ಅಂದು ಬಾಲ್ಯದಲ್ಲಿ ಅಮ್ಮ ಕೈ ತುತ್ತು ತಿನಿಸುವಾಗ
ಕೂಗಿ ಕರೆಯುತ್ತಿದ್ದಳು ಅಲ್ಲಿ ನೋಡು ಚಂದಮಾಮ
ಒಲವಿನಿಂದ ಮುದ್ದಾಡಿ ತೋರಿಸುತ್ತಿದ್ದಳು ಆಗಸದ
ಕೈಗೆಟುಕದ ಎಲ್ಲಿ ಹೋದರಲ್ಲಿ ಬರುತ್ತಿದ್ದ ಚಂದಮಾಮನ!
ನಾ ಕೈ ಬೀಸಿದಾಗ ಪುಟ್ಟ ಕೈಗೆ ಸಿಗದೇ ಓಡುತ್ತಿದ್ದ ಚಂದ್ರಮ
ಅವ ಬೇಕೆಂದು ಅಳುವಾಗ ಅಮ್ಮನ ಸಿಹಿ ಮುತ್ತು ಮರೆಸಿತ್ತು
ಹೊಟ್ಟೆ ತುಂಬಿಸಿತ್ತು ಆ ಕೈ ತುತ್ತು ಸಿಗದಿದ್ದ ಚೋರ ಚಂದಿರ
ಅತ್ತರೂ ನಕ್ಕರೂ ಕೈಗೆ ಸಿಗದೇ ಓಡುತ್ತಲೇ ಇದ್ದ ಆ ಚಕೋರ!
ಅಮ್ಮ ದೂರಾದಾಗ ಅಕ್ಕನಾದಳು ನನ್ನ ಎರಡನೆಯ ಅಮ್ಮ
ಸೊಂಟದ ಮೇಲೆನ್ನ ಎತ್ತಿ ಆಡಿಸುತ ತೋರಿದಳು ಚಂದ್ರಮನ
ಒಲ್ಲೆನೆಂದ ತುತ್ತ ಬಾಯ್ತುಂಬಾ ತುಂಬಿಸಿ ಪೋಷಿಸಿದಳವಳಂದು
ಓಡುವ ಚಂದಿರನಿಗೆ ಕೈ ಚಾಚುತ್ತಲೇ ದೊಡ್ಡವನಾದೆ ನಾನು !
ಅಂದು ಕೈಗೆ ಸಿಗದ ಆ ಚಂದ್ರಮ ಇಂದು ಸಿಕ್ಕಿದ ನನ್ನ ಕೈಯ್ಯಲ್ಲಿ
ಮನ ಖುಷಿಯಾಗಿ ಅವನ ಶೀತಲ ಕಿರಣಗಳ ಸವಿಯುತ ಕಡಲ
ತೀರದ ತಂಗಾಳಿಯಲಿ ಮೈ ಮನಗಳು ಹೊಯ್ದಾಡುತಿರಲು
ಆ ಸುಂದರ ಚಂದ್ರಮನ ಅಂದವ ಮನತುಂಬಿ ಸವಿಯುತಿರಲು!
ಎನ್ನ ಕಂಗಳು ಹುಡುಕುತಿದ್ದವು ಆ ಚಂದ್ರಮನ ಅಕ್ಕಪಕ್ಕದಲ್ಲಿ
ಕಾಣಬಹುದೇನೋ ಅವನ ಸನಿಹದಲ್ಲಿ ಅಮ್ಮ ಅಕ್ಕನ ನೆರಳು
ಅವರ ವಾತ್ಸಲ್ಯದ ಪ್ರೀತಿಯ ಸವಿಯಾದ ಅಕ್ಕರೆಯ ಛಾಯೆ
ಸ್ವಾರ್ಥಿ ಚಂದ್ರಮ ಅವನೊಬ್ಬನೇ ಇದ್ದ ನಗುತ ಆಗಸದಲ್ಲಿ!
ಕಾಣದ ನಕ್ಶತ್ರಗಳ ರಾಶಿಯಲ್ಲಿ ಉಜ್ವಲ ಬೆಳಕಿನ ನಡುವಿನಲ್ಲಿ
ಹುಡುಕಿ ಸೋತಿದ್ದವು ಕಂಗಳು ಅರಿಯದೆ ಉದುರಿದ್ದವು ಕಂಬನಿ
ಅಲ್ಲಿ ಅಮ್ಮನೂ ಇರಲಿಲ್ಲ ಅಕ್ಕನೂ ಇರಲಿಲ್ಲ ಅವರ ಪ್ರೀತಿಯೂ
ನೀಲ ನಿರಭ್ರ ಆಗಸದಲ್ಲಿ ಬರಿ ಚಂದಿರನದ್ದೇ ಪ್ರಕಾಂಡ ಪ್ರಕಾಶ!!
No comments:
Post a Comment