Tuesday, January 6, 2015

ಬನದ ಹುಣ್ಣಿಮೆ!


ನಾನಿಂದು ನಿನ್ನ ಮೇಲೊಂದು ಸುಂದರ ಪ್ರೇಮ ಕವನ ಗೀಚುವ 
ಉಮೇದಿನಲ್ಲಿದ್ದೆ ಚಂದ್ರಮ,,,,, ಇಂದು ಬನದ ಹುಣ್ಣಿಮೆಯಲ್ಲವೆ?

ಅದೇಕೋ ಗೊತ್ತಿಲ್ಲ ಮನೆಗೆ ಬಂದೊಡನೆ ಈ ಹಾಳು ಮನವು 
ಮೂಕವಾಗಿ ಪದಗಳು ಸಿಗದೇ  ಮೌನಕೆ ಮೊರೆ ಹೋಯಿತು! 

ಹುಡುಕಲಾರಂಭಿಸಿತು ಮನ ಮರೆತು ಹೋದ ಹಳೆಯ ಮಾತುಗಳ
ಕಾಲ ನಿಂತಂತಾಯಿತು ಒಮ್ಮೆಗೇ ಸುತ್ತಲ ಚಿತ್ರಗಳೆಲ್ಲ ಸ್ತಬ್ಧ ನಿಶ್ಯಬ್ಧ!

ಪ್ರಿಯವಾದ ಮದಿರೆಯೂ ರುಚಿಸದಂತಾಯ್ತು ನಾಲಿಗೆಗೆ ಇಂದು 
ಸುಮ್ಮನೆ ಕುಡಿದದ್ದೇ ಬಂತು ಕೊನೆಗೂ ನಶೆ ಏರಲೇ ಇಲ್ಲವಿಂದು!

ಲಕ್ಷ ಲಕ್ಷ ತಾರೆಗಳು ಚಂದ್ರಮನ ಜೊತೆ ಚಕ್ಕಂದವಾಡುತಿರಲು 
ನೀರವ ಆಗಸದಲಿ ತೇಲಿ ಬಂದಿತ್ತು ಕನಸುಗಳ ಸ್ಮಶಾನಯಾತ್ರೆ!  

ನಗುತಿತ್ತು ಭುವಿ ನಿನ್ನ ತಣ್ಣನೆಯ ಬೆಳದಿಂಗಳ ಹೀರಿ ಹಿಗ್ಗಿ ಸೊಕ್ಕಿ 
ಪುಟ್ಟ ಮನವೊಂದು ರೋದಿಸುತ್ತಿತ್ತು ದೂರದಲ್ಲಿ ಬಲು ಬಿಕ್ಕಿ ಬಿಕ್ಕಿ!

Saturday, January 3, 2015

ಹೊಸವರ್ಷದ ಸೂತಕ!



ನಮ್ಮ ಕಚೇರಿಯಲ್ಲಿ ಕಳೆದ ವಾರ ನನ್ನನ್ನು ಸಂಪರ್ಕಿಸಿದ ಮಾನವಸಂಪನ್ಮೂಲ ಅಧಿಕಾರಿಯೊಬ್ಬರು ಸುಮಾರು ಒಂದು ತಿಂಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಒಬ್ಬನನ್ನು ಸಂಸ್ಥಯ ವಸತಿಯಿಂದ ತೆರವುಗೊಳಿಸಬೇಕೆಂದು ವಿನಂತಿಸಿಕೊಂಡಿದ್ದರು. ಸರಿ ಎಂದು ಅವನ ಬಗ್ಗೆ ಎಲ್ಲ ವಿವರಗಳನ್ನು ಸಂಗ್ರಹಿಸಿ ವಸತಿಗೃಹಕ್ಕೆ ಭೇಟಿಯಿತ್ತೆ, ತನ್ನ ಕೊಠಡಿಯಲ್ಲಿ ಇತರ ಕೆಲಸಗಾರರೊಂದಿಗೆ ಕುಳಿತಿದ್ದ ಅವನಿಗೆ ನನ್ನ ಪರಿಚಯ ಮಾಡಿಕೊಂಡು ಮಾತಿಗೆಳೆದೆ.  ಸುಮಾರು ೨೪ ವರ್ಷದ ಹೈದರಾಬಾದಿನ ಯುವಕ, ಸ್ವಲ್ಪ ಚಿಂತಿತನಾದಂತಿದ್ದರೂ  ಅಮಾಯಕನಂತೆ ಕಾಣುತ್ತಿದ್ದ. ನಿನ್ನನ್ನು ಈಗಾಗಲೇ ಕೆಲಸದಿಂದ ವಜಾ ಮಾಡಿ ಒಂದು ತಿಂಗಳಾಗಿದೆ, ಇಲ್ಲಿನ ವಲಸೆ ಹಾಗೂ ಕಾರ್ಮಿಕ ನಿಯಮದ ಪ್ರಕಾರ ಕೆಲಸದಿಂದ ವಜಾಗೊಂಡ ನಂತರ ನೀನು ಇಲ್ಲಿ ಒಂದು ತಿಂಗಳು ಮಾತ್ರ ಇರಬಹುದು. ನಿನ್ನ ಕಾಲಾವಧಿ ಮುಗಿದಿರುವುದರಿಂದ ನೀನು ನಾಳೆ ಬಂದು ಕಚೇರಿಯಲ್ಲಿ ಎಲ್ಲಾ ಕಾಗದಪತ್ರಗಳಿಗೆ ಸಹಿ ಮಾಡಿ ನಿನ್ನೂರಿಗೆ ಹೊರಟು ಬಿಡು, ಇಲ್ಲದಿದ್ದರೆ ನಿನಗೆ ತುಂಬಾ ತೊಂದರೆಯಾಗುತ್ತದೆ ಎಂದು ಹೇಳಿದ್ದೆ. ಎಲ್ಲವನ್ನೂ ಸಮಾಧಾನವಾಗಿ ಕೇಳಿಸಿಕೊಂಡ ಅವನು ಆಯ್ತು ಸಾರ್, ನಾಳೆ ಕಚೇರಿಗೆ ಬರುತ್ತೇನೆ ಎಂದಿದ್ದ.  ಇಷ್ಟು ಸುಲಭವಾಗಿ ಒಪ್ಪಿಕೊಂಡನಲ್ಲಾ ಎಂದು ಖುಷಿಯಿಂದ ಹೊರ ಬಂದಿದ್ದೆ.  ಆದರೆ ಅವನು ಹೇಳಿದಂತೆ ಮರುದಿನ ಕಚೇರಿಗೆ ಬರಲಿಲ್ಲ! ಮತ್ತೊಮ್ಮೆ ಮಾನವ ಸಂಪನ್ಮೂಲದವರು ನನ್ನನ್ನು ಸಂಪರ್ಕಿಸಿ ಹೇಗಾದರೂ ಮಾಡಿ ಅವನನ್ನು ಖಾಲಿ ಮಾಡಿಸಬೇಕೆಂದು ವಿನಂತಿಸಿದ್ದರು, ಹಾಗಿಲ್ಲದಿದ್ದಲ್ಲಿ ಸಂಸ್ಥೆಯ ಮುಂದಿನ ಎಲ್ಲಾ ವೀಸಾಗಳಿಗೂ ತೊಂದರೆಯಾಗುತ್ತದೆಂದಿದ್ದರು.

ಕೆಲವು ದಿನ ಕೆಲಸದ ಒತ್ತಡದಲ್ಲಿ ನಾನು ಈ ವಿಚಾರವನ್ನು ಮರೆತಿದ್ದೆ, ಮೊನ್ನೆ ಗುರುವಾರ ನಾನು ಹೋಟೆಲ್ಲಿನ ಡ್ಯೂಟಿ ಮೇನೇಜರ್ ಆಗಿದ್ದೆ, ನನ್ನ ಕೆಲಸ ಮುಗಿಸಿ ರಾತ್ರಿ ಹತ್ತೂವರೆಗೆ ಮನೆಗೆ ಹೊರಡಲು ಆಚೆ ಬಂದರೆ ಧಿಡೀರನೆ ನನ್ನೆದುರಿಗೆ ಅದೇ ಯುವಕ ಪ್ರತ್ಯಕ್ಷನಾಗಬೇಕೇ?  ರಾತ್ರಿ ಅಷ್ಟು ಹೊತ್ತಿನಲ್ಲಿ ಅವನು ಹೋಟೆಲ್ಲಿಗೆ ಬಂದಿದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು, ಅವನನ್ನು ತಡೆದು ಎಲ್ಲಿಗೆ ಹೋಗುತ್ತಿದ್ದೀಯಾ ಎಂದೆ, ಅದಕ್ಕವನು ಊಟಕ್ಕಾಗಿ ರೆಸ್ಟೋರೆಂಟಿಗೆ ಹೋಗುತ್ತಿದ್ದೇನೆ ಎಂದು ಧಿಮಾಕಿನ ಉತ್ತರ ಕೊಟ್ಟ!  ಅರೆ, ನಿನ್ನನ್ನು ಕೆಲಸದಿಂದ ವಜಾ ಮಾಡಿ ಒಂದು ತಿಂಗಳಿಗಿಂತ ಹೆಚ್ಚಾಗಿದೆ, ನೀನು ಸಂಸ್ಥೆಯ ಕಾನೂನಿನ ಪ್ರಕಾರ ಇಲ್ಲಿ ಕಾಲಿಡುವಂತಿಲ್ಲ, ಇನ್ನು ಊಟಕ್ಕೆ ಹೇಗೆ ಬಂದೆ ಎಂದರೆ ಊಟವಿಲ್ಲದೆ ಹೇಗೆ ಇರೋದಿಕ್ಕಾಗುತ್ತೆ ಸಾರ್, ಸಂಸ್ಥೆಯವರು ನನಗೆ ಕೊಡಬೇಕಾದ ಬಾಕಿ ಹಣವನ್ನೂ ಕೊಟ್ಟಿಲ್ಲ, ನನ್ನ ಬಳಿ ಊಟಕ್ಕೆ ಹಣವಿಲ್ಲ, ಅದಕ್ಕೇ ಇಲ್ಲಿಗೆ ಊಟಕ್ಕೆ ಬಂದೆ, ಎಷ್ಟೋ ಜನ ಆರೇಳು ತಿಂಗಳೂ ಇದೇ ರೀತಿ ಇದ್ದು ಹೋಗಿದ್ದಾರೆ, ನನಗೆ ಮಾತ್ರ ಯಾಕೆ ನೀವು ತಡೆಯುತ್ತೀರಿ ಎಂದು ಪ್ರಶ್ನಿಸಿದ್ದ!  ನಿನ್ನ ಬಳಿ ಹಣವಿಲ್ಲವೆಂದರೆ ಅದು ನೀನಾಗಿ ನೀನು ಮಾಡಿಕೊಂಡಿರುವ ತಲೆನೋವು, ಆ ದಿನ ಕಚೇರಿಗೆ ಬಂದು ಎಲ್ಲ ಕಾಗದಪತ್ರಗಳಿಗೆ ಸಹಿ ಮಾಡಿ, ನಿನಗೆ ಬರಬೇಕಾದ ಬಾಕಿ ಹಣ ತೆಗೆದುಕೊಂಡು ಊರಿಗೆ ಹೋಗು ಎಂದರೆ ನೀನು ಯಾಕೆ ಬರಲಿಲ್ಲ? ಇದು ನೀನಾಗಿ ತಂದುಕೊಂಡಿರುವ ಪರಿಸ್ಥಿತಿ, ಅದಕ್ಕೆ ನಾನು ಏನೂ ಮಾಡಲಾಗುವುದಿಲ್ಲ, ಈಗ ಇಲ್ಲಿಂದ ಮೊದಲು ಹೊರಗೆ ಹೋಗು, ನಾಳೆ ಬಂದು ನಿನ್ನದೇನಿದೆಯೋ ಎಲ್ಲ ಲೆಕ್ಕ ಚುಕ್ತಾ ಮಾಡಿಕೋ ಎಂದೆ.
ನನ್ನ ಮಾತಿನಿಂದ ಸಿಟ್ಟಿಗೆದ್ದ ಅವನು ಬಲವಂತವಾಗಿ ಹೋಟೆಲ್ಲಿನ ಒಳಗೆ ಹೋಗಲು ಮುಂದಡಿಯಿಟ್ಟ, ತಕ್ಷಣ ಎಲ್ಲವನ್ನೂ ನೋಡುತ್ತಿದ್ದ ನಮ್ಮ ಭದ್ರತಾ ರಕ್ಷಕನೊಬ್ಬ ಅವನನ್ನು ಗೊಂಬೆಯಂತೆ ಹಿಡಿದೆತ್ತಿ ಆಚೆಗೆ ನೂಕಿದ್ದ!   ಆದರೆ ಅಲ್ಲಿಂದ ಹೋಗಲು ತಯಾರಿಲ್ಲದ ಅವನು ಅಲ್ಲೇ ಇದ್ದ ಜಗುಲಿಯ ಮೇಲೆ ಕುಳಿತು ಕಾಲಿನ ಮೇಲೆ ಕಾಲು ಹಾಕಿಕೊಂಡು ಸಿಗರೇಟು ಸೇದುತ್ತಾ ನನ್ನನ್ನೇ ದುರುಗುಟ್ಟಿ ನೋಡುತ್ತಾ ಫೋಸು ಕೊಡುತ್ತಿದ್ದ.  ಅವನನ್ನು ಯಾವುದೇ ಕಾರಣಕ್ಕೂ ಒಳಬಿಡದಂತೆ ಭದ್ರತಾ ರಕ್ಷಕರಿಗೆ ತಾಕೀತು ಮಾಡಿ ನಾನು ಮನೆಗೆ ಬಂದಿದ್ದೆ.

