Friday, August 28, 2009

ನೆನಪಿನಾಳದಿಂದ.1. ಅಪ್ಪನಿಂದ ಒದೆ ತಿಂದು ಮನೆ ಬಿಟ್ಟು ಓಡಿ ಹೋದ ಪ್ರಸಂಗ.

ಇದು 1984ರಲ್ಲಿ ನಾವು ತಿಪಟೂರಿನಲ್ಲಿದ್ದಾಗ ನಡೆದ ಪ್ರಸಂಗ, ಸಂಪದ ಓದುಗರೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಅಮ್ಮ ಮೈಸೂರಿನವರು, ತುಂಬಾ ಸಾಧು ಸ್ವಭಾವ, ಅಪ್ಪನನ್ನು ಕಂಡರೆ ತುಂಬಾ ಪ್ರೀತಿ ಹಾಗೂ ಗೌರವ, ಮೈಸೂರಿನ ವಿಶೇಷಣವಾದ "ಏನೂಂದ್ರೆ" ಅನ್ನದೆ ಅಪ್ಪನೊಡನೆ ಮಾತೇ ಇಲ್ಲ. ಆಗ ಸರ್ಕಾರಿ ಆಸ್ಪತ್ರೆಯ ದಾದಿಯ ಕೆಲಸದಲ್ಲಿದ್ದರು. ಅಪ್ಪ ಸ್ವಭಾವತಹ ಮುಂಗೋಪಿ ಹಾಗೂ ಸದಾ ಸಿಡುಕು ಬುದ್ಧಿ, ಒಂದು ಸಣ್ಣ ಹೋಟೆಲ್ ನಡೆಸುತ್ತಿದ್ದರು. ನಾನಾಗ ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದೆ. ಬೆಳಿಗ್ಗೆ ಬೇಗನೆ ಎದ್ದು ಅಪ್ಪನೊಂದಿಗೆ ಹೋಟೆಲಿಗೆ ಬಂದು ಅವರ ಕೆಲಸದಲ್ಲಿ ಸಹಾಯ ಮಾಡಿ ನಂತರ ತಿಂಡಿ ತಿಂದು ಸ್ಕೂಲಿಗೆ ಹೋಗಬೇಕಿತ್ತು. ಸಂಜೆ ಮತ್ತೆ ಬಂದು ಅವರ ಸಣ್ಣ ಪುಟ್ಟ ಕೆಲಸಗಳನ್ನು ಮುಗಿಸಿ ಕೊಟ್ಟು ಸಂಜೆ "ಸ್ಪೆಷಲ್ ಕ್ಲಾಸಿಗೆ" ಹೋಗಬೇಕಿತ್ತು. ಹೀಗೆ ನನ್ನ ವಿದ್ಯಾಭ್ಯಾಸ ಸಾಗಿತ್ತು. ಅಪ್ಪನ ಹೋಟೆಲಿನಲ್ಲಿ ಕೆಲವು ಬಡ ಮೇಷ್ಟ್ರುಗಳು ಲೆಕ್ಕ ಬರೆಸಿ ತಿಂಗಳೆಲ್ಲಾ ಊಟ - ತಿಂಡಿ ಮಾಡಿ ಸಂಬಳ ಬಂದಾಗ ಲೆಕ್ಕ ಚುಕ್ತಾ ಮಾಡುತ್ತಿದ್ದರು.

ಅಂಥ ಮೇಷ್ಟ್ರುಗಳಲ್ಲಿ ಒಬ್ಬರು, ಗುಂಡಣ್ಣ ಮೇಷ್ಟ್ರು, ನಾನು ಹತ್ತನೆ ತರಗತಿಯ ಪರೀಕ್ಷೆ ಮುಗಿಸಿ ಬಂದು ಅಪ್ಪನೊಂದಿಗೆ ಮಾತಾಡುವಾಗ ಬಂದವರು ಹೇಳಿದರು, "ನಿನ್ನ ದಾಖಲಾತಿ ಸಂಖ್ಯೆ ಕೊಡು, ನಾನು ಮೌಲ್ಯಮಾಪನಕ್ಕೆ ಹೋಗುತ್ತಿದ್ದೇನೆ, ನಿನಗೆ ಹೆಚ್ಚು ಅಂಕ ಹಾಕಿಸುತ್ತೇನೆ " ಅದಕ್ಕೆ ನಾನು ಹೇಳಿದೆ, " ನಾನು ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದೇನೆ, ಆ ರೀತಿ ಪುಕ್ಕಟೆ ಹೆಚ್ಚು ಅಂಕಗಳು ನನಗೆ ಬೇಕಾಗಿಲ್ಲ". ಆಗ ಅಪ್ಪ ನನಗೆ ಸುಮ್ಮನೆ ಹೆಚ್ಚು ಮಾತಾಡದೆ ನನ್ನ ದಾಖಲಾತಿ ಸಂಖ್ಯೆಯನ್ನು ಕೊಡುವಂತೆ ಹೇಳಿದರು. ಅದಕ್ಕೆ ನಾನು ನಿರಾಕರಿಸಿದೆ. ಹಿಂದೆಯೇ ಬಿದ್ದವು ನೋಡಿ ಅಪ್ಪನ ಕೈಯಿಂದ ದಬದಬ ಒದೆಗಳು, ನನಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ, ಚೆನ್ನಾಗಿ ಓದಿ ಪರೀಕ್ಷೆ ಬರೆದಿದ್ದ ಹಾಗೂ ಖಂಡಿತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವ ಭರವಸೆಯಿಂದಿದ್ದ ನನಗೆ ಆ ಒದೆಗಳು ಅನಿರೀಕ್ಷಿತ,

ಆ ಸಮಯದಲ್ಲಿ ಹೋಟೆಲಿನಲ್ಲಿದ್ದ ನಾಲ್ಕಾರು ಜನರ ಮುಂದೆ ಬಿದ್ದ ಒದೆಗಳು ನನ್ನ ಪುಟ್ಟ ಮನಸ್ಸಿಗೆ ಆರದ ಗಾಯವನ್ನೇ ಮಾಡಿ ಬಿಟ್ಟಿದ್ದವು. ಆ ಒದೆಗಳು ನನ್ನ ಸ್ವಾಭಿಮಾನಕ್ಕೆ, ಏನನ್ನಾದರೂ ಸಾಧಿಸಬಲ್ಲೆನೆಂಬ ಭರವಸೆಯ ಬುಡಕ್ಕೆ ಬಿದ್ದ ಕೊಡಲಿ ಪೆಟ್ಟುಗಳಾಗಿದ್ದವು. ಆದರೆ ಅದು ಸಿಡುಕು ಬುದ್ಧಿಯ ಅಪ್ಪನಿಗೆ ಅರ್ಥವಾಗಿರಲಿಲ್ಲ. ಆ ಕ್ಷಣವೇ ನಿರ್ಧರಿಸಿದ್ದು ನಾನು, "ಇಂಥ ಅಪ್ಪನೊಂದಿಗೆ ಇರಬಾರದು", ಅಳುತ್ತಾ ಮನೆಗೆ ಬಂದು ಒಂದು ಬ್ಯಾಗಿಗೆ ಎರಡು ಬಟ್ಟೆಗಳನ್ನು ಹಾಕಿಕೊಂಡು ಬಟ್ಟೆ ಒಗೆಯುತ್ತಿದ್ದ ಅಮ್ಮನಿಗೆ ಹೊರಗಿನಿಂದಲೇ ಹೋಗಿ ಬರುತ್ತೇನೆಂದು ಹೇಳಿ ದೂರದ ದಾವಣಗೆರೆಗೆ ಹೋಗಿ ಬಿಟ್ಟೆ. ಗೊತ್ತಿದ್ದದ್ದು ಆಗ ಹೋಟೆಲ್ ಕೆಲಸ ಮಾತ್ರ, ಒಂದು ಹೋಟೆಲಿನಲ್ಲಿ ಮಾಣಿಯ ಕೆಲಸಕ್ಕೆ ಸೇರಿಕೊಂಡು ಅಲ್ಲೇ ಇದ್ದು ಬಿಟ್ಟೆ.

ಕೆಲ ದಿನಗಳು ಕಳೆದ ನಂತರ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾಯಿತು. ದಾವಣಗೆರೆಯಿಂದ ತಿಪಟೂರಿಗೆ ಬಂದು ಸೀದಾ ಶಾಲೆಯ ಬಳಿ ಹೋದೆ, ನನ್ನ ಫಲಿತಾಂಶ ನೋಡಿದೆ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದೆ, ಆನಂದದಿಂದ ಕಣ್ಗಳು ಒದ್ದೆಯಾದವು. ಅಂದು ಮುಖ್ಯೋಪ್ೞ್ಧ್ಯಾಯರಾಗಿದ್ದ ಜಿ. ಆರ್. ಮಹಲಿಂಗಯ್ಯನವರು ನನ್ನನ್ನು ಕರೆದು ಅಭಿನಂದಿಸಿ ಅಂಕಪಟ್ಟಿಯನ್ನು ಕೈಗಿತ್ತು ಶುಭ ಹಾರೈಸಿದ್ದರು. ಅಂಕಪಟ್ಟಿಯೊಡನೆ ಸೀದಾ ಮನೆಗೆ ಬಂದೆ, ಅಲ್ಲಿ ಇಲ್ಲಿ ನನಗಾಗಿ ಹುಡುಕಾಡಿ ಅಪ್ಪ ಅಮ್ಮ ಸೋತಿದ್ದರು, ಅಮ್ಮ ಕೊಂಚ ಸೊರಗಿದ್ದರು, ಅಮ್ಮನಿಗೆ ಹೇಳಿದೆ, "ನಾನು ಪ್ರಥಮ ದರ್ಜೆಯಲ್ಲಿ ಹತ್ತನೆ ತರಗತಿಯಲ್ಲಿ ಉತ್ತೀರ್ಣನಾಗಿದ್ದೇನೆ, ನೋಡಮ್ಮ, ಆ ದಿನಾ ವಿನಾ ಕಾರಣ ಅಪ್ಪ ನನ್ನನ್ನು ಎಲ್ಲರ ಮುಂದೆ ಹೊಡೆದರು". ಅಮ್ಮ ಕಣ್ಣಲ್ಲಿ ನೀರು ತುಂಬಿಕೊಂಡು ನನ್ನನ್ನು ಸಂತೈಸಿದರು, ನಿನ್ನಪ್ಪ ಮುಂಗೋಪಿ, ಅವರನ್ನು ಕ್ಶಮಿಸಿಬಿಡು ಎಂದರು. ಸಂಜೆ ಮನೆಗೆ ಬಂದ ಅಪ್ಪ ನನ್ನನ್ನು ಸಿಟ್ಟಿನಿಂದ ಕೆಕ್ಕರಿಸಿ ನೋಡಿ ಇಷ್ಟು ದಿನ ಎಲ್ಲಿ ಹಾಳಾಗಿ ಹೋಗಿದ್ದೆ ಎಂದು ಹೊಡೆಯಲು ಬಂದರು, ಅಮ್ಮನ ಸೀರೆಯ ಹಿಂದೆ ಅಡಗಿ ಅಂಕಪಟ್ಟಿ ತೋರಿಸಿದೆ, ಅಂಕಪಟ್ಟಿ ನೋಡಿದ ಅಪ್ಪನ ಕಣ್ಣಲ್ಲೂ ಕಂಬನಿ ತುಂಬಿ ಹರಿಯಿತು. ನಿನ್ನ ಭರವಸೆಯ ಮಾತನ್ನು ಅಂದು ಅರ್ಥ ಮಾಡಿಕೊಳ್ಳದೆ ಅನ್ಯಾಯವಾಗಿ ನಿನ್ನನ್ನು ಹೊಡೆದು ಮನೆ ಬಿಟ್ಟು ಹೋಗುವಂತೆ ಮಾಡಿ ಬಿಟ್ಟೆನಲ್ಲ, ನನ್ನನ್ನು ಕ್ಶಮಿಸು ಮಗನೇ ಎಂದಾಗ ನಾನು ಪಟ್ಟ ಕಷ್ಟಗಳೆಲ್ಲ ನನಗೆ ಮರೆತೇ ಹೋಯಿತು.

