Sunday, June 28, 2015

ಬಂದ್ಳು ತಿಮ್ಮಿ ನಡ್ಕೊಂಡು,,,,,,,,,,,,,,,,,,,



ರಾಗಿಮುದ್ದೆ ಮಾಡ್ಕೊಂಡು
ಕೋಳಿಸಾರು ಇಟ್ಕೊಂಡು
ತೊಗ್ಲಿನೆಕ್ಡಾ ಮೆಟ್ಕೊಂಡು
ಸೀರಿಸೆರಗಾ ಕಟ್ಕೊಂಡು!

ಮಜ್ಗೆನೀರ್ನ ತೊಗೊಂಡು
ಎದ್ಯಾಗ್ ಪ್ರೀತಿ ತುಂಬ್ಕಂಡು 
ಮುಕ್ದಾಗ್ನಗುವಾ ಚೆಲ್ಕೊಂಡು
ಹಸಿರು ಹುಲ್ನಾ ತುಳ್ಕಂಡು !

                                          ಬಂದ್ಳು ತಿಮ್ಮಿ ನಡ್ಕೊಂಡು                                           
ನೇಸ್ರ ನಕ್ಕಾ ನಾಚ್ಗೊಂಡು
ಮೋಡಾ ಬಂತು ಕುಣ್ಕೊಂಡು 
ಲೋಕಾ ನೋಡ್ತು ನಕ್ಕೊಂಡು!  
(ಆಹಾರ ಹೊತ್ತು ತರುವ ಮಹಿಳೆಯ ಚಿತ್ರವನ್ನು ಅಂತರ್ಜಾಲದಲ್ಲಿ ಹುಡುಕಾಡುತ್ತಿದ್ದಾಗ ಸಿಕ್ಕಿದ್ದು ಮಹಾನ್ ಕಲಾವಿದ ರಾಜಾ ರವಿವರ್ಮ ಅವರ ಈ ಚಿತ್ರಗಳು. ಆ ಮಹಾನ್ ಚೇತನಕ್ಕೊಂದು ನಮನ ಸಲ್ಲಿಸುತ್ತಾ ಅವರ ಚಿತ್ರಗಳನ್ನು ಸಂದರ್ಭೋಚಿತವಾಗಿ ಬಳಸಿಕೊಂಡಿರುವೆ)

Friday, June 26, 2015

ತಿಮ್ಮಿ,,,ತಿಮ್ಮಿ,,,,,ನನ್ತಿಮ್ಮಿ!

ಸಾರಾಯಂಗ್ಡಿ ಮೂಲೇನಾಗೆ
ನನ್ತಿಮ್ಮಿ ಕಂಡಂಗಾಯ್ತು
ನಾಟಿಕೋಳೀಗ್ ಕಾರ ಅಚ್ಚಿ
ಉಪ್ಪುನ್ಕಾಯಿ ರೊಟ್ಟಿಚೂರು
ಬಗಲಾಗಿಟ್ಕೊಂಡ್ ಬಾಗಿಲ್ತನ್ಕ
ಬಲ್ಗಾಲಿಟ್ಕೊಂಡ್ ಬಂದಂಗಾಯ್ತು
ಸಾರಾಯಿ ಖಾಲಿ ಬರಿ ಖಯಾಲಿ
ತಿಮ್ಮಿ ಮಾಯ್ವಾಗಿದ್ಲು ತಲೆತುಂಬಾ
ತಿಮ್ಮೀನ್ ತುಂಬ್ಕಂಡ್ ಬಾಟ್ಲು ಖಾಲಿ ಆದ್ವು!
*****************************
*****************************
ಚನ್ನಾಗುಪ್ಪು ಕಾರ ಅಚ್ಚಿ
ಎಂಚಿನ್ಮ್ಯಾಗೆ ಕೆಂಪಾಗುರ್ದು
ತಟ್ಯಾಗಿಟ್ಟ ಮೀನಿನ್ ಕಣ್ಣಾಗ್
ಹೂವಂಗ್ ಕಂಡ್ಳು ನನ್ತಿಮ್ಮಿ!  
********************
*********************

ಕೋಪಾ ಯಾಕೆ ತಿಮ್ಮಿ ನಿಂಗೆ
ಇಲ್ಲಿ ಮೂರೇ ದಿನುದ್ ಬಾಳು
ಇರೋ ತನ್ಕ ನನ್ಗೆ ನೀನು ನಿನ್ಗೆ ನಾನು
ತಬ್ಕಂಡಿದ್ರೆ ಲೋಕದ್ ಚಿಂತೆ
ಯಾಕೆ ನಮ್ಗೆ ಯೋಳು! 
********************
********************
 ಸುರ್ಯೋ ಮಳೆ ಸುರ್ರಂತಿತ್ತು
ಬೀಸೋ ಗಾಳಿ ಭೋರಂತಿತ್ತು
ಕಣ್ಣಾಗ್ ನೀರು ತೊಟ್ಟಿಕ್ತಿತ್ತು
ನನ್ತಿಮ್ಮಿ ನೆನ್ಪು ಕಾಡ್ತಾ ಇತ್ತು!

ಬಾಯಾಗ್ ಮಾತು ಬಂದಾಗಿತ್ತು 
ಎದ್ಯಾಗ್ ನೂರು ನೋವಾಗ್ತಿತ್ತು
ಊಟ ತಿಂಡಿ ಬ್ಯಾಡ್ವಾಗಿತ್ತು
ನನ್ತಿಮ್ಮಿ ಮೂತಿ ಕಾಡ್ತಾ ಇತ್ತು!

ಮನಸ್ನಾಗೊಂದೇ ಆಸೆ ಇತ್ತು
ತಿಮ್ಮೀನ್ ಒಮ್ಮೆ ನೋಡ್ಬೇಕಿತ್ತ್ತು
ಮೂತೀಗ್ ಮೂತಿ ಉಜ್ಬೇಕಿತ್ತು
ನನ್ತಿಮ್ಮಿ ರೂಪು  ಕಾಡ್ತಾ ಇತ್ತು!

