Monday, March 7, 2016

ಭದ್ರತೆಯ ಲೋಕದಲ್ಲಿ - ೧೫. ಕನ್ನಡಿಗರಿಗೇ ಮುಳುವಾದ ಕನ್ನಡಿಗ!


.
;;
 
ಪ್ರಾಥಮಿಕ ಶಾಲೆಯಿಂದಲೂ ಕನ್ನಡ ಮಾಧ್ಯಮದಲ್ಲಿಯೇ ಓದಿದ ನನಗೆ ಕನ್ನಡ ಭಾಷೆಯೆಂದರೆ ಯಾವಾಗಲೂ ಅಚ್ಚುಮೆಚ್ಚು.  ಉದ್ಯೋಗದ ನಿಮಿತ್ತ  ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ಅಡ್ಡಾಡಿದರೂ, ಈಗ ದುಬೈಗೆ ಬಂದು ನೆಲೆಸಿದ್ದರೂ, ರಸ್ತೆಯಲ್ಲಿ ನಡೆದು ಹೋಗುವಾಗಲೋ, ಯಾವುದೋ ಶಾಪಿಂಗ್ ಮಾಲಿನಲ್ಲೋ, ಮತ್ತಾವುದೋ ಹೋಟೆಲ್ಲಿನಲ್ಲೋ ಯಾರಾದರೂ ಕನ್ನಡದಲ್ಲಿ ಮಾತನಾಡುತ್ತಿದ್ದರೆ ಅಚಾನಕ್ಕಾಗಿ ಕಣ್ಣು ಅತ್ತ ಹೊರಳುತ್ತವೆ, ಕಿವಿಗಳು ಅವರ ಮಾತುಗಳನ್ನು ಕೇಳುತ್ತಿರುತ್ತವೆ, ಮನಸ್ಸು ಅವರೊಡನೆ ಮಾತಾಡಲು ಪ್ರೇರೇಪಿಸುತ್ತದೆ. 

ಅಂಥಾ ಕನ್ನಡಾಭಿಮಾನಿಯಾದ ನನಗೆ ಮಲೆಯಾಳಿಗಳೇ ಹೆಚ್ಚಾಗಿದ್ದ ಒಂದು ಸಂಸ್ಥೆಯಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುವಾಗ ನನಗೆ ತುಂಬಾ ಆತ್ಮೀಯನಾಗಿದ್ದವನು ನನ್ನದೇ ಹೆಸರಿನ ಒಬ್ಬ ಆಡಳಿತಾಧಿಕಾರಿ, ಜೊತೆಗೆ ಅವನು ಹುಟ್ಟಿದ್ದೂ ಸಹ ಮೈಸೂರಿನಲ್ಲೇ!  ಸ್ವಾಭಾವಿಕವಾಗಿಯೇ ಅವನು ನನಗೆ ಆತ್ಮೀಯನಾಗಿಬಿಟ್ಟಿದ್ದ, ಜೊತೆಯಲ್ಲಿಯೇ ಕಛೇರಿಯ ತಾರಸಿಯ ಮೇಲಿದ್ದ ಉಪಾಹಾರಗೃಹದಲ್ಲಿ ಕಾಫಿ ಕುಡಿಯುತ್ತಿದ್ದೆವು, ಊಟ ಮಾಡುತ್ತಿದ್ದೆವು,  ಸೋಮವಾರದ ಮಧ್ಯಾಹ್ನ ನಾನು ಮನೆಯಿಂದ ತೆಗೆದುಕೊಂಡು ಹೊಗುತ್ತಿದ ಸಾಂಬಾರಿಗೆ ಅವನು ಯಾವಾಗಲೂ ಪಾಲುದಾರನಾಗಿರುತ್ತಿದ್ದ!  ಏಕೆಂದರೆ ಅಂದು ನನ್ನ ಊಟದ ಡಬ್ಬಿಯಲ್ಲಿ ಕೇವಲ ಸಸ್ಯಾಹಾರಿ ಸಾಂಬಾರು ಇರುತ್ತಿತ್ತು, ಬ್ರಾಹ್ಮಣನಾದ ಅವನಿಗೆ ಗೌಡರ ಮನೆಯ ನಾಲಿಗೆ ಚುರ್ರೆನ್ನಿಸುವ ಖಾರದ ಬಸ್ಸಾರು, ಮಸ್ಸೊಪ್ಪು, ಮಸಾಲೆ ಸಾರು ಅಂದರೆ ತುಂಬಾ ಇಷ್ಟವಾಗಿತ್ತು. 

