಿಕಿತ್ಸೆಗೆಂದು ಖರ್ಚಾದ ಹಣ ಅಪಾರ. ನನಗೆ ಬರುತ್ತಿದ್ದ ಸಂಬಳದಲ್ಲಿ ಇತ್ತ ಸಂಸಾರದ ಖರ್ಚುಗಳನ್ನು ಸರಿದೂಗಿಸಲಾಗದೆ, ಅತ್ತ ಅಮ್ಮನ ಚಿಕಿತ್ಸೆಗೂ ಹಣ ಹೊಂದಿಸಲಾಗದೆ ನಾನು ಪಟ್ಟ ಪಾಡು, ನನ್ನ ವೈರಿಗೂ ಬೇಡ. ಸಿಕ್ಕಲ್ಲೆಲ್ಲಾ ಸಾಲ ಮಾಡಿ, ಹೇಗಾದರೂ ಮಾಡಿ ಅಮ್ಮನನ್ನು ಉಳಿಸಿಕೊಳ್ಳಲೇ ಬೇಕೆಂದು ಪಟ್ಟು ಹಿಡಿದು ವೈದ್ಯರು ಹೇಳಿದ ಚಿಕಿತ್ಸೆಗಳನ್ನೆಲ್ಲಾ ಮಾಡಿಸಿದರೂ, ಯಾವುದೂ ಫಲ ನೀಡಲಿಲ್ಲ. ಕೊನೆಗೊಮ್ಮೆ ಅಮ್ಮ, ನಾನು ಮನೆಗೆ ಬಂದಿದ್ದಾಗ, ಅಪ್ಪನ ಭುಜಕ್ಕೊರಗಿ ಹಾಗೇ ಇಹಲೋಕ ತ್ಯಜಿಸಿದ್ದರು. ಮನೆಯಲ್ಲಿ ಹೆಂಡತಿ ಬಿಸಿಬಿಸಿಯಾಗಿ ಮಾಡಿಟ್ಟಿದ್ದ ರಾಗಿ ಮುದ್ದೆಯ ಎರಡು ತುತ್ತು ನುಂಗಿ ಮೂರನೆಯ ತುತ್ತು ಮುರಿಯುತ್ತಿದ್ದಾಗ, ಅಪ್ಪನಿಂದ ನನ್ನ ಮೊಬೈಲಿಗೆ ಕರೆ ಬಂತು, ಅಮ್ಮನ ಸಾವಿನ ಸುದ್ಧಿ ಬಿತ್ತರಿಸಿತು. ಊಟವನ್ನು ಹಾಗೆಯೇ ಬಿಟ್ಟು, ಗೆಳೆಯ ಸುರೇಶನಲ್ಲಿ ಮತ್ತೊಂದೈದು ಸಾವಿರ ಸಾಲ ಮಾಡಿ, ಹೆಂಡತಿ ಮಕ್ಕಳೊಡನೆ ಸೀದಾ ಆಸ್ಪತ್ರೆಗೆ ಹೋಗಿದ್ದೆ, ಅಮ್ಮನ ಕ್ರಿಯಾ ಕರ್ಮಗಳನ್ನೆಲ್ಲ ಮುಗಿಸಿ ಮತ್ತೆ ಮನೆಗೆ ಮರಳಿದಾಗ ಮನವೆಲ್ಲ ಖಾಲಿ ಖಾಲಿ, ಆ ಅಮ್ಮನ ಸ್ಥಾನ ಮತ್ತೆಂದೂ ಯಾರಿಂದಲೂ ತುಂಬಲಾಗದೆ ಬರಿದಾಗಿತ್ತು. ನನ್ನೆಲ್ಲ ಪ್ರಯತ್ನಗಳು ಆ ಸಾವಿನ ಮುಂದೆ ವ್ಯರ್ಥವಾಗಿದ್ದವು. ಸಾವು ತನ್ನ ವಿಜಯೋತ್ಸವ ಮುಂದುವರೆಸಿತ್ತು. ನನ್ನ ಅಸಹಾಯಕತೆಯನ್ನು ಎತ್ತಿ ತೋರಿಸಿತ್ತು.
No comments:
Post a Comment