Saturday, May 8, 2010

ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ

ಜಗದ ಎಲ್ಲ ಮಾತೆಯರಿಗೂ ವಂದಿಸುತ್ತಾ "ವಿಶ್ವ ಅಮ್ಮಂದಿರ ದಿನ" ಕ್ಕಾಗಿ ಈ ಲೇಖನ.

"ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ" ಎಂಬ ಮಧುರ ಗೀತೆಯ ನೆನೆಯುತ್ತ ಮುಂದುವರಿಸುವೆ. ಎಲ್ಲೆಡೆ ಇರಲಾಗದ ದೇವರು ತನ್ನ ಇರುವಿಕೆಯನ್ನು ಎಲ್ಲರಿಗೂ ಸಾರಲೆಂದೇ ಅಮ್ಮನನ್ನು ಸೃಷ್ಟಿಸಿದನಂತೆ. ಹೆಣ್ಣು, ಗಂಡಿನ ಜೊತೆಯಾಗಿ ಸೃಷ್ಟಿ ಚಕ್ರವ ಮುಂದುವರೆಸುತ್ತಾ, ನವ ತಾರುಣ್ಯದ ತರುಣಿ, ಗರ್ಭವತಿಯಾಗಿ ನವಮಾಸ ತನ್ನ ಗರ್ಭದಲ್ಲಿ ಹೊಸದೊಂದು ಜೀವವನ್ನು ಹೊತ್ತು ಅದರ ಮುಲುಕಾಟಗಳಿಗೆ ಸ್ಪಂದಿಸಿ ಅಪಾರ ನೋವಿನೊಡನೆ ಜಗಕಿಳಿದು ಬಂದ ಕಂದನನ್ನು ತನ್ನ ಮೊಲೆ ಹಾಲುಣಿಸಿ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ, ತಿದ್ದಿ ತೀಡಿ ಬೆಳೆಸುವಳು ಅಮ್ಮ. ಆ ಮುದ್ದು ಕಂದನ ತೊದಲ್ನುಡಿಯಲ್ಲಿ ತನ್ನೆಲ್ಲ ನೋವನ್ನು ಮರೆಯುವವಳು, ತೆವಳುವ ಕಂದ ತಪ್ಪು ಹೆಜ್ಜೆಯಿಡುತ್ತಾ, ಜೋಲಿ ಹೊಡೆಯುತ್ತಾ, ನಡೆವುದ ಕಲಿತಾಗ ಜಗವ ಗೆದ್ದಂತೆ ಸಂಭ್ರಮಿಸುವವಳು ಅಮ್ಮ. ಮಕ್ಕಳ ಏಳ್ಗೆಯನ್ನು ನೋಡಿ, ಅವರ ನಲಿವಿನಲ್ಲಿ ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವವಳು ಅಮ್ಮ.