ನಮ್ಮ ಉದ್ಯಾನ ನಗರಿ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಿಂದ ಕೇವಲ ಕೂಗಳತೆ ದೂರದಲ್ಲಿದ್ದ ಸಂಸ್ಥೆಯ ಕಚೇರಿಯಲ್ಲಿ ಏನಿಲ್ಲವೆಂದರೂ ಸುಮಾರು ಐದು ನೂರು ಜನ ತಂತ್ರಜ್ಞರು ಕೆಲಸ ಮಾಡುತ್ತಿದ್ದರು.   ಸಾಕಷ್ಟು ಬೆಲೆಬಾಳುವ ಯಂತ್ರೋಪಕರಣಗಳಿಂದ ಕೂಡಿದ್ದ ಸಂಸ್ಥೆಯಲ್ಲಿ ಸ್ವತಃ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಹಲವಾರು ಖಾಸಗಿ ಸಂಸ್ಥೆಗಳ ತಂತ್ರಜ್ಞರಿಗೆ ತರಬೇತಿಯನ್ನು ನೀಡುತ್ತಿದ್ದರು.  ಹೀಗಾಗಿ ಪ್ರತಿದಿನ ಸಂಸ್ಥೆಗೆ ಬಂದು ಹೋಗುವವರ ಸಂಖ್ಯೆ ಗಣನೀಯವಾಗಿತ್ತು.  ಉತ್ತಮ ನಿಯಂತ್ರಣಕ್ಕಾಗಿ ಸುಮಾರು ಇಪ್ಪತ್ತು ಜನರ ಭದ್ರತಾ ತಂಡವಿತ್ತು, ಅವರಲ್ಲಿ ಹೆಚ್ಚಿನವರು ಕನ್ನಡಿಗರಾಗಿದ್ದರು, ಉಸ್ತುವಾರಿಯಾಗಿ ನಾನಿದ್ದೆ!  ಹೀಗಿರುವಲ್ಲಿ ನಮ್ಮ ಭದ್ರತಾ ರಕ್ಷಕರ ತಂಡದ ವಿರುದ್ಧ  ನನ್ನೊಡನೆ ಚೆನ್ನಾಗಿಯೇ ಇದ್ದ ಮಂಜುನಾಥನ ಕಡೆಯಿಂದ  ದೂರುಗಳು ಬರಲಾರಂಭಿಸಿದವು.  ಆರಂಭದಲ್ಲಿ ಅವನ ದೂರುಗಳನ್ನು ಕೇಳಿ ಒಂದಿಬ್ಬರು ಭದ್ರತಾ ರಕ್ಷಕರನ್ನು ಬದಲಾಯಿಸಿ ಅವನನ್ನು ತೃಪ್ತಿಗೊಳಿಸಿದ್ದೆ,  ಆದರೆ ಕ್ರಮೇಣ ಅವನ ದೂರುಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ನಾನು ಸ್ವಲ್ಪ ಜಾಗೃತನಾಗತೊಡಗಿದ್ದೆ. 