ಅಂದು ನನಗೆ ಅರ್ಥವಾಗದಿದ್ದ ಆ ಅಪ್ಪ ಇಂದಿಗೂ ನನಗೆ ಅರ್ಥವಾಗಿಯೇ ಇಲ್ಲ, ಅಮ್ಮ ಈಗಿಲ್ಲ, ಅಪ್ಪ ಕಲ್ಲು ಗುಂಡಿನಂತೆ ದೂರವೇ ಉಳಿದು ಹೋದರು. 25 ವರ್ಷಗಳ ನಂತರ ದುಬೈನಲ್ಲಿ ಕುಳಿತು ಆ ಪ್ರಸಂಗವನ್ನು ನೆನಪಿಸಿಕೊಂಡಾಗ ಕಣ್ಗಳು ಒದ್ದೆಯಾದವು.

ನೆನಪಿನಾಳದಿಂದ..2..ಅಪ್ಪನ ಸಿಂಗಲ್ ನಂಬರ್ ಲಾಟರಿ ಖಯಾಲಿಯ ಕಥೆ.

1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ, ಅದೆಷ್ಟು ಕುಟುಂಬಗಳು ಆ ದಿನಗಳಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡವೋ ? ಅದೆಷ್ಟು ಬಾಳಿ ಬದುಕಬೇಕಾದ ಜೀವಗಳು ಕಣ್ಮುಚ್ಚಿಕೊಂಡವೋ, ದೇವರಿಗೇ ಗೊತ್ತು. ಅಂಥ ಸಮಯದಲ್ಲಿ ನನ್ನ ಅಪ್ಪನದೂ ಒಂದು ದೊಡ್ಡ ಕಥೆ. ಪ್ರತಿ ದಿನ ಸಿಂಗಲ್ ನಂಬರ್ ಲಾಟರಿ ಆಡಿದ್ದೂ ಆಡಿದ್ದೇ, ಕನುಸು ಕಂಡಿದ್ದೂ ಕಂಡಿದ್ದೇ!! ಸರ್ವಗ್ನ್ಯನ ಒಂದು ವಚನವನ್ನು ಆ ಸಮಯದಲ್ಲಿ ಹೀಗೆ ಬದಲಿಸಲಾಗಿತ್ತು, " ಸಿಂಗಲ್ ನಂಬರ್ ಲಾಟರಿ ಆಡಿ, ಇದ್ದುದೆಲ್ಲವ ನೀಗಿ, ಸಾಲಗಾರನಾಗಿ ಬರುವವನ, ಸದ್ದಡಗಿ ಸಂತಾನವೆದ್ದು ಹೋಗುವುದು, ಸರ್ವಗ್ನ್ಯ"

ಸಿಕ್ಕಿಂ, ಹರ್ಯಾಣ, ಭೂತಾನ್ ಮೊದಲಾದ ಹೊರ ರಾಜ್ಯಗಳ ಲಾಟರಿ ಟಿಕೆಟ್ ಗಳು ಅತಿ ಹೆಚ್ಚು ಬಹುಮಾನದ ಆಸೆ ಹುಟ್ಟಿಸಿ ಬಹುತೇಕ ಜನರ ಇಡೀ ದಿನದ ವರಮಾನವನ್ನೇ ಕಬಳಿಸಿ ಹಾಕುತ್ತಿದ್ದವು. ಆ ಮೋಹದ ಜಾಲಕ್ಕೆ ನನ್ನ ಅಪ್ಪನೂ ಸಿಲುಕಿದರು. ಅವರು ನಡೆಸುತ್ತಿದ್ದ ಸಣ್ಣ ಹೋಟೆಲಿನಲ್ಲಿ ಬರುತ್ತಿದ್ದ ಆದಾಯವನ್ನೆಲ್ಲ ಜೈ ದುರ್ಗಿ, ಮಹಾಲಕ್ಷ್ಮಿ, ಲಾಭಲಕ್ಷ್ಮಿ ಮುಂತಾದ ಲಕ್ಷ್ಮಿಯರು ಸ್ವಾಹಾ ಮಾಡಿ ಸಂಜೆಯಾದರೆ ಸಾಕು, ಅಪ್ಪನ ಪಿತ್ತ ನೆತ್ತಿಗೇರಿ ಲಾಟರಿಯಲ್ಲಿ ಸೋತ ಸೋಲಿನ ಸೇಡನ್ನು ಎಳೆ ವಯಸ್ಸಿನ ನನ್ನ ಮೇಲೋ, ಇಲ್ಲ, ಮೈಸೂರಿನ ಸಾಧು ಪ್ರಾಣಿಯಾದ ಅಮ್ಮನ ಮೇಲೋ ತೀರಿಸಿಕೊಳ್ಳತೊಡಗಿದರು. ಇದು ಹೀಗೇ ಮುಂದುವರೆದು ಅಪ್ಪ ಸಿಕ್ಕ ಸಿಕ್ಕವರಲ್ಲಿ ಸಾಲ ಮಾಡತೊಡಗಿದರು. ಅವರಿಗೆ ಲಾಟರಿಯಲ್ಲಿ "ಜಯಲಕ್ಷ್ಮಿ" ಒಲಿಯಲೇ ಇಲ್ಲ, ಅವರು ಮಾಡಿದ ಸಾಲಕ್ಕೆ ದಾದಿಯ ಕೆಲಸ ಮಾಡುತ್ತಿದ್ದ ಅಮ್ಮ, ತನ್ನ ಸಂಬಳದ ಹಣದಿಂದ ಬಡ್ಡಿ ಕಟ್ಟುವ ಪರಿಸ್ಥಿತಿ ಬಂದೊದಗಿತು. ಮನೆ ಎಂಬ ಮನೆಯೇ ನರಕವಾಗಿ ಹೋಯಿತು.

ಅಪ್ಪನ ಲಕ್ಕಿ ನಂಬರ್ ಗಳಾದ 05, 09 ತಿಪಟೂರಿನ ಯಾವುದೇ ಅಂಗಡಿಯಲ್ಲಿದ್ದರೂ ಬಿಡುತ್ತಿರಲಿಲ್ಲ. ಯಾರಾದರೂ ಒಬ್ಬ ಶಿಷ್ಯನನ್ನು ಕಳುಹಿಸಿ ಇದ್ದಬದ್ದ ಟಿಕೆಟ್ ಗಳನ್ನೆಲ್ಲ ಖರೀದಿಸುತ್ತಿದ್ದರು. ಸಂಜೆ ಫಲಿತಾಂಶ ಬಂದಾಗ, ಅವರ ನಂಬರ್ ಗೆದ್ದಿದ್ದರೆ, ಆಹಾ, ಪ್ರಪಂಚವನ್ನೇ ಗೆದ್ದಂತೆ ಸಂತೋಷ ಪಡುತ್ತಿದ್ದರು. ಆಕಸ್ಮಾತ್ ಸೋತಿದ್ದರೆ, ಗೋವಿಂದಾ,,,,,,,, ಗೋವಿಂದ,, ಅವರ ಕಣ್ಮುಂದೆ ಬರಲು ಎಲ್ಲರೂ ಹೆದರುತ್ತಿದ್ದರು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ, ಸಂಜೆ 5 ಘಂಟೆಗೆ ಆ ದರಿದ್ರ ಲಾಟರಿ ಫಲಿತಾಂಶ ಬರುವ ಸಮಯಕ್ಕೆ ಸರಿಯಾಗಿ, ಅಪ್ಪಿತಪ್ಪಿಯೂ ಯಾವ ಗಿರಾಕಿಯೂ ಅಪ್ಪನ ಹೋಟೆಲ್ ಕಡೆ ತಲೆ ಹಾಕುತ್ತಿರಲಿಲ್ಲ. ಅರ್ಧ ಟೀ ಕುಡಿಯುವ ಗಿರಾಕಿ ಹೋಟೆಲಿಗೆ ಬಂದರೆ, ಮುಗಿಯಿತು ಅವನ ಕಥೆ, ಅಪ್ಪನ ಲಾಟರಿ ಪ್ರವರ, ಅವರ " ಭರ್ಜರಿ ಕ್ಯಾಲ್ಕುಲೇಷನ್ಸ್" ಗಳ ಕಥೆಯನ್ನೆಲ್ಲಾ ಕೇಳುವ ಘೋರ ಶಿಕ್ಷೆಗೆ ಒಳಗಾಗಬೇಕಿತ್ತು.

ಈ ಕಥೆ ಎಲ್ಲಾ ಕಡೆ ಹರಡಿ ಕೊನೆಗೆ ಹೋಟೆಲಿನ ವ್ಯಾಪಾರವೇ ಬಿದ್ದು ಹೋಯಿತು. ಈಗ ಅಪ್ಪ ಎಲ್ಲರ ಕಣ್ಣಿಗೆ ಒಬ್ಬ "ಭಯೋತ್ಪಾದಕ" ನಂತೆ ಕಾಣುತ್ತಿದ್ದರು. ಅವರನ್ನು ಕಂಡರೆ ಸಾಕು, ಅವರ ಆಪ್ತ ಮಿತ್ರರೂ ಸಹ ಕದ್ದು ಬೇರೆ ದಾರಿಯಿಂದ ಹೋಗಲು ಶುರುವಿಟ್ಟರು. ಈಗ ಅಪ್ಪ ಅಕ್ಷರಶ: ಏಕಾಂಗಿಯಾಗಿದ್ದರು. ಅವರಿಗೆ ಸಿಕ್ಕಿದ್ದು ಈಗ ಅವರ ಸಾಲಕ್ಕೆ ಬಡ್ಡಿ ಕಟ್ಟಲು ಅಮ್ಮ, ಅವರ ಸಿಟ್ಟು, ಸೆಡವುಗಳಿಗೆಲ್ಲ "ಒದೆ" ತಿಂದು ಅವರನ್ನು ಸಮಾಧಾನಿಸಲು ಬಡಪಾಯಿ ನಾನು! ಜೀವನ ನಿಜವಾಗಲೂ ನನಗೆ, ನನ್ನ ಅಮ್ಮನಿಗೆ ನುಂಗಲಾರದ ಬಿಸಿ ತುಪ್ಪವಾಗಿ ಹೋಗಿತ್ತು. ಆಗಲೇ ಅಪ್ಪ ನನ್ನನ್ನು ಒಂದು ದಿನ ವಿನಾ ಕಾರಣ ಎಲ್ಲರೆದುರು ತದುಕಿ ಮನೆ ಬಿಟ್ಟು ಓಡಿ ಹೋಗುವಂತೆ ಮಾಡಿದ್ದು, ಹೇಗೋ ಹತ್ತನೆ ತರಗತಿಯ ಫಲಿತಾಂಶ ಬಂದ ನಂತರ ಹಿಂತಿರುಗಿ ಬಂದ ನಾನು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಮಾಡುವೆನೆಂದಾಗ, ಕೇವಲ ಮೂರು ಸಾವಿರ ರೂಪಾಯಿ ಕಟ್ಟಲು ನಿರಾಕರಿಸಿ, ನನ್ನ ಭವಿಷ್ಯಕ್ಕೆ ಕಲ್ಲು ಹಾಕಿದ್ದು. ಅಮ್ಮ ಮೊದಲೇ ಸಾಧು ಪ್ರಾಣಿ, ಅವರಲ್ಲಿ ಗಂಡನಿಗೆ ಎದುರಾಡುವುದಿರಲಿ, ಗಟ್ಟಿಯಾಗಿ ಮಾತಾಡಲೂ ಶಕ್ತಿಯಿರಲಿಲ್ಲ. ಅಮ್ಮನೂ ಸಹಾ ನಿಸ್ಸಹಾಯಕತೆಯಿಂದ ಕೈ ಚೆಲ್ಲಿದರು.

