Thursday, August 13, 2015

ಲಹರಿ ಬಂದಂತೆ ....... ೩............ !!!

ಗಿರಿಯ ಶೃಂಗದಲಿ ಕಂಡೆ ಚಂದ್ರಮನ
ಇಳೆಯ ವಿರಹದಲಿ ನೊಂದು ನಿಂದವನ!
ಕೊಂಚ ಖುಷಿ ಮನಕಿಂದು ನಾ ಒಂಟಿಯಲ್ಲ
ನನ್ನೊಡನೆ ವಿರಹಿ ಚಂದ್ರನೂ ಇಹನಲ್ಲ!
ಮನದ ಕುದುರೆಯಿದು ಮೊಂಡು ಬಿದ್ದಿಹುದು
ಸುಡುವ ತುಪಾಕಿಯು ತುಕ್ಕು ಹಿಡಿದಿಹುದು!
ಗಮ್ಯ ಸೇರಲು ಮನವು ತವಕಿಸುತಿರೆ
ನಿನ್ನ ನೆನಪೇ ದೊಡ್ದ ಅಡ್ಡಿಯಾಗಿಹುದು!
ಚಿಂತಿಸದಿರು ನಾ ಬರುತಿಹೆನು ನಲ್ಲೆ
ಮರೆಯದೆ ತರುವೆ ನಿನ್ನೊಲವ ಮಲ್ಲೆ!
***************************
***************************

ಕಡಲ ತಡಿಯ ಮರಳು ನಾನು
ಮಧುರ ಪ್ರೀತಿಯ ನೆರಳು ನೀನು !
ಉರಿವ ಬಿಸಿಲಲಿ ಮೌನಿ ನಾನು
ತಣ್ಣಗೆ ತಬ್ಬುವ ಅಲೆಯು ನೀನು!
ಕದಲೆನೆಂದು ನಿಂತು ಅಚಲ ನಾನು
ಚುಂಬಿಸಿ ಓಡುವ ಚಂಚಲೆಯು ನೀನು !
***************************
****************************

ಬಂಧಿಯಾಗಿರುವೆ ಮುದ್ದು ಗೆಳತಿ
ಭಾವನೆಗಳ ಈ ಬಂದೀಖಾನೆಯಲಿ!
ಹೊರಬರುವ ದಾರಿ ಕಾಣುತ್ತಿಲ್ಲವಲ್ಲೇ
ಬರಬಾರದೆ ನೀ ಬಿಡುಗಡೆಯ ಬೆಳಕಾಗಿ!
****************************
****************************

ಕಂಡೆಯಾ ಗೆಳತಿ
ಭರ್ಜರಿ ಮಳೆಯಂತೆ
ಅಲ್ಲಿ ಉದ್ಯಾನನಗರಿಯಲಿ!
ನಿನ್ನದೇ ನೆನಪಿನ
ಕುಂಭದ್ರೋಣ ಮಳೆಯಿಲ್ಲಿ
ಸುಡುವ ಮರುಭೂಮಿಯಲ್ಲಿ! 
**********************
**********************
 
ನಶೆಯು ಏರುವವರೆಗೆ ಮದಿರೆ ಮುಗಿಯದಿರಲಿ
ಉಷೆಯು ಮೂಡುವವರೆಗೆ ಮದಿರೆ ಮುಗಿಯದಿರಲಿ!
ತುಂಟ ಚಂದ್ರಮನ ತಂಟೆ ಮುಗಿಯುವವರೆಗೂ
ನೆಂಟ ರವಿ ಉದಯಿಸಿ ಬೆಳಕ ತರುವವರೆಗೂ !
ಮನದ ಕುಲುಮೆಯಲಿ ಬೇಯುತಿಹ ನೆನಪುಗಳು
ಹದವಾಗಿ ಬೆಂದು ನೊಂದು ಗಟ್ಟಿಯಾಗುವವರೆಗೂ!
ನಶೆಯು ಏರುವವರೆಗೆ ಮದಿರೆ ಮುಗಿಯದಿರಲಿ
ಉಷೆಯು ಮೂಡುವವರೆಗೆ ಮದಿರೆ ಮುಗಿಯದಿರಲಿ!
************************************
************************************
 ಬದುಕು
ಒಡೆದ
ಕನ್ನಡಿಯ
ಚೂರು!
ಪಯಣ
ಮುಗಿವ
ಮುನ್ನ
ನಗುವ
ಬೀರು!
ಸ್ವಾರ್ಥಿ
ಜನರ
ನಡುವೆ
ಸಮರಸವ
ಸಾರು!
ಕಾರ್ಯ
ಮುಗಿಸಿ
ಹೋಗುವಾಗ
ಉಳಿಸು
ಮಧುರ
ಮಾನವತೆಯ
ಬೇರು!