ಅವನ ದೂರುಗಳ ಬಗ್ಗೆ ನಮ್ಮ ತಂಡದಲ್ಲಿದ್ದ ಭದ್ರತಾ ರಕ್ಷಕರೊಡನೆ ಚರ್ಚಿಸಿದಾಗ ನನಗೆ ತಿಳಿಯದಿದ್ದ ಅನೇಕ ಕುತೂಹಲಕರ ವಿಷಯಗಳು ತಿಳಿದು ಬಂದಿದ್ದವು.  ನನ್ನೊಡನೆ ಮೃದುವಾಗಿ ಮಾತನಾಡುತ್ತಾ  ಸ್ನೇಹದಿಂದಿದ್ದ ಮೈಸೂರಿನ ಮಂಜುನಾಥ ಅದೊಂದು ರೀತಿಯ ಕೀಳರಿಮೆಯಿಂದ ಬಳಲುತ್ತಿದ್ದ.  ತನಗಿಂತಲೂ ಹೆಚ್ಚು ಸಂಬಳ ಪಡೆಯುತ್ತಿದ್ದ ತಂತ್ರಜ್ಞರ ಮುಂದೆ ಕೇವಲ ಬಿ.. ಪದವೀಧರನಾಗಿದ್ದ ಅವನು ಆತ್ಮವಿಶ್ವಾಸದಿಂದ  ಮಾತನಾಡಲು ತಡವರಿಸುತ್ತಿದ್ದ.  ಹೆಚ್ಚಿನ ಸಂದರ್ಭಗಳಲ್ಲಿ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ  ಮಾಡಲಾಗದೆ ಅವರಿಂದ ಮೂದಲಿಕೆಗೊಳಗಾಗುತ್ತಿದ್ದ, ಅವನಿಗೆ ಕೋಪ ಬಂದರೂ ಅವರ ಮೇಲೆ ತೋರಿಸಲಾಗದೆ ಮನಸ್ಸಿನಲ್ಲೇ ಇಟ್ಟುಕೊಂಡು ಅದೇ ಕೋಪ ಹಾಗೂ ಅಸಮಾಧಾನವನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಭದ್ರತಾ ರಕ್ಷಕರ ಮೇಲೆ ಹರಿಹಾಯ್ದು ತೋರ್ಪಡಿಸುತ್ತಿದ್ದ.  ಇವನ ಅಸಮಾಧಾನಕ್ಕೆ ಬಲಿಯಾಗಿ  ಹಲವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ರಕ್ಷಕರು ಹಾಗೂ ಸ್ವಚ್ಛತಾ ಸಂಸ್ಥೆಯ ನೌಕರರು ಅಲ್ಲಿಂದ ಎತ್ತಂಗಡಿಯಾಗಿದ್ದರು.  ಅವನ ಸ್ನೇಹಕ್ಕೆ ಕಟ್ಟು ಬಿದ್ದಿದ್ದ ನನಗೆ ನಿಜಾಂಶ ಅರ್ಥವಾಗುವುದರಲ್ಲಿ ಸಾಕಷ್ಟು ವಿಳಂಬವಾಗಿತ್ತು.  ಎಚ್ಚೆತ್ತುಕೊಂಡ ನಾನು  ಅವನ ದೂರುಗಳಿಗೆ ಬೆಲೆ ಕೊಡದೆ, ಯಾವುದೇ ಭದ್ರತಾ ರಕ್ಷಕರನ್ನು ಅಲ್ಲಿಂದ ಬದಲಿಸದೆ ಸ್ಥಿತಪ್ರಜ್ಞನಂತೆ ವರ್ತಿಸತೊಡಗಿದೆ. 