ನಾನು ಇತ್ತ ಮನೆಗೆ ಬಂದರೆ ಅತ್ತ ಅವನು ಅನತಿ ದೂರದಲ್ಲಿರುವ ನಮ್ಮದೇ ಸಂಸ್ಥೆಯ ಇನ್ನೊಂದು ಹೋಟೆಲ್ಲಿಗೆ ಹೋಗಿ, ಅವನಿಗೆ ರೆಸ್ಟೋರೆಂಟಿನಲ್ಲಿ ಊಟ ಮಾಡಲು ನಾನು ಅನುಮತಿ ಕೊಟ್ಟಿದ್ದೇನೆಂದು ಗೇಟಿನಲ್ಲಿದ್ದ ಭದ್ರತಾ ರಕ್ಷಕನಿಗೆ ಸುಳ್ಳು ಹೇಳಿ ಹೋಟೆಲ್ಲಿನೊಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದ.  ತಕ್ಷಣ ಅಲ್ಲಿನ ಭದ್ರತಾ ರಕ್ಷಕ ನನ್ನ ಮೊಬೈಲಿಗೆ ಕರೆ ಮಾಡಿ ಅವನಿಗೆ ನಾನು ಅನುಮತಿ ಕೊಟ್ಟಿದ್ದೇನೆಯೋ ಇಲ್ಲವೋ ಎಂದು ಕೇಳಿದ್ದ, ಅವನನ್ನು ಒಳಕ್ಕೆ ಬಿಡದೆ ಹೊರಗಟ್ಟುವಂತೆ ನಾನು ಆದೇಶಿಸಿದ್ದೆ.  ಬಲವಂತವಾಗಿ ಅವನನ್ನು ಹೋಟೆಲ್ಲಿನಿಂದ ಹೊರಗಟ್ಟಿದ ಭದ್ರತಾ ರಕ್ಷಕರು ಅವನನ್ನು ವಸತಿಗೃಹಕ್ಕೆ ಹಿಂದಿರುಗಲು ಸಂಸ್ಥೆಯ ಬಸ್ಸಿನೊಳಕ್ಕೂ ಹತ್ತಲು ಬಿಟ್ಟಿರಲಿಲ್ಲ!  ಇಷ್ಟೆಲ್ಲ ಆದ ನಂತರವೂ ಆ ಜಗಮೊಂಡ ರಾತ್ರಿ ೧ ಘಂಟೆಗೆ ವಸತಿಗೃಹಕ್ಕೆ ವಾಪಸ್ ಬಂದು ಮಲಗಿದ್ದ ಜತೆಯವರನ್ನು ಬಾಗಿಲು ಬಡಿದು ಎಬ್ಬಿಸಿ ಒಳಕ್ಕೆ ಸೇರಿಕೊಂಡಿದ್ದ. ಎಲ್ಲವನ್ನೂ ಕೂಲಂಕುಶವಾಗಿ ವಿಮರ್ಶಿಸಿ ನೋಡಿದಾಗ ಇವನೊಬ್ಬ ಮಾನಸಿಕ ಅಸ್ವಸ್ಥ ಎಂಬುದು ನನಗೆ ಮನದಟ್ಟಾಗಿತ್ತು.

ಮರುದಿನ ಕಚೇರಿಗೆ ಹೋದವನು ನಡೆದ ಎಲ್ಲ ಘಟನೆಗಳನ್ನು ವಿವರಿಸಿ ಸಂಸ್ಥೆಯ ಮುಖ್ಯಸ್ಥರಿಗೆ ಒಂದು ಮಿಂಚಂಚೆಯನ್ನು ಕಳುಹಿಸಿ, ಮಾನಸಿಕವಾಗಿ ಅಸ್ವಸ್ಥನಾಗಿರುವ ಅವನನ್ನು ಕಾನೂನು ಪ್ರಕಾರ ಇಲ್ಲಿಂದ ಹೊರಹಾಕಬೇಕೆಂದು, ಇಲ್ಲದಿದ್ದಲ್ಲಿ ಅವನಿಂದ ಯಾರಿಗಾದರೂ ತೊಂದರೆಯಾಗಬಹುದೆಂದೂ  ವಿವರಿಸಿದ್ದೆ. ತಕ್ಷಣ ಕಾರ್ಯಪ್ರವೃತ್ತರಾದ ಅವರು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಕರೆಸಿ, ವಲಸೆ ವಿಭಾಗದಲ್ಲಿ ಅವನನ್ನು "ತಲೆ ಮರೆಸಿಕೊಂಡಿರುವ ವ್ಯಕ್ತಿ" ಎಂದು ದಾಖಲಿಸಿ ಪೊಲೀಸರಿಗೆ ದೂರು ನೀಡುವಂತೆ ಆದೇಶಿಸಿದ್ದರು. ಅದರಂತೆ ದೂರು ದಾಖಲಿಸಿದ ಮೂರು ದಿನಗಳಲ್ಲಿ  ಸಂಸ್ಥೆಯ ವಸತಿಗೃಹಕ್ಕೆ ಭೇಟಿಯಿತ್ತ ವಲಸೆ ವಿಭಾಗದ ಅಧಿಕಾರಿಗಳು ಇತರ ಕೆಲಸಗಾರರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದ ಅವನನ್ನು ಅನಾಮತ್ತಾಗಿ ಬಂಧಿಸಿ ಶಾರ್ಜಾದ ಜೈಲಿಗೆ ಕರೆದೊಯ್ದು ಬಂಧನದಲ್ಲಿಟ್ಟಿದ್ದಾರೆ.  ಒಂದು ವಾರ ಶಾರ್ಜಾದ ಜೈಲಿನಲ್ಲಿ, ನಂತರ ಒಂದು ತಿಂಗಳು ದುಬೈನ ಕೇಂದ್ರ ಕಾರಾಗೃಹದ ವಲಸೆ ವಿಭಾಗದ ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕು, ನಂತರ ಅವನ ಪಾಸ್ಪೋರ್ಟಿನಲ್ಲಿ ಶಾಶ್ವತ "ಬ್ಯಾನ್" ಸೀಲಿನೊಂದಿಗೆ ಅವನನ್ನು ಪೊಲೀಸರೇ ವಿಮಾನ ಹತ್ತಿಸುತ್ತಾರೆ, ಮತ್ತೆಂದಿಗೂ ಅವನ ಜೀವಮಾನದಲ್ಲಿ ಅವನು ದುಬೈಗೆ ಬರಲು ಸಾಧ್ಯವೇ ಇಲ್ಲ!

ವರ್ಷದ ಕೊನೆಯ ದಿನ ಕಳೆದು ಹೊಸವರ್ಷದ ಆಗಮನದ ನಿರೀಕ್ಷೆಯಲ್ಲಿದ್ದ ಅವನಿಗೆ, ಅವನ ಹುಚ್ಚಾಟದಿಂದಾಗಿ ಜೈಲುವಾಸವೇ ಗತಿಯಾಯ್ತು!  ಹೊಸವರ್ಷದ ಆಚರಣೆಯ ಸಂಭ್ರಮದಲ್ಲಿದ್ದ ಜನರ ನಡುವೆ ಎರಡು ಹೋಟೆಲ್ಲುಗಳ ಭದ್ರತೆಯ ರಕ್ಷಣೆಯ ಹೊಣೆ ಹೊತ್ತಿದ್ದ ನನಗೆ ಅವನ ಬಗ್ಗೆ ಚಿಂತಿಸಲು ಸಮಯವೇ ಇರಲಿಲ್ಲ, ಇಂದು ವಾರದ ಧಾವಂತದ ಬದುಕಿಗೆ ಬಿಡುವು, ಧುತ್ತೆಂದು ಅವನ ಕಥೆ ನೆನಪಾಗಿ ಮನದ ಮೂಲೆಯಲ್ಲಿ ಸೂತಕದ ಛಾಯೆ ಕಾಡಿತು

ಜ್ವಾಲಾಮುಖಿ

ನನ್ನ ನಗುಮೊಗವ ಕಂಡು ನೀನಿಂದು ಬೆರಗಾದೆಯ ಸಖಿ  
ಹುಟ್ಟುಗುಣವದು ಸುಟ್ಟರೆ ಹೋದೀತೇ ನಾ ಸದಾ ಹಸನ್ಮುಖಿ 
ಕಾಣದಂತಡಗಿದೆ ನಗುವ ಹಿಂದೊಂದು ಜ್ವಾಲಾಮುಖಿ 
ಸುಡುವಗ್ನಿಕುಂಡದ ನಡುವೆಯೂ ನಾನೆಂದಿಗೂ ಜೀವನ್ಮುಖಿ !  :-)

Thursday, January 1, 2015

ಭದ್ರತೆಯ ಲೋಕದಲ್ಲಿ - ೧



 (ಬಹು ದಿನಗಳಿಂದ ನನ್ನ ಮನದಲ್ಲಿ ಕೊರೆಯುತ್ತಿದ್ದ ಒಂದು ಕೊರಗು ಇಂದು ಹೊಸವರ್ಷದಲ್ಲಿ ಬಗೆಹರಿದ ಸಂತಸ ಗೆಳೆಯರೆ, ಸುಮಾರು ೨೫ ವರ್ಷಗಳಿಂದ ಬರಿಗೈಲಿ ಬಂದವನಿಗೆ ಅನ್ನ ಕೊಟ್ಟು ಸಲಹಿದ ನನ್ನ ಭದ್ರತಾ ಲೋಕದ ಬಗ್ಗೆ ಬರೆಯಬೇಕು ಅಂತನ್ನಿಸಿದಾಗೆಲ್ಲಾ ಏನಾದರೊಂದು ಅಡಚಣೆಯಾಗಿ ಅದು ಹಾಗೆಯೇ ಉಳಿದು ಬಿಡುತ್ತಿತ್ತು!  ಈ ಬಾರಿ ಸಹೃದಯ ಶ್ರೀ ಗಣೇಶ್ ಕೋಡೂರ್ ಅವರ ಪ್ರೋತ್ಸಾಹದಿಂದ ಅದು ಈಡೇರಿದೆ, ಇದಿನ್ನು ನಿರಂತರವಾಗಿ ಹರಿದು ಬರಲಿದೆ, ಕಾಲು ಶತಮಾನವನ್ನು ಇದೇ ಉದ್ಯೋಗದಲ್ಲಿ ಕಳೆದಾಯಿತು, ಸಾವಿರಾರು ಜನರನ್ನು, ಸಾವಿರಾರು ಘಟನೆಗಳನ್ನು, ಜೀವನ್ಮರಣ ಹೋರಾಟಗಳನ್ನು, ಕೊನೆಗೆ ಸಾವನ್ನು, ಬಹಳ ಹತ್ತಿರದಿಂದ ಕಂಡಾಯ್ತು !  ನಿಮ್ಮ ಪ್ರೋತ್ಸಾಹವಿರಲಿ. :-)  ಇದು ಈ ಬಾರಿಯ ನಿಮ್ಮೆಲ್ಲರ ಮಾನಸ ಮಾಸ ಪತ್ರಿಕೆಯಲ್ಲಿ ಹೊಸ ಅಂಕಣವಾಗಿ ಪ್ರಕಟವಾಗಿದೆ, ಒಮ್ಮೆ ಓದಿ ನೋಡಿ. )