**************
****************
ಸಾಗಬೇಕಿದೆ ನಾ ದೂರ ದೂರ
ಕೂರಬೇಕಿದೆ ಆತ್ಮದ ಹತ್ತಿರ
ತಳೆಯಬೇಕಿದೆ ಗಟ್ಟಿ ನಿರ್ಧಾರ
ಸೇರಬೇಕಿದೆ ಆ ದೂರ ತೀರ!
ಮರೆಯಬೇಕಿದೆ ನಿತ್ಯದ ಜಂಜಡ
ಮೆರೆಯಬೇಕಿದೆ ಸತ್ಯದ ಸಂಗಡ
ತಿಳಿಯಾಗಬೇಕಿದೆ ಮನದಾಳದ ಬಗ್ಗಡ
ಖಾಲಿಯಾಗಬೇಕಿದೆ ಎದೆಯೊಳಗಿನ ಕಚಡ!
ಸಾಕಾಗಿದೆ ನೋಡಿ ಜಗದ ವಿಕಾರ
ನನಗಿದೆ ನನ್ನದೇ ಆದ ಆಚಾರ
ಚಿಂತಿಸಬೇಕಿದೆ ಮುಂದಿನ ವಿಚಾರ
ಕೊಡಬೇಕಿದೆ ಹೊಸ ಸಮಾಚಾರ!
ಕೇಳಬೇಕಿದೆ ಮನದ ಪಿಸುಮಾತ
ಹೇಳಬೇಕಿದೆ ಹರುಷದ ಹೊಸಮಾತ
ಅಳಿಸಬೇಕಿದೆ ಹಳೆಯ ಗಾಯವನ್ನ
ಹಾಡಬೇಕಿದೆ ಹೊಸತು ಹೊಸ ಗಾನ!
****************************
******************************

ದಿನವಿಡೀ ದುಡಿದು
ದಣಿದು ಬರುವವನಿಗೆ
ಮಡದಿಯ ಗೊಣಗಾಟ
ಮಕ್ಕಳ ಕಿರುಚಾಟವೇ
ಯಕ್ಷಗಾನ ಬಯಲಾಟ!
ಅಡುಗೆ ಮನೆಯಲ್ಲಿ
ಹೆಂಡತಿ ಕುಕ್ಕುತ್ತಿರೆ
ಪಾತ್ರೆ ತಪ್ಪಲೆ
ಅದರ ಭಯಂಕರ
ಶಬ್ಧವೇ ತಾಳ ಮದ್ದಲೆ! 
********************
***********************

 

Sunday, August 9, 2015

ನಿದಿರೆ ಬರದ ರಾತ್ರಿಯಲ್ಲಿ ,,,,,,,,,,,,,,,



ನಿದಿರೆ ಬರದ ರಾತ್ರಿಯಲ್ಲಿ  
ದೇವತೆಯಾಗಿ ಇಳಿದು ಬಾರೆಯಾ!

ನೊಂದ ಹೃದಯ ಬೆಂದ ಮನವ 
ಲಾಲಿ ಹಾಡಿ ತಣಿಸಲಾರೆಯಾ!

ರೋಸಿ ಅಳುತ ರಚ್ಚೆ ಹಿಡಿವ  
ಮನಕೆ ತಾಯಿ ನೀನಾಗೆಯಾ!