ನನ್ನ ಅಮ್ಮ ಮೈಸೂರಿನ ಸಾಮಾನ್ಯ ಕುಟುಂಬದವರು, ಸುಸಂಸ್ಕೃತ ಭಾಷೆ, ಹಿತ ಮಿತವಾದ ಮಾತು, ಪೂಜೆ ಪುನಸ್ಕಾರಗಳಲ್ಲಿ ಎಂದೂ ಮುಂದೆ. ತಾವು ಪೂಜೆ ಮಾಡುವುದರ ಜೊತೆಗೆ ನಾವು ನಾಲ್ಕು ಮಕ್ಕಳೂ ಅವರ ಜೊತೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದರು. ಕೇವಲ ಮೂರನೆಯ ತರಗತಿ ಓದಿದ್ದ ಅಪ್ಪ, ತಮ್ಮ ಅಡುಗೆ ಕೆಲಸದ ಜೊತೆಗೆ ಅಮ್ಮನನ್ನು ಓದಿಸಿ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ದಾದಿಯ ತರಬೇತಿಗೆ ಸೇರಿಸಿದರಂತೆ, ಕೇವಲ ಒಂದೂವರೆ ವರ್ಷದವನಾಗಿದ್ದ ನಾನು ಅನಿವಾರ್ಯವಾಗಿ ಅಮ್ಮನಿಂದ ಅಗಲಬೇಕಾಯಿತು. ತರಬೇತಿ ಮುಗಿಯುವವರೆಗೂ ವಾರಕ್ಕೊಮ್ಮೆ ಅಪ್ಪ ನನ್ನನ್ನು ಕರೆದೊಯ್ದು ಅಮ್ಮನ ಭೇಟಿ ಮಾಡಿಸುತ್ತಿದ್ದರಂತೆ. ತರಬೇತಿ ಮುಗಿದು ಅಮ್ಮನಿಗೆ ಕೆಲಸ ಸಿಕ್ಕಿದಾಗ ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಒಂದನೆ ತರಗತಿಯಲ್ಲಿ ಓದುತ್ತಿದ್ದ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲಿಗೆ ಬಂದಿದ್ದರು. ಅಲ್ಲಿ ದಾದಿಯ ಕೆಲಸದಲ್ಲಿದ್ದಾಗಲೇ ನನ್ನ ತಮ್ಮ ಜನಿಸಿದ. ತಮ್ಮ ಕೆಲಸದ ನಂತರ ಅಮ್ಮ ನಮಗಾಗಿ ಸಾಕಷ್ಟು ಸಮಯ ವ್ಯಯಿಸುತ್ತಿದ್ದರು. ನಾಲ್ಕು ವರ್ಷ ಮಂಡಿಕಲ್ಲಿನ ವಾಸದ ನಂತರ ಅಮ್ಮನಿಗೆ ತುಮಕೂರು ಜಿಲ್ಲೆಯ ಕೊರಟಗೆರೆಗೆ ವರ್ಗಾವಣೆಯಾದಾಗ ನಮ್ಮ ಪಯಣ ಅಲ್ಲಿಗೆ. ಅಪ್ಪನ ಹೋಟೆಲ್ಲಿನ ಆದಾಯ ಅವರ ಖರ್ಚಿಗೆ ಸರಿ ಹೋಗುತ್ತಿತ್ತು, ನಮ್ಮೆಲ್ಲರ ವಿದ್ಯಾಭ್ಯಾಸ ಮತ್ತು ಮನೆಯ ಜವಾಬ್ಧಾರಿ ಅಮ್ಮನ ಸಂಬಳದ ಮೇಲೆ ಅವಲಂಬಿತವಾಗಿತ್ತು. ಅಮ್ಮನಿಗೆ ಸಂಬಳ ಬಂದ ದಿನ ಮನೆಯಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ನಾನು ನನ್ನ ಅಕ್ಕ ಇಬ್ಬರೂ ಅಮ್ಮನ ಜೊತೆ ರೇಷನ್ ಅಂಗಡಿಗೆ ಹೋಗಿ ಮಾರುದ್ಧದ ಚೀಟಿಯಲ್ಲಿ ಅಮ್ಮ ಬರೆದಿದ್ದ ಎಲ್ಲ ಸಾಮಾನುಗಳನ್ನೂ ಕಟ್ಟಿಸಿ ಮನೆಗೆ ತರುತ್ತಿದ್ದೆವು. ಆಗೆಲ್ಲಾ ನಮಗೆ ಬೇಕಾದ ಬಿಸ್ಕಟ್, ಚಾಕಲೇಟ್ಗಳನ್ನು ನಾವಿಬ್ಬರೂ ಸಾಕಷ್ಟು ಖರೀದಿಸಬಹುದಾಗಿತ್ತು. ಆ ಖುಷಿಯ ದಿನಗಳನ್ನು ನೆನೆದರೆ ಈಗಲೂ ಮನಸ್ಸು ಪುಳಕಿತಗೊಳ್ಳುತ್ತದೆ.