ಅದೇ ಸಮಯದಲ್ಲಿ ಅವನಿಗೆ ಸಹಾಯಕಿಯಾಗಿ ಚೆಂದುಳ್ಳಿ ಚೆಲುವೆಯೊಬ್ಬಳು ಸಂಸ್ಥೆಗೆ ಸೇರಿಕೊಂಡಳು.  ಅವನ ದೂರುಗಳಿಗೆ ನಾನು ತೋರುತ್ತಿದ್ದ ಅಸಡ್ಡೆಯಿಂದಾಗಿ ನನ್ನೊಡನೆ ಮಾತು ಕಡಿಮೆ ಮಾಡಿದ್ದ ಮಂಜುನಾಥ ಈಗ ಹೊಸ ಚೆಲುವೆಯ ಕಣ್ಣೋಟದಲ್ಲಿ ಸೆರೆಯಾಗಿ ಹೋಗಿದ್ದ.  ಯಾವಾಗಲೂ ಒಂಭತ್ತು ಘಂಟೆಗೆ ಐದು ನಿಮಿಷ ಮುಂಚೆ ಕಛೇರಿಗೆ ಬರುತ್ತಿದ್ದವನು ಈಗ ಎಂಟೂವರೆಗೆಲ್ಲಾ ಕಚೇರಿಗೆ ಬರಲು ಆರಂಭಿಸಿದ್ದ,  ಕಛೇರಿಯ ಶುಚಿತ್ವದ ಹೊಣೆ ಹೊತ್ತಿದ್ದ ಸುಂದರಿ ಬೆಳಿಗ್ಗೆ ಎಂಟು ಘಂಟೆಗೆಲ್ಲಾ ಕಛೇರಿಗೆ ಬಂದು ಹತ್ತು ಅಂತಸ್ತಿನ ಕಟ್ಟಡವನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಎಲ್ಲೆಡೆಯೂ ಶುಭ್ರವಾಗಿರುವಂತೆ ಸ್ವಚ್ಛ ಮಾಡಿಸುತ್ತಿದ್ದಳು.  ಮೊದಮೊದಲು ಅವಳೊಡನೆ ಶುರುವಾದ ಸ್ನೇಹದ ಮಾತುಕಥೆ, ಇಬ್ಬರ ನಡುವೆ ಅದೆಂಥದೋ ಹೊಸ ಆಕರ್ಷಣೆಯನ್ನು ಹುಟ್ಟು ಹಾಕಿ, ಔದ್ಯೋಗಿಕ ಸಂಬಂಧಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಹತ್ತಿರವಾಗಿದ್ದರು. 

ಇವರ ಒಡನಾಟವನ್ನು, ಮಾತುಕಥೆಯನ್ನು, ಅವರ ಪ್ರೇಮದಾಟಗಳನ್ನು ಬಹಳ ಹತ್ತಿರದಿಂದಲೇ ನೋಡುತ್ತಿದ್ದ ಭದ್ರತಾ ರಕ್ಷಕರು, ತಮ್ಮ ಸಹೋದ್ಯೋಗಿಗಳನ್ನು ಅವನು ಸುಮ್ಮನೆ ಇಲ್ಲಸಲ್ಲದ ತಪ್ಪುಗಳನ್ನು ಹುಡುಕಿ ಸಂಸ್ಥೆಯಿಂದ ಹೊರಹಾಕಿದ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು, ಅವನ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು ಅವನಿಗೆ ಅರಿವಿಲ್ಲದೆಯೇ ಅವನನ್ನು ಖೆಡ್ಡಾಗೆ ಕೆಡವಬೇಕೆಂದು ಕಾಯುತ್ತಿದ್ದರು.  ಬೆಳಿಗ್ಗೆ ಒಂಭತ್ತಕೆ ಬಂದರೆ ನಾನು ನನ್ನ ಕೆಲಸವನ್ನೆಲ್ಲಾ ಮುಗಿಸಿ ಸಂಜೆ ಆರೂವರೆಗೆ ಕಛೇರಿಯಿಂದ ಹೊರಟು ಬಿಡುತ್ತಿದ್ದೆ.  ಆದರೆ ಪ್ರೇಮದಾಟದಲ್ಲಿ ತೊಡಗಿಕೊಂಡಿದ್ದ ಅವರಿಬ್ಬರೂ ಸಂಜೆ ಏಳೂವರೆಯ ನಂತರವೇ ಕಛೇರಿಯಿಂದ ಹೊರಡುತ್ತಿದ್ದರು. 