ಆಗ ಮತ್ತೆ ನಾನು ಓಡಿದೆ ನೋಡಿ, ಮನೆ ಬಿಟ್ಟು, ತಿಪಟೂರಿನಿಂದ, ಸೀದಾ ಹೋಗಿದ್ದು, ಹೊಳೆ ನರಸೀಪುರಕ್ಕೆ, ಚಿಕ್ಕಪ್ಪನ ಮನೆಗೆ. ಆಗ ನನಗೆ ಆಶ್ರಯ ನೀಡಿ ಕಾಲೇಜಿಗೆ ಸೇರಿಸಿ, ಓದಿ ಪದವೀಧರನಾಗಲು ಪ್ರೇರೇಪಿಸಿದ್ದು ಅದೇ ನನ್ನ ಚಿಕ್ಕಪ್ಪ. ಆಕಸ್ಮಾತ್, ಅಂದು ಅವರು ನನ್ನ ಕೈ ಹಿಡಿಯದೆ ಇದ್ದಿದ್ದರೆ, ನಾನು ಇಂದು ಯಾವುದೋ ಒಂದು ಹೋಟೆಲಿನಲ್ಲಿ ಮಾಣಿಯಾಗಿಯೇ ನನ್ನ ಜೀವನ ಕಳೆಯಬೇಕಾಗಿರುತ್ತಿತ್ತು.

ಹೇಮಾವತಿ ನದಿಯ ದಡ ನನ್ನ ಅಚ್ಚು ಮೆಚ್ಚಿನ ತಾಣವಾಯಿತು, ಸಂಜೆಯ ಹೆಚ್ಚು ಹೊತ್ತನ್ನು ನಾನು ಅಲ್ಲಿಯೇ ಕಳೆಯುತ್ತಿದ್ದೆ. ನನ್ನ ಮುಂದಿನ ಜೀವನ ಹೇಗಿರಬೇಕು, ಇಂಥ ಪರಿಸ್ಥಿತಿಯಲ್ಲಿ ಹೇಗೆ ನನ್ನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತುಂಬ ದೀರ್ಘವಾಗಿ ಯೋಚಿಸುತ್ತಿದ್ದ್ದೆ. ಹಲವಾರು ತಾಕಲಾಟಗಳ ನಡುವೆಯೂ ತಾಯಿ ಹೇಮಾವತಿ, ತನ್ನ ಮಡಿಲಲ್ಲಿ ನೊಂದಿದ್ದ ನನ್ನ ಮನಕ್ಕೆ ತಂಪನ್ನೆರೆದು, ಒಂದು ಸುಂದರ ಭವಿಷ್ಯ ರೂಪಿಸುವ ಛಲಕ್ಕೆ ನನ್ನನ್ನು ಸಿದ್ಧಗೊಳಿಸಿದಳು. ತಾಯಿ ಹೇಮಾವತಿಗೆ ನನ್ನ ನಮನ. ಆ ದಿನದ ಧ್ರುಡ ನಿರ್ಧಾರದ ಫಲವೇ ಇಂದು ನಾನು ದುಬೈನಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಕಾರಣವೆನ್ನಬಹುದು.

ಕಾರಿನ ಕಥೆ.


ದುಬೈನಲ್ಲಿ ಕೆಲಸ ಮಾಡಲು ಬಂದ ನಂತರ ಇಲ್ಲಿನ ವಾಹನ ಚಾಲನಾ ಪರವಾನಗಿ ಪಡೆದೆ. ಕಂಪನಿಯಿಂದ ಒಳ್ಳೆಯ ಕಾರ್ ಕೂಡ ಸಿಕ್ಕಿತು. ಕಾರು ನನ್ನ ಕೆಲಸದ ಅವಿಭಾಜ್ಯ ಅಂಗ. ನನಗೆ ಇಲ್ಲಿ ಕಾರು ಸಿಕ್ಕಿದ ದಿನ ಅಲ್ಲಿ ಬೆಂಗಳೂರಿನಲ್ಲಿ ಪತ್ನಿ - ಮಕ್ಕಳು ಅಕ್ಕ ಪಕ್ಕದವರಿಗೆಲ್ಲಾ ಸಿಹಿ ಹಂಚಿ ಸಂತೋಷಪಟ್ಟಿದ್ದರು. ಸ್ವಲ್ಪ ದಿನಗಳು ಕಳೆದ ನಂತರ ಶುರುವಾಯಿತು ನೋಡಿ, ಒಮ್ಮೆ ಮೆತ್ತಗೆ ಮಗ ಶುರು ಮಾಡಿದ, ಅಪ್ಪ, ನಮಗೂ ಒಂದು ಕಾರ್ ಕೊಡಿಸಪ್ಪ, ಮತ್ತೊಮ್ಮೆ ಮುದ್ದಿನ ಮಗಳು ಕೇಳಿಸಿಯೂ ಕೇಳಿಸದಂತಹ ಧ್ವನಿಯಲ್ಲಿ ಉಸುರಿದ್ದಳು, ಅಪ್ಪಾ, ನಮಗೊಂದು ಕಾರ್.

ಕೊನೆಗೆ ಪತ್ನಿ, ಕಲಾ, ಫೋನಿನಲ್ಲಿ "ಮಕ್ಕಳು ತುಂಬಾ ಆಸೆ ಪಡ್ತಿದಾರೆ, ಎಲ್ಲಾದ್ರೂ ಹೋಗ್ಲಿ, ಒಂದು ಕಾರ್ ಕೊದಿಸಿಬಿಡ್ರೀ" ಅಂತ ಬೇರೆ ಶಿಫಾರಸ್ಸು ಮಾಡಿದಳು. ಮೊದಲು ಅವಳಿಗೆ ವಾಹನ ಚಾಲನಾ ಪರವಾನಗಿ ಪಡೆಯುವಂತೆ ಹೇಳಿದೆ. ತರಬೇತಿ ಪಡೆದು ಕೇವಲ ಎರಡೇ ತಿಂಗಳಲ್ಲಿ ಕಲಾ ಪರವಾನಗಿ ಪಡೆದೇ ಬಿಟ್ಟಳು. ನನಗೆ ಅನುಮಾನ, ಕಾರ್ ನಿಜವಾಗಲೂ ಬೇಕಿದ್ದದ್ದು ಮಕ್ಕಳಿಗಾ ಅಥವಾ ಇವಳಿಗಾ ?? ಈಗ ಕಾರಿಗಾಗಿ ಬೇಡಿಕೆ ಮತ್ತಷ್ಟು ಹೆಚ್ಚಾಯಿತು. ಮಕ್ಕಳಿಬ್ಬರೂ ದಿನಕ್ಕೊಮ್ಮೆ ನನಗೆ ಕಾರಿನ ಬಗ್ಗೆ ಕುಯ್ಯತೊಡಗಿದರು. ಕೊನೆಗೆ ಅವರಿಗೆ " ಈ ಸಲ ರಜಕ್ಕೆ ಬಂದಾಗ" ಕಾರ್ ಕೊಡಿಸುವ ಭರವಸೆ ಕೊಟ್ಟೆ.

ಭರವಸೆ ಕೊಟ್ಟಂತೆ ಈ ಸಲ ರಜಕ್ಕೆ ಬೆಂಗಳೂರಿಗೆ ಹೋದಾಗ ಹೊಸ ಕಾರ್- - ಹ್ಯುಂಡೈ - ಐ 10, ಟೆಸ್ಟ್ ಡ್ರೈವ್ ಮಾಡಿದೆ, ತುಂಬಾ ಚೆನ್ನಾಗಿದೆ ಅನ್ನಿಸಿತು. ಖರೀದಿಸಿಯೇ ಬಿಟ್ಟೆ, ಕಲಾ ಮತ್ತು ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಸಿಹಿ ತಿನ್ನಿಸಿದ್ದೇ ತಿನ್ನಿಸಿದ್ದು, ಎಲ್ಲರಿಗೂ ಹೇಳಿದ್ದೇ ಹೇಳಿದ್ದು, ಹೊಸ ಕಾರ್ ತಂದ್ವಿ ಅಂತ.

ಅವರನ್ನು ಚೆನ್ನಾಗಿ ಕಾರಿನಲ್ಲಿ ಸುತ್ತಾಡಿಸಿದೆ, ಕಲಾ ಮತ್ತು ಮಗಳು ಗೌತಮಿಗೆ ಕಾರ್ ಓಡಿಸಲು ಕೊಟ್ಟು ಪ್ರೋತ್ಸಾಹಿಸಿದೆ. ನಾನು ರಜೆ ಮುಗಿದು ದುಬೈಗೆ ಹೊರಟಾಗ ಎಲ್ಲರ ಕಣ್ಣಲ್ಲೂ ನೀರು, ಮಗ ವಿಷ್ಣು ಅಳುವಾಗ ಹ್ರುದಯ ಹಿಂಡಿದಂತಾಗಿ ದುಬೈಗೆ ಹೋಗುವುದೇ ಬೇಡ ಅನ್ನಿಸಿತ್ತು. ಆದರೆ ಇನ್ನೂ ನಿರ್ವಹಿಸಬೇಕಾದ ಜವಾಬ್ಧಾರಿಗಳು ತುಂಬಾ ಇವೆ, ಹೋಗಲೇಬೇಕು ಎಂದ ಮನಸ್ಸಿನ ಮಾತು ಕೇಳಿ ಹೊರಟು ಬಂದೆ,, ಭಾರವಾದ ಹ್ರುದಯದೊಂದಿಗೆ.

ನೆನಪಿನಾಳದಿಂದ...3...ತುರ್ತು ಪರಿಸ್ಥಿತಿಯ ದಿನಗಳಲ್ಲಿ ಹೀರೋ ಆಗಿ ಮೆರೆದ ಅಪ್ಪ.