ಮತ್ತೆ ಅಮ್ಮನಿಗೆ ಕೊರಟಗೆರೆಯಿಂದ ತಿಪಟೂರಿಗೆ ವರ್ಗಾವಣೆಯಾದಾಗ ನಮ್ಮ ಕುಟುಂಬದ ಪ್ರಯಾಣ, ಹೊಸ ಜಾಗ, ಹೊಸ ಮನೆ, ಹೊಸ ವಾತಾವರಣ. ಅಲ್ಲಿಯೇ ಸುಮಾರು ೧೫ ವರ್ಷ ಸೇವೆ ಸಲ್ಲಿಸಿದ ಅಮ್ಮ, ನಾವು ವಾಸವಿದ್ದ ಇಡೀ ಗಾಂಧಿನಗರ ಮತ್ತದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ "ನರ್ಸಮ್ಮ"ನಾಗಿ ಜನಪ್ರಿಯವಾಗಿದ್ದರು. ಅದೆಷ್ಟು ನೂರು ಹೆರಿಗೆಗಳನ್ನು ಮಾಡಿಸಿದರೋ, ಅದೆಷ್ಟು ಸಾವಿರ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದರೋ ಲೆಕ್ಕವೇ ಇಲ್ಲ. ಸರಿ ರಾತ್ರಿಯಲ್ಲಿಯೂ ಜನರು ಬಂದು ನಮ್ಮ ಮನೆಯ ಬಾಗಿಲು ತಟ್ಟುತ್ತಿದ್ದರು, ಅವರ ಮನೆಯ ಹೆಣ್ಣು ಮಕ್ಕಳ ಹೆರಿಗೆಗಾಗಿ ಸಹಾಯ ಯಾಚಿಸುತ್ತಿದ್ದರು. ಎಂದೂ ಅಮ್ಮ ಯಾರ ಮೇಲೂ ಕೋಪಿಸಿಕೊಳ್ಳುತ್ತಿರಲಿಲ್ಲ, ಯಾರಿಂದಲೂ ಅಮ್ಮ ಹಣ ಕೇಳುತ್ತಿರಲಿಲ್ಲ. ಅಮ್ಮನ ಜೊತೆ ಅಪ್ಪ ಅಥವಾ ನಾನು ಬೆಂಗಾವಲಾಗಿ ಹೋಗುತ್ತಿದ್ದೆವು. ಸುಸೂತ್ರವಾಗಿ ಹೆರಿಗೆ ಮಾಡಿಸಿದ ಅಮ್ಮ ನಗು ಮುಖದಿಂದ ಆ "ನವಮಾತೆ" ಯನ್ನು ಹರಸುತ್ತಿದ್ದರು. ಮನೆಗೆ ಬಂದ ನಂತರ ಸರಿ ರಾತ್ರಿಯಲ್ಲಿಯೂ ತಪ್ಪದೆ ಸ್ನಾನ ಮಾಡಿಯೇ ಮಲಗುತ್ತಿದ್ದರು. ಒಮ್ಮೆ ತಿಪಟೂರಿನ ಪಕ್ಕದ ಗೊರಗೊಂಡನಹಳ್ಳಿಯಲ್ಲಿ ಒಂದು ಹೆರಿಗೆಯ ಸಮಯದಲ್ಲಿ ಮಗು ಅಡ್ಡವಾಗಿ ನಿಂತು ಹೆರಿಗೆಗೆ ತೊಂದರೆಯಾದಾಗ ಎತ್ತಿನ ಗಾಡಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ತಂದು ಶಸ್ತ್ರಚಿಕಿತ್ಸೆ ಮಾಡಿಸುವಷ್ಟರಲ್ಲಿ ತಾಯಿಯ ಪ್ರಾಣ ಹಾರಿ ಹೋಗಿತ್ತು, ಆದರೆ ಮಗು ಬದುಕಿ ಉಳಿದಿತ್ತು. ಆಗ ಅಮ್ಮ ತಮ್ಮ ಮಗಳೇ ಸತ್ತಂತೆ ಕಂಬನಿ ಸುರಿಸಿ ಗೋಳಾಡಿದ್ದರು. ಪದ್ಮಶ್ರೀ ಡಾ.ಎಂ.ಸಿ.ಮೋದಿಯವರ ನೇತೃತ್ವದಲ್ಲಿ "ಅಂಧತ್ವ ನಿವಾರಣಾ ಶಿಬಿರಗಳು" ನಡೆದಾಗ ತಮಗೆ ಗೊತ್ತಿದ್ದ ಎಲ್ಲಾ ವಯಸ್ಕರನ್ನೂ ಅಲ್ಲಿಗೆ ಬರುವಂತೆ ಮಾಡಿ ನೂರಾರು ಜನರಿಗೆ ದೃಷ್ಟಿ ಸಿಗುವಂತೆ ಶ್ರಮಿಸಿದ್ದರು. ಹೀಗೆ ಅತ್ಯಂತ ಕರುಣಾಮಯಿಯಾಗಿದ್ದರು ಅಮ್ಮ.

