Saturday, December 31, 2016

ಎಲ್ಲರಿಗೂ ಶುಭವಾಗಲಿ!

ಹೊಸನೀರು ಬಂದಾಗ
ಹಳೆಯ ನೀರು ಕೊಚ್ಚಿ
ಹೋಗುವ ತೆರದಲಿ
ಹಳೆಯ ವರ್ಷದ
ಹಳೆಯ ಗಾಯಗಳು
ಮನದಾಳದ ನೋವು
ಹೃದಯ ಹಿಂಡುವ ಬೇನೆ
ನಿರಾಶೆ, ವೈಫಲ್ಯ, ಅಸಹನೆ
ಎಲ್ಲವೂ ತೊಡೆದು ಹೋಗಿ
ಹೊಸಬೆಳಕಿನ ಬೆಳ್ಳಿಕಿರಣ
ಮೂಡಿಬರಲಿ ನಗುನಗುತಾ
ನಗುವರಳಿಸಲಿ ಜಗದೆಲ್ಲಾ
ಸ್ನೇಹಜೀವಿಗಳ ಮೊಗದಲ್ಲಿ
ಹೊಸವರ್ಷ ಹೊತ್ತುತರಲಿ
ಹೊಸ ಹೊಸ ಹೊಸತುಗಳ
ಹರುಷ ತುಂಬಿದ ಕ್ಷಣಗಳ
ಶುಭವಾಗಲಿ ಎಲ್ಲರಿಗೂ
ಈಗ ಬೇಡ ಎನ್ನುವವರಿಗೂ
ಯುಗಾದಿಯಂದು ಬರಲಿರುವ
ಹರ್ಷ ಸಂತೋಷ ಇಂದೇ ಬರಲಿ
ಇದೂ ಇರಲಿ ಅದೂ ಇರಲಿ
ನಮ್ಮತನದ ಜೊತೆ ಜೊತೆಗೆ
ವಿಶ್ವಮಾನವತ್ವವೂ ಇರಲಿ! 
ಕೊನೆಗೊಂದೇ ಮನದಾಶಯ 
ಎಲ್ಲರಿಗೂ ಶುಭವಾಗಲಿ! :-) :-) 


Friday, December 23, 2016

ನೋಡೇ ತಿಮ್ಮಿ ತಾವ್ರೆ ಹುವ್ವ,,,,,,,,,,,,,,


ನೋಡೇ ತಿಮ್ಮಿ ತಾವ್ರೆ ಹುವ್ವ 
ಕೆಟ್ಟ ಕೆಸ್ತ್ರೀನಾಗೆ ಅರಳೈತೆ!

ನಿನ್ನ ನೋಡಿ ನಿನ್ ಸಂಕ್ಟ ನೋಡಿ 
ನಗ್ತಾ ನಗ್ತಾ ಏನೋ ಹೇಳೈತೆ!

ಕೆಸ್ತ್ರೀನಾಗೆ ಇದ್ರೂ ನಾನು 
ಲೋಕ ನನ್ನ ಮೆಚ್ಚತೈತೆ !

ಬೇರು ಒಳ್ಗೆ ಕೆಸ್ತ್ರೀನಾಗೆ 
 ಮ್ಯಾಲೆ ನಾನು ಸುಂದ್ರಿ ನೋಡೇ! 

ಲೋಕದ್ ಕಣ್ಣಿಗ್ ಕಾಣೋದೆಲ್ಲ 
ಮ್ಯಾಲಿನ್ ಥಳ್ಕು ಬಳ್ಕು ಕಣೆ! 

ಒಳ್ಗಿನ್ ಹುಳ್ಕು ಯಾರ್ಗು ಬ್ಯಾಡ
ಮ್ಯಾಲಿನ್ ಬಣ್ಣ ಚಂದ ಕಣೆ!

ನಿನ್ ನೋವು ದುಃಖ ಏನೇ ಇರ್ಲಿ 
ನಗ್ತಾ ಬಾಳ್ವೆ ಮಾಡ್ಬೇಕ್ ತಿಮ್ಮಿ !

ಹುವ್ವ ಹೇಳೋ ಕಥೆಯಾ ಕೇಳಿ 
ನೀ ನಗ್ತಾ ಇರೇ ತಿಮ್ಮಿ!

 ನೋಡೇ ತಿಮ್ಮಿ ತಾವ್ರೆ ಹುವ್ವ 
ಕೆಟ್ಟ ಕೆಸ್ತ್ರೀನಾಗೆ ಅರಳೈತೆ!