ಅಪ್ಪ ಮೈಸೂರಿನಲ್ಲಿ ಶಿವರಾಂ ಪೇಟೆಯಲ್ಲಿದ್ದ ಎಲ್ಲಾ ಹೋಟೆಲ್ ಗಳಲ್ಲಿ ಅಡಿಗೆ ಭಟ್ಟರಾಗಿ, ಮಾಣಿಯಾಗಿ, ದೋಸೆ ಭಟ್ಟರಾಗಿ ಕೆಲಸ ಮಾಡಿ, ಎಲ್ಲರೊಡನೆ ಒಂದಿಲ್ಲೊಂದು ಕಾರಣಕ್ಕೆ ಜಗಳ ಮಾಡ್ಕೊಂಡು ಕೊನೆಗೆ ಮಂತ್ರಿ ದಂಪತಿಗಳಾಗಿದ್ದ ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ಅಡುಗೆ ಭಟ್ಟರಾಗಿ ಕೆಲಸಕ್ಕೆ ಸೇರಿಕೊಂಡರಂತೆ. ಇದು ನನಗೆ ಅಪ್ಪನೇ ಹೇಳಿದ್ದು, ನಾನು ಇದುವರೆಗೂ ಅವರನ್ನು ನೋಡಿಯೇ ಇಲ್ಲ ಬಿಡಿ. ಹೇಗೋ ಅವ್ರಿಗೆ ಮಸ್ಕಾ ಹೊಡೆದು ಅಪ್ಪ, ಅಮ್ಮನಿಗೆ ಮೈಸೂರಿನ ಕ್ರುಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ದಾದಿಯ ಕೆಲಸದ ತರಬೇತಿಗೆ ಒಂದು ಸೀಟು ಗಿಟ್ಟಿಸಿದರಂತೆ. ಆಗ ನನಗೆ ಕೇವಲ ಒಂದೂವರೆ ವರ್ಷ ವಯಸ್ಸಂತೆ, ಬನುಮಯ್ಯ ವ್ರುತ್ತದ ಕ್ಷೇತ್ರಯ್ಯ ರಸ್ತೆಯಲ್ಲಿ ನಮ್ಮ ಬಾಡಿಗೆ ಮನೆ, ಮನೆಯ ಒಡತಿ ಪುಟ್ಟತಾಯಮ್ಮ, ಅವರು ಈಗಿಲ್ಲ, ನನಗೆ ಸಮಾಧಾನ ಮಾಡಲು ಅಮ್ಮನಂತೆ ನನ್ನನ್ನು ತಮ್ಮ ಸೊಂಟದ ಮೇಲೆ ಎತ್ತಿಕೊಂಡು ಚಂದಮಾಮನನ್ನು ತೋರಿಸಿ ರಮಿಸುತ್ತಿದ್ದರಂತೆ. ನಾನು ದೊಡ್ಡವನಾದ ಮೇಲೂ ಸಾಕಷ್ಟು ಸಲ ಹೋಗಿ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿ ಬಂದೆ.

ನಾಲ್ಕು ವರ್ಷದ ತರಬೇತಿಗೆ ಸೇರಿದ ಅಮ್ಮ ಕ್ರುಷ್ಣರಾಜೇಂದ್ರ ಆಸ್ಪತ್ರೆಯ ದಾದಿಯರ ವಸತಿ ಗ್ರುಹದಲ್ಲಿ ಬಂಧಿಯಾಗಿ ಹೋದರು. ನಾನು ಅಮ್ಮ ಬೇಕೆಂದು ಅತ್ತಾಗಲೆಲ್ಲ ಅಪ್ಪ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಮ್ಮನನ್ನು ತೋರಿಸಿ ವಾಪಸ್ ಕರೆದುಕೊಂಡು ಬರುತ್ತಿದ್ದರಂತೆ. ಹೀಗೆ ಕ್ರುಷ್ಣ ರಾಜೇಂದ್ರ‍ ಆಸ್ಪತ್ರೆ ನನ್ನ ಬಾಲ್ಯದ ನೆನಪುಗಳ ಅವಿಭಾಜ್ಯ ಅಂಗವಾಗಿ ಹೋಯ್ತು. ಒಮ್ಮೆ ಅದೇ ಆಸ್ಪತ್ರೆಯ ಮೇಲಿನ ಬಾಲ್ಕನಿಯಲ್ಲಿ, ಮೈಸೂರಿನ ವಿಶ್ವ ಪ್ರಸಿದ್ಧ ದಸರಾ ಸಮಯದಲ್ಲಿ ಅಮ್ಮನೊಂದಿಗೆ ನಿಂತು " ಜಂಬೂ ಸವಾರಿ" ನೋಡಿದ್ದು ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿ ನಿಂತಿದೆ.

ನಾಲ್ಕು ವರ್ಷಗಳ ತರಬೇತಿ ಮುಗಿದ ನಂತರ, ಅಮ್ಮನಿಗೆ ಮೊದಲ ಕೆಲಸದ ಅವಕಾಶ ಸಿಕ್ಕಿದ್ದು, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಒಂದು ಪುಟ್ಟ ಸುಂದರ ಗ್ರಾಮ, ಮಂಡಿಕಲ್ಲು, ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವ್ರುತವಾಗಿದ್ದು, ಹೆಚ್ಚು ಕಡಿಮೆ ಕಾಡು ಪ್ರದೇಶದಂತೆ ಇತ್ತು. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಆ ಗ್ರಾಮದಲ್ಲಿನ ಜನರು ಓದುವುದು, ಬರೆಯುವುದು ಕನ್ನಡ, ಆದರೆ ಮಾತನಾಡುವುದು ತೆಲುಗಿನಲ್ಲಿ. ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಒಂದನೆ ತರಗತಿಯಲ್ಲಿ ಓದುತ್ತಿದ್ದ ನನ್ನನ್ನು, ನಾಲ್ಕನೆ ಕ್ಲಾಸಿನಲ್ಲಿದ್ದ ನನ್ನ ಅಕ್ಕನನ್ನು ಅನಾಮತ್ತಾಗಿ ಎತ್ತಿಕೊಂಡು ಅಪ್ಪ ಅಮ್ಮನೊಂದಿಗೆ ಬಂದು ಮಂಡಿಕಲ್ಲಿನಲ್ಲಿ ಇಳಿದರು. ಒಂದು ಬಾಡಿಗೆ ಮನೆ ಹಿಡಿದು ಅಮ್ಮ ತಮ್ಮ ಕೆಲಸ ಪ್ರಾರಂಭಿಸಿದರಂತೆ, ನನ್ನನ್ನು, ಅಕ್ಕ ಮಂಜುಳಳನ್ನು ಅಲ್ಲೇ ಶಾಲೆಗೆ ಹಾಕಿದರು. ಅದುವರೆಗೂ ಮೈಸೂರಿನ ಅಪ್ಪಟ ಕನ್ನಡದಲ್ಲಿ ಓದಿ ಬರೆದು ಮಾತಾಡುತ್ತಿದ್ದ ನಾನು ಮತ್ತು ನನ್ನ ಅಕ್ಕ ತಂತಾನೇ ತೆಲುಗಿನಲ್ಲಿ ಮಾತಾಡಲು ಆರಂಭಿಸಿದ್ದು ಇಲ್ಲಿಂದಲೇ. ಅಮ್ಮ ಆ ಮಂಡಿಕಲ್ಲಿನ ಜೊತೆಗೆ ಸುತ್ತಲಿನ ಸುಮಾರು ಹತ್ತು ಹಳ್ಳಿಗಳಿಗೆ ಭೇಟಿ ಕೊಟ್ಟು ಅಲ್ಲಿನ ಬಸುರಿ-ಬಾಣಂತಿಯರ, ಮಕ್ಕಳ ಯೋಗಕ್ಷೇಮ ನೋಡುವುದರ ಜೊತೆಗೆ ಎಲ್ಲ ದಾಖಲಾತಿಯನ್ನೂ ಮಾಡಬೇಕಿತ್ತು. ಇದೇ ಗ್ರಾಮದಲ್ಲಿ ನನ್ನ ಒಲವಿನ ತಮ್ಮ "ವಿಜಿ" ಹುಟ್ಟಿದ್ದು.

ಅಪ್ಪ ಯಾವಾಗಲೂ ಅಮ್ಮನ ಜೊತೆಯಲ್ಲಿ ಹೋಗುವುದು, ಎಲ್ಲರಿಗೂ ಅವರನ್ನು ಪರಿಚಯಿಸಿ ಕೊಡುವುದು ಮುಂತಾಗಿ ಅಮ್ಮನ ಕೆಲಸ ಸುಗಮವಾಗಿ ನಡೆಯಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಿದರಂತೆ. ಹೀಗೆ ಎಲ್ಲಾ ಒಂದು ರೀತಿಯಲ್ಲಿ ಪರವಾಗಿಲ್ಲ ಅನ್ನಿಸಿದಾಗ ಅದೇ ಊರಿನ ಬಸ್ ನಿಲ್ದಾಣದಲ್ಲಿ ಒಂದು ಚಿಕ್ಕ ಹೋಟೆಲ್ ಶುರು ಮಾಡಿದರಂತೆ. ಅಲ್ಲಿಂದ ಶುರುವಾಯ್ತು ನೋಡಿ, ಅಪ್ಪನ "ಹೀರೋಗಿರಿ", ಆ ಪ್ರದೇಶದಲ್ಲಿ. ಅದು ಮೊದಲೇ ನಗರಗಳಿಂದ ತುಂಬಾ ದೂರದಲ್ಲಿರುವ ಒಂದು ಕುಗ್ರಾಮ. ಜೊತೆಗೆ ಜನರು ಅಂಥ ವಿದ್ಯಾವಂತರಲ್ಲ, ಎಲ್ಲೆಲ್ಲಿ ನೋಡಿದರೂ ಚೆಡ್ಡಿ ಹಾಕಿಕೊಂಡು ಓಡಾಡುವ ಜನಗಳೇ ಕಾಣುತ್ತಿದ್ದರಂತೆ, ಯಾರಾದರೂ ಅವರ ಮುಂದೆ ಪ್ಯಾಂಟು ಹಾಕಿಕೊಂಡು ಬಂದರೆ ಕೈ ಮುಗಿದು ನಮಸ್ಕರಿಸುತ್ತಿದ್ದರಂತೆ.

ಈ ರೀತಿಯ ಪ್ಯಾದೆಗಳು ಸಿಕ್ಕಿದಾಗ, ಹೊಳೆ ನರಸೀಪುರದಲ್ಲಿ ಹುಟ್ಟಿ ಬೆಳೆದು, ಹೇಮಾವತಿಯ ನೀರು ಕುಡಿದು, ಅಲ್ಲಿಂದ ಮೈಸೂರಿಗೆ ಬಂದು, ಕಾವೇರಿಯ ನೀರು ಕುಡಿದು, ಸಿಕ್ಕಿದ ಹೋಟೆಲ್ ಗಳಲ್ಲೆಲ್ಲಾ ಕೆಲಸ ಮಾಡಿ, ಚೆನ್ನಾಗಿ ತಿಂದುಂಡು, ಅಲ್ಲದೆ ಮಂತ್ರಿ ದಂಪತಿಗಳಾದ ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ಕೆಲಸ ಮಾಡಿ ಬಂದ, ಆರಡಿ ಎತ್ತರದ ಆಜಾನುಬಾಹು ಅಪ್ಪ, ಆ ಗ್ರಾಮದವರ ಮುಂದೆ ದೊಡ್ಡ "ಹೀರೋ" ಆಗಿ ಕಂಡಿದ್ದರೆ ತಪ್ಪೇನಿಲ್ಲ ಬಿಡಿ, ಅದೂ ಇಲ್ಲಿಗೆ ಸುಮಾರು ೩೫ ವರ್ಷಗಳ ಹಿಂದೆ. ಯಾವ ಗಿರಾಕಿಯೇ ಹೋಟೆಲಿಗೆ ಬರಲಿ, ಅವನ ಪೂರ್ವಾಪರಗಳೇನನ್ನೂ ಲೆಕ್ಕಿಸದೆ ಅಪ್ಪ ಅವನಿಗೆ ಮೈಸೂರಿನ ಅನುಭವಗಳ ಬಗ್ಗೆ ವರ್ಣಿಸುತ್ತಿದ್ದರಂತೆ. ಅವರ ಮೈಸೂರಿನ ಅನುಭವಗಳನ್ನು ಕೇಳುವುದರ ಜೊತೆಗೆ ಆ ಗಿರಾಕಿಗಳಿಗೆ ಒಳ್ಳೆ ರಸವತ್ತಾದ ಮೈಸೂರು ಶೈಲಿಯ ತಿಂಡಿಗಳೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದುದರಿಂದ ಅಪ್ಪನ ಹೋಟೆಲ್ ವ್ಯಾಪಾರ ಚೆನ್ನಾಗಿಯೇ ಕುದುರಿತ್ತು. ಅದೆಷ್ಟೋ ಜನ ಅಪ್ಪನನ್ನು ಜೊತೆಯಲ್ಲಿ ಕರೆದುಕೊಂಡು, ತಮ್ಮ ಕೈಯಲ್ಲಿ ದುಡ್ಡಿಲ್ಲದಿದ್ದರೆ, ಸಾಲ-ಸೋಲವನ್ನಾದರೂ ಮಾಡಿ ಮೈಸೂರಿನ ದರ್ಶನ ಮಾಡಿ ಬಂದ ಕಥೆಗಳೂ ಸಾಕಷ್ಟಿವೆ.