ಸಿಡುಕು ಬುದ್ಧಿಯ ಅಪ್ಪ ನನ್ನನ್ನು ನನ್ನ ತುಂಟಾಟಗಳಿಗಾಗಿ ಹಿಡಿದು ತದುಕಿದಾಗಲೆಲ್ಲಾ ನನ್ನನ್ನು ಸಮಾಧಾನಿಸಿ, ರಾಯರ ಮಠಕ್ಕೋ ಇಲ್ಲ ಮಾರಮ್ಮನ ದೇವಸ್ಥಾನಕ್ಕೋ ಕರೆದುಕೊಂಡುಹೋಗುತ್ತಿದ್ದರು. ತಿಪಟೂರಿನ ಕೋಟೆ ಪ್ರದೇಶದಲ್ಲಿದ್ದ ಗುರುರಾಯರ ಮಠದಲ್ಲಿ ಪ್ರತಿ ಗುರುವಾರ ಅಮ್ಮ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಸುಶ್ರಾವ್ಯವಾಗಿ ರಾಯರ ಭಕ್ತಿಗೀತೆಗಳನ್ನು ಹಾಡುತ್ತಿದ್ದರು, ನನ್ನಿಂದಲೂ ಹಾಡಿಸುತ್ತಿದ್ದರು. ಸುಮಾರು ೪ ವರ್ಷಗಳ ಕಾಲ ಇದು ಅನೂಚಾನವಾಗಿ ನಡೆದು ಬಂತು. ನನ್ನ ತುಂಟಾಟಗಳು ಹೆಚ್ಚಾದಾಗ ಗಾಂಧಿನಗರದಲ್ಲಿದ್ದ ಮಾರಮ್ಮನ ಗುಡಿಯಲ್ಲಿ ಶುಕ್ರವಾರ ಪೂಜೆ ಮಾಡಿಸಿ, ಮಂತ್ರ ಹಾಕಿಸಿ ಒಂದು ತಾಯಿತವನ್ನೂ ಕಟ್ಟಿಸುತ್ತಿದ್ದರು! ಆದರೆ ಅದು ಮೂರುದಿನವೂ ನನ್ನ ಮೈ ಮೇಲೆ ಇರುತ್ತಿರಲಿಲ್ಲ!! ನಾನು ಪದವಿ ತರಗತಿಗೆ ಸೇರಿದಾಗ ಎನ್.ಸಿ.ಸಿ. ತರಬೇತಿ ಶಿಬಿರಗಳಿಗೆ, ಯೂತ್ ಹಾಸ್ಟೆಲ್ ವತಿಯಿಂದ ನಾನು ಭಾಗವಹಿಸಿದ ಸೈಕಲ್ ಪ್ರವಾಸಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ನಾನು ತಂಡದ ನಾಯಕನಾಗಿ ನಿಯುಕ್ತನಾಗಿ ಯಶಸ್ವಿಯಾಗಿ "ದೆಹಲಿ ಸೈಕಲ್ ಪ್ರವಾಸ" ಮುಗಿಸಿ ಬಂದಾಗ, ಅಂದಿನ ಶಾಸಕರಾಗಿದ್ದ ಟಿ.ಎಂ. ಮಂಜುನಾಥ ಮತ್ತು ಸಚಿವರಾಗಿದ್ದ ಲಕ್ಷ್ಮೀನರಸಿಂಹಯ್ಯನವರು ನಮ್ಮನ್ನು ಸನ್ಮಾನಿಸಿದ ಸಮಾರಂಭದಲ್ಲಿ ಮೊದಲ ಸಾಲಿನಲ್ಲಿ ಕುಳಿತು ಭಾವುಕರಾಗಿ ಆನಂದಬಾಷ್ಪಗರೆಯುತ್ತಾ ಅಪ್ಪ ಬರದಿದ್ದ ಕೊರತೆಯನ್ನು ತುಂಬಿದ್ದರು. ನಾ ಕಾಣದ ಅಪ್ಪನ ಪ್ರೀತಿಯ ಕೊರತೆಯನ್ನು ತುಂಬಿಸಲು ಅಮ್ಮ ಅಹರ್ನಿಶಿ ಯತ್ನಿಸುತ್ತಿದ್ದರು.