ಪ್ರತಿನಿತ್ಯ ನಾವು ನಡೆದಾಡುವೆಡೆಗಳಲ್ಲಿ ಇವರನ್ನು ಒಮ್ಮೆ  ನೋಡಿಯೇ ಇರುತ್ತೇವೆ.  ಆದರೆ ಎಲ್ಲೋ ಒಮ್ಮೊಮ್ಮೆ ಮಾತ್ರ ಮಾತನಾಡಿಸಿರುತ್ತೇವೆ ಅಥವಾ ಮಾತನಾಡಿಸಿರುವುದೇ ಇಲ್ಲ!  ಆದರೂ ಅವರು ನಮ್ಮ ಇಂದಿನ ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ, ಅವರೇ "ಭದ್ರತಾ ರಕ್ಷಕರು".  ಆಂಗ್ಲದಲ್ಲಿ "ಸೆಕ್ಯುರಿಟಿ ಗಾರ್ಡ್" ಎಂದು ಕರೆದರೆ ಕೆಲವೊಮ್ಮೆ ಇವರು ಕೇವಲ "ವಾಚ್ಮನ್" ಎಂದೂ ಕರೆಯಲ್ಪಡುತ್ತಾರೆ.  ಬ್ಯಾಂಕುಗಳಲ್ಲಿ, ದೊಡ್ಡ ದೊಡ್ಡ ಹೋಟೆಲ್ಲುಗಳಲ್ಲಿ, ಆಸ್ಪತ್ರೆಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ವಸತಿ ಸಂಕೀರ್ಣಗಳಲ್ಲಿ, ಕಾರ್ಖಾನೆಗಳಲ್ಲೀ, ಸಮವಸ್ತ್ರ ಧರಿಸಿದ ಇವರನ್ನು ನಿತ್ಯವೂ ಕಾಣಬಹುದು.  ನಿಮ್ಮ ದೈನಂದಿನ ಕಾರ್ಯಗಳಿಗೆಂದು ನೀವು ತಲೆ ಕೆಡಿಸಿಕೊಳ್ಳುವಾಗ ಒಂದಿಲ್ಲೊಂದು ಸಮಯದಲ್ಲಿ ಅವರು ನಿಮಗೆ ಸಹಾಯ ಮಾಡುತ್ತಿರುತ್ತಾರೆ, ಕೆಲವೊಮ್ಮೆ ಒಂದು ಮುಗುಳ್ನಗುವಿನೊಡನೆ ಒಂದು "ಥ್ಯಾಂಕ್ಸ್" ಸಿಕ್ಕರೆ ಬಹಳ ಖುಷಿಯಾಗುತ್ತಾರೆ.  ಎಲ್ಲರೂ ತಂತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ, ಮನೆಗೆ ಹಿಂದಿರುಗಿ, ತಮ್ಮ ಕುಟುಂಬದೊಡನೆ ಇದ್ದಾಗ, ಇವರು ಮಾತ್ರ ತಮ್ಮ ಕೆಲಸದಲ್ಲೇ ಇರುತ್ತಾರೆ!  ರಾತ್ರಿ ಪಾಳಿಯ ಜೊತೆಗಾರ ಬರುವವರೆಗೂ ದಿನದ ಪಾಳಿಯವನು ಕಣ್ಣಲ್ಲಿ ಕಣ್ಣಿಟ್ಟು ತಾನಿರುವ ಜಾಗದ ರಕ್ಷಣೆಯ ಹೊಣೆ ಹೊತ್ತಿರುತ್ತಾನೆ.

ದೇಶ ಕಾಯಲು ಸೈನಿಕರು, ಊರಿನ ರಕ್ಷಣೆಗೆ ಪೊಲೀಸರು ಇದ್ದಂತೆ, ಒಂದು ಸಂಸ್ಥೆಯ ರಕ್ಷಣೆಗೆ ಈ ಭದ್ರತಾ ರಕ್ಷಕರಿರುತ್ತಾರೆ.  ಹಿಂದೆಲ್ಲಾ ಒಂದು ಖಾಕಿ ಶರ್ಟು, ಪ್ಯಾಂಟು ತೊಟ್ಟು, ಗೇಟಿನ ಬಳಿಯಲ್ಲಿ ಬೀಡಿ ಸೇದುತ್ತಾ ನಿಂತಿರುವ "ವಾಚ್ಮನ್"ಗಳನ್ನು ಕಾಣಬಹುದಾಗಿತ್ತು.  ಅವರಿಗೆ ಯಜಮಾನರ ಕಾರು ಬಂದರೆ ಗೇಟು ತೆಗೆಯುವ ಮತ್ತು ಮುಚ್ಚುವ ಕಾಯಕವಷ್ಟೇ ಗೊತ್ತಿರುತ್ತಿತ್ತು.  ಆದರೆ ಜಾಗತೀಕರಣದ ಪರಿಣಾಮವಾಗಿ ಉದ್ಯಮಗಳ ಹಾಗೂ ನಿತ್ಯಜೀವನದ ರೂಪ ಬದಲಾಗುತ್ತಾ ಹೋದಂತೆ ಈ "ವಾಚ್ಮನ್"ಗಳ ಸ್ವರೂಪವೂ ಬದಲಾಯಿತು.  ಕೇವಲ ಕೆಲವು ನಿವೃತ್ತ ಸೈನಿಕರು ನಡೆಸುತ್ತಿದ್ದ ಭದ್ರತಾ ಉದ್ಯಮದಲ್ಲಿಯೂ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವಾಯಿತು.  ತತ್ಫಲವಾಗಿ ಇಡೀ ಉದ್ಯಮದ ಚಿತ್ರಣವೇ ಬದಲಾಗಿ ಹೋಯಿತು.  ಇಂದು ನಮ್ಮ ಉದ್ಯಾನನಗರಿ ಬೆಂಗಳೂರಿನಲ್ಲಿಯೇ ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚು ಭದ್ರತಾ ರಕ್ಷಕರಿದ್ದಾರೆ ಎಂದರೆ ನಂಬಲಸಾಧ್ಯ!  ಮುಂಬೈ ಮೇಲೆ ನಡೆದ ಉಗ್ರರ ಧಾಳಿಯ ನಂತರವಂತೂ ಇಡೀ ಭದ್ರತಾ ಸಂಸ್ಥೆಗಳ ಸ್ವರೂಪ ತೀವ್ರತರವಾಗಿ ಬದಲಾಗಿ ಇಂದು ದೇಶದಲ್ಲಿರುವ ಪೊಲೀಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ರಕ್ಷಕರನ್ನು ಕಾಣಬಹುದಾಗಿದೆ.  ಒಂದು ಅಧ್ಯಯನದ ಪ್ರಕಾರ  ದೇಶದಾದ್ಯಂತ ಸುಮಾರು ಹದಿನೈದು ಸಾವಿರ ಖಾಸಗಿ ಭದ್ರತಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು ಐವತ್ತು ಲಕ್ಷಕ್ಕಿಂತ ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ.  ಇಡೀ ದೇಶದಲ್ಲಿನ ಪೊಲೀಸರ ಸಂಖ್ಯೆ ಸುಮಾರು ಮುವ್ವತ್ತೈದು ಲಕ್ಷವೆಂದು ಅದೇ ವರದಿ ತಿಳಿಸುತ್ತದೆ. ಇತ್ತೀಚೆಗಿನ ವರದಿಗಳ ಪ್ರಕಾರ ಭದ್ರತಾ ಉದ್ಯಮದ ವಾರ್ಷಿಕ ವಹಿವಾಟು ರೂ. ೨೨,೦೦೦ ಕೋಟಿಯಿದ್ದು ೨೦೧೫ರಲ್ಲಿ ಇದು ರೂ. ೪೦,೦೦೦ ಕೋಟಿಗಳನ್ನು ದಾಟಬಹುದೆಂದು ಅಂದಾಜಿಸಲಾಗಿದೆ.  ೨೦೦೬ರಲ್ಲಿ ಸುಮಾರು ೧೦,೦೦೦ ಕೋಟಿಯನ್ನು ಪ್ರಾವಿಡೆಂಟ್ ಫಂಡ್, ಇ.ಎಸ್ಆಯ್  ಮತ್ತು ಸರ್ವೀಸ್ ಟ್ಯಾಕ್ಸ್ ಎಂದು ಸರ್ಕಾರಕ್ಕೆ ಪಾವತಿಸಲಾಗಿರುವುದು ಭದ್ರತಾ ಉದ್ಯಮದ ಹಿರಿಮೆಗೆ ಸಾಕ್ಷಿಯಾಗಿದೆ.  ಬರಲಿರುವ ವರ್ಷಗಳಲ್ಲಿ ಇದು ಅದಿನ್ನೆಷ್ಟು ಕೋಟಿಗಳನ್ನು ಮುಟ್ಟಲಿದೆಯೋ ಎಂದು ಆರ್ಥಿಕ ತಜ್ಞರೇ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು!  ಇಷ್ಟೊಂದು ಬೃಹತ್ತಾಗಿ ಬೆಳೆಯುತ್ತಿರುವ ಭದ್ರತಾ ವಲಯದಲ್ಲಿ, ಬರಲಿರುವ ವರ್ಷಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು ವಿದ್ಯಾವಂತ ನಿರುದ್ಯೋಗಿಗಳಿಗೆ ಭವಿಷ್ಯದ ಆಶಾಕಿರಣವಾಗಿದೆ. 
ಈ ಉದ್ಯೋಗಕ್ಕಾಗಿ ಬರುವವರಲ್ಲಿಯೂ ವಿವಿಧ ರೀತಿಯ ಜನರನ್ನು ಕಾಣಬಹುದು.  ಓದಲಾಗದೆ ಕಾಲೇಜು ಬಿಟ್ಟವರು, ಓದಿಯೂ ಸರಿಯಾದ ಕೆಲಸ ಸಿಗದೇ ನಿರುದ್ಯೋಗಿಗಳಾಗಿ ಅತಂತ್ರರಾಗಿರುವವರು, ಪೊಲೀಸ್ ಅಥವಾ ಮಿಲಿಟರಿಗೆ ಸೇರಬೇಕೆಂದುಕೊಂಡು ಸಾಧ್ಯವಾಗದೆ ನಿರಾಶರಾದವರು, ಮನೆಯಲ್ಲಿ ಮಕ್ಕಳಿಂದ, ಸೊಸೆಯಂದಿರಿಂದ ತಿರಸ್ಕೃತರಾದ ಹಿರಿಯ ಜೀವಗಳು, ಮನೆಯ ಜವಾಬ್ಧಾರಿಯನ್ನು ನಿಭಾಯಿಸಲೇಬೇಕಾದ ಒತ್ತಡದಲ್ಲಿ ಬೇರಾವುದೇ ಕೆಲಸ ಸಿಗದೇ ನಿರಾಶರಾದವರು, ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಜೀವನದಲ್ಲಿ ನೊಂದವರೆಲ್ಲಾ ಇಲ್ಲಿ ಸಿಗುತ್ತಾರೆ.  ಪ್ರತಿಯೊಬ್ಬ ಭದ್ರತಾ ರಕ್ಷಕನ ಬೆನ್ನ ಹಿಂದೆ ಒಂದು ೭೦ ಎಂ ಎಂ ಸಿನಿಮಾಸ್ಕೋಪ್ ಚಲನಚಿತ್ರ ತೆಗೆಯಬಹುದಾದಂಥ ರಮ್ಯವಾದ ಕಥೆಯಿರುತ್ತದೆ.  ಅದೆಷ್ಟೋ ಪದವೀಧರರು ನಮ್ಮ ದೇಶದ ಜಾತಿ ರಾಜಕೀಯ, ಮೀಸಲಾತಿಗಳಿಂದ ಸರ್ಕಾರಿ ನೌಕರಿ ಸಿಗದೇ ನಗರಗಳಿಗೆ ವಲಸೆ ಬಂದು ಭದ್ರತಾ ರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.  ಭಾರತೀಯ ಸೇನೆ, ನೌಕಾಪಡೆ, ವಾಯುಸೇನೆಯಿಂದ ನಿವೃತ್ತರಾದ ಅದೆಷ್ಟೋ ಅಧಿಕಾರಿಗಳು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸಿ , ಇಂತಹ ವಿದ್ಯಾವಂತರನ್ನು ತರಬೇತುಗೊಳಿಸಿ ಸಮಾಜದ ಭದ್ರತೆಗೆ, ತಮ್ಮ ನಿವೃತ್ತಿಯ ನಂತರವೂ, ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.  ಒಟ್ಟಾರೆ ಹೇಳಬೇಕೆಂದರೆ ಈ ಭದ್ರತಾ ಉದ್ಯಮದಲ್ಲಿ ತೊಡಗಿಸಿಕೊಂಡ  ಪ್ರತಿಯೊಬ್ಬ ಭದ್ರತಾ ರಕ್ಷಕನೂ ದೇಶ ಕಾಯುವ ಸೈನಿಕನಿಗಿಂತ ಯಾವುದೇ ರೀತಿಯಲ್ಲಿಯೂ ಕಡಿಮೆಯಿಲ್ಲ.
ಇಂತಹ ಭದ್ರತೆಯ ಲೋಕದಲ್ಲಿ ಕೆಲಸ ಮಾಡುವವರು ಎಂಥವರು?  ಅವರ ಸ್ಥಿತಿಗತಿಗಳೇನು?  ತಮ್ಮ ದೈನಂದಿನ ಕೆಲಸದಲ್ಲಿ ಅವರು ಎದುರಿಸುವ ಸಮಸ್ಯೆಗಳೇನು?  ಸಮಾಜ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆ?  ಹೇಗೆ ಅವರ ಜೀವನಮಟ್ಟವನ್ನು ಸುಧಾರಿಸಬಹುದು?  ಹೇಗೆ ಮತ್ತಷ್ಟು ಪರಿಣಾಮಕಾರಿಯಾಗಿ ಈ ಭದ್ರತಾ ರಕ್ಷಕರನ್ನು ಉಪಯೋಗಿಸಿಕೊಂಡು ನಮ್ಮ ಸಮಾಜವನ್ನು ಮತ್ತಷ್ಟು ಸುಭದ್ರಗೊಳಿಸಬಹುದು? ನಮ್ಮ ದೇಶದಲ್ಲಿರುವಂತೆಯೇ ಹೊರದೇಶಗಳಲ್ಲಿಯೂ ಭದ್ರತಾ ರಕ್ಷಕರ ಜೀವನ ಹೇಗಿದೆ?  ನಮ್ಮ ಹಾಗೂ ಮುಂದುವರಿದ ದೇಶಗಳ ಭದ್ರತಾ ರಕ್ಷಕರಿಗೂ ಏನು ವ್ಯತ್ಯಾಸ? ಹೀಗೆ ನೂರೆಂಟು ಅಂಶಗಳ ಬಗ್ಗೆ ಈ ಅಂಕಣದಲ್ಲಿ ವಿವರಿಸಲಿದ್ದೇನೆ.  ಓದಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.  ಕೊನೆಯದಾಗಿ ಒಂದು ಮಾತು: ಎಲ್ಲಾದರೂ ನಿಮ್ಮ ನಿತ್ಯ ಜೀವನದಲ್ಲಿ ಒಬ್ಬ ಭದ್ರತಾ ರಕ್ಷಕನ ಜೊತೆ ನೀವು ಮುಖಾಮುಖಿಯಾಗುವಂಥ ಸನ್ನಿವೇಶ ಬಂದಲ್ಲಿ ಅವನಿಗೊಂದು "ಥ್ಯಾಂಕ್ಸ್" ಹೇಳಲು ಮರೆಯದಿರಿ!