ಇದೇ ಸಮಯದಲ್ಲಿ, ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮ ರಾಜಕೀಯ ಜೀವನದ ಏರು ಪೇರುಗಳಿಂದ ತಬ್ಬಿಬ್ಬುಗೊಂಡು ದೇಶದಲ್ಲಿ "ತುರ್ತು ಪರಿಸ್ಥಿತಿ" ಯನ್ನು ಘೋಷಿಸಿದ್ದರು. ಆಗ ಬಂದ ಒಂದು ಹೊಸ ಕಾಯಿದೆ, " ಕಡ್ಡಾಯ ಸಂತಾನ ನಿಯಂತ್ರಣ". ಈ ಹೊಸ ಕಾನೂನು ಬಂದಿದ್ದೇ ಬಂದಿದ್ದು, ಆ ಇಡೀ ಮಂಡಿಕಲ್ಲು ಮತ್ತದರ ಸುತ್ತ ಮುತ್ತಿನ ಗ್ರಾಮಗಳ ಜನರ ಜೀವನವೇ ದುರ್ಭರವಾಗಿ ಹೋಯಿತಂತೆ. ಪ್ರತಿದಿನ ಚಿಕ್ಕಬಳ್ಳಾಪುರದಿಂದ ಬರುತ್ತಿದ್ದ ಆರೋಗ್ಯ ಇಲಾಖೆಯ ವಾಹನಗಳು ಸಿಕ್ಕ ಸಿಕ್ಕವರನ್ನೆಲ್ಲಾ ತುಂಬಿಕೊಂಡು ಹೋಗಿ ಹೆಂಗಸಿಗರಿಗೆ "ಟ್ಯುಬೆಕ್ಟಮಿ", ಗಂಡಸರಿಗೆ "ವ್ಯಾಸೆಕ್ಟಮಿ" ಆಪರೇಷನ್ ಗಳನ್ನು ಬಲವಂತವಾಗಿ ಮಾಡತೊಡಗಿದರಂತೆ. ಅದುವರೆಗೂ ಸುತ್ತ ಮುತ್ತಲಿನ ಹಳ್ಳಿಗಳ ಬಸುರಿ ಬಾಣಂತಿಯರ ಆರೈಕೆ ಮಾಡಿ ಒಳ್ಳೆಯ ಹೆಸರನ್ನು ಪಡೆದಿದ್ದ ಅಮ್ಮ, ಈಗ ಎಲ್ಲರ ಮುಂದೆ " ಶೂರ್ಪನಖಿ" ಯಾಗಿದ್ದರು. ಸುತ್ತಲಿನ ಹಳ್ಳಿಗಳ ಹೆಣ್ಮಕ್ಕಳೆಲ್ಲ ಅಮ್ಮನಿಗೆ ಹಿಡಿ ಶಾಪ ಹಾಕುತ್ತಿದ್ದರಂತೆ. ಜೊತೆಗೆ ಆಗಿನ ವೈದ್ಯಾಧಿಕಾರಿಗಳಿಗೆ ಸರ್ಕಾರದಿಂದ " ಟಾರ್ಗೆಟ್" ಫಿಕ್ಸ್ ಮಾಡುತ್ತಿದ್ದರಂತೆ, ಇಂತಿಷ್ಟೆ ಆಪರೇಷನ್ಗಳನ್ನು ಸಾಧಿಸಬೇಕು ಎಂದು. ಇಲ್ಲದಿದ್ದರೆ ಅವರ ಸಂಬಳ ಗೋತಾ ಆಗುತ್ತಿತ್ತಂತೆ. ಇಂತಿಪ್ಪ ಪರಿಸ್ಥಿತಿಯಲ್ಲಿ ಅಮ್ಮ ಸೋತರು, ಅವರು ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ಅವರ "ಟಾರ್ಗೆಟ್" ಮುಟ್ಟಲು ಸಾಧ್ಯವಾಗುತ್ತಿರಲಿಲ್ಲವಂತೆ.

ಆಗ ತಲೆ ಓಡಿಸಿದ ಅಲ್ಲಿನ ವೈದ್ಯಾಧಿಕಾರಿಗಳು, ಮಂಡಿಕಲ್ಲಿನಲ್ಲಿ ಹೋಟೆಲ್ ನಡೆಸಿಕೊಂಡು ತುಂಬಾ ಜನಾನುರಾಗಿಯಾಗಿದ್ದ ಅಪ್ಪನನ್ನು ತಮ್ಮ "ಟಾರ್ಗೆಟ್" ಸಾಧಿಸಿ, ತಮ್ಮ ಕೆಲಸ ಉಳಿಸಿಕೊಳ್ಳಲು ಒಂದು ಆಯುಧವಾಗಿ ಬಳಸಿಕೊಳ್ಳಲು ತೀರ್ಮಾನಿಸಿದರಂತೆ. ಅದರಂತೆ ಅವರಲ್ಲಿ ಒಪ್ಪಂದವಾಗಿ ಯಾವಾಗ ಅಪ್ಪ ವೈದ್ಯಾಧಿಕಾರಿಗಳ ಜೊತೆಯಲ್ಲಿ ಹೋಗುವರೋ, ಆಗ ಅಮ್ಮ ಮನೆಯಲ್ಲಿ ಉಳಿಯುವುದು, ಆಸ್ಪತ್ರೆಯ ಪಕ್ಕದಲ್ಲಿಯೇ ನಮಗೆ ಆಗ ಕ್ವಾರ್ಟರ್ಸ್ ಕೊಟ್ಟಿದ್ದರು, ಮನೆ ಮತ್ತು ಆಸ್ಪತ್ರೆ ಎರಡನ್ನೂ ನೋಡಿಕೊಳ್ಳುವುದು ಎಂದು ತೀರ್ಮಾನವಾಯ್ತು. ಆಗ ಶುರುವಾಯ್ತು ನೋಡಿ, ಅಪ್ಪನ ಪರಾಕ್ರಮ, ಆ ಹಳ್ಳಿಗಾಡಿನಲ್ಲಿ, ಚಿಕ್ಕಬಳ್ಳಾಪುರದಿಂದ ಬರುತ್ತಿದ್ದ ಆಸ್ಪತ್ರೆಯ ವ್ಯಾನ್ ಡ್ರೈವರ್ " ಜಾಫರ್" ಎಂಬುವವರಿಗೆ ನನ್ನನ್ನು ಕಂಡರೆ ತುಂಬಾ ಪ್ರ‍ೀತಿ, ೧೩ ಹೆಣ್ಣು ಮಕ್ಕಳ ತಂದೆಯಾಗಿದ್ದ ಆತನಿಗೆ ಗಂಡು ಮಕ್ಕಳಿರಲಿಲ್ಲವಂತೆ, ಅದೇಕೋ, ಅವನಿಗೆ ನಾನೆಂದರೆ ಪ್ರಾಣ, ಬರುವಾಗಲೆಲ್ಲಾ ನನಗಾಗಿ ಬಿಸ್ಕಟ್, ಚಾಕಲೇಟ್ಗಳನ್ನು ಮರೆಯದೆ ತರುತ್ತಿದ್ದ. ಈ "ಆಪರೇಷನ್ ಖೆಡ್ಡಾ" ಶುರುವಾಗಿ ಅಪ್ಪ ಅದರ " ಹೀರೋ" ಆದಾಗ, ಅವನು ನನ್ನನ್ನು ಪ್ರತಿ ಸಲವೂ ತನ್ನ ಹಂದಿ ಮೂತಿಯ "ದೊಡ್ಜೆ" ವ್ಯಾನಿನಲ್ಲಿ, ಮುಂದಿನ ಸೀಟಿನಲ್ಲಿ ತನ್ನ ಜೊತೆಯಲ್ಲೇ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದ. "ಹೀರೋ" ಮಗನಾಗಿದ್ದುದರಿಂದ ಯಾರೂ ಅದಕ್ಕೆ ಆಕ್ಷೇಪ ಮಾಡುತ್ತಿರಲಿಲ್ಲ.

ಈ "ಕಡ್ಡಾಯ ಸಂತಾನ ನಿಯಂತ್ರಣ" ಕಾಯಿದೆ ಬಂದ ಮೇಲೆ, ಆ ಹಳ್ಳಿಗಾಡಿನ ಜನ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ, ಅಪ್ಪನನ್ನು ಕರೆದುಕೊಂಡು ಸುತ್ತಲಿನ ಹಳ್ಳಿಗಳಿಗೆ ಹೋಗಲು ಶುರುವಿಟ್ಟ ಮೇಲೆ ಆ ವೈದ್ಯಾಧಿಕಾರಿಗಳಿಗೆ ಶುಕ್ರ ದೆಸೆ ಶುರುವಾಯಿತಂತೆ. ಹೋಟೆಲಿನಲ್ಲಿ ಅವರು ಬಂದು ಟೀ ಕುಡಿದು ಮೈಸೂರಿನ ಕಥೆಗಳನ್ನು ಕೇಳಿ ಹೋಗಿದ್ದ ಪರಿಚಯವನ್ನೇ ಉಪಯೋಗಿಸಿಕೊಂಡು, ಅಪ್ಪ ಆ ಹಳ್ಳಿಯ ಜನಗಳಿಗೆ ಸಂತಾನ ನಿಯಂತ್ರಣ, ಅದರಿಂದಾಗುವ ಉಪಯೋಗಗಳು, ಅದರಿಂದ ದೇಶಕ್ಕಾಗುವ ನೆರವು ಎಲ್ಲವನ್ನೂ ಅವರ ಮನದಟ್ಟಾಗುವಂತೆ ವಿವರಿಸುತ್ತಿದ್ದರಂತೆ. ಅವರ ಮಾತಿಗೆ ತಲೆದೂಗಿ, ಒಪ್ಪಿ, ಸಾಕಷ್ಟು ಜನ, ತಾವಾಗೇ ಮುಂದೆ ಬಂದು, ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದರಂತೆ. ಈ ಮೊದಲು ಪುಟ್ಟ ಆಸ್ಪತ್ರೆಯಲ್ಲಿ ಮಾಡುತ್ತಿದ್ದ ಆಪರೇಷನ್ ಗಳು ಈಗ ಪಕ್ಕದ ಪೆರೇಸಂದ್ರದ " ಟೆಂಟ್ ಸಿನಿಮಾ" ಗೆ ವರ್ಗಾವಣೆಗೊಂಡವಂತೆ. ಆ ಟೆಂಟ್ ಸಿನಿಮಾವನ್ನೇ ಒಂದು ದೊಡ್ಡ ಆಪರೇಷನ್ ಥಿಯೇಟ್ರ್ನಂತೆ ಪರಿವರ್ತಿಸಿ ಸಾವಿರಾರು ಆಪರೇಶನ್ ಗಳನ್ನು ಮಾಡಿದ ಕೀರ್ತಿ ಆಗಿನ ವೈದ್ಯಾಧಿಕಾರಿಗಳಿಗೆ ಸಲ್ಲುತ್ತದೆ.