ನಿನ್ನ ನೋಡಿ ನಿನ್ ಸಂಕ್ಟ ನೋಡಿ 
ನಗ್ತಾ ನಗ್ತಾ ಏನೋ ಹೇಳೈತೆ!


(ಚಿತ್ರ: ೩ ಕನ್ನಡ ಕಥೆ ಕವಿತೆ ಗುಂಪಿನಿಂದ)

Tuesday, December 13, 2016

ತಾರೆ ಆದ್ಳು ತಿಮ್ಮಿ!

ಬಿಂದ್ಗೆ ತುಂಬಾ ಹುಳಿ ಹೆಂಡ
ತುಂಬ್ಕೊಂಡ್ ಬಂದ್ಲು ತಿಮ್ಮಿ!
ಕೋಳಿ ಕಾಲ್ಗೆ ಖಾರ ಹಚ್ಚಿ
ಸುಟ್ಕೊಂಡ್ ತಂದ್ಳು ತಿಮ್ಮಿ!
ಕಾಲಂದ್ಗೆ ಚಿಮ್ಕೊಂಡ್ ಚಿಮ್ಕೊಂಡ್
ನಡ್ಕೊಂಡ್ ಬಂದ್ಲು ತಿಮ್ಮಿ!
ಎದ್ಯಾ ಬ್ಯಾಸ್ರಾ ಓಡ್ಸೋಕ್ಕಂತ
ಹಾಡ್ಕೊಂಡ್ ಬಂದ್ಲು ತಿಮ್ಮಿ!
ಬದ್ಕಲ್ ಹಸ್ರು ಚಿಗುರ್ಸಕ್ಕಂತ
ನಕ್ಕೊಂಡ್ ಬಂದ್ಲು ತಿಮ್ಮಿ!
ತಿಮ್ಮನ್ ಬಾಳಿನ್ ಆಕಾಶ್ದಾಗೆ
ಚೆಲ್ವಿನ್ ತಾರೆ ಆದ್ಳು ತಿಮ್ಮಿ!
ತಾರೆ ಆದ್ಳು ತಿಮ್ಮಿ!
ತಾರೆ ಆದ್ಳು ತಿಮ್ಮಿ!
ತಾರೆ ಆದ್ಳು ತಿಮ್ಮಿ!
ತಾರೆ ಆದ್ಳು ತಿಮ್ಮಿ!
(ಚಿತ್ರ: ಅಂತರ್ಜಾಲದಿಂದ)

Saturday, November 19, 2016

ವಿಶ್ವ ಪುರುಷರ ದಿನ!!



ತೇದು ತೇದು ಉಳಿದ ಗಂಧ,
ಉರಿದು ಉಳಿದ ಕರಕಲು ಬತ್ತಿ,
ದೀಪದಡಿಯೇ ಉಳಿದ ಕತ್ತಲು,
ಮಳೆ ನಿಂತರೂ ತೊಟ್ಟಿಕ್ಕುವ ಹನಿ,
ಅಪಾರ ನೋವಿನ ಹಿಂದಿನ ನಗು!

ತನ್ನವರ ಏಳಿಗೆಗೆ ಬಿದಿರಿನ ಏಣಿ,
ಅವರ ಆಶ್ರಯಕೆ ತಂಪು ಛಾವಣಿ,
ಅವರ ಅಳಲಿಗೆ ಇಂಪು ಲಾವಣಿ,
ಕಟು ಬಾಣಗಳ ತಡೆವ ಗುರಾಣಿ,
ಒಬ್ಬನೇ ಕೊರಗುವ ಒಂಟಿ ಪ್ರಾಣಿ

Tuesday, November 15, 2016

ಪೂರ್ಣ ಚಂದ್ರನ ಮರೆಯಲ್ಲಿ,,,,,,,,,,,,,,,,,,,,,


ಅಂದು ಬಾಲ್ಯದಲ್ಲಿ ಅಮ್ಮ ಕೈ ತುತ್ತು ತಿನಿಸುವಾಗ  
ಕೂಗಿ ಕರೆಯುತ್ತಿದ್ದಳು ಅಲ್ಲಿ ನೋಡು  ಚಂದಮಾಮ
ಒಲವಿನಿಂದ ಮುದ್ದಾಡಿ ತೋರಿಸುತ್ತಿದ್ದಳು ಆಗಸದ 
ಕೈಗೆಟುಕದ ಎಲ್ಲಿ ಹೋದರಲ್ಲಿ ಬರುತ್ತಿದ್ದ ಚಂದಮಾಮನ!