ಬಾಳ ಯಾನ ಜಟಿಲ ಪಥದಿ 
ಪ್ರೀತಿ ಸುಮವ ಅರಳಿಸೆಯಾ!

ಕಠಿಣ ಹಾದಿ ಸಾಗುವಲ್ಲಿ 
ಕೊಳಲ ಗಾನ ನೀನಾಗೆಯಾ!  

Friday, August 7, 2015

ಎಲ್ಲವೂ ನಿನ್ನೊಳಗೆ,,,,,,,,,,,,,,,,,,

ಕರುಣಾಮಯಿ
ವಾತ್ಸಲ್ಯಮಯಿ
ಪ್ರೇಮಮೂರ್ತಿ
ಎಲ್ಲವೂ ನೀನೇ !
ಅಮ್ಮನ ಒಲವು
ಮನದನ್ನೆಯ ಪಿಸುನುಡಿ
ಅವಳೆದೆಯ ಹಿತಸ್ಪರ್ಶ
ಎಲ್ಲವೂ ನೀನೇ!
ಅದೆನಿತು ವಂದನೆಗಳ
ಸಲ್ಲಿಸಲಿ ನಾ ನಿನಗೆ
ನನ್ನೊಲವಿನ ಮದಿರೆಯೇ
ಎಲ್ಲವೂ ನಿನ್ನೊಳಗೆ!

Tuesday, August 4, 2015

ಕಾಲೆಳೆಯದಿರು ವಿಧಿಯೇ ,,,,,,,,,,,,,,



ಕಾಲೆಳೆಯದಿರು ವಿಧಿಯೇ 
ಗೆಲುವಿನ ಸನಿಹದಲಿರುವೆ! 

ಹುಸಿಯಾಡದಿರು ಕಾಲವೇ 
ನಾನಿಂದು ನಗುತಲಿರುವೆ! 

ಕರುಬದಿರು ಕಣ್ಣೀರ ತರದಿರು 
ಮತ್ತದೇ ಕಣಿವೆಗೆ ಕೆಡವದಿರು! 

ಒಣಗಿದ ಹಸಿ ಕಂಬನಿಯ 
ಮತ್ತೊಮ್ಮೆ ಹರಿಸದಂತಿರು! 

ಏನಾದರಾಗಲಿ ಕಣ್ಮುಚ್ಚಿರು 
ಪದೇಪದೇ ಕಾಡದೆ ತೆಪ್ಪಗಿರು!

ಸೋಲು ಹತಾಶೆ ನಿರಾಶೆಗಳ 
ಕಂಡ ನೀನೊಮ್ಮೆ ನೋಡು! 

ಗೆಲುವಿನ ಬಾವುಟದ ಹಾರಾಟ 
ಹರುಷದ ಸದ್ದದು ಪಟ ಪಟ!


Monday, August 3, 2015

ವಿಕಟ ವಿಧಿರಾಯ,,,,,,,,,,


ಮೆರೆಯದಿರು ವಿಕಟ ವಿಧಿರಾಯ  
ನಿಲ್ಲಿಸು ನಿನ್ನ ವಿಕಟಾಟ್ಟಹಾಸವ!

ನಿನ್ನೆಲ್ಲ ಉರಿಬಾಣಗಳು ತಾಕಿದರೂ 
ನೀನೆಷ್ಟು ಕಿಚ್ಚ ಹಚ್ಚಿ ಪರೀಕ್ಷಿಸಿದರೂ 

ನೀನದೆಷ್ಟೇ  ಒತ್ತಡವ ಹೇರಿದರೂ 
ಅದೆಷ್ಟೇ ಕಷ್ಟನಷ್ಟಗಳ ತಂದರೂ 

ಮುಗಿಯಿತು ಕಥೆ ಎಂದು ನೀ ನಗುತಿರೆ 
ನಾನೆದ್ದು ಬರುವೆ ಬೂದಿಯೊಳಗಿನಿಂದ 

ಆತ್ಮವಿಶ್ವಾಸದ ಬಲ ನನ್ನೊಳಗಿರಲು 
ನೀನೆಲ್ಲಿ ಗೆಲ್ಲುವೆ ಓ ಹುಚ್ಚು ಕಾಲವೇ ! :-) 