ಅಮ್ಮ, ಅಪ್ಪನನ್ನು ತುಂಬಾ ಪ್ರೀತಿಸುತ್ತಿದ್ದರು, ತಮ್ಮ ಮೈಸೂರು ಸಂಸ್ಕೃತಿಯ "ಏನೂಂದ್ರೇ" ಅನ್ನದೆ ಎಂದೂ ಮಾತು ಆರಂಭಿಸುತ್ತಿರಲಿಲ್ಲ, ತಮ್ಮ ಲಾಟರಿ ಚಟದಿಂದ ಅಪ್ಪ ಸಾಕಷ್ಟು ನಷ್ಟ ಮಾಡಿದರೂ ಸಹ ಅಪ್ಪನನ್ನು ಎಂದೂ ಬಿಟ್ಟು ಕೊಡುತ್ತಿರಲಿಲ್ಲ. ಅಪ್ಪನ ಕೈಲಿ ಒದೆ ತಿಂದು ಸಾಕಾಗಿ ನಾನು ಸೆಡ್ಡು ಹೊಡೆದು ತಿರುಗಿ ಬಿದ್ದಾಗ ನನ್ನನ್ನು ಆದಷ್ಟು ಸಮಾಧಾನಿಸಲು ಯತ್ನಿಸುತ್ತಿದ್ದರು. "ತಂದೆ-ಮಗ" ಇಬ್ಬರಲ್ಲಿ ಯಾರ ಪರವಾಗಿ ನಿಲ್ಲಬೇಕೆನ್ನುವ ಸಂದಿಗ್ಧದಲ್ಲಿ ಸಾಕಷ್ಟು ಹೊಯ್ದಾಡುತ್ತಿದ್ದರು. ಅಮ್ಮ ಎಷ್ಟೇ ಪ್ರಯತ್ನಿಸಿದರೂ ಅಪ್ಪನ ಸಿಡುಕುತನ, ಮುಂಗೋಪಗಳಿಂದ ನಮ್ಮಿಬ್ಬರ ನಡುವೆ ಅಗಾಧವಾಗಿ ಮೂಡಿದ್ದ ಕಂದಕವನ್ನು ಮುಚ್ಚುವಲ್ಲಿ ಸೋತಿದ್ದರು. ಪದವೀಧರನಾಗಿ ನಾನು ಬೆಂಗಳೂರಿಗೆ ಬಂದು ಕೆಲಸಕ್ಕೆ ನಿಂತ ನಂತರ ನನ್ನ ತಮ್ಮನನ್ನೂ ಬೆಂಗಳೂರಿಗೆ ಎಳೆ ತಂದು ಕೆಲಸಕ್ಕೆ ಸೇರಿಸಿದೆ. ಆಗ ಅಮ್ಮ ಬೆಂಗಳೂರಿಗೇ ವರ್ಗಾವಣೆ ಮಾಡಿಸಿಕೊಂಡು ಬಂದರು, ನಾನಿರುವಲ್ಲಿಯೇ ದೊಡ್ಡ ಮನೆ ಮಾಡಿ ಎಲ್ಲರೂ ಒಟ್ಟಿಗೆ ಇರೋಣವೆಂದ ನನ್ನ ಮಾತಿಗೆ ಅಪ್ಪ ಸುತರಾಂ ಒಪ್ಪದಿದ್ದಾಗ ವಿಧಿಯಿಲ್ಲದೆ ವೈಟ್ ಫೀಲ್ಡಿನಲ್ಲಿ ಮನೆ ಮಾಡಿದ್ದರು. ಅದುವರೆಗೂ ನನ್ನ ಜೊತೆಯಿದ್ದ ತಮ್ಮನನ್ನು ಅಮ್ಮನ ಜೊತೆಗೆ ಕಳುಹಿಸಿದ್ದೆ. ನನ್ನ ಕೆಲಸದಲ್ಲಿನ ಸಂಬಳ ಸಾಕಾಗದೆ ನಾನು ಹಲಸೂರಿನ ಸೋಮೇಶ್ವರ ದೇವಾಲಯದ ಮುಂದಿದ್ದ "ಬೆರಳಚ್ಚು ಕೇಂದ್ರ"ದಲ್ಲಿ ಬಿಡುವಿನ ವೇಳೆಯಲ್ಲಿ ಸಾವಿರಾರು ಬಾಡಿಗೆ, ಮಾರಾಟದ ಕರಾರು ಪತ್ರಗಳನ್ನು ಬೆರಳಚ್ಚಿಸುತ್ತಿದ್ದೆ. ಮನೆಯಲ್ಲಿ ಅಪ್ಪ ಜಗಳವಾಡೆದಾಗೆಲ್ಲ ಅಮ್ಮ ಸೀದಾ ಅಲ್ಲಿಗೆ ಬಂದು ಬಿಡುತ್ತಿದ್ದರು, ಆಗೆಲ್ಲಾ ನಾನು ಹೋಗಿ ಅಪ್ಪನಿಗೆ ಬುದ್ಧಿ ಹೇಳಿ ಬರಬೇಕಿತ್ತು. ಆದರೆ ಅಪ್ಪ ಎಂದೂ ನನ್ನ ಮನೆಗೆ ಬರುತ್ತಿರಲಿಲ್ಲ. ಹೀಗಿದ್ದ ಅಮ್ಮ ಕೊನೆಗೊಂದು ದಿನ ನಿವೃತ್ತರಾದರು, ತಮಗೆ ಸಾಕಷ್ಟು ಹಣ ಬಂದಾಗ ಒಂದು ಸೈಟು ಖರೀದಿಸಿ ಸ್ವಂತ ಮನೆ ಕಟ್ಟಬೇಕೆನ್ನುವ ಆಸೆಯಿತ್ತು ಅಮ್ಮನಿಗೆ, ನಾನಿದ್ದ ಲಗ್ಗೆರೆಯಲ್ಲಿ ಒಂದು ದೊಡ್ಡ ಸೈಟು ಕೇವಲ ೨ ಲಕ್ಷಕ್ಕೆ ಮಾರಾಟಕ್ಕಿತ್ತು, ಅಮ್ಮನಿಗೆ ಮನಸ್ಸಿತ್ತು, ಆದರೆ ಅಪ್ಪ ಅಲ್ಲಿಗೆ ಬರಲು ಮತ್ತೆ ಒಪ್ಪಲಿಲ್ಲ, ಸೈಟು ತೆಗೆದರೆ ವೈಟ್ ಫೀಲ್ಡಿನಲ್ಲೇ ತೆಗೆಯಬೇಕೆಂದು ಹಠ ಹಿಡಿದರಂತೆ. ಮತ್ತೊಮ್ಮೆ ಮಗನೋ ಗಂಡನೋ ಎಂಬ ಸಂದಿಗ್ಧದಲ್ಲಿ ಸಿಕ್ಕಿ ನರಳಿದರು ಅಮ್ಮ. ಕೊನೆಗೆ ’ನಾನು ದೂರವೇ ಇರುತ್ತೇನೆ, ನೀವೆಲ್ಲ ಚೆನ್ನಾಗಿರಿ, ಅಲ್ಲೇ ಸೈಟು ತೆಗೆದು ಮನೆ ಕಟ್ಟಿಸಿ, ನನಗೇನೂ ಬೇಜಾರಿಲ್ಲ’ ಎಂದು ಸಮಾಧಾನ ಮಾಡಿ ಕಳುಹಿಸಿದೆ. ಕೊನೆಗೂ ಅಲ್ಲಿ ಸೈಟು ಖರೀದಿಸಿ ಮನೆ ಕಟ್ಟಿಸಿದರು. ತಮ್ಮ ಸ್ವಂತ ಮನೆಯಲ್ಲಿ ಪ್ರಶಾಂತವಾದ ನಿವೃತ್ತ ಜೀವನದ ಕನಸು ಕಂಡಿದ್ದರು ಅಮ್ಮ, ಆದರೆ ವಿಧಿ ಬಿಡಬೇಕಲ್ಲ!

ಮನೆ ಕಟ್ಟಿ ಗೃಹ ಪ್ರವೇಶವಾಗುವ ಹೊತ್ತಿಗೆ ಸರಿಯಾಗಿ ನನ್ನ ತಮ್ಮನಿಗೆ ದುಬೈನಲ್ಲಿ ಕೆಲಸಕ್ಕೆ ಆದೇಶ ಬಂತು, ಅವನು ಹೊರಟು ನಿಂತ, ನಂತರ ಕೆಲದಿನಗಳಲ್ಲೇ ಹೆಂಡತಿ ಮಗನನ್ನೂ ಅಲ್ಲಿಗೇ ಕರೆಸಿಕೊಂಡ. ತಮ್ಮನ ಸಂಸಾರದ ಜೊತೆ ಹೊಂದಿಕೊಂಡು ನೆಮ್ಮದಿಯಿಂದಿದ್ದ ಅಮ್ಮ ಈಗ ಒಂಟಿಯಾಗಿದ್ದರು. ಅಪ್ಪ ಯಥಾ ಪ್ರಕಾರ ತಮ್ಮ ದುಡುಕು ಬುದ್ಧಿ, ಸಿಡುಕುತನವನ್ನು ಮುಂದುವರೆಸಿ ಅಮ್ಮನ ನೆಮ್ಮದಿ ಕೆಡಿಸುತ್ತಿದ್ದರು. ತುಂಬಾ ಬೇಜಾರಾದಾಗ ಸೀದಾ ನಮ್ಮ ಮನೆಗೆ ಬಂದು ವಾರಗಟ್ಟಲೆ ಉಳಿದುಬಿಡುತ್ತಿದ್ದರು. ನನ್ನ ಹೆಂಡತಿಯ ಕೈಯಲ್ಲಿನ ರಾಗಿ ಮುದ್ದೆ, ಮಾಂಸದ ಸಾರು ಅಮ್ಮನಿಗೆ ತುಂಬಾ ಪ್ರಿಯವಾಗಿತ್ತು. ೩೦ ವರ್ಷ ದುಡಿದು ನಿವೃತ್ತರಾಗಿದ್ದ ಅಮ್ಮನಿಗೆ ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆಗಳು ಬಿಡದ ನೆಂಟರಂತೆ ಅಂಟಿಕೊಂಡಿದ್ದವು. ಪ್ರತಿದಿನದ ಮಾತ್ರೆ ಔಷಧಿಗಳ ಬಗ್ಗೆ ತಾತ್ಸಾರ ತೋರಿದ್ದರಿಂದ ಅಮ್ಮನ ಆರೋಗ್ಯ ಕೈಕೊಟ್ಟು, ಅವರ ಮೂತ್ರಪಿಂಡಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಪರಿಚಿತರಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ಡಾ.ಕೃಷ್ಣಮೂರ್ತಿಯವರಲ್ಲಿ ತೋರಿಸಿದಾಗ ಅಮ್ಮನ ಎರಡೂ ಮೂತ್ರಪಿಂಡಗಳು ಹಾಳಾಗಿರುವುದು ಸ್ಪಷ್ಟವಾಯಿತು, ನನ್ನದೂ ಅಮ್ಮನದೂ ಒಂದೇ ರಕ್ತದ ಗುಂಪಾಗಿದ್ದುದರಿಂದ ನಾನು ನನ್ನ ಒಂದು ಮೂತ್ರಪಿಂಡವನ್ನು ಅಮ್ಮನಿಗೆ ಕೊಡಲು ಸಿದ್ಧನಾದೆ. ಆದರೆ "ಸಕ್ಕರೆ ಖಾಯಿಲೆ ಅಧಿಕ ಮಟ್ಟದಲ್ಲಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ಮೂತ್ರಪಿಂಡ ಕಸಿ ಮಾಡುವುದು ಪ್ರಯೋಜನವಿಲ್ಲ, ಇದ್ದರೆ ಇನ್ನಾರು ತಿಂಗಳು ಇದ್ದಾರು, ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಿ" ಎಂದು ನಿರ್ಭಾವುಕರಾಗಿ ಎದ್ದು ಹೋಗಿದ್ದರು. ಅಂದಿನಿಂದ ವಿಕ್ಟೋರಿಯಾ ಆಸ್ಪತ್ರೆ ಅಮ್ಮನ ಮನೆಯಾಯಿತು, ನಾನು ನನ್ನ ಕೆಲಸದ ಜೊತೆಗೆ ಪ್ರತಿದಿನ ಆಸ್ಪತ್ರೆಗೆ ಹೋಗುವುದು, ಅಲ್ಲಿನ ಆಯಾ, ದಾದಿಯರಿಗೆಲ್ಲ ಸಾಕಷ್ಟು ಕಾಣಿಕೆ ಕೊಡುತ್ತಾ ಅಮ್ಮನಿಗೆ ಏನೂ ತೊಂದರೆಯಾಗದಂತೆ ನೊಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೆ. ಮನೆಯಿಂದ ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆಯಾಗದ ಕಾರಣ ಕಲಾಸಿ ಪಾಳ್ಯದ ನಾಯ್ಡು ಹೋಟೆಲಿನ ರಾಗಿಮುದ್ದೆ, ಮಟನ್ ಕೈಮಾ ಅಮ್ಮನಿಗೆ ಪ್ರತಿ ದಿನದ ಊಟವಾಯ್ತು. ಹಣ ನೀರಿನಂತೆ ಖರ್ಚಾಗುತ್ತಿತ್ತು, ಸಿಕ್ಕ ಸಿಕ್ಕಲ್ಲಿ ಸಾಲ ಮಾಡಿ ಹೇಗಾದರೂ ಅಮ್ಮನನ್ನು ಉಳಿಸಿಕೊಳ್ಳಬೇಕೆಂದು ಹೆಣಗಾಡುತ್ತಿದ್ದೆ. ದುಬೈಗೆ ಹೋದ ತಮ್ಮ ಒಮ್ಮೆ ಹೆಂಡತಿ ಮಗನೊಡನೆ ಬಂದು ಅಮ್ಮನನ್ನು ನೋಡಿಕೊಂಡು ಹೋದವನು ಹತ್ತು ಸಾವಿರ ಕೈಯಲ್ಲಿಟ್ಟು ದುಬೈಗೆ ಹೋದ ನಂತರ ಮತ್ತಷ್ಟು ಕಳಿಸುತ್ತೇನೆಂದು ಹೇಳಿ ಹೋಗಿದ್ದ, ಆದರೆ ಮತ್ತೆ ಇತ್ತ ತಲೆ ಹಾಕಿರಲಿಲ್ಲ!