ಹೀಗಿರುವಾಗ, ಆಪರೇಷನ್ಗಳ ಸಂಖ್ಯೆ ಹೆಚ್ಚಾದಂತೆ ಅಲ್ಲಿ ಸಂಭವಿಸುವ ಅವಘಡಗಳ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತಂತೆ. ಅದು ಯಾವ ಮಟ್ಟಕ್ಕೆ ಮುಟ್ಟಿತ್ತೆಂದರೆ, "ಆಪರೇಷನ್, ಡಾಕ್ಟರ್" ಎಂಬ ಎರಡು ಪದಗಳು ಮಂಡಿಕಲ್ಲಿನ ಸುತ್ತ ಮುತ್ತಲಿನ ಹಳ್ಳಿಗಳ ಜನರಿಗೆ ಸಖತ್ ಜ್ವರ ಬರಿಸಿ ನಿದ್ದೆಗೆಡಿಸುತ್ತಿದ್ದವಂತೆ. ಹೀಗಿರುವಾಗ, ಅಪ್ಪನ " ಹೀರೋಗಿರಿ" ಮುಗಿಯುವ ಮಟ್ಟಕ್ಕೆ ಬಂದಿತ್ತು. ಈಗ ಯಾರೂ ಮೊದಲಿನಂತೆ ಅಪ್ಪನ " ಮೈಸೂರು" ಮಾತಿಗೆ ಬೆರಗಾಗಿ ಆಪರೇಷನ್ ಮಾಡಿಸಿಕೊಳ್ಳಲು ಮುಂದೆ ಬರುತ್ತಿರಲಿಲ್ಲವಂತೆ. ಆದರೆ ವೈದ್ಯಾಧಿಕಾರಿಗಳು ಅವರಿಗೆ ಸರ್ಕಾರದಿಂದ ಬರುತ್ತಿದ್ದ ಒತ್ತಡವನ್ನು ತಡೆಯಲಾರದೆ ಬಲವಂತದ ಆಪರೇಷನ್ ಗಳಿಗೆ ಮುಂದಾದರಂತೆ. ಈ ಮಾತನ್ನು ನನಗೆ ಅಪ್ಪ ಆಗಾಗ ಹೇಳುತ್ತಿದ್ದರು, ಆಗ ಶುರುವಾಯ್ತು ನೋಡಿ, ನಿಜವಾದ "ಖೆಡ್ಡಾ ಆಪರೇಷನ್".

ಅಮ್ಮ ಯಾವ್ಯಾವ ಹಳ್ಳಿಗಳಿಗೆ ಹೋಗಿ ಎಲ್ಲರ ಯೋಗಕ್ಷೇಮ ನೋಡಿ ಮಾತ್ರೆ, ಟಾನಿಕ್ಕು ಕೊಟ್ಟು ಬರುತ್ತಿದ್ದರೋ, ಯಾವ್ಯಾವ ಹಳ್ಳಿಗಳ ಜನರು ಬಂದು ಅಪ್ಪನ ಹೋಟೆಲಿನಲ್ಲಿ ಮಧುರವಾದ ಮೈಸೂರಿನ ಮಾತು ಕೇಳಿ, ಮೈಸೂರ್ ಪಾಕ್ ತಿಂದು ಹೋಗಿದ್ದರೋ, ಅಲ್ಲೆಲ್ಲಾ ಈ "ಖೆಡ್ಡಾ ಆಪರೇಶನ್" ಶುರುವಾಯ್ತಂತೆ. ಸಿಕ್ಕ ಸಿಕ್ಕ ಹಳ್ಳಿಗಳಿಗೆ ನುಗ್ಗುವುದು, ಸಿಕ್ಕವರನ್ನು ಆ ಹಂದಿ ಮೂತಿಯಂಥ "ದೊಡ್ಜೆ" ವ್ಯಾನಿಗೆ ತುಂಬಿ ಪೆರೇಸಂದ್ರದ "ಟೆಂಟ್ ಸಿನಿಮಾ" ಗೆ ತೊಗೊಂಡು ಹೋಗಿ ಆಪರೇಷನ್ ಮಾಡಿ, ಸರ್ಕಾರಕ್ಕೆ ನಾವು ಇಂತಿಷ್ಟು "ಗುರಿ" ಸಾಧಿಸಿ ಬಿಟ್ಟೆವು ಎಂದು ವರದಿ ನೀಡಿ, ತಮ್ಮ ಕೆಲಸ ಉಳಿಸಿಕೊಂಡು ಸಮಾಧಾನದಿಂದ ನಿಟ್ಟುಸಿರು ಬಿಡುವುದು ವೈದ್ಯಾಧಿಕಾರಿಗಳ ನಿತ್ಯ ಕರ್ಮವಾಯ್ತಂತೆ. ಈ ಸಮಯದಲ್ಲಿ ಅಮ್ಮನ ಕೆಲಸ ಮನೆಯಲ್ಲಿ, ಅಪ್ಪನ ಕೆಲಸ ಹಳ್ಳಿಗಳಲ್ಲಿ, ಕೆಲಸ ಅಪ್ಪನದು, ಸಂಬಳ ಅಮ್ಮನಿಗೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದ ಎಲ್ಲಾ ವೈದ್ಯಾಧಿಕಾರಿಗಳೂ ಸಹ ತಮ್ಮ ಕೆಲಸ ಉಳಿಸಿಕೊಳ್ಳಲು ಅಪ್ಪನನ್ನು ಬಲವಾಗಿ ಅವಲಂಬಿಸಿದ್ದರಂತೆ. ಅವರ ಪಾಲಿಗೆ ಅಪ್ಪನೊಬ್ಬ "ಆಪದ್ಬಾಂಧವ" ಆಗಿಬಿಟ್ಟಿದ್ದರು.

ಕೊನೆಗೆ ಇದು ಯಾವ ಮಟ್ಟಕ್ಕೆ ಹೋಯಿತೆಂದರೆ, ಪ್ರತಿಯೊಂದು ಹಳ್ಳಿಯಲ್ಲೂ ಕೆಲವು ಧೈರ್ಯವಂತರನ್ನು ಬೆಳ್ಳಂ ಬೆಳಗ್ಗೆ ಊರ ಮುಂದಿನ ಅತಿ ಎತ್ತರದ ಮರ ಹತ್ತಿ ಕೂರಿಸುವುದು, ಅವರು ದೂರದಲ್ಲಿ ಈ ಆರೋಗ್ಯ ಇಲಾಖೆಯ ಗಾಡಿಗಳು ಬರುವುದನ್ನು ಕಂಡು ಜೋರಾಗಿ, ಇಡೀ ಊರಿಗೇ ಕೇಳುವಂತೆ, ಎದೆ ಬಿರಿದು "ಶಿಳ್ಳೆ" ಹೊಡೆಯುವುದು, ಆ ಶಿಳ್ಳೆಯ ಧ್ವನಿ ಕೇಳಿದ ಕೂಡಲೇ ಊರಲ್ಲಿ ಇದ್ದ ಬದ್ದ ಗಂಡಸರೆಲ್ಲಾ ಸುತ್ತಲಿನ ಬೆಟ್ಟ, ಗುಡ್ಡಗಾಡುಗಳ ಕಡೆಗೆ ನುಗ್ಗಿ, ಯಾವುದೋ ಗುಹೆಗಳಲ್ಲೋ. ಎತ್ತರದ ಮರಗಳ ಮೇಲೇರಿಯೋ, ತಲೆ ಮರೆಸಿಕೊಂಡು ತಮ್ಮ ದಿನ ಕಳೆದು, ಸೂರ್ಯ ಅಸ್ತಮಿಸಿದ ನಂತರ, ಹತ್ತಿರದಲ್ಲಿ ಯಾರೂ ಅವರನ್ನು ಹಿಡಿದೊಯ್ಯಲು ಕಾಯುತ್ತಿಲ್ಲವೆಂದು ಖಾತ್ರಿ ಪಡಿಸಿಕೊಂಡ ನಂತರವೇ ತಮ್ಮ ಮನೆಗಳಿಗೆ ಮರಳಿ ಬರುತ್ತಿದ್ದದ್ದಂತೆ. ಈಗ ಅಪ್ಪ ಆ ಸುತ್ತಲಿನ ಹಳ್ಳಿಗಳ ಜನರ ಪಾಲಿಗೆ ಒಬ್ಬ " ನರಭಕ್ಷಕ" ನಂತೆ ಕಂಡಿರಬೇಕು. ಅವರ ಹೆಸರನ್ನು ಹೇಳಿದರೆ ಸಾಕು, ಜನಗಳು ಬೆಚ್ಚಿ ಬೀಳುತ್ತಿದ್ದರು. ಏಕೆಂದರೆ, ಆಗಿನ ಯಾವುದೇ ವೈದ್ಯಾಧಿಕಾರಿಯಾಗಲಿ, ಪೋಲೀಸ್ ಅಧಿಕಾರಿಯಾಗಲಿ ಅಥವಾ ಸುತ್ತಲಿನ ಹಳ್ಳಿಗಳ ಜನರಾಗಲಿ, ಅಪ್ಪನ ಆಜಾನುಬಾಹು ವ್ಯಕ್ತಿತ್ವದ ಮುಂದೆ ಕುಬ್ಜರಾಗಿ ಕಾಣುತ್ತಿದ್ದರು.

ಡ್ರೈವರ್ ಜಾಫರ್ ಚಿಕ್ಕಬಳ್ಳಾಪುರದಿಂದ ನನಗಾಗಿ ತಂದ ಚಾಕಲೇಟ್ಗಳನ್ನು ತಿನ್ನುತ್ತಾ, ಅವನ ಪಕ್ಕ ಮುಂದಿನ ಸೀಟಿನಲ್ಲೇ ಕುಳಿತು, "ಇವನ ಹಂದಿ ಮೂತಿಯ ದೊಡ್ಜೆ ಗಾಡಿಯನ್ನು ಕಂಡೊಡನೆ, ಅದು ಅವರ ಪ್ರಾಣವನ್ನು ಕೊಂಡೊಯ್ಯಲು ಬಂದ ಯಮನ ಕೋಣವನ್ನೇ ಕಂಡಂತಾಗಿ", ಎದ್ದು ಬಿದ್ದು ಓಡಿ ಹೋಗುತ್ತಿದ್ದ ಜನಗಳನ್ನು ನೋಡಿ ನಾನು ಕೇಕೆ ಹಾಕಿ ನಗುತ್ತಿದ್ದೆ (ಕ್ಷಮೆಯಿರಲಿ, ನನಗಾಗ ಕೇವಲ ೭-೮ ವರ್ಷದ ಪ್ರಾಯ). ಕೊನೆಗೊಂದು ದಿನ ಇಂದಿರಮ್ಮನವರ ಸರ್ಕಾರ ಉರುಳಿ, ಜನತಾ ಪಕ್ಷದ ಮೊರಾರ್ಜಿ ದೇಸಾಯಿಯವರ ಸರ್ಕಾರ ಬಂದಾಗಲೇ ಈ ಎಲ್ಲ ಪ್ರಸಂಗಗಳಿಗೂ ಒಂದು ಕೊನೆ ಎಂಬುದು ಕಂಡಿದ್ದು.