ಎಲ್ಲರೂ ಕಛೇರಿಯಿಂದ ಹೊರಟು ಹೋದರೂ ಇವರಿಬ್ಬರು ಮಾತ್ರ ಏಕೆ ಇಷ್ಟೊಂದು ತಡವಾಗಿ ಹೋಗುತ್ತಾರೆ?  ಇದುವರೆಗೂ ಇರದೆ ಇದ್ದ ಅದಾವ ಘನಂದಾರಿ ಕೆಲಸ ಮೈಸೂರಿನ ಮಂಜುನಾಥನಿಗೆ ಈಗ ಅಂಟಿಕೊಂಡಿದೆ?  ಬೆಳಿಗ್ಗೆ ಎಂಟಕ್ಕೆಲ್ಲಾ ಕಛೇರಿಗೆ ಬರುವ ಸುಂದರಿ ರಾತ್ರಿ ಏಳೂವರೆ ಎಂಟರವರೆಗೂ ಯಾಕೆ ಕಛೇರಿಯಲ್ಲಿರುತ್ತಾಳೆನ್ನುವುದು ಈಗ ಭದ್ರತಾ ರಕ್ಷಕರಿಗೆ ಬಿಡಿಸಲಾಗದ ಸಮಸ್ಯೆಯಾಗಿತ್ತು.  ಕಛೇರಿಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳಿದ್ದರೂ ಸಹ ಕಛೇರಿಯ ಒಳಭಾಗದಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿರಲಿಲ್ಲ!  ಹೀಗಿರುವಲ್ಲಿ ಠೊಣಪ ಭದ್ರತಾ ರಕ್ಷಕನೊಬ್ಬ ಅವರಿಬ್ಬರ ಹಿಂದೆ ಬಿದ್ದು ಕೊನೆಗೂ ಅವರ "ಲೇಟ್ ಇವ್ನಿಂಗ್" ಪ್ರಹಸನವನ್ನು ಬೇಧಿಸಿಯೇ ಬಿಟ್ಟಿದ್ದ. 

ಅಂದು ನಡೆದಿದ್ದು ಇಷ್ಟೆ,  ಹೊಸದಾಗಿ ಕೆಲಸಕ್ಕೆ ಸೇರಿದ್ದ ಸುಂದರಿಯೂ ಮೈಸೂರು ಮಂಜುನಾಥನೂ ಒಬ್ಬರಿಗೊಬ್ಬರು ಪರಸ್ಪರ ಆಕರ್ಷಣೆಗೊಳಪಟ್ಟು ಕಛೇರಿಯಲ್ಲೇ ಅಲ್ಲದೆ ಲಾಲ್ ಬಾಗ್, ಕಬ್ಬನ್ ಪಾರ್ಕು, ಸಿನಿಮಾ ಅಂತೆಲ್ಲಾ ಸಾಕಷ್ಟು ಸುತ್ತಾಡಿ ಕೊನೆಗೆ, ಕೂಡಿ ನಲಿದು ಸಂತೃಪ್ತಿ ಹೊಂದಲು ಆಯ್ಕೆ ಮಾಡಿದ್ದು ಕಛೇರಿಯೊಳಗಿದ್ದ ಒಂದು ನಿರೀಕ್ಷಣಾ ಕೊಠಡಿಯನ್ನು!  ಸಾಕಷ್ಟು ಪ್ರತಿಷ್ಠಿತ ಸಂಸ್ಥೆಗಳಿಂದ ಇಲ್ಲಿನ ತಂತ್ರಜ್ಞರನ್ನು ಭೇಟಿಯಾಗಲು ಬರುತ್ತಿದ್ದ ಇತರ  ತಂತ್ರಜ್ಞರ ಮಾತುಕಥೆಗೆ ಸಾಕ್ಷಿಯಾಗುತ್ತಿದ್ದ ನಿರೀಕ್ಷಣಾ ಕೊಠಡಿ ಸಂಜೆಯಾಗುತ್ತಿದ್ದಂತೆ ಪ್ರೇಮಪಕ್ಷಿಗಳ ಪ್ರೇಮ ಸಲ್ಲಾಪಕ್ಕೆ, ಕಾಮದಾಟಕ್ಕೆ ಸಾಕ್ಷಿಯಾಗುತ್ತಿತ್ತು.  ಇದನ್ನು ಕಂಡು ಹಿಡಿದ ಭದ್ರತಾ ರಕ್ಷಕನೊಬ್ಬ ಮೊದಲು ಸಂಸ್ಥೆಯ ಮುಖ್ಯಸ್ಥರಿಗೆ ಫೋನ್ ಮೂಲಕ ವಿಚಾರ ತಿಳಿಸಿ ನಂತರ ನನಗೆ ತಿಳಿಸಿದ್ದ! 