ನಾ ಕೈ ಬೀಸಿದಾಗ ಪುಟ್ಟ ಕೈಗೆ ಸಿಗದೇ ಓಡುತ್ತಿದ್ದ ಚಂದ್ರಮ
ಅವ ಬೇಕೆಂದು ಅಳುವಾಗ ಅಮ್ಮನ ಸಿಹಿ ಮುತ್ತು ಮರೆಸಿತ್ತು 
ಹೊಟ್ಟೆ ತುಂಬಿಸಿತ್ತು ಆ ಕೈ ತುತ್ತು ಸಿಗದಿದ್ದ ಚೋರ ಚಂದಿರ 
ಅತ್ತರೂ ನಕ್ಕರೂ ಕೈಗೆ ಸಿಗದೇ ಓಡುತ್ತಲೇ ಇದ್ದ ಆ ಚಕೋರ!

ಅಮ್ಮ ದೂರಾದಾಗ ಅಕ್ಕನಾದಳು ನನ್ನ ಎರಡನೆಯ ಅಮ್ಮ 
ಸೊಂಟದ ಮೇಲೆನ್ನ ಎತ್ತಿ ಆಡಿಸುತ ತೋರಿದಳು ಚಂದ್ರಮನ 
ಒಲ್ಲೆನೆಂದ ತುತ್ತ ಬಾಯ್ತುಂಬಾ ತುಂಬಿಸಿ ಪೋಷಿಸಿದಳವಳಂದು 
ಓಡುವ ಚಂದಿರನಿಗೆ ಕೈ ಚಾಚುತ್ತಲೇ ದೊಡ್ಡವನಾದೆ ನಾನು !

ಅಂದು ಕೈಗೆ ಸಿಗದ ಆ ಚಂದ್ರಮ ಇಂದು ಸಿಕ್ಕಿದ ನನ್ನ ಕೈಯ್ಯಲ್ಲಿ 
ಮನ ಖುಷಿಯಾಗಿ ಅವನ ಶೀತಲ ಕಿರಣಗಳ ಸವಿಯುತ ಕಡಲ 
ತೀರದ ತಂಗಾಳಿಯಲಿ ಮೈ ಮನಗಳು ಹೊಯ್ದಾಡುತಿರಲು 
ಆ ಸುಂದರ ಚಂದ್ರಮನ ಅಂದವ ಮನತುಂಬಿ ಸವಿಯುತಿರಲು!

ಎನ್ನ ಕಂಗಳು ಹುಡುಕುತಿದ್ದವು ಆ ಚಂದ್ರಮನ ಅಕ್ಕಪಕ್ಕದಲ್ಲಿ 
ಕಾಣಬಹುದೇನೋ ಅವನ ಸನಿಹದಲ್ಲಿ ಅಮ್ಮ ಅಕ್ಕನ ನೆರಳು 
ಅವರ ವಾತ್ಸಲ್ಯದ ಪ್ರೀತಿಯ ಸವಿಯಾದ ಅಕ್ಕರೆಯ ಛಾಯೆ 
ಸ್ವಾರ್ಥಿ ಚಂದ್ರಮ ಅವನೊಬ್ಬನೇ ಇದ್ದ ನಗುತ ಆಗಸದಲ್ಲಿ!

ಕಾಣದ ನಕ್ಶತ್ರಗಳ ರಾಶಿಯಲ್ಲಿ ಉಜ್ವಲ ಬೆಳಕಿನ ನಡುವಿನಲ್ಲಿ 
ಹುಡುಕಿ ಸೋತಿದ್ದವು ಕಂಗಳು ಅರಿಯದೆ ಉದುರಿದ್ದವು ಕಂಬನಿ 
ಅಲ್ಲಿ ಅಮ್ಮನೂ ಇರಲಿಲ್ಲ ಅಕ್ಕನೂ ಇರಲಿಲ್ಲ ಅವರ ಪ್ರೀತಿಯೂ 
ನೀಲ ನಿರಭ್ರ ಆಗಸದಲ್ಲಿ ಬರಿ ಚಂದಿರನದ್ದೇ ಪ್ರಕಾಂಡ ಪ್ರಕಾಶ!!