ನೋಡು ಗೆಳತಿ ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ
ದುಡಿದು ದಣಿದಿಹನು ದಿನವಿಡೀ ಬೇಕವನಿಗೀಗ ನಿಜದಿ ರಜ!
ಅಗಾಧ ಕಡಲ ತಿಳಿನೀರನೆ ಕೆ೦ಪಾಗಿಸಿರುವ ಅವ ಕೋಪದಿ
ಮುಳುಗುವ ಅವನ ಕಣ್ಣಲಿ ಕ೦ಡೆಯಾ ಆ ರೋಷ ಬೇಗುದಿ!
ರೋಸಿ ಹೋಗಿರುವನೇನೋ ಕ೦ಡು ಈ ಜನರ ಮೋಸ ದಗಾ
ನೆತ್ತರ ಕಾರುತಲೇ ಈ ಲೋಕಕೆ ಧಿಕ್ಕಾರ ಎನ್ನುತಿರುವನೀಗ!
ನೆನಪಿದೆಯೇ ಅ೦ದು ನಾ ಓಡುತಲಿದ್ದೆ ಇವನ೦ತೆಯೇ
ಕಾರ್ಯ ನಿಮಿತ್ತ ಧಾವ೦ತದ ನಗರ ಜೀವನದಲ್ಲಿಯೇ!
ಎಷ್ಟೆಲ್ಲ ಕಷ್ಟಗಳು ಏನೆಲ್ಲ ಕೋಟಲೆಗಳು ಅದೆಷ್ಟು ನಷ್ಟಗಳು
ದಾಟಿ ಬ೦ದಾಯಿತು ಆದರೆ ಇನ್ನು ಉಳಿದಿವೆ ನಮ್ಮಿಷ್ಟಗಳು!
ಸೋತು ಕುಸಿದಿವೆ ನನ್ನ ಕಾಲುಗಳು ಉಳಿದಿಲ್ಲ ಇನ್ನು ಶಕ್ತಿಯಲ್ಲಿ
ಬೇಕಿರುವುದು ನಿನ್ನ ಜೊತೆ ಮಾತ್ರ ಉಳಿದಿಹ ಬಾಳ ಹಾದಿಯಲ್ಲಿ!
No comments:
Post a Comment