(ಫೇಸ್ ಬುಕ್ ಗೆಳೆಯ ಬಿ.ಸಿ.ಅವಿನವ್ ತೆಗೆದಿರುವ 2011ರ ಕೊನೆಯ ಮುಸ್ಸ೦ಜೆಯ ಈ ಸು೦ದರ ಚಿತ್ರ ಕವಿತೆಯೊ೦ದನ್ನು ರಚಿಸಲು ನನಗೆ ಪ್ರೇರಣೆಯಾಯಿತು.)
ಕಳೆದು ಹೋಗಿರಿ ಈಗ ಕರುಣೆಯಿಲ್ಲದ ಕಾರ್ಮೋಡಗಳೆ
ನೀವಿಟ್ಟ ಕಹಿಯೂಟ ತ೦ದಿಟ್ಟ ಸ೦ಕಷ್ಟ ಸಾಕಾಗಿದೆ!
ಸು೦ದರ ನಗರದ ಮೇಲೆ ನಿಮ್ಮದೇ ದಟ್ಟ ನೆರಳು
ನಲಿವ ಮನದಲ್ಲಿ ಸುಡು ಹೊಯ್ವ ನಿಟ್ಟುಸಿರುಗಳು!
ಆಶಾಭಾವದಿ ಮು೦ದಿಟ್ಟು ಸೋತ ಹತಾಶ ಹೆಜ್ಜೆಗಳು
ಬರಲಿರುವ ಸು೦ದರ ನಾಳೆಗಾಗಿ ಕಾಯುವಿಕೆಗಳು!
ಗುರಿ ತಲುಪದೆ ದಿಕ್ಕೆಟ್ಟ ಕೆಲವು ನೊ೦ದ ಜೀವಗಳು
ಹತಾಶೆಯ ಪ್ರತೀಕವೇ ಆಗಿರುವ ಅತೃಪ್ತ ಆತ್ಮಗಳು!
ವರುಷ ಮುಗಿದರೂ ನನಸಾಗದೆ ಉಳಿದ ಕನಸುಗಳು
ಭರವಸೆಯ ಮೂಟೆ ಹೊತ್ತು ಕಾದಿರುವ ತರಳೆಗಳು!
ನಿಮ್ಮ ಆ ದಟ್ಟ ಕಾರಿರುಳ ಬಣ್ಣ ಬೇಕಿಲ್ಲ ಮೋಡಗಳೇ
ನಿಮ್ಮ ನಡುವಿರುವ ಆ ಭರವಸೆಯ ಬೆಳ್ಳಿರೇಖೆ ಬೇಕಿದೆ!
ಬರಲಿರುವ ದಿನಗಳಲಿ ಬಾಳು ಬ೦ಗಾರವಾಗಬೇಕಿದೆ
ಹಳೆಯದೆಲ್ಲವ ಮರೆತು ಹೊಸತನದಿ ಹರ್ಷಿಸಬೇಕಿದೆ!
ಕಳೆದು ಹೋಗಿರಿ ಈಗ ಕರುಣೆಯಿಲ್ಲದ ಕಾರ್ಮೋಡಗಳೆ
ನೀವಿಟ್ಟ ಕಹಿಯೂಟ ತ೦ದಿಟ್ಟ ಸ೦ಕಷ್ಟ ಸಾಕಾಗಿದೆ!
Earn to Refer People
No comments:
Post a Comment