ಅದಾದ ಮೇಲೆ ಆ ವೈದ್ಯಾಧಿಕಾರಿಗಳು, ಪೋಲೀಸರು, ಅದೆಲ್ಲೆಲ್ಲಿ ಹೋಗಿ ಬಿಟ್ಟರೋ ಗೊತ್ತಿಲ್ಲ, ಆದರೆ ಅಪ್ಪ ಅದೇ ಊರಿನಲ್ಲಿ ಮತ್ತೆ ತಮ್ಮ ಹಳೇ " ಮೈಸೂರು" ಶೈಲಿಯ ಹೋಟೆಲ್ ಪ್ರಾರಂಭಿಸಿದರು. ಆಗ ಬಿದ್ದವು ನೋಡಿ, ಅಪ್ಪನಿಗೆ, ಸಖತ್ ಧರ್ಮದೇಟುಗಳು, ಇಂದಿರಮ್ಮನ ಸರ್ಕಾರ ಆ ಹಳ್ಳಿಯ ಜನಗಳಿಗೆ ಕೊಟ್ಟ " ಕಡ್ಡಾಯ ಸಂತಾನ ನಿಯಂತ್ರಣ" ಕಾಯ್ದೆಯಿಂದ ಅವರು ಅನುಭವಿಸಿದ ಕಷ್ಟ ಕೋಟಲೆಗಳನ್ನೆಲ್ಲಾ ಅಪ್ಪನಿಗೆ ಬೇಜಾನ್ ಧರ್ಮದೇಟುಗಳನ್ನು ಕೊಡುವ ಮೂಲಕ ತೀರಿಸಿಕೊಂಡಿದ್ದರು. ಆಗ ವಿಧಿಯಿಲ್ಲದೆ ಅಪ್ಪ, ಅಲ್ಲಿಂದ ದೂರ, ತುಮಕೂರು ಜಿಲ್ಲೆಯ ಕೊರಟಗೆರೆಗೆ ಅಮ್ಮನನ್ನು ವರ್ಗಾವಣೆ ಮಾಡಿಸಿ, ಅಲ್ಲಿಂದ ಜಾಗ ಖಾಲಿ ಮಾಡಿದರು,

ನೆನಪಿನಾಳದಿಂದ....4....ಹೇಮಾವತಿಯ ದಡದಲ್ಲಿ.....


ಈ ಸಲ ರಜಕ್ಕೆ ಬೆಂಗಳೂರಿಗೆ ಹೋಗಿದ್ದಾಗ ಹೊಸ ಕಾರ್ ತೊಗೊಂಡು ಎಲ್ಲಾ ಕಡೆ ಸುತ್ತಿದ್ದೇ ಸುತ್ತಿದ್ದು. ಹಾಗೆ ಸುತ್ತಾಡುತ್ತಾ ಹೊಳೆ ನರಸೀಪುರಕ್ಕೆ ಬಂದಾಗ ರಾತ್ರಿ ೧೧ ಘಂಟೆಯಾಗಿತ್ತು. ಚಿಕ್ಕಮ್ಮ ನಮಗಾಗಿ ಕಾಯುತ್ತಾ ಕುಳಿತಿದ್ದರು, ಬಂದೊಡನೆ ಕುಶಲೋಪರಿ ವಿಚಾರಿಸಿ, ನನ್ನನ್ನು ಹುಸಿ ಕೋಪದಿಂದ ಬೈದರು, ಅಷ್ಟು ಹೊತ್ತಿನಲ್ಲಿ ಕಾರ್ ಓಡಿಸಿಕೊಂಡು ಬಂದಿದ್ದಕ್ಕೆ. ಅವರು ಪ್ರೀತಿಯಿಂದ ಬಡಿಸಿದ ಊಟ ಮಾಡುತ್ತಾ ದುಬೈನ ಸಾಕಷ್ಟು ಕಥೆಗಳನ್ನು ಹೇಳಿದೆ. ಮಲಗಿದಾಗ ರಾತ್ರಿ ೧ ದಾಟಿತ್ತು.

ಮರುದಿನ ಎದ್ದಾಗ ಮಗ ವಿಷ್ಣು ತನ್ನ ಪ್ರವರ ಶುರು ಮಾಡಿದ, "ಅಪ್ಪ, ನಡಿ, ಹೊಳೆಗೆ ಹೋಗೋಣ" ಅಂತ. ಅವನ ಹಿಂದೆ ಚಿಕ್ಕ ತಮ್ಮನ ಇಬ್ಬರು ಪುಟಾಣಿ ಮಕ್ಕಳೂ ಹೊರಟರು. ಅವರೆಲ್ಲಾ ಹರಿವ ಹೇಮಾವತಿಯ ನೀರಿನಲ್ಲಿ ಬಿದ್ದು ಆಡಿದ್ದೇ ಆಡಿದ್ದು, ನಾನು ಹಲವಾರು ವರ್ಷಗಳ ಹಿಂದೆ, ಕಂಗಾಲಾಗಿ ಕುಳಿತು ಭವಿಷ್ಯದ ಬಗ್ಗೆ ತುಂತುಂಬಾ ಯೋಚಿಸುತ್ತಾ ಕುಳಿತಿರುತ್ತಿದ್ದ ಕಲ್ಲಿನ ಮೇಲೆ ಕುಳಿತು ಅವರ ಆಟವನ್ನೇ ನೋಡುತ್ತಿದ್ದೆ.

ಆದರೆ ನನ್ನ ಮನಸ್ಸು ಆ ಹಿಂದಿನ ದಿನಗಳನ್ನೆಲ್ಲಾ ಮೆಲುಕು ಹಾಕುತ್ತಿತ್ತು. ಅದೆಂಥಾ ದೈತ್ಯ ಶಕ್ತಿಯಿದೆ, ಆ ತಾಯಿ ಹೇಮಾವತಿಯ ಒಡಲಲ್ಲಿ ಹರಿವ ನೀರಿಗೆ, ಅಪ್ಪನಿಂದ ಒದೆ ತಿಂದು ಮನೆ ಬಿಟ್ಟು ಓಡಿ ಹೋಗಿದ್ದ ನನ್ನನ್ನು ಒಬ್ಬ ಯಶಸ್ವಿ ಮಾನವನಾಗುವಂತೆ ಮಾಡಿದ ಅವಳಿಗೆ ಹೇಗೆ ವಂದನೆ ಸಲ್ಲಿಸಲಿ ಎಂದೆಲ್ಲಾ ತರ್ಕಿಸುತ್ತಿತ್ತು.

ಇದೇ ನೋಡಿ, ಆ ಕಲ್ಲು, ನಾ ಅಂದು ಕುಳಿತು ಚಿಂತಿಸಿ, ಯಾವುದೋ ಒಂದು ಧೃಡ ನಿರ್ಧಾರಕ್ಕೆ ಬಂದು ಅಪ್ಪನಿಗೆ ತಿರುಗಿ ಬಿದ್ದು, ಒಬ್ಬ "ಮಹಾ ಒರಟನಾಗಿ" ಪರಿವರ್ತನೆಯಾದ ಸಂಕ್ರಮಣ ಕಾಲದಲ್ಲಿ ನನಗೆ ಕುಳಿತುಕೊಳ್ಳಲು ಜಾಗ ಕೊಟ್ಟು, ನನ್ನ ಆಗಿನ ಹತಾಶ ಮನದ ಯೋಚನೆಗಳಿಗೊಂದು ಮೂರ್ತ ರೂಪ ಕೊಟ್ಟು ನನ್ನನ್ನು ಯಶಸ್ಸಿನ ದಾರಿಗೆ ಸಜ್ಜುಗೊಳಿಸಿದ ಕಲ್ಲು.

ಈಗ ನನ್ನ ಮಗ 'ವಿಷ್ಣು' ಅಲ್ಲಿ ಕುಳಿತು ಹೇಮಾವತಿಯ ನೀರಿನಲ್ಲಿ ಆಡುತ್ತಿರುವ ತನ್ನ ತಮ್ಮಂದಿರನ್ನು ನೋಡಿ ನಗುತ್ತಿದ್ದಾನೆ.

ರೆಸೆಷನ್ ಸ್ವಾಮಿ, ರೆಸೆಷನ್, ಆರ್ಥಿಕ ಹಿಂಜರಿತ.....

ಏನು ಮಾಡಲಿ,, ನಾನು ಏನು ಮಾಡಲಿ,
ಎಲ್ಲಿ ಹೋಗಲಿ, ನಾನು ಏನು ಕೊಳ್ಳಲಿ ?

ಈ ರೆಸೆಷನ್ ಸಮಯದಲ್ಲಿ
ಕೈಲಿರುವ ಈ ಪುಡಿಗಾಸಿನಲ್ಲಿ
ಅಕ್ಕಿ, ಬೇಳೆ, ತರಕಾರಿಗಳ ಬೆಲೆಗಳೆಲ್ಲ
ಮುಗಿಲು ಮುಟ್ಟಿರುವಾಗ,

ಏನು ಮಾಡಲಿ,, ನಾನು ಏನು ಮಾಡಲಿ ?
ಎಲ್ಲಿ ಹೋಗಲಿ, ನಾನು ಏನು ಕೊಳ್ಳಲಿ ?

ಮಗನಿಗೆ ಕಬಾಬು, ಮಗಳಿಗೆ ಗೋಬಿ ಮಂಚೂರಿ,
ನಮ್ಮ ಟಾಮಿಗೆ ಬಿಸ್ಕತ್ತು, ಹೇಗೆ ತರಲಿ ?

ಪಕ್ಕದ ಮನೆಯವರು ತಂದ ಹೊಸ ಓವನ್ನು,
ಎದುರು ಮನೆಯವರು ತಂದ ಹೊಸ ಕಾರು,
ಹಿಂದಿನ ಮನೆಯವರು ತಂದ ರೇಷ್ಮೆ ಸೀರೆ,
ಹೇಗೆ ತರಲಿ, ನಾ ಹೇಗೆ ತರಲಿ ?

ಓ ರೆಸೆಷನ್ನೇ, ನೀನೇಕೆ ಬಂದೆ ?
ಹೋಗಿ ಕಾಡು ಜಾರ್ಜ್ ಬುಷ್ನನ್ನು,
ಬಾರಕ್ ಒಬಾಮಾನನ್ನು,
ನೀನು ಇಲ್ಲೇಕೆ ಬಂದೆ ?

ಏನು ಮಾಡಲಿ,, ನಾನು ಏನು ಮಾಡಲಿ ?
ಎಲ್ಲಿ ಹೋಗಲಿ, ನಾನು ಏನು ಕೊಳ್ಳಲಿ ?

ಅಭಯ ನೀಡಿ ತಲೆ ಕಾಯ್ದ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದ.

ಆಗ ಅಪ್ಪ ಅಮ್ಮ ಇನ್ನೂ ಅಜ್ಜಿ ತಾತನೊಟ್ಟಿಗೆ ಹೊಳೆ ನರಸೀಪುರದಲ್ಲೇ ಇದ್ದರಂತೆ. ಅಮ್ಮನಿಗೆ ಒಂದರ ಹಿಂದೊಂದರಂತೆ ಐದು ಹೆಣ್ಮಕ್ಕಳು ಹುಟ್ಟಿ ಅವರಲ್ಲಿ ಮೂರು ಅದ್ಯಾವುದೋ ಕಾಯಿಲೆಯಿಂದ ಕಣ್ಮುಚ್ಚಿಕೊಂಡವಂತೆ. ಸದಾ ಅಜ್ಜಿಯ ಕಿರಿಕಿರಿ ಮನೆಯಲ್ಲಿ, ನೆಮ್ಮದಿಯೇ ಇರಲಿಲ್ಲವಂತೆ. ಒಂದು ದಿನ ತಲೆ ಕೆಟ್ಟ ಅಪ್ಪ, ಅಜ್ಜಿ ತಾತನೊಂದಿಗೆ ಜಗಳವಾಡಿಕೊಂಡು ಅಮ್ಮನೊಟ್ಟಿಗೆ ಮೈಸೂರಿನ ಪ್ಯಾಸೆಂಜರ್ ರೈಲು ಹತ್ತಿದರಂತೆ. ಚಿಕ್ಕವಳಾಗಿದ್ದ ಶೋಭಕ್ಕನನ್ನು ಅಜ್ಜಿಯ ಬಳಿಯೇ ಬಿಟ್ಟು ಸ್ವಲ್ಪ ದೊಡ್ಡವಳಾಗಿದ್ದ ಮಂಜುಳಕ್ಕನನ್ನು ಜೊತೆಯಲ್ಲಿ ಕರೆದುಕೊಂದು ಬಂದರಂತೆ.