Saturday, December 20, 2014

ನೆನಪಿನಾಳದಿಂದ ೨೪: ಚಟ್ನಿ ಭೂತ!


ಮೈಸೂರಿನಲ್ಲಿ ಹುಟ್ಟಿ ಎಲ್ಲೋ ಬೆಳೆದು, ಇನ್ನೆಲ್ಲೋ ಓದಿ, ಮತ್ತೆಲ್ಲೋ ಬದುಕುತ್ತಿರುವ ನನ್ನ ಅಲೆಮಾರಿ ಬದುಕಿನಲ್ಲಿಯೂ ಕೆಲವು ಸ್ವಾರಸ್ಯಕರ ಘಟನೆಗಳು ಮನದಲ್ಲಿ ಅಚ್ಚ್ಚಳಿಯದೆ ನಿಂತಿವೆ.  ಒಮ್ಮೊಮ್ಮೆ ಧುತ್ತೆಂದು ಅವು ನೆನಪಾಗಿ ನಗಿಸುತ್ತವೆ, ನನ್ನಷ್ಟಕ್ಕೆ ನಾನೇ ಆ ಸ್ವಾರಸ್ಯಕರ ಘಟನೆಯನ್ನು ನೆನೆದು ನಗುತ್ತಿದ್ದರೆ ಪಕ್ಕದಲ್ಲಿರುವವರು ನನಗೇನಾದರೂ ಹುಚ್ಚು ಹಿಡಿಯಿತೇ ಅಥವಾ ಯಾವುದಾದರೂ ಮೋಹಿನಿ ಕಾಟ ಇರಬಹುದೇ ಎಂದು ಅಚ್ಚರಿಯಿಂದ ನನ್ನ ಮುಖವನ್ನೇ ನೋಡುವಂಥ ಸನ್ನಿವೇಶಗಳು ಸಾಕಷ್ಟು ಬಾರಿ ಸೃಷ್ಟಿಯಾಗಿವೆ.  ಈ ದಿನವೂ ಹಾಗೇ ಆಯಿತು.  ಬಿಸಿ ಬಿಸಿ ದೋಸೆ ಪುದೀನಾ ಚಟ್ನಿ ಮಾಡಿ ಆ ಸ್ವರ್ಗಸುಖವನ್ನು ಅನುಭವಿಸುತ್ತಿದ್ದರೆ ಇದ್ದಕ್ಕಿದ್ದಂತೆ ವರ್ಷಗಳ ಹಿಂದೆ ಮೈಸೂರಿನ ದಸರಾ ವಸ್ತು ಪ್ರದರ್ಶನದಲ್ಲಿ ನಡೆದ ಚಟ್ನಿ ಪ್ರಸಂಗ ನೆನಪಾಗಿ ಇದ್ದಕ್ಕಿದ್ದಂತೆ ನಗಲಾರಂಭಿಸಿದೆ!  ಬೆಳಗಿನ ಉಪಾಹಾರಕ್ಕೆ ನನಗೆ ಕಂಪನಿ ಕೊಡಲು ಬಂದಿದ್ದ ನನ್ನ ಪಕ್ಕದ ಫ್ಲಾಟಿನ ಗೆಳೆಯ ಗಾಭರಿಯಾಗಿ, ಏನಾಯ್ತು,ಯಾಕೆ? ಅಂತೆಲ್ಲಾ ಪ್ರಶ್ನೆಗಳನ್ನು ಕೇಳಲಾರಂಭಿಸಿದ!  ನನ್ನ ನಗುವಿಗೆ ಕಾರಣವಾದ ಆ ಹಳೆಯ ಘಟನೆಯನ್ನು ಅವನಿಗೆ ವಿವರಿಸಿದಾಗ ಅವನೂ ಬಿದ್ದು ಬಿದ್ದು ನಗತೊಡಗಿದ!  J

ಕೆಲವು ವರ್ಷಗಳ ಹಿಂದೆ ನನ್ನಕ್ಕನ ಮಗಳು ಮೈಸೂರಿನ ವಿವೇಕಾನಂದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಳು, ಒಬ್ಬ ತಮ್ಮನೂ ಅಲ್ಲೇ ಇದ್ದ, ಅವರನ್ನೂ ನೋಡಿಕೊಂಡು, ನನ್ನ ಹುಟ್ಟೂರಿನ ದಸರಾ ವೈಭವವನ್ನು ನೋಡಿದಂತಾಗುತ್ತದೆಂದು ಸಕುಟುಂಬ ಸಮೇತ ಮೈಸೂರಿಗೆ ಹೋಗಿದ್ದೆವು.  ದಸರಾ ಉತ್ಸವವನ್ನೆಲ್ಲಾ ನೋಡಿದ ನಂತರ ಒಂದು ದಿನ ದಸರಾ ವಸ್ತು ಪ್ರದರ್ಶನವನ್ನು ನೋಡಲು ಹೊರಟೆವು, ಎಲ್ಲಾ ಕಡೆ ಸುತ್ತು ಹೊಡೆದು ಸಾಕಾಗಿ ಕೊನೆಗೆ ಹೊಟ್ಟೆಗೇನಾದರೂ ಹಾಕಿಕೊಳ್ಳೋಣವೆಂದು ಹುಡುಕುತ್ತಿರುವಾಗ " ಮಲ್ಲಿಗೆ ಇಡ್ಲಿ"ಯ ಹೋಟೆಲ್ ಕಣ್ಣಿಗೆ ಬಿತ್ತು!  ಖಾಲಿಯಾಗಿದ್ದ ಹೊಟ್ಟೆ ತುಂಬಿಸುವುದರ ಜೊತೆಗೆ ಆ ಚಟ್ನಿಯ ರುಚಿಯನ್ನು ನೆನೆದು ನನ್ನ ಬಾಯಲ್ಲಿ ನೀರು ಸುರಿಯಲಾರಂಬಿಸಿತು!  ನನ್ನ ಕಿರಿಯ ತಮ್ಮ ಗೋಪಿ ಆಗಲೇ ನನ್ನನ್ನು  ಛೇಡಿಸಲಾರಂಭಿಸಿದ್ದ,,,"ಅಣ್ಣಾ,,,,ಆ ಹೋಟೆಲ್ಲಿನವನು ಇವತ್ತು ಸತ್ತ"!!:-)  ಇದಕ್ಕೆ ಹಿನ್ನೆಲೆಯೇನೆಂದು ಹೇಳಿ ಬಿಡುತ್ತೇನೆ ಕೇಳಿ, ನಮ್ಮ ಮನೆಯಲ್ಲಿ ಇಡ್ಲಿ, ದೋಸೆ,ಅಕ್ಕಿ ರೊಟ್ಟಿ ಮಾಡಿದರೆ ನನಗೆ ಹೊಟ್ಟೆಯಲ್ಲಿ ವಿಶೇಷವಾಗಿ "ಎಕ್ಸ್ಟ್ರಾ ಪ್ಲೇಸ್" ಕ್ರಿಯೇಟ್ ಆಗಿಬಿಡುತ್ತಿತ್ತು!  ಒಂದು ಡಜನ್ ಇಡ್ಲಿ, ದೋಸೆ, ರೊಟ್ಟಿಯಾದರೆ ಅರ್ಧ ಡಜನ್ ಅನಾಯಾಸವಾಗಿ ಒಳ ಸೇರುತ್ತಿದ್ದವು!  ಅದು ಹೇಗಾದರೂ ಇರಲಿ, ಮನೆಯಲ್ಲಿ ಉಳಿದವರ್ಯಾರಿಗೂ ಚಟ್ನಿ ಮಾತ್ರ ಉಳಿಯುತ್ತಿರಲಿಲ್ಲ!   ಮಾಡಿದ ಚಟ್ನಿಯೆಲ್ಲಾ ನನಗೊಬ್ಬನಿಗೇ ಸರಿ ಹೋಗಿ ಬಿಡುತ್ತಿತ್ತು!! ಉಳಿದವರು ಬರೀ ದೋಸೆ, ಇಡ್ಲಿ ತಿನ್ನಬೇಕಾಗುತ್ತಿತ್ತು ಅಥವಾ ಸಕ್ಕರೆಯೊಂದಿಗೋ ಉಪ್ಪಿನಕಾಯಿಯೊಂದಿಗೋ ಇಲ್ಲಾ ರಾತ್ರಿಯ ಸಾರು ಉಳಿದಿದ್ದರೆ ಅದರೊಂದಿಗೋ ತಿನ್ನಬೇಕಾಗುತ್ತಿತ್ತು!  ಹೀಗಾಗಿ ಎಲ್ಲರೂ ನನಗೆ "ಚಟ್ನಿಭೂತ" ಎನ್ನುವ ಅನ್ವರ್ಥಕ ನಾಮವನ್ನಿಟ್ಟಿದ್ದರು.:-)  ಬೆಳಗಿನ ತಿಂಡಿಗೆ ಮನೆಯಲ್ಲಿ  ಎಲ್ಲರೂ  ನನಗಿಂತ ಮುಂಚೆ ತಿಂಡಿ ತಿನ್ನಲು ಪೈಪೋಟಿಯಲ್ಲಿರುತ್ತಿದ್ದರು, ತಡವಾದವರಿಗೆ ಅಪ್ಪಿ ತಪ್ಪಿಯೂ ಚಟ್ನಿ ಸಿಗುತ್ತಿರಲಿಲ್ಲ!  ಯಾವುದೇ ಹೋಟೆಲ್ಲಿಗೆ ಹೋದರೂ ಸರಿ, ಎಲ್ಲರೂ ತಿಂದು ಮುಗಿಸಿದರೂ ನಾನು ಮಾತ್ರ ಕನಿಷ್ಠ ಆರು ಬಾರಿ ಚಟ್ನಿ ತರಿಸಿಕೊಳ್ಳುತ್ತಿದ್ದೆ!  ತಿಪಟೂರಿನಲ್ಲಿ, ಹೊಳೆನರಸೀಪುರದಲ್ಲಿ, ಮೈಸೂರಿನಲ್ಲಿ, ಬೆಂಗಳೂರಿನಲ್ಲಿ ನಾನು ದೋಸೆ ಅಥವಾ ಇಡ್ಲಿ ತಿನ್ನಲು ಹೋಗುತ್ತಿದ್ದ ಕೆಲವು ಹೋಟೆಲ್ಲುಗಳಲ್ಲಿ ನನ್ನ ಜೊತೆ ಜಗಳವಾಡದೆ ಇದ್ದ ಮಾಣಿಗಳೇ ಇರಲಿಲ್ಲ ಅಲ್ಲದೆ ನನ್ನನ್ನು ಕಂಡೊಡನೆ ಮಾಣಿಗಳು ನನಗೆ ಸಪ್ಲೈ ಮಾಡುವುದನ್ನು ತಪ್ಪಿಸಿಕೊಳ್ಳಲು ಏನಾದರೂ ಸಬೂಬು ಹೇಳಿ ಮಾಯವಾಗಿ ಬಿಡುತ್ತಿದ್ದರು!  ಇಂಥಾ ಕುಖ್ಯಾತಿಯಿದ್ದ ನನ್ನ ಕಣ್ಣಿಗೆ ಮೈಸೂರಿನ ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ಮಲ್ಲಿಗೆ ಇಡ್ಲಿಯ ಅಂಗಡಿಯ ಒಡೆಯ ಪರಮಶತ್ರುವಾದ ದಿನವದು!  J

ಏನಪ್ಪಾ,, ಏನು ನಿಮ್ಮ ಹೋಟೆಲ್ಲಿನ ಸ್ಪೆಷಲ್ ಅಂದ ನನ್ನನ್ನೊಮ್ಮೆ ಆತ್ಮೀಯತೆಯಿಂದ ನೋಡಿದ ತಳ್ಳುಗಾಡಿಯ ಒಡೆಯ ನನ್ನ ಜೊತೆಗಿದ್ದ ಹನ್ನೆರಡು ಮಂದಿಯನ್ನು ನೊಡಿ ಖುಷಿಯಾಗಿ ಒಳ್ಳೆಯ ವ್ಯಾಪಾರವಾಗುವ ಖುಷಿಯಲ್ಲಿ "ಮಲ್ಲಿಗೆ ಇಡ್ಲಿ, ದೋಸೆ, ಮೆಣಸಿನಕಾಯಿ ಬಜ್ಜಿ" ಅಂತೆಲ್ಲಾ ಪಟ್ಟಿ ಹೇಳತೊಡಗಿದ!  ಅದೆಲ್ಲಾ ಇರಲಿ, ನಿಮ್ಮ ಚಟ್ನಿ ಯಾವ ಥರದ್ದು ತೋರಿಸಿ ಅಂದವನಿಗೆ ದೊಡ್ಡ ಸ್ಟೀಲ್ ಬಕೆಟ್ಟಿನಲ್ಲಿದ್ದ "ಪುದೀನಾ ಚಟ್ನಿ"ಯನ್ನು ತೋರಿಸಿ "ನಂದು ಪೆಸಲ್ ಚಟ್ನಿ ಸಾ, ನೀವು ಒಂದ್ಸಲ ತಿಂದ್ರೆ ಮತ್ತೆ ಹುಡುಕ್ಕೊಂಡು ನಮ್ ಹೊಟ್ಲುಗೇ ಬರ್ತೀರಾ" ಅಂದ! ಸರಿ, ನಮ್ಮ ಗುಂಪಿನ ಕಡೆಗೆ ತಿರುಗಿ ಏನು ಬೇಕು ಅಂದೆ, ಎಲ್ರೂ ಮಲ್ಲಿಗೆ ಇಡ್ಲಿ, ಮೆಣಸಿನ ಕಾಯಿ ಬಜ್ಜಿ ಅಂದ್ರು!  ೧೩ ಪ್ಲೇಟ್ ಆರ್ಡರ್ ಮಾಡಿ ಮುಂದಿದ್ದ ಹುಲ್ಲು ಹಾಸಿನ ಮೇಲೆ ಕುಳಿತೆವು. ಮಾಣಿ ಖುಷಿಯಾಗಿ ತಟ್ಟೆಗಳನ್ನು ಹಿಡಿದು ತಂದ, ನನ್ನ ತಮ್ಮ ಗೋಪಿ ಮೊದಲು ಅಲ್ಲಿ ದೊಡ್ಡವರಿಗೆ ಕೊಡಪ್ಪಾ ಅಂದ!  ಮೊದಲನೆಯ ತಟ್ಟೆ ನನ್ನ ಕೈಗೆ ಬಂದಿತ್ತು, ಪುದೀನಾ ಚಟ್ನಿಯ ಘಮಲು ಆಗಲೇ ನನ್ನ ಜಿಹ್ವೆಯನ್ನು ಕೆರಳಿಸಿ ಸಿಕ್ಕಾಪಟ್ಟೆ ಚಟ್ನಿ ಸ್ವಾಹಾ ಮಾಡುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದೇ ಬಿಟ್ಟಿತ್ತು!  ಅವನು ಇನ್ನೂ ಎರಡು ತಟ್ಟೆಗಳನ್ನು ಕೊಟ್ಟಿರಲಿಲ್ಲ, ನಾನು ಮಾಣಿಯನ್ನು ಕೂಗಿದೆ, ಸ್ವಲ್ಪ ಚಟ್ನಿ ತೊಗೊಂಡ್ ಬಾರಪ್ಪಾ,  ಅವನು ಬಹಳ ಗೌರವದಿಂದ ಬಂದೆ ಸಾ ಅಂದು ಚಟ್ನಿ ತಂದು ಎರಡು ಚಮಚ ಹಾಕಿದ,,,ಇನ್ನೂ ಸ್ವಲ್ಪ ಹಾಕು ಅಂದೆ,  ಹಾಕಿದ!  ಅವನು ಮತ್ತೆ ಮೂವರಿಗೆ ತಟ್ಟೆ ಕೊಡುವಷ್ಟರಲ್ಲಿ ಮತ್ತೆ ನನ್ನ ಕೂಗು,, ಚಟ್ನಿ ತಾರಪ್ಪಾ,,,ತಂದು ಮತ್ತೆರಡು ಚಮಚ ಹಾಕಿ ಹೋದ,  ರುಚಿಯಾಗಿದ್ದ ಚಟ್ನಿಯನ್ನು ನಾನು ಬಹಳ ಕಡಿಮೆ ಇಡ್ಲಿಯ ಜೊತೆಗೆ ಚಪ್ಪರಿಸತೊಡಗಿದೆ! ಅವನು ಮತ್ತಿಬ್ಬರಿಗೆ ತಟ್ಟೆ ಕೊಡುವುದರಲ್ಲಿ ನಾನು ಮತ್ತೆ ಕೂಗಿದೆ, ಚಟ್ನಿ ತಾರಪ್ಪಾ,,,ಈ ಬಾರಿ ಆ ಹುಡುಗನಿಗೆ ಯಾಕೋ ನನ್ನ ಮೇಲೆ ಅನುಮಾನ ಬಂದಂತಿತ್ತು, ನಾನೇನು ಚಟ್ನಿ ತಿನ್ನುತ್ತಿದ್ದೆನೋ ಅಥವಾ ಕೆಳಗೆ ಚಲ್ಲಿ ಮತ್ತೆ ಮತ್ತೆ ಸುಮ್ಮನೆ ಕರೆಯುತ್ತಿದ್ದೀನೋ ಎಂದು!  ಬಂದು ಎರಡು ಚಮಚ ಚಟ್ನಿ ಹಾಕಿದವನು ಸೂಕ್ಷ್ಮವಾಗಿ ನನ್ನ ಸುತ್ತಲಿನ ಜಾಗವನ್ನು ಪರೀಕ್ಷಿಸಿದ, ಆದರೆ ಅಲ್ಲಿ ಒಂಚೂರೂ ಚಟ್ನಿ ಚೆಲ್ಲಿರಲಿಲ್ಲ!

ಇಷ್ಟೊತ್ತಿಗಾಗಲೇ ನನ್ನ ಕುಟುಂಬದವರೆಲ್ಲಾ ತಮ್ಮತಮ್ಮಲ್ಲೇ  ಮಾತಾಡುತ್ತಾ ಮುಸಿ ಮುಸಿ ನಗಲಾರಂಭಿಸಿದ್ದರು! ಮಾಣಿಗೋ ಬೇರೇಯವರಿಗೆ ಇಡ್ಲಿ ಮಾರುವ ಆತುರ,,ಆದರೆ ಅವನಿಗೆ  ನಮ್ಮ ಗುಂಪಿಗೆ ಚಟ್ನಿ ಸಪ್ಲೈ ಮಾಡುವುದರಲ್ಲಿಯೇ ತುಂಬಾ ಸಮಯ ಹೋಗುತ್ತಿತ್ತು! ಕೊನೆಯದಾಗಿ ಇಡ್ಲಿಯ ತಟ್ಟೆ ಸಿಕ್ಕಿದ್ದು ನನ್ನ ಮಗನಿಗೆ, ಅವನು ಜಾಸ್ತಿ ಚಟ್ನಿ ತಿನ್ನುತ್ತಿರಲಿಲ್ಲವಾಗಿ ಅವನಿಗೆ ಕೊನೆಯಲ್ಲಿ ಕೊಡುವಂತೆ ಹೇಳಿ ಉಳಿದವರೆಲ್ಲಾ ತಮಾಷೆ ನೋಡುತ್ತಾ ತಾವೂ ಸಹ ತಮ್ಮ ಕೈಲಿ,,ಅಲ್ಲಲ್ಲ,,,ಬಾಯಲ್ಲಾದಷ್ಟು ಹೆಚ್ಚು ಚಟ್ನಿ ತಿನ್ನಲು ಪ್ರಯತ್ನಿಸುತ್ತಿದ್ದರು!  ಎಲ್ಲರೂ ಒಂದು ಮಲ್ಲಿಗೆ ಇಡ್ಲಿ, ಜೊತೆಗೆ ಒಂದು ಮೆಣಸಿನಕಾಯಿ ಬೋಂಡಾ ತಿನ್ನುವಷ್ಟರಲ್ಲಿ ಸುಸ್ತಾಗಿದ್ದರು, ಪ್ರತಿಯೊಬ್ಬರೂ ೨-೩ ಬಾರಿ ಚಟ್ನಿ ಹಾಕಿಸಿಕೊಂಡಿದ್ದರು,,ಆದರೆ,,,,,,ನಾನು ಮಾತ್ರ ಮಗುಮ್ಮಾಗಿ ಅರ್ಧ ಡಜನ್ ಇಡ್ಲಿ ಜೊತೆಗೆ ಮೂರು ಮೆಣಸಿನಕಾಯಿ ಬಜ್ಜಿ ತಿಂದಿದ್ದೆ,,,,ಜೊತೆಗೆ ಏನಿಲ್ಲವೆಂದರೂ ೧೫ಕ್ಕಿಂತ ಹೆಚ್ಚು ಬಾರಿ ಚಟ್ನಿ,,,,ಚಟ್ನಿ ಎಂದು ಕೂಗಿ ಕರೆದು ಚಟ್ನಿ ಹಾಕಿಸಿಕೊಂಡಿದ್ದೆ!  ಸುಸ್ತಾದ ಮಾಣಿ ಕೊನೆಗೆ ಚಟ್ನಿಯ ಸ್ಟೀಲ್ ಬಕೆಟ್ಟನ್ನೇ ತಂದು ನನ್ನ ಪಕ್ಕದಲ್ಲಿಟ್ಟು ಬಿಟ್ಟಿದ್ದ!  ನಾನಂತೂ ನನಗೆ ಸಮಾಧಾನವಾಗುವಷ್ಟು,,,,ನನ್ನ ಜಿಹ್ವಾಚಾಪಲ್ಯ ತಣಿಯುವಷ್ಟು ಚಟ್ನಿಯನ್ನು ಗಡದ್ದಾಗಿ ಬಾರಿಸಿದ್ದೆ!  ಆ ಚಟ್ನಿಯ ಖಾರದ ಮಹಿಮೆಯೋ,,,,ಅಥವಾ ಸರಿಯಾಗಿ ಬಾರಿಸಿದ್ದ ಇಡ್ಲಿಗಳ ಮಹಿಮೆಯೋ ಅಥವಾ ಸುತ್ತಾಡಿ ಬಂದಿದ್ದ ಆಯಾಸವೋ,,,,,,,,ಅನಾಯಾಸವಾಗಿ ಅಲ್ಲೇ ನಿದ್ರೆಗೆ ಜಾರಿದ್ದೆ!  ಒಂದರ್ಧ ಘಂಟೆ ಒಳ್ಳೆಯ ನಿದ್ದೆಯ ನಂತರ ಎದ್ದು ನೋಡಿದರೆ ನಮ್ಮ ಕುಟುಂಬದವರೆಲ್ಲಾ ಅವರವರ ಮಾತುಕತೆಯಲ್ಲಿ ಮುಳುಗಿ ಹೋಗಿದ್ದರು!  ಎಷ್ಟಾಯ್ತಪ್ಪಾ ಬಿಲ್ಲು ಅಂದರೆ ನನ್ನನ್ನೊಮ್ಮೆ ಕೆಕ್ಕರಿಸಿ ನೋಡಿದ ಹೋಟೆಲ್ ಒಡೆಯ ಗದರುವ ಧ್ವನಿಯಲ್ಲಿ ಇನ್ನೂರೈವತ್ತು ಅಂದ!  ಹಣ ಕೊಡಲು ಹೋದಾಗ ನನಗೊಮ್ಮೆ ಕೈ ಮುಗಿದು “ಇನ್ನೊಂದ್ಸಲ ನಮ್ ಹೋಟ್ಲಿಗೆ ಮಾತ್ರ ಬರಬೇಡಿ ಸಾ,,ನಿಮ್ಮಂಥೋರು ನಾಕು ಜನ ಬಂದ್ರೆ ನಾನು ಬರ್ಬಾದಾಗೋದು ಗ್ಯಾರಂಟಿ” ಅಂದ!  ನನಗೆ ರಪ್ಪಂತ ಕೆನ್ನೆಗೆ ಹೊಡೆದಂತಾಗಿತ್ತು,, ಆದರೂ ಸಾವರಿಸಿಕೊಂಡು ಅವನನ್ನೊಮ್ಮೆ ದುರುಗುಟ್ಟಿ ನೋಡಿ ಅಲ್ಲಿಂದ ಹೊರಟೆ!  ನನ್ನ ಹಿಂದೆ ನನ್ನ ಕುಟುಂಬದವರೆಲ್ಲಾ ಮುಸುಮುಸನೆ ನಗುತ್ತಿದ್ದರು. J J J

Monday, July 28, 2014

ಒಂದು ಅತ್ಯಾಚಾರದ ಸುತ್ತ!



ಅಂದು ನಮ್ಮ ಉದ್ಯಾನ ನಗರಿ ಬೆಂಗಳೂರು ತುಂಬ ಗರಮ್ಮಾಗಿತ್ತು!  ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಮೂರ್ತಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಯ ಘಟನೆ ಇಡೀ ಉದ್ಯಾನನಗರಿಯನ್ನೇ ಬೆಚ್ಚಿ ಬೀಳಿಸಿತ್ತು. ಮಾಧ್ಯಮಗಳಲ್ಲೆಲ್ಲಾ ಅದೇ ಸುದ್ಧಿ, ಇಡೀ ನಗರ ಒಕ್ಕೊರಲಿನಿಂದ ದಾರುಣ ಕೃತ್ಯವನ್ನೆಸಗಿದ್ದ ಕ್ಯಾಬ್ ಚಾಲಕ ಶಿವಕುಮಾರನ ವಿರುದ್ಧ ಧ್ವನಿಯೆತ್ತಿ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿತ್ತು.  ಆ ದಾರುಣ ಘಟನೆ ನಡೆದ ಕೆಲವೇ ದಿನಗಳಲ್ಲಿ ಅಂದಿನ ಪೋಲೀಸ್ ಕಮೀಷನರ್ ಆಗಿದ್ದ ಶ್ರೀ ಅಜಯ್ ಕುಮಾರ್ ಸಿಂಗ್ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಎಲ್ಲಾ ಕಾಲ್ ಸೆಂಟರ್, ಬಿಪಿಒ, ಸಾಫ್ಟ್ವೇರ್ ಸಂಸ್ಥೆಗಳ ಮುಖ್ಯಸ್ಥರು ಹಾಗೂ ನಿರ್ವಾಹಕರುಗಳ ಸಭೆ ಕರೆದಿದ್ದರು.  ಹಲವು ಕಾಲ್ ಸೆಂಟರ್ ಹಾಗೂ ಬಿಪಿಒಗಳಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದ ಪ್ರಮುಖ ಭದ್ರತಾ ಸಂಸ್ಥೆಗಳನ್ನು ಆಹ್ವಾನಿಸಿದ್ದರು.  ನಮ್ಮ ಸಂಸ್ಥೆಯಿಂದ ನಾನೂ ಪಾಲ್ಗೊಂಡಿದ್ದೆ.  ಹಲವು ಸುತ್ತಿನ ವಿಚಾರ ವಿನಿಮಯದ ನಂತರ ಹೊಸ ನಿಯಮವೊಂದನ್ನು ರೂಪಿಸಲಾಯಿತು.  ಅದರಂತೆ ಎಲ್ಲಾ ಕಾಲ್ ಸೆಂಟರ್, ಬಿಪಿಒ, ಸಾಫ್ಟ್ವೇರ್ ಸಂಸ್ಥೆಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಭದ್ರತಾ ಅಂಗರಕ್ಷಕರನ್ನು ಒದಗಿಸಬೇಕು, ಮನೆಯಿಂದ ಕೆಲಸಕ್ಕೆ ಬರುವಾಗ, ಕೆಲಸದಿಂದ ಮನೆಗೆ ಹಿಂದಿರುಗುವಾಗ ಮನೆಬಾಗಿಲಿನವರೆಗೂ ಒಬ್ಬ ಭದ್ರತಾ ರಕ್ಷಕ ಜೊತೆಯಲ್ಲಿಯೇ ಹೋಗಿ ಬಿಟ್ಟು ಬರಬೇಕು ಎಂದು ಆದೇಶಿಸಲಾಯಿತು. 

ಬೆಂಗಳೂರಿನ ಭದ್ರತಾ ಸಂಸ್ಥೆಗಳ ಇತಿಹಾಸದಲ್ಲಿಯೇ ಇದೊಂದು ಅಪೂರ್ವ ಬೆಳವಣಿಗೆಗೆ ಕಾರಣವಾಯಿತು.  ಅದುವರೆವಿಗೂ ಕೇವಲ ಹವಾಯಿ ಚಪ್ಪಲಿ, ಖಾಕಿ ಬಟ್ಟೆ ತೊಟ್ಟು, ಬೀಡಿ ಸೇದುತ್ತಾ, ಗೇಟು ತೆಗಿ, ಗೇಟು ಮುಚ್ಚು ಎಂದಷ್ಟೆ ಸೀಮಿತವಾಗಿದ್ದ ಭದ್ರತಾರಕ್ಷಕರ ಪಾಲಿಗೆ ಈ ಘಟನೆ ಹೊಸ ಆಯಾಮವನ್ನೇ ಸೃಷ್ಟಿಸಿತು ಎಂದರೆ ತಪ್ಪಾಗಲಾರದು. ಹೊಸ ಹೊಸ ವಿನ್ಯಾಸದ ಸಮವಸ್ತ್ರಗಳಲ್ಲಿ ಸಧೃಡಕಾಯದ ಯುವಕರು ಈ ಕ್ಷೇತ್ರಕ್ಕೆ ಕಾಲಿಟ್ಟರು.  ಎಲ್ಲ ಭದ್ರತಾ ಕಂಪನಿಗಳು ತಮ್ಮ ನೇಮಕಾತಿ ವಿಧಾನಗಳನ್ನು  ಬದಲಿಸಿ ವಿದ್ಯಾವಂತ ಹಾಗೂ ಸಧೃಡರಾದ ಯುವಕರನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳಲಾರಂಭಿಸಿದವು.  ಅತ್ಯಂತ ಕಡಿಮೆ ಸಂಬಳ ಸಿಗುತ್ತಿದ್ದ ಈ ಕೆಲಸದಲ್ಲಿಯೂ ಉತ್ತಮ ವೇತನ ಹಾಗೂ ಇತರೆ ಸೌಲಭ್ಯಗಳು ದೊರಕಲಾರಂಭಿಸಿದವು.  ಈ ಸಮಯದಲ್ಲಿ ನಮ್ಮ ಸಂಸ್ಥೆಗೆ ಒಂದು ಕಾಲ್ ಸೆಂಟರಿಗೆ ಭದ್ರತಾ ರಕ್ಷಕರನ್ನು ಒದಗಿಸುವ ದೊಡ್ಡ ಗುತ್ತಿಗೆಯೇ ಸಿಕ್ಕಿತ್ತು.  ಸಂಸ್ಥೆಯ ಮಾಲೀಕರು ಎಲ್ಲಾ ಜವಾಬ್ಧಾರಿಯನ್ನು ನನ್ನ ಹೆಗಲಿಗೇರಿಸಿ ತಾವು ನಿಶ್ಚಿಂತರಾಗಿದ್ದರು.  ನಾನು ಎಲ್ಲ ಕನ್ನಡ ಪತ್ರಿಕೆಗಳಲ್ಲಿಯೂ ಭದ್ರತಾ ರಕ್ಷಕರ ನೇಮಕಾತಿಗಾಗಿ ಒಂದು ಜಾಹಿರಾತು ನೀಡಿದೆ, "ಕನ್ನಡಿಗರಿಗೆ ಮೊದಲ ಆದ್ಯತೆ " ಎನ್ನುವ ತಲೆಬರಹದಡಿಯಲ್ಲಿ  ನಾನು ಕೊಟ್ಟಿದ್ದ ಜಾಹೀರಾತಿಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿತ್ತು.  ದೂರದ ಬಿಜಾಪುರ, ಗುಲ್ಬರ್ಗ, ಬೀದರ್, ರಾಯಚೂರುಗಳಿಂದಲೂ ಪ್ರತಿದಿನಾ ನನ್ನ ಮೊಬೈಲಿಗೆ ಕರೆಗಳು ಬರುತ್ತಿದ್ದವು. ಅಷ್ಟೋ ಇಷ್ಟೋ ವಿದ್ಯೆ ಕಲಿತು ಮಾಡಲು ಕೆಲಸವೂ ಇಲ್ಲದೆ, ಸರಿಯಾದ ಮಳೆ ಬೆಳೆಯೂ ಇಲ್ಲದೆ ಅತಂತ್ರರಾಗಿ ಕುಳಿತಿದ್ದ ಅದೆಷ್ಟೋ ಗ್ರಾಮೀಣ ಯುವಕರಿಗೆ ಈ ಪ್ರಸಂಗ ಬಹಳಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿತ್ತು. ತಮ್ಮ ಊರನ್ನು ಬಿಟ್ಟು ಬೇರೆ ಜಗತ್ತನ್ನೇ ನೋಡಿರದ ಮುಗ್ಧ ಯುವಕರು ಕೇಳುತ್ತಿದ್ದ ಪ್ರಶ್ನೆಗಳು ನಿಜಕ್ಕೂ ನನ್ನಲ್ಲಿ ಸೋಜಿಗವನ್ನುಂಟು ಮಾಡುತ್ತಿದ್ದವು. ಆ ಪ್ರಶ್ನೆಗಳ ಕೆಲವು ಝಲಕುಗಳು ಹೀಗಿವೆ:

ಸರ್ರಾ, ನಾ ಡಿಗ್ರೀ ಮಾಡೀನ್ರೀ, ಆದ್ರ ನನಗ ಇಂಗ್ಲೀಸು ಮಾತಾಡೂದಿಕ್ಕ ಬರಾಂಗಿಲ್ರೀ, ಈ ಕೆಲ್ಸಕ್ಕೆ ನಾ ಅಪ್ಲಾಯ್ ಮಾಡ್ಬೋದೆನ್ರೀ?

ಸರ್ರಾ, ನಾ ಬೆಂಗಳೂರು ಹೆಂಗೈತಿ ಅಂತಾ ನೋಡಿಲ್ರೀ, ಅಲ್ಲಿ ಬಂದ್ರಾ ನಮಗೆ ಇರಾಕ್ ರೂಮು, ಊಟ ತಿಂಡಿ ವ್ಯವಸ್ಥಾ ಹೆಂಗ್ರೀ?

ಸರ್ರಾ, ನಾನು ನಮ್ಮವ್ವನ ನೋಡ್ದೆ ಇರಾಕ್ ಆಗುದಿಲ್ರಿ, ತಿಂಗಳಾಗೊಮ್ಮಿ ಊರಿಗೋಗಿ ಬರಾಕ್ ಬುಡ್ತೀರೆನ್ರೀ?

ಹೀಗೆ ಬರುತ್ತಿದ್ದ ಥರಾವರಿ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನು ಬೆಂಗಳೂರಿಗೆ ಬರಲು ಒಪ್ಪಿಸಿದ್ದೆ, ನಮ್ಮ ಕಛೇರಿಯ ಮೇಲೆಯೇ ಮಾಲೀಕರನ್ನೊಪ್ಪಿಸಿ, ದೊಡ್ಡದೊಂದು ವಸತಿಯನ್ನೇ ಕಟ್ಟಿಸಿದ್ದೆ.  ಹಲಸೂರಿನ ಹೃದಯಭಾಗದಲ್ಲಿ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದ್ದುದರಿಂದ ನಗರದ ಯಾವುದೇ ಭಾಗಕ್ಕೆ ಬಸ್ ಹಿಡಿದು ಹೋಗಿ ಬರಲು ಅನುಕೂಲಕರವಾಗಿತ್ತು. ಹೀಗೆ ಸುಮಾರು ನೂರೈವತ್ತು ಜನರ ತಂಡವನ್ನು ನೇಮಕಾತಿ ಮಾಡಿ, ಅವರಿಗೆ ಸೂಕ್ತ ತರಬೇತಿಯನ್ನು ನೀಡಿ, ನಮಗೆ ಸಿಕ್ಕಿದ್ದ ಕಾಲ್ ಸೆಂಟರ್ ಗುತ್ತಿಗೆಯಲ್ಲಿ ಭದ್ರತಾ ರಕ್ಷಕರನ್ನಾಗಿ ನಿಯೋಜಿಸಿದ್ದೆ.  ಅವರ ಮೇಲುಸ್ತುವಾರಿಗಾಗಿ ಇಬ್ಬರು ಮೇಲ್ವಿಚಾರಕರನ್ನು ನಿಯಮಿಸಿದ್ದೆ.  ಆದರೂ ಪ್ರತಿದಿನ ಕೆಲಸ ಹೇಗೆ ನಡೆಯುತ್ತಿದೆ, ಮತ್ತೇನಾದರೂ ಅವಘಡಗಳು ಸಂಭವಿಸುವ ಅವಕಾಶಗಳಿವೆಯೇ ಹೇಗೆ ಎನ್ನುವುದನ್ನು ಸ್ವಯಂ ಖಾತ್ರಿಗೊಳಿಸಿಕೊಳ್ಳಲು ಯಾವಾಗಂದರಾಗ ನನ್ನ "ರೋಡ್ ಕಿಂಗ್" ಬೈಕನ್ನು  ಕಾಲ್ ಸೆಂಟರಿನತ್ತ ಓಡಿಸುತ್ತಿದ್ದೆ.  ಹೀಗಾಗಿ ನನ್ನ ದೈನಂದಿನ ಚಟುವಟಿಕೆಗಳಲ್ಲಿ ಬಹಳ ಏರುಪೇರಾಗತೊಡಗಿತು, ಅದಿನ್ಯಾವ ಸೀಮೆಯ ಕೆಲಸ ಮಾಡ್ತೀರ್ರೀ, ಒಂದು ದಿನವಾದರೂ ಸಮಯಕ್ಕೆ ಸರಿಯಾಗಿ ಮನೆಗೆ ಬರೋದಿಲ್ಲ ಅಂತ ಶ್ರೀಮತಿ ಮನೆಯಲ್ಲಿ ಸಿಡಿಯುತ್ತಿದ್ದಳು. ಮಕ್ಕಳೊಡನೆಯೂ ನನ್ನ ಒಡನಾಟ ಕಡಿಮೆಯಾಗಿತ್ತು, ನನ್ನ ಗಮನ ಪೂರ್ತಿ ನನ್ನ ಕೆಲಸದ ಮೇಲಿತ್ತು, ಪ್ರತಿಭಾಳಿಗಾದ ಅನ್ಯಾಯ ಮತ್ಯಾವ ಮಹಿಳಾ ಉದ್ಯೋಗಿಗೂ ಆಗಬಾರದೆನ್ನುವುದು ಸದಾ ನನ್ನ ಮನಸ್ಸಿನಲ್ಲಿ ಕೊರೆಯುತ್ತಾ ನನ್ನನ್ನು ಸದಾ ಜಾಗೃತಾವಸ್ಥೆಯಲ್ಲಿಟ್ಟಿತ್ತು. ಇದರಿಂದಾಗಿ ನಗುನಗುತ್ತಲೇ ಕೆಲಸಕ್ಕೆ ಸೇರಿದ್ದ ಕೆಲವರು ತಮ್ಮ ಜವಾಬ್ಧಾರಿಯನ್ನು ಉಪೇಕ್ಷಿಸಿ ಕೆಲವು ಮಹಿಳಾ ಉದ್ಯೋಗಿಗಳನ್ನು ಮಾರ್ಗ ಮಧ್ಯದಲ್ಲಿಯೇ ಇಳಿಯಲು ಬಿಟ್ಟಾಗ ನನ್ನಿಂದ ಸಾಕಷ್ಟು ಬೈಸಿಕೊಳ್ಳುತ್ತಿದ್ದರು, ಕೆಲವರಿಗೆ ಒದೆಗಳು ಬಿದ್ದದ್ದು ಉಂಟು!

ನಾವೆಷ್ಟೇ ಕಟ್ಟುನಿಟ್ಟಾಗಿ ಸಂಸ್ಥೆಯು ರೂಪಿಸಿದ್ದ ಭದ್ರತಾ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದರೂ ಕೆಲವು ಮಹಿಳಾ ಉದ್ಯೋಗಿಗಳು ಚಾಲಕನಿಗೆ ಹಾಗೂ ಭದ್ರತಾ ರಕ್ಷಕನಿಗೆ ಇಲ್ಲದ ಸಬೂಬು ಹೇಳಿ, ಮನೆ ತಲುಪುವ ಮುಂಚೆಯೇ ಎಲ್ಲೋ ಒಂದು ಕಡೆ ಇಳಿದು ಬಿಡುತ್ತಿದ್ದರು.  ಆ ನಂತರ ಅವರು ಮತ್ತೆ ಮನೆ ತಲುಪಿದರೋ ಇಲ್ಲವೋ ಎನ್ನುವುದನ್ನು ನಾವು ಖಾತ್ರಿಯಾಗಿ ಸಂಸ್ಥೆಗೆ ತಿಳಿಸಲಾಗುತ್ತಿರಲಿಲ್ಲ!  ದಿನದಿಂದ ದಿನಕ್ಕೆ ಈ ರೀತಿ ದೂರುಗಳು ಹೆಚ್ಚಾದಂತೆ ನನ್ನ "ರಾತ್ರಿ ಗಸ್ತು"ಗಳೂ ಹೆಚ್ಚಾದವು. ಆ ರಾತ್ರಿಗಸ್ತಿನ ಸಮಯದಲ್ಲಿ ನನಗೆ ತಿಳಿದು ಬಂದ ಸಂಗತಿಗಳು ಬೆಚ್ಚಿ ಬೀಳಿಸುವಂತಿದ್ದವು. ಸುಮಾರು ೫೦೦ ಜನರಿಂದ ಆರಂಭಗೊಂಡ ಆ ಕಾಲ್ ಸೆಂಟರ್ ಕ್ರಮೇಣ ವಿಸ್ತಾರಗೊಳ್ಳುತ್ತಾ ೪೦೦೦ ಉದ್ಯೋಗಿಗಳ ಮಟ್ಟ ತಲುಪಿತ್ತು.  ಅದಕ್ಕೆ ತಕ್ಕಂತೆ ನಮ್ಮ ಭದ್ರತಾ ರಕ್ಷಕರ ಸಂಖ್ಯೆಯೂ ವೃದ್ಧಿಗೊಂಡಿತ್ತು.  ದಿನೇದಿನೇ ದೂರುಗಳ ಸಂಖ್ಯೆಯೂ ಹೆಚ್ಚಾಗುತ್ತಿತ್ತು!  ಈ ದೂರುಗಳನ್ನು ನಿಯಂತ್ರಿಸಲು ನಾನು ಅಖಾಡಕ್ಕೆ ಇಳಿಯಬೇಕಾಯಿತು.  ಹಾಗೆ ಎಲ್ಲ ಭದ್ರತಾ ರಕ್ಷಕರನ್ನು ವಿಚಾರಿಸಿದಾಗ  ಕಂಡು ಬಂದ ಕೆಲವು ಅಂಶಗಳು ಇಂತಿವೆ. 

ಮನೆಯಿಂದ ಹೊರಟು ಕೆಲಸಕ್ಕೆ ಬರುವಾಗ ಕೆಲವು ಮಹಿಳಾ ಉದ್ಯೋಗಿಗಳು  ತಮ್ಮ ಮೊಬೈಲ್ ಫೋನನ್ನು ಕಿವಿಗಿಟ್ಟರೆ ಅದನ್ನು ಇಳಿಸುತ್ತಿದ್ದುದು ಕಛೇರಿಯ ಬಳಿಗೆ ಬಂದಾಗಲೇ!   ತಮ್ಮ ಬಾಯ್ ಫ್ರೆಂಡ್ ಜೊತೆಗೆ ಅವರಾಡುತ್ತಿದ್ದ ಎಲ್ಲ ಮಾತುಗಳೂ ಮುಂದಿನ ಸೀಟಿನಲ್ಲಿ ಕುಳಿತಿದ್ದ ಭದ್ರತಾ ರಕ್ಷಕನ ಕಿವಿಗೆ  ಬೀಳುತ್ತಿತ್ತು. ಕೆಲಸದಿಂದ ಮನೆಗೆ ಹೊರಟಾಗ ಎಲ್ಲಿ ಇಳಿಯಬೇಕು, ಎಲ್ಲಿ ಮೀಟ್ ಆಗಬೇಕು, ಯಾವ ಹೋಟೆಲಿನಲ್ಲಿ ಊಟ, ಎಲ್ಲಿ ಮೋಜು ಮಸ್ತಿ! ಎಲ್ಲವೂ ಮೊಬೈಲಿನಲ್ಲೇ ನಿರ್ಧಾರವಾಗುತ್ತಿತ್ತಂತೆ!  ಜೊತೆಗೆ ಹೇಗೆ ಭದ್ರತಾ ರಕ್ಷಕನಿಗೆ ಸಬೂಬು ಹೇಳಿ ತಪ್ಪಿಸಿಕೊಳ್ಳಬೇಕೆನ್ನುವುದನ್ನೂ ಅವರೇ ಹೇಳಿ ಕೊಡುತ್ತಿದ್ದರಂತೆ!  ಮಾತಿಗೆ ಜಗ್ಗದ ರಕ್ಷಕರಿಗೆ ಕೆಲವೊಮ್ಮೆ ಹಣ ಕೊಟ್ಟದ್ದು ಉಂಟಂತೆ! ಹೀಗೆ ಎಲ್ಲಾ ವಿವರಗಳನ್ನು ಪಡೆದು ಕೆಲವು ಮಹಿಳಾ ಉದ್ಯೋಗಿಗಳನ್ನು ಉಲ್ಲೇಖಿಸಿ ಒಂದು ಸವಿಸ್ತಾರವಾದ ವರದಿಯನು ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ನೀಡಿದ್ದೆ.  ಪ್ರತಿಭಾ ಪ್ರಸಂಗ ಮತ್ತೊಮ್ಮೆ ಮರುಕಳಿಸಬಾರದು ಅನ್ನುವಂತಿದ್ದರೆ ಇವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದೂ ಉಲ್ಲೇಖಿಸಿದ್ದೆ. ಇದಾದ ನಂತರ ದೂರುಗಳ ಸಂಖ್ಯೆ ಕಡಿಮೆಯಾಯಿತು, ಆದರೆ ನನಗೆ ಕೆಲವು ಬೆದರಿಕೆ ಕರೆಗಳು ಬರಲಾರಂಭಿಸಿದವು!   "ಲೇ, ನಮ್ ಉಡ್ಗಿ ಮ್ಯಾಲೆ ಕಂಪ್ಲೇಂಟ್ ಮಾಡ್ತಿಯೇನ್ಲಾ, ನಮ್ ಕೈಗೆ ಸಿಕ್ಕು, ನಿನ್ನ ನೋಡ್ಕೊಂತೀವಿ" ಅನ್ನುವ ಕರೆಗಳು ಮಾಮೂಲಾದವು. ಎಂತೆಂಥದಕ್ಕೋ ಅಂಜದಿದ್ದ ನಾನು ಇವರ ಬೆದರಿಕೆ ಕರೆಗಳಿಗೆ ಹೆದರುವಂಥವನಾಗಿರಲಿಲ್ಲ! ಕ್ರಮೇಣ ಆ ಕರೆಗಳು ನಿಂತು ಹೋದವು.

ಪ್ರತಿ ಭಾನುವಾರ ಬೆಳಿಗ್ಗೆ  ಆ ಕಾಲ್ ಸೆಂಟರಿನಲ್ಲಿ ನಮ್ಮ ಭದ್ರತಾ ರಕ್ಷಕರಿಗೆ ತರಬೇತಿ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದೆ. ನಾನು ಹಾಗು ಇಬ್ಬರು ಮೇಲ್ವಿಚಾರಕರು ಎಲ್ಲ ಭದ್ರತಾ ರಕ್ಷಕರನ್ನು ಭೇಟಿಯಾಗಿ ಅವರಿಗೆ ಕಾಫಿ, ತಿಂಡಿ ಕೊಡಿಸಿ, ಆ ವಾರದಲ್ಲಿ ಅವರ ಕೆಲಸದ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಕೂಲಂಕುಶ ವಿವರ ಪಡೆದುಕೊಳ್ಳುತ್ತಿದ್ದೆವು. ಆಕಸ್ಮಾತ್ ಯಾವುದಾದರು ಅಹಿತಕರ ಘಟನೆ ನಡೆದಿದ್ದಲ್ಲಿ ಅಥವಾ ಎದುರಾದಲ್ಲಿ ಹೇಗೆ ಎದುರಿಸಬೇಕು, ಮಹಿಳಾ ಉದ್ಯೋಗಿಗೆ ಹೇಗೆ ರಕ್ಷಣೆ ನೀಡಬೇಕು ಎನ್ನುವುದರ ಬಗ್ಗೆ ತರಬೇತಿ ನೀಡುತ್ತಿದ್ದೆವು. ಕೆಲವೊಮ್ಮೆ ನಗರದ ಪ್ರಖ್ಯಾತ ಕರಾಟೆ ಮಾಸ್ಟರುಗಳನ್ನು ಕರೆಸಿ ಎಲ್ಲ ಭದ್ರತಾ ರಕ್ಷಕರಿಗೂ ಆತ್ಮರಕ್ಷಣೆಯ ತರಬೇತಿ ಕೊಡಿಸಿದ್ದು ಉಂಟು!  ಹೀಗೊಮ್ಮೆ  ಭಾನುವಾರದ ಬೆಳಿಗ್ಗೆ ಕೆಳಮಹಡಿಯಲ್ಲಿ ತರಬೇತಿ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಕಟ್ಟಡ ಮೇಲ್ವಿಚಾರಕರೊಬ್ಬರು, ಕಟ್ಟಡದ ಎಲ್ಲಾ ಸ್ಯಾನಿಟರಿ ಪೈಪ್ ಲೈನುಗಳು ಬ್ಲ್ಯಾಕ್ ಆಗಿರುವುದರಿಂದ ತಳಮಹಡಿಯ ಪೈಪುಗಳನ್ನು ಓಪನ್ ಮಾಡಬೇಕಾಗಿದೆ, ನಿಮ್ಮ ತರಬೇತಿಯನ್ನು ಬೇಗ ಮುಗಿಸಿ ಅಂದರು.  ಸರಿಯೆಂದು ಬೇಗಬೇಗನೆ ನಾವು ಮುಗಿಸುವಷ್ಟರಲ್ಲಿ ಆತುರಗಾರ ಕಾರ್ಮಿಕನೊಬ್ಬ ಅಲ್ಲಿದ್ದ ಸ್ಯಾನಿಟರಿ ಪೈಪನ್ನು ಒಡೆದು ಓಪನ್ ಮಾಡೇ ಬಿಟ್ಟಿದ್ದ!  ಇಡೀ ಕಟ್ಟಡದ ಎಲ್ಲಾ ಪಾಯಿಖಾನೆಗಳಿಂದ ಬಂದು ಕಟ್ಟಿಕೊಂಡಿದ್ದ  ಕಸಕಲ್ಮಶಗಳೆಲ್ಲಾ ಒಮ್ಮೆಗೇ ಹೊರಬಂದು  ಕ್ಷಣಾರ್ಧದಲ್ಲಿ  ಇಡೀ ಕೆಳಮಹಡಿ  ಕೊಚ್ಚೆ ನೀರಿನ ಗಬ್ಬಿನಿಂದ ಆವೃತವಾಗಿತ್ತು. ಅತ್ತಿತ್ತ ಓಡಿದ ನಮ್ಮ ಭದ್ರತಾ ರಕ್ಷಕರೆಲ್ಲಾ ಮೂಗು ಮುಚ್ಚಿಕೊಂಡು  ನಿಂತಿದ್ದರು. ಅಲ್ಲಿಗೆ ಬಂದ ಕಟ್ಟಡ ಮೇಲ್ವಿಚಾರಕ ಯಾರನ್ನೋ ಎತ್ತರದ ಧ್ವನಿಯಲ್ಲಿ ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದ!  ಅವನು ಯಾರನ್ನು ಬೈಯ್ಯುತ್ತಿದ್ದಾನೆಂದು ನೋಡಲು ನಾನು ಅತ್ತ ಹೊರಟರೆ ಎದುರಾಗಿದ್ದು ಸ್ಯಾನಿಟರಿ ಪೈಪಿನಿಂದ ಹೊರಬಂದಿದ್ದ ನೂರಾರು ಕಾಂಡೋಮುಗಳ ರಾಶಿ ರಾಶಿ!  ನೋಡಿ ಸಾರ್, ಬೇವಾರ್ಸಿಗಳು, ಕೆಲಸ ಮಾಡೋದಿಕ್ಕೆ ಅಂತ ಬರ್ತಾರೆ, ತಾವು ಸಂಪಾದನೆ ಮಾಡೋ ಜಾಗಾನೇ ಲಾಡ್ಜು ಮಾಡ್ಕೊಂಡಿದ್ದಾರೆ, ಇವರಿಗೆ ಇನ್ನೆಲ್ಲೂ ಬೇರೆ ಜಾಗ ಸಿಗಲ್ವಾ,  ಮಜಾ ಮಾಡಿ ಎಲ್ಲಾ ತೊಗೊಂಡು ಬಂದು ಟಾಯ್ಲೆಟ್ಟಿನಲ್ಲಿ ಹಾಕಿದ್ದಾರೆ ಅಂತ ವಾಚಾಮಗೋಚರವಾಗಿ ಮತ್ತೆ ಬೈಯ್ಯಲಾರಂಭಿಸಿದ! ಅವನಿಗೆ ಏನು ಹೇಳಬೇಕೋ ತಿಳಿಯದೆ ನಾನು ಮೂಕನಾಗಿ ನಿಂತಿದ್ದೆ.  ನನ್ನ ಬಳಿ ಬಂದ ಮೇಲ್ವಿಚಾರಕ ಬನ್ನಿ ಸಾರ್ ಹೋಗೋಣ, ಯಾಕೆ ನಿಂತಿದ್ದೀರಾ, ಈ ಗಬ್ಬು ವಾಸನೇಲ್ಲಿ , ಇಲ್ಲಿ ಇದೆಲ್ಲಾ ಕಾಮನ್ನು ಅಂದ!  ಅವನೇನೋ ಇದು ಕಾಮನ್ನು ಅಂದ, ಆದರೆ ಆ "ಕಾಮ"ನ್ನು  ಅನ್ನೋ ಪದವನ್ನು ಅರಗಿಸಿಕೊಳ್ಳಲು ನನಗೆ ಬಹಳ ಕಷ್ಟವಾಗಿತ್ತು.

ಮೈಸೂರು ಪಾಕು ಮೈಸೂರು ಮಲ್ಲಿಗೆ !




ರವಿಯೋಡುತಲಿದ್ದ ಪಡುವಣದ ಕಡಲಲ್ಲಿ  
ಮುಳುಗುತೇಳುತ ಪವಡಿಸುವ ಕನಸಲ್ಲಿ!

ಕಠಿಣ ಬಾಳಹಾದಿಯ ನಿತ್ಯಸಂಘರ್ಷದಲ್ಲಿ 
ಮನೆ ತಲುಪುವುದು ತಡವಾಗುವುದಲ್ಲಿ !

ಕಾದು ಸೋತಿಹಳು ಮನದೊಡತಿಯಲ್ಲಿ 
ಮಾತಿರದ ಮೂಕ ತಲೆಬಾಗಿಲಿನಲ್ಲಿ!  

ಹಲವು ಸೂಕ್ಷ್ಮ ಯೋಚನೆಗಳ ಭರದಲ್ಲಿ
ಮನೆಯೊಡೆಯ ಬರುತಲಿಹ ಕಾತರದಲ್ಲಿ!

ಬಾಳಗೆಳತಿಯ ಮುನಿಸ ಕಳೆವಾಸೆಯಲ್ಲಿ
ಕೊಂಡನವನು ಹಾದಿಯಂಗಡಿಯಲ್ಲಿ!

ಇಬ್ಬರಲು ಪ್ರೇಮದ ನಗೆಯು ಉಕ್ಕುವುದಲ್ಲಿ 
ಮೈಸೂರು ಪಾಕು ಮೈಸೂರು ಮಲ್ಲಿಗೆಯಲ್ಲಿ!