ಸುಮಾರು ಎಂಟು ತಿಂಗಳು ನರಳಿದ ಅಮ್ಮ ಕೊನೆಗೊಂದು ದಿನ ಆಸ್ಪತ್ರೆಯಲ್ಲಿ ಸಿಡುಕುತ್ತಲೇ ಇದ್ದ ಅಪ್ಪನನ್ನು ಬಳಿ ಕರೆದು ತನ್ನನ್ನು ಎತ್ತಿ ತನ್ನ ಭುಜಕ್ಕಾನಿಸಿಕೊಂಡು ಕೂರಿಸಿಕೊಳ್ಳಲು ಹೇಳಿ, ಅವರ ಭುಜದ ಮೇಲೆಯೇ ಕೊನೆಯುಸಿರೆಳೆದಿದ್ದರು. ನನ್ನ ದೈನಂದಿನ ಕೆಲಸಗಳನ್ನು ಮುಗಿಸಿ ದಣಿದು ಮನೆಗೆ ಬಂದು ಹೆಂಡತಿ ಪ್ರೀತಿಯಿಂದ ಬಡಿಸಿದ ರಾಗಿಮುದ್ದೆಯ ತುತ್ತನ್ನು ಮುರಿದು ಸೊಪ್ಪಿನ ಸಾರಿನಲ್ಲಿ ಅದ್ದಿ ಬಾಯಿಗಿಡುವ ಹೊತ್ತಿಗೆ ದೊಡ್ಡ ಮೋಟರಾಲ ಮೊಬೈಲ್ ರಿಂಗಣಿಸಿತ್ತು. ಅತ್ತಲಿಂದ ಅಪ್ಪನ ಕ್ಷೀಣ ಧ್ವನಿ, " ಮಂಜು, ನಿಮ್ಮಮ್ಮ ಹೋಗ್ಬಿಟ್ಳು ಕಣೋ, ಬೇಗ ಬಾರೋ" ಅಂದಿದ್ದಷ್ಟೆ, ದುಃಖದ ಕಟ್ಟೆಯೊಡೆದಿತ್ತು, ಖಾಲಿಯಾಗಿದ್ದ ಜೇಬನ್ನೊಮ್ಮೆ ಮುಟ್ಟಿ ನೋಡಿಕೊಂಡು, ಮೇಲಿನ ಮನೆಯ ಸುರೇಶನಲ್ಲಿ ಸ್ವಲ್ಪ ಹಣ ಪಡೆದು ಹೆಂಡತಿ ಮಕ್ಕಳೊಡನೆ ಆಸ್ಪತ್ರೆಗೆ ದೌಡಾಯಿಸಿದೆ. ನಮಗಾಗಿ ಏನೆಲ್ಲ ಕಷ್ಟಪಟ್ಟಿದ್ದ ನನ್ನಮ್ಮ ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದರು, ಜೀವನವೆಲ್ಲ ಅಪ್ಪನ ಸಿಡುಕುತನವನ್ನು ಸಹಿಸಿ ಅವರನ್ನು ಅಪಾರವಾಗಿ ಪ್ರೀತಿಸಿ, ಕೊನೆಗೆ ಅವರ ಭುಜದ ಮೇಲೆಯೇ ಕಣ್ಮುಚ್ಚಿದ್ದರು. ಅಮ್ಮನ ಕಳೇಬರವನ್ನು ವೈಟ್ ಫೀಲ್ಡಿನ ಮನೆಗೆ ತಂದು ತಮ್ಮ ಹಾಗೂ ಎಲ್ಲ ಸಂಬಂಧಿಕರಿಗೂ ಫೋನ್ ಮಾಡಿ ವಿಷಯ ತಿಳಿಸಿದೆ, ನಾನು ಬರಲಾಗುವುದಿಲ್ಲ, ಎಲ್ಲ ಕಾರ್ಯ ನೀನೇ ಮಾಡು ಅಂದ ತಮ್ಮನ ಮಾತು ಕೇಳಿ ಮನಕ್ಕೆ ನೋವಾದರೂ ಅಲ್ಲಿ ಅವನ ಪರಿಸ್ಥಿತಿ ಏನಿದೆಯೋ ಎಂದನ್ನಿಸಿ ಅಮ್ಮನ ಅಂತ್ಯಕ್ರಿಯೆಗಳನ್ನು ಮುಗಿಸಿದೆ. ಅಂತ್ಯಕ್ರಿಯೆಗಳು ಮುಗಿದ ನಂತರ ಅಪ್ಪ, ಅಮ್ಮನ ಒಡವೆಗಳ ವಿಚಾರವಾಗಿ ನನ್ನ ಪತ್ನಿಯೊಡನೆ ಜಗಳವಾಡಿ ಯಾವುದೇ ಕಾರಣಕ್ಕೂ ಯಾರೂ ಅಮ್ಮನ ಒಡವೆಗಳನ್ನು ಮುಟ್ಟಬಾರದೆಂದು ತಾಕೀತು ಮಾಡಿದ್ದರಂತೆ. ಅಪ್ಪನಿಗೊಮ್ಮೆ ಕೈ ಮುಗಿದು ನಮಗೆ ಯಾವ ಒಡವೆಗಳೂ ಬೇಕಿಲ್ಲವೆಂದು ಸ್ಪಷ್ಟೀಕರಿಸಿ ಖಾಲಿಯಾದ ಮನದೊಂದಿಗೆ ಲಗ್ಗೆರೆಗೆ ಮರಳಿ ಬಂದಿದ್ದೆ.