ಮೈಸೂರಿನ ಕ್ಷೇತ್ರಯ್ಯ ರಸ್ತೆಯಲ್ಲಿ ಒಂದು ಬಾಡಿಗೆ ಮನೆ ಹಿಡಿದು ಶಿವರಾಂ ಪೇಟೆಯ ವಿವಿಧ ಹೋಟೆಲ್ ಗಳಲ್ಲಿ ಮಾಣಿಯಾಗಿ, ದೋಸೆ ಭಟ್ಟರಾಗಿ, ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅಮ್ಮ ಮತ್ತೆ ಗರ್ಭಿಣಿಯಾದಾಗ ಸೀದಾ ಧರ್ಮಸ್ಥಳಕ್ಕೆ ಹೋಗಿ ದರ್ಶನ ಮಾಡಿ, ಹರಕೆ ಕಟ್ಟಿದರಂತೆ. "ಗಂಡು" ಮಗು ಹುಟ್ಟಿದರೆ ನಿನ್ನ ಹೆಸರೇ ಇಡುತ್ತೇವೆ, ದೇವಾ, ವಂಶೋದ್ಧಾರಕನನ್ನು ಕರುಣಿಸು ಎಂದು ಬೇಡಿಕೊಂಡರಂತೆ. ಆಗ ಹುಟ್ಟಿದ್ದೇ ನಾನು, ಅಂದುಕೊಂಡಂತೆ ನನಗೆ ಆ ದೇವನ ಹೆಸರನ್ನೇ ಇಟ್ಟು ಮೊದಲ ಮುಡಿ ಅಲ್ಲಿಯೇ ತೆಗೆಸಿದರಂತೆ. ನಾನು ದೊಡ್ಡವನಾದ ಮೇಲೆ ನನ್ನ ಬಾಲ್ಯದ ತುಂಟಾಟಗಳನ್ನು ಅಮ್ಮ ನನಗೆ ಆಗಾಗ ಬಹಳ ರಸವತ್ತಾಗಿ " ಸ್ವಚ್ಚ ಮೈಸೂರು ಭಾಷೆಯಲ್ಲಿ" ವರ್ಣಿಸಿ ಹೇಳುತ್ತಿದ್ದರು.

ಹಾಗೆಯೇ ಅಪ್ಪನ ಅದ್ರುಷ್ಟ ಖುಲಾಯಿಸಿ, ಅಂದಿನ ಮಂತ್ರಿ ದಂಪತಿಗಳಾಗಿದ್ದ ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ಅಡಿಗೆ ಭಟ್ಟರಾಗಿ ಕೆಲಸಕ್ಕೆ ಸೇರಿ, ಹೇಗೋ ಮಸ್ಕಾ ಹೊಡೆದು ಅಮ್ಮನಿಗೆ ಕ್ರುಷ್ಣ ರಾಜೇಂದ್ರ ಆಸ್ಪತ್ರೆಯಲ್ಲಿ ದಾದಿಯ ತರಬೇತಿಗೆ ಒಂದು ಸೀಟನ್ನೂ ಗಿಟ್ಟಿಸಿ ಬಿಟ್ಟರಂತೆ. ಆಗ ನನಗೆ ಇನ್ನೂ ಎರಡು ವರ್ಷ ತುಂಬಿರಲಿಲ್ಲ, ಅಮ್ಮನಿಂದ ಅನಿವಾರ್ಯವಾಗಿ ಅಗಲಬೇಕಾಯಿತು. ಆಗ ನನಗೆ ತಾಯಿಯಾದವಳು, ನನ್ನ ಅಕ್ಕ "ಮಂಜುಳ". ಅಮ್ಮ ಈ ಎಲ್ಲಾ ಕ್ರೆಡಿಟ್ಟನ್ನೂ ಹೋಲ್ ಸೇಲ್ ಆಗಿ ಧರ್ಮಸ್ಥಳದ ಮಂಜುನಾಥನಿಗೆ ಕೊಟ್ಟು ಬಿಟ್ಟರಂತೆ. ನಾಲ್ಕು ವರ್ಷಗಳ ತರಬೇತಿಯ ನಂತರ ಅಮ್ಮನಿಗೆ ಕೆಲಸ ಸಿಕ್ಕಿ ದೂರದ ಚಿಕ್ಕಬಳ್ಳಾಪುರ ಜಿಲ್ಲೆಯ " ಮಂಡಿಕಲ್ಲಿಗೆ " ನಮ್ಮ ಪ್ರಯಾಣ. ಅಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಂದುವರೆಯಿತು. ಆದರೆ ಅಪ್ಪ ಅಲ್ಲಿಂದಲೂ ನಮ್ಮನ್ನು ಪ್ರತಿ ವರ್ಷ ತಪ್ಪದೆ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಹಲವಾರು ಏಳು ಬೀಳುಗಳನ್ನು ಕಂಡು ಹಲವಾರು ಸಲ ಜೀವನದಲ್ಲಿ ಬಿದ್ದೆದ್ದ ನನಗೆ ಪ್ರತಿ ವರ್ಷ ಧರ್ಮಸ್ಥಳಕ್ಕೆ ಹೋಗುವುದು ಒಂದು ಚಟವಾಗಿ ಹೋಯ್ತು. ಅಲ್ಲಿ ಅಭಿಷೇಕದ ಚೀಟಿಯನ್ನೇ ತಗೆದುಕೊಂಡು, ಸಿಕ್ಕ ಅಲ್ಪ ಸಮಯದಲ್ಲೇ, ಆ ಗರ್ಭಗುಡಿಯ ಮುಂದೆ ನಿಂತು, ನನ್ನ ಎಲ್ಲಾ ನೋವುಗಳನ್ನೂ, ಕಷ್ಟಗಳನ್ನೂ ಹೇಳಿಕೊಂಡು, ದೇವಾ ಕರುಣೆ ತೋರು ಎಂದು ಪ್ರಾರ್ಥಿಸಿ ಆಚೆಗೆ ಬಂದಾಗ, ಅದೆಂಥಾ ನಿರುಮ್ಮಳ ಭಾವನೆ ಬರುತ್ತಿತ್ತು ಗೊತ್ತೇ ? ನಾನು ಮಾಡುತ್ತಿದ್ದ ಕೆಲಸಗಳಲ್ಲಿ ಅನೇಕ ಬಾರಿ ತೊಂದರೆಗಳಾಗಿ, ಕೆಲವೊಮ್ಮೆ ಊಟಕ್ಕೂ ಲಾಟರಿಯಾಗಿ ಬಿಡುತ್ತಿತ್ತು. ಮಗ ವಿಷ್ಣುವಿಗೆ ಅದೆಂಥದೋ ಖಾಯಿಲೆ ಬಂದು, ಕುಡಿದ ಹಾಲು - ನೀರೆಲ್ಲಾ ಹೊಟ್ಟೆಯಲ್ಲಿ ನಿಲ್ಲದೆ, ಮೇಲಿಂದಲೂ ಕೆಳಗಿನಿಂದಲೂ ಆಚೆಗೆ ಬಂದು ಬಿಡುತ್ತಿತ್ತು. ತೋರಿಸಿದ ವೈದ್ಯರೆಲ್ಲಾ ಒಂದಿಲ್ಲೊಂದು ರೋಗದ ಹೆಸರಿಟ್ಟು, ಪರೀಕ್ಷೆಗೆ ಬರೆದು ಕೊಟ್ಟು, ಬೆಂಗಳೂರಿನ ಎಲ್ಲಾ " ಲ್ಯಾಬ್" ಗಳಲ್ಲೂ ಅವನ ರಕ್ತ ಕೊಟ್ಟಿದ್ದಾಯ್ತು. ಒಬ್ಬ ಪುಣ್ಯಾತ್ಮ ವೈದ್ಯ ಅವನ ಲಿವರ್ ಹೋಗಿದೆ, ಲಿವರ್ ಬಯಾಪ್ಸಿ ಮಾಡಬೇಕಾಗುತ್ತದೆ ಎಂದಾಗ ನನ್ನ ಧೈರ್ಯವೇ ಉಡುಗಿ ಹೋಗಿತ್ತು.

ಕೊನೆಗೆ ದೇವರೇ ಗತಿಯೆಂದು ಸೀದಾ ಹೋಗಿದ್ದು ಧರ್ಮಸ್ಥಳಕ್ಕೆ, ಅಲ್ಲಿ , ಈ ಮಗನಿಗೆ ವಾಸಿಯಾದರೆ ಮುಂದಿನ ಸಲ ಬಂದಾಗ ಅವನಿಗೆ ಅಕ್ಕಿಯಲ್ಲಿ ತುಲಾಭಾರ ಮಾಡಿಸುತ್ತೇನೆಂದು ಹರಕೆ ಕಟ್ಟಿ ಬಂದೆವು. ಮಗನ ಖಾಯಿಲೆ ವಾಸಿಯಾಯ್ತು, ಇತ್ತೀಚಿನ ದಿನಗಳಲ್ಲಿ ಅವನಿಗೆ ಒಂದು ಆರ್ಡಿನರಿ ಜ್ವರವೂ ಬಂದಿಲ್ಲ, ಹರಕೆ ಕಟ್ಟಿದಂತೆ ಕಲಾ ಮತ್ತು ಮಕ್ಕಳೊಂದಿಗೆ ಹೋಗಿ ಮಗನ ಜೊತೆಗೆ ನನ್ನ ತುಲಾಭಾರವನ್ನೂ ಮಾಡಿಸಿದೆ. ಶ್ರೀ ವೀರೇಂದ್ರ ಹೆಗ್ಗಡೆಯವರು ಮುಂದೆ ನಿಂತು ತುಲಾಭಾರ ಮಾಡಿಸಿ, ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿ, ನಿಮ್ಮ ಹರಕೆ ಸಲ್ಲಿಕೆಯಾಗಿದೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳುವಾಗ, ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಸಾಕ್ಷಾತ್ ಆ ಮಂಜುನಾಥನೇ ನಮ್ಮ ಮುಂದೆ ನಿಂತು ಅಭಯವನ್ನಿತ್ತಂತಾಯಿತು.

ಅವನ ಅನುಗ್ರಹದಿಂದ ಎಲ್ಲವೂ ಒಳ್ಳೆಯದೇ ಆಗಿದೆ, ಕಂಡ ಕನಸುಗಳೆಲ್ಲ ಕೈಗೂಡುತ್ತಿವೆ. ಬಾಳಿನ ಬಂಡಿ, ಏರು ಪೇರುಗಳನ್ನೆಲ್ಲಾ ದಾಟಿ, ಸುಗಮವಾಗಿ ಸಾಗುತ್ತಿದೆ. ಅವನ ಕರುಣೆ ನಮ್ಮ ಮೇಲೆ ಸದಾ ಹೀಗೇ ಇರಲಿ ಎಂಬುದೇ ನನ್ನ ಆಸೆ.