Sunday, August 2, 2015

ನಶೆಯು ಏರುವವರೆಗೆ,,,,,,,,,


ನಶೆಯು ಏರುವವರೆಗೆ ಮದಿರೆ ಮುಗಿಯದಿರಲಿ 
ಉಷೆಯು ಮೂಡುವವರೆಗೆ ಮದಿರೆ ಮುಗಿಯದಿರಲಿ! 

ತುಂಟ ಚಂದ್ರಮನ ತಂಟೆ ಮುಗಿಯುವವರೆಗೂ 
ನೆಂಟ ರವಿ ಉದಯಿಸಿ ಬೆಳಕ ತರುವವರೆಗೂ !

ಮನದ ಕುಲುಮೆಯಲಿ ಬೇಯುತಿಹ ನೆನಪುಗಳು 
ಹದವಾಗಿ ಬೆಂದು ನೊಂದು ಗಟ್ಟಿಯಾಗುವವರೆಗೂ!

 ನಶೆಯು ಏರುವವರೆಗೆ ಮದಿರೆ ಮುಗಿಯದಿರಲಿ 
ಉಷೆಯು ಮೂಡುವವರೆಗೆ ಮದಿರೆ ಮುಗಿಯದಿರಲಿ! 

ಗೆಳೆಯರ ದಿನದ ಅಗಣಿತ ಲಹರಿಗಳಲಿ,,,,,,,,,,,,,,,,,




ಆಗ ನಾವು ತಿಪಟೂರಿನ  ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದೆವು, ಸರ್ಕಾರಿ ನೌಕರಿಯಲ್ಲಿದ್ದವರ ಎಲ್ಲ ಮಕ್ಕಳ ಹಾಗೆ ನಾನೂ ಕೂಡ ಅಲೆಮಾರಿಯಂತೆ ಎಲ್ಲಿಂದಲೋ ಬಂದು ಅಲ್ಲಿ ೮ನೆಯ ತರಗತಿಗೆ ಸೇರಿದ್ದೆ.   ನನಗೆ ಯಾವ ಹುಡುಗರೂ ಪರಿಚಯವಿರಲಿಲ್ಲ, ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು, ಆದರೂ ಆಟವಾಡುವ ವಯಸ್ಸಲ್ಲವೇ?  ಆಟವಾಡುತ್ತಾಡುತ್ತಾ ಮಾತುಗಳನ್ನಾಡುತ್ತಾಡುತ್ತಾ ಒಬ್ಬರಿಗೊಬ್ಬರು ಹತ್ತಿರವಾಗಿದ್ದೆವು, ಸುಮಾರು ೪೫ ಜನರಿದ್ದ ನಮ್ಮ ತರಗತಿಯಲ್ಲಿ ಎಲ್ಲರಿಗಿಂತ ನನಗೆ ಹೆಚ್ಚು ಆತ್ಮೀಯನಾದವನು ಇನಾಯತ್, ಮುಸ್ಲಿಮನಾದರೂ ನನ್ನ ಒಡ ಹುಟ್ಟಿದವನಿಗಿಂತ ಹೆಚ್ಚಾಗಿ ನನ್ನ ಆತ್ಮಸಖನಾದವನು.  ತಾಯಿಯಿಲ್ಲದ ಅವನಿಗೆ ತಂದೆಯ ಪ್ರೀತಿಯೂ ಇರಲಿಲ್ಲ, ಚಿಕ್ಕಮ್ಮ ಮತ್ತವಳ ಮಕ್ಕಳು ಮನೆಯಲ್ಲಿ ಜೋರು ಮಾಡುತ್ತಿದ್ದರೆ ಇವನು ಮೂಕನಾಗಿರುತ್ತಿದ್ದ.  ಅಂತರ್ಮುಖಿಯಾಗಿದ್ದ ಅವನು ಮಾತನಾಡುತ್ತಿದ್ದುದು ಕಡಿಮೆಯೇ, ಆದರೆ ನನ್ನ ಸಾಂಗತ್ಯದಲ್ಲಿ ಒಗ್ಗಿಕೊಂಡ ನಂತರ ಮನಬಿಚ್ಚಿ ಮಾತನಾಡುತ್ತಿದ್ದ.  ಮಧ್ಯಾಹ್ನದ ಊಟದ ಬಿಡುವಿನಲ್ಲಿ ಇಬ್ಬರೂ ಜೊತೆಯಲ್ಲಿಯೇ ಊಟ ಮಾಡುತ್ತಿದ್ದೆವು, ಕಬಡ್ಡಿ ತಂಡದಲ್ಲಿ ನಾವಿಬ್ಬರೂ ಇದ್ದರೆ ಎದುರಾಳಿ ತಂಡದವರು ಗೆಲ್ಲಲು ಅಸಾಧ್ಯವಾಗಿತ್ತು.  ಹೀಗೆಯೇ ಬೆಳೆದು ಗಟ್ಟಿಯಾದ ನಮ್ಮ ಸ್ನೇಹ ಹೆಮ್ಮರವಾಗಿತ್ತು, ಮೀಸೆ ಮೂಡುತ್ತಿದ್ದ ಆ ದಿನಗಳಲ್ಲಿಯೇ ಶಾಲೆಗೆ ಚಕ್ಕರ್ ಹೊಡೆದು ಸಿನಿಮಾ ನೋಡುತ್ತಿದ್ದೆವು, ನಮ್ಮ ಸೈಕಲ್ಲುಗಳನ್ನೇರಿ ಸಿಕ್ಕ ಸಿಕ್ಕಲ್ಲಿ ಸುತ್ತು ಹೊಡೆಯುತ್ತಿದ್ದೆವು.   

ಪ್ರೌಢಶಾಲೆಯನ್ನು ದಾಟಿ ಕಾಲೇಜಿಗೆ ಬಂದ ನಂತರವಂತೂ ನಾವು ಆಡದ ಆಟವೇ ಇರಲಿಲ್ಲ!  ಜೊತೆಯ ಹುಡುಗಿಯರನ್ನು ರೇಗಿಸುವುದು, ಕಥೆ ಕವನ ಪ್ರಬಂಧ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು, ಎನ್.ಸಿ.ಸಿ. ತರಬೇತಿಯಲ್ಲಿ ಭಾಗವಹಿಸಿ ಎಲ್ಲ ತರಬೇತಿ ಶಿಬಿರಗಳನ್ನು ಯಶಸ್ವಿಯಾಗಿ ಮುಗಿಸಿ "ಸಿ" ಸರ್ಟಿಫಿಕೇಟ್ ಪಡೆದಿದ್ದೆವು. ಸೈಕಲ್ ಯಾತ್ರೆಗಳಲ್ಲಿ ಭಾಗವಹಿಸಿ ಕರ್ನಾಟಕವನ್ನೆಲ್ಲಾ ಸುತ್ತಿದ್ದಲ್ಲದೆ ಭೂಪಾಲ್ ಹಾಗೂ ದೆಹಲಿಗೂ ತೆರಳಿ ನಮ್ಮ ಕನ್ನಡ ಬಾವುಟ ಹಾರಿಸಿದ್ದೆವು. ಪದವಿ ಮುಗಿದ ನಂತರ ಶುರುವಾದ ಬಾಳಿನ ಹೋರಾಟದಲ್ಲಿ ನಾನು ಬೆಂಗಳೂರಿನಲ್ಲಿ ನೆಲೆ ನಿಂತರೆ ಅವನು ಮುಂಬೈಗೆ ಹೋಗಿದ್ದ!  ಹಲವು ವರ್ಷಗಳ ನಂತರ ಅವನು ಮುಂಬೈನಿಂದ ಹಿಂದಿರುಗಿ ಬೆಂಗಳೂರಿನಲ್ಲಿ ನೆಲೆ ನಿಂತ, ನಾನು ಬೆಂಗಳೂರು ಬಿಟ್ಟು ದುಬೈಗೆ ಬಂದು ನೆಲೆಯಾದೆ!  ಆದರೆ ಈಗಲೂ ೩೫ ವರ್ಷಗಳ ಹಿಂದಿನ ನಮ್ಮ ಭಾಷೆ, ಏನ್ಲಾ ಮಂಜಾ ಅಂತ ಅವನು ಕರೆದರೆ ಏನ್ಲಾ ಸಾಬ್ರೇ ಅಂತ ನಾನು ಉತ್ತರಿಸುವುದು ಈಗಲೂ ರೂಢಿಯಲ್ಲಿದೆ!  ಹಲವು ನೋವು, ನಲಿವು, ಸೋಲು ಗೆಲುವುಗಳಲ್ಲಿ ಜೊತೆಜೊತೆಯಾಗಿ ಕಳೆದ ೩೫ ವರ್ಷಗಳಿಂದ ಜೀವಂತವಾಗಿರುವ ಈ ಸ್ನೇಹಕ್ಕೆ ಬೆಲೆ ಕಟ್ಟಲಾಗುವುದೇನು?  ಇದುವರೆಗೂ ನಮ್ಮ ನಡುವೆ ಹಿಂದೂ ಮುಸ್ಲಿಂ ಎನ್ನುವ ಧರ್ಮಗಳಿಗೆ ಮಾಡಲು ಏನೂ ಕೆಲಸ ಸಿಕ್ಕಿಲ್ಲ, ನಮ್ಮ ಸ್ನೇಹವನ್ನು ಘಾಸಿಗೊಳಿಸಲು ಆಗಿಲ್ಲ!!  ಸ್ನೇಹಿತರ ದಿನದಂದು ಹಾಗೇ ಸುಮ್ಮನೆ ಇದೆಲ್ಲಾ ನೆನಪಾಯಿತು.  :-) :-)  

ಇವನಲ್ಲದೆ ಬಾಳಯಾನದ ವಿವಿಧ ಹಂತಗಳಲ್ಲಿ ಜೊತೆಯಾದವರು ಅದೆಷ್ಟೋ ಜನ ಗೆಳೆಯರು.  ಕೆಲವರು ಮಿಂಚಿನಂತೆ ಮಿಂಚಿ ಮರೆಯಾಗಿ ಹೋದರು, ಮತ್ತೆ ಕೆಲವರು ಮರೆಯಲಾಗದ ನೆನಪನ್ನು ಮನದಲ್ಲಿ ಉಳಿಸಿ ಕಾಲನ ಕರೆಗೆ ಓಗೊಟ್ಟು ಕಣ್ಮರೆಯಾದರು. ಅಂದಿಗಿಂತ ಇಂದು ವಿಜ್ಞಾನ ಸಾಕಷ್ಟು ಮುಂದುವರೆದಿದಿ, ವಿಶ್ವ ಚಿಕ್ಕದಾಗಿದೆ, ಕಾರ್ಯನಿಮಿತ್ತ ವಿಶ್ವದೆಲ್ಲೆಡೆ ಹರಡಿ ಹೋಗಿರುವ ಕನ್ನಡಿಗರೆಲ್ಲರೂ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ಗೆಳೆಯರಾಗಿದ್ದಾರೆ.  ಇಂದು ಗೆಳೆತನದ ಅರ್ಥ ಮತ್ತಷ್ಟು "ಸುವಿಶಾಲ"ವಾಗಿದೆ.  ನಮ್ಮೆಲ್ಲ ನೋವು ನಮ್ಮಲ್ಲಿಯೇ ಮರೆಯಾಗಲಿ, ಗೆಳೆತನದ ಸುಮವೆಂದೂ ಮಧುರವಾಗಿ ನಗುತಿರಲಿ.  :-) :-)