ಅದೆಷ್ಟೋ ಸಲ ಅಮ್ಮನ ಮಡಿಲಲ್ಲಿ ತಲೆಯಿಟ್ಟು ನನ್ನ ಕಷ್ಟ ಸುಖಗಳನ್ನು ಹೇಳಿಕೊಂಡಿದ್ದೆ, ತಲೆ ನೇವರಿಸಿ ಅಮ್ಮ ಸಮಾಧಾನ ಮಾಡುತ್ತಿದ್ದರು. ಇಂದು, ಕಷ್ಟದ ದಿನಗಳು ಮುಗಿದು, ದುಬೈನಲ್ಲಿ ಕೆಲಸ ಮಾಡುತ್ತಿದ್ದೇನೆ, ಅಮ್ಮನೊಡನೆ ಹೇಳಿಕೊಳ್ಳಲು ನೂರಾರು ಮಾತುಗಳಿವೆ, ಆದರೆ ಕೇಳಲು ಆ "ಅಮ್ಮ" ಇಲ್ಲ. ವಿಶ್ವ ಅಮ್ಮಂದಿರ ದಿನದಂದು ಅಗಲಿದ ನನ್ನ ಅಮ್ಮನಿಗೆ ಇದು ನನ್ನ ಅಶೃ ತರ್ಪಣ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

"ದೇವರಿಗೊಂದು ಕಾಗದ ಬರೆದು ಭೂಮಿಗೆ ಕರೀಬೇಕು, ದೇವರು ಓದೋ ಭಾಷೆಯ ಕಲಿಸೋ ತಾಯಿಯ ಪಡೀಬೇಕು"

2 comments:

Me, Myself & I said...

ಅದ್ಬುತ ನಿರೂಪಣೆ.
ನಿಮ್ಮೊಂದಿಗೆ ಘಟನೆಗಳು ನಮ್ಮೆದುರಲ್ಲೇ ನಡೆಯುತ್ತಿವೆ ಏನೋ , ಎನ್ನುವಷ್ಟು ನಿಖರವಾಗಿ ಹಾಗೂ ಸ್ಪಷ್ಟವಾಗಿ ಬರೆದಿದ್ದೀರ.

ಮನದಾಳದ ಮಾತಗಳಿನ್ನು ನಿಜಕ್ಕೂ ಅಕ್ಷರವಾಗಿಸಿದ್ದೀರ. ನಿಮ್ಮ ತಾಯಿಯವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.

manju said...

ವಂದನೆಗಳು ಲೋಹಿತ್.