ಸಂಸ್ಥೆಯ ಮುಖ್ಯಸ್ಥರು ಮರುದಿನ ಇಬ್ಬರನ್ನೂ ಕರೆದು ವಿಚಾರಿಸಿದಾಗ, ಮೊದಲು ನಿರಾಕರಿಸಿದರೂ  ನಂತರ ಬೇರೆ ದಾರಿಯಿಲ್ಲದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.  ಮದುವೆಯಾಗಿ ಗಂಡನಿದ್ದರೂ ಅವಿವಾಹಿತ ಮಂಜುನಾಥನೊಡನೆ ಪ್ರೇಮ ಸಂಬಂಧವಿಟ್ಟುಕೊಂಡು, ಕಛೇರಿಯನ್ನೇ  ತಮ್ಮ ಕಾಮದಾಟಕ್ಕೆ ತಾವು ಮಾಡಿಕೊಂಡ ತಪ್ಪಿಗೆ ಸುಂದರಿ ತನ್ನ ಕೆಲಸ ಕಳೆದುಕೊಂಡಿದ್ದಳು.  ಮೈಸೂರಿನಿಂದ ಬಂದು ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಾ ವಾರಕ್ಕೊಮೆ ಊರಿಗೆ ಹೋಗಿ ಬರುತ್ತಿದ್ದ ಮಂಜುನಾಥನನ್ನು ದೂರದ ದೆಹಲಿಯ ಶಾಖೆಗೆ ವರ್ಗಾವಣೆ ಮಾಡಿದ್ದರು.  ಕನ್ನಡಿಗನಾಗಿ ಮಲೆಯಾಳಿಗಳ ನಡುವೆ ಕನ್ನಡಿಗರಿಗೇ ವಿರುದ್ಧವಾಗಿ ವರ್ತಿಸಿದ್ದಲ್ಲದೆ ಹಲವು ಬಡ ಕನ್ನಡಿಗರನ್ನು ಕೆಲಸದಿಂದ ತೆಗೆದು ಹಾಕುವುದಕ್ಕೆ ಕಾರಣನಾಗಿದ್ದ ಮಂಜುನಾಥನ ಮೇಲೆ  ಭದ್ರತಾ ರಕ್ಷಕರು ಬಹಳ ಸಮಂಜಸವಾಗಿಯೇ ಸೇಡು ತೀರಿಸಿಕೊಂಡಿದ್ದರು.  ಕಪ್ಪಿಟ್ಟ ಮುಖದೊಡನೆ  ಅಂತಿಮ ವಿದಾಯ ಹೇಳಲು ಬಂದವನಿಗೆ ನಾನಂತೂ ಏನೂ ಹೇಳದೆ ಸುಮ್ಮನೆ ಅವನ ಮುಖ ನೋಡಿದ್ದೆ. 
 


2 comments:

ಜಲನಯನ said...

ಬಹಳ ಮನಮುಟ್ಟುವ ಬರೆಹ. ಕೆಲವೊಮ್ಮೆ ಇದು ನಂಬಲಾಗದ ಮಾತು ಎನಿಸುತ್ತದೆ ಆದರೆ ನಡೆದಮೇಲೆ ಘಟನೆ..ಹೀಗೂ ಆಗುತ್ತದಲ್ಲಾ ??!! ಎನಿಸುತ್ತದೆ...

manju said...

ಹೌದು ಭಾಯ್, ನಂಬಲಸಾಧ್ಯವೆನ್ನಿಸುವಂಥ ಕೆಲವು ಘಟನೆಗಳ ಸಮ್ಮಿಶ್ರಣವೇ ನಮ್ಮ ಜೀವನವಲ್ಲವೆ? :-)