ಬಾರಿನ್ ದಾರಿ ಬಾರಂತಿತ್ತು
ಕಾರೇ ಕುದ್ರೆ ಆದಂಗಿತ್ತು
ಸೋಡಾ ನೀರು ಬ್ಯಾಡಾಗಿತ್ತು
ಬಾಟ್ಲು ಖಾಲಿ ಆಗೋಗಿತ್ತು!

ನನ್ತಿಮ್ಮಿ ನೆನ್ಪು ಕಾಡ್ತಾ ಇತ್ತು!  :-) :-(

Wednesday, June 24, 2015

ಹೇಳಲಾರೆಯಾ ಚಂದ್ರಮ,,,,,,,,,,,,,,,,,




ಹೇಳಲಾರೆಯಾ ಚಂದ್ರಮ 
ಎಂದು ಇನಿಯನ ಸಂಗಮ
ಅವನ ಬರುವಿಕೆಯ ನಿರೀಕ್ಷೆಯಲಿ 
ನೀರವ ಮೌನದ ಹಾದಿಯಲ್ಲಿ   
ಕನಸಿನ  ಹೂವುಗಳ ಚೆಲ್ಲಿ  
ಕಾದು ಸೋತಿದೆ ಮನವು  
ಬಳಲಿದೆ ನನ್ನೀ ತನುವು!

ಮುರಳಿಯ ನಾದಕೆ ಮರುಳಾದ 
ಆ ರಾಧೆ  ನಾನಾಗಲಾರೆ 
ರಾಮನ ಒಲವಿಗೆ ಕಾದ 
ಆ ಸೀತೆ ನಾನಾಗಲಾರೆ 
ಲಕ್ಷ್ಮಣನ ವಿರಹದಲಿ ಬೆಂದ  
ಊರ್ಮಿಳೆ ನಾನಾಗಲಾರೆ
ಕಂಬನಿಯೊಡನೆ ಬಾಳಲಾರೆ!  

ಪ್ರೀತಿಯ ಪುಷ್ಪಕ ವಿಮಾನವನೇರಿ 
ಆಗಸದಗಲಕೂ ಹಾರಬೇಕಿದೆ 
ವಿರಹದುರಿಯ ಸಂಗ ಸಾಕಾಗಿದೆ 
ಅವನ ವಿಶಾಲ ಎದೆಗೊರಗಬೇಕಿದೆ
ಬದುಕ ಪ್ರೀತಿ ಸುಧೆಯ ಹೀರಬೇಕಿದೆ          
ಹೇಳಲಾರೆಯಾ ಮುದ್ದು ಚಂದ್ರಮ 
ಎಂದು ನನ್ನಿನಿಯನ ಸಂಗಮ!

Tuesday, June 23, 2015

ದೋಣಿ ಮುಳುಗಿತಲ್ಲಾ,,,,,,,,,,,,,,,,,,,,,




ದೂರತೀರ ಯಾನಕೆಂದು ಪುಟ್ಟ ದೋಣಿ ಹೊರಟಿತಲ್ಲಾ  
ದಡವು ಕಾಣದಾಯಿತಲ್ಲ ಜೀವ ಸೋತು ಹೋಯಿತಲ್ಲ 
ಎರಡು ದಡದ ನಡುವಿನಗಾಧ ಅಂತರ ಅರಿಯದಾಯಿತಲ್ಲಾ 
ಅಬ್ಬರಿಸುವ ಕಡಲಿನಲ್ಲಿ ದಟ್ಟೈಸಿದ ಕಾರ್ಮೋಡಗಳಲ್ಲಿ 
ಭರವಸೆಯ ಬೆಳಕ ಬೆಳ್ಳಿ ರೇಖೆ ಕಾಣೆಯಾಯಿತಲ್ಲಾ 
ಉಬ್ಬರವಿಳಿತಗಳ ಆರ್ಭಟದಿ ಗೆಲುವು ಕಾಣದಲ್ಲಾ
ಅಸಹಾಯಕತೆಯ ನೆನೆದು ಮನವು ಮರುಗಿತಲ್ಲಾ 
ನಿನ್ನ ನೋಡುವ ಕೂಡಿ ಬಾಳುವ ಕನಸು ಉಳಿಯಿತಲ್ಲಾ 
ಶಕ್ತಿ ಮೀರಿ ದೋಣಿ ಸಾಗೆ ದೈತ್ಯ ಅಲೆಯು ಬಂದಿತಲ್ಲಾ 
ಗುರಿ ತಲುಪುವ ಆಸೆ ಕಮರಿ ದೋಣಿ ಮುಳುಗಿತಲ್ಲಾ  
ಅತೃಪ್ತ ಆತ್ಮವದು ನೊಂದು ಬೆಂದು ಅಲೆಯುತಿದೆಯಲ್ಲಾ! 

Monday, June 22, 2015

ಬಾರೆ ,,,,, ನನ್ನ ಮನದ ತಾರೆ!




ನಿನ್ನೊಲವ ಮತ್ತಿನಲಿ 
ಬೆಳ್ಮುಗಿಲ ಮೇಲೇರಿ 
ಹಾರಾಡುವ ಬಾರೆ! 
ಮೇಘಮಾಲೆಯ ತೊಟ್ಟು
ಕಣ್ಣಲ್ಲಿ ಕಣ್ಣಿಟ್ಟು 
ಮನಕೆ ಮನ ಕೊಟ್ಟು 
ಹೊಸ ಭಾವದುಡುಪ ತೊಟ್ಟು 
ತೇಲಾಡುವ ಬಾರೆ! 
ಜಾತಿ ಮತ ಗಡಿ ದಾಟಿ 
ಕುಹಕಿಗಳ ಗೆರೆ ದಾಟಿ                                 
ಭೂರಮೆಯ ಮಿತಿ ದಾಟಿ 
ಮಿತಿಯಿರದ ಸಂಭ್ರಮದಿ 
ವಿಹರಿಸುವ ಬಾರೆ! 
ಕಾಯಿಸದೆ ನೋಯಿಸದೆ 
ನಿನ್ನ ಮನವ ಬದಲಿಸದೆ 
ಚಿರನೂತನ ಹರುಷದೆ 
ಎಣೆಯಿರದ ಪ್ರೇಮದೆ 
ನೀನಿಳಿದು ಬಾರೆ 
ನನ್ನ  ಮನದ ತಾರೆ!  :-) :-) 

Tuesday, June 9, 2015

ಲಹರಿ ಬಂದಂತೆ............ 2......!!

ಅತ್ತ ಇತ್ತ ಸುತ್ತ ಮುತ್ತ 
ಎತ್ತೆತ್ತ ನೋಡಿದರೂ 
ಅವೇ ಮುಖಗಳು ಕಣೇ!
ಬಹುತೇಕ ಎಲ್ಲವೂ ಅವೇ 
ಹತ್ತಿದ ಏಣಿಯನೊದ್ದು ನಕ್ಕ 
ಕೆಟ್ಟ ಕಿರಾತಕ ಮುಖಗಳು!
ಎಲ್ಲೋ ಅಲ್ಲೊಂದು ಇಲ್ಲೊಂದು 
ಒಳ್ಳೆಯ ಮುಖ ಕಾಣುವುದು 
ಮರಳುಗಾಡಲಿ ನೀರು ಕಂಡಂತೆ!
ಅದೇಕೆ ಹೀಗೆ ಬಲ್ಲೆಯೇನೇ?  :-(
******************************
****************************
ಅರಬ್ಬೀ ಸಾಗರದಲ್ಲಿ ಎದ್ದಿದೆಯಂತೆ 
ಭಯಂಕರ ಬಿರುಗಾಳಿ ಗೊತ್ತೇನೇ?
ಸಾಗರನಿಗೂ ಮುನಿಸಾಗಿದೆಯಂತೆ 
ಪಾಪಿಗಳ ಅಟ್ಟಹಾಸವ ಕಂಡು ಅಲ್ವೇನೆ?
**************************************
**************************************
ನಿನಗೊಂದು ವಿಷಯ ಗೊತ್ತೇನೇ 
ಎಂಥಾ ಬಿರುಗಾಳಿ ಬೀಸಿದರೂ 
ಚಂಡಮಾರುತವೇ ಬಂದರೂ 
ಭೀಕರ ಭೂಕಂಪವೇ ಆದರೂ 
ಪಾಪಿಗಳು ಸಾಯುವುದಿಲ್ಲವಂತೆ 
ಹೌದೇನೇ ಗೆಳತಿ ಇದು ನಿಜವೇನೆ?  :-( 
**************************************
**************************************
ಕಸದ ತೊಟ್ಟಿಯಲಿ ಎಸೆದ ಅನ್ನವ ಆಯ್ದು ತಿಂದವರು 
ಬಲು ಘಟ್ಟಿಯಂತೆ ಆರೋಗ್ಯವಂತೆ ಜಗಜಟ್ಟಿಯಂತೆ 
ಪುಷ್ಕಳ ಭೋಜನವ ದಿನವೂ ಪೋಣಿಸುವ ಧನಿಕನ 
ಮಕ್ಕಳು ರೋಗಿಷ್ಟರಂತೆ  ಶಕ್ತಿ-ಬುದ್ಧಿ ಹೀನರಂತೆ 
ಐಶ್ವರ್ಯಲಕ್ಷ್ಮಿ ಇರುವಲ್ಲಿ ಆರೋಗ್ಯಲಕ್ಷ್ಮಿ ಇರಳಂತೆ 
ಹೌದೇನೇ ಗೆಳತಿ ಇದು ಏಕೆ ಹೀಗೆ ನಿನಗೆ ಗೊತ್ತೇನೇ? :-(          
**************************************************
**************************************************
ಕನಸುಗಳು ತರುವ ಆ ಕಲ್ಪನೆಯ ಸುಖ ನನಗೆ ಬೇಡವೆ 
ಪರಿಶ್ರಮದಿ ಮೆಟ್ಟಿಲೇರಿ ಕೈಗೆಟುಕಿಸಿಕೊಂಡರದು ಸುಖವೇ                                           
ಪ್ರತಿ  ಬೆವರ ಹನಿ ಹನಿಯಲಿ ರಕ್ತದಾ ಕಣಗಳನು ಬೆರೆಸಿ
ಯಶಸ್ಸಿನ ತುತ್ತತುದಿಯೇರಿದರೆ ಅದಲ್ಲವೇನೇ ಆತ್ಮತೃಪ್ತಿ !
*****************************************************
****************************************************** 
ಹಸಿದಾಗ ಅನ್ನ ಕೊಟ್ಟ ಧಣಿಯ ಕಾಲ
 ಪ್ರೀತಿಯಿಂದ ತಲೆ ನೇವರಿಸಿದ ಕೈಯ 
ನಾಲಿಗೆಯಲಿ ನೆಕ್ಕಿ ನೆಕ್ಕಿ ಬಾಲವಲ್ಲಾಡಿಸುವ
 ಶ್ವಾನಕಿಂತಲೂ ಕಡೆಯಾಗಿಬಿಟ್ಟನಲ್ಲೆ ಗೆಳತಿ 
ಈ ಹುಲುಮಾನವ  ಏಕೆ ಹೀಗೆ ಗೊತ್ತೇನೇ?
*****************************************
*****************************************

Saturday, June 6, 2015

ಸಾವಿನ ಭಯವಿಲ್ಲವೆನಗೆ !

ಸಾವಿನ ಭಯವಿಲ್ಲವೆನಗೆ 
ಗಡಿಯಲಿಂದು ನಿಂದಿರುವೆ 
ನನ್ನ ದೇಶವ ಕಾಯುತ 
ಯಾವಾಗ ಎತ್ತಣಿಂದ 
ಬಂದಪ್ಪಳಿಸಲಿವೆಯೋ 
ವೈರಿಪಡೆಯ ಗುಂಡುಗಳು
 
ಸಾವಿನ ಭಯವಿಲ್ಲವೆನಗೆ 
ಸಹಸ್ರ ಸಹೋದರ 
ಸಹೋದರಿಯರು ನೆಮ್ಮದಿ 
ಶಾಂತಿಯಲಿ ಜೀವಿಸಿರಲು
ವಿಶಾಲವಾದ ನನ್ನೆದೆ 
ಸಿದ್ಧವಿದೆ ಎದುರಿಸಲು 
ವೈರಿಗಳ ಗುಂಡುಗಳ 
 
ಆಗಸದಿ ಉರಿವ ಸೂರ್ಯ
ತಂಪಾದ ಹುಣ್ಣಿಮೆಯ ಶಶಿ   
ಹರಿವ ನದಿ ನಗುವ ಹೂವ 
ಕಂಡಾಗ ನೆನಪಾಗುವುದು 
ಮಕ್ಕಳ ಮುಗ್ಧ ನಗುವು 
ಬಾಳ ಸಂಗಾತಿಯ ಒಲವು
ಹೆತ್ತವರ ಕಾತುರದ ನೋಟ 
ಗೆಳೆಯರ ಬಂಧು ಬಳಗದ 
ನೆನಪಾಗಿ ಕಣ್ಣಂಚು ಒದ್ದೆ 
ಆದರೂ,,,,,,,,,,,,,,,,,,,,                   
 ಸಾವಿನ ಭಯವಿಲ್ಲವೆನಗೆ ! 

Wednesday, June 3, 2015

ಭದ್ರತೆಯ ಲೋಕದಲ್ಲಿ - ೬

  


ಕಾರ್ಮಿಕರಿಗಿದ್ದ ಹನುಮಂತನ ಮೇಲಿನ ಅಗಾಧ ಭಕ್ತಿ ಹಾಗೂ ಆಡಳಿತ ಮಂಡಳಿಯ ಮೇಲಿದ್ದ ಅತೀವ ಸಿಟ್ಟು ಎರಡೂ ಸೇರಿದ್ದರ ಫಲಿತಾಂಶವಾಗಿ ಕಾರ್ಖಾನೆಯ ಗೇಟಿಗೆ ಭದ್ರವಾದ ಬೀಗ ಜಡಿಯಲ್ಪಟ್ಟು ಉತ್ಪಾದನೆ ಸ್ಥಗಿತಗೊಂಡಿತ್ತು.  ಗೇಟಿನ ಮುಂಭಾಗದಲ್ಲಿ ಜಮಾಯಿಸಿದ್ದ ಕಾರ್ಮಿಕರೆಲ್ಲ ಒಕ್ಕೊರಲಿನಿಂದ ಆಡಳಿತ ಮಂಡಲಿ ಹಾಗೂ ವ್ಯವಸ್ಥಾಪಕರ ವಿರುದ್ಧ ಘೋಷಣೆ ಕೂಗುತ್ತಾ ತಮ್ಮ ಕೋಪ, ಅಸಹನೆಗಳನ್ನು ಪ್ರದರ್ಶಿಸುತ್ತಿದ್ದರು.  ಒಟ್ಟಾರೆ ವಾತಾವರಣ ತುಂಬಾ ಸೂಕ್ಷ್ಮವಾಗಿದ್ದು ಯಾವುದೇ ಕ್ಷಣದಲ್ಲಿಯಾದರೂ ಸ್ಫೋಟಿಸಲು ಸಿದ್ಧವಾಗಿದ್ದ ಜ್ವಾಲಾಮುಖಿಯನ್ನು ನೆನಪಿಸುತ್ತಿತ್ತು!  ಕೆಲವು ಘಂಟೆಗಳ ನಂತರ ನಾಲ್ಕಾರು ಕಾರುಗಳಲ್ಲಿ ಬೆಂಗಳೂರಿನಿಂದ ಕೇಂದ್ರಕಚೇರಿಯ ಅಧಿಕಾರಿಗಳು ಬಂದಿಳಿದರು, ಉದ್ರಿಕ್ತರಾಗಿದ್ದ ಕಾರ್ಮಿಕ ಮುಖಂಡರು ತಮ್ಮ ಬೇಡಿಕೆಗಳು ಈಡೇರುವವರೆಗೂ ಯಾರನ್ನೂ ಕಾರ್ಖಾನೆಯ ಒಳಕ್ಕೆ ಬಿಡುವುದಿಲ್ಲವೆಂದು ಹಠ ಹಿಡಿದಿದ್ದರು.  ನಾನು ಮತ್ತು ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ  ರಘು ಅವರ ಮನವೊಲಿಸಿ ಕೇಂದ್ರ ಕಚೇರಿಯಿಂದ ಬಂದಿದ್ದ ಅಧಿಕಾರಿಗಳನ್ನು ಕಾರ್ಖಾನೆಯೊಳಕ್ಕೆ ಕರೆತರುವಲ್ಲಿ  ಯಶಸ್ವಿಯಾಗಿದ್ದೆವು.  ನಂತರ ವ್ಯವಸ್ಥಾಪಕರ ಕಚೇರಿಯಲ್ಲಿ ಆರಂಭವಾಯಿತು ಅಧಿಕಾರಿಗಳ ಅಟಾಟೋಪ!  ಎಲ್ಲರೊಡನೆ ದರ್ಪದಿಂದ ಮಾತನಾಡಿದ ದಪ್ಪಗಾಜಿನ ಎಮ್ಮೆಚರ್ಮದ ಅಧಿಕಾರಿಯೊಬ್ಬ ಕಾರ್ಖಾನೆಯ ವ್ಯವಸ್ಥಾಪಕರನ್ನು ವಾಚಾಮಗೋಚರವಾಗಿ ನಿಂದಿಸಿ ಬೆವರಿಳಿಸಿದ್ದ, ಕಾರ್ಮಿಕರು ಮುಷ್ಕರ ಮಾಡದಂತೆ ಮನವೊಲಿಸಲು ವಿಫಲವಾಗಿದ್ದಕ್ಕಾಗಿ ಅವನನ್ನೇ ಜವಾಬ್ಧಾರನನ್ನಾಗಿಸಿದ್ದ!  ಇದುವರೆಗೂ ರಾಜನಂತಿದ್ದ ಕಾರ್ಖಾನೆಯ ವ್ಯವಸ್ಥಾಪಕ ಈಗ ಮೇಲಧಿಕಾರಿಗಳೆದುರಿಗೆ ಪ್ಯಾದೆಯಂತೆ ತಲೆಬಗ್ಗಿಸಿ ನಿಂತಿದ್ದ! 

ಬೆಂಗಳೂರಿನ ಸುತ್ತಮುತ್ತಲೂ ಸುಮಾರು ೪೫ ಕಾರ್ಖಾನೆಗಳನ್ನು ನಡೆಸುತ್ತಿದ್ದ ಮಾಲೀಕರಿಗೆ ಇದು ಮೊದಲನೆಯ ಮುಷ್ಕರದ ಅನುಭವವಾಗಿತ್ತು,  ಕೋಟ್ಯಾಧಿಪತಿಯಾಗಿದ್ದ ಅವರು ಯಾವುದೇ ಕಾರಣಕ್ಕೂ ಕಾರ್ಮಿಕರ ಬೇಡಿಕೆಗಳಿಗೆ ಒಪ್ಪಿ ರಾಜಿಯಾಗಲು ಸಿದ್ಧರಿರಲಿಲ್ಲ!  ಯಾವುದೇ ಷರತ್ತುಗಳಿಲ್ಲದೆ ಎಲ್ಲ ಕಾರ್ಮಿಕರೂ ತಮ್ಮ ತಪ್ಪನ್ನು ಒಪ್ಪಿಕೊಂಡು "ಕ್ಷಮಾಪಣಾ ಪತ್ರ"ವನ್ನು ಬರೆದು ಕೊಟ್ಟು ಕೆಲಸಕ್ಕೆ ಹಾಜರಾಗಬೇಕು, ಇದಕ್ಕೊಪ್ಪದಿದ್ದವರನ್ನು ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ತೆಗೆದು ಹಾಕಲಾಗುತ್ತದೆಂದು ಆದೇಶಿಸಲಾಯಿತು.  ಆಡಳಿತ ಮಂಡಳಿಯ ಆದೇಶವನ್ನು ಕಾರ್ಮಿಕ ಮುಖಂಡರಿಗೆ ತಲುಪಿಸಿ, ಎಲ್ಲರನ್ನೂ ಒಪ್ಪಿಸಿ ಕೆಲಸಕ್ಕೆ ಕರೆತರುವ ಜವಾಬ್ಧಾರಿಯನ್ನು ನನಗೆ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ರಘುವಿಗೆ ಒಪ್ಪಿಸಲಾಯಿತು.  ಅದರಂತೆ ಕಾರ್ಖಾನೆಯ ಹೊರಭಾಗದ ಮುಖ್ಯದ್ವಾರದ ಬಳಿಗೆ ಬಂದು, ಇತರ ಭದ್ರತಾ ರಕ್ಷಕರಿಗೆ ವಿಚಾರ ತಿಳಿಸಿ, ನಾವಿಬ್ಬರೂ ಕಾರ್ಮಿಕರೊಡನೆ ಮಾತನಾಡಲು ಹೋಗುತ್ತಿರುವುದಾಗಿಯೂ, ಆಕಸ್ಮಾತ್ ಏನಾದರೂ ಅಲ್ಲಿ ಕಾರ್ಮಿಕರು ಉದ್ರಿಕ್ತರಾಗಿ ಅವಘಡ ಸಂಭವಿಸಿದರೆ ನಮ್ಮ ರಕ್ಷಣೆಗೆ ಬರಬೇಕೆಂದು ತಾಕೀತು ಮಾಡಿ ಗೇಟು ತೆಗೆದು ಹೊರಬಂದೆವು.  ಅದಾಗಲೇ ಭಯದಿಂದ ನಡುಗುತ್ತಿದ್ದ ರಘುವಿಗೆ ಧೈರ್ಯ ತುಂಬುತ್ತಾ ನಾನು ಧೈರ್ಯವಾಗಿ ಕಾರ್ಮಿಕ ಮುಖಂಡರ ಬಳಿಗೆ ಬಂದೆ.  ಕೇಂದ್ರ ಕಚೇರಿಯ ಅಧಿಕಾರಿಗಳ ಜೊತೆಯಲ್ಲಿ ಮಾತುಕತೆ ಮುಗಿಸಿ ಹೊರಬಂದ ನಮ್ಮನ್ನು ಕಾರ್ಮಿಕರೆಲ್ಲಾ ಬಹಳ ಕುತೂಹಲದಿಂದ ವೀಕ್ಷಿಸುತ್ತಿದ್ದರು.  ಬಹುತೇಕರು ಆಡಳಿತ ಮಂಡಳಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿರಬಹುದೆಂಬ ಆಸೆಯಿಂದ ನೋಡುತ್ತಿದ್ದರು.  ಬೆಲ್ಲಕ್ಕೆ ಮುತ್ತಿದ ಇರುವೆಗಳಂತೆ ನಮ್ಮನ್ನು ಸುತ್ತುವರಿದ ಎಲ್ಲರನ್ನೂ ಒಂದು ಬದಿಗೆ ಕಳುಹಿಸಿ ಕೇವಲ ನಾಲ್ಕು ಜನ ಮುಖಂಡರೆನ್ನಿಸಿಕೊಂಡವರನ್ನು ಮಾತ್ರ ನಮ್ಮ ಬಳಿ ಮಾತನಾಡಲು ತಿಳಿಸಿದೆವು.  ಆ ನಾಲ್ಕು ಜನ "ಮುಖಂಡರು" ಅನ್ನಿಸಿಕೊಂಡವರು  ನಮ್ಮಿಂದ ಆಡಳಿತ ಮಂಡಳಿಯ ತೀರ್ಮಾನವನ್ನು ಕೇಳುತ್ತಿದ್ದಂತೆ ವ್ಯಗ್ರರಾಗಿ ಕುದ್ದು ಹೋದರು.  ಅದುವರೆಗೂ ಶಾಂತವಾಗಿದ್ದ ವಾತಾವರಣ ಒಮ್ಮೆಲೇ ಆಸ್ಫೋಟಿಸಿತ್ತು!

ಜೋರುಧ್ವನಿಯಲ್ಲಿ ಎಲ್ಲಾ ಕಾರ್ಮಿಕರಿಗೂ ಕೇಳಿಸುವಂತೆ ಆಡಳಿತ ಮಂಡಳಿಯ ಆದೇಶವನ್ನು ಘೋಷಿಸಿದ ಮುಖಂಡರ ಮಾತು ಕೇಳುತ್ತಿದ್ದಂತೆ ಐದುನೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರ್ಮಿಕರ ರೋಷ ಮೇರೆ ಮೀರುತ್ತು!  ಅವಾಚ್ಯ ಶಬ್ಧಗಳಿಂದ ಆಡಳಿತ ಮಂಡಳಿಯನ್ನು, ವ್ಯವಸ್ಥಾಪಕರನ್ನು ಹಾಗೂ ಸಂಧಾನಕ್ಕೆ ತೆರಳಿದ್ದ ನಮ್ಮನ್ನು ನಿಂದಿಸುತ್ತಾ ಕೂಗಾಡಲಾರಂಭಿಸಿದರು. ನಮ್ಮ ಇಷ್ಟ ದೈವ ಆಂಜನೇಯನ ದೇವಸ್ಥಾನ ಕಟ್ಟಿಸಬೇಕೆಂದು ಕೇಳಿದ್ದಕ್ಕೆ ಆಗುವುದಿಲ್ಲ ಅಂದವರು ಈಗ "ಕ್ಷಮಾಪಣೆ ಪತ್ರ" ಬರೆದು ಕೊಡಿ, ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕುತ್ತೇವೆ ಅನ್ನುತ್ತಾರಾ?  ನಮ್ಮನ್ನು ಬಿಟ್ಟು ಅದು ಹೇಗೆ ಇವರು ಕಾರ್ಖಾನೆ ನಡೆಸುತ್ತಾರೋ ನೋಡೋಣ, ಯಾರೂ ಇದಕ್ಕೆ ಒಪ್ಪಬೇಡಿ, ನಾವೆಲ್ಲರೂ ನಮ್ಮ ಬೇಡಿಕೆಗಳು ಈಡೇರುವ ತನಕ ಒಗ್ಗಟ್ಟಾಗಿರೋಣ, ಯಾವುದೇ ಕಾರಣಕ್ಕೂ ಯಾರೂ ಕೆಲಸಕ್ಕೆ ಹಾಜರಾಗಬಾರದು ಹಾಗೂ ಕಾರ್ಖಾನೆಯ ಒಳಗಿರುವವರನ್ನು ಬೆಂಗಳೂರಿಗೆ ಹೋಗಲು ಬಿಡಬಾರದು ಎಂದು ತೀರ್ಮಾನಿಸಿಬಿಟ್ಟರು!  ನಾನು ಹಾಗೂ ರಘು ಹೇಳಿದ ಯಾವುದೇ ಮಾತುಗಳನ್ನೂ ಅವರು ಕೇಳಿಸಿಕೊಳ್ಳದೆ ಸಮೂಹ ಸನ್ನಿಗೊಳಗಾದವರಂತೆ ವರ್ತಿಸಲಾರಂಭಿಸಿದ್ದರು!  ಆ ಕೂಗಾಟ, ತಳ್ಳಾಟದ ನಡುವೆ ಗಾಭರಿಯಾದ ರಘು ಮತ್ತೆ ಕಾರ್ಖಾನೆಯೊಳಕ್ಕೆ ಹೋಗಲು ಗೇಟಿನ ಬಳಿಗೆ ತೆರಳುತ್ತಿದ್ದಂತೆ ಅವನಿಂದ ಒಮ್ಮೆ ಅವಮಾನಿತನಾಗಿದ್ದ ಕಾರ್ಮಿಕನೊಬ್ಬ ಓಡಿ ಬಂದು ರಘುವಿನ ಕುತ್ತಿಗೆ ಪಟ್ಟಿ ಹಿಡಿದು ರಸ್ತೆಗೆ ಎಳೆದು ತಂದಿದ್ದ!  ಅವನನ್ನು ಬಿಡಿಸಲು ಹೋದ ನನ್ನನ್ನೂ ಸಹಾ ಕಾರ್ಮಿಕರು ತಮ್ಮ ತೆಕ್ಕೆಗೆ ತೆಗೆದುಕೊಂಡು ರಸ್ತೆಯ ಮಧ್ಯದಲ್ಲಿ ನಮ್ಮನ್ನು ಕೂರಿಸಿ, ನಮ್ಮ ಸುತ್ತಲೂ ದಿಗ್ಬಂಧನ ಹಾಕಿ ಕುಳಿತು ಬಿಟ್ಟರು!  ನಮ್ಮ ಬೇಡಿಕೆ ಈಡೇರುವ ತನಕ ನೀವು ಕಾರ್ಖಾನೆಯ ಒಳಗೆ ಹೋಗಲು ಬಿಡುವುದಿಲ್ಲ, ಒಳಗಿರುವವರು ಆಚೆಗೆ ಬರಲು ಬಿಡುವುದಿಲ್ಲ ಎಂದು ಹಠ ಹಿಡಿದರು.  ಅವರನ್ನು ಒಲಿಸಿ ಸಾಂತ್ವನಗೊಳಿಸಲು ನಾನಾಡಿದ ಯಾವುದೇ ಮಾತುಗಳೂ ಕೆಲಸಕ್ಕೆ ಬರಲಿಲ್ಲ!  ಉದ್ರಿಕ್ತ ಗುಂಪಿನ ನಡುವೆ ಕುರಿಗಳಂತೆ ತಲೆಬಗ್ಗಿಸಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಮ್ಮದಾಗಿತ್ತು!  ಹೆಚ್ಚಿಗೆ ಏನಾದರೂ ಮಾತನಾಡಿದರೆ ಸಾಕಷ್ಟು "ಧರ್ಮದೇಟು"ಗಳು ಬೀಳುವ ಸಂಭವವೂ ಇತ್ತು!

ಕಾರ್ಖಾನೆಯ ಹೊರಭಾಗದಲ್ಲಿದ್ದ ಟೆಲಿಫೋನ್ ಕಂಬದಿಂದ ಕಾರ್ಖಾನೆಯೊಳಕ್ಕೆ ಹೋಗಿದ್ದ ಟೆಲಿಫೋನ್ ತಂತಿಯನ್ನು ತುಂಡರಿಸಿ ಬಿಸಾಕಿದ್ದರು, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಒಂದಿಬ್ಬರು ಕಾರ್ಖಾನೆಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು, ಈಗಿನಂತೆ ಆಗ ಮೊಬೈಲ್ ಫೋನುಗಳಿರಲಿಲ್ಲ!  ಕಾರ್ಖಾನೆ ಈಗ ಅಕ್ಷರಶಃ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿತ್ತು.  ಗೇಟಿನೊಳಗೆ ನಿಂತು ಇದನ್ನೆಲ್ಲಾ ನೊಡುತ್ತಿದ್ದ ನಮ್ಮ ಭದ್ರತಾ ರಕ್ಷಕರ ತಂಡ ಈಗ ಅಕ್ಷರಶಃ ಅಸಹಾಯಕರಾಗಿದ್ದರು, ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಮಾರ್ಗದರ್ಶನ ಮಾಡಬೇಕಿದ್ದ ನಾನು ಕಾರ್ಮಿಕರ ದಿಗ್ಬಂಧನದಲ್ಲಿ ಸಿಕ್ಕಿಹಾಕಿಕೊಂಡಿದ್ದೆ!  ಗೇಟಿಗೆ ಆತುಕೊಂಡಂತೆಯೇ ಜಮಾಯಿಸಿದ್ದ ಕಾರ್ಮಿಕರು ಹಾಗೂ ಅವರ ಬೆಂಬಲಿಗರನ್ನು ದಾಟಿ ನಮ್ಮ ಬಳಿಗೆ ಬರುವ ಸಾಹಸವನ್ನು ಯಾವ ಭದ್ರತಾ ರಕ್ಷಕನೂ ಮಾಡುವಂತಿರಲಿಲ್ಲ!  ಹಾಗೇನಾದರೂ ಮಾಡಿದ್ದಲ್ಲಿ ಅವನ ಜೀವಕ್ಕೆ ಹಾಗೂ ಕಾರ್ಮಿಕರ ನಡುವೆ ಸಿಕ್ಕಿ ಹಾಕಿಕೊಂಡಿದ್ದ ನಮ್ಮ ಜೀವಕ್ಕೂ ತೊಂದರೆಯಾಗುವ ಸಂಭವವಿತ್ತು.  ಅದೇ ಸಮಯಕ್ಕೆ ಭದ್ರತಾ ರಕ್ಷಕರ ತಂಡದಲ್ಲಿದ್ದ ಗಿರಿಜಾ ಮೀಸೆಯ ಭೀಮಯ್ಯನೆಂಬುವವನು ತಲೆ ಓಡಿಸಿ,  ಕಾರ್ಖಾನೆಯ ಒಳಭಾಗದಲ್ಲಿಯೇ ಬೇಲಿಯುದ್ಧಕ್ಕೂ ಸುಮಾರು ಎರಡು ಕಿಲೋಮೀಟರಿನಷ್ಟು ದೂರ ನಡೆದುಕೊಂಡೇ ಹೋಗಿದ್ದಾನೆ, ಕಾರ್ಖಾನೆಯ ಬೇಲಿಯ ಕೊನೆಯಂಚಿನಲ್ಲಿ ದಾಟಿ, ಪಕ್ಕದಲ್ಲಿದ್ದ ನಂದಿಗ್ರಾಮಕ್ಕೆ ಹೋಗಿ, ಅಲ್ಲಿದ್ದ ತನ್ನ ಪರಿಚಿತರಿಗೆ ಕಾರ್ಖಾನೆಯಲ್ಲಿನ ವಿದ್ಯಮಾನಗಳನ್ನೆಲ್ಲ ವಿವರಿಸಿ, ಅವರ ಬೈಕಿನಲ್ಲಿ ಚಿಕ್ಕಬಳ್ಳಾಪುರದ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ವಿನಂತಿಸಿದ್ದಾನೆ. ಪರಿಸ್ಥಿತಿಯ ತೀವ್ರತೆಯನ್ನರಿತ ಅವರು ತಕ್ಷಣ ಅವನೊಂದಿಗೆ ತಾವೂ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದಾರೆ.  ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಭೀಮಯ್ಯ ನೀಡಿದ ದೂರನ್ನು ದಾಖಲಿಸಿಕೊಂಡು ಅಲ್ಲಿಂದ ಕಾರ್ಖಾನೆಗೆ ಫೋನ್ ಮಾಡಿದ್ದಾರೆ, ಆದರೆ ಫೋನ್ ಲೈನ್ ತುಂಡಾಗಿದ್ದುದರಿಂದ ಸಾಧ್ಯವಾಗಿಲ್ಲ.  ತಕ್ಷಣ ತಮ್ಮ ತಂಡದೊಡನೆ, ಬಂದೂಕುಗಳ ಸಹಿತ, ಕಾರ್ಖಾನೆಗೆ ಧಾವಿಸಿದ್ದರೆ.

ನಾನು ಹಾಗೂ ರಘು ಕಾರ್ಮಿಕರ ದಿಗ್ಬಂಧನಕ್ಕೊಳಗಾದ ಸುಮಾರು ಎರಡು-ಮೂರು ಘಂಟೆಗಳ ತರುವಾಯ ಸ್ಥಳಕ್ಕೆ ಪೊಲೀಸರ ಆಗಮನವಾಯ್ತು!  ಪೊಲೀಸ್ ಜೀಪ್ ಹಾಗೂ ಸಿಬ್ಬಂದಿಯನ್ನು ನೋಡುತ್ತಿದ್ದಂತೆ ಕೆಲವು ಕಾರ್ಮಿಕರು ಭಯಗೊಂಡು ಮನೆಯೆಡೆಗೆ ಓಡಿದರೆ ಇನ್ನು ಕೆಲವರು ಪೊಲೀಸರ ವಿರುದ್ಧವೂ ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ!
ಪೊಲೀಸರು ಕಾರ್ಮಿಕರ ಮನವೊಲಿಸಲು ಮಾಡಿದ ಪ್ರಯತ್ನವೂ ಸಫಲವಾಗದೆ, ತಮ್ಮ ಬೇಡಿಕೆ ಈಡೇರುವ ತನಕ ಮುಷ್ಕರ ಹಿಂದೆಗೆದುಕೊಳ್ಳುವ ಮಾತೇ ಇಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿದ ಕಾರ್ಮಿಕ ಮುಖಂಡರು ತಮ್ಮ ಘೋಷಣೆಗಳನ್ನು ಮುಂದುವರಿಸಿದ್ದಾರೆ.  ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಮಾಡಿ ತೊಂದರೆ ಕೊಡುತ್ತಿರುವುದರಿಂದ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆಂದು ಪೊಲೀಸರು ನೀಡಿದ ಎಚ್ಚರಿಕೆಗೆ ಕಾರ್ಮಿಕರು ಸೊಪ್ಪು ಹಾಕಿರಲಿಲ್ಲ!  ಇದೇ ಸಮಯಕ್ಕೆ ಕೆಲವು ಕಿಡಿಗೇಡಿ ಕಾರ್ಮಿಕರು ಪೊಲೀಸ್ ಜೀಪಿನ ಮೇಲೆ ಕಲ್ಲು ತೂರಿ ಗಾಜುಗಳನ್ನು ಒಡೆದಿದ್ದಾರೆ.  ಮೊದಲೇ ಕೋಪಗೊಂಡಿದ್ದ ಪೊಲೀಸ್ ಇನ್ಸ್ಪೆಕ್ಟರಿಗೆ ಲಾಠಿ ಚಾರ್ಜ್ ಮಾಡಲು ಇಷ್ಟು ಸಾಕಾಗಿತ್ತು.  ಕಲ್ಲು ಹೊಡೆದವರನ್ನು ಅಟ್ಟಿಸಿಕೊಂಡು ಹೋದ ಕೆಲವು ಪೊಲೀಸರು ಅವರನ್ನ್ಜು ಹಿಡಿದು ಹಿಗ್ಗಾಮುಗ್ಗಾ ಬಾರಿಸಿದ್ದರು.  ಅದುವರೆಗೂ ಕಾರ್ಮಿಕರ ವಶದಲ್ಲಿದ್ದ ನಾನು ಮತ್ತು ರಘು ಈ ಗಲಾಟೆಯಲ್ಲಿ ಮೆತ್ತಗೆ ತಪ್ಪಿಸಿಕೊಂಡು ಪೊಲೀಸ್ ಜೀಪಿನ ಬಳಿಬಂದು ನಿಂತಿದ್ದೆವು!  ಕಾರ್ಮಿಕರ ಆಕ್ರೋಶ ಮಿತಿ ಮೀರಿದಾಗ, ಪರಿಸ್ಥಿತಿಯನ್ನು ನಿಯಂತ್ರಿಸುವುದು ಅಸಾಧ್ಯವೆಂದರಿತು,  ತಮ್ಮ ರಿವಾಲ್ವರ್ ಹೊರತೆಗೆದ ಪೊಲೀಸ್ ಇನ್ಸ್ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಮಿಕ ಮುಖಂಡರಿಗೆ ಶರಣಾಗುವಂತೆ ಸೂಚಿಸಿದ್ದರು. ಗುಂಡಿನ ಸದ್ದು ಕೇಳುತ್ತಿದ್ದಂತೆ ಭಯಭೀತರಾದ ಕಾರ್ಮಿಕರು ಎದ್ದೆವೋ ಬಿದ್ದೆವೋ ಎಂದು ಕಾಲ್ಕಿತ್ತಿದ್ದರು.  ಮುಂಚೂಣಿಯಲ್ಲಿದ್ದ ಕಾರ್ಮಿಕ ಮುಖಂಡರು ಮತ್ತು ಅವರೊಡನೆ ಇನ್ನೊಂದಷ್ಟು ಜನರನ್ನು ಬಂಧಿಸಿದ ಪೊಲೀಸರು ವ್ಯಾನಿಗೆ ತುಂಬಿದ್ದರು.  ಅದೇ ಸಮಯಕ್ಕೆ ದೊಡ್ಡಬಳ್ಳಾಪುರದಿಂದಲೂ ಬಂದ ಇನ್ನೊಂದು ಪೋಲಿಸ್ ತಂಡ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿತ್ತು. 

ಕಾರ್ಖಾನೆಯ ಒಳಗೆ ಬಂಧಿತರಾಗಿದ್ದ ಆಡಳಿತ ಮಂಡಳಿಯವರು ಹಾಗೂ ಕಾರ್ಮಿಕರ ನಡುವೆ ಬಂಧಿಗಳಾಗಿದ್ದ ನಾನು ಮತ್ತು ರಘು ಬಂಧಮುಕ್ತರಾಗಿದ್ದೆವು.  ಸಮಯಕ್ಕೆ ತಕ್ಕಂತೆ ಜಾಣ್ಮೆ ಮೆರೆದು ಚಿಕ್ಕಬಳ್ಳಾಪುರಕ್ಕೆ ಹೋಗಿ ಪೊಲೀಸರಿಗೆ ದೂರು ನೀಡಿ, ಅವರನ್ನು ಕಾರ್ಖಾನೆಗೆ ಕರೆತಂದ "ಮೀಸೆ ಭೀಮಯ್ಯ" ಎಲ್ಲರ ಕಣ್ಮಣಿಯಾಗಿದ್ದ!  ಆದರೆ ಕಾರ್ಮಿಕರ ಬೇಡಿಕೆಗಳಿಗೆ ಒಪ್ಪದ ಆಡಳಿತ ಮಂಡಳಿಯ ಹಠಮಾರಿ ಧೋರಣೆ ಹಾಗೂ ಕಾರ್ಮಿಕರ ಅಸಹಕಾರದಿಂದ ಕಾರ್ಖಾನೆಗೆ ಶಾಶ್ವತವಾಗಿ ಬೀಗ ಜಡಿಯಲಾಯಿತು.  ಅದುವರೆಗೂ ನಳನಳಿಸುತ್ತಿದ್ದ ಕಾರ್ಖಾನೆ ಈಗ ಒಮ್ಮೆಗೇ ಬರಡು ಮರಳುಗಾಡಿನಂತಾಗಿತ್ತು.  ಭದ್ರತೆಯ ಲೋಕದಲ್ಲಿ ಈ ಸನ್ನಿವೇಶ ನಮಗೆ ಹಲವಾರು ಮರೆಯಲಾಗದ ಪಾಠಗಳನ್ನು ಕಲಿಸಿತ್ತು.