Friday, August 28, 2009

ನೆನಪಿನಾಳದಿಂದ......೬.. ದುರಂತ ನಾಯಕಿಯಾದ ಅಕ್ಕ..

ದುರಂತ ನಾಯಕಿಯಾದ ಅಕ್ಕ....ಮಿನುಗು ತಾರೆ ಕಲ್ಪನಾಳಂತೆ.

ನನ್ನ ಅಕ್ಕ ಮಂಜುಳ, ತನ್ನ ಹೆಸರಿಗೆ ತಕ್ಕಂತೆ, ಮುಖದ ಮೇಲೊಂದು ಮಾಸದ ಮುಗುಳ್ನಗೆಯೊಂದಿಗೆ, ಜುಳು ಜುಳನೆ ಹರಿವ ನೀರಿನಂತೆ, ಓಡಾಡುತ್ತಿದ್ದವಳು, ಅವಳ ಕಂಗಳಲ್ಲಿ ನೂರೆಂಟು ಕನಸುಗಳಿದ್ದವು. ಅವಳನ್ನು ಕಂಡವರು ತಪ್ಪದೆ ಹೇಳುತ್ತಿದ್ದರು, ಓಹ್, ಇವಳೆಂಥಾ ಹೆಣ್ಣು, ಖಂಡಿತ ಇವಳು ನಮ್ಮ ಸಮಾಜ ಬೆಳಗುವ ಜ್ಯೋತಿಯಾಗುತ್ತಾಳೆಂದು. ಅವಳ ಮಾತುಗಳಲ್ಲಿ ಅಷ್ಟೊಂದು ಆತ್ಮ ವಿಶ್ವಾಸವಿರುತ್ತಿತ್ತು, ಜೀವನದ ಬಗ್ಗೆ ಅಷ್ಟೊಂದು ಪ್ರೀತಿಯಿರುತ್ತಿತ್ತು. ಹತ್ತನೆಯ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದ ಅಕ್ಕನಿಗೆ ಮಿನುಗುತಾರೆ ಕಲ್ಪನಾಳ ಚಿತ್ರಗಳೆಂದರೆ ತುಂಬಾ ಅಚ್ಚು ಮೆಚ್ಚು, ಹೇಗಾದರೂ ಮಾಡಿ ಅಮ್ಮನಿಗೆ ’ಬೆಣ್ಣೆ’ ಹೊಡೆದು, ಕಲ್ಪನಾಳ ಹೊಸ ಚಿತ್ರ ನೋಡಿ ಬಿಡುತ್ತಿದ್ದಳು. ಅಕ್ಕ ಮತ್ತು ಅವಳ ಸ್ನೇಹಿತೆಯರು ಆಗ ಚಿಕ್ಕ ಕರವಸ್ತ್ರಗಳ ಮೇಲೆ ಅದೆಂಥೆಂಥದೋ ಕಸೂತಿಗಳನ್ನೆಲ್ಲಾ ಬಿಡಿಸಿ, ಪರಸ್ಪರ ಪ್ರೀತಿಯಿಂದ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ. ಅದರಲ್ಲಿ ಕಲ್ಪನಾಳ ಚಿತ್ರದ ಪಾತ್ರಗಳ ಹೆಸರು, ಹಾಡಿನ ಮೊದಲ ಸಾಲು, ಸೇರಿರುತ್ತಿದ್ದವು. ಒಂದು ಭಾವಪೂರ್ಣ ಸನ್ನಿವೇಶದಲ್ಲಿ ಕಲ್ಪನಾಳು ಅಳುತ್ತಿದ್ದರೆ, ಅಕ್ಕ ತನ್ನ ಸ್ನೇಹಿತೆಯರ ಜೊತೆಯಲ್ಲಿ ಕುಳಿತು, ತಾನೂ ಮುಸುಮುಸು ಅಳುತ್ತಾ ಅದೆಷ್ಟೋ ಕರವಸ್ತ್ರಗಳನ್ನು ಒದ್ದೆ ಮಾಡಿಬಿಡುತ್ತಿದ್ದಳಂತೆ. ಅಂಥಾ ನನ್ನ ಅಕ್ಕ ಒಂದು ದಿನ ಯಾರಿಗೂ ಗೊತ್ತಿಲ್ಲದಂತೆ, ಈ ಜಗದಿಂದ ದೂರವಾದಳು. ಅದು ನನಗೆ ನಂಬಲಾರದ ಸತ್ಯ, ಇಂದಿಗೂ, ಎಂದೆಂದಿಗೂ, ನನಗೆ ಈಗಲೂ ಅಕ್ಕ ಎಲ್ಲೋ ಇದ್ದಾಳೆ ಅನ್ನಿಸುತ್ತದೆಯೇ ಹೊರತು ಅವಳು ನಮ್ಮ ಮಧ್ಯೆ ಇಲ್ಲ ಅಂತ ಅನ್ನಿಸುವುದೇ ಇಲ್ಲ.

ಯಾವುದೇ ದೊಡ್ಡ ತಪ್ಪು ಮಾಡಿರದಿದ್ದರೂ ಕೂಡ, ಅಂದು, ಆ ಗಣೇಶನ ಹಬ್ಬದ ದಿನದಂದು, ಕೇವಲ ತನ್ನ ಒಡನಾಡಿಗಳೊಂದಿಗೆ, ಹೋಟೆಲಿನಲ್ಲಿ ಕಾಫಿ ಕುಡಿದ ತಪ್ಪಿಗಾಗಿ, ಅವಳು ತನ್ನ ಮುಂದಿನ ಜೀವನವನ್ನೇ ಬಲಿ ಕೊಡ ಬೇಕಾಯಿತು. ಅಪ್ಪನ ಆ ಒಂದು ತಪ್ಪು ನಿರ್ಧಾರ, ಅವಳ ಮುಂದಿನ ಜೀವನದ ಹೊಂಗನಸುಗಳನ್ನು ಸುಟ್ಟು ಹಾಕಿತ್ತು. ಅಪ್ಪನ ಧಿಡೀರ್ ನಿರ್ಧಾರದಿಂದಾಗಿ ಯಾರು, ಏನು ಎಂದು ಗೊತ್ತಿಲ್ಲದ "ಚಂದ್ರಪ್ಪ"ನ ಹೆಂಡತಿಯಾದ ಅಕ್ಕ, ತನ್ನ ವಿವಾಹ ಪೂರ್ವದ ಎಲ್ಲ ಸಂಗತಿಗಳನ್ನೂ ಮರೆತು ಅವನಿಗೆ ಒಬ್ಬ ಒಳ್ಳೆಯ ಹೆಂಡತಿಯಾಗಲು, ಅವನ ಮನೆಯ ಜ್ಯೋತಿಯಾಗಲು ತುಂಬಾನೇ ಪ್ರಯತ್ನಿಸಿದಳು. ಹೊಳೆ ನರಸೀಪುರದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದು, ಕೊರಟಗೆರೆಯಲ್ಲಿ ಓದುತ್ತಿದ್ದ ಅಕ್ಕ, ಒಬ್ಬ ಹಳ್ಳಿ ಹೈದನ ಹೆಂಡತಿಯಾಗಿ, ಹಳ್ಳಿಯಲ್ಲಿ ಬದುಕಬೇಕಾಯಿತು. ಆದರೆ, ಆ ಭಾವ ಚಂದ್ರಪ್ಪ, ತನ್ನ ಸ್ನೇಹಿತರೊಂದಿಗೆ ಆ ಊರು, ಈ ಊರು ತಿರುಗುತ್ತಾ, ನಾಟಕಗಳನ್ನು ನೋಡುತ್ತಾ, ಹಲವಾರು ಸನ್ನಿವೇಶಗಳಲ್ಲಿ, "ಅಣ್ಣಾವ್ರ" ಸಿನಿಮಾಗಳ ಕೆಲವು ದ್ರುಶ್ಯಗಳ, ಸಂಭಾಷಣೆಗಳ ಅನುಕರಣೆ ಮಾಡುತ್ತಾ, ಪರರನ್ನು ನಗಿಸುವ ಕಾಯಕದಲ್ಲಿ ತೊಡಗಿಬಿಟ್ಟನಂತೆ. ಆ ಸಮಯದಲ್ಲಿ ಆತನಿಗೆ, ಮನೆಯಲ್ಲಿ ತನಗಾಗಿ ಕಾಯುತ್ತಿರುವ ಪತ್ನಿಯ, ಅವಳ ಗರ್ಭದಲ್ಲಿ ಬೆಳೆಯುತ್ತಿದ್ದ ವಂಶದ ಕುಡಿಯ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ.

ಹೆಣ್ಣು ಸಹನೆಯ ಮತ್ತೊಂದು ರೂಪವಂತೆ, " ಕ್ಷಮಯಾ ಧರಿತ್ರಿ", ಅಕ್ಕ ಎಲ್ಲ ನೋವನ್ನೂ ಸಹಿಸಿಕೊಂಡು, ತನ್ನ ಮಗುವಿಗೆ ಜನ್ಮ ಕೊಟ್ಟು, ಹುಟ್ಟಿದ ಬಂಗಾರ ಬಣ್ಣದ ಹೆಣ್ಣು ಮಗುವಿಗೆ, " ಉಷ" ಎಂದು ನಾಮಕರಣ ಮಾಡಿ ಊರಿಗೆಲ್ಲ ಸಿಹಿ ತಿನ್ನಿಸಿದ್ದಳು. ಆಗ ಅಪ್ಪ - ಅಮ್ಮ ಚಂದ್ರಪ್ಪನಿಗೆ ಸಾಕಷ್ಟು ಬುದ್ಧಿ ಹೇಳಿ, ತನ್ನ ಪತ್ನಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿ ಬಂದಿದ್ದರಂತೆ. ಮಗಳು ಹುಟ್ಟಿದ ಖುಷಿಯಲ್ಲಿ ಸ್ವಲ್ಪ ದಿನ ಸರಿಯಿದ್ದ ಭಾವ, ಮತ್ತೆ ತನ್ನ ಹಳೆಯ ಚಾಳಿಯನ್ನೇ ಪ್ರಾರಂಭಿಸಿದಾಗ, ಅಕ್ಕ ಬಹು ನೊಂದಿದ್ದಾಳೆ, ಅಲವತ್ತುಕೊಂಡಿದ್ದಾಳೆ, ಆದರೆ ಅದೆಲ್ಲಾ ಘೋರ್ಕಲ್ಲ ಮೇಲೆ ಮಳೆ ಸುರಿದಂತಾಗಿ, ಕಣ್ಣೀರೇ ಅವಳ ನಿತ್ಯ ನೆಂಟನಾಗಿದೆ. ಒಮ್ಮೊಮ್ಮೆ ಮಗುವಿನ ಹಾಲಿಗೂ ತತ್ವಾರವಾಗಿ, ಅಪ್ಪ - ಅಮ್ಮನಿಗೆ ಬಹು ಖಾರವಾಗಿ ಪತ್ರ ಬರೆದು, ತನ್ನ ಕಷ್ಟಗಳನ್ನೆಲ್ಲಾ ತೋಡಿಕೊಂಡಿದ್ದಳು ಅಕ್ಕ. ಆದರೆ, ಅಪ್ಪ ಏನೂ ಮಾಡದಂಥಾ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದರು. ಹೀಗೇ ಕಥೆ ಮುಂದುವರೆದಾಗ ಅಕ್ಕನಿಗೆ ಒಂದು ಭರವಸೆಯ ಬೆಳ್ಳಿ ಕಿರಣವಾಗಿ ಬಂದಿದ್ದು, ದಾದಿಯ ಕೆಲಸದ ತರಬೇತಿಗಾಗಿ, ಪತ್ರಿಕೆಯಲ್ಲಿ ಬಂದ ಜಾಹೀರಾತು. ಅದನ್ನು ಭಾವನಿಗೆ ತೋರಿಸಿ ಕೇಳಿಕೊಂಡಳಂತೆ, ತನ್ನನ್ನು ತರಬೇತಿಗೆ ಸೇರಿಸಲು, ಹಲವು ಬಗೆಯಲ್ಲಿ ತಿಳಿ ಹೇಳಿದರೂ ಭಾವ ಅರ್ಥ ಮಾಡಿಕೊಳ್ಳದೆ, ಸಂಜೆ, ಸ್ವಲ್ಪ "ಏರಿಸಿ" ಬಂದು, ಅಕ್ಕನಿಗೆ ಚೆನ್ನಾಗಿ ತದುಕಿದನಂತೆ.

ತನಗೆ ಬಿದ್ದ ಒದೆಗಳು, ತಾನಿದ್ದ ಪರಿಸ್ಥಿತಿ, ಕೈಯಲ್ಲಿದ್ದ ಹೆಣ್ಣು ಮಗುವಿನ ಆಕ್ರಂದನ, ಅಕ್ಕನನ್ನು ಒಂದು ಧ್ರುಡ ನಿರ್ಧಾರದೊಂದಿಗೆ ತನ್ನ ಬದುಕಿನ ಮುಂದಿನ ದಾರಿಯನ್ನು ಕಂಡುಕೊಳ್ಳಲು ಪ್ರೇರೇಪಿಸಿ, ಅವಳು ಸೀದಾ ಒಂದು ದಿನ ತಾನಿದ್ದ ಹಳ್ಳಿಯಿಂದ, ಕೋಲಾರದ ನರಸಿಂಹರಾಜ ಆಸ್ಪತ್ರೆಗೆ ಹೋಗಿ, ದಾದಿಯರ ತರಬೇತಿಗೆ ಅರ್ಜಿ ಗುಜರಾಯಿಸಿ ಬಂದಿದ್ದಾಳೆ. ಕೊನೆಗೆ ಅವಳಿಗೆ ತರಬೇತಿಗೆ ಅವಕಾಶ ಸಿಕ್ಕಿ, ತನ್ನ ಗಂಡನೊಂದಿಗೆ ಸಂದರ್ಶನಕ್ಕೆ ಬಂದು, ಬಾಕಿಯಿದ್ದ ದಾಖಲಾತಿಗಳನ್ನು ಪೂರೈಸಿ, ತರಬೇತಿಗೆ ಸೇರಿಕೊಳ್ಳುವಂತೆ ಪತ್ರ ಬಂದ ದಿನ, ಭಾವನಿಗೆ, ಅಳುಕುತ್ತಲೇ ಹೇಳಿದ್ದಾಳೆ, ಆದರೆ ಅಷ್ಟೊತ್ತಿಗಾಗಲೇ, ’ಏರಿಸಿ’ ಬಂದಿದ್ದ ಭಾವ, ಅಕ್ಕನನ್ನು ಹಿಡಿದು, ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಅವಳು ದಾದಿಯರ ತರಬೇತಿಗೆ ಸೇರಲು ನಿರ್ಧರಿಸಿದ್ದು, ಭಾವನ " ಅಹಂ" ಗೆ ದೊಡ್ಡ ಪೆಟ್ಟಾಗಿತ್ತು. ಸ್ವಂತ ಮನೆ, ಸಾಕಷ್ಟು ಜಮೀನು ಇರುವಾಗ, ತನ್ನ ಹೆಂಡತಿ, ದಾದಿಯರ ತರಬೇತಿಗೆ ಹೋದರೆ ಊರಿನಲ್ಲಿ ತನಗೆ ಮರ್ಯಾದೆ ಇರುವುದಿಲ್ಲವೆಂದೆ ಭಾವನ ಚಿಂತನೆಯಾಗಿತ್ತು. ಇದನ್ನೆಲ್ಲಾ ಮೊದಲಿನಿಂದ ನೋಡುತ್ತಿದ್ದ ಪಕ್ಕದ ಮನೆಯ ಮಹಾನುಭಾವನೊಬ್ಬ ಅಕ್ಕನ ನೆರವಿಗೆ ಬಂದು, ಮಾರನೆಯ ದಿನ ಕೋಲಾರಕ್ಕೆ ಬರುವಂತೆ ಹೇಳಿ, ತಾನೇ ಅವಳ ಗಂಡ, ಅವಳು ತರಬೇತಿಗೆ ಸೇರಲು ತನ್ನದೇನೂ ಅಭ್ಯಂತರವಿಲ್ಲ, ಎಂದು ಬರೆದು ಸಹಿ ಮಾಡಿ ಕೊಟ್ಟನಂತೆ. ಆಗ ಯಾವುದೇ ಫೋಟೋಗಳು ಕಡ್ಡಾಯವಾಗಿರಲಿಲ್ಲ. ಹೀಗೆ ಅಕ್ಕನಿಗೆ ದಾದಿಯರ ತರಬೇತಿಗೆ ಪ್ರವೇಶ ಸಿಕ್ಕಿತು. ಆಗ ಅಪ್ಪನಿಗೆ ಕಾಗದ ಬರೆದು, ತನ್ನ ನಿರ್ಧಾರವನ್ನು ತಿಳಿಸಿದ್ದಾಳೆ. ಒಡನೆ ಅಲ್ಲಿಗೆ ಹೋದ ಅಪ್ಪ, ಯಾವುದೇ ಅವಘಡವಾಗದಂತೆ ನೋಡಿಕೊಂಡು, ಅಕ್ಕನನ್ನು ತರಬೇತಿಗೆ ಸೇರಿಸಿ, ಭಾವನ ಮನವೊಲಿಸಿ, ಅವನನ್ನು "ಉಷಾ"ಳ ಜೊತೆಯಲ್ಲಿ ತಿಪಟೂರಿಗೆ ಕರೆತಂದರು. ಅಪ್ಪನ ಹೋಟೆಲಿನಲ್ಲಿ ಅವರಿಗೆ ಸಹಾಯ ಮಾಡುತ್ತಾ, ಚಂದ್ರಪ್ಪ ನಮ್ಮ ಮನೆಯವನೇ ಅಗಿ ಹೋದ, ಅಕ್ಕನ ಮಗಳು ಉಷ, ನಮ್ಮೆಲ್ಲರ ಕಣ್ಮಣಿಯಾದಳು.

ತಿಪಟೂರಿನ ಪ್ರಸಿದ್ಧ ಭರತ ನಾಟ್ಯ ಕಲಾವಿದೆ ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ಭರತ ನಾಟ್ಯವನ್ನು ಹೇಳಿ ಕೊಟ್ಟು ಧಾರೆಯೆರೆದ, ಶ್ರೀಮತಿ ಲಲಿತಾ ರಾಜ್ ( ಇವರಿಗೆ ಈ ಸಲದ ಕರ್ನಾಟಕ ಸರ್ಕಾರದ " ರಾಜ್ಯೋತ್ಸವ ಪ್ರಶಸ್ತಿ" ಸಿಕ್ಕಿದೆ.) ರವರಲ್ಲಿ ಉಷಾಳನ್ನು ಭರತ ನಾಟ್ಯ ತರಬೇತಿಗೆ ಸೇರಿಸಿ, ಅವಳನ್ನು ಕರೆದೊಯ್ಯುವ, ಕರೆತರುವ ಕೆಲಸ ನನ್ನದಾಯಿತು. ನನ್ನನ್ನು ಬಹುವಾಗಿ ಹಚ್ಚಿಕೊಂಡ ಉಷ, ಅಮ್ಮನನ್ನು ಮರೆತು ಬೆಳೆಯತೊಡಗಿದಳು. ತನ್ನ ಮೂರು ವರ್ಷದ ತರಬೇತಿ ಮುಗಿದ ನಂತರ ಅಕ್ಕ ನಮ್ಮ ಮನೆಗೇ ಬಂದಳು, ಅಪ್ಪ ಬೆಂಗಳೂರಿಗೆ ಹೋಗಿ, ಅವರಿವರ ಶಿಫಾರಸಿನಿಂದ, ಅಕ್ಕನಿಗೆ ತಿಪಟೂರಿನ ಪಕ್ಕದ "ಗುಂಗುರುಮಳೆ"ಯಲ್ಲಿ ಖಾಲಿಯಿದ್ದ ದಾದಿಯ ಕೆಲಸಕ್ಕೆ ಅವಕಾಶ ಗಿಟ್ಟಿಸಿ ಕೊಟ್ಟರು. ಅಲ್ಲಿಯೇ ಸರ್ಕಾರದ ಕ್ವಾರ್ಟರ್ಸ್ ಸಿಕ್ಕಿತು. ಅಕ್ಕನ ಮುಂದಿನ ಬದುಕಿನ ಪಯಣ ಅಲ್ಲಿ ಆರಂಭವಾಯಿತು. ಅದೇ ಊರಿನಲ್ಲಿ ಅವಳಿಗೆ ಇನ್ನೊಬ್ಬಳು ಮಗಳು ಹುಟ್ಟಿ, ಅವಳಿಗೆ, "ತಾರ" ಎಂದು ನಾಮಕರಣ ಮಾಡಿದ್ದಳು. ಆಗ ನಾನು ದ್ವಿತೀಯ ಪಿಯುಸಿ ಓದುತ್ತಿದ್ದೆ. ಅದಾಗಲೇ ಅಪ್ಪನಿಗೆ ತಿರುಗಿ ಬಿದ್ದಿದ್ದ ನಾನು, ಮಹಾ ಒರಟನಾಗಿ, ಯಾರಿಗೂ ಹೆದರದ, ಎಲ್ಲದಕ್ಕೂ ಸೈ ಎನ್ನುವಂಥ ಪುಂಡನಾಗಿ ಬದಲಾಗಿದ್ದೆ. ( ಇದಕ್ಕೆ ಕಾರಣ ನನ್ನ ಹಿಂದಿನ ಲೇಖನಗಳಲ್ಲಿದೆ). ಈಗ ಅಕ್ಕನ ಸಂಸಾರದ ಬಗ್ಗೆ ಕಾಳಜಿ ವಹಿಸುವ, ಅವಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಕೆಲಸವನ್ನು ಅಪ್ಪ ನನಗೆ ವಹಿಸಿದರು. ನಾನು ಮನ:ಪೂರ್ತಿ ಆ ಕೆಲಸವನ್ನು ವಹಿಸಿಕೊಂಡು, ಪ್ರತಿ ಶನಿವಾರ ಸಂಜೆ ಅಕ್ಕನ ಮನೆಗೆ ಹೋಗುತ್ತಿದ್ದೆ, ಭಾನುವಾರ ಅಲ್ಲಿಯೇ ಉಳಿದು, ಸೋಮವಾರ ಅಲ್ಲಿಂದ ಸೀದಾ ಕಾಲೇಜಿಗೆ ಬರುತ್ತಿದ್ದೆ. ನನ್ನ ಮಾತುಕಥೆ, ನನ್ನ ಸ್ನೇಹಿತರು, ಎಲ್ಲವನ್ನೂ ನೋಡಿದ ಭಾವ, ನಾನಿದ್ದಾಗ ಅಕ್ಕನೊಂದಿಗೆ ಯಾವುದೇ ತಂಟೆ, ತಕರಾರು ತೆಗೆಯುತ್ತಿರಲಿಲ್ಲ. ಎಲ್ಲವೂ ಸರಿಯಿದೆ ಎನ್ನುವಂತೆ ನಟಿಸಿ, ಏನಾದರು ಒಂದು ವಿಶೇಷ ಔತಣ ಮಾಡಿ, ನಾನು ಅಲ್ಲಿಂದ ಬಂದ ನಂತರ, ಅಕ್ಕನಿಗೆ ಹಿಂಸಿಸುತ್ತಿದ್ದನಂತೆ.

ಹೀಗೆ ನಾವು ಎಷ್ಟೇ ಪ್ರಯತ್ನ ಪಟ್ಟರೂ, ಅವರಿಬ್ಬರ ಮಧ್ಯೆ ಏರ್ಪಟ್ಟಿದ್ದ ಬಿರುಕನ್ನು ಮುಚ್ಚಲು ಸಾಧ್ಯವೇ ಆಗಲಿಲ್ಲ. ಕೊನೆಗೊಂದು ದಿನ, ಭಾವ ಹೀಗೆಯೆ ಕುಡಿದು ಗಲಾಟೆ ಮಾಡುತ್ತಿದ್ದಾಗ, ಅಚಾನಕ್ಕಾಗಿ ಬಂದ ಅಪ್ಪ, ಅದನ್ನು ಕಂಡು, ತನ್ನ ತಾಳ್ಮೆ ಕಳೆದುಕೊಂಡು, ಚೆನ್ನಾಗಿ ಬಾರಿಸಿ, ಭಾವನಿಗೆ ಅವನೂರಿನ ಬಸ್ಸು ಹತ್ತಿಸಿದರಂತೆ. ಅಲ್ಲಿಗೆ ಅಕ್ಕನ ವೈವಾಹಿಕ ಜೀವನ ಮುಗಿಯಿತು. ಮತ್ತೆಂದೂ ಅವರು ಒಂದಾಗಲಿಲ್ಲ. ಊರಿಗೆ ವಾಪಸ್ ಹೋದ ಭಾವ ಅಲ್ಲಿ ತನ್ನವರಿಂದಾದ ಅವಮಾನವನ್ನು ಸಹಿಸಲಾರದೆ ಚೆನ್ನಾಗಿ ಕುಡಿದು, ರೋಗಗಳಿಗೆ ತುತ್ತಾಗಿ ಒಂದು ದಿನ ಕಣ್ಮುಚ್ಚಿದ. ದೊಡ್ಡಪ್ಪನ ಮಗ ಬಂದು ಭಾವ ಸತ್ತ ಸುದ್ಧಿ ಹೇಳಿದಾಗ, ನಾನು ಅಪ್ಪನನ್ನು ಕರೆದೆ. ಆದರೆ ಅಪ್ಪ ಅವನ ಕ್ರಿಯಾಕರ್ಮಕ್ಕೆ ಬರಲು ನಿರಾಕರಿಸಿದರು. ಆಗ ಚಿಕ್ಕನಾಯಕನ ಹಳ್ಳಿಯಲ್ಲಿದ್ದ ಅಕ್ಕನಿಗೆ ಫೋನ್ ಮಾಡಿ, ವಿಷಯ ತಿಳಿಸಿ, ನಾನು ಸೀದಾ ಭಾವನ ಹಳ್ಳಿಗೆ ಹೋದೆ. ಎಷ್ಟೇ ಕಾದರೂ ಅವಳು ಬರಲಿಲ್ಲ, ಕೊನೆಗೆ ಸೂರ್ಯಾಸ್ತವಾಗುವ ಹೊತ್ತಿಗೆ, ಭಾವನ ಕ್ರಿಯಾ ಕರ್ಮಗಳನ್ನು ಮುಗಿಸಿ ಬೆಂಗಳೂರಿಗೆ ಹಿಂತಿರುಗಿದೆ.

ಆ ನಂತರ ಅಕ್ಕ ಮೌನಿಯಾದಳು, ಅವಳು ಯಾರೊಂದಿಗೂ ಹೆಚ್ಚು ಮಾತಾಡುತ್ತಿರಲಿಲ್ಲ, ಅಕ್ಕನ ದೊಡ್ಡ ಮಗಳು "ಉಷ" ಮೈಸೂರಿನಲ್ಲಿ ಅಂತಿಮ ವರ್ಷದ ಪದವಿ ಓದಿ, ಪರೀಕ್ಷೆ, ಮುಗಿದು, ಇನ್ನೇನು ಫಲಿತಾಂಶ ಬರಬೇಕು ಅನ್ನುವ ಸಮಯದಲ್ಲಿ, ಅಕ್ಕ ಸಾವಿಗೆ ಶರಣಾದಳು. ತನ್ನ ಗಂಡನನ್ನು ಬಿಟ್ಟು, ನೂರಾರು ಜನರ ಮಧ್ಯೆ ಓಡಾಡಿ, ಕೆಲಸ ಮಾಡಿ, ಅವರ ಕುಹಕಗಳನ್ನೆಲ್ಲಾ ಕೇಳಿ, ಸಹಿಸಿಕೊಂಡು ಬಾಳುವಷ್ಟು ಸಂಯಮ ಅವಳಿಗಿಲ್ಲದೆ ಹೋಯಿತು. ಕೇವಲ ತನ್ನ ಮುವ್ವತ್ತೆಂಟನೆ ವಯಸ್ಸಿನಲ್ಲಿ ನಮ್ಮೆಲ್ಲರಿಂದ ದೂರಾಗಿ ನಡೆದು ಬಿಟ್ಟಳು, ಮರಳಿ ಬಾರದ ಲೋಕದೆಡೆಗೆ. ಆ ಸಮಯದಲ್ಲಿಯೂ ಸಹ ಅಪ್ಪ ಯಾವುದೇ ಜವಾಬ್ಧಾರಿ ತೆಗೆದುಕೊಳ್ಳದೆ, ತಮ್ಮ ಎಂದಿನ " ಪಲಾಯನ ವಾದ" ಕ್ಕೇ ಅಂಟಿಕೊಂಡು, ಸಾಕಷ್ಟು ಕಿರಿಕಿರಿ ಮಾಡಿ, ನನ್ನಿಂದ ಬೈಸಿಕೊಂಡು ಸುಮ್ಮನಾಗಿದ್ದರು. ಬೇಕಾಗಿದ್ದ ದಾಖಲಾತಿಗಳನ್ನೆಲ್ಲಾ ಒದಗಿಸಿ, " ಸಹಾನುಭೂತಿಯ" ಆಧಾರದ ಮೇಲೆ, ಪದವೀಧರಳಾಗಿದ್ದ ಉಷಾಳಿಗೆ ಅಕ್ಕನ ಕೆಲಸ ಸಿಗುವಂತೆ ಮಾಡಿ, ದ್ವಿತೀಯ ಪಿಯುಸಿಯಲ್ಲಿ ೯೩% ಅಂಕ ಗಳಿಸಿದ್ದ ತಾರಾಳನ್ನು ಮೈಸೂರಿನಲ್ಲಿ ಬಿಇ ಓದಲು ಸೇರಿಸಿ, ಅವರ ಜೀವನಕ್ಕೆ ಏನೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಿ, ಅಮ್ಮನಿಲ್ಲದಿದ್ದಾಗ ನನ್ನನ್ನು ಎತ್ತಿ ಆಡಿಸಿ, ತುತ್ತು ತಿನ್ನಿಸಿದ್ದ ಅಕ್ಕನ ಋಣ ತೀರಿಸಿದೆ. ಏನಾದರೇನು, ಆ ಇಬ್ಬರು ಹೆಣ್ಣು ಮಕ್ಕಳು, ಅಪ್ಪ - ಅಮ್ಮ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಗಳಾದರು.

ಅಪ್ಪ, ತನ್ನ ದುಡುಕುಬುದ್ಧಿಯಿಂದ ಮಾಡಿದ ಅಚಾತುರ್ಯದಿಂದಾಗಿ, ಇನ್ನೂ ಬಾಳಿ ಬದುಕಬೇಕಿದ್ದ ಎರಡು ಜೀವಗಳು, ಇಹಲೋಕವನ್ನು ತೊರೆದು ಹೋದವು